Home Blog Page 2090

ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಬುಧವಾರ ಶಿರಹಟ್ಟಿ ಪಟ್ಟಣಕ್ಕೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅನಿರೀಕ್ಷಿತ ಭೇಟಿ ನೀಡಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ಪಟ್ಟಣ ಪಂಚಾಯಿತಿ ಕಚೇರಿ ಮತ್ತು ತಹಸೀಲ್ದಾರ ಕಚೇರಿಗೆ ಭೇಟಿ ನಂತರ ಪಟ್ಟಣ ಪಂಚಾಯಿತಿಗಳ ನಿವೇಶನಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಶಿರಹಟ್ಟಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆಗೆ ಆಗಮಿಸಿದ್ದು, ಕಾಮಗಾರಿಗಳ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಳಂಬವಾದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸರಕಾರದ ಅನುದಾನ ಸದ್ವಿನಿಯೋಗವಾಗುವಂತೆ ನೋಡಿಕೊಳ್ಳಲು ಹೇಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಅನಿಲ ಬಡಿಗೇರ, ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ವಕ್ಫ್ ಜೀವಂತವಾಗಿ ಉಳಿಯಲು ನಾವು ಬಿಡಲ್ಲ: ಯತ್ನಾಳ್!

0

ವಿಜಯಪುರ:- ಕರ್ನಾಟಕದಲ್ಲಿ ವಕ್ಫ್ ಜೀವಂತವಾಗಿ ಉಳಿಯಲು ನಾವು ಬಿಡಲ್ಲ. ಇದರ ವಿರುದ್ಧ ನಮ್ಮ ಹೋರಾಟ ನಿರಂತರ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ವಕ್ಫ್ ನೋಟಿಸ್ ವಾಪಸ್ ತೆಗೆದುಕೊಂಡರೆ ಸಾಲುವುದಿಲ್ಲ ಅದನ್ನು ರದ್ದುಗೊಳಿಸಬೇಕು. ಇಲ್ಲವಾದರೆ ವಕ್ಫ್ ವಿರುದ್ಧ ಅಧಿವೇಶನ ವೇಳೆ ಹೋರಾಟ ಮಾಡುತ್ತೇವೆ ಎಂದರು.

ವಕ್ಫ್ ಕರಾಳ ಕಾನೂನನ್ನು ವಾಪಸ್ ಪಡೆಯಬೇಕು ಎಂದು ಪ್ರಧಾನಿಗಳಿಗೂ ಮನವಿ ಮಾಡಿದ್ದೇವೆ. ಮುಸ್ಲಿಮರಿಗಾಗಿ ವಕ್ಫ್ ಟ್ರಿಬ್ಯುನಲ್ ಒಪ್ಪುವುದಿಲ್ಲ. ದೇಶದಲ್ಲಿ ಇರಬೇಕಾದರೆ ನಮ್ಮ ದೇಶದ ಕಾನೂನು ಪಾಲಿಸಬೇಕು ಎಂದರು.

ನ.25 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಹೋರಾಟ ಮಾಡಲಿದ್ದೇವೆ. ನೋಟಿಸ್ ನೀಡದೆ ಇಲ್ಲಿಯವರೆಗೆ ಸೇರ್ಪಡೆಯಾದ ವಕ್ಫ್ ಹೆಸರು ರದ್ದಾಗಬೇಕು. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಕ್ಫ್ ವಿರುದ್ಧ ದೆಹಲಿಗೆ ನಿಯೋಗ ಕೊಂಡೊಯ್ಯುತ್ತೇವೆ. ಇನ್ನೊಮ್ಮೆ ಜಂಟಿ ಸಂಸದೀಯ ಸಮಿತಿಗೆ ಮನವಿ ಮಾಡುತ್ತೇವೆ ಎಂದು ಕಿಡಿಕಾರಿದರು.

ಮೊದಲು ವಕ್ಫ್ ಟ್ರಿಬ್ಯುನಲ್ ರದ್ದಾಗಬೇಕು ಇದು ನಮ್ಮ ಆಗ್ರಹವಾಗಿದೆ. ಅವರದೇ ಕೋರ್ಟ್, ಅವರದೇ ನ್ಯಾಯಾಲಯ. ಕಳ್ಳರ ಬಳಿ ನ್ಯಾಯ ಬೇಡುವ ಹಾಗಾಗುತ್ತದೆ. ವಕ್ಫ್ ವಿರುದ್ಧ ನಿರಂತರ ಹೋರಾಟ ಮುಂದುವರೆಯಲಿದೆ. ವಕ್ಫ್ ಸಾಯುವವರೆಗೂ ಹೋರಾಟ ಮುಂದುವರೆಯಲಿದೆ. ಮೋದಿಯವರು 42 ಆಫರೇಶನ್ ಮಾಡುತ್ತಿದ್ದಾರೆ. ಅದರಲ್ಲಿಯೂ ವಕ್ಫ್ ಜೀವಂತವಾಗಿ ಉಳಿಯಲ್ಲ. ಜೀವಂತ ಉಳಿದರೂ ಇಂಜೆಕ್ಷನ್ ಕೊಟ್ಟು ಕೊಲ್ಲುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.

2025ನೇ ಸಾಲಿನ ದಸರಾ ಧರ್ಮ ಸಮ್ಮೇಳನ ಬಸವಕಲ್ಯಾಣದಲ್ಲಿ ಜರುಗಿಸಲು ನಿರ್ಧಾರ: ರಂಭಾಪುರಿ ಶ್ರೀ

0

ವಿಜಯಸಾಕ್ಷಿ ಸುದ್ದಿ, ಬಸವಕಲ್ಯಾಣ: ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಮರಸ್ಯ ಬೆಳೆಸಿಕೊಂಡು ಬರುತ್ತಿರುವ ನಾಡಿನ ಜನಮನ ಸೂರೆಗೊಂಡಿರುವ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 2025ನೇ ಸಾಲಿನ ದಸರಾ ಧರ್ಮ ಸಮ್ಮೇಳನವನ್ನು ಐತಿಹಾಸಿಕ ನಗರ ಬಸವಕಲ್ಯಾಣದಲ್ಲಿ ಜರುಗಿಸಲು ನಿರ್ಧರಿಸಲಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ಅವರು ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಜರುಗಿದ ದಸರಾ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಇದುವರೆಗೆ ರಾಜ್ಯ, ಹೊರ ರಾಜ್ಯಗಳಲ್ಲಿ 33 ದಸರಾ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು 34ನೇ ದಸರಾ ಮಹೋತ್ಸವ ಬಸವಕಲ್ಯಾಣದಲ್ಲಿ ಜರುಗುತ್ತಿರುವುದು ಸಂತಸ ತಂದಿದೆ. ತರೀಕೆರೆ, ಜಮಖಂಡಿ, ಬಳ್ಳಾರಿ ಸೇರಿದಂತೆ ಹಲವು ನಗರಗಳಲ್ಲಿ 34ನೇ ದಸರಾಕ್ಕೆ ಬೇಡಿಕೆ ಇದ್ದಾಗ್ಯೂ ಅಬ್ಬಿಗೇರಿ ದಸರಾದಲ್ಲಿ ಶಾಸಕ ಶರಣು ಸಲಗರ ಸಂಗಡಿಗರು ಮಾಡಿದ ವಿನಂತಿಯನ್ನು ಪರಿಗಣಿಸಿ ಬಸವಕಲ್ಯಾಣಕ್ಕೆ ನೀಡಲಾಗಿದೆ. ಈ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಸರ್ವ ಸಮಾಜದ ಬಾಂಧವರು ಶ್ರಮಿಸಿ ಐತಿಹಾಸಿಕ ಸಮಾರಂಭವನ್ನಾಗಿ ಮಾಡುವ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ 34ನೇ ದಸರಾ ಸಮ್ಮೇಳನಕ್ಕೆ ರಚಿಸಿದ ಸ್ವಾಗತ ಸಮಿತಿಗೆ ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯ ಸ್ವಾಮಿಗಳನ್ನು ಗೌರವಾಧ್ಯಕ್ಷರನ್ನಾಗಿ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಇವರನ್ನು ಅಧ್ಯಕ್ಷರನ್ನಾಗಿ ಹಾಗೂ ಶಾಸಕ ಶರಣು ಸಲಗರ ಇವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಇನ್ನುಳಿದ ಉಪಸಮಿತಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದೆಂದು ತಿಳಿಸಿದರು.

ಹಿರೆನಾಗಾಂವನ ಜಯಶಾಂತಲಿAಗ ಸ್ವಾಮಿಗಳು ಮಾತನಾಡಿ ದಸರಾ ಮಹೋತ್ಸವಕ್ಕೆ ಶ್ರೀ ಮಠದಿಂದ ರೂ.೨.೫ ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದ್ದು ವಿಶೇಷವಾಗಿತ್ತು. ತ್ರಿಪುರಾಂತದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಶ್ರೀಮದ್ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಂತೆ ಸಮಾರಂಭದ ಯಶಸ್ಸಿಗೆ ಶ್ರಮಿಸುವುದಾಗಿ ಹೇಳಿದರು.

ಶಾಸಕ ಶರಣು ಸಲಗರ ಮಾತನಾಡಿ, ನಾಡಿನಲ್ಲಿ ಸಕಲ ಮನುಕುಲಕ್ಕೆ ಅಭ್ಯುದಯವನ್ನು ಬಯಸುತ್ತ ಬಂದಿರುವ ಈ ಅಪೂರ್ವ ದಸರಾ ಸಮಾರಂಭಕ್ಕೆ ಸರ್ವ ಸಮಾಜದವರ ಸಹಕಾರ ಅಗತ್ಯವಾಗಿದ್ದು ಎಲ್ಲರೂ ಸಹಕರಿಸಲು ವಿನಂತಿಸಿದರು. ವಿವಿಧ ಮುಖಂಡರು ಸೇರಿ ಒಟ್ಟು 51ಲಕ್ಷ ರೂ.ದೇಣಿಗೆ ವಾಗ್ದಾನ ಮಾಡಿದರು.

ಸಮಾರಂಭದಲ್ಲಿ ಶರಣಪ್ಪ ಬಿರಾದಾರ, ಬಸವರಾಜ ಕೋರಕೆ, ರಾಜಕುಮಾರ ಸಿಂಗಾಪುರ, ಸುನೀಲ ಪಾಟೀಲ್, ಮಲ್ಲಯ್ಯ ಹಿರೇಮಠ, ಸಿದ್ರಾಮಪ್ಪ ಗುದಗೆ, ಚಂದ್ರಶೇಖರ ಪಾಟೀಲ, ಮಲ್ಲಿನಾಥ ಹಿರೇಮಠ, ಸೋಮಶೇಖ ವಸ್ತçದ, ಶ್ರೀಕಾಂತ ಬಡದಾಳೆ, ಮೇಘರಾಕ ನಾಗರಾಳೆ, ವೀರಣ್ಣ ಶೀಲವಂತ, ಎಂ.ಕೆ. ನಂದಿ, ಎ.ಜಿ. ಪಾಟೀಲ್, ಸುಭಾಷ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ರಮೇಶ ರಾಜೋಳೆ ನಿರೂಪಣೆ ಮಾಡಿದರು.

ನ.22ರಂದು ರಾಷ್ಟ್ರಮಟ್ಟದ ನರ ಮನೋರೋಗ ಆಯುರ್ವೇದ ಸಮ್ಮೇಳನ `ಮನಸ್ವಿನಿ-24′

0

ವಿಜಯಸಾಕ್ಷಿ ಸುದ್ದಿ, ಗದಗ: ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತ್ತರ ಸಂಶೋಧನಾ ಕೇಂದ್ರದಲ್ಲಿ ರಾಷ್ಟ್ರಮಟ್ಟದ ನರ ಮನೋರೋಗ ಆಯುರ್ವೇದ ಸಮ್ಮೇಳನ `ಮನಸ್ವಿನಿ-24′ ನ. 22ರಂದು ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂತೋಷ ಬೆಳವಡಿ ತಿಳಿಸಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಸಿಐಎಸ್‌ಎಂ ಅಧ್ಯಕ್ಷ, ದೆಹಲಿಯ ರಘುರಾಮ ಭಟ್ ಭಾಗವಹಿಸಲಿದ್ದಾರೆ. ಅಂತಾರಾಷ್ಟ್ರಿಯ ಖ್ಯಾತಿಯ ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯದ ಪ್ರಾ. ಡಾ. ಪ್ರಶಾಂತ ಎ.ಎಸ್. ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಶ್ರೀಧರ ಬೈರಿ, ಡಾ. ಜಿ.ಬಿ. ಪಾಟೀಲ, ಡಾ. ಬಿ.ಎಸ್. ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾ. ಡಾ. ಸಂತೊಷ ಬೆಳವಡಿ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ನುರಿತ ಶಸ್ತ್ರಚಿಕಿತ್ಸಕರು, ಪ್ರಾಧ್ಯಾಪಕರು ಭಾಗವಹಿಸಿ ನರವ್ಯೂಹಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ಮೆಲೆ ಉಪನ್ಯಾಸ, ಪ್ರಬಂಧ ಮಂಡಿಸಲಿದ್ದಾರೆ. ದೇಶದ ನಾನಾ ಭಾಗಗಳಿಂದ ಆಯುರ್ವೇದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಖ್ಯಾತ ವೈದ್ಯರಾದ ಕೇರಳದ ಕೊಟ್ಟಕಲ್ ಆಯುರ್ವೇದ ಮಹಾವಿದ್ಯಾಲಯದ ಡಾ. ಪಾರ್ವತಿ ದೇವಿ ಎಂ.ಪಿ., ಹಾಸನದ ಡಾ.ನಾರಾಯಣ ಪ್ರಕಾಶ ಹಾಗೂ ಜಿಮ್ಸ್ ಸಹಪ್ರಾಧ್ಯಾಪಕ ಡಾ. ಜಿತೇಂದ್ರ ಮುಗಳಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ಡಾ. ಎಂ.ಡಿ. ಸಮುದ್ರಿ, ಡಾ. ಬೂದೇಶ ಖನಜ್ ಉಪಸ್ಥಿತರಿದ್ದರು.

`ಹಾಮಾನಾ’ ಪುರಸ್ಕಾರಕ್ಕೆ ಭಾಜನವಾದ ಪತ್ರಕರ್ತ ಡಾ.ಮಂಜುನಾಥ್ ಬರೆದ ‘ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ಧಿ’ಪುಸ್ತಕ

0

ವಿಜಯಸಾಕ್ಷಿ ಸುದ್ದಿ, ಗದಗ: ಪತ್ರಕರ್ತ, ಬರಹಗಾರ ಹಾಗೂ ಪ್ರಸ್ತುತ ಕಾರವಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಅವರು ಬರೆದ ‘ಗೋಕಾಕ ಚಳುವಳಿ ಮತ್ತು ಕನ್ನಡ ಅಭಿವೃದ್ಧಿ’ ಪುಸ್ತಕವು `ಹಾಮಾನಾ ಕನ್ನಡ ಜಾಗೃತಿ ಪುಸ್ತಕ’ ಪುರಸ್ಕಾರಕ್ಕೆ ಭಾಜನವಾಗಿದೆ.

ಬೆಂಗಳೂರಿನ ಕನ್ನಡ ಗೆಳೆಯರ ಬಳಗವು ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನು ಕುರಿತ ಪುಸ್ತಕಕ್ಕೆ ಕೊಡುಮಾಡುವ 2024ನೇ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ ಇದಾಗಿದೆ. ಐದು ಸಾವಿರ ರೂ. ನಗದು ಬಹುಮಾನ, ಫಲಕದೊಂದಿಗೆ ಪ್ರಶಸ್ತಿಪತ್ರವನ್ನು ನೀಡಲಾಗುವುದು ಎಂದು ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ. ಮೋಹನ್ ಕುಂಟಾರ್ ಅವರ ‘ಅನುವಾದ ಒಲವು-ನಿಲುವು’ ಗ್ರಂಥಕ್ಕೆ ಸಮಾಧಾನಕರ ಬಹುಮಾನ ದೊರೆತಿದೆ. ಡಾ. ಎಸ್. ಗುರುಮೂರ್ತಿ ಅವರ ‘ಕಂಬದಹಳ್ಳಿ ಕಂಬಾಪುರಿಯ ಪಂಚಕೂಟ ಬಸದಿ’ ಕ್ಷೇತ್ರ ಪರಿಚಯದ ಸಚಿತ್ರ ಸಂಪುಟಕ್ಕೆ ಮೆಚ್ಚುಗೆ ಬಹುಮಾನ ನೀಡಲಾಗುತ್ತಿದೆ.

ಡಿ. ೩ರಂದು ಬೆಂಗಳೂರಿನ ನಯನಾ ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿ ಪ್ರದಾನ, ಕನ್ನಡ ಮಾಧ್ಯಮದ ಮಕ್ಕಳಿಗೆ ಪುರಸ್ಕಾರ ನೀಡುವ ಸಮಾರಂಭ ಜರುಗಲಿದೆ. ಅದೇ ಸಮಾರಂಭದಲ್ಲಿ ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ ನೀಡಲಾಗುವದು. ಈ ಸಂದರ್ಭದಲ್ಲಿ ಸಾಹಿತಿ ಡಾ. ಎಲ್. ಹನುಮಂತಯ್ಯ, ಚಲನಚಿತ್ರ ನಿರ್ದೇಶಕ ಡಾ. ಟಿ.ಎಸ್. ನಾಗಾಭರಣ ಅವರುಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಿಕ್ಷಣ ತಜ್ಞ ವೂಡೇ ಪಿ. ಕೃಷ್ಣ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ರಾ.ನಂ. ಚಂದ್ರಶೇಖರ ತಿಳಿಸಿದ್ದಾರೆ.

ಮಚ್ಚಿನಿಂದ ಕೊಚ್ಚಿ ವಕೀಲನ ಕೊಲೆಗೆ ಯತ್ನ: ಕೋರ್ಟ್‌ ಆವರಣದಲ್ಲೇ ಕೃತ್ಯ!

0

ಬೆಂಗಳೂರು:- ಮಚ್ಚಿನಿಂದ ಕೊಚ್ಚಿ ವಕೀಲನ ಕೊಲೆಗೆ ಯತ್ನಿಸಿದ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್‌ ಗಡಿ ಹೊಸೂರಿನಲ್ಲಿ ಜರುಗಿದೆ.

ಹಲ್ಲೆಗೊಳಗಾದ ವಕೀಲನನ್ನು ಕಣ್ಣನ್ ಎಂದು ಗುರುತಿಸಲಾಗಿದೆ. ಆನಂದ್ ಎಂಬಾತ ಮಚ್ಚಿನಿಂದ ಕೊಚ್ಚಿ ಹಲ್ಲೆ ಮಾಡಿದ್ದಾನೆ. ಅನೈತಿಕ ಸಂಬಂಧ ಹಿನ್ನೆಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.

ಪೊಲೀಸ್ ಠಾಣೆ, ನ್ಯಾಯಾಲಯ ಹಾಗೂ ಹೊಸೂರು ಒಂದೇ ಕಡೆ ಇದ್ದ ಜಾಗ. ಇಂತಹ ಸ್ಥಳದಲ್ಲೇ ವಕೀಲನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಹೊಸೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನ್ಯಾಯಾಲಯದ ಆವರಣದಲ್ಲಿ ವಕೀಲ ಕಣ್ಣನ್ ಮೇಲೆ ಹಲ್ಲೇ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಹಲ್ಲೆ ಖಂಡಿಸಿ ರಸ್ತೆಯಲ್ಲಿ ಕುಳಿತು ವಕೀಲರು ಪ್ರತಿಭಟನೆ ಮಾಡಿದ್ದಾರೆ.

ನ.24ಕ್ಕೆ 2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ, ಶಾಸಕ ಸಿ.ಸಿ. ಪಾಟೀಲರ ಅಧ್ಯಕ್ಷತೆಯಲ್ಲಿ ನ. 24ರ ಸಾಯಂಕಾಲ 4 ಗಂಟೆಗೆ ಕಾರ್ಪೋರೇಷನ್ ಬ್ಯಾಂಕ್ ಹತ್ತಿರದ ಬಸವೇಶ್ವರ ಕಾಮರ್ಸ್ ಕಾಲೇಜನಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ಜರುಗಲಿದೆ.

ಈ ಸಭೆಯಲ್ಲಿ ಗದಗ ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಬೇಕು. ಸಭೆಯಲ್ಲಿ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ್, ವಕೀಲ ಸಂಘದ ಅಧ್ಯಕ್ಷ ಎಸ್.ಎಸ್. ಹುರಕಡ್ಲಿ, ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಮ.ಅಂಗಡಿ, ರೈತ ಘಟಕದ ಅಧ್ಯಕ್ಷ ಮುತ್ತಣ್ಣ ಗದುಗಿನ, ಮಹಿಳಾ ಜಿಲ್ಲಾಧ್ಯಕ್ಷರಾದ ಸ್ವಾತಿ ಅಕ್ಕಿ, ಹಿರಿಯರಾದ ವಿಜಯಕುಮಾರ್ ಗಡ್ಡಿ, ಮೋಹನ ಮಾಳಶೆಟ್ಟಿ, ಅಶೋಕ ಸಂಕಣ್ಣವರ, ಶಾಂತಣ್ಣ ಮುಳವಾಡ, ಪ್ರಮುಖರಾದ ಸಿದ್ದಣ್ಣ ಬಂಡಿ, ವಿಶ್ವನಾಥ ಜಿಡ್ಡಭಾಗಲ, ಕೆ.ಸಿ. ರಾಚನಗೌಡ್ರ, ಶಿವರಾಜ್ ಅಸುಂಡಿ, ಪ್ರವೀಣ್ ಆಚಾರ್ಯ, ಭದ್ರೇಶ ಕುಸಲಾಪೂರ, ಬಿ.ಎಸ್. ಚಿಂಚಲಿ, ಮಾಂತೇಶ ಹೀರೇಮನಿಪಾಟೀಲ, ಮಹೇಶ ಕರಿಬಿಷ್ಠಿ, ಈರಣ್ಣ ಕರಿಬಿಷ್ಠಿ, ಕೆ.ಕೆ. ಮಾಳಗೌಡ್ರ, ಬಸವರಾಜ ಗಡ್ಡೆಪ್ಪನವರ, ಎಮ್.ಬಿ. ಮತ್ತೂರು, ನಿಂಗಪ್ಪ ಹುಗ್ಗಿ, ಮಂಜುನಾಥ ಗುಡದೂರ, ಬೂದಪ್ಪ ಅಂಗಡಿ, ವಿರೂಪಾಕ್ಷಪ್ಪ ಬಳ್ಳೋಳ್ಳಿ, ನಾಗರಾಜ ಮದ್ನೂರ, ಶಿವಪ್ಪ ಬಾಳಿಕಾಯಿ, ರಮೇಶ ಗೊಳಗೊಳಕಿ, ಶರಣಪ್ಪ ಗೊಳಗೊಳಕಿ ಮುಂತಾದವರು ಭಾಗವಹಿಸುತ್ತಿದ್ದಾರೆ ಎಂದು ಯುವ ಘಟಕದ ಅಧ್ಯಕ್ಷ ಅಯ್ಯಪ್ಪ ಅಂಗಡಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ತಾ.ಪಂ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಚಂದ್ರಶೇಖರ ಬಿ.ಕಂದಕೂರ ಅಧಿಕಾರ ಸ್ವೀಕಾರ

0

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕು ಪಂಚಾಯಿತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ತಮ್ಮೆಲ್ಲರ ಸಹಾಯ- ಸಹಕಾರ ಅಗತ್ಯ. ಈ ಹಿನ್ನೆಲೆಯಲ್ಲಿ ತಾಲೂಕಿನ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಎಂದು ರೋಣ ತಾ. ಪಂ ನೂತನ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಹೇಳಿದರು.

ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರೋಣ ತಾಲೂಕಿಗೆ ಬಹಳ ದೊಡ್ಡ ಇತಿಹಾಸವಿದೆ. ಇಂತಹ ತಾಲೂಕಿನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನಗೆ ಖುಷಿ ತಂದಿದೆ. ಹಾಗೆಯೇ ತಾಲೂಕನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರತಿಯೊಬ್ಬರ ಕೊಡುಗೆ ಇರುತ್ತದೆ. ಎಲ್ಲರೂ ಒಗ್ಗೂಡಿ, ಒಂದೇ ಕುಟುಂಬದ ಹಾಗೆ ಕೆಲಸ ಮಾಡೋಣ. ಇದಕ್ಕೆ ಸಿಬ್ಬಂದಿಗಳ ಸಹಕಾರ ಕೂಡಾ ಅಗತ್ಯ ಎಂದರು.

ಸಭೆಯಲ್ಲಿ ಡಿಸೆಂಬರ್ 5ರ ಒಳಗಾಗಿ 2024-25ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸುವದು, ಪಂಚಾಯಿತಿಗಳಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ, ಶಾಲಾ ಅಭಿವೃದ್ಧಿ ಕಾಮಗಾರಿಗಳು, ಎಸ್‌ಬಿಎಮ್, ಹೌಸಿಂಗ್, ಮಾನವ ದಿನಗಳ ಸೃಜನೆ, ಮಹಿಳಾ ಭಾಗವಹಿಸುವಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.

ತಾಲೂಕಾ ಯೋಜನಾಧಿಕಾರಿ ಸಿ.ಎಸ್. ನೀಲಗುಂದ ಸನ್ಮಾನಿಸಿ ಸ್ವಾಗತಿಸಿದರು. ತಾ.ಪಂ ವ್ಯವಸ್ಥಾಪಕ ದೇವರಾಜ ಸಜ್ಜನಶೆಟ್ಟರ ಪರಿಚಯಿಸಿದರು. ಅರುಣ ಸಿಂಗ್ರಿ ನಿರೂಪಿಸಿ ವಂದಿಸಿದರು. ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ತಾಂತ್ರಿಕ ಸಹಾಯಕರು, ಎಸ್‌ಡಿಎ, ಡಿಇಓ ಸೇರಿದಂತೆ ತಾ.ಪಂ ಸಿಬ್ಬಂದಿಗಳು ಹಾಗೂ ನರೇಗಾ ಸಿಬ್ಬಂದಿಗಳು ಹಾಜರಿದ್ದರು.

ಭ್ರಷ್ಟ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತಾಡೋ ನೈತಿಕತೆ ಇಲ್ಲ: ಶಾಮನೂರು ಶಿವಶಂಕರಪ್ಪ!

0

ದಾವಣಗೆರೆ:- ಭ್ರಷ್ಟ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತಾಡೋ ನೈತಿಕತೆ ಇಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಕೋವಿಡ್ ಕಾಲದಲ್ಲಿ ಯಂತ್ರೋಪಕರಣಗಳನ್ನು ಖರೀದಿ ಮಾಡದೇ ಹಣ ತಿಂದು ಹಾಕಿದ್ದಾರೆ. ಆಗ ಬಿಜೆಪಿ ಮಾಡಿದ ಅವ್ಯವಹಾರ ಈಗ ಬೆಳಕಿಗೆ ಬರುತ್ತಿವೆ ಎಂದಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರಕ್ಕೆ ಕೋವಿಡ್ ಕಾಲದಲ್ಲಿ ಎಲ್ಲರಿಗೂ ಲಸಿಕೆ ಕೊಡಲು ಆಗಿಲ್ಲ. ನಾವು ನಮ್ಮ ಕುಟುಂಬದಿಂದ 6 ಕೋಟಿ ರೂ. ವೆಚ್ಚದಲ್ಲಿ ಕೋವಿಡ್ ಲಸಿಕೆ ವಿತರಿಸಿದ್ದೆವು. ಇದೇ ಕಾರಣಕ್ಕೆ 40% ಭ್ರಷ್ಟಚಾರ ಎಂದು ನಾವು ಬಿಜೆಪಿ ಸರ್ಕಾರವನ್ನ ಕರೆದಿದ್ದೆವು. ಈಗ ನಮ್ಮ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಬಿಜೆಪಿಗೆ ಯಾವ ನೈತಿಕತೆ ಇಲ್ಲಾ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಲಕ್ಕುಂಡಿ ಪಾರಂಪರಿಕ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪಾರಂಪರಿಕ ಪ್ರದೇಶವಾಗಿದ್ದು, ಈ ಪಾರಂಪರಿಕ ಗ್ರಾಮದಲ್ಲಿ ಸಾಕಷ್ಟು ಶಿಲೆಗಳು, ಶಾಸನಗಳು ಮತ್ತು ಪ್ರಾಚ್ಯಾವಶೇಷಗಳು ಗ್ರಾಮದಲ್ಲಿ ಹಾಗೂ ಗ್ರಾಮಸ್ಥರ ಮನೆಗಳಲ್ಲಿ ಲಭ್ಯವಿರುತ್ತವೆ.

ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಪಟ್ಟಿಗೆ ಸೇರಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸುವ ಕಾರ್ಯ ಪರಿಣಾಮಕಾರಿಯಾಗಬೇಕಿದ್ದು, ಪೂರಕ ಚಟುವಟಿಕೆಗಳನ್ನು ಕೈಗೊಳ್ಳುವ ಸಲುವಾಗಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂತಹ ಅವಶೇಷಗಳನ್ನು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಜೊತೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಲಕ್ಕುಂಡಿ ಗ್ರಾಮದಲ್ಲಿ 10 ತಂಡಗಳನ್ನು ಅಭಿಯಾನದ ರೂಪದಲ್ಲಿ ಗ್ರಾಮದ ಮನೆ, ಕಟ್ಟೆ, ತಿಪ್ಪಿ, ಒಳಗಟ್ಟಿ ಇತರೆಡೆಗಳಲ್ಲಿರುವ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಲು ನಿರ್ದೇಶಿಸಲಾಗಿದೆ.

ಈ ನಿಟ್ಟಿನಲ್ಲಿ ನವೆಂಬರ್ 22ರಿಂದ 24ರವರೆಗೆ ಮೂರು ದಿನಗಳ ಕಾಲ ಲಕ್ಕುಂಡಿ ಪಾರಂಪರಿಕ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪ್ರಾಚ್ಯಾವಶೇಷಗಳ (ಸಂಗ್ರಹಣಾ ಅಭಿಯಾನವನ್ನು) ಅನ್ವೇಷಣೆಯನ್ನು ಹಮ್ಮಿಕೊಳ್ಳಲಾಗಿದೆ.

ತಂಡಗಳ ವಿವರ: ವಾರ್ಡ್ ಸಂಖ್ಯೆ ೫-ಕರಿಯವರ ಓಣಿ, ತಹಸೀಲ್ದಾರರ ಓಣಿ ವ್ಯಾಪ್ತಿಯಲ್ಲಿ ರಾಜ್ಯದ  ಕಾನೂನು, ನ್ಯಾಯ ಸಂಸದೀಯ ವ್ಯವಹಾರಗಳು, ಶಾಸನ ರಚನೆ, ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿ ಅಧ್ಯಕ್ಷರಾದ ಎಚ್.ಕೆ. ಪಾಟೀಲ ಅವರು ತಂಡದ  ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಪ್ರಾಧಿಕಾರದ ರಾಜ್ಯ ಮಟ್ಟದ ಸಲಹಾ ಸಮಿತಿಯ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ.ಶರಣು ಗೋಗೇರಿ, ಗದಗ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವಿ. ನಡುವಿನಮನಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳಾದ ಪೀರಸಾಬ ನದಾಫ್, ರಜಿಯಾಬೇಗಂ ತಹಸೀಲ್ದಾರ, ಅನ್ನಪುರ್ಣ ರಿತ್ತಿ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ್ ಸಂಖ್ಯೆ 9, ಕುಂಬಾರ ಓಣಿ ಕಮತರ ಓಣಿ ಮತ್ತು ಗೌರಿ ಓಣಿ ವ್ಯಾಪ್ತಿಯಲ್ಲಿ ನರಗುಂದ ಶಾಸಕ ಸಿ.ಸಿ. ಪಾಟೀಲ ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್.ಎಸ್. ನೀಲಗುಂದ, ಗ್ರಾ.ಪಂ ಸದಸ್ಯರಾದ ಮಂಜುಳಾ ಮೆಣಸಿನಕಾಯಿ, ಲಲಿತಾ ಗದಗಿನ, ವೀರಣ್ಣ ಮಲ್ಲಪ್ಪ ಚಕ್ರಸಾಲಿ, ಮಹಾಂತೇಶ ಕಮತರ, ಶಿವಪ್ಪ ಬಳಿಗೇರ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ್ ಸಂಖ್ಯೆ 2ರ ಅಂಬಕ್ಕಿಯವರ ಓಣಿ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹೀನ್ ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ ಮೀನಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರವಿ ಗುಂಜೀಕರ್ ಹಾಗೂ ಗ್ರಾ.ಪಂ ಸದಸ್ಯರಾದ ರಮೇಶ ಸಿ.ಭಾವಿ, ಅನಸವ್ವ ಅಂಬಕ್ಕಿ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ್ 8ರ ಅನ್ನದಾನೇಶ್ವರ ನಗರ, ಕುರುಬರ ಓಣಿ ಮತ್ತು ಬಜಾರ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಕೆ.ವಿ. ರಾಜೇಂದ್ರ ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ ಹಾಗೂ ಗ್ರಾ.ಪಂ ಸದಸ್ಯರಾದ ವಿರುಪಾಕ್ಷಪ್ಪ ಬೆಟಗೇರಿ, ನೀಲವ್ವ ಬಂಡಿ, ಶಾಂತವ್ವ ಮಣಕವಾಡ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ್ ಸಂಖ್ಯೆ 3ರ ಗೊಲ್ಲರ ಓಣಿ ಕಲ್ಮೇಶ್ವರ ನಗರ, ಕೊರವರ ಓಣಿ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಉಪವಿಭಾಗಾಧಿಕಾರಿ ಎಂ.ಗAಗಪ್ಪ, ತಹಸೀಲ್ದಾರ ಶ್ರೀನಿವಾಸ ಕುಲಕರ್ಣಿ ಹಾಗೂ ಗ್ರಾ.ಪಂ ಸದಸ್ಯರಾದ ರೋಷನಬಿ ನದಾಫ್, ಬಸವರಾಜ ಹಟ್ಟಿ, ಕುಬೇರಪ್ಪ ಬೆಂತೂರ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ್ ಸಂಖ್ಯೆ 6ರ ಮಲ್ಲಿಕಾರ್ಜುನ ಗುಡಿ ಓಣಿ, ಯರಗುಡಿಯವರ ಓಣಿ ಮತ್ತು ಬಜಾರ್ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಭರತ್ ಎಸ್ ತಂಡದ ಮುಖ್ಯಸ್ಥರಾಗಿದ್ದು, ಸಂಚಾಲಕರಾಗಿ ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಗ್ರಾ.ಪಂ ಸದಸ್ಯರಾದ ಅಮೀನಾ ಹುಬ್ಬಳ್ಳಿ ಹಾಗೂ ಬಸವರಾಜ ಯಲಿಶಿರುಂದ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ್ ಸಂಖ್ಯೆ ಗೌಡ ಓಣಿ ವ್ಯಾಪ್ತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಂಡದ ಮುಖ್ಯಸ್ಥರಾಗಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ ಹಾಗೂ ಗ್ರಾ.ಪಂ. ಸದಸ್ಯರಾದ ಪುಷ್ಪಲತಾ ಪಾಟೀಲ, ಸುಮಿತ್ರವ್ವ ರೋಣದ, ರೇವಣಸಿದ್ಧಪ್ಪ ಮುಳಗುಂದ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ್ ಸಂಖ್ಯೆ 7ರ ಕುರುಬರ ಓಣಿ ವ್ಯಾಪ್ತಿಯಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ದೇವರಾಜು ಅವರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಶಾಲಾ  ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಪುರಾತತ್ವ ಮತ್ತು ಸಂಗ್ರಹಾಲಯ ಪರಂಪರೆ ಇಲಾಖೆಯ ಕ್ಯೂರೇಟರ್ ರಾಜಾರಾಮ್ ಹಾಗೂ ಗ್ರಾ.ಪಂ. ಸದಸ್ಯರಾದ ಶ್ರೇಯಾ ಕಟಿಗಾರ, ಹನುಮಂತಪ್ಪ ಬಂಗಾರಿಯವರ, ಲಕ್ಷö್ಮಣ  ಗುಡಸಲವಾಸಿ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ್ ಸಂಖ್ಯೆ 4ರ ನದಾಫ್ ಗಲ್ಲಿ, ಬಿನ್ನಾಳ ಬಸವೇಶ್ವರ ಓಣಿ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯದ ಕುಲಪತಿಗಳು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಗ್ರಾ.ಪಂ.ರಾ. ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಉಮೆಶ ಬಾರಕೇರ ಹಾಗೂ ಗ್ರಾ.ಪಂ ಸದಸ್ಯರಾದ ಫಕೀರವ್ವ ಬೇಲೇರಿ, ಚಂದ್ರವ್ವ ರಿತ್ತಿ ಅವರನ್ನು ತಂಡವು ಒಳಗೊಂಡಿದೆ.

ವಾರ್ಡ ಸಂಖ್ಯೆ 10ರ ಕಟಗಿಯವರ ಓಣಿ ಹಿರೇಹಾಳರವರ ಓಣಿ, ಅನ್ನದಾನೇಶ್ವರ ನಗರ ವ್ಯಾಪ್ತಿಯಲ್ಲಿ ಲಕ್ಕುಂಡಿ ಗ್ರಾ.ಪಂ ಅಧ್ಯಕ್ಷರು ತಂಡದ ಮುಖ್ಯಸ್ಥರಾಗಿರುತ್ತಾರೆ. ಸಂಚಾಲಕರಾಗಿ ಲಕ್ಕುಂಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಕುಮಾರ ಭಜಂತ್ರಿ, ಹಾಗೂ ಗ್ರಾ.ಪಂ ಸದಸ್ಯರಾದ ಗಂಗವ್ವ ಪೂಜಾರ, ಈರವ್ವ ಛಬ್ಬರಭಾವಿ, ರುದ್ರಪ್ಪ ಮುಸ್ಕಿನಭಾವಿ ಅವರನ್ನು ತಂಡವು ಒಳಗೊಂಡಿದೆ.

ಪ್ರತಿ ತಂಡಗಳಿಗೆ ಪ್ರತ್ಯೇಕವಾಗಿ ಇತಿಹಾಸ ಉಪನ್ಯಾಸಕರುಗಳನ್ನು ಹಾಗೂ ಪ್ರವಾಸಿ ಮಿತ್ರರನ್ನು ನಿಯೋಜಿಸಲಾಗಿದೆ.

ಅಭಿಯಾನದ ವೇಳಾಪಟ್ಟಿ

* ನವೆಂಬರ್ 22ರಂದು ಬೆ 9.30 ಗಂಟೆಗೆ ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುವ ಕುರಿತು ವಿದ್ಯಾರ್ಥಿ, ಸ್ವಯಂ ಸೇವಕರುಗಳಿಗೆ ಹಾಗೂ ತಂಡದ ಸದಸ್ಯರುಗಳು ತರಬೇತಿಯಲ್ಲಿ ಭಾಗವಹಿಸುವುದು.

* ನವೆಂಬರ್ 22ರಂದು ಮಧ್ಯಾಹ್ನ 3 ಗಂಟೆಗೆ ಲಕ್ಕುಂಡಿ ಗ್ರಾಮದ ಕ್ಷೇತ್ರ ಕಾರ್ಯಕ್ಕೆ ತೆರಳಿ ತಮಗೆ ವಹಿಸಿರುವ ಸ್ಥಳ ಹಾಗೂ ಲಭ್ಯವಿರಬಹುದಾದ ಪ್ರಾಚ್ಯಾವಶೇಷಗಳನ್ನು ಗುರುತಿಸುವುದು.

* ನವೆಂಬರ್ ೨೩ರಂದು ಲಕ್ಕುಂಡಿ ಗ್ರಾಮದಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹಣೆ ಮತ್ತು ಶೇಖರಣೆ ಕುರಿತು ಮನೆ-ಮನೆ ಸಮೀಕ್ಷೆ ಕೈಗೊಳ್ಳುವುದು ಹಾಗೂ ಸಮೀಕ್ಷೆಯ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ  ಕ್ರೋಢೀಕರಿಸುವುದು.

* ನವೆಂಬರ್ 23ರಂದು ಲಕ್ಕುಂಡಿ ಗ್ರಾಮದಲ್ಲಿ ಅಭಿಯಾನದ ತಂಡದವರೊಂದಿಗೆ ಹಿಂದಿನ ದಿನ ಸಮೀಕ್ಷೆಯಲ್ಲಿ ಗುರುತಿಸಲಾದ ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸುವುದು.

* ನವೆಂಬರ್ 22ರಿಂದ ೨24ರವರೆಗೆ ಜರುಗುವ ಪ್ರಾಚ್ಯಾವಶೇಷಗಳ ಅನ್ವೇಷಣೆ ಅಭಿಯಾನವನ್ನು ತಂಡದವರು ಪರಸ್ಪರ ಸಮನ್ವಯತೆ ಸಾಧಿಸಿ ಸಂಪೂರ್ಣ ಯಶಸ್ವಿಗೊಳಿಸಲು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

error: Content is protected !!