Home Blog Page 2094

ಬಿಜೆಪಿ ವಿರುದ್ಧ ಕೆಂಪಣ್ಣ ಮಾಡಿದ್ದ ಕಮಿಷನ್ ಆರೋಪ ಸತ್ಯ: ಜಗನ್ನಾಥ ಶೇಗಜಿ

0

ಕಲಬುರಗಿ:- ಹಿಂದಿನ ಬಿಜೆಪಿ ಸರ್ಕಾರದ ವಿರುದ್ದದ 40 ಪರ್ಸೆಂಟ್ ಆರೋಪ ಸುಳ್ಳು ಎನ್ನೋ ಲೋಕಾ ವರದಿ ವಿಚಾರವಾಗಿ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಜಗನ್ನಾಥ ಶೇಗಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ಮಾಜಿ ಅಧ್ಯಕ್ಷ ದಿ‌.ಕೆಂಪಣ್ಣ ಮಾಡಿದ್ದ ಆರೋಪ ಸತ್ಯ. ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ವಿಜಯೇಂದ್ರ ನಮ್ಮ ಸಂಘದ ಹೆಸರು ತೆಗೆದುಕೊಂಡು ಕೆಂಪಣ್ಣರವ ಹೆಸರು ತೆಗೆದುದಕೊಂಡು ಲಘವಾಗಿ ಮಾತನಾಡಿದ್ದಾರೆ.

ಅಂಬಿಕಾಪತಿ ದೂರು ನಮ್ಮ ಅಸೋಸಿಯೇಷನ್ ನಿಂದ ಹೋಗಿಲ್ಲ. ಅಂಬಿಕಾಪತಿ ನೀಡಿದ ದೂರಿಗೂ ನಮ್ಮ ಸಂಘಕ್ಕೂ ಸಂಬಂಧವಿಲ್ಲ. ಒಂದೇ ಒಂದು ಪತ್ರ ಲೋಕಾಯುಕ್ತಕ್ಕೆ ನೀಡಿಲ್ಲ. ಅದರ ಬಗ್ಗೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ ಎಂದರು.

ಇನ್ನೂ ನ್ಯಾ.ನಾಗಮೋಹನ ದಾಸ್ ಕಮಿಟಿಗೆ ನೀಡಿದ್ದೇವೆ. ನ್ಯಾಯಯುತವಾಗಿ ತನೀಖೆಯಾಗಬೇಕು‌. ಇಲ್ಲಾಂದ್ರೆ ನಾವು ನ್ಯಾಯಲಯದ ಮೊರೆ ಹೋಗ್ತೆವೆ. ನ್ಯಾ.ನಾಗಮೋಹನ್ ದಾಸ್ ಕಮಿಟಿಯದ್ದು ನಾಳೆ ಫೈನಲ್ ಹೇರಿಂಗ್ ಇದೆ. ನಾಳೆ ಎಲ್ಲಾ ದಾಖಲೆ ನೀಡುತ್ತೆವೆ‌. ಒಂದು ವೇಳೆ ನಮ್ಮ ಆರೋಪ ಸುಳ್ಳು ಎಂದಾದ್ರೆ, ನಾವು ಯಾವುದೇ ಶಿಕ್ಷೆಗೂ ತಯಾರಿದ್ದೇವೆ.

31 ಜಿಲ್ಲೆಯಲ್ಲಿ ನಡೆದ ಪರ್ಸೆಂಟೆಜ್ ಬಗ್ಗೆ ದಾಖಲೆ ನೀಡಿದ್ದೇವೆ. ನಾಳೆ ಮತ್ತೊಮ್ಮೆ ನ್ಯಾ,ನಾಗಮೋಹನ್ ದಾಸ್ ಎದರು ದಾಖಲೆ ನೀಡ್ತೆವೆ. ಸಧ್ಯದ ಶಾಸಕರು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಎಲ್ಲಾ‌ಪಕ್ಷದ ಶಾಸಕರು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಖ್ಯಾತ ಗಾಯಕ ಎ ಆರ್ ರೆಹಮಾನ್ ಸಂಸಾರದಲ್ಲಿ ಬಿರುಗಾಳಿ: 29 ವರ್ಷಗಳ ದಾಂಪತ್ಯ ಜೀವನ ಅಂತ್ಯ

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಎ.ಆರ್.ರೆಹಮಾನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸೈರಾ ಭಾನು ಜೊತೆಗಿನ 29 ವರ್ಷಗಳ ದಾಂಪತ್ಯಕ್ಕೆ ರೆಹಮಾನ್ ಅಂತ್ಯ ಹಾಡಿದ್ದಾರೆ. ರೆಹಮಾನ್ ಹಾಗೂ ಸೈರಾ ಬಾನು ವಿಚ್ಚೇದನ ಘೋಷಿಸಿರುವ ಅಭಿಮಾನಿಗಳಿಗೆ ಶಾಕ್ ಆಗಿದೆ.

ವಿಚ್ಛೇದನದ ವಿಚಾರವನ್ನು ಸೈರಾ ಭಾನು ಅವರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. 1995ರಲ್ಲಿ ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಅವರು ವಿವಾಹ ಆಗಿದ್ದರು. ಅವರದ್ದು ಅರೇಂಜ್ ಮ್ಯಾರೇಜ್. ಸಿನಿಮಾದಲ್ಲಿ ಬ್ಯುಸಿ ಆಗಿದ್ದ ರೆಹಮಾನ್ ಅವರಿಗೆ ಹುಡುಗಿ ನೋಡುವಷ್ಟು ಸಮಯ ಇರಲಿಲ್ಲ. ಹಾಗಾಗಿ ತಾಯಿ ನೋಡಿದ ಹುಡುಗಿಯನ್ನು ಅವರು ಮದುವೆ ಆಗಿದ್ದರು. ಆಗ ಅವರಿಗೆ 29 ವರ್ಷ ವಯಸ್ಸಾಗಿತ್ತು. ರೆಹಮಾನ್ ಮತ್ತು ಸೈರಾ ಬಾನು ಜೋಡಿಗೆ ಮೂವರು ಮಕ್ಕಳಿದ್ದಾರೆ.

ಬಹುತೇಕ ಮೂರು ದಶಕಗಳ ಕಾಲ ಹೊಂದಾಣಿಕೆಯಿಂದ ಸಂಸಾರ ಮಾಡಿದ ಎ.ಆರ್​. ರೆಹಮಾನ್ ಮತ್ತು ಸೈರಾ ಬಾನು ಅವರು ಹೀಗೆ ಏಕಾಏಕಿ ವಿಚ್ಛೇದನ ಘೋಷಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ‘ಸಂಬಂಧದಲ್ಲಿನ ಭಾವನಾತ್ಮಕವಾಗಿ ಸಂಕಟದಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಇಬ್ಬರ ನಡುವೆ ದೊಡ್ಡ ಅಂತರ ಸೃಷ್ಟಿ ಆಗಿದೆ’ ಎಂದು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಸೈರಾ ಬಾನು ತಿಳಿಸಿದ್ದಾರೆ.

ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿಯೂ ಎ.ಆರ್​. ರೆಹಮಾನ್ ಅವರಿಗೆ ಬೇಡಿಕೆ ಇದೆ. ತಮಿಳು, ತೆಲುಗು, ಹಿಂದಿ ಮುಂತಾದ ಭಾಷೆಯ ಸಿನಿಮಾಗಳಿಗೆ ರೆಹಮಾನ್ ಸಂಗೀತ ನೀಡುತ್ತಿದ್ದಾರೆ. ಆಸ್ಕರ್​ ಪ್ರಶಸ್ತಿ ಪಡೆದಿರುವ ಅವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಒಂದು ಸಾಂಗ್ ಹಾಡಲು ಅವರು ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಾಗಿದ್ದರೂ ಕೂಡ ಅವರು ಎಲ್ಲ ಹಾಡುಗಳನ್ನು ಒಪ್ಪಿಕೊಳ್ಳುವುದಿಲ್ಲ. ಗಾಯನಕ್ಕಿಂತಲೂ ಸಂಗೀತ ನಿರ್ದೇಶನದಲ್ಲಿ ಅವರು ಹೆಚ್ಚು ತೊಡಗಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡಲ್ಲ: ಮತ್ತೊಮ್ಮೆ ಸ್ಪಷ್ಟನೆ ಕೊಟ್ಟ ಸಚಿವ ಮುನಿಯಪ್ಪ!

0

ಬೆಂಗಳೂರು:- ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡಲ್ಲ, ಬಡವರು ಆತಂಕ ಪಡಬೇಡಿ ಎಂದು ಸಚಿವ ಮುನಿಯಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಹಾಗೂ ಎಪಿಎಲ್ ಯಾವ ಕಾರ್ಡ್ ರದ್ದಾಗಲ್ಲ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದರು.

20-25% ಅರ್ಹರಲ್ಲದವರು ಬಿಪಿಎಲ್ ಗೆ ಸೇರಿಕೊಂಡಿದ್ದಾರೆ. ಬಡವರಲ್ಲದವರು ಹಾಗೂ ಅರ್ಹರಲ್ಲದವರೂ ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ. 80% ರಾಜ್ಯದಲ್ಲಿ ಬಡವರ ಪ್ರಮಾಣ ಇದೆ. ಇದು ಸಾಧ್ಯವಾ? ಕರ್ನಾಟಕ ರಾಜ್ಯದಲ್ಲಿ 80% ಬಡವರಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು ಮಾಡುವುದಿಲ್ಲ. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಯಾರು ಮೇಲಿದ್ದಾರೆ ಸತ್ಯವಾದ ಮಾಹಿತಿ ಹೊರಗೆ ಬಿಡುತ್ತೇನೆ. ಬಿಜೆಪಿಯವರು ಸುಮ್ಮನೆ ತರಲೆ ಮಾಡ್ತಿದ್ದಾರೆ. ಬಿಪಿಎಲ್‌ನವರು ಯಾರೂ ಕೂಡ ಭಯ ಪಡಬೇಕಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತಾಂತ್ರಿಕ ಯುಗದಲ್ಲೂ ಸಾವಿರಾರು ಭಕ್ತರು ಮೃತ್ಯುಂಜಯ ಶ್ರೀಗಳ ಪ್ರವಚನದಲ್ಲಿ ಪಾಲ್ಗೊಂಡಿರುವುದು ಪ್ರಶಂಸನೀಯ: ಹುಕ್ಕೇರಿಮಠದ ಶ್ರೀಗಳು

0

ವಿಜಯಸಾಕ್ಷಿ ಸುದ್ದಿ, ಡಂಬಳ: ಮಠಗಳು ನಿರಂತರವಾಗಿ ಧಾರ್ಮಿಕ ಆಚಾರ-ವಿಚಾರಗಳ ಸಂಸ್ಕಾರ ನೀಡುವುದಲ್ಲದೆ, ಹಲವು ಮಠಗಳ ಮೂಲಕ ಶಿಕ್ಷಣ ಕ್ರಾಂತಿ, ಗದಗಿನ ಪುಟ್ಟರಾಜ ಕವಿ ಗವಾಯಿಗಳ ಮಠದಿಂದ ಸಂಗೀತ ಕ್ರಾಂತಿ, ಜಾತಿ, ಮತ, ಪಂಥ ಹೋಗಲಾಡಿಸಲು ಜಾತ್ಯಾತೀತ ತತ್ವದ ಮೂಲಕ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಮಠಗಳ ಕಾರ್ಯ ನಿರಂತರ ಎಂದು ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು  ಹೇಳಿದರು.

ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದ ಸರಕಾರಿ ಕನ್ನಡ ಶಾಲೆಯ ಆವರಣದಲ್ಲಿ ಮೃತ್ಯುಂಜಯ ಮಹಾಸ್ವಾಮಿಗಳ ಜಯಂತ್ಯುತ್ಸವ ಹಾಗೂ ಪ್ರವಚನ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಟಿವಿ, ಮೊಬೈಲ್ ಬಳಕೆಯ ತಾಂತ್ರಿಕ ಯುಗದಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಅಭಿನವ ಮೃತ್ಯುಂಜಯ ಶ್ರೀಗಳ ಪ್ರವಚನದಲ್ಲಿ ಪಾಲ್ಗೊಂಡು ಸದ್ವಿಚಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗಿರುವುದು ಪ್ರಶಂಸನೀಯ ಎಂದು ಹೇಳಿದರು.

ವಿಜಯಪುರದ ಸದ್ಗುರು ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಅಧೈರ್ಯದಿಂದ ಇದ್ದಾಗ ಪ್ರವಚನದಂತಹ ನೆತ್ತಿ ತುಂಬುವ ವಿಚಾರಗಳು ಧೈರ್ಯ ತುಂಬುತ್ತವೆ. ಬದುಕಿನಲ್ಲಿ ಹೆಣ್ಣು, ಹೊನ್ನು ಮತ್ತು ಮಣ್ಣು ಕೊಡುವವರು ಇರುತ್ತಾರೆ. ಇದರ ಬದಲಾಗಿ ಸಂಸ್ಕಾರ ಕೊಡುವವರು ಬೇಕಾಗಿದ್ದಾರೆ. ಆ ನಿಟ್ಟಿನಲ್ಲಿ ಪ್ರವಚನದ ಮೂಲಕ ಒಳ್ಳೆಯ ಸಂಸ್ಕಾರ ಭಕ್ತರಲ್ಲಿ ಮನದಲ್ಲಿ ತುಂಬುವ ಕೆಲಸ ಮಾಡಿರುವುದು ಪ್ರಶಂಸನೀಯ ಎಂದು ಹೇಳಿದರು.

ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯುವಕರು ಸಂಸ್ಕಾರಯುತ ಬದುಕು ಕಟ್ಟಲು, ರಾಜ್ಯಾದ್ಯಂತ ಸ್ವಾಮೀಜಿಯವರ ಕಾರ್ಯಗಳು ಯುವಕರನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯುತ್ತಿವೆ. ಮೃತ್ಯುಂಜಯ ಶ್ರೀಗಳು ಪವಾಡಗಳ ಮೂಲಕ ಅವರ ಭಕ್ತರಿಗೆ ಸರಿದಾರಿ ತೋರಿಸಿದ್ದರು. ಅವರು ಹಾಕಿಕೊಟ್ಟ ವಿಚಾರಗಳು ಚಿರಕಾಲ ಇರುತ್ತವೆ ಎಂದು ಹೇಳಿದರು.

ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಪ್ರವಚನಗಳ ಮೂಲಕ ಭಕ್ತರನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ನಿರಂತರವಾಗಿ ಶ್ರಮಿಸುವ ಪರಮಪೂಜ್ಯ ಶ್ರೀಗಳ ಕಾರ್ಯಗಳು ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಿದೆ ಎಂದು ಹೇಳಿದರು.

ಹಿರೇವಡ್ಡಟ್ಟಿಯ ಶಿವಾಚಾರ್ಯ ಶ್ರೀಗಳು, ಕೂಡಲ ನಂಜೇಶ್ವರಮಠದ ಮಹೇಶ್ವರ ಶಿವಾಚಾರ್ಯ ಶ್ರೀ, ಚನ್ನಬಸವ ದೇವರು, ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ಆನಂದ ಗಡ್ಡದೇವರಮಠ, ಹೇಮಗಿರೀಶ ಹಾವಿನಾಳ, ಉದ್ದಿಮೆದಾರರಾದ ಮಂಜುನಾಥ ಹರ್ಲಾಪುರ, ರಾಜೇಶ ಹರ್ಲಾಪುರ, ಕಿರಣ ಪ್ರಕಾಶ ಬೂಮಾ, ಎಸ್.ಎಚ್. ಶಿವನಗೌಡರ, ನಾಗರಾಜ ಕಾಟರಳ್ಳಿ, ಮಂಜುನಾಥ ಕುರ್ತಕೋಟಿ, ಗುಳಪ್ಪ ಸಂಗನಾಳ, ಹನಮಪ್ಪ ಕಾಟರಳ್ಳಿ, ಶುಭಾಸರಡ್ಡಿ ಹಳ್ಳಿಗುಡಿ, ಶಿವಪ್ಪ ಅಂಕದ, ವಿರೇಶ ಜಲ್ಲಿಗೇರಿ, ಹನಮರಡ್ಡಿ ಮೇಟಿ, ಶರಣಪ್ಪ ಹಳ್ಳಿತಳವಾರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಇದ್ದರು.

ದಿ. ಪ್ರಧಾನಿ ಇಂದಿರಾ ಗಾಂಧಿ ಅವರ 107ನೇ ಜನ್ಮದಿನ ಆಚರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ದಿ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಮಂಗಳವಾರ ದಿ. ಪ್ರಧಾನಿ ಇಂದಿರಾ ಗಾಂಧಿ ಅವರ 107ನೇ ಜನ್ಮದಿನವನ್ನು ಆಚರಿಸಲಾಯಿತು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನವರ ಮಾತನಾಡಿ, ಇಂದಿರಾ ಗಾಂಧಿ ಅವರು ಬಡವರ, ಮಹಿಳೆಯರ, ದೀನ-ದಲಿತರ ಬಗ್ಗೆ ಕಾಳಜಿ ಹೊಂದಿದ್ದರು. ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಡವರ, ಶ್ರಮಿಕರ ಕಲ್ಯಾಣಕ್ಕಾಗಿ ಶ್ರಮಿಸಿದರು. ಇಂದಿರಾ ಗಾಂಧಿ ಅವರು ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕೆಪಿಸಿಸಿ ಸದಸ್ಯೆ ಸುಜಾತಾ ದೊಡ್ಡಮನಿ, ಮುಖಂಡರಾದ ಮುಸ್ಕಾನ ಸಯ್ಯದ್, ಶಕುಂತಲಾ ಅಕ್ಕಿ, ಲಲಿತಾ ಗೊಳಗೊಳಕಿ, ವಹೀದ ಖಲೀಫ್, ಜಾನಕಿ ಮಲ್ಲಾಪೂರ, ಸಾವಿತ್ರಿ ಹೂಗಾರ, ಪರವೀನಬಾನು ಮುಲ್ಲಾ, ರೇಖಾ ಬದಿ, ಸಹೀರಾಬಾನು ಬಳ್ಳಾರಿ, ದ್ರಾಕ್ಷಾಯಿಣಿ ಹಾಸಿಲಕರ, ಗೀತಾ ಹಬೀಬ, ಶೋಭಾ ಕೆರಕಲಮಟ್ಟಿ, ರಾಜೇಶ್ವರಿ ಮೇಗೂರ, ಲಕ್ಮೀ ಜಾಲಿಕಟ್ಟಿ, ಚೇತನಾ ಸೀತಾರಹಳ್ಳಿ ಮುಂತಾದವರಿದ್ದರು.

ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ದೇವತೆಗಳ ಸ್ಥಾನವಿದೆ: ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಗೋದಾನಕ್ಕಿಂತ ಶ್ರೇಷ್ಠ ದಾನವಿಲ್ಲ. ಕಾಮಧೇನು ಕಲ್ಪವೃಕ್ಷ ಎನ್ನುವಂತೆ ಹಸುವಿನ ಉತ್ಪನ್ನಗಳಲ್ಲಿ ಸಂಜೀವಿನಿ ಅಡಗಿದೆ. ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ದೇವತೆಗಳ ಸ್ಥಾನವಿದೆ ಎಂದು ಮಹಾರಾಷ್ಟ ಕೊಲ್ಲಾಪುರದ ಶ್ರೀ ಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಕನ್ನೇರಿಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಲಕ್ಷದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಆಕಳ ಹಾಲಿನಲ್ಲಿ ಅಮೃತವೇ ಅಡಗಿದೆ. ದೇಶದಲ್ಲಿ ಪ್ರತಿನಿತ್ಯ 65 ಕೋಟಿ ಲೀಟರ್ ಹಾಲಿನ ಅವಶ್ಯಕತೆಯಿದ್ದು, ಕೇವಲ 15 ಕೋಟಿ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿದೆ. 50 ಕೋಟಿ ಲೀಟರ್ ನಕಲಿ ಹಾಲು ಮಾರಾಟವಾಗುತ್ತಿದ್ದು, ಇದು ದೇಶದ ಜನರಲ್ಲಿ ಅನಾರೋಗ್ಯ, ಆಸ್ಪತ್ರೆಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ನಮ್ಮ ಪೂರ್ವಜರಿಗೆ ಆಕಳಿನ ಮಹತ್ವ ಗೊತ್ತಿತ್ತು. ಆದರೆ ಈಗ ಆಕಳ ಬದಲಾಗಿ ತಂದೆ-ತಾಯಿಗಳಿಗಿAತಲೂ ನಾಯಿಗಳಿಗೆ ಮಹತ್ವ ಕೊಡಲಾಗುತ್ತಿದೆ. 60/70ಸಾವಿರ ಕೊಟ್ಟು ನಾಯಿ ಸಾಕಿ ಅನಾರೋಗ್ಯ ತಂದುಕೊಳ್ಳುವ ಬದಲು 30/40 ಸಾವಿರ ಕೊಟ್ಟು ಗೋಮಾತೆಯನ್ನು ಸಾಕಿ.

ಗೋಮಾತೆಯ ಉತ್ಪನ್ನಗಳಲ್ಲಿ ಎಲ್ಲ ವಿಟಾಮಿನ್‌ಗಳು ಮಕ್ಕಳಿಗೆ ಸಿಗುತ್ತವೆ. ಭಗವದ್ಗೀತೆ, ಮಹಾಭಾರತದಂತಹ ಹಿಂದೂ ಪವಿತ್ರ ಗ್ರಂಥಗಳಲ್ಲಿ ಕಾಮಧೇನುವಿನ ಮಹಿಮೆ ಹಾಗೂ ಶ್ರೇಷ್ಠತೆಯ ಬಗ್ಗೆ ವರ್ಣಿಸಿರುವುದು ಆಕಳಿನ ಮಹತ್ವ ಅರ್ಥವಾಗುತ್ತದೆ. ಗೋಮಾತೆ ಪೂಜಿಸುವುದರಿಂದ ನಮ್ಮ ಪಾಪಕರ್ಮಗಳು ನಾಶವಾಗಿ, ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಗೋವಿನ ಮಹತ್ವದ ಬಗ್ಗೆ ಸೇರಿದ್ದ ಅಪಾರ ಭಕ್ತರಿಗೆ ಮನಮುಟ್ಟುವಂತೆ ಹೇಳಿದರು.

ಈ ವೇಳೆ ಕನ್ನೇರಿ ಮಠದ ಗೋಶಾಲೆಗೆ ಲಕ್ಮಶ್ವರದ ಆದಿ ಕುಟುಂಬದವರು ತುಂಬು ಗರ್ಭಿಣಿ ಗೋಮಾತೆಯನ್ನು ದಾನವಾಗಿ ಸಮರ್ಪಿಸಿದರು. ಈ ವೇಳೆ ಮುಕ್ತಿಮಂದಿರ, ಶಿಗ್ಲಿ ಶ್ರೀಗಳು, ಜನಪ್ರತಿನಿಧಿಗಳು ಇದ್ದರು.

ಪ್ರಕೃತಿಯ ಮುಂದೆ ನಾವೆಲ್ಲ ತೃಣ ಸಮಾನರು: ಡಾ.ಪಾವಗಡ ಪ್ರಕಾಶ್ ರಾವ್

0

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನು ತನ್ನ ತಾಮಸ, ರಾಜಸ ಗುಣಗಳನ್ನು ತ್ಯಜಿಸಿ ಪರಮ ಸಾತ್ವಿಕತೆಯನ್ನು ರೂಢಿಸಿಕೊಳ್ಳುವ ಮೂಲಕ ದೈವಿಕ ಸ್ಥಾನಕ್ಕೆ ಏರಬಹುದು ಎಂಬುದಾಗಿ ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ ತಿಳಿಸಲಾಗಿದೆ ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶ್ ರಾವ್ ತಿಳಿಸಿದರು.

ಅವರು ಇಲ್ಲಿನ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿ ಏರ್ಪಡಿಸಿರುವ ಭಗವದ್ಗೀತಾ ಪ್ರವಚನದ ೭ನೇ ದಿನದ ಪ್ರವಚನ ನೀಡಿ ಮಾತನಾಡಿ, ಪರಮ ಸಾತ್ವಿಕತೆಯನ್ನು ಸಂಪಾದಿಸಲು ಜ್ಞಾನ ಮಾರ್ಗ ಹಾಗೂ ಭಕ್ತಿ ಮಾರ್ಗ ಎಂಬ ಎರಡು ದಾರಿಗಳಿವೆ. ಅನೇಕರು ಜ್ಞಾನ ಮಾರ್ಗಕ್ಕಿಂತ ಭಕ್ತಿ ಮಾರ್ಗವೇ ಸರಳ ಎಂದು ಭಾವಿಸಿದ್ದಾರೆ. ಆದರೆ ಭಕ್ತಿ ಮಾರ್ಗವು ಅತ್ಯಂತ ತಾಳ್ಮೆ ಹಾಗೂ ಪರಿಶುದ್ಧತೆಯನ್ನು ಬೇಡುತ್ತದೆ. ನಮ್ಮನ್ನು ನಾವು ಶೂನ್ಯ ಮಾಡಿಕೊಂಡು ಸಕಲವೂ ದೈವವೇ ಎನ್ನುವುದು ನಿಜ ಭಕ್ತಿ.

`ಗುಣತ್ರಯ ವಿಭಾಗ ಯೋಗ’ ಎಂದಿರುವ ಶ್ರೀಕೃಷ್ಣ ಪರಮಾತ್ಮನು ನಿರಂತರ ತಪಸ್ಸು ಹಾಗೂ ಅದರ ಫಲವಾಗಿ ದಕ್ಕುವ ಪರಮ ಸಾತ್ವಿಕತೆಯ ಮಹತ್ವವನ್ನು ವಿವರಿಸಿದ್ದಾನೆ. ಮನುಷ್ಯನ ದೇಹವನ್ನು ‘ಕ್ಷೇತ್ರ’ ಎಂದು ಹಾಗೂ ಈ ಕ್ಷೇತ್ರದ ಮಾಲೀಕನನ್ನು ‘ಕ್ಷೇತ್ರಜ್ಞ’ ಎಂದು ಕರೆಯಲಾಗಿದೆ. ಇದರ ವ್ಯಾಖ್ಯಾರ್ಥ ಮನುಷ್ಯನೇ ತನ್ನ ದೇಹದ ಮಾಲೀಕ ಎನಿಸುತ್ತದೆ. ಆದರೆ ಮುಂದಿನ ಶ್ಲೋಕದಲ್ಲಿ ಮನುಷ್ಯನನ್ನು ಮೀರಿದ ಶಕ್ತಿಯು ಅರ್ಥಾತ್ ಕೃಷ್ಣ ಪರಮಾತ್ಮನು ಕ್ಷೇತ್ರದ ಮಾಲೀಕ ಎನಿಸಿಕೊಳ್ಳುತ್ತಾನೆ.

ಮನುಷ್ಯ ಸಾಧ್ಯತೆಗಳನ್ನೆಲ್ಲ ಮೀರಿ ಭೂಮಿಯ ಮೇಲಿನ ಪ್ರತಿ ಕ್ರಿಯೆಯೂ ಯಾವುದೋ ಒಂದು ಶಕ್ತಿಯ ಆಣತಿಯಂತೆ ನಡೆಯುತ್ತಿರುತ್ತದೆ. ಮನುಷ್ಯ ಏನೆಲ್ಲಾ ಸಂಪಾದಿಸಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ಆತ ಪರಾವಲಂಬಿಯೇ ಆಗಿದ್ದಾನೆ. ಮನುಷ್ಯ ಪ್ರಭುತ್ವ ಎಂಬುದು ಭ್ರಮೆಯಾಗಿದ್ದು, ಈ ಪ್ರಕೃತಿಯ ಮುಂದೆ ನಾವೆಲ್ಲ ತೃಣ ಸಮಾನ ಎಂದರು.

ಕಲ್ಲೇಶ ಮೂರಶಿಳ್ಳಿನ ನಿರೂಪಿಸಿ ವಂದಿಸಿದರು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ. ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.

ಮೊದಲು ಉದ್ಯೋಗ ಸೃಷ್ಟಿ ಮಾಡಲಿ, ಜಾಗ ನಾನೇ ಕೊಡಿಸ್ತೀನಿ: ಮೋದಿಗೆ DCM ಡಿಕೆಶಿ ಸವಾಲ್!

0

ಬೆಂಗಳೂರು:– ಮೊದಲು ಮೋದಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡ್ಲಿ, ನಾನೇ ನಿಂತು ಜಾಗ ಕೊಡಿಸ್ತೀನಿ ಎಂದು DCM ಡಿಕೆ ಶಿವಕುಮಾರ್ ಅವರು, PM ಮೋದಿಗೆ ಸವಾಲ್ ಹಾಕಿದ್ದಾರೆ.

ಈ ಸಂಬಂಧ ಮಾತನಾಡಿದ ಅವರು, ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆ. ವಿಷಯ ಇಲ್ಲದೇ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುತ್ತಿವೆ. ಮೋದಿ ಅವರು ಮೊದಲು ಕೊಟ್ಟಿರುವ ಭರವಸೆ ಈಡೇರಿಸುವ ಕೆಲಸ ಮಾಡಲಿ. ಉದ್ಯೋಗ ಸೃಷ್ಟಿ ಮಾಡೋ ಕೆಲಸ ಮಾಡಲಿ ರಾಜ್ಯದಲ್ಲಿ ಜಾಗ ಬೇಕಿದ್ರೆ ಹೇಳಲಿ, ನಾನೇ ನಿಂತು ಜಾಗ ಕೊಡಿಸುತ್ತೇನೆ ಎಂದರು.

ಬಿಜೆಪಿಗೆ, ಕುಮಾರಸ್ವಾಮಿಗೆ ನಮ್ಮ ಸರ್ಕಾರದ ಬಗ್ಗೆ ಹೇಳೋದಕ್ಕೆ ಏನೂ ಇಲ್ಲ. ಅವರ ಕಾಲದಲ್ಲಿ ಏನೇನು ಅನ್ಯಾಯ ಮಾಡಬೇಕೋ ಮಾಡಿದ್ರು. ಯಾವ ಬಡವರಿಗೂ ಸಹಾಯ ಮಾಡಲಿಲ್ಲ. ಒಂದು ಕಾರ್ಯಕ್ರಮ ಕೋಡೋದಕ್ಕೆ ಆಗಲಿಲ್ಲ ಎಂದು ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಮರೆಯಾದ ಮಳೆ, ಹೆಚ್ಚಾಯ್ತು ವಿಪರೀತ ಚಳಿ: ಸ್ವೆಟರ್ ಮೊರೆ ಹೋದ ಸಿಟಿ ಮಂದಿ!

0

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಪರೀತ ಚಳಿ ಹೆಚ್ಚಳವಾಗಿದೆ. ಸಂಜೆ ಆಗುತ್ತಿದ್ದಂತೆ ಬರುವ ಚುಮುಚುಮು ಚಳಿಗೆ ಸಿಟಿ ಮಂದಿ ಸ್ವೆಟರ್ ಮೊರೆ ಹೋಗಿದ್ದಾರೆ.

ಈ ಬಾರಿ ಸತತವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಹವಾಮಾನ ಪರಿಸ್ಥಿತಿ ಬದಲಾಗಿದ್ದು, ಈ ಬಾರಿ ಅಧಿಕ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇನ್ನೂ ಚಳಿಗಾಲ ಆರಂಭಕ್ಕೂ ಮುನ್ನವೇ ಚಳಿ ಹೆಚ್ಚಾಗಿದ್ದು, ವಾತಾವರಣ ಬದಲಾವಣೆಯಿಂದ ನಮ್ ಬೆಂಗಳೂರು ಮಂದಿ ಈಗಾಗಲೇ ಸ್ವೆಟರ್, ಸ್ಕಾರ್ಫ್, ಮಪ್ಲರ್, ಜರ್ಕಿನ್ ಹಾಗೂ ದೊಡ್ಡ ದೊಡ್ಡ ಕಂಬಳಿಯ ಮೊರೆ ಹೋಗಿದ್ದಾರೆ. ಅಷ್ಟೇ ಅಲ್ಲದೇ ಮಾರ್ಕೆಟ್‌ಗೆ ಸ್ವೇಟರ್ ಗಳು ಲಗ್ಗೆ ಇಟ್ಟಿವೆ.

ಈ ಬಾರಿ ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8ಗಂಟೆಯವರೆಗೂ ಶೀತದ ವಾತವರಣ ಇರುತ್ತಿರುವುದಿರಿಂದ ಶೀತ -ಜ್ವರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಉಸಿರಾಟ, ಎಲುಬು ಕೀಲು ನೋವು ಇರುವವರು ಆದಷ್ಟು ಬೆಚ್ಚಗೆ ಇರುವಂತೆ ಮತ್ತು ಚಳಿಗಾಲ ಮುಗಿಯೋ ವರೆಗೆ ಉಗುರು ಬೆಚ್ಚಗಿನ ನೀರು ಬಿಸಿ ಆಹಾರ ಸೇವಿಸುವಂತೆ ಹವಾಮಾನ ಇಲಾಖೆ ತಜ್ಞರು ಸೂಚನೆ ನೀಡಿದ್ದಾರೆ.

ಇನ್ನೂ ಈ ಪರಿಸ್ಥಿತಿಗೆ ಮುಖ್ಯ ಕಾರಣ ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶವು ಕಡಿಮೆ ಇರಲಿದ್ದು, ಇದಕ್ಕೆ ಲಾ-ನಿನ್ ಪರಿಸ್ಥಿತಿ ಎಂದು ಕರೆಯುತ್ತಾರೆ. ಈ ಲಾ-ನಿನ್ ಪರಿಸ್ಥಿತಿಯಿಂದ ಚಳಿಗಾಲವು ಮಾರ್ಚ್ ವರೆಗೂ ಮುಂದುವರೆಯುತ್ತದೆ.

ಜೊತೆಗೆ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ 8ರಿಂದ 10ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಹಾಗೂ ಬೆಂಗಳೂರಲ್ಲಿ 12ರಿಂದ 14ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

ದೇಗುಲಗಳು ಶಾಶ್ವತವಾದ ನಂದಾದೀಪವಿದ್ದಂತೆ: ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದೇವಸ್ಥಾನ, ಹಬ್ಬಹರಿದಿನ, ಸಂಪ್ರದಾಯ, ಆಚರಣೆಗಳು ನಮ್ಮ ಸಂಸ್ಕೃತಿಯ ಪ್ರತೀಕವಷ್ಟೇ ಅಲ್ಲದೇ ಪರಸ್ಪರ ಸಹೋದರತ್ವ, ಸೌಹಾರ್ದತೆ, ಮಾನವೀಯ ಮೌಲ್ಯಗಳನ್ನು ಬಿತ್ತುವದರೊಂದಿಗೆ ಸಮಾಜವನ್ನು ಸನ್ಮಾರ್ಗದತ್ತ ಸಾಗಿಸುವ ಚೈತನ್ಯ ಶಕ್ತಿಯಾಗಿವೆ ಎಂದು ಕನ್ನೇರಿಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಲಕ್ಷ ದೀಪೋತ್ಸವ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ದೇಗುಲಗಳು ಶಾಶ್ವತವಾದ ನಂದಾದೀಪವಿದ್ದಂತೆ. ಇಲ್ಲಿ ದೀಪ ದೀಪದಿಂದ ಬೆಳಗಿಸುವ ಜತೆಗೆ ಮನಸ್ಸಿಂದ ಮನಸ್ಸನ್ನು ಬೆಳಗುವ ಧರ್ಮ ಮತ್ತು ಆಧ್ಯಾತ್ಮದ ದೀಪ ಬೆಳಗಿಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ವೇಷ-ಭೂಷಣ, ಭಾಷೆ, ಆಹಾರ, ಪ್ರದೇಶ ಭಿನ್ನವಾಗಿದ್ದರೂ ನಮ್ಮಲ್ಲಿರುವ ಸಂಪ್ರದಾಯ, ಸಂಸ್ಕೃತಿಗಳು ಇಡಿ ಜಗತ್ತಿಗೆ ಶ್ರೇಷ್ಠವಾಗಿವೆ. ದೇವಸ್ಥಾನ, ಹಬ್ಬಹರಿದಿನಗಳು, ಜಾತ್ರೆಗಳು ಮನುಷ್ಯರಷ್ಟೇ ಅಲ್ಲದೇ ಪಶು-ಪಕ್ಷಿ, ನಿಸರ್ಗದೊಂದಿಗೆ ಬೆಸೆಯುತ್ತವೆ. ಹಬ್ಬಗಳು ಮನಸ್ಸುಗಳನ್ನು ಜೋಡಿಸುತ್ತವೆ. ಮನುಷ್ಯನಲ್ಲಿ ಪ್ರೀತಿ, ನಿಸ್ವಾರ್ಥ ಭಾವನೆ ಇದ್ದರೆ ನೀರು ತೀರ್ಥವಾಗುತ್ತದೆ, ಅನ್ನ ಪ್ರಸಾದವಾಗುತ್ತದೆ ಎಂದು ನುಡಿದರು.

ದೀಪ ಬೆಳಗುವದು ಕಲ್ಯಾಣ, ಆರೋಗ್ಯ, ಸಂಪತ್ತು, ಶತ್ರುಬುದ್ಧಿ ವಿನಾಶ ಮಾಡುತ್ತದೆ. ದೀಪವೆಂದರೆ ಪ್ರಕಾಶ ಮತ್ತು ಜ್ಞಾನ. ಈ ಜ್ಞಾನದ ದೀಪ ನಮ್ಮಲ್ಲಿ ಬೆಳಗಿದರೆ ಯಾರನ್ನೂ ತಪ್ಪು ತಿಳಿಯುವದಿಲ್ಲ. ಅದಕ್ಕಾಗಿ ಇಂತಹ ದೀಪೋತ್ಸವ ಕಾರ್ಯಕ್ರಮಗಳು ನಡೆಯುತ್ತವೆ. ಪೂರ್ವದಲ್ಲಿ ಇರುವ ಶಿಕ್ಷಣ ಪದ್ಧತಿಗೂ ಈಗಿನ ಶಿಕ್ಷಣ ಪದ್ಧತಿಗೂ ಸಾಕಷ್ಟು ಬದಲಾವಣೆಗಳಾಗಿದ್ದು, ಸುಶಿಕ್ಷಿತ ಸಮಾಜದಿಂದಲೇ ಹಬ್ಬಗಳು ತೆರೆಮೆರೆಗೆ ಸರಿಯುತ್ತಿವೆ. ಲಕ್ಮೇಶ್ವರ ಒಂದು ಪವಿತ್ರವಾದ ಕ್ಷೇತ್ರವಾಗಿದ್ದು, ರಾಘವಾಂಕ ಕವಿ ಈ ಸೋಮೇಶ್ವರ ಚರಿತ್ರೆಯನ್ನು ಬರೆದ ಇತಿಹಾಸವಿದೆ. ಈ ಕ್ಷೇತ್ರದ ಮಹತ್ವ ಎಲ್ಲರಿಗೂ ತಿಳಿಯುವಂತಾಗಲಿ. ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆಯುತ್ತಿರಲಿ ಎಂದು ಸಲಹೆ ನೀಡಿದರು.

ಮಾಜಿ ಶಾಸಕರುಗಳಾದ ಡಿ.ಆರ್. ಪಾಟೀಲ ಮಾತನಾಡಿ, ಇತಿಹಾಸ ಪ್ರಸಿದ್ಧ ಪುಲಿಗೆರೆಯ ಶ್ರೀ ಸೋಮೇಶ್ವರ ದೇವಸ್ಥಾನವನ್ನು ಇನ್ಫೋಸಿಸ್ ಪೌಂಢೇಶನ್‌ನ ಡಾ. ಸುಧಾಮೂರ್ತಿ ಅವರು ೫ ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ 5 ವರ್ಷಗಳ ಹಿಂದೆ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಲಕ್ಷದೀಪೋತ್ಸವ ಆಚರಿಸಲಾಗಿತ್ತು. ಅಂದು ಹಿರಿಯರೆಲ್ಲರೂ ತೆಗೆದುಕೊಂಡ ನಿರ್ಣಯದಂತೆ ಇದು 3ನೇ ಲಕ್ಷ ದೀಪೋತ್ಸವವಾಗಿದೆ. ಈ ಪುಣ್ಯ ಕಾರ್ಯ ನಿರಂತರ ನಡೆಯಲು ಭಕ್ತರೆಲ್ಲರ ಸಹಕಾರ ಅಗತ್ಯ ಎಂದರು.

ಹನುಮನಹಳ್ಳಿ ಶ್ರೀಗಳು ಮತ್ತು ಇಷ್ಟಲಿಂಗ ಶ್ರೀಗಳು ಉಪಸ್ಥಿತರಿದ್ದರು. ಐ್ರ‍್ರಸ್ಟ್ ಅಧ್ಯಕ್ಷ  ಚಂಬಣ್ಣ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ಚಂದ್ರು ಲಮಾಣಿ, ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ಮುಂತಾದವರಿದ್ದರು. ಶಂಕರ ಬಾಳಿಕಾಯಿ ಸ್ವಾಗತಿಸಿದರು, ಈಶ್ವರ ಮೆಡ್ಲೇರಿ ನಿರೂಪಿಸಿದರು.

error: Content is protected !!