Home Blog Page 2096

ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್: ನಾಳೆ ಬಾರ್ ಬಂದ್ ಇಲ್ಲ, CM ಸಂಧಾನ ಸಭೆ ಸಕ್ಸಸ್!

0

ಬೆಂಗಳೂರು:- ಎಣ್ಣೆ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ರಾಜ್ಯಾದ್ಯಂತ ಬಾರ್ ಬಂದ್‌ಗೆ ಮದ್ಯ ಮಾರಾಟಗಾರರ ಸಂಘ ನೀಡಿದ್ದ ಕರೆಯನ್ನು ವಾಪಸ್ ಪಡೆದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಸಂಘದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ. ಇಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಕರ್ನಾಟಕದ ಅಧ್ಯಕ್ಷ ಕರುಣಾಕರ ಹೆಗಡೆ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದೆ. ಇನ್ನು ಅವರ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಬಾರ್ ಅಸೋಸಿಯೇಷನ್, ನವೆಂಬರ್‌ 20ರ ಬುಧವಾರದ ಮದ್ಯ ಮಾರಾಟ ಬಂದ್​ ಕರೆ ವಾಪಸ್ ಪಡೆದುಕೊಂಡಿದೆ.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟುಕೊಂಡು ನವೆಂಬರ್ 20ರಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ​​​​ರಾಜ್ಯಾದ್ಯಂತ ಎಲ್ಲಾ ವೈನ್ ಸ್ಟೋರ್‌ಗಳ ಬಂದ್‌ಗೆ ಕರೆ ನೀಡಿತ್ತು. ಆದ್ರೆ, ಕರ್ನಾಟಕ ಬಾರ್ ಅಸೋಸಿಯೇಷನ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆಸಿದ್ದು, ಅದು ಸಫಲವಾಗಿದೆ. ಹೀಗಾಗಿ ಬಾರ್ ಅಸೋಸಿಯೇಷನ್ ನೀಡಿದ್ದ ನಾಳಿನ ಬಂದ್​ ವಾಪಸ್ ಪಡೆದುಕೊಂಡಿದೆ.

ಸಿಎಂ ಭೇಟಿ ಬಳಿಕ ಸ್ವತಃ ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದ್ ರಾಜ್ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಗಳು ನಮ್ಮ ಸಂಘದ ಬೇಡಿಕೆ ಈಡೇರಿಸುವ ಆಶ್ವಾಸನೆ ನೀಡಿದ್ದಾರೆ. ಹೀಗಾಗಿ, ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌ಗೆ ನೀಡಿದ್ದ ಕರೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ತಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ನಡೆಸಿದ ಸಭೆ ಯಶಸ್ವಿಯಾಗಿದ್ದು, ಮುಷ್ಕರ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಎಂ.ಕೆ. ಲಮಾಣಿ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಲ್ಲಿನ ಮೇಗೇರಿ ಓಣಿಯ ಕನಕದಾಸ ವೃತ್ತದ ಬಳಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮಂಜುನಾಥ ಘಂಟಿ, ಜಿಲ್ಲಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಸಮಾಜದಲ್ಲಿ ಕಂಡು ಬರುವ ಜಾತೀಯತೆ, ಮೌಢ್ಯತೆ, ಕಂದಾಚಾರ, ಶೋಷಣೆ, ಅನ್ಯಾಯ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ದಾರ್ಶನಿಕರಾಗಿ, ಕವಿಗಳಾಗಿ, ಶ್ರೇಷ್ಠ ಭಕ್ತರಾಗಿ ವಿಶ್ವ ಬಂಧುತ್ವವನ್ನು ಸಾರಿದ ದಾಸ ಶ್ರೇಷ್ಠ ಕನಕದಾಸರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಮಾಜಿ ಶಾಸಕ ರಾಮಣ್ಣ ಲಮಾಣಿ, ಹುಮಾಯೂನ್ ಮಾಗಡಿ, ಸಂತೋಷ ಕುರಿ, ಫಕ್ಕಿರೇಶ ರಟ್ಟಿಹಳ್ಳಿ ಮಾತನಾಡಿದರು. ತಹಸೀಲ್ದಾರ ಅನಿಲ ಬಡಿಗೇರ, ಪ.ಪಂ ಅಧ್ಯಕ್ಷೆ ದೇವಕ್ಕ ಗಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಹೊನ್ನಪ್ಪ ಶಿರಹಟ್ಟಿ, ಸಮಾಜದ ಅಧ್ಯಕ್ಷ ಹೊನ್ನೇಶ ಪೋಟಿ, ರೇವಣೆಪ್ಪ ಮನಗೂಳಿ, ಎಸ್.ಎಸ್. ಕಲ್ಮನಿ, ಎಚ್.ಎನ್.ನಾಯಕ, ಕೆ.ಎ. ಬಳಿಗೇರ, ನಾಗರಾಜ ಲಕ್ಕುಂಡಿ, ಸಂದೀಪ ಕಪ್ಪತ್ತನವರ, ಪರಮೇಶ ಪರಬ, ಗೂಳಪ್ಪ ಕರಿಗಾರ, ರಾಮಣ್ಣ ಕಂಬಳಿ, ಪರಶುರಾಮ ಡೊಂಕಬಳ್ಳಿ, ಸಿದ್ದರಾಯ ಕಟ್ಟಿಮನಿ, ಯಲ್ಲಪ್ಪ ಇಂಗಳಗಿ, ಸೋಮನಗೌಡ ಮರಿಗೌಡ, ಹನಮಂತ ಗೊಜನೂರ, ಆನಂದ ಮಾಳೆಕೊಪ್ಪ ಮುಂತಾದವರು ಉಪಸ್ಥಿತರಿದ್ದರು.

ಕೆ.ಎಚ್. ಪಾಟೀಲ ಫುಟ್ಬಾಲ್ ಲೀಗ್ ಸೀಸನ್-2: ವಿಜೇತರಿಗೆ ಬಹುಮಾನ ವಿತರಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ಕೆ.ಎಚ್. ಪಾಟೀಲ ಸ್ಪೋರ್ಟ್ಸ್ ಇವೆಂಟ್ಸ್ ಹಾಗೂ ಕರ್ನಾಟಕ ಸ್ಪೋರ್ಟ್ಸ್ ಆಂಡ್ ಎಜುಕೇಶನ್ ಅಕಾಡೆಮಿ ವತಿಯಿಂದ ಸಚಿವ ಡಾ. ಎಚ್.ಕೆ. ಪಾಟೀಲ ಅಯೋಜಿಸಿದ್ದ ಫುಟ್ಬಾಲ್ ಪಂದ್ಯಾವಳಿಗಳ ನೇತೃತ್ವ ವಹಿಸಿಕೊಂಡು ಯಶಸ್ವಿಗೊಳಿಸಿದ ಯುವ ಮುಖಂಡ ಕೃಷ್ಣಗೌಡ ಪಾಟೀಲ ಹಾಗೂ ಸಚಿನ್ ಪಾಟೀಲ ಇವರ ಉಪಸ್ಥಿತಿಯಲ್ಲಿ ವಿಜೇತ ತಂಡಗಳಿಗೆ ಬೆಳ್ಳಿ ಪದಕ ಹಾಗೂ ನಗದು ಬಹುಮಾನ ವಿತರಿಸಲಾಯಿತು.

ಯುನಿಕ್ ಅಸೋಸಿಯೇಟ್ಸ್ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಂತಣ್ಣ ಮುಳುವಾಡ, ನಮ್ಮ ಸ್ಟೇಕರ್ಸ್ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದು, ನಮಗೆಲ್ಲ ಹರ್ಷ ತಂದಿದೆ ಎಂದರು.

ಯುವ ನಾಯಕ ಕೃಷ್ಣಗೌಡ ಪಾಟೀಲ ಮಾತನಾಡಿ, ಗದುಗಿನ ಫುಟ್ಬಾಲ್ ಆಟಗಾರರು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ. ಆಟಗಾರರಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸಲು ಸಿದ್ಧರಿದ್ದೇವೆ. ಸರ್ಫರಾಜ್ ಶೇಖ ಉತ್ತಮವಾಗಿ ಪಂದ್ಯಾವಳಿಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಯೂನಿಕ್ ಅಸೋಸಿಯೇಟ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಅಸ್ಲಂ ನೆರೆಗಲ್ ಬೆಳ್ಳಿ ಪದಕ ಹಾಗೂ ನಗದು ಬಹುಮಾನ ವಿತರಿಸಿದರು. ಪಂದ್ಯಾವಳಿಗಳ ಆಯೋಜಕರಾದ ಸರ್ಫರಾಜ್ ಶೇಖರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಎಂ.ಸಿ. ಶೇಖ ವಹಿಸಿದ್ದರು. ತೈಯಬ್ ಕುನ್ನಿಬಾವಿ ವಂದಿಸಿದರು.

ಶ್ರೀ ಸೋಮೇಶ್ವರ ಲಕ್ಷದೀಪೋತ್ಸವಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದ ಕಾಡಸಿದ್ದೇಶ್ವರ ಮಹಾಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಇಲ್ಲಿನ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಲಕ್ಷ ದೀಪೋತ್ಸವಕ್ಕೆ ಮಹಾರಾಷ್ಟ್ರ  ಕೊಲ್ಲಾಪುರದ ಶ್ರೀ ಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಕನ್ನೇರಿ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ದೇವಸ್ಥಾನದ ಪ್ರಾಂಗಣದಲ್ಲಿ ಪಟಾಕಿ ಸಿಡಿಸುತ್ತಿದ್ದಂತೆಯೇ ಭಕ್ತರು ಏಕ ಕಾಲಕ್ಕೆ ಮೊದಲೇ ಸಿದ್ಧಪಡಿಸಿದ್ದ ಲಕ್ಷದೀಪ ಸ್ತಂಭಕ್ಕೆ ದೀಪ ಬೆಳಗಿಸಿದರು. ಈ ವೇಳೆ ದೇಗುಲ, ದೇಗುಲದ ಪ್ರಾಂಗಣ, ಸುತ್ತಲಿನ ಬೀದಿಗಳು, ರಥಬೀದಿಗಳಲ್ಲಿ ದೀಪ ಪ್ರಜ್ವಲನೆಯಿಂದ ಹೊಂಬೆಳಕು ಮೂಡಿತ್ತು.

ಲಕ್ಷದೀಪೋತ್ಸವ ಸೇವಾಕಾರ್ಯದಲ್ಲಿ ಶಾಲಾ-ಕಾಲೇಜುಗಳ ಶಿಕ್ಷಕ ಬಳಗ, ವಿದ್ಯಾರ್ಥಿಗಳು, ಅಗಡಿ ಇಂಜಿನಿಯರಿಂಗ್, ಬಿಸಿಎನ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಹಿಳೆಯರು, ಮಕ್ಕಳು, ಬೀಗರು, ಬಿಜ್ಜರು ಹೊಸ ಬಟ್ಟೆ ಧರಿಸಿ ದೀಪಸ್ತಂಭಕ್ಕೆ ಶೃದ್ಧಾ-ಭಕ್ತಿಯಿಂದ ಎಣ್ಣೆ ಹಾಕಿ ದೀಪ ಬೆಳಗಿದರು. ಸಂಜೆ 7 ಗಂಟೆಯಿಂದ ಇಡೀ ರಾತ್ರಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳು ದೀಪದ ಬೆಳಕಿನಲ್ಲಿ ಪ್ರಜ್ವಲಿಸಿದವು.

ಉರ್ದು ಭಾಷೆಯ ವಿಶಾಲತೆ ಮತ್ತು ಮಧುರವಾದ ನುಡಿ ಎಲ್ಲರನ್ನೂ ಆಕರ್ಷಿಸುತ್ತದೆ: ಜನಾಬ ಶಾಕೀರ ಸನದಿ

0

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಇಲ್ಲಿನ ಹುಬ್ಬಳ್ಳಿಯ ಬ್ಲಿಸ್ ಹೊಟೇಲ್‌ನಲ್ಲಿ ಕರ್ನಾಟಕ ಉರ್ದು ಅಕಾಡೆಮಿ ಬೆಂಗಳೂರು ವತಿಯಿಂದ `ಉರ್ದು ಕಲ್ ಆಜ್ ಔರ್ ಕಲ್’ ಉರ್ದು ಎನ್.ಜಿ.ಓ.ಗಳ ಸಮಾವೇಶವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಇದರಲ್ಲಿ ಉತ್ತರ ಕರ್ನಾಟಕದ ಐದು ಜಿಲ್ಲೆಗಳ ಎನ್.ಜಿ.ಓ. ಸದಸ್ಯರು, ಉರ್ದು ಕವಿಗಳು, ಸಾಹಿತಿಗಳು ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಮಾತನಾಡಿ, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಘೋಷವಾಕ್ಯವಾದ `ಇನ್‌ಕ್ಲಾಬ್ ಜಿಂದಾಬಾದ’ ಉರ್ದು ಭಾಷೆಯ ಕೊಡುಗೆಯಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾಬ ಶಾಕೀರ ಸನದಿ ಮಾತನಾಡಿ, ಉರ್ದು ಭಾಷೆಯ ವಿಶಾಲತೆ ಮತ್ತು ಮಧುರವಾದ ನುಡಿ ಎಲ್ಲರನ್ನೂ ಆಕರ್ಷಿಸುತ್ತದೆ. ಈ ಭಾಷೆಯ ಸಮೃದ್ಧವಾದ ಸಾಹಿತ್ಯ ಮತ್ತು ಕಾವ್ಯ ಸಂಪದ್‌ ಗೀತೆ, ಗಜಲ್ ಇಂದಿಗೂ ಸಹಜನಪ್ರಿಯವಾಗಿವೆ ಎಂದು ಹೇಳಿದರು.

ಉರ್ದು ಅಕಾಡೆಮಿಯ ರಜಿಸ್ಟಾರ್ ಜನಾಬ ಡಾ. ಮಆಜುದ್ದೀನಖಾನ್ ಮಾತನಾಡಿ, ಉರ್ದು ಭಾಷೆಯ ಮಾಧ್ಯಮದಿಂದ ಕನ್ನಡ ನಾಡಿನಲ್ಲಿ ಪರಸ್ಪರ ಸಹೋದರತೆ ಮತ್ತು ಸಾಮರಸ್ಯವನ್ನು ಬೆಳೆಸಬಹುದು, ಒಂದಾಗಿ ಬಾಳಬಹುದು. ಉರ್ದು ಭಾಷೆ ಯಾವುದೇ ಒಂದು ಕೋಮಿಗೆ ಸೀಮಿತವಾದ ಭಾಷೆ ಅಲ್ಲ ಎಂದರು.

ಸಮಾವೇಶದಲ್ಲಿ ಪಾಲ್ಗೊಂಡ ಗದುಗಿನ ಹಿರಿಯ ಉರ್ದು ಕವಿ ಜನಾಬ ಖದೀರ ಅಹ್ಮದ ಖದೀರ, ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷರಾದ ಮೌಲಾನ್ ಮಹಮ್ಮದಅಲಿ ಖಾಜಿ ಮಾತನಾಡಿದರು.  ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯ ಜನಾಬ್ ಅನೀಸ್ ಸಿದ್ದಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಂತ್ರಜ್ಞಾನ ವಲಯಕ್ಕೆ 52%ರಷ್ಟು ಉದ್ಯೋಗಿಗಳನ್ನು ಕರ್ನಾಟಕವೇ ಪೂರೈಕೆ ಮಾಡುತ್ತದೆ: ಡಿ.ಕೆ.ಶಿವಕುಮಾರ್

0

ಬೆಂಗಳೂರು: ತಂತ್ರಜ್ಞಾನ ವಲಯಕ್ಕೆ 52%ರಷ್ಟು ಉದ್ಯೋಗಿಗಳನ್ನು ಕರ್ನಾಟಕವೇ ಪೂರೈಕೆ ಮಾಡುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 27ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್ 2024ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯಂತ್ರೋಪಕರಣಗಳ ತಯಾರಿಕೆಯಲ್ಲಿಯೂ ಕರ್ನಾಟಕ ಮುಂದಿದ್ದು,

ಸುಮಾರು 85ಕ್ಕೂ ಹೆಚ್ಚು ಫ್ಯಾಬ್ಲೆಸ್ ಚಿಪ್ ವಿನ್ಯಾಸ ಘಟಕಗಳು ನಮ್ಮ ರಾಜ್ಯದಲ್ಲಿವೆ. ಸೆಮಿಕಂಡಕ್ಟರ್ ತಯಾರಿಕೆಗೆ ಕರ್ನಾಟಕವೇ ಆಧಾರ. ದೇಶದ ಜೈವಿಕ ತಂತ್ರಜ್ಞಾನ ವಲಯಕ್ಕೆ 52%ರಷ್ಟು ಉದ್ಯೋಗಿಗಳನ್ನು ಕರ್ನಾಟಕವೇ ಪೂರೈಕೆ ಮಾಡುತ್ತದೆ ಎಂದು ಹೇಳಿದರು.

ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ನಮ್ಮ ನಗರ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ.

ಹಲವಾರು ಶಿಕ್ಷಣತಜ್ಞರು ಹೆಸರಾಂತ ಎಂಜಿನಿಯರಿಂಗ್ ಕಾಲೇಜುಗಳು, ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಿದ ಕಾರಣಕ್ಕೆ ಇಂದು ಬೆಂಗಳೂರು ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಬೆಂಗಳೂರು ಬೆಳವಣಿಗೆಗೆ ನೆಹರು ಅವರು ಹಾಗೂ ಅನೇಕರ ದೂರದೃಷ್ಟಿಯ ಕೊಡುಗೆಯಿದೆ ಎಂದು ಹೇಳಿದರು.

ಅಧಿವೇಶನಕ್ಕೂ ಮೊದಲು ಬೆಳಗಾವಿಯಲ್ಲಿ ವಕ್ಫ್ ವಿಚಾರವಾಗಿ ಬೃಹತ್ ಸಮಾವೇಶ: ಅಶ್ವಥ್‌ ನಾರಾಯಣ್

0

ಬೆಂಗಳೂರು: ಅಧಿವೇಶನಕ್ಕೂ ಮೊದಲು ಬೆಳಗಾವಿಯಲ್ಲಿ ವಕ್ಫ್ ವಿಚಾರವಾಗಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್‌ ನಾರಾಯಣ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಧಿವೇಶನಕ್ಕೂ ಮೊದಲು ಬೆಳಗಾವಿಯಲ್ಲಿ ವಕ್ಫ್ ವಿಚಾರವಾಗಿ ಬೃಹತ್ ಸಮಾವೇಶ ಏರ್ಪಡಿಸಲಾಗುವುದು. ಅಧಿಕಾರ ದುರ್ಬಳಕೆ ಕೈಬಿಡುವಂತೆ ಕಾಂಗ್ರೆಸ್ ಸರ್ಕಾರ ಮತ್ತು ವಕ್ಫ್ ಮಂಡಳಿಗೆ ಸ್ಪಷ್ಟ ಸಂದೇಶ ನೀಡಲಿದ್ದೇವೆ ಎಂದು ಪ್ರಕಟಿಸಿದರು.

ಅಹವಾಲು, ಮಾಹಿತಿ ಸಂಗ್ರಹಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ರೈತರು, ವಕೀಲರು ಸೇರಿ ಪ್ರಮುಖರುಳ್ಳ 5 ಜನರ ತಂಡ ರಚಿಸಿದ್ದೇವೆ ಎಂದರು. ಇನ್ನೂ ಕಾಂಗ್ರೆಸ್ ಶಾಸಕರೊಬ್ಬರು ಅನುದಾನ ಸಿಗದೇ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರ ದಿವಾಳಿಯಾಗಿದೆ. ವೇತನ ನೀಡಲು ದುಡ್ಡಿಲ್ಲ, ರಾಜು ಕಾಗೆಯವರು ಅನುದಾನ ಸಿಗದ ಬಗ್ಗೆ ತಿಳಿಸಿ ಆತ್ಮಹತ್ಯೆಯ ಮಾತನಾಡಿದ್ದಾರೆ. ಗವಿಯಪ್ಪ, ರಾಯರೆಡ್ಡಿ, ಬಿ.ಆರ್ ಪಾಟೀಲ್ ಮತ್ತಿತರರು ಮಾತನಾಡಿದ್ದಾರೆ ಎಂದು ವಿವರಿಸಿದರು.

 

 

ಕೃಷಿ ಪಂಪ್‌ʼಸೆಟ್‌ʼಗಳಿಗೆ ಉಚಿತ ವಿದ್ಯುತ್: ರೈತರಿಗೆ ಸಿಹಿಸುದ್ದಿ ಕೊಟ್ಟ ಸಚಿವ ಕೆ.ಜೆ.ಜಾರ್ಜ್

0

ಚಾಮರಾಜನಗರ:  ರೈತರ ಕೃಷಿ ಪಂಪ್‌ʼಸೆಟ್‌ʼಗಳಿಗೆ ಉಚಿತ ವಿದ್ಯುತ್ ಕೊಡ್ತೀವಿ ಎಂದು ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್ ಅನ್ನದಾತರಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿರುವ ವರೆಗೂ, ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರ ಖಾಸಗೀಕರಣ ಆಗಲ್ಲ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡ್ತೀವಿ ಎಂದು ತಿಳಿಸಿದರು.

ಬೇರೆ ಕಡೆ ವಿದ್ಯುತ್ ಖರೀದಿಸಿ ರೈತರಿಗೆ ಉಚಿತ ವಿದ್ಯುತ್ ನೀಡ್ತಿದ್ದೇವೆ. ವಿದ್ಯುತ್ ಕಳ್ಳತನ ತಪ್ಪಿಸಲು ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲ. ಯಾರೋ ವಿದ್ಯುತ್ ಕಳ್ಳತನ ಮಾಡಿ ರೈತರ ಮೇಲೆ ಹಾಕುತ್ತಿದ್ದರು. ಆಧಾರ್ ಲಿಂಕ್‌ನಿಂದ ಅದೆಲ್ಲಾ ತಪ್ಪಲಿದೆ. ನಮ್ಮ ಇಲಾಖೆಗೂ ಲೆಕ್ಕ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

ವಕ್ಫ್ ವಿವಾದ: ವಿರೋಧ ಪಕ್ಷದ ತಾಕತ್ತು ಏನು ಅನ್ನೋದನ್ನು ತೋರಿಸಿದ್ದೇವೆ – ಆರ್ ಅಶೋಕ್‌

0

ಚಿಕ್ಕಬಳ್ಳಾಪುರ: ಸ್ಮಶಾನದಲ್ಲಿ ಇರಬೇಕಾದ ಪಿಶಾಚಿಗಳು ಊರೊಳಗೆ ಬಂದಿವೆ, ಅವುಗಳನ್ನೆಲ್ಲ ವಾಪಸ್ಸು ಸ್ಮಶಾನಕ್ಕೆ ಓಡಿಸಬೇಕಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್‌ ಹೇಳಿದ್ದಾರೆ. ಜಿಲ್ಲೆಯ ಕಂದವಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು,

ಬಿಜೆಪಿ ಎಲ್ಲೆಲ್ಲಿ ಹೋರಾಟ ನಡೆಸುತ್ತಿದೆಯೋ ಅಂಥ ಸ್ಥಳಗಳಲ್ಲಿ ವಕ್ಫ್ ಬೋರ್ಡ್ ನೀಡಿದ ನೋಟೀಸ್​ಗಳನ್ನು ವಾಪಸ್ಸು ಪಡೆಯಲಾಗುತ್ತಿದೆ, ವಿರೋಧ ಪಕ್ಷದ ತಾಕತ್ತು ಏನು ಅನ್ನೋದನ್ನು ತೋರಿಸಿದ್ದೇವೆ, ಸ್ಮಶಾನದಲ್ಲಿ ಇರಬೇಕಾದ ಪಿಶಾಚಿಗಳು ಊರೊಳಗೆ ಬಂದಿವೆ, ಅವುಗಳನ್ನೆಲ್ಲ ವಾಪಸ್ಸು ಸ್ಮಶಾನಕ್ಕೆ ಓಡಿಸಬೇಕಾಗಿದೆ ಎಂದು ಹೇಳಿದರು.

ಇನ್ನೂ ವಕ್ಫ್ ಬೋರ್ಡ್ ದುರಹಂಕಾರ ಇಲ್ಲಿ ನಿಚ್ಚಳವಾಗಿ ಕಾಣುತ್ತಿದೆ, ಸರಕಾರೀ ಶಾಲೆಯ ಅವರಣದಲ್ಲಿ ಅವರು ಮಸೀದಿ ಕಟ್ಟುತ್ತಾರೆ ಮತ್ತು ಸರ್ಕಾರ ಮೌನವಾಗಿರುತ್ತದೆ ಅಂದರೆ ಸಿದ್ದರಾಮಯ್ಯ ಸರ್ಕಾರದ ಪಾಪದ ಕೊಡ ತುಂಬಿದೆ, ರೈತರ ಪಹಣಿಗಳಲ್ಲಿ ವಕ್ಫ್ ಅಂತ ನಮೂದಾಗಿರುವುದನ್ನು ಅಳಿಸುವವರೆಗೆ ಮತ್ತು 1994ರ ಗೆಜೆಟ್ ನೋಟಿಫಿಕೇಶನ್ ರದ್ದು ಮಾಡದ ಹೊರತು ಬಿಜೆಪಿ ವಿಶ್ರಮಿಸುವುದಿಲ್ಲ, ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.

ಅನುದಾನ ಹಂಚಿಕೆಯಲ್ಲಿ ವಿಜಯನಗರಕ್ಕೆ ಅನ್ಯಾಯ: ತಮ್ಮದೇ ಸರ್ಕಾರದ ವಿರುದ್ಧ MLA ಗವಿಯಪ್ಪ ಅಸಮಾಧಾನ

0

ಬಳ್ಳಾರಿ: ನಮ್ಮದೇ ಸರ್ಕಾರ ಇದ್ದರೂ ಅನುದಾನ ಬಿಡುಗಡೆ  ಆಗುತ್ತಿಲ್ಲ ಎಂದು ಶಾಸಕ ಎಚ್ ಆರ್ ಗವಿಯಪ್ಪತಮ್ಮದೇ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಕಡೆ ಅನುದಾನ ಸಿಗುತ್ತಿದೆ. ಆದರೆ ನನ್ನ ಕ್ಷೇತ್ರಕ್ಕೆ KKRDB ಸೇರಿದಂತೆ ಯಾವ ಅನುದಾನವೂ ಸರಿಯಾಗಿ ಸಿಗುತ್ತಿಲ್ಲ.

ಕ್ಷೇತ್ರದಲ್ಲಿ ಯಾವುದೇ ಕಾಮಗಾರಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಎಲ್ಲವನ್ನು ತಿಳಿದುಕೊಳ್ಳುವುದ್ದಕ್ಕೆ ಒಂದೂವರೆ ವರ್ಷ ಕಳೆದು ಬಿಟ್ಟೆ. ಇನ್ನು ಎಷ್ಟು ವರ್ಷ ಹೀಗೆ ಅನುದಾನವಿಲ್ಲದೇ ಇರಲು ಸಾಧ್ಯ ಎಂದು ಹೇಳುವ ಮೂಲಕ ಸರ್ಕಾರಕ್ಕೆ ವಿರುದ್ಧ ಕಿಡಿಕಾರಿದ್ದಾರೆ.

ಈ ಹಿಂದೆ ಇದ್ದ ಬಿಜೆಪಿ ಶಾಸಕ ಆನಂದ್ ಸಿಂಗ್ ತಂದ ಅನುದಾನದಲ್ಲಿಯೇ ಒಂದೂವರೆ ವರ್ಷ ಕೆಲಸ ನಡೆದಿದೆ. ಈಗಲಾದರೂ ನಮಗೆ ಕೆಲಸ ಮಾಡಲು ಅನುದಾನ ಬೇಕಲ್ವಾ? ಕೆಕೆಆರ್‌ಡಿಬಿಯಿಂದ ನೂತನ ವಿಜಯನಗರ ಜಿಲ್ಲೆಗೆ ಒಟ್ಟು 348 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.‌

ವಿಜಯನಗರ ಜಿಲ್ಲೆಯ ಬೇರೆ ಬೇರೆ ಕ್ಷೇತ್ರಗಳಿಗೆ 60, 70 ಕೋಟಿ ರೂ. ಅನುದಾನ ನೀಡಿದ್ದಾರೆ. ವಿಜಯನಗರ ಕ್ಷೇತ್ರಕ್ಕೆ ಕೇವಲ 22 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ.ಅದರಲ್ಲಿ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ 12 ಕೋಟಿ ರೂ. ಅನುದಾನ ನೀಡಿದ್ದೇನೆ.‌ ಉಳಿದ 8 ಕೋಟಿ ರೂ. ಅನುದಾನದಲ್ಲಿ ಕ್ಷೇತ್ರದಲ್ಲಿ ಏನು ಕೆಲಸ ಮಾಡಲು ಸಾಧ್ಯವಾಗುತ್ತೆ ಎಂದು ಪ್ರಶ್ನಿಸಿದ್ದಾರೆ.

error: Content is protected !!