Home Blog Page 214

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ RCB ಪಂದ್ಯಗಳಿಗೆ ಅವಕಾಶ: ಬುಧವಾರ ಅಧಿಕಾರಿಗಳ ಸಭೆ ಬಳಿಕ ತೀರ್ಮಾನ – ಸಚಿವ ಜಿ.ಪರಮೇಶ್ವರ್

0

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಪಿಎಲ್ ಪಂದ್ಯಗಳಿಗೆ ಅವಕಾಶ ನೀಡುವ ಕುರಿತು ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಅದರ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಐಪಿಎಲ್ ಕ್ರಿಕೆಟ್ ಪಂದ್ಯಗಳ ಆಯೋಜನೆ ಸಂಬಂಧ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್‌ (ಕೆಎಸ್ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ನಿಯೋಗವು ಬುಧವಾರ ಸದಾಶಿವನಗರದಲ್ಲಿರುವ ಗೃಹ ಸಚಿವರ ನಿವಾಸದಲ್ಲಿ ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.

ಸಭೆಯ ಬಳಿಕ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, “ಪಂದ್ಯಗಳಿಗೆ ಅವಕಾಶ ನೀಡುವ ಬಗ್ಗೆ ಬುಧವಾರ ಅಧಿಕಾರಿಗಳ ಸಭೆ ಕರೆದಿದ್ದೇವೆ. ಅಲ್ಲಿ ಈ ವಿಷಯವನ್ನು ವಿವರವಾಗಿ ಚರ್ಚಿಸಲಾಗುತ್ತದೆ. ನಮ್ಮ ಶಿಫಾರಸುಗಳನ್ನು ಎಷ್ಟರಮಟ್ಟಿಗೆ ಪಾಲಿಸಲಾಗಿದೆ ಎಂಬುದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

ಬೆಂಗಳೂರಿನಲ್ಲಿ ಪಂದ್ಯ ನಡೆಯಬೇಕೆಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಕಾಲ್ತುಳಿತದಂತಹ ಘಟನೆಗಳು ಮರುಕಳಿಸಬಾರದು. ಎಲ್ಲ ಅಂಶಗಳನ್ನು ಗಮನದಲ್ಲಿಟ್ಟು ನಿರ್ಧಾರ ಮಾಡುತ್ತೇವೆ” ಎಂದು ಹೇಳಿದರು.

ಇದೇ ವೇಳೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ. ಕುನ್ಹಾ ಸಮಿತಿಯ ಶಿಫಾರಸುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸರ್ಕಾರದ ಮಟ್ಟದಲ್ಲಿಯೂ ಜಿಬಿಎ ಹಾಗೂ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಆ ಸಮಿತಿಯೂ ಹಲವು ಶಿಫಾರಸುಗಳನ್ನು ನೀಡಿದೆ ಎಂದರು.

“ಐಪಿಎಲ್ ಪಂದ್ಯಗಳು ಸಮೀಪಿಸುತ್ತಿದ್ದು, ಸರ್ಕಾರದ ಕಡೆಯಿಂದ ಅನುಮತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಭೆ ಕರೆದಿದ್ದೇನೆ. ಸರ್ಕಾರದ ಹಂತದಲ್ಲಿ ಏನು ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಿಸಿದವರಿಗೆ ಯಾವ ರೀತಿಯ ಸೂಚನೆ ನೀಡಬೇಕು ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆಗೂ ಚರ್ಚಿಸಲಾಗುವುದು” ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.

ಮದುವೆ ಮಾತುಕತೆ ನಡುವೆಯೇ ಕೆನಡಾದಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕನ್ನಡಿಗ

0

ನೆಲಮಂಗಲ: ಕೆನಡಾದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನ್ನಡಿಗ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ನೆಲಮಂಗಲ ತ್ಯಾಮಗೊಂಡ್ಲು ಗ್ರಾಮದ ನಿವಾಸಿ ಚಂದನ್ ಕುಮಾರ್ (37) ಅವರನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅಡ್ಡಗಟ್ಟಿ ಹತ್ತಾರು ಬಾರಿ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ವಾಸವಾಗಿದ್ದ ಚಂದನ್, ಎಲ್‌ಎನ್‌ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ವಿದೇಶದಲ್ಲೂ ಸಾರುತ್ತಿದ್ದ ಚಂದನ್, ಸ್ನೇಹವಂತ ಮತ್ತು ಶಾಂತ ಸ್ವಭಾವದ ವ್ಯಕ್ತಿ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ತಿಳಿಸಿದ್ದಾರೆ.

ಘಟನೆ ಕುರಿತು ನಿನ್ನೆ ಟೊರೊಂಟೋ ಪೊಲೀಸರು ಕುಟುಂಬಕ್ಕೆ ಮಾಹಿತಿ ನೀಡಿದ್ದು, ಹತ್ಯೆಯ ಹಿನ್ನೆಲೆ ಇನ್ನೂ ನಿಗೂಢವಾಗಿಯೇ ಉಳಿದಿದೆ. ಯಾವುದೇ ವೈಷಮ್ಯ, ಬೆದರಿಕೆ ಅಥವಾ ಅಪರಾಧ ಹಿನ್ನೆಲೆ ಬಗ್ಗೆ ಕುಟುಂಬಕ್ಕೆ ಮಾಹಿತಿ ಇಲ್ಲ.

ಮೃತನ ತಂದೆ ನಂದ ಕುಮಾರ್ ಅವರ ನೋವಿನ ಮಾತುಗಳು ಹೃದಯವನ್ನೇ ಹಿಂಡುತ್ತವೆ.
“ಮಗನಿಗೆ ಹುಡುಗಿಯನ್ನು ನೋಡುತ್ತಿದ್ದೆವು. ಭಾರತಕ್ಕೆ ಬರ್ತೀನಿ ಅಂತ ಹೇಳಿದ್ದ. ಈಗ ಈ ದುಃಖ… ಮಗನ ಶವವನ್ನಾದರೂ ನಮ್ಮ ಮನೆಗೆ ತಂದು ಕೊಡಿ” ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕುಟುಂಬಸ್ಥರು ಯಾವುದೇ ಮಾಹಿತಿ ಇಲ್ಲದೆ ಪರದಾಡುತ್ತಿದ್ದು, ಕೆನಡಾದಿಂದ ಮೃತದೇಹವನ್ನು ಭಾರತಕ್ಕೆ ತರಲು ಬೇಕಾದ ಪ್ರಕ್ರಿಯೆಗಳ ಬಗ್ಗೆ ಗೊಂದಲದಲ್ಲಿದ್ದಾರೆ. ವಿದೇಶದಲ್ಲಿ ಕನ್ನಡಿಗರ ಸುರಕ್ಷತೆ ಪ್ರಶ್ನೆಯಾಗಿ ಮತ್ತೆ ಎದ್ದಿರುವ ಈ ಪ್ರಕರಣದ ಬಗ್ಗೆ ಕೆನಡಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಕರ್ನಾಟಕ ಕಂಡ ಅತ್ಯಂತ ಪುಕ್ಕಲ, ಹೇಡಿ ಮುಖ್ಯಮಂತ್ರಿ: ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

0

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಕಂಡಂತಹ ಅತ್ಯಂತ ಪುಕ್ಕಲ ಮತ್ತು ಹೇಡಿ ಮುಖ್ಯಮಂತ್ರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಹರಿಹರದಲ್ಲಿರುವ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರವಾಗಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜನಪ್ರತಿನಿಧಿಯಾಗಿ ಜನರ ಪರ ಧ್ವನಿ ಎತ್ತಿದ್ದಾರೆ ಎಂದು ಹೇಳಿದರು. ಆದರೆ, ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ಈ ಸರ್ಕಾರ, ಪ್ರತಿಭಟನೆಗೆ ಆಗಮಿಸಿದವರನ್ನೇ ಬಂಧಿಸುವ ಮೂಲಕ ತನ್ನ ನೈಜ ಸ್ವರೂಪವನ್ನು ತೋರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದೊಳಗೆ ಎರಡು ಬಾರಿ ಮೆಟ್ರೋ ದರ ಏರಿಕೆ ಮಾಡಿರುವುದು ಜನರ ತಾಳ್ಮೆಯ ಕಟ್ಟೆಯನ್ನು ಒಡೆದಿದೆ. ಅದನ್ನು ತಡೆಯಲು ಸಂಸದ ತೇಜಸ್ವಿ ಸೂರ್ಯ ಹೋರಾಟ ನಡೆಸಿದ್ದು, ದರ ಏರಿಕೆಯನ್ನು ತಡೆ ಹಿಡಿದಿದ್ದಾರೆ ಎಂದು ಹೇಳಿದರು.

ಮೆಟ್ರೋ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದೆ. ಆದರೆ, ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಮೆಟ್ರೋಗೆ ಅಗತ್ಯ ಅನುದಾನ ನೀಡದೇ, ಜನರ ಮೇಲೆ ದರ ಏರಿಕೆಯ ಹೊರೆ ಹಾಕಿದೆ ಎಂದು ಆರೋಪಿಸಿದರು. ಈ ಅನ್ಯಾಯದ ವಿರುದ್ಧ ಹೋರಾಟ ಮಾಡಿ ತೇಜಸ್ವಿ ಸೂರ್ಯ ಜನರಿಗೆ ನ್ಯಾಯ ಕೊಡಿಸಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ತಂತ್ರಜ್ಞಾನಕ್ಕೆ ಗುಲಾಮರಾಗಬೇಡಿ, ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ

0

ನವದೆಹಲಿ: ವಿದ್ಯಾರ್ಥಿಗಳು ತಂತ್ರಜ್ಞಾನ ತಮ್ಮನ್ನು ಗುಲಾಮರನ್ನಾಗಿಸಲು ಬಿಡಬಾರದು. ಬದಲಿಗೆ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ತಂತ್ರಜ್ಞಾನವನ್ನು ಉಪಯೋಗಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಎರಡನೇ ಸಂಚಿಕೆಯಲ್ಲಿ ಇಂದು ಕೊಯಮತ್ತೂರು, ರಾಯ್ಪುರ, ಗುವಾಹಟಿ ಹಾಗೂ ಗುಜರಾತ್‌ನ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತಂತ್ರಜ್ಞಾನ ಬಳಕೆಯ ಕುರಿತು ಮಹತ್ವದ ಸಲಹೆಗಳನ್ನು ನೀಡಿದರು.

ಇಂದಿನ ದಿನಗಳಲ್ಲಿ ಕೆಲವು ಮಕ್ಕಳನ್ನು ಮೊಬೈಲ್ ಫೋನ್‌ಗಳು ಆಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಪ್ರಧಾನಿ, “ಕೆಲವು ಮಕ್ಕಳು ಊಟ ಮಾಡುವಾಗಲೂ ಮೊಬೈಲ್ ಅಥವಾ ಟಿವಿ ಬೇಕು ಎನ್ನುತ್ತಾರೆ. ಇದರರ್ಥ ಅವರು ತಂತ್ರಜ್ಞಾನಕ್ಕೆ ಗುಲಾಮರಾಗುತ್ತಿದ್ದಾರೆ. ತಂತ್ರಜ್ಞಾನ ನಿಮ್ಮನ್ನು ನಿಯಂತ್ರಿಸದಂತೆ ನೋಡಿಕೊಳ್ಳುವ ದೃಢ ಸಂಕಲ್ಪವನ್ನು ಮಾಡಬೇಕು” ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ಭಯಪಡುವ ಅಗತ್ಯವಿಲ್ಲ. ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಮೋದಿ ತಿಳಿಸಿದರು.

ಪರೀಕ್ಷಾ ಸಿದ್ಧತೆಯ ಕುರಿತು ಮಾತನಾಡಿದ ಪ್ರಧಾನಿ, ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. “ಚೆನ್ನಾಗಿ ತಯಾರಿ ಮಾಡಿಕೊಂಡಿದ್ದರೆ ಪರೀಕ್ಷೆಯ ಬಗ್ಗೆ ಭಯ ಅಥವಾ ಚಿಂತೆ ಇರುವುದಿಲ್ಲ” ಎಂದು ಹೇಳಿದರು.

ಅಲ್ಲದೆ, ಪರೀಕ್ಷೆಯ ಸಮಯದಲ್ಲಿ ನಿದ್ದೆಗೆಟ್ಟು ಓದುವುದಕ್ಕಿಂತ ಉತ್ತಮ ನಿದ್ರೆ ಮಾಡುವುದು ಬಹಳ ಮುಖ್ಯ. “ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆ ಮುಂದಿನ ದಿನ ಉಲ್ಲಾಸವಾಗಿರಲು ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆ ನೀಡಿದರು.

Gold Rate: ಭಾರಿ ಏರಿಕೆ ಕಂಡ ಚಿನ್ನದ ಬೆಲೆ: 2240 ರೂ ಹೆಚ್ಚಳ, ಬೆಳ್ಳಿ ಬೆಲೆಯೂ 3 ಲಕ್ಷಕ್ಕೇರಿಕೆ!

0

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರಿ ಏರಿಳಿತ ಮುಂದುವರಿದಿದ್ದು, ಫೆಬ್ರವರಿ ತಿಂಗಳ ಎರಡನೇ ವಾರದ ವಹಿವಾಟು ಚಿನ್ನದ ಬೆಲೆ ಏರಿಕೆಯೊಂದಿಗೆ ಆರಂಭವಾಗಿದೆ. ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದೆ. ಜೊತೆಗೆ ಬೆಳ್ಳಿ ದರವೂ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ ₹224 ಏರಿಕೆಯಾಗಿದ್ದು, 10 ಗ್ರಾಂಗೆ ಒಟ್ಟಾರೆ ₹2,240 ಹೆಚ್ಚಳವಾಗಿದೆ. ಇದರೊಂದಿಗೆ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹15,884 ಆಗಿದ್ದು, 10 ಗ್ರಾಂ ಚಿನ್ನದ ಬೆಲೆ ₹1,58,840ಕ್ಕೆ ಏರಿಕೆಯಾಗಿದೆ.

ಇನ್ನು 22 ಕ್ಯಾರೆಟ್ ಚಿನ್ನದ ದರವೂ ಹೆಚ್ಚಳ ಕಂಡಿದ್ದು, 1 ಗ್ರಾಂಗೆ ₹205 ಹಾಗೂ 10 ಗ್ರಾಂಗೆ ₹2,050 ಏರಿಕೆಯಾಗಿದೆ. ಇದರೊಂದಿಗೆ 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ ₹1,45,600 ಆಗಿದೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಇಂದು 24 ಕ್ಯಾರೆಟ್ ಶುದ್ಧ ಚಿನ್ನದ 1 ಗ್ರಾಂ ಬೆಲೆ ₹15,884 ಇದ್ದು, 10 ಗ್ರಾಂಗೆ ₹1,58,840 ದರ ನಿಗದಿಯಾಗಿದೆ. ಈ ದರಗಳಲ್ಲಿ ಜಿಎಸ್‌ಟಿ ಸೇರಿಲ್ಲ. ಹೀಗಾಗಿ ಚಿನ್ನಾಭರಣ ಮಳಿಗೆಗಳಲ್ಲಿ ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ.

ಇತ್ತ ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ ದಾಖಲಾಗಿದ್ದು, ಇಂದು ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹15 ಏರಿಕೆಯಾಗಿದೆ. ಇದರೊಂದಿಗೆ ಬೆಳ್ಳಿ ಗ್ರಾಂ ಬೆಲೆ ₹300 ಆಗಿದೆ. ಕೆಜಿ ಬೆಲೆಯಲ್ಲಿ ₹15,000 ಹೆಚ್ಚಳವಾಗಿದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ ₹3,00,000ಕ್ಕೆ ತಲುಪಿದೆ.

ವಿವಾಹಿತನೊಂದಿಗೆ ಪ್ರೀತಿ: ಮದುವೆ ನಿಶ್ಚಯವಾಗಿದ್ದ ಮಗಳೊಂದಿಗೆ ತಾಯಿ ಆತ್ಮಹತ್ಯೆ.!

0

ಮಂಡ್ಯ: ವಿವಾಹಿತನೊಂದಿಗೆ ಯುವತಿಯ ಪ್ರೀತಿ  ಹಿನ್ನೆಲೆ ತಾಯಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶಂಕುತಲಾದೇವಿ (46) ಹಾಗೂ ಮಗಳು ಪ್ರಿಯಾಂಕ (19) ಎಂದು ಗುರುತಿಸಲಾಗಿದೆ.

ದಳವಾಯಿ ಕೋಡಿಹಳ್ಳಿ ಗ್ರಾಮದ ಮುತ್ತುರಾಜ್ (34) ಎಂಬ ವಿವಾಹಿತನೊಂದಿಗೆ ಪ್ರಿಯಾಂಕ ಪ್ರೇಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಮುತ್ತುರಾಜ್‌ಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಮುತ್ತುರಾಜ್ ಪ್ರತಿದಿನ ಪ್ರಿಯಾಂಕ ಮನೆಗೆ ಬರುತ್ತಿದ್ದರೂ, ಆರಂಭದಲ್ಲಿ ಇದನ್ನು ಮನೆಯವರು ಸಾಮಾನ್ಯವೆಂದುಕೊಂಡಿದ್ದರು.

ಆದರೆ ಇತ್ತೀಚೆಗೆ ಇವರಿಬ್ಬರ ನಡುವೆ ಪ್ರೇಮ ಸಂಬಂಧವಿರುವುದು ಪೋಷಕರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ತಂದೆ-ತಾಯಿ ಇಬ್ಬರಿಗೂ ಬುದ್ಧಿ ಹೇಳಿ, ಪ್ರಿಯಾಂಕನಿಗೆ ಮದುವೆ ಸಂಬಂಧ ಹುಡುಕಲಾಗಿತ್ತು. ಆದರೂ ಸಹ ಮುತ್ತುರಾಜ್ ನಿರಂತರವಾಗಿ ಪ್ರಿಯಾಂಕಳನ್ನು ಪೀಡಿಸುತ್ತಿದ್ದನು ಎಂದು ಆರೋಪಿಸಲಾಗಿದೆ.

ಇದರಿಂದಾಗಿ ಮರ್ಯಾದೆಗೆ ಅಂಜಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಮೃತ ಶಂಕುತಲಾದೇವಿಯ ಪತಿ ಮಹೇಶ್ ಹಲಗೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹಲಗೂರು ಠಾಣೆ ಪೊಲೀಸರು ಘಟನೆ ಕುರಿತು ತನಿಖೆ ಮುಂದುವರಿಸಿದ್ದಾರೆ.

ಶಸ್ತ್ರಾಸ್ತ್ರ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬನ್ನಿ: ಮಹಿಳಾ ಮಾವೋವಾದಿಗಳಿಗೆ ಅಮಿತ್ ಶಾ ಮನವಿ

0

ಛತ್ತೀಸ್‌ಗಢ: ಮಾವೋವಾದಿ ಸಂಘಟನೆಗಳಲ್ಲಿ ತೊಡಗಿರುವ ಮಹಿಳೆಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮನವಿ ಮಾಡಿದ್ದಾರೆ. ಛತ್ತೀಸ್‌ಗಢದ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಅಭಿವೃದ್ಧಿ ಮರುಸ್ಥಾಪನೆ ಅಗತ್ಯವಿದೆ ಎಂದು ಹೇಳಿದ್ದಾರೆ.

ರಾಯ್‌ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಕೇಂದ್ರ ಮತ್ತು ಛತ್ತೀಸ್‌ಗಢ ಸರ್ಕಾರ ಯಾರ ಮೇಲೂ ಒಂದೇ ಒಂದು ಗುಂಡು ಹಾರಿಸಲು ಬಯಸುವುದಿಲ್ಲ. ಶರಣಾಗುವ ಮಾವೋವಾದಿಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವ ಮಾವೋವಾದಿಗಳಿಗೆ ರತ್ನಗಂಬಳಿ ಹಾಸಲಾಗುತ್ತದೆ. ಅವರ ಪುನರ್ವಸತಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಸರ್ಕಾರ ಒದಗಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಕೈಯಲ್ಲಿ ಬಂದೂಕು ಹಿಡಿದು ನಿಂತಿರುವ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ದಯವಿಟ್ಟು ಹಿಂಸಾಚಾರದ ದಾರಿಯನ್ನು ತ್ಯಜಿಸಿ ಈಗಲೇ ಶರಣಾಗಿ. ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಿಮ್ಮಿಗಾಗಿ ಉತ್ತಮ, ಗೌರವಾನ್ವಿತ ಜೀವನ ಕಾಯುತ್ತಿದೆ” ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.

ಶರಣಾದ ಮಹಿಳಾ ಮಾವೋವಾದಿಗಳಿಗೆ ಶಿಕ್ಷಣ, ಭದ್ರತೆ ಮತ್ತು ಗೌರವಯುತ ಜೀವನದೊಂದಿಗೆ ಸಮಾಜದಲ್ಲಿ ಪುನರ್ವಸತಿ ಕಲ್ಪಿಸಲು ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದರು. ಮಾವೋವಾದಿ ಸಿದ್ಧಾಂತಗಳು ಕಳೆದ ನಾಲ್ಕೂವರೆ ದಶಕಗಳಿಂದ ಅಭಿವೃದ್ಧಿಯ ಹಾದಿಗೆ ಅಡ್ಡಿಯಾಗಿವೆ.

ಬಸ್ತಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮಾವೋವಾದಿಗಳ ಭೀತಿಯಿಂದ ಅಭಿವೃದ್ಧಿಯಿಂದ ಹಿಂದುಳಿದಿವೆ. ಶಾಲೆಗಳನ್ನು ಸುಟ್ಟು ಹಾಕುವ ಮೂಲಕ ಹೊಸ ಪೀಳಿಗೆಯನ್ನು ಅನಕ್ಷರಸ್ಥರನ್ನಾಗಿ ಮಾಡಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದರು.

ನವದೆಹಲಿಯ 9 ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌: ಭದ್ರತಾ ಪರಿಶೀಲನೆ, ವಿದ್ಯಾರ್ಥಿಗಳ ಸ್ಥಳಾಂತರ

0

ನವದೆಹಲಿ: ಶೈಕ್ಷಣಿಕ ವರ್ಷಾಂತ್ಯದ ಹಿನ್ನೆಲೆ ಶಾಲೆಗಳಲ್ಲಿ ಅಂತಿಮ ಪರೀಕ್ಷೆಗಳ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲೇ, ರಾಷ್ಟ್ರ ರಾಜಧಾನಿ ನವದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು ಆತಂಕ ಸೃಷ್ಟಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ದೆಹಲಿಯ ಒಟ್ಟು 9 ಶಾಲೆಗಳಿಗೆ ಬೆಳಗ್ಗೆ 8.30ರಿಂದ 9 ಗಂಟೆಯೊಳಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಮಾಹಿತಿ ದೊರಕಿದ ತಕ್ಷಣವೇ ಸಂಬಂಧಿಸಿದ ಶಾಲೆಗಳ ಆವರಣದಲ್ಲಿ ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸರು ಭದ್ರತಾ ಪರಿಶೀಲನೆ ಆರಂಭಿಸಿದ್ದಾರೆ.

ದಕ್ಷಿಣ ದೆಹಲಿಯ ಲೋಧಿ ರಸ್ತೆಯಲ್ಲಿರುವ ವಾಯುಪಡೆ ಶಾಲೆ, ಕೆ.ಆರ್. ಮಂಗಲಂ ಶಾಲೆ ಹಾಗೂ ಸಾದಿಕ್ ನಗರದಲ್ಲಿನ ದಿ ಇಂಡಿಯನ್ ಶಾಲೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳು ಬೆದರಿಕೆಯ ಗುರಿಯಾಗಿವೆ.

ಇದಲ್ಲದೆ, ದೆಹಲಿ ಕ್ಯಾಂಟ್‌ನ ಲೊರೆಟೊ ಕಾನ್ವೆಂಟ್ ಶಾಲೆ, ಶ್ರೀನಿವಾಸನ್‌ಪುರಿಯ ಕೇಂಬ್ರಿಡ್ಜ್ ಶಾಲೆ, ರೋಹಿಣಿಯ ವೆಂಕಟೇಶ್ವರ ಶಾಲೆ, ನ್ಯೂ ಫ್ರೆಂಡ್ಸ್ ಕಾಲೊನಿಯ ಕೇಂಬ್ರಿಡ್ಜ್ ಶಾಲೆ, ರೋಹಿಣಿಯ ಸಿಎಂ ಶಾಲೆ, ಐಎನ್‌ಎಯ ಡಿಟಿಎ ಶಾಲೆ ಹಾಗೂ ರೋಹಿಣಿಯ ಬಾಲ ಭಾರತಿ ಶಾಲೆಗಳಿಗೆ ಕೂಡಾ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ.

ಭದ್ರತಾ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ಶಾಲಾ ಕಟ್ಟಡಗಳಿಂದ ಹೊರಗೆ ಸ್ಥಳಾಂತರಿಸಲಾಗಿದೆ. ಭದ್ರತಾ ಸಿಬ್ಬಂದಿ ತರಗತಿ ಕೊಠಡಿಗಳು, ಕಾರಿಡಾರ್‌ಗಳು, ಆಟದ ಮೈದಾನಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೂಕ್ಷ್ಮ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಬೆದರಿಕೆ ಇಮೇಲ್‌ಗಳ ಮೂಲವನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ತಾಯಿ–ದೊಡ್ಡಮ್ಮನ ಖಾಸಗಿ ಚಿತ್ರಗಳನ್ನು ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸಿದ ಆರೋಪ: ಮಗಳ ವಿರುದ್ಧ FIR

0

ಬೆಂಗಳೂರು: ಹೆತ್ತ ತಾಯಿ ಹಾಗೂ ದೊಡ್ಡಮ್ಮನ ಖಾಸಗಿ ಭಾವಚಿತ್ರಗಳನ್ನು ರಹಸ್ಯವಾಗಿ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸಿದ್ದ ಆರೋಪದಡಿ ಮಗಳ ವಿರುದ್ಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರದ ನಿವಾಸಿಯಾದ 49 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ, ಮಗಳು ಹಾಗೂ ಆಕೆಯ ಪ್ರಿಯಕರ ವರುಣ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರುದಾರ ಮಹಿಳೆಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಹಿರಿಯ ಮಗಳು ಖಾಸಗಿ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಾಳೆ. ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಕಳೆದ ವರ್ಷ ಮಗಳಿಗೆ ಮೊಬೈಲ್ ನೀಡಲಾಗಿತ್ತು.

ಸುಮಾರು ಒಂದು ತಿಂಗಳ ಹಿಂದೆ ಮಗಳು ಅಪರಿಚಿತ ಯುವಕನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿ ರುವುದನ್ನು ಗಮನಿಸಿದ ತಾಯಿ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಮಗಳಿಗೆ ತಿಳುವಳಿಕೆ ಹೇಳಿ ಮೊಬೈಲ್ ಪರಿಶೀಲಿಸಿದಾಗ, ತನ್ನ ಖಾಸಗಿ ಭಾವಚಿತ್ರಗಳು ಫೋನ್‌ನಲ್ಲಿ ಇರುವುದನ್ನು ಕಂಡು ತಾಯಿ ಆಘಾತಗೊಂಡಿದ್ದಾರೆ.

ಅಲ್ಲದೆ, ತನ್ನ ಸಹೋದರಿಯ ಬೆತ್ತಲೆ ಚಿತ್ರಗಳನ್ನೂ ಮಗಳು ಯುವಕನಿಗೆ ಕಳುಹಿಸಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಗಳ ಮೊಬೈಲ್‌ನಲ್ಲಿ ಯುವಕ ತಾಯಿಯ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಸಂದೇಶ ರವಾನಿಸಿದ್ದೂ ಪತ್ತೆಯಾಗಿದೆ. ಬಳಿಕ ಮಗಳಿಗೆ ಬುದ್ಧಿ ಹೇಳಿ ಮೊಬೈಲ್‌ನಲ್ಲಿದ್ದ ಚಿತ್ರಗಳನ್ನು ಡಿಲೀಟ್ ಮಾಡಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆದರೆ ಕೆಲ ದಿನಗಳ ಬಳಿಕ ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಜಗಳ ಮಾಡಿಕೊಂಡು ಮಗಳು ಮನೆ ಬಿಟ್ಟು ಹೋಗಿದ್ದಾಳೆ. ತನ್ನ ಖಾಸಗಿ ಫೋಟೋಗಳನ್ನು ಯುವಕ ಬೇರೆಯವರಿಗೆ ಕಳುಹಿಸಿರುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ತಾಯಿ, ಮಗಳು ಹಾಗೂ ಆಕೆಯ ಪ್ರಿಯಕರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸ್ಪ್ರೇ ಸಿಂಪಡಿಸಿ ಮಾಂಗಲ್ಯ ಸರ ಕಸಿದು ಕಳ್ಳರು ಎಸ್ಕೇಪ್: ಮಹಿಳೆ ಸಾವು

0

ಬೆಂಗಳೂರು: ನೆಲಮಂಗಲ ಬಳಿಯ ಹುಸ್ಕೂರು ಗ್ರಾಮದಲ್ಲಿ ಸ್ಪ್ರೇ ಸಿಂಪಡಿಸಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ಕಸಿದುಕೊಂಡು ಕಳ್ಳರು ಪರಾರಿಯಾಗಿದ್ದು, ಸ್ಪ್ರೇ ಪರಿಣಾಮ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ.

ಜ್ಯೋತಿ (45) ಮೃತ ಮಹಿಳೆ. ಬೆಳಿಗ್ಗೆ ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಅಪರಿಚಿತ ಕಳ್ಳರು ಆಕೆಯ ಮೇಲೆ ಸ್ಪ್ರೇ ಸಿಂಪಡಿಸಿ, ಕೊರಳಲ್ಲಿದ್ದ 70 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಸ್ಪ್ರೇ ಪರಿಣಾಮವಾಗಿ ಜ್ಯೋತಿ ಕುಸಿದು ಬಿದ್ದಿದ್ದಾರೆ.

ತಕ್ಷಣ ಅವರನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

error: Content is protected !!