Home Blog Page 224

ಬೆಂಗಳೂರಿನಲ್ಲಿ ಯುವತಿ ವಿಚಾರಕ್ಕೆ ಗಲಾಟೆ: ಓರ್ವನಿಗೆ ಚಾಕು ಇರಿತ!

0

ಬೆಂಗಳೂರು: ಯುವತಿ ವಿಚಾರಕ್ಕೆ ಆರಂಭವಾದ ಗಲಾಟೆಯಲ್ಲಿ ಆಟೋ ಚಾಲಕನಿಗೆ ಚಾಕು ಇರಿದಿರುವ ಘಟನೆ ಫೆಬ್ರವರಿ 1ರಂದು ಕೆ.ಆರ್ ಪುರಂ ವ್ಯಾಪ್ತಿಯ ದೇವಸಂದ್ರ ಪ್ರದೇಶದಲ್ಲಿ ನಡೆದಿದೆ. ಆಟೋ ಚಾಲಕ ರೋಷನ್ ಎಂಬಾತನ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ರೋಷನ್ನನ್ನು ಕೆ.ಆರ್ ಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರೆದಿದೆ.

ಆರೋಪಿ ಮಾಮು ಹಾಗೂ ಹಲ್ಲೆಗೊಳಗಾದ ರೋಷನ್ ಇಬ್ಬರೂ ನೇಪಾಳ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ಹಿಂದಿನಿಂದಲೂ ವೈಮನಸ್ಸು ಇತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ 1ರಂದು ರಾತ್ರಿ ದೇವಸಂದ್ರದಲ್ಲಿ ಮಾತನಾಡಲು ಇಬ್ಬರೂ ಭೇಟಿಯಾಗಿದ್ದರು. ಈ ವೇಳೆ ಕೆಲ ಕ್ಷಣಗಳ ಬಳಿಕ ಮಾಮುನ ಸ್ನೇಹಿತರಾದ ವಾಸಿಂ, ಯಾಸೀಫ್ ಮತ್ತು ಖಲೀಂ ಸ್ಥಳಕ್ಕೆ ಬಂದಿದ್ದು, ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.

ನೋಡನೋಡುತ್ತಿದ್ದಂತೆ ಮಾಮು ಗ್ಯಾಂಗ್ ಚಾಕುವಿನಿಂದ ರೋಷನ್ ಕುತ್ತಿಗೆಗೆ ಇರಿದಿದ್ದಾನೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆ.ಆರ್ ಪುರಂ ಠಾಣೆಯಲ್ಲಿ ಹತ್ಯೆ ಯತ್ನ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ದುನಿಯಾ ವಿಜಯ್‌ ನಟನೆಯ ‘ಲ್ಯಾಂಡ್​​​ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸಿಎಂ ಸೂಚನೆ

ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಸಿನಿಮಾ ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆಯ ವಿರುದ್ಧದ ಗಟ್ಟಿಯಾದ ಧ್ವನಿಯಾಗಿ ಮೂಡಿಬಂದಿದೆ. ಜನವರಿ 23ರಂದು ಬಿಡುಗಡೆಯಾದ ಈ ಚಿತ್ರಕ್ಕೆ ವಿಮರ್ಶಕರಿಂದ ಮಾತ್ರವಲ್ಲದೆ ಪ್ರೇಕ್ಷಕರಿಂದಲೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಯಶಸ್ಸಿನ ನಡುವೆ ಇದೀಗ ಚಿತ್ರಕ್ಕೆ ಸರ್ಕಾರದ ಮಟ್ಟದಲ್ಲೂ ಬೆಂಬಲ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಲ್ಯಾಂಡ್ಲಾರ್ಡ್’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಸೂಚನೆ ನೀಡಿರುವುದು ಚಿತ್ರತಂಡಕ್ಕೆ ದೊಡ್ಡ ಉತ್ತೇಜನ ನೀಡಿದೆ. ಇದರಿಂದ ಟಿಕೆಟ್ ದರ ಕಡಿಮೆಯಾಗಲಿದ್ದು, ಹೆಚ್ಚಿನ ಜನರು ಚಿತ್ರ ವೀಕ್ಷಿಸಲು ಅವಕಾಶ ಸಿಗಲಿದೆ.

70ರ ದಶಕದ ಹಿನ್ನೆಲೆಯ ಕಥೆಯನ್ನೊಳಗೊಂಡ ‘ಲ್ಯಾಂಡ್ಲಾರ್ಡ್’ನಲ್ಲಿ ದುನಿಯಾ ವಿಜಯ್ ರಾಚಯ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಂಗವ್ವ ಮತ್ತು ಮಗಳು ಭಾಗ್ಯಾಳ ಜೊತೆ ಸರಳ ಜೀವನ ನಡೆಸುವ ರಾಚಯ್ಯ, ಜಮೀನ್ದಾರಿ ವ್ಯವಸ್ಥೆಯ ಶೋಷಣೆಯನ್ನು ಎದುರಿಸಬೇಕಾಗುತ್ತದೆ. ಸಣ್ಣ ಧಣಿ ಪಾತ್ರದಲ್ಲಿ ನಟಿಸಿರುವ ರಾಜ್ ಬಿ. ಶೆಟ್ಟಿ ಅವರ ಕ್ರೂರತೆ ಪ್ರೇಕ್ಷಕರನ್ನು ಬೆಚ್ಚಿಬೀಳಿಸಿದೆ.

ಅಸಮಾನತೆಯನ್ನು ಪ್ರಶ್ನಿಸಿದ ಯುವಕನ ಹತ್ಯೆ, ಅದರಿಂದ ಸಿಡಿದೇಳುವ ರಾಚಯ್ಯನ ಹೋರಾಟ ಸಿನಿಮಾ ತುಂಬಾ ತೀವ್ರತೆಯನ್ನು ತರುತ್ತದೆ. ರಚಿತಾ ರಾಮ್ ಮತ್ತು ರಿತನ್ಯಾ ರಾಮ್ ಪಾತ್ರಗಳು ಕಥೆಗೆ ಭಾವನಾತ್ಮಕ ಆಳವನ್ನು ನೀಡಿವೆ. ವಿಶೇಷವಾಗಿ ಈ ಚಿತ್ರದ ಮೂಲಕ ದುನಿಯಾ ವಿಜಯ್ ಅವರ ಮಗಳು ರಿತನ್ಯಾ ರಾಮ್ ಬಣ್ಣದ ಲೋಕಕ್ಕೆ ಕಾಲಿಟ್ಟಿರುವುದು ಗಮನ ಸೆಳೆದಿದೆ.

ಬುಕ್ ಮೈ ಶೋನಲ್ಲಿ ಸುಮಾರು 3,000ಕ್ಕೂ ಹೆಚ್ಚು ಜನರು ರೇಟಿಂಗ್ ನೀಡಿದ್ದು, 9.4/10 ಅಂಕಗಳನ್ನು ಸಿನಿಮಾ ಪಡೆದುಕೊಂಡಿದೆ. ಇದು ಚಿತ್ರದ ಜನಪ್ರಿಯತೆಯ ಸ್ಪಷ್ಟ ಸೂಚನೆ. ವಿಮರ್ಶಕರ ಮೆಚ್ಚುಗೆ, ಪ್ರೇಕ್ಷಕರ ಬೆಂಬಲ ಮತ್ತು ಸರ್ಕಾರದ ತೆರಿಗೆ ವಿನಾಯಿತಿ – ಈ ಮೂರು ಅಂಶಗಳು ‘ಲ್ಯಾಂಡ್ಲಾರ್ಡ್’ ಸಿನಿಮಾಗೆ ಭಾರಿ ಬಲ ನೀಡಿವೆ.

Exclusive: ಕಪ್ಪತಗುಡ್ಡದ ಗುಹೆಗಳಲ್ಲಿ ಫಳಫಳ ಹೊಳೆಯುವ ಚಿನ್ನ –ಕ್ಯಾಮೆರಾದಲ್ಲಿ ಸೆರೆಗೊಂಡ ಭಯಾನಕ ಸತ್ಯ!

0

ಗದಗ: ಜಿಲ್ಲೆಯಲ್ಲಿ ಶಾಕಿಂಗ್ ಎಕ್ಸ್‌ಕ್ಲೂಸಿವ್ ವರದಿ ಹೊರಬಿದ್ದಿದೆ. ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಹಾಗೂ ಮಹಾಲಿಂಗಪುರ ಗ್ರಾಮದ ನಡುವಿನ ಕಪ್ಪತಗುಡ್ಡದ ಒಳಗಿನ ಗುಹೆಗಳಲ್ಲಿ ಮತ್ತಷ್ಟು ಚಿನ್ನದ ನಿಕ್ಷೇಪಗಳು ಕ್ಯಾಮೆರಾದಲ್ಲಿ ಸೆರೆಗೊಂಡಿವೆ.

ಭಯಂಕರ ನಿಕ್ಷೇಪ ಹೊಂದಿರುವ ಈ ಗುಹೆಗಳೊಳಗೆ ರಿಯಾಲಿಟಿ ಚೆಕ್ ನಡೆಸಲಾಗಿದ್ದು, ಪ್ರಾಣದ ಹಂಗು ತೊರೆದು ರಿಯಲ್ ಚಿನ್ನದ ಹುಡುಕಾಟ ಮಾಡಲಾಗಿದೆ. ಗುಹೆಯೊಳಗೆ ಪ್ರವೇಶಿಸಿದಂತೆ ನಾಲ್ಕೈದು ದಿಕ್ಕುಗಳಲ್ಲಿ ಕವಲೊಡೆಯುವ ಸುರಂಗಗಳಿದ್ದು, ಅಲ್ಲಲ್ಲಿ ಕಲ್ಲಿನ ಮಧ್ಯೆ ಫಳಫಳ ಹೊಳೆಯುವ ಚಿನ್ನದ ನಿಕ್ಷೇಪಗಳು ಸ್ಪಷ್ಟವಾಗಿ ಕಾಣುತ್ತವೆ.

ಸ್ಥಳೀಯ ಮೂಲಗಳ ಮಾಹಿತಿ ಪ್ರಕಾರ, ಭ್ರಿಟಿಷರ ಕಾಲದಲ್ಲೇ ಈ ಪ್ರದೇಶದಲ್ಲಿ ಚಿನ್ನ ತೆಗೆದಿರುವ ದಾಖಲೆಗಳಿವೆ. ಚಿನ್ನ ಇರುವುದನ್ನು ಗುರುತಿಸಿದ ಫಿರಂಗಿಗಳು ಎರಡು–ಮೂರು ಕಿಲೋಮೀಟರ್ ಒಳಗೆ ಗುಹೆಗಳನ್ನು ನಿರ್ಮಿಸಿ ಚಿನ್ನ ದೋಚಿದರಂತೆ.

ಇಂದಿಗೂ ಕಪ್ಪತಗುಡ್ಡದ ಮೇಲೆ ಹಲವು ಕಂಪನಿಗಳ ಕಣ್ಣು ಬಿದ್ದಿದೆ. ಆದರೆ ಪರಿಸರವಾದಿಗಳ ತೀವ್ರ ವಿರೋಧದಿಂದಾಗಿ ಈ ಚಿನ್ನದ ಗಣಿಗಳು ರಕ್ಷಣೆಗೊಳಗಾಗಿವೆ. ಸದ್ಯ ಗುಹೆಗಳೊಳಗೆ ಪ್ರವೇಶಿಸಿ ಚಿನ್ನ ವೀಕ್ಷಿಸುವುದಕ್ಕೂ ಸಂಪೂರ್ಣ ನಿಷೇಧ ವಿಧಿಸಲಾಗಿದೆ.

ಕ್ಯಾಮೆರಾದಲ್ಲಿ ಸೆರೆಗೊಂಡ ಈ ದೃಶ್ಯಗಳು, ಗದಗ ಜಿಲ್ಲೆಯೊಳಗೆ ಅಡಗಿರುವ ಅಮೂಲ್ಯ ಸಂಪತ್ತಿನ ಮತ್ತೊಂದು ಭಯಾನಕ ಸತ್ಯವನ್ನು ಬಿಚ್ಚಿಟ್ಟಿವೆ.

ಸುಂಕಗಳ ವಿಚಾರದಲ್ಲಿ ತಾಳ್ಮೆ ತೋರಿದ್ದೇ ಫಲ ನೀಡಿದೆ: ಪ್ರಧಾನಿ ಮೋದಿ

0

ನವದೆಹಲಿ: ಸುಂಕಗಳನ್ನು ಕುರಿತು ಟೀಕೆಗಳು ಬಂದಾಗಲೂ ಸರ್ಕಾರ ತಾಳ್ಮೆ ಕಾಪಾಡಿಕೊಂಡಿತ್ತು. ಆ ತಾಳ್ಮೆಯ ಫಲವಾಗಿ ಇಂದು ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಅಂತಿಮಗೊಂಡ ಹಿನ್ನೆಲೆಯಲ್ಲಿ, ಇಂದು ಸಂಸತ್‌ ಅಧಿವೇಶನ ಆರಂಭಕ್ಕೂ ಮುನ್ನ ಎನ್‌ಡಿಎ ಸಂಸದರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಸುಂಕಗಳ ಕುರಿತಾಗಿ ನಡೆದ ಮಾತುಕತೆಗಳ ಸಂದರ್ಭದಲ್ಲಿ ಸರ್ಕಾರದ ನಿಲುವಿಗೆ ಟೀಕೆಗಳು ಬಂದಿದ್ದರೂ, ಅವುಗಳೇ ಈಗ ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಅವರು ಹೇಳಿದರು.

ವ್ಯಾಪಾರ ಒಪ್ಪಂದವು ದೇಶಕ್ಕೆ ಅನುಕೂಲಕರ ಆರ್ಥಿಕ ವಾತಾವರಣವನ್ನು ನಿರ್ಮಿಸಿದ್ದು, ಇದು ಭಾರತದ ಬೆಳವಣಿಗೆಗೆ ಹೊಸ ಅವಕಾಶಗಳನ್ನು ತೆರೆದಿದೆ ಎಂದು ಪ್ರಧಾನಿ ಶ್ಲಾಘಿಸಿದರು.

“ವಿಶ್ವದ ಆಲೋಚನೆ ಈಗ ಬದಲಾಗುತ್ತಿದೆ. ಅದರ ಪಥವು ಭಾರತದ ಕಡೆಗೆ ಹೆಚ್ಚು ವಾಲುತ್ತಿದೆ ಎಂದು ನಾನು ಹಲವು ಜಾಗತಿಕ ವೇದಿಕಗಳಲ್ಲಿ ಹೇಳಿದ್ದೇನೆ. ಇಂದು ಅನೇಕ ದೇಶಗಳಲ್ಲಿ ವ್ಯಾಪಾರ ಉದ್ವಿಗ್ನತೆಗಳು ಇರುವ ನಡುವೆಯೂ ಭಾರತವು ಅದರಿಂದ ಪ್ರಯೋಜನ ಪಡೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದರು.

‘ಧುರಂಧರ್ 2’ ಟೀಸರ್ ನೋಡಿದವರಿಗೆ ಭಾರೀ ನಿರಾಸೆ: ಮೂರು ತಿಂಗಳಲ್ಲಿ ‘ಧುರಂಧರ್ 2’ ರಿಲೀಸ್

ರಣವೀರ್ ಸಿಂಗ್ ಹಾಗೂ ಆದಿತ್ಯ ಧಾರ್ ಕಾಂಬಿನೇಷನ್‌ನ ‘ಧುರಂಧರ್’ ಸಿನಿಮಾ 2024ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈ ಯಶಸ್ಸಿನ ಬೆನ್ನಲ್ಲೇ ಕೇವಲ ಮೂರೇ ತಿಂಗಳ ಅಂತರದಲ್ಲಿ ‘ಧುರಂಧರ್ 2’ ಬರಲು ಸಜ್ಜಾಗಿದೆ ಎಂಬುದು ಸಿನಿಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿತ್ತು.

ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ನಡೆಯುತ್ತಿದೆ. ಈ ನಡುವೆ ಬಿಡುಗಡೆಯಾದ ಟೀಸರ್ ಚಿತ್ರದ ರಿಲೀಸ್ ದಿನಾಂಕವನ್ನು ಖಚಿತಪಡಿಸಿದೆ. ಆದರೆ ಟೀಸರ್‌ನಲ್ಲಿ ಹೊಸದೇನೂ ಇಲ್ಲದ ಕಾರಣ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮೊದಲ ಭಾಗದಲ್ಲಿ ರಣವೀರ್ ಸಿಂಗ್ ಅವರು ಹಮ್ಜಾ ಅಲಿ ಮಜಾರಿ ಎಂಬ ಸ್ಪೈ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜಸ್ಕಿರತ್ ಸಿಂಗ್ ರಂಗಿ ಹೇಗೆ ಹಮ್ಜಾ ಅಲಿ ಮಜಾರಿಯಾಗಿ ರೂಪಾಂತರಗೊಳ್ಳುತ್ತಾರೆ ಎಂಬ ಜರ್ನಿಯನ್ನೇ ‘ಧುರಂಧರ್ 2’ ಸಿನಿಮಾದಲ್ಲಿ ವಿವರಿಸಲಾಗುತ್ತದೆ ಎನ್ನಲಾಗಿದೆ.

ಟೀಸರ್‌ನಲ್ಲಿ ಮೊದಲ ಭಾಗದ ಕ್ಲೈಮ್ಯಾಕ್ಸ್ ದೃಶ್ಯಗಳನ್ನೇ ಬಳಸಿರುವುದು ನಿರೀಕ್ಷೆಗಳಿಗೆ ಧಕ್ಕೆ ತಂದಿದೆ. ವಿಶೇಷವಾಗಿ ಕನ್ನಡ ಟೀಸರ್ ಕೊನೆಯಲ್ಲಿ ಬಳಸಿರುವ ಡೈಲಾಗ್ ಕಥೆಗೆ ಹೊಂದಿಕೆಯಾಗುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಆದರೆ ಚಿತ್ರತಂಡ ಬಿಡುಗಡೆಗೆ ಕೆಲ ದಿನಗಳ ಮೊದಲು ‘ಧುರಂಧರ್ 2’ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅಲ್ಲಿ ಸಾಕಷ್ಟು ಹೊಸ ದೃಶ್ಯಗಳು ಮತ್ತು ಅಚ್ಚರಿಗಳು ಇರಲಿವೆ ಎಂಬ ನಿರೀಕ್ಷೆ ಮೂಡಿದೆ. ಟೀಸರ್ ನಿರಾಸೆ ತಂದರೂ ಟ್ರೇಲರ್ ಮೂಲಕ ಅಭಿಮಾನಿಗಳ ನಂಬಿಕೆ ಮರಳಿ ಪಡೆಯಲು ಸಾಧ್ಯವಾಗುತ್ತದೆಯೇ ಎಂಬುದೇ ಈಗ ಎಲ್ಲರ ಪ್ರಶ್ನೆ.

ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವ ಪ್ರಶ್ನೆ: ಕೇಂದ್ರ ಹಾಗೂ 12 ರಾಜ್ಯಗಳಿಗೆ ಸುಪ್ರೀಂ ನೋಟಿಸ್

0

ನವದೆಹಲಿ: ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸಿ ಭಾರತದ ರಾಷ್ಟ್ರೀಯ ಚರ್ಚುಗಳ ಮಂಡಳಿ (ಎನ್‌ಸಿಐಸಿ) ಸಲ್ಲಿಸಿರುವ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಕರ್ನಾಟಕ, ರಾಜಸ್ಥಾನ, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ಕೇಳಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದ್ದು, ಮುಂದಿನ ನಾಲ್ಕು ವಾರಗಳೊಳಗೆ ಕೇಂದ್ರ ಹಾಗೂ ಸಂಬಂಧಿತ ರಾಜ್ಯ ಸರ್ಕಾರಗಳು ತಮ್ಮ ಉತ್ತರ ಸಲ್ಲಿಸುವಂತೆ ಆದೇಶಿಸಿದೆ.

ಅಲ್ಲದೆ, ಈ ಹೊಸ ಅರ್ಜಿಗಳನ್ನು ಈಗಾಗಲೇ ಬಾಕಿ ಇರುವ ಅರ್ಜಿಗಳೊಂದಿಗೆ ಸೇರಿಸಿ, ಮೂವರು ನ್ಯಾಯಾಧೀಶರ ಪೀಠ ಒಟ್ಟಿಗೆ ವಿಚಾರಣೆ ನಡೆಸಲಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.ಎನ್‌ಸಿಐಸಿ ತನ್ನ ಅರ್ಜಿಯಲ್ಲಿ, ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನುಷ್ಠಾನಗೊಳಿಸುವುದಕ್ಕೆ ತಡೆ ನೀಡುವಂತೆ ಕೋರಿದೆ.

ಈ ಕಾನೂನುಗಳು ಸಂವಿಧಾನದ 21 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸುತ್ತಿದ್ದು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಇಚ್ಛೆಯ ಧರ್ಮವನ್ನು ಅನುಸರಿಸುವ ಹಕ್ಕನ್ನು ಹತ್ತಿಕ್ಕುತ್ತವೆ ಎಂದು ಆರೋಪಿಸಲಾಗಿದೆ.ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದೇ ರೀತಿಯ ಅರ್ಜಿಗಳು ಈಗಾಗಲೇ ಬಾಕಿ ಇದ್ದು, ಕೇಂದ್ರದ ಉತ್ತರ ಸಿದ್ಧವಾಗಿದೆ.

ಶೀಘ್ರದಲ್ಲೇ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಜೊತೆಗೆ ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಗುಜರಾತ್, ಜಾರ್ಖಂಡ್, ಉತ್ತರಾಖಂಡ, ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳಿಗೆ ನೋಟಿಸ್ ನೀಡಿದೆ.

ಈ ಮೊದಲು ಕಳೆದ ಸೆಪ್ಟೆಂಬರ್ 16ರಂದು, ಮತಾಂತರ ವಿರೋಧಿ ಕಾನೂನುಗಳ ಜಾರಿಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯ ವೇಳೆ, ರಾಜ್ಯ ಸರ್ಕಾರಗಳ ನಿಲುವು ತಿಳಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು.

ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ಶೇ.100 ತೆರಿಗೆ ವಿನಾಯಿತಿ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರ ಶೇ.100ರಷ್ಟು ಮನರಂಜನಾ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದೆ. ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆಯಂತಹ ಗಂಭೀರ ವಿಷಯವಸ್ತುವನ್ನು ಒಳಗೊಂಡಿರುವ ಹಿನ್ನೆಲೆದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ ಇಲಾಖೆಗೆ ಈ ಕುರಿತು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ನಟ ದುನಿಯಾ ವಿಜಯ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ‘ಲ್ಯಾಂಡ್ ಲಾರ್ಡ್’ ಚಿತ್ರದ ಕಥಾಹಂದರ, ಉದ್ದೇಶ ಹಾಗೂ ಸಮಾಜಕ್ಕೆ ನೀಡುವ ಸಂದೇಶದ ಬಗ್ಗೆ ವಿವರಿಸಿದರು. ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೇ, ಗ್ರಾಮೀಣ ಪ್ರದೇಶದ ಫ್ಯೂಡಲ್ ವ್ಯವಸ್ಥೆ, ಜಾತಿ ಪದ್ಧತಿಯ ಕರಾಳ ಮುಖ ಹಾಗೂ ಶೋಷಿತರ ಪರವಾದ ಧ್ವನಿಯನ್ನು ಪ್ರತಿನಿಧಿಸುತ್ತದೆ ಎಂದು ವಿವರಿಸಿದರು.

ಚಿತ್ರದ ಆಶಯವನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದಲ್ಲಿ ಬೇರೂರಿರುವ ಅಸಮಾನತೆ ಮತ್ತು ಜಾತಿ ಶೋಷಣೆಯ ವಿರುದ್ಧ ಧ್ವನಿ ಎತ್ತುವ ಸಿನಿಮಾಗಳಿಗೆ ಸರ್ಕಾರದಿಂದ ಬೆಂಬಲ ಅಗತ್ಯವೆಂದು ಅಭಿಪ್ರಾಯಪಟ್ಟರು. ಇಂತಹ ಸಾಮಾಜಿಕ ಬದ್ಧತೆಯ ಚಿತ್ರಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಕರ್ತವ್ಯ ಎಂದೂ ಹೇಳಿದರು.

ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ..! ಸಿಸಿಟಿವಿ ವಿಡಿಯೋ ವೈರಲ್

0

ಬೆಂಗಳೂರು: ನಗರದ ಅಂಜನಾಪುರ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳಲ್ಲಿ ಭಾರಿ ಆತಂಕ ಮೂಡಿಸಿದೆ. ಅಂಜನಾಪುರ 7ನೇ ಬ್ಲಾಕ್ ರಸ್ತೆಯಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಚಿರತೆ ಓಡಾಡುತ್ತಿರುವ ದೃಶ್ಯ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪ್ರದೇಶದ ನಿವಾಸಿಗಳಲ್ಲಿ ಭೀತಿ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ಹೊರಗಡೆ ಸಂಚರಿಸುವುದಕ್ಕೂ ಜನರು ಹಿಂಜರಿಯುತ್ತಿದ್ದಾರೆ.

ತುರಹಳ್ಳಿ ಅರಣ್ಯ ಪ್ರದೇಶದ ಸಮೀಪದಲ್ಲೇ ಅಂಜನಾಪುರ ಇರುವುದರಿಂದ, ಅರಣ್ಯದಿಂದಲೇ ಚಿರತೆ ನುಗ್ಗಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಚಿರತೆ ಪತ್ತೆಗಾಗಿ ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಟಿ20 ಕ್ರಿಕೆಟ್ʼನಲ್ಲಿ ಐತಿಹಾಸಿಕ ದಾಖಲೆ: 4,500 ರನ್ ದಾಟಿದ ವಿಶ್ವದ ಮೊದಲ ಬ್ಯಾಟರ್ ಬಾಬರ್ ಆಝಂ

0

ಲಾಹೋರ್: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ ಇತಿಹಾಸ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 4,500 ರನ್‌ಗಳ ಗಡಿ ದಾಟಿದ ವಿಶ್ವದ ಮೊದಲ ಬ್ಯಾಟರ್ ಎಂಬ ಅಪೂರ್ವ ದಾಖಲೆಯನ್ನು ಬಾಬರ್ ತಮ್ಮದಾಗಿಸಿಕೊಂಡಿದ್ದಾರೆ.

ಲಾಹೋರ್‌ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬಾಬರ್ ಆಝಂ 36 ಎಸೆತಗಳಲ್ಲಿ ಅಜೇಯ 50 ರನ್‌ಗಳನ್ನ ಬಾರಿಸಿದರು. ಈ ಅರ್ಧಶತಕದೊಂದಿಗೆ ಅವರ ಒಟ್ಟು ಟಿ20 ಅಂತಾರಾಷ್ಟ್ರೀಯ ರನ್ ಸಂಖ್ಯೆ 4,505ಕ್ಕೆ ಏರಿಕೆಯಾಯಿತು.

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 48 ಬ್ಯಾಟರ್‌ಗಳು 2,000ಕ್ಕೂ ಅಧಿಕ ರನ್‌ಗಳನ್ನು ಕಲೆಹಾಕಿದ್ದಾರೆ. ಇವರಲ್ಲಿ 12 ಮಂದಿ 3,000ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಆದರೆ 4,000 ರನ್‌ಗಳ ಗಡಿದಾಟಿರುವುದು ಕೇವಲ ಮೂವರು ಮಾತ್ರವಾಗಿದ್ದು, ಇದೀಗ 4,500 ರನ್‌ಗಳನ್ನು ದಾಟಿರುವ ಏಕೈಕ ಬ್ಯಾಟರ್ ಆಗಿ ಬಾಬರ್ ಆಝಂ ಹೊರಹೊಮ್ಮಿದ್ದಾರೆ.

ಬಾಬರ್ ಹೊರತುಪಡಿಸಿ ಯಾವುದೇ ಬ್ಯಾಟರ್ ಕೂಡ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 4,250 ರನ್‌ಗಳ ಗಡಿ ದಾಟಿಲ್ಲ. ಈ ಪಟ್ಟಿಯಲ್ಲಿ ಭಾರತದ ಮಾಜಿ ಟಿ20 ನಾಯಕ ರೋಹಿತ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದು, ಅವರು 4,231 ರನ್‌ಗಳನ್ನು ಕಲೆಹಾಕಿದ್ದಾರೆ. ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 4,188 ರನ್‌ಗಳಿಸಿದ್ದಾರೆ.

ಪಾಕಿಸ್ತಾನ ಪರ ಇದುವರೆಗೆ 132 ಟಿ20 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ಬಾಬರ್ ಆಝಂ, 3 ಶತಕ ಹಾಗೂ 39 ಅರ್ಧಶತಕಗಳೊಂದಿಗೆ ಈ ದಾಖಲೆ ಸಾಧಿಸಿದ್ದಾರೆ. ಅವರ ನಿರಂತರ ಸಾಧನೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅವರನ್ನು ಅಗ್ರಸ್ಥಾನಕ್ಕೆ ಕರೆದೊಯ್ದಿದೆ.

ಜಮೀನು ಒತ್ತುವರಿ ವಿಚಾರಕ್ಕೆ ಗಲಾಟೆ: ತಮ್ಮನನ್ನೇ ಕೊಂದ ಅಣ್ಣ

0

ದಾವಣಗೆರೆ: ಜಿಲ್ಲೆಯ ಮಾಯಕೊಂಡದಲ್ಲಿ ಜಮೀನು ಒತ್ತುವರಿ ವಿವಾದ ಒಂದು ಕುಟುಂಬವನ್ನೇ ರಕ್ತಸಿಕ್ತಗೊಳಿಸಿದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಕೊನೆಗೆ ಸಹೋದರನ ಪ್ರಾಣ ಕಿತ್ತುಕೊಂಡಿದೆ.

ಕೊಲೆಯಾದವರು ಸಿ.ಕೆ. ನೀಲಪ್ಪ (62). ತಮ್ಮನ ಹತ್ಯೆ ನಡೆಸಿದ ಆರೋಪಿ ಅಣ್ಣ ಸಿ.ಕೆ. ಚಂದ್ರಪ್ಪ ಎಂದು ಪೊಲೀಸರು ತಿಳಿಸಿದ್ದಾರೆ. ಜಮೀನು ಒತ್ತುವರಿ ವಿಚಾರವಾಗಿ ಕೆಲ ದಿನಗಳಿಂದಲೂ ಇಬ್ಬರ ನಡುವೆ ಅಸಮಾಧಾನ ಇತ್ತು ಎನ್ನಲಾಗಿದೆ.

ಘಟನೆಯ ದಿನ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಾತಿನ ಚಕಮಕಿ ಘರ್ಷಣೆಗೆ ತಿರುಗಿದೆ. ಆಕ್ರೋಶದ ಪರಮಾವಧಿಯಲ್ಲಿ ಚಂದ್ರಪ್ಪ ತಮ್ಮ ನೀಲಪ್ಪನ ತಲೆ ಮೇಲೆ ಪ್ರಾಣಘಾತಕವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ನೀಲಪ್ಪ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾಯಕೊಂಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮೃತ ನೀಲಪ್ಪನ ಕುಟುಂಬಸ್ಥರು, ಈ ಹತ್ಯೆಯಲ್ಲಿ ಚಂದ್ರಪ್ಪನ ಕುಟುಂಬದ ಇತರ ಸದಸ್ಯರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಎಲ್ಲರನ್ನೂ ಆರೋಪಿಗಳನ್ನಾಗಿ ಸೇರಿಸುವಂತೆ ಅವರು ಪೊಲೀಸರ ಬಳಿ ಆಗ್ರಹಿಸಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!