Home Blog Page 229

ಬೆಂಗಳೂರಿನಲ್ಲಿ 18 ಕೋಟಿ ಚಿನ್ನಾಭರಣ ಕಳ್ಳತನ ಕೇಸ್: ನೇಪಾಳಿ ದಂಪತಿಗೆ ಬಲೆ ಬೀಸಿದ ಪೊಲೀಸರು!

0

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಮಾರತ್ ಹಳ್ಳಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಸ್ಪೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಈ ಕೃತ್ಯದ ಹಿಂದೆ ದೇಶದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿರುವ ನೇಪಾಳಿ ದಂಪತಿ ಕೈವಾಡವಿರುವುದು ಪತ್ತೆಯಾಗಿದೆ.

ಆರೋಪಿಗಳು ದಿನೇಶ್ ಹಾಗೂ ಕಮಲ ಎಂಬ ಹೆಸರಿನಲ್ಲಿ ಮನೆಕೆಲಸಕ್ಕೆ ಸೇರಿಕೊಂಡು ಕಳ್ಳತನ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದೇ ಮಾದರಿಯಲ್ಲಿ ಅವರು ಬೆಂಗಳೂರಿನಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

ಇದಲ್ಲದೆ, 2025ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲೂ ಈ ಜೋಡಿ ಕಳ್ಳತನ ನಡೆಸಿದ್ದ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಅಧಿಕಾರಿಯ ಮನೆಯಲ್ಲಿ 16 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿನ ಕಳ್ಳತನದ ಕೇವಲ ಎರಡು ತಿಂಗಳೊಳಗೆ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ನಡೆಸಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಪುಣೆಯ ಭಾವ್ಧಾನ್ ನಗರದ ವಿಂಡ್ಮಿಲ್ ಸೊಸೈಟಿಯಲ್ಲಿರುವ ರತ್ನಾದೀಪ್ ರಂಗನಾಥ್ ರಾವ್ ಅವರ ಮನೆಯಲ್ಲಿ ದಿನೇಶ್ ಹಾಗೂ ಸಲೀನಾ ಎಂಬ ಹೆಸರಿನಲ್ಲಿ ಮನೆಕೆಲಸಕ್ಕೆ ಸೇರಿದ್ದ ಆರೋಪಿಗಳು, ಸುಮಾರು ಆರು ತಿಂಗಳ ಬಳಿಕ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಮನೆಯವರು ಹೊರಗಿದ್ದ ಸಂದರ್ಭವನ್ನು ಬಳಸಿಕೊಂಡು ರೂಮಿನ ಲಾಕರ್ ಒಡೆದು ಚಿನ್ನಾಭರಣ ಕದ್ದಿದ್ದಾರೆ ಎನ್ನಲಾಗಿದೆ.

ಪ್ರಸ್ತುತ ಆರೋಪಿಗಳ ಪತ್ತೆಗೆ ಮಾರತ್ ಹಳ್ಳಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಸುಮಾರು ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ. ಮುಂಬೈ, ಕಲ್ಕತ್ತಾ, ನೇಪಾಳ ಸೇರಿದಂತೆ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿದ್ದರೆ ಅವರನ್ನು ಬಂಧಿಸುವುದು ಕಷ್ಟವಾಗಲಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ಜನರ ಗ್ಯಾಂಗ್ ಈ ಕಳ್ಳತನದ ಹಿಂದೆ ಇರುವ ಸಾಧ್ಯತೆ ಇದ್ದು, ಸ್ಥಳೀಯವಾಗಿ ಆರೋಪಿಗಳಿಗೆ ಯಾರಾದರೂ ಸಹಕಾರ ನೀಡಿದ್ದಾರೆಯೇ ಎಂಬುದರ ಕುರಿತು ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಾಕ್ ಬಹಿಷ್ಕಾರ ನಡುವೆಯೂ ಭಾರತ ಕೊಲಂಬೋಗೆ ಪ್ರಯಾಣ: ಟಿ20 ವಿಶ್ವಕಪ್ ಪಂದ್ಯಕ್ಕೆ ಸಜ್ಜು

0

ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರೂ, ಭಾರತ ಐಸಿಸಿ ಟಿ20 ವಿಶ್ವಕಪ್ ಪಂದ್ಯವಾಡಲು ಶ್ರೀಲಂಕಾಗೆ ತೆರಳಲಿದೆ. ಫೆಬ್ರವರಿ 15ರಂದು ಕೊಲಂಬೋದಲ್ಲಿರುವ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಿಗದಿಯಾಗಿದ್ದು, ಬಿಸಿಸಿಐ (BCCI) ಐಸಿಸಿಯ ಶಿಷ್ಟಾಚಾರದಂತೆ ತನ್ನ ಜವಾಬ್ದಾರಿಗಳನ್ನು ಪೂರೈಸಲು ಸಜ್ಜಾಗಿದೆ.

ಪಾಕಿಸ್ತಾನ ತಂಡ ಕೊಲಂಬೋಗೆ ಆಗಮಿಸಿದರೂ ಭಾರತ ವಿರುದ್ಧ ಆಡದೇ ಇರಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ, ಪಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಇದುವರೆಗೆ ಐಸಿಸಿಗೆ ಅಧಿಕೃತವಾಗಿ ತಿಳಿಸಿಲ್ಲ. ಈ ಹಿನ್ನೆಲೆಯಲ್ಲಿ ಪಂದ್ಯ ನಡೆಯುತ್ತದೆಯೇ ಇಲ್ಲವೇ ಎಂಬ ಬಗ್ಗೆ ಗೊಂದಲ ಉಂಟಾಗಿತ್ತು.

ಪಾಕಿಸ್ತಾನ ಪಂದ್ಯವಾಡದಿದ್ದರೆ ಭಾರತವೂ ಶ್ರೀಲಂಕಾಗೆ ಹೋಗುತ್ತದೆಯೇ ಎಂಬ ಪ್ರಶ್ನೆಗೆ ಇದೀಗ ಸ್ಪಷ್ಟ ಉತ್ತರ ಸಿಕ್ಕಿದ್ದು, ಪಾಕ್ ಬಹಿಷ್ಕಾರ ಘೋಷಿಸಿದರೂ ಭಾರತ ತಂಡ ಕೊಲಂಬೋಗೆ ಪ್ರಯಾಣ ಬೆಳೆಸಲಿದೆ ಎಂದು ವರದಿಯಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಭಾರತ ತಂಡವು ನಿಗದಿತ ವೇಳಾಪಟ್ಟಿಯಂತೆ ಅಭ್ಯಾಸ ನಡೆಸಲಿದೆ, ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸಲಿದೆ ಹಾಗೂ ಪಂದ್ಯದ ರೆಫರಿ ಅಧಿಕೃತವಾಗಿ ಪಂದ್ಯ ರದ್ದುಗೊಳಿಸುವವರೆಗೆ ಕಾಯಲಿದೆ. ಐಸಿಸಿಯ ನಿಯಮಾವಳಿಗಳನ್ನು ಸಂಪೂರ್ಣವಾಗಿ ಪಾಲಿಸುವುದು ಭಾರತದ ನಿಲುವಾಗಿದೆ ಎಂದು ತಿಳಿಸಲಾಗಿದೆ.

ಪಾಕಿಸ್ತಾನವು ಈ ಹಿಂದೆ ಏಷ್ಯಾ ಕಪ್ ಟ್ರೋಫಿ ಹಸ್ತಾಂತರ ಸೇರಿದಂತೆ ಹಲವು ವಿಚಾರಗಳಲ್ಲಿ ಹೈಡ್ರಾಮಾ ಸೃಷ್ಟಿಸಿದ್ದನ್ನು ಉಲ್ಲೇಖಿಸಿ, ಭಾರತದ ಪಂದ್ಯಕ್ಕೂ ಮುನ್ನ ಮತ್ತೊಂದು ನಾಟಕ ನಡೆಯುವ ಸಾಧ್ಯತೆಯಿದೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಭಾರತ ಶ್ರೀಲಂಕಾಗೆ ತೆರಳದೇ ಇದ್ದರೆ, “ನಾವು ಆಡಲು ಸಿದ್ದರಾಗಿದ್ದೇವೆ, ಆದರೆ ಭಾರತ ಬಂದಿಲ್ಲ” ಎಂದು ಹೇಳಿ ಮತ್ತೊಂದು ವಿವಾದ ಹುಟ್ಟುಹಾಕುವ ಸಾಧ್ಯತೆ ಇರುವುದರಿಂದ, ಯಾವುದೇ ಸಂಶಯಕ್ಕೆ ಅವಕಾಶ ಕೊಡದಂತೆ ಭಾರತ ತಂಡ ಲಂಕಾಗೆ ತೆರಳಲು ನಿರ್ಧರಿಸಿದೆ ಎನ್ನಲಾಗಿದೆ.

ಒಂದು ವೇಳೆ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಆಡದೇ ಇದ್ದರೆ, ಐಸಿಸಿ ಪಾಕಿಸ್ತಾನ ವಿರುದ್ಧ ಭಾರೀ ದಂಡ ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಭಾರತದ ಈ ನಿಲುವಿನ ಬಳಿಕ ಪಾಕಿಸ್ತಾನ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಕುರಿತು ಈಗ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಅಭಿಮಾನವೇ ಅತಿರೇಕವಾದಾಗ… ಮಗು ಕೈಯಲ್ಲಿ ಹಿಡಿದು ಭಯದಿಂದ ನಲುಗಿದ ರಾಮ್ ಚರಣ್

ರಾಮ್ ಚರಣ್ ಅವರ ಜೀವನದ ಅತ್ಯಂತ ಖುಷಿಯ ಕ್ಷಣದಲ್ಲಿ, ಅಭಿಮಾನಿಗಳ ಅತಿರೇಕ ನಡೆ ಆಘಾತಕಾರಿ ಕ್ಷಣಕ್ಕೆ ಕಾರಣವಾಗಿದೆ. ಅವಳಿ ಮಕ್ಕಳಿಗೆ ಪಾಲಕರಾದ ಸಂಭ್ರಮದ ನಡುವೆ, ತಮ್ಮ ಮೊದಲ ಮಗು ಕ್ಲಿನ್ಕಾರಾಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಅಭಿಮಾನಿಗಳ ಮುತ್ತಿಗೆಗೆ ಸಿಲುಕಿರುವುದು ಇದೀಗ ಚರ್ಚೆಯ ವಿಷಯವಾಗಿದೆ.

ರಾಮ್ ಚರಣ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸ್ಟಾರ್ ನಟ. ಅವರ ಅಭಿಮಾನಿ ಬಳಗ ದೊಡ್ಡದಾಗಿದ್ದು, ಅವರು ಎಲ್ಲೆ ಹೋದರೂ ಫ್ಯಾನ್ಸ್ ಹಾಜರಿರುತ್ತಾರೆ. ಅದೇ ರೀತಿ ಉಪಾಸನಾ ದಾಖಲಾಗಿರುವ ಆಸ್ಪತ್ರೆಯ ಎದುರು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಮನೆಯಿಂದ ಆಸ್ಪತ್ರೆಗೆ ಆಗಮಿಸಿದ ವೇಳೆ, ರಾಮ್ ಚರಣ್ ಅವರ ಕೈಯಲ್ಲಿ ಎರಡು ವರ್ಷದ ಮಗು ಇದ್ದುದನ್ನು ಕಂಡರೂ ಅಭಿಮಾನಿಗಳ ಕೂಗಾಟ, ತಳ್ಳಾಟ ನಿಲ್ಲಲಿಲ್ಲ. ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಪ್ರಯತ್ನಿಸಿದರೂ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮಗು ಜೊತೆ ಸುರಕ್ಷಿತವಾಗಿ ಆಸ್ಪತ್ರೆ ಪ್ರವೇಶಿಸುವುದು ರಾಮ್ ಚರಣ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿತು.

ಈ ವಿಡಿಯೋ ವೈರಲ್ ಆದ ಬಳಿಕ, “ಮಗು ಎಷ್ಟು ಗಾಬರಿ ಆಗಿರಬಹುದು” ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಮೂಡಿದೆ. ಇನ್ನೂ ಹಲವರು, “ಇದು ಅಭಿಮಾನವಲ್ಲ, ಅನಾಗರೀಕತೆ” ಎಂದು ತೀವ್ರವಾಗಿ ಟೀಕಿಸಿದ್ದಾರೆ. ಸ್ಟಾರ್ ಕುಟುಂಬದ ಭದ್ರತೆ, ಅಭಿಮಾನಿಗಳ ಜವಾಬ್ದಾರಿ ಕುರಿತು ಈ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಸುಂಕ- ವಾಣಿಜ್ಯ ಸಮರಕ್ಕೆ ಎದೆಗುಂದದೆ 2047ಕ್ಕೆ ವಿಕಸಿತ ಭಾರತದತ್ತ ದೃಢಹೆಜ್ಜೆ: ಬಿ.ವೈ.ವಿಜಯೇಂದ್ರ

0

ಶಿವಮೊಗ್ಗ: ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ತಮ್ಮ 9ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಆತ್ಮನಿರ್ಭರ, ವಿಕಸಿತ ಭಾರತ ಮತ್ತು ಸ್ವಾವಲಂಬನೆಯನ್ನು ಗುರಿಯಾಗಿ ಇಟ್ಟುಕೊಂಡು ಅತ್ಯುತ್ತಮ ಬಜೆಟ್ ಮಂಡಿಸಿದ್ದಾಗಿ ದೇಶಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಅವರು ಮಾತನಾಡಿದರು. ಅಸ್ಪಷ್ಟತೆಯಿಂದ ಸ್ಪಷ್ಟತೆ ಕಡೆಗೆ, ಆಡಂಬರದಿಂದ ಸುಧಾರಣೆಯತ್ತ, ಜನಪ್ರಿಯತೆಗಿಂತ ಜನಹಿತ ಮುಖ್ಯ ಎಂಬುದನ್ನು ನಿನ್ನೆ ಮತ್ತೊಮ್ಮೆ ಅವರು ಋಜುವಾತು ಮಾಡಿದ್ದಾರೆ ಎಂದು ವಿಶ್ಲೇಷಿಸಿದರು. ಜಾಗತಿಕ ಪರಿಸ್ಥಿತಿಯನ್ನೂ ನಾವು, ನೀವೆಲ್ಲರೂ ಗಮನಿಸಬೇಕಿದೆ. ಅಮೆರಿಕ ಅಧ್ಯಕ್ಷ ಟ್ರಂಪ್,

ಭಾರತದ ವಿರುದ್ಧ ಸಾರಿರುವ ಸುಂಕ- ವಾಣಿಜ್ಯ ಸಮರಕ್ಕೆ ಎದೆಗುಂದದೆ 2047ಕ್ಕೆ ವಿಕಸಿತ ಭಾರತ ಆಗಬೇಕೆಂಬ ಪ್ರಧಾನಮಂತ್ರಿಯವರ ಗುರಿಯತ್ತ ಸಾಗುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಮಾನ್ಯ ಹಣಕಾಸು ಸಚಿವರು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ಕೈಗಾರಿಕೆ, ಪ್ರವಾಸೋದ್ಯಮ, ಸೆಮಿ ಕಂಡಕ್ಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೃಷಿ ಕ್ಷೇತ್ರ ಸೇರಿ ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಆರ್ಥಿಕ ಶಿಸ್ತು ಕಾಪಾಡುವ ಮಹತ್ವದ ಜವಾಬ್ದಾರಿ ಹಣಕಾಸು ಸಚಿವರ ಮೇಲೆ ಇತ್ತು. ಆ ಪ್ರಥಮ ಆದ್ಯತೆ ಇಟ್ಟುಕೊಂಡು, ಹಣಕಾಸು ಕೊರತೆ ಶೇ 4.4ಕ್ಕೆ ತಂದಿರುವುದು ಇದಕ್ಕೆ ಸಾಕ್ಷಿ ಎಂದು ನುಡಿದರು.

ಅಡಿಗೆ ಅನಿಲ ಸೋರಕೆಯಿಂದ ಅಗ್ನಿ ಅವಗಢ; ಗಂಭೀರಗೊಂಡಿದ್ದ ಮೂವರು ಸಾವು!

0

ರಾಮನಗರ: ಕನಕಪುರದಲ್ಲಿ ಅಡುಗೆ ಮಾಡುವ ವೇಳೆ ಅನಿಲ ಸೋರಿಕೆಯಿಂದ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಮೃತರನ್ನು ಸಿದ್ದರಾಜು (55), ಚಂದ್ರಮ್ಮ (50) ಹಾಗೂ ಪ್ರಶಾಂತ್ (22) ಎಂದು ಗುರುತಿಸಲಾಗಿದೆ. ಕನಕಪುರ ನಗರದ ಅಮರನಾರಾಯಣ ಬ್ಲಾಕ್‌ನಲ್ಲಿ ನಾಲ್ಕು ದಿನಗಳ ಹಿಂದೆ ಗ್ಯಾಸ್ ಸೋರಿಕೆಯಿಂದ ಈ ಅಗ್ನಿ ಅವಘಡ ಸಂಭವಿಸಿತ್ತು.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕುಟುಂಬದ ಸದಸ್ಯರನ್ನು ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ತಂದೆ, ತಾಯಿ ಮತ್ತು ಮಗ ಮೂವರೂ ಸಾವನ್ನಪ್ಪಿದ್ದಾರೆ. ಈ ಘಟನೆ ಕನಕಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಸ್ಥಳೀಯರು ಕಂಬನಿ ಮಿಡಿದಿದ್ದು, ಶೋಕದ ವಾತಾವರಣ ಆವರಿಸಿದೆ.

ಐತಿಹಾಸಿಕ ಲಕ್ಕುಂಡಿ ಅಭಿವೃದ್ಧಿಗೆ ವಿದೇಶಿ ಎನ್‌ಜಿಒ ಆಸಕ್ತಿ: ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಭೇಟಿ

0

ಗದಗ: ಐತಿಹಾಸಿಕ ಲಕ್ಕುಂಡಿಯ ಸಮಗ್ರ ಅಭಿವೃದ್ಧಿಗೆ ವಿದೇಶಿ ಎನ್‌ಜಿಒ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ. ಇಟಲಿ ಹಾಗೂ ಗ್ರೀಸ್ ಮೂಲದ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಲಕ್ಕುಂಡಿಗೆ ಭೇಟಿ ನೀಡಿ, ಪ್ರಾಚ್ಯಾವಶೇಷಗಳು ಹಾಗೂ ಐತಿಹಾಸಿಕ ಸ್ಥಳಗಳ ಪರಿಶೀಲನೆ ನಡೆಸಿದೆ.

ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥರಾದ ಡಾ. ಹೆಲೆನ್ ನೇತೃತ್ವದ ತಂಡ, ಲಕ್ಕುಂಡಿಯ ಪ್ರಾಚ್ಯಾವಶೇಷಗಳ ಬಯಲು ವಸ್ತು ಸಂಗ್ರಹಾಲಯ, ಐತಿಹಾಸಿಕ ದೇವಸ್ಥಾನಗಳು ಹಾಗೂ ಪುರಾತನ ವಸ್ತುಗಳನ್ನು ಸಂಗ್ರಹಿಸಿರುವ ಸ್ಥಳಗಳನ್ನು ನೇರವಾಗಿ ಪರಿಶೀಲಿಸಿತು.

ಸುಮಾರು 3 ಎಕರೆ ವಿಸ್ತೀರ್ಣದಲ್ಲಿರುವ ಬಯಲು ವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸುವ ಕುರಿತು ವಿಶೇಷ ಗಮನಹರಿಸಲಾಗಿದೆ.
ಲಕ್ಕುಂಡಿಯಲ್ಲಿ ದೊರೆತ ಪ್ರಾಚ್ಯಾವಶೇಷಗಳನ್ನು ಸಂರಕ್ಷಿಸಿ, ವೈಜ್ಞಾನಿಕ ರೀತಿಯಲ್ಲಿ ಪ್ರದರ್ಶಿಸುವ ಉದ್ದೇಶದಿಂದ ಸರ್ಕಾರವು ಈಗಾಗಲೇ ಸುಮಾರು 2 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ರೂಪಿಸಿದೆ.

ಸರ್ಕಾರದಿಂದ ಟೆಂಡರ್ ಪಡೆದು ಈ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಸಿದ್ಧತೆ ನಡೆಸುತ್ತಿದೆ. ತಜ್ಞರ ತಂಡದಿಂದ ಸ್ಥಳಪರಿಶೀಲನೆ ನಡೆಸಲಾಗಿದ್ದು, ಶೀಘ್ರದಲ್ಲೇ ಸಮಗ್ರ ಪ್ರಾಜೆಕ್ಟ್ ರಿಪೋರ್ಟ್ ಸಿದ್ಧಪಡಿಸಲಾಗುತ್ತದೆ.

ಯೋಜನೆ ಜಾರಿಗೆ ಬಂದ ಬಳಿಕ ಬಯಲು ವಸ್ತು ಸಂಗ್ರಹಾಲಯದ ಅಭಿವೃದ್ಧಿಯೊಂದಿಗೆ ಲಕ್ಕುಂಡಿಯ ಇತಿಹಾಸವನ್ನು ಪರಿಚಯಿಸುವ ಗೈಡ್ ಬುಕ್ ಸಿದ್ಧಪಡಿಸುವ ಕಾರ್ಯಕ್ಕೂ ಮುಂದಾಗಲಾಗುತ್ತದೆ. ಈ ಗೈಡ್ ಪುಸ್ತಕ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟವಾಗಲಿದೆ.
ಈ ಸಂದರ್ಭದಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಮಾತನಾಡಿ, ಲಕ್ಕುಂಡಿಯ ಹೆರಿಟೇಜ್ ಮೌಲ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥೆ ಡಾ. ಹೆಲೆನ್ ಅವರು, ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಕಾಪಾಡಿಕೊಂಡು ಅಭಿವೃದ್ಧಿಪಡಿಸುವ ಗುರಿಯಿದೆ ಎಂದು ಹೇಳಿದರು.

ಮಾವನ ಮಗನ ಮದುವೆ ಫಿಕ್ಸ್… ಚಾಲಕನ ಜೊತೆ ಓಡಿ ಹೋದ ಶ್ರೀಮಂತ ಕುಟುಂಬದ ಮಗಳು

0

ತುಮಕೂರು: ಶ್ರೀಮಂತ ಕುಟುಂಬವೊಂದರಲ್ಲಿ ಮದುವೆ ಸಂಭ್ರಮದ ತಯಾರಿ ನಡೆಯುತ್ತಿದ್ದಾಗಲೇ, ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಉದ್ಯಮಿಯೊಬ್ಬರ ಮಗಳು ಮನೆಯ ವಾಹನ ಚಾಲಕನ ಜೊತೆ ಓಡಿಹೋಗಿ ಮದುವೆಯಾಗಿರುವ ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಯುವತಿಯ ಕುಟುಂಬವು ಮಾವನ ಮಗನ ಜೊತೆ ಮದುವೆ ನಿಶ್ಚಯಿಸಿ, ನಿಶ್ಚಿತಾರ್ಥ ಮುಗಿಸಿ, ಮದುವೆ ಕಾರ್ಡ್ ಹಂಚಿಕೆ, ಚೌಲ್ಟ್ರಿ ಬುಕ್ಕಿಂಗ್, ಊಟ ಹಾಗೂ ಡೆಕೊರೇಷನ್ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಮದುವೆಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಜನವರಿ 19ರಂದು ಯುವತಿ ಮನೆಯ ಪಾರ್ಟ್‌ಟೈಂ ಚಾಲಕ ರವೀಶ ಜೊತೆ ಓಡಿಹೋಗಿ, ಚಿಕ್ಕನಾಯಕನಹಳ್ಳಿಯಲ್ಲಿ ಮದುವೆಯಾಗಿದ್ದಾಳೆ.

ಮಗಳು ಕಾಣೆಯಾಗಿದ್ದರಿಂದ ಕುಟುಂಬಸ್ಥರು ತುಮಕೂರು ನಗರ ಠಾಣೆಗೆ ದೂರು ನೀಡಿದರು. ಆದರೆ ಪ್ರಕರಣದಲ್ಲಿ ತಿರುವು ಉಂಟಾಗಿ, ಯುವತಿಯೇ ಪೊಲೀಸರ ಮುಂದೆ ಹಾಜರಾಗಿ, ಕುಟುಂಬದವರಿಂದ ಬೆದರಿಕೆ ಇದೆ ಎಂದು ಆರೋಪಿಸಿ ಭದ್ರತೆ ಕೋರಿ ಕಣ್ಣೀರಿಟ್ಟಿದ್ದಾಳೆ.

ಇದಕ್ಕೆ ಪ್ರತಿಕ್ರಿಯಿಸಿದ ಯುವತಿಯ ಸಹೋದರ, “ಅವಳ ಇಚ್ಛೆಗೆ ವಿರುದ್ಧವಾಗಿ ನಾವು ಮದುವೆ ನಿಶ್ಚಯಿಸಿರಲಿಲ್ಲ. ಆಕೆಯ ಒಪ್ಪಿಗೆಯೇ ಎಲ್ಲಾ ಸಿದ್ಧತೆ ಮಾಡಿದ್ದೆವು. ತಾಯಿ ಆರೋಗ್ಯ ಸಮಸ್ಯೆ ಇದ್ದರೂ ಮದುವೆಗಾಗಿ ಓಡಾಡುತ್ತಿದ್ದರು. ಮದುವೆ ಬೇಡ ಎಂದಿದ್ದರೆ ಹೇಳಬಹುದಿತ್ತು. ಈ ರೀತಿ ನಡೆದುಕೊಂಡಿದ್ದು ನಮಗೆ ದೊಡ್ಡ ಶಾಕ್” ಎಂದು ಹೇಳಿದ್ದಾರೆ.

ಯುವತಿ ಕಾಣೆಯಾದ ಪ್ರಕರಣ ದಾಖಲಾದ ನಂತರ, ಪ್ರೇಮಿಗಳು ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದುಬಂದಿದೆ. ಬೆದರಿಕೆ ಆರೋಪದ ಹಿನ್ನೆಲೆ, ಪೊಲೀಸರ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನ ನಡೆದು, ಎರಡೂ ಕಡೆಯ ಕುಟುಂಬಗಳ ಒಪ್ಪಿಗೆ ಪಡೆದು, ಖುಲಾಸೆ ಪತ್ರಕ್ಕೆ ಸಹಿ ಹಾಕಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.

CJ Roy Case: ಶೂಟ್ ಆದ್ರೂ ಯಾರಿಗೂ ಶಬ್ದ ಕೇಳಿಸದೇ ಹೋಗಿದ್ದು ಹೇಗೆ? ಕೊನೆಗೂ ಈ ಪ್ರಶ್ನೆಗೆ ಸಿಕ್ತು ಉತ್ತರ

0

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಡಾ. ಸಿ.ಜೆ. ರಾಯ್ (CJ Roy) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ಬೆಳಕಿಗೆ ಬಂದಿದೆ.ರಿಚ್ಮಂಡ್ ಸರ್ಕಲ್‌ನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಕಚೇರಿಯ ತಮ್ಮ ಕೊಠಡಿಯಲ್ಲೇ ಡಾ. ಸಿ.ಜೆ. ರಾಯ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಗುಂಡಿನ ಶಬ್ದ ಕೇಳಿಸದೆ ಸುಮಾರು 20 ನಿಮಿಷಗಳ ಕಾಲ ಈ ಘಟನೆ ಯಾರಿಗೂ ತಿಳಿದಿರಲಿಲ್ಲ.

ರಾಯ್ ಅವರ ಚೇಂಬರ್ ಸಂಪೂರ್ಣವಾಗಿ ಸೌಂಡ್ ಪ್ರೂಫ್ ಆಗಿದ್ದರಿಂದ ಗುಂಡಿನ ಶಬ್ದ ಹೊರಗೆ ಕೇಳಿಸಿಲ್ಲ ಎನ್ನಲಾಗಿದೆ. ಕೊಠಡಿಯ ಒಳಗಿರುವ ಧ್ವನಿಗಳು ಹೊರಗೆ ಕೇಳಿಸದಂತೆ ವಿಶೇಷ ಇಂಟೀರಿಯರ್ ಮಾಡಲಾಗಿತ್ತು. ಇದರಿಂದಾಗಿ ಆತ್ಮಹತ್ಯೆ ನಡೆದರೂ ಕಚೇರಿಯ ಸಿಬ್ಬಂದಿಗೆ ತಕ್ಷಣ ಮಾಹಿತಿ ಸಿಗಲಿಲ್ಲ.

ಬಹಳ ಸಮಯವಾದರೂ ರಾಯ್ ತಮ್ಮ ಕೊಠಡಿಯಿಂದ ಹೊರಬರದ ಹಿನ್ನೆಲೆಯಲ್ಲಿ ಸಿಬ್ಬಂದಿ ಅವರನ್ನು ಕರೆದು ನೋಡಿದ್ದಾರೆ. ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಅನುಮಾನಗೊಂಡು ಕುಟುಂಬದವರ ಅನುಮತಿ ಪಡೆದು ಭದ್ರತಾ ಸಿಬ್ಬಂದಿ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ರಾಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.

ಆತ್ಮಹತ್ಯೆಗೆ ಮುನ್ನ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿದ್ದರು ಎನ್ನಲಾಗಿದೆ. ಜ.30ರಂದು ಆದಾಯ ತೆರಿಗೆ ಇಲಾಖೆ ಕಾನ್ಫಿಡೆಂಟ್ ಗ್ರೂಪ್ ಮೇಲೆ ದಾಳಿ ನಡೆಸಿತ್ತು. ಮಧ್ಯಾಹ್ನ ಸುಮಾರು 3 ಗಂಟೆಗೆ ರಾಯ್ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಎ. ಜೋಸೆಫ್ ಹೇಳಿಕೆ ನೀಡಲು ಕಚೇರಿಗೆ ಆಗಮಿಸಿದ್ದರು. ಅಲ್ಲಿಂದ ವಾಪಸ್ ಬಂದ ಬಳಿಕ ರಾಯ್ ತಮ್ಮ ಕ್ಯಾಬಿನ್‌ಗೆ ತೆರಳಿದ್ದು, ಮತ್ತೆ ಹೊರಗೆ ಬಂದಿಲ್ಲ.

ನಂತರ ಜೋಸೆಫ್ ಅವರು ಕ್ಯಾಬಿನ್‌ಗೆ ಪ್ರವೇಶಿಸಲು ಯತ್ನಿಸಿದಾಗ, ರಾಯ್ ಅವರ ಸೂಚನೆಯಂತೆ ಯಾರನ್ನೂ ಒಳಗೆ ಬಿಡಬಾರದು ಎಂದು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಬಳಿಕ ಬಾಗಿಲನ್ನು ಬಲವಂತವಾಗಿ ಒಡೆದು ಒಳಗೆ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಕೇರಳ ಮೂಲದ ಸಿ.ಜೆ. ರಾಯ್ 2005ರಲ್ಲಿ ಕಾನ್ಫಿಡೆಂಟ್ ಗ್ರೂಪ್ ಸ್ಥಾಪಿಸಿದ್ದರು. ಈ ಸಂಸ್ಥೆ ಇದುವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ವಸತಿ ಅಪಾರ್ಟ್‌ಮೆಂಟ್‌ಗಳು, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಹೋಟೆಲ್‌, ರೆಸಾರ್ಟ್ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ 4.6 ತೀವ್ರತೆಯ ಭೂಕಂಪ: ಜನರಲ್ಲಿ ಭೀತಿ

0

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 4.6 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ನಡುಗಿದ ಅನುಭವದಿಂದ ಸ್ಥಳೀಯ ಜನರಲ್ಲಿ ಆತಂಕ ಮನೆ ಮಾಡಿದೆ.

ಬೆಳಗ್ಗೆ 5.35ರ ಸುಮಾರಿಗೆ ಭೂಕಂಪದ ಕಂಪನ ಅನುಭವವಾಗಿದ್ದು, ಇದರ ಕೇಂದ್ರಬಿಂದು ಪಟ್ಟನ್ ಪ್ರದೇಶದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಭೂಕಂಪದಿಂದ ಯಾವುದೇ ಸಾವು-ನೋವು, ಗಾಯಗಳು ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (NCS) ತನ್ನ ಎಕ್ಸ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದೇ ದಿನ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ 4.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ ಎಂದು NCS ತಿಳಿಸಿದೆ.

NCS ಹೇಳಿಕೆಯ ಪ್ರಕಾರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಂಭವಿಸಿದ ಭೂಕಂಪವು ಭೂಮಿಯ ಮೇಲ್ಮೈಯಿಂದ 10 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಭೂಕಂಪದ ಅಕ್ಷಾಂಶ 9.03 ಡಿಗ್ರಿ ಉತ್ತರ ಹಾಗೂ ರೇಖಾಂಶ 92.78 ಡಿಗ್ರಿ ಪೂರ್ವವಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ದೃಢಪಡಿಸಲಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ವಿಶ್ವದ ಅತ್ಯಂತ ಭೂಕಂಪನಶೀಲ ಪ್ರದೇಶಗಳಲ್ಲಿ ಒಂದಾಗಿದ್ದು, 1893–1984ರ ಭಾರತದ ಭೂಕಂಪನ ವಲಯ ನಕ್ಷೆಯ ಪ್ರಕಾರ ಈ ಪ್ರದೇಶವನ್ನು ಭೂಕಂಪನ ವಲಯ–V ಎಂದು ವರ್ಗೀಕರಿಸಲಾಗಿದೆ.

ಭಾರತ ವಿರುದ್ಧದ ಪಂದ್ಯ ಬಹಿಷ್ಕಾರ: ಪಾಕಿಸ್ತಾನ ನಿರ್ಧಾರಕ್ಕೆ ICC ಖಡಕ್ ಎಚ್ಚರಿಕೆ!

0

ನವದೆಹಲಿ: 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಗುಂಪು ಹಂತದಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ಪಾಕಿಸ್ತಾನ ಸರ್ಕಾರ ತನ್ನ ಕ್ರಿಕೆಟ್ ತಂಡಕ್ಕೆ ಆದೇಶಿಸಿರುವ ನಿರ್ಧಾರಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕ್ರಮವು ಅಂತಾರಾಷ್ಟ್ರೀಯ ಕ್ರೀಡಾ ಮಾನದಂಡಗಳಿಗೆ ವಿರುದ್ಧವಾಗಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ಪಾಕಿಸ್ತಾನ ಸರ್ಕಾರದ ನಿರ್ಧಾರ ತನ್ನ ಗಮನಕ್ಕೆ ಬಂದಿದ್ದರೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯಿಂದ ಅಧಿಕೃತ ಮಾಹಿತಿ ದೊರೆಯುವವರೆಗೆ ಕಾಯಲಾಗುತ್ತಿದೆ ಎಂದು ತಿಳಿಸಿದೆ. ಪಂದ್ಯಾವಳಿಯಲ್ಲಿ ಆಯ್ದ ಪಂದ್ಯಗಳಲ್ಲಿ ಮಾತ್ರ ಭಾಗವಹಿಸುವ ಧೋರಣೆ ಸ್ವೀಕಾರಾರ್ಹವಲ್ಲ ಎಂದು ಐಸಿಸಿ ಅಸಮಾಧಾನ ವ್ಯಕ್ತಪಡಿಸಿದೆ.

“ರಾಷ್ಟ್ರೀಯ ನೀತಿ ವಿಷಯಗಳಲ್ಲಿ ಸರ್ಕಾರಗಳ ಪಾತ್ರವನ್ನು ಐಸಿಸಿ ಗೌರವಿಸುತ್ತದೆ. ಆದರೆ ಈ ನಿರ್ಧಾರವು ಸೂಕ್ತವಲ್ಲ. ಇದು ಜಾಗತಿಕ ಕ್ರಿಕೆಟ್ ಅಭಿಮಾನಿಗಳಷ್ಟೇ ಅಲ್ಲದೆ, ಪಾಕಿಸ್ತಾನದಲ್ಲಿರುವ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಹಿತಾಸಕ್ತಿಗೂ ವಿರುದ್ಧವಾಗಿದೆ” ಎಂದು ಐಸಿಸಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಪಾಕಿಸ್ತಾನ ತೆಗೆದುಕೊಂಡಿರುವ ಈ ನಿರ್ಧಾರವು ದೀರ್ಘಕಾಲೀನ ಪರಿಣಾಮಗಳನ್ನುಂಟು ಮಾಡಬಹುದಾದ್ದರಿಂದ, ಮತ್ತೊಮ್ಮೆ ಪರಿಶೀಲಿಸುವಂತೆ ಐಸಿಸಿ ಪಿಸಿಬಿಯನ್ನು ಮನವಿ ಮಾಡಿದೆ.

ಭಾರತ–ಪಾಕಿಸ್ತಾನ ಪಂದ್ಯಗಳು ವಿಶ್ವ ಕ್ರಿಕೆಟ್‌ನಲ್ಲಿ ವಿಶೇಷ ಆಕರ್ಷಣೆಯನ್ನು ಹೊಂದಿವೆ. ಎರಡೂ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟುಗಳ ನಡುವೆಯೂ, 2012ರಿಂದ ಐಸಿಸಿ ಪ್ರಮುಖ ಪಂದ್ಯಾವಳಿಗಳಲ್ಲಿ ಎರಡೂ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸಿ ಪಂದ್ಯಗಳನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿ ಪಾಕಿಸ್ತಾನ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, 2010ರ ನಂತರ ಉಭಯ ತಂಡಗಳು ಮುಖಾಮುಖಿಯಾಗದ ಮೊದಲ ಐಸಿಸಿ ಪಂದ್ಯಾವಳಿ ಇದಾಗಲಿದೆ.

ಪಾಕಿಸ್ತಾನ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದಿದ್ದರೆ, ಐಸಿಸಿ ಪಿಸಿಬಿ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಪಾಕಿಸ್ತಾನ ಸೂಪರ್ ಲೀಗ್ (PSL)ನಲ್ಲಿ ಪಾಲ್ಗೊಳ್ಳಲು ವಿದೇಶಿ ಆಟಗಾರರು ಅಗತ್ಯವಿರುವ ನಿರ್ಬಂಧರಹಿತ ಪ್ರಮಾಣಪತ್ರ (NOC) ಪಡೆಯುವಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಪಾಕಿಸ್ತಾನಕ್ಕೆ ಗಂಭೀರ ಆರ್ಥಿಕ ನಷ್ಟ ಸಂಭವಿಸಬಹುದು. ಅಲ್ಲದೆ, ಭವಿಷ್ಯದಲ್ಲಿ ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸುವ ಹಕ್ಕನ್ನೂ ಪಾಕಿಸ್ತಾನ ಕಳೆದುಕೊಳ್ಳುವ ಅಪಾಯವಿದೆ ಎಂದು ವರದಿಗಳು ತಿಳಿಸಿವೆ.

ಇದರ ನಡುವೆ, ಭಾನುವಾರ ಪಾಕಿಸ್ತಾನ ಸರ್ಕಾರ ತನ್ನ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಟಿ20 ವಿಶ್ವಕಪ್ 2026ರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ. ಆದರೆ, ಫೆಬ್ರವರಿ 15, 2026ರಂದು ಭಾರತ ವಿರುದ್ಧ ನಡೆಯಲಿರುವ ಪಂದ್ಯವನ್ನು ಪಾಕಿಸ್ತಾನ ತಂಡ ಬಹಿಷ್ಕರಿಸಲಿದೆ ಎಂದು ಪ್ರಕಟಿಸಿದೆ.

error: Content is protected !!