Home Blog Page 230

ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಕೋರಿ ಕೇಂದ್ರಕ್ಕೆ ಕೇರಳ ಸಿಎಂ ಪತ್ರ

0

ಕೇರಳ: ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯಾಚರಣೆ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಫೆಬ್ರವರಿ 1ರಂದು ಬರೆದಿರುವ ಪತ್ರದಲ್ಲಿ, ಈ ಘಟನೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬಿದ್ದಿರುವ ಕಪ್ಪು ಚುಕ್ಕೆಯಾಗಿದೆ ಎಂದು ಕೇರಳ ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯಾಚರಣೆಯಲ್ಲಿ ಗಂಭೀರ ಲೋಪಗಳಿವೆ ಎಂದು ಅವರು ಉಲ್ಲೇಖಿಸಿದ್ದಾರೆ.

ರಾಯ್ ಅವರ ಸಹೋದರ ಕೂಡ ಐಟಿ ಅಧಿಕಾರಿಗಳಿಂದ ಕಿರುಕುಳ ನಡೆದಿದೆ ಎಂದು ಆರೋಪಿಸಿರುವುದನ್ನು ಸಿಎಂ ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ರಾಯ್ ಅವರು ಎಲ್ಲಾ ದಾಖಲೆಗಳನ್ನು ನೀಡುವ ಮೂಲಕ ಅಧಿಕಾರಿಗಳಿಗೆ ಸಹಕರಿಸಿದ್ದರೂ, ಮರುಮರು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಐಟಿ ದಾಳಿಯ ಒತ್ತಡ ಅಸಹನೀಯವಾಗಿತ್ತು ಎಂದು ಅವರ ಸಹೋದರ ಹೇಳಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತೆರಿಗೆ ವಂಚನೆ ಗಂಭೀರ ಸಮಸ್ಯೆಯಾಗಿದ್ದು, ಅದನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ರಾಯ್ ಪ್ರಕರಣದಂತೆ ಜೀವ ಹಾನಿಯಾಗುವ ಯಾವುದೇ ಕ್ರಮವನ್ನು ನಾಗರಿಕ ಪ್ರಜಾಪ್ರಭುತ್ವದಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದು ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಬಂದೂಕಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಅಚ್ಚರಿಯ ಸಂಗತಿ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. ಇಂತಹ ಕಾರ್ಯಾಚರಣೆ ವೇಳೆ ಆ ಸ್ಥಳ ಸಂಪೂರ್ಣವಾಗಿ ತೆರಿಗೆ ಅಧಿಕಾರಿಗಳ ನಿಯಂತ್ರಣದಲ್ಲಿ ಇರಬೇಕು. ಶೋಧ ಕಾರ್ಯಾಚರಣೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕನಿಷ್ಠ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ತನಿಖೆಗೆ ಒಳಗಾಗುತ್ತಿರುವ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯೂ ಅಧಿಕಾರಿಗಳ ಮೇಲಿದೆ. ತೆರಿಗೆ ಎನ್ನುವುದು ನಾಗರಿಕರು ಸಮಾಜಕ್ಕಾಗಿ ಪಾವತಿಸುವ ಬೆಲೆ ಎಂದು ಹೇಳಲಾಗುತ್ತದೆ. ಆದ್ದರಿಂದ ತೆರಿಗೆ ವಂಚನೆ ವಿರುದ್ಧ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ನಿವೃತ್ತ ನ್ಯಾಯಾಧೀಶರ ನೇತೃತ್ವದ ವಿಚಾರಣಾ ಆಯೋಗ ರಚಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದಾರೆ.

ಗೋವಿಂದ–ನೀಲಂ ಪ್ರೇಮ ವದಂತಿಗಳಿಗೆ ತೆರೆ: “ನಮ್ಮ ನಡುವೆ ಅಂತಹದ್ದೇನೂ ಇರಲಿಲ್ಲ” ಎಂದ ನೀಲಂ ಕೊಠಾರಿ

ಗೋವಿಂದ ಅವರ ಖಾಸಗಿ ಜೀವನ ಸದ್ಯ ಬಾಲಿವುಡ್‌ನಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. ವಿವಾಹೇತರ ಸಂಬಂಧ ಆರೋಪ, ಪತ್ನಿ ಸುನೀತಾ ಅಹುಜಾ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ದಿಗಳ ನಡುವೆ, ಹಳೆಯ ದಿನಗಳ ಗೋವಿಂದ–ನೀಲಂ ಕೊಠಾರಿ ಪ್ರೇಮ ವದಂತಿಗಳು ಮತ್ತೆ ಹೊರಬಂದಿವೆ.

ಈ ಎಲ್ಲಾ ಊಹಾಪೋಹಗಳಿಗೆ ಈಗ ನೀಲಂ ಕೊಠಾರಿ ನೇರವಾಗಿ ಉತ್ತರ ನೀಡಿದ್ದಾರೆ. ಉಷಾ ಕಾಕಡೆ ಪ್ರೊಡಕ್ಷನ್ಸ್ ಜೊತೆ ಮಾತನಾಡಿದ ಅವರು, ಗೋವಿಂದ ಜೊತೆಗಿನ ಯಾವುದೇ ಪ್ರೇಮ ಸಂಬಂಧವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.

“ಇದನ್ನು ಯಾರು ಹೇಳುತ್ತಾರೆ? ಗೋವಿಂದ ಒಬ್ಬ ಅದ್ಭುತ ವ್ಯಕ್ತಿ. ನಾವು ಅನೇಕ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ ಅಷ್ಟೇ. ಆದರೆ ನಮ್ಮ ನಡುವೆ ಪ್ರೇಮ ಸಂಬಂಧ ಇತ್ತು ಎಂಬ ಮಾತು ನಿಜವಲ್ಲ” ಎಂದು ನೀಲಂ ಹೇಳಿದ್ದಾರೆ.

ತೊಂಬತ್ತರ ದಶಕದಲ್ಲಿ ಮಾಧ್ಯಮಗಳ ವರದಿಯ ಶೈಲಿಯೇ ಇಂತಹ ವದಂತಿಗಳಿಗೆ ಕಾರಣವಾಗಿತ್ತು ಎಂದು ಅವರು ಹೇಳಿದ್ದಾರೆ. “ಆ ಸಮಯದಲ್ಲಿ ಯಾರೂ ಸ್ಪಷ್ಟನೆ ಕೊಡಲು ಇರಲಿಲ್ಲ. ಪತ್ರಿಕೆಗಳ ಲೇಖನಿಯ ಶಕ್ತಿಯೇ ಎಲ್ಲವೂ ಆಗಿತ್ತು. ಎರಡು-ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೆ ಪ್ರೇಮ ಸಂಬಂಧವಿದೆ ಎಂದು ಭಾವಿಸಲಾಗುತ್ತಿತ್ತು. ನಾವು ಆಗ ಮಾಧ್ಯಮಗಳನ್ನು ತುಂಬಾ ಭಯಪಡುತ್ತಿದ್ದೆವು” ಎಂದು ಅವರು ತಿಳಿಸಿದ್ದಾರೆ.

ಗೋವಿಂದ ಮತ್ತು ನೀಲಂ ಆಗಾಗ್ಗೆ ಭೇಟಿಯಾಗುತ್ತಿದ್ದದ್ದು ಹಾಗೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರಿಂದ ಈ ಗಾಸಿಪ್‌ಗಳು ಹುಟ್ಟಿಕೊಂಡಿವೆ ಎನ್ನಲಾಗುತ್ತಿದೆ. ಆದರೆ ಅವುಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ ಎಂದು ನೀಲಂ ಸ್ಪಷ್ಟಪಡಿಸಿದ್ದಾರೆ.

ನೀಲಂ ಕೊಠಾರಿ ಅವರ ವೈಯಕ್ತಿಕ ಜೀವನದ ವಿಚಾರಕ್ಕೆ ಬಂದ್ರೆ, ಅವರು ಮೊದಲಿಗೆ ರಿಷಿ ಸೇಥಿಯಾ ಅವರನ್ನು ವಿವಾಹವಾಗಿ ನಂತರ ವಿಚ್ಛೇದನ ಪಡೆದರು. ಬಳಿಕ ನಟ ಸಮೀರ್ ಸೋನಿ ಅವರನ್ನು ವಿವಾಹವಾಗಿದ್ದು, ಇಬ್ಬರೂ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

ಗೋವಿಂದ ಅವರು 1987ರಿಂದ ಸುನೀತಾ ಅಹುಜಾ ಅವರೊಂದಿಗೆ ದಾಂಪತ್ಯ ಜೀವನ ನಡೆಸುತ್ತಿದ್ದು, ಒಬ್ಬ ಮಗ ಹಾಗೂ ಮಗಳ ತಂದೆಯಾಗಿದ್ದಾರೆ.

ಹೋಟೆಲ್ ಗಲಾಟೆಯ ಬಳಿಕ ಭೀಕರ ಹಲ್ಲೆ: ಪಿಪಿಸಿ ಕ್ರಾಸ್ ಬಳಿ ಕಾಂಗ್ರೆಸ್ ಯುವ ಮುಖಂಡನ ಮೇಲೆ ದಾಳಿ

0

ಉಡುಪಿ: ಕ್ಷುಲ್ಲಕ ಕಾರಣಕ್ಕೆ ನಡೆದ ಹೊಟೇಲ್ ಗಲಾಟೆ ತೀವ್ರ ಹಿಂಸಾಚಾರಕ್ಕೆ ತಿರುಗಿರುವ ಘಟನೆ ಜನವರಿ 30ರ ರಾತ್ರಿ ಪಿಪಿಸಿ ಕ್ರಾಸ್ ಬಳಿ ನಡೆದಿದೆ. ತಲವಾರ್ ಹಾಗೂ ಕಬ್ಬಿಣದ ಚೇರ್ ಹಿಡಿದು ಗುಂಪೊಂದು ದಾಳಿ ನಡೆಸಿದ್ದು, ಉಡುಪಿ ಜಿಲ್ಲಾ ಎನ್‌ಎಸ್‌ಯುಐ ಉಪಾಧ್ಯಕ್ಷ ಶರತ್ ಕುಂದರ್ (25) ಗಾಯಗೊಂಡಿದ್ದಾರೆ.

ಮಣಿಪಾಲದ ಹಕುನಾ ಮಟಾಟ ಹೊಟೇಲ್‌ನಲ್ಲಿ ಊಟದ ವೇಳೆ ಶರತ್ ಕುಂದರ್ ಅವರ ಕೈ ರಮಾನಂದ ಪೈ ಅವರ ಕೈಗೆ ತಾಕಿದ ವಿಚಾರವೇ ಈ ಗಲಾಟೆಗೆ ಕಾರಣವಾಗಿದೆ. ಮಾತಿನ ಚಕಮಕಿ ನಡೆದ ಬಳಿಕ ಶರತ್ ಕುಂದರ್ ಮನೆಗೆ ತೆರಳುವ ವೇಳೆ, ಪಿಪಿಸಿ ಕ್ರಾಸ್ ಬಳಿ ಮಾತುಕತೆ ನಡೆಸಲು ಅಕ್ಷತ್ ಪೈ ಕರೆ ಮಾಡಿ ನಿಲ್ಲುವಂತೆ ತಿಳಿಸಿದ್ದಾನೆ.

ಅದರಂತೆ ಶರತ್ ಕುಂದರ್ ಅವರು ತಮ್ಮ ಸ್ನೇಹಿತರೊಂದಿಗೆ ಕೋಸ್ಟಲ್ ಚಿಕನ್ ಅಂಗಡಿಯ ಎದುರು ಕಾಯುತ್ತಿದ್ದಾಗ, ರಾತ್ರಿ 11.30ರ ಸುಮಾರಿಗೆ ಟಾಟಾ ಸಫಾರಿ ಮತ್ತು ಮಹೀಂದ್ರ ಥಾರ್ ವಾಹನಗಳಲ್ಲಿ ಬಂದ ಆರೋಪಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.

ಅಕ್ಷತ್ ಪೈ, ಶಶಾಂಕ್ ಸೇರಿದಂತೆ 6–7 ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೇರ್ ಹಿಡಿದು ಶರತ್ ಕುಂದರ್ ಅವರನ್ನು ಕೊಲ್ಲುವ ಉದ್ದೇಶದಿಂದ ತಲೆಗೆ ಬೀಸಿದ್ದಾರೆ. ತಪ್ಪಿಸಿಕೊಳ್ಳಲು ಅವರು ಕೈ ಮುಂದಕ್ಕೆ ಚಾಚಿದಾಗ, ಆರೋಪಿ ರಮಾನಂದ ಪೈ ತಲವಾರಿನಿಂದ ಬೀಸಿದ್ದು, ಬಲ ಅಂಗೈ, ಮಧ್ಯ ಬೆರಳು, ಎಡ ಕೈಮಣಿಗಂಟು ಹಾಗೂ ಕಿರು ಬೆರಳಿಗೆ ಗಂಭೀರ ಗಾಯಗಳಾಗಿವೆ.

ಘಟನೆಯ ವೇಳೆ ಶರತ್ ಕುಂದರ್ ಜೊತೆಗಿದ್ದ ಸ್ನೇಹಿತರು ಬೊಬ್ಬೆ ಹೊಡೆದ ನಂತರ ಆರೋಪಿಗಳು ಜೀವಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಶ್ಮಿಕಾ–ವಿಜಯ್ ಸೀಕ್ರೆಟ್ ವೆಡ್ಡಿಂಗ್? ಉದಯಪುರ ಹೋಟೆಲ್ ಸಿದ್ಧತೆ ವಿಡಿಯೋ ವೈರಲ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ವಿಚಾರ ಮತ್ತೆ ಹಾಟ್ ಟಾಪಿಕ್ ಆಗಿದೆ. ಈ ಜೋಡಿ ಮದುವೆ ವಿಷಯವನ್ನು ಬಹುಕಾಲದಿಂದ ಗುಟ್ಟಾಗಿ ಇಟ್ಟುಕೊಂಡೇ ಬರುತ್ತಿದ್ದು, ಇದೀಗ ವಿವಾಹ ನಡೆಯಲಿರುವ ಹೋಟೆಲ್‌ನ ಸಿದ್ಧತೆಯ ವಿಡಿಯೋ ಲೀಕ್ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ನಡೆಯಲಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಈ ವಿವಾಹ ತುಂಬಾನೇ ಖಾಸಗಿಯಾಗಿ ಆಯೋಜಿಸಲಾಗಿದೆ ಎಂಬುದು ತಿಳಿದುಬರುತ್ತಿದೆ. ಯಾವುದೇ ಅನಗತ್ಯ ಗಮನ ಸೆಳೆಯದಂತೆ ಮದುವೆ ನೆರವೇರಿಸುವ ಪ್ಲ್ಯಾನ್ ಮಾಡಲಾಗಿದೆ.

‘ಗೀತ ಗೋವಿಂದಂ’ ಸಿನಿಮಾದ ಸೆಟ್‌ನಲ್ಲಿ ಪರಿಚಯವಾದ ರಶ್ಮಿಕಾ ಹಾಗೂ ವಿಜಯ್, ಆ ಬಳಿಕ ಒಳ್ಳೆಯ ಸ್ನೇಹ ಬೆಳೆಸಿಕೊಂಡಿದ್ದರು. ಆ ಸ್ನೇಹವೇ ಪ್ರೀತಿಗೆ ತಿರುಗಿದ್ದು, ಹಲವು ವರ್ಷಗಳಿಂದ ಇವರ ನಡುವೆ ಗಾಢ ಬಾಂಡಿಂಗ್ ಇದೆ. ಈಗ ಅದೇ ಪ್ರೀತಿ ಮದುವೆಯ ರೂಪ ಪಡೆಯುತ್ತಿದೆ ಎನ್ನಲಾಗುತ್ತಿದೆ.

ಈ ಹಿಂದೆ ವಿಜಯ್ ದೇವರಕೊಂಡ ಅವರ ಮನೆಯಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ನಡೆದಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಮದುವೆಯನ್ನೂ ಸಹ ಅಷ್ಟೇ ರಹಸ್ಯವಾಗಿ ನಡೆಸಲಾಗುತ್ತಿದೆ.

ಉದಯಪುರದ ಐತಿಹಾಸಿಕ ಸಿಟಿ ಪ್ಯಾಲೇಸ್ ಹೋಟೆಲ್‌ನಲ್ಲಿ ಮದುವೆ ನಡೆಯುತ್ತಿದೆ ಎಂಬುದಾಗಿ ವಿಡಿಯೋ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿರುವವರ ಮಾಹಿತಿ ಪ್ರಕಾರ ಫೆಬ್ರವರಿ 2ರಂದು ಮದುವೆ ನಡೆಯಲಿದೆಯಂತೆ. ಈ ಹಿಂದೆ ಫೆಬ್ರವರಿ 26 ಎಂದು ಹೇಳಲಾಗಿತ್ತು. ಆದರೆ ಈಗ ದಿನಾಂಕ ಬದಲಾಯಿತೇ ಎಂಬ ಗೊಂದಲ ನಿರ್ಮಾಣವಾಗಿದೆ.

ನಿಜವಾದ ದಿನಾಂಕ ಬಹಿರಂಗವಾಗದಂತೆ ಸೆಲಬ್ರಿಟಿಗಳು ತಪ್ಪು ದಿನಾಂಕಗಳ ಸುದ್ದಿಯನ್ನು ಹರಿಯಲು ಬಿಡುತ್ತಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ರಶ್ಮಿಕಾ ಮಂದಣ್ಣ ಕೂಡ ಇದೇ ತಂತ್ರ ಬಳಸಿರಬಹುದು ಎನ್ನುವುದು ಅನೇಕರ ಅಭಿಪ್ರಾಯ.

ಇಂದು ಮದುವೆ ನಡೆದರೆ, ಸಂಜೆ ವೇಳೆಗೆ ವಿವಾಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮದುವೆ ಕುರಿತು ಸಾಕಷ್ಟು ಕನಸುಗಳನ್ನು ಕಂಡಿದ್ದ ರಶ್ಮಿಕಾ ಮಂದಣ್ಣ ಅವರ ಕನಸು ಇದೀಗ ಸಾಕಾರಗೊಳ್ಳುವ ಹಂತದಲ್ಲಿದ್ದು, ಫೋಟೋಗಳು ವೈರಲ್ ಆಗದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ದೇವನಹಳ್ಳಿ| ಟಿಪ್ಪರ್ ಡಿಕ್ಕಿ ಹೊಡೆದು ನಡು ರಸ್ತೆಯಲ್ಲೇ ಮುಗಿಚಿ ಬಿದ್ದ ಕಂಟೈನರ್!

0

ದೇವನಹಳ್ಳಿ: ದೊಡ್ಡಬಳ್ಳಾಪುರ ತಾಲ್ಲೂಕಿನ ದಾಬಸ್ ಪೇಟೆ-ಹೊಸಕೋಟೆ ಹೆದ್ದಾರಿಯಲ್ಲಿ ಇಂದು ಅಪಘಾತ ಸಂಭವಿಸಿದ್ದು, ಟಿಪ್ಪರ್ ಮತ್ತು ಕಂಟೈನರ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ.

ಮೆಣಸಿಗೇಟ್ ಮಾರ್ಗದ ಮೂಲಕ ಹಾದು ಹೋಗುತ್ತಿದ್ದ ಕಂಟೈನರ್‌ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಂಟೈನರ್ ರಸ್ತೆ ಮಧ್ಯದಲ್ಲಿ ಮುಗಿಚಿ ಬಿದ್ದಿದೆ.

ಅಪಘಾತದಲ್ಲಿ ಟಿಪ್ಪರ್ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದ್ದು, ಟಿಪ್ಪರ್ ಹಾಗೂ ಕಂಟೈನರ್ ಚಾಲಕರಿಗೆ ಗಾಯ ಸಂಭವಿಸಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆ ಎರಡು ವಾಹನಗಳು ದಾಬಸ್ ಪೇಟೆಯಿಂದ ಹೊಸಕೋಟೆಗೆ ಹೋಗುತ್ತಿದ್ದ ವೇಳೆ ನಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸ್ಥಳೀಯ ಠಾಣೆ ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕಾರಣ ಮತ್ತು ಹಿನ್ನೆಲೆ ತನಿಖೆ ನಡೆಸುತ್ತಿದ್ದಾರೆ.

ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡಗೆ ಕಾಂಗ್ರೆಸ್‌ನಿಂದಲೂ ಸಿಗುತ್ತಾ ಗೇಟ್​ಪಾಸ್?

0

ಮಂಡ್ಯ: ಮಾಜಿ ಸಂಸದ, ಕಾಂಗ್ರೆಸ್ ನಾಯಕ ಮತ್ತು ಕೆಪಿಸಿಸಿ ವಕ್ತಾರ ಎಲ್.ಆರ್. ಶಿವರಾಮೇಗೌಡ ವಿರುದ್ಧದ ವೈರಲ್ ಆಡಿಯೋ ಪ್ರಕರಣ ಇದೀಗ ರಾಜಕೀಯ ಘರ್ಷಣೆಗೆ ಕಾರಣವಾಗಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶಿವರಾಮೇಗೌಡ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಇದರಲ್ಲಿ ನಟ ದಿ. ಅಂಬರೀಶ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಂಸದ ಮಾದೇಗೌಡ ಸೇರಿದಂತೆ ಹಲವು ನಾಯಕರುಗಳ ವಿರುದ್ಧ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಒಳಗೆ ಆಕ್ರೋಶ ವ್ಯಕ್ತವಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರಿಗೆ ಪತ್ರ ಬರೆದು, ಶಿವರಾಮೇಗೌಡ ವಿರುದ್ಧ ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪತ್ರದಲ್ಲಿ, ಪಕ್ಷದ ಗೌರವಕ್ಕೆ ಧಕ್ಕೆ ನೀಡುವಂತಹ ವರ್ತನೆಗೆ ಅವಕಾಶ ನೀಡಲಾಗುವುದಿಲ್ಲ ಎಂದಿದ್ದಾರೆ.

ಈ ಆರೋಪ ತಳ್ಳಿ ಹಾಕಿರುವ ಶಿವರಾಮೇಗೌಡ ,ಆಡಿಯೋವನ್ನು ಎಐ ತಂತ್ರಜ್ಞಾನದಿಂದ ಸೃಷ್ಟಿಸಲಾಗಿದೆ ಮತ್ತು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂಬುದು ಸ್ಪಷ್ಟಪಡಿಸಿದ್ದಾರೆ. ಆದರೆ ಇದನ್ನೊಪ್ಪಲು ಮಂಡ್ಯದ ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ. ಗಮನಾರ್ಹವಾಗಿ, ಶಿವರಾಮೇಗೌಡ ಜೆಡಿಎಸ್‌ನಲ್ಲಿ ಇದ್ದಾಗಲೂ ಇದೇ ರೀತಿಯ ಆಡಿಯೋ ವಿವಾದದಲ್ಲಿ ಸಿಲುಕಿದ್ದರು ಮತ್ತು ಪಕ್ಷದಿಂದ ಉಚ್ಚಾಟನೆ ಕೂಡ ಆಗಿದ್ದರು.

ಈ ಘಟನೆ ಜೆಡಿಎಸ್ ನಂತರ ಈಗ ಕಾಂಗ್ರೆಸ್‌ನಲ್ಲಿ ಮರುಕಳಿರುವುದರಿಂದ, ಶಿವರಾಮೇಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.

ಹರಪನಹಳ್ಳಿ ದೊಡ್ಡ ಮೈಲಾರ ಕಾರ್ಣಿಕೋತ್ಸವ: ‘ಅಂಬಲಿ ರಾಶಿಗೆ ಮುತ್ತಿನ ಗಿಣಿ’ – ಸಮೃದ್ಧಿಯ ಭವಿಷ್ಯವಾಣಿ

0

ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದೊಡ್ಡ ಮೈಲಾರದಲ್ಲಿ ಭರತ್ ಹುಣ್ಣಿಮೆ ನಿಮಿತ್ತ ಆಯೋಜಿಸಲಾಗಿದ್ದ ಈ ವರ್ಷದ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಭಕ್ತಿಸ್ಫೂರ್ತಿಯಿಂದ ನೆರವೇರಿತು.

ಸಾವಿರಾರು ಭಕ್ತರು ಸೇರಿ ಕಾರ್ಣಿಕೋತ್ಸವವನ್ನು ಕಣ್ತುಂಬಿಕೊಂಡರು.
ಕಾರ್ಣಿಕ ನುಡಿ ಹೇಳಿದ ಗೊರವಯ್ಯ ಕೇಳಗೆ ಬಿದ್ದು, “ಅಂಬಲಿ ರಾಶಿಗೆ ಮುತ್ತಿನ ಗಿಣಿ – ಸಮೃದ್ಧಿ ಆಯ್ತಲೆ ಪರಾಕ್” ಎಂಬ ದೈವವಾಣಿಯನ್ನು ಪ್ರಕಟಿಸಿದರು.

ಈ ಕಾರ್ಣಿಕ ನುಡಿ ಮೂಲಕ ಈ ವರ್ಷವೂ ಮಳೆ ಸಮರ್ಪಕವಾಗಿ ಸುರಿಯಲಿದ್ದು, ಬೆಳೆ ಉತ್ತಮವಾಗಿ ಬೆಳೆಯಲಿದೆ ಎಂಬ ಆಶಾವಾದ ಮೂಡಿದೆ. ಕೃಷಿ ಆಧಾರಿತ ಸಮಾಜಕ್ಕೆ ಇದು ಶುಭಸೂಚನೆಯಾಗಿ ಪರಿಗಣಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ದೊಡ್ಡ ಮೈಲಾರ ಕ್ಷೇತ್ರದಲ್ಲಿ ನಡೆದ ಕಾರ್ಣಿಕೋತ್ಸವ ಧಾರ್ಮಿಕ ಸಂಪ್ರದಾಯ, ನಂಬಿಕೆ ಮತ್ತು ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದುಕೊಂಡ ಮಹತ್ವದ ಘಟನೆಯಾಗಿ ಮೂಡಿ ಬಂದಿದೆ.

ಹೃದಯವಿದ್ರಾವಕ ಘಟನೆ; ತೆರೆದ ಜಲಮಂಡಳಿ ಸಂಪ್‌ಗೆ ಬಿದ್ದು 14 ವರ್ಷದ ಬಾಲಕ ಸಾವು!

0

ಬೆಂಗಳೂರು: ಮೂರು ದಿನಗಳ ಹಿಂದೆ ಕಾಣೆಯಾಗಿದ್ದ 14 ವರ್ಷದ ಬಾಲಕನ ಶವ ಬೆಂಗಳೂರು ಜಲಮಂಡಳಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಚೇಂಬರ್‌ನಲ್ಲಿ ಪತ್ತೆಯಾದ ಹೃದಯವಿದ್ರಾವಕ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾತಗುಣಿ ಬಳಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ ಮೃತ ಬಾಲಕ. ಕುಟುಂಬವು ತಾತಗುಣಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿತ್ತು. ಪ್ರೀತಮ್ ಮೂರು ದಿನಗಳ ಹಿಂದೆ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಹಾಗೂ ಸ್ಥಳೀಯರು ಬಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ, ಭಾನುವಾರ ಜಲಮಂಡಳಿ ಕಾಮಗಾರಿ ನಡೆಯುತ್ತಿದ್ದ ಸ್ಥಳದ ತೆರೆದ ಸಂಪ್‌ನಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮೃತದೇಹ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಪ್ರಾಥಮಿಕ ಮಾಹಿತಿ ಪ್ರಕಾರ, ಹಲವು ದಿನಗಳಿಂದ BWSSB ಅಧಿಕಾರಿಗಳು ಸಂಪ್ ಅನ್ನು ಮುಚ್ಚದೆ ಬಿಟ್ಟಿದ್ದರಿಂದ, ಬಾಲಕ ಓಡಾಡುವ ವೇಳೆ ಅದರಲ್ಲಿ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಸಂಪ್‌ನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜಲಮಂಡಳಿ ನಿರ್ಲಕ್ಷ್ಯದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

CCL 2026: ಬಂಗಾಳವನ್ನು ಮಣಿಸಿದ ಕರ್ನಾಟಕ ಬುಲ್ಡೋಜರ್ಸ್, 3ನೇ ಬಾರಿ ಚಾಂಪಿಯನ್ ಪಟ್ಟ

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2026ರ ಫೈನಲ್ ಪಂದ್ಯ ಫೆಬ್ರವರಿ 1ರಂದು ಕೊಯಮತ್ತೂರಿನಲ್ಲಿ ನಡೆಯಿತು. ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ, ಬಂಗಾಳ ಟೈಗರ್ಸ್ ವಿರುದ್ಧ ಶಿಸ್ತುಬದ್ಧ ಹಾಗೂ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಈ ಗೆಲುವು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ವಿಶೇಷ ಮಹತ್ವ ಪಡೆದಿದೆ. 2013 ಮತ್ತು 2014ರಲ್ಲಿ ಚಾಂಪಿಯನ್ ಆಗಿದ್ದ ತಂಡ, ಇದೀಗ 12 ವರ್ಷಗಳ ಬಳಿಕ ಮೂರನೇ ಬಾರಿ CCL ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆಯೂ ಆರು ಬಾರಿ ಫೈನಲ್ ತಲುಪಿದರೂ ಪ್ರಶಸ್ತಿ ಕೈ ತಪ್ಪಿಸಿಕೊಂಡಿದ್ದ ಕರ್ನಾಟಕ, ಈ ಬಾರಿ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ, ಕರ್ನಾಟಕದ ಬಲಿಷ್ಠ ಬೌಲಿಂಗ್ ದಾಳಿಯ ಎದುರು ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು. 20 ಓವರ್‌ಗಳಲ್ಲಿ ಬಂಗಾಳ ತಂಡ 129 ರನ್ ಗಳಿಸಿತು. ಪ್ರತಾಪ್ ಮೂರು ವಿಕೆಟ್ ಪಡೆದು ಪ್ರಮುಖ ಪಾತ್ರ ವಹಿಸಿದರೆ, ಸುನೀಲ್ ಎರಡು ವಿಕೆಟ್ ಕಬಳಿಸಿದರು.

ಗುರಿ ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಆರಂಭದಲ್ಲೇ ರಾಜೀವ್ ಭರವಸೆಯ ಆಟವಾಡಿದರು. ಅವರು 37 ಬಾಲ್‌ಗಳಲ್ಲಿ 69 ರನ್ ಬಾರಿಸಿ ತಂಡವನ್ನು ಗೆಲುವಿನ ದಾರಿಯಲ್ಲಿ ಮುನ್ನಡೆಸಿದರು. ರಾಜೀವ್ ಔಟಾದ ಬಳಿಕ ಬಂಗಾಳ ಪರ ರತನ್ದೀಪ್ ಬೌಲಿಂಗ್ ಮೂಲಕ ಒತ್ತಡ ತಂದರೂ, ಕರ್ನಾಟಕ ತಂಡದ ಆಟಗಾರರು ಸಹನೆ ತೋರಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡ CCL 2026ರ ಚಾಂಪಿಯನ್ ಪಟ್ಟ ಅಲಂಕರಿಸಿ, ಅಭಿಮಾನಿಗಳಿಗೆ ಸ್ಮರಣೀಯ ಕ್ಷಣಗಳನ್ನು ನೀಡಿದೆ.

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಅಭಿಮಾನಿ ಶಾಕ್: ಗೌರವ ಸಿಗುತ್ತಿಲ್ಲ ಎಂದು ಬಹಿರಂಗ ಆರೋಪ

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ (Gilli Nata) ಅವರಿಗೆ ದೊರೆತ ಅಪಾರ ಅಭಿಮಾನಿ ಬಳಗ, ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಗಿಲ್ಲಿ ನಟನ ಫೋಟೋವನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಅಭಿಮಾನಿಯೊಬ್ಬರು, ಇದೀಗ ಅವರ ವಿರುದ್ಧ ಬಹಿರಂಗವಾಗಿ ಆರೋಪಗಳನ್ನು ಮಾಡಿರುವುದು ಗಮನ ಸೆಳೆದಿದೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ತೋರಿಸಿದ ಹಾಸ್ಯಭರಿತ ವ್ಯಕ್ತಿತ್ವ, ಸಮಯೋಚಿತ ಪ್ರತಿಕ್ರಿಯೆಗಳು ಮತ್ತು ಆಟದ ಶೈಲಿ ಅವರನ್ನು ಜನಪ್ರಿಯರನ್ನಾಗಿಸಿತ್ತು. ಈ ಕಾರಣದಿಂದಲೇ ಗಿಲ್ಲಿಗೆ ಇತರ ಸ್ಪರ್ಧಿಗಳಿಗಿಂತಲೂ ದೊಡ್ಡ ಮಟ್ಟದ ಅಭಿಮಾನಿ ವರ್ಗ ಸಿಕ್ಕಿತ್ತು. ಇನ್ಸ್ಟಾಗ್ರಾಮ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವುದು ಈ ಜನಪ್ರಿಯತೆಯ ಸಾಕ್ಷಿಯಾಗಿದೆ.

ಆದರೆ, ಅಭಿಮಾನಿಗಳ ಗೌರವ ಹಾಗೂ ನಿರೀಕ್ಷೆಗಳಿಗೆ ಗಿಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಈಗ ಕೇಳಿಬರುತ್ತಿವೆ. ಬಾಸ್ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಟ್ಯಾಟೂ ಅಭಿಮಾನಿಯೊಬ್ಬರು,
“ಗಿಲ್ಲಿಯಲ್ಲಿದ್ದ ಪ್ರತಿಭೆಯನ್ನು ನಾವು ಬೆಂಬಲಿಸಿ ಹೊರಗೆ ತಂದೆವು. ಬಿಗ್ ಬಾಸ್ ಮನೆಯಿಂದ ಹೊರಬಂದ ತಕ್ಷಣ ನನ್ನನ್ನು ಭೇಟಿ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದರು. ಆದರೆ ಅದನ್ನು ಉಳಿಸಿಕೊಳ್ಳಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿದ್ದು, ಕೆಲ ಅಭಿಮಾನಿಗಳು ಗಿಲ್ಲಿಯ ನಡೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. “ಅಭಿಮಾನಿಗಳೇ ನಿಮ್ಮ ಬಲ” ಎಂಬ ಮಾತುಗಳು ಮತ್ತೆ ನೆನಪಾಗುವಂತೆ ಈ ವಿವಾದ ಮಾಡಿದೆ.

ಇನ್ನೊಂದೆಡೆ, ಗಿಲ್ಲಿ ನಟ ಮುಂದಿನ ಹಂತವಾಗಿ ನಿರ್ದೇಶನ ಕ್ಷೇತ್ರಕ್ಕೆ ಕಾಲಿಡುವ ಆಸೆ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಈ ವಿವಾದದಿಂದ ಅವರ ಇಮೇಜ್ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

error: Content is protected !!