Home Blog Page 231

ಅಕ್ರಮ ಹಣ ವರ್ಗಾವಣೆ ಕೇಸ್‌: ಶಾಸಕ ಸತೀಶ್‌ ಸೈಲ್‌ʼಗೆ ವೈದ್ಯಕೀಯ ಜಾಮೀನು ಮಂಜೂರು

0

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ಹೈಕೋರ್ಟ್ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ.

ಶಾಸಕ ಸತೀಶ್ ಸೈಲ್ ಗೆ ಲಿವರ್ ಕಸಿ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆ ಜಾಮೀನು ನೀಡಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿದೆ. ಲಿವರ್ ಕಸಿಗೆ ಸಂಬಂಧಿಸಿದಂತೆ ಪ್ರತಿ ಎರಡು ವಾರಕ್ಕೊಮ್ಮೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ, ಎಂಟು ವಾರಗಳಿಗೊಮ್ಮೆ ಆರೋಗ್ಯದ ಸ್ಥಿತಿಗತಿಗಳ ಕುರಿತು ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ.

ಇದೇ ವೇಳೆ, ಪ್ರಾಸಿಕ್ಯೂಷನ್ ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವಂತಿಲ್ಲ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಅಡ್ಡಿಪಡಿಸಬಾರದು ಎಂದು ಹೈಕೋರ್ಟ್ ಷರತ್ತು ವಿಧಿಸಿದೆ. ಜಾಮೀನಿನ ಷರತ್ತಾಗಿ ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಂದು ಭದ್ರತಾ ಖಾತರಿಯನ್ನು ಒದಗಿಸುವಂತೆ ಹೈಕೋರ್ಟ್ ಆದೇಶಿಸಿದೆ.

ಮಂಡ್ಯ ಜಿಲ್ಲೆ ರೈಲು ಯೋಜನೆಗಳ ಬಗ್ಗೆ ರೈಲ್ವೆ ಸಚಿವರ ಜತೆ ಚರ್ಚಿಸಿದ ಹೆಚ್.ಡಿ. ಕುಮಾರಸ್ವಾಮಿ

0

ನವದೆಹಲಿ: ಬೆಂಗಳೂರು, ಮಂಡ್ಯ, ಮೈಸೂರು ರೈಲು ಮಾರ್ಗದ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ ಮಾತುಕತೆ ನಡೆಸಿದರು.

ಗುರುವಾರ ಮಧ್ಯಾಹ್ನ ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಆಗಮಿಸಿದ ರೈಲ್ವೆ ಸಚಿವರ ಜತೆ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರು ಮುಖ್ಯವಾಗಿ ಬೆಂಗಳೂರು ನಗರದಿಂದ ಮೈಸೂರು ನಡುವೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಾರ್ವಜನಿಕರ ರೈಲ್ವೆ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದರು.

ಈ ಕೆಳಕಂಡ ವಿಷಯಗಳ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ರೈಲ್ವೆ ಸಚಿವರ ಜತೆ ಚರ್ಚಿಸಿದರು.

ಬೆಂಗಳೂರು-ಮಂಗಳೂರು – ಮುರುಡೇಶ್ವರ ನಡುವೆ ಸಂಚರಿಸುವ ರೈಲು (ರೈಲು ಸಂಖ್ಯೆ 16585) ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ನೀಡುವ ಬಗ್ಗೆ ಸಚಿವರು ಚರ್ಚಿಸಿದರು. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಸಚಿವರು ತ್ವರಿತವಾಗಿ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಮದ್ದೂರು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಬಗ್ಗೆ ಮನವಿ ಮಾಡಿದ ಸಚಿವರು; ಈ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣಿ ಹೆಚ್ಚಾಗಿರುವುದರಿಂದ ಈ ನಿಲ್ದಾಣವನ್ನು ಆಧುನೀಕರಿಸಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.

ಮಂಡ್ಯ-ಮೇಲುಕೋಟೆ ರಸ್ತೆಯ ವಿ.ಸಿ. ಫಾರ್ಮ್ ಗೇಟ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣಕ್ಕೆ ಮನವಿ:

ಈ ಮಾರ್ಗದಲ್ಲಿ ರೈಲುಗಳ ನಿರಂತರ ಸಂಚಾರದಿಂದಾಗಿ, ರೈತರು ಮತ್ತು ಸಾರ್ವಜನಿಕರು ದೀರ್ಘಕಾಲದಿಂದ ಸಂಚಾರ ಅಡಚಣೆ ಎದುರಿಸುತ್ತಿದ್ದಾರೆ. ಅಲ್ಲದೆ ಮತ್ತು ಸುರಕ್ಷತಾ ಕಾಳಜಿಗಳು ಸೇರಿದಂತೆ ತೀವ್ರ ಅನಾನುಕೂಲತೆ ಎದುರಿಸುತ್ತಿದ್ದಾರೆ. ವಿ.ಸಿ. ಫಾರ್ಮ್ ಗೇಟ್‌ನಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ಇಲ್ಲದಿರುವುದು ದೈನಂದಿನ ಪ್ರಯಾಣ ಮತ್ತು ಕೃಷಿ ಉತ್ಪನ್ನಗಳ ಸಾಗಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಹೀಗಾಗಿ ಈ ಜಾಗದಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣ ಮಾಡಬೇಕು ಎಂದು ಸಚಿವರು ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು.

ದೊಡ್ಡಬ್ಯಾಡರಹಳ್ಳಿಯಲ್ಲಿ ರೈಲ್ವೆ ಓವರ್‌ ಬ್ರಿಡ್ಜ್ ನಿರ್ಮಾಣ:

ಮಂಡ್ಯದಿಂದ ತೂಬಿನಕೆರೆ, ಪಾಂಡವಪುರದಿಂದ ಕೆ.ಆರ್.ಎಸ್. ಮತ್ತು ಕೆ.ಆರ್. ಪೇಟೆ ಮತ್ತು ಮಡಿಕೇರಿ ಕಡೆಗೆ ಪ್ರಯಾಣಿಸುವ ವಾಹನಗಳು ದೊಡ್ಡಬ್ಯಾಡರಹಳ್ಳಿಯಲ್ಲಿ ತೀವ್ರ ಸಂಚಾರ ದಟ್ಟಣೆಯನ್ನು ಹೊಂದಿರುವುದರಿಂದ ಇಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಅಸ್ತಿತ್ವದಲ್ಲಿರುವ ಲೆವೆಲ್ ಕ್ರಾಸಿಂಗ್ ಪ್ರಮುಖ ಅಡಚಣೆಯಾಗಿದ್ದು, ಪ್ರಯಾಣಿಕರಿಗೆ ಆಗಾಗ್ಗೆ ವಿಳಂಬ ಮತ್ತು ಅನಾನುಕೂಲ ಉಂಟು ಮಾಡುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ಸಚಿವರು ಮನವಿ ಮಾಡಿದರು

ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆಗೆ ಮನವಿ:

ಪಾಂಡವಪುರ ಪಟ್ಟಣವು ಕೆ.ಆರ್. ಪೇಟೆ, ನಾಗಮಂಗಲ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ವ್ಯಾಪಾರ ಕೇಂದ್ರ ಸ್ಥಾನವಾಗಿದ್ದು, ಕೃಷಿ ಮತ್ತು ವಾಣಿಜ್ಯ ಸರಕುಗಳ ದಕ್ಷ ಸಾಗಣೆಗೆ ಅನುಕೂಲವಾಗುವಂತೆ ರೈತರು ಮತ್ತು ವ್ಯಾಪಾರಿಗಳಿಗೆ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಈ ಪ್ರದೇಶದಲ್ಲಿ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದರು.

ಮದ್ದೂರು ತಾಲೂಕಿನ ಹನಕೆರೆ ಗ್ರಾಮದ ಬಳಿ ಇರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 60) ಅನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವರು ಕೋರಿದರು. ಚನ್ನಪಟ್ಟಣದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆ ಮಾಡುವುದು ಅಗತ್ಯವಾಗಿದೆ ಎಂದು ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವ ಚಾಮುಂಡಿ ಎಕ್ಸ್ ಪ್ರೆಸ್ ರೈಲಿನ (ಸಂಖ್ಯೆ 16215) ಬೋಗಿಗಳನ್ನು ಹೆಚ್ಚಿಸಿ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಕೂಡ ಸಚಿವರು ರೈಲ್ವೆ ಸಚಿವರ ಜತೆ ಚರ್ಚಿಸಿದರು.

ಮಂಡ್ಯ ಜಿಲ್ಲೆಯ ನೊಡೇಕೊಪ್ಪಲು ಗ್ರಾಮದ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣದ ಬಗ್ಗೆ ಕೂಡ ಮನವಿ ಸಲ್ಲಿಕೆ. ಗ್ರಾಮಸ್ಥರು, ಮುಖ್ಯವಾಗಿ ರೈತರು ಮತ್ತು ಶಾಲಾ ಮಕ್ಕಳಿಗೆ ಈ ಅಂಡರ್ ಪಾಸ್ ನಿರ್ಮಾಣದಿಂದ ಹೆಚ್ಚು ಅನುಕೂಲ ಆಗಲಿದೆ ಎಂಬ ಅಂಶವನ್ನು ಸಚಿವರು ಮನವರಿಕೆ ಮಾಡಿಕೊಟ್ಟರು.

ಹೊಸ ರೈಲು ಮಂಜೂರಾತಿಗೆ ಮನವಿ: ಮಂಗಳೂರು ಮತ್ತು ಹಾಸನ ಮಾರ್ಗವಾಗಿ ಮುಂಬಯಿ- ಬೆಂಗಳೂರು-ಮುಂಬಯಿ ನಗರಗಳಿಗೆ ಸಂಪರ್ಕಿಸಲು ಹೊಸ ರೈಲು ಮಂಜೂರು ಮಾಡಲು ಸಚಿವ ಕುಮಾರಸ್ವಾಮಿ ಅವರು ಮನವಿ ಮಾಡಿದರು.

ರಾಮನಗರ ಮತ್ತು ಚನ್ನಪಟ್ಟಣದ ನಡುವೆ ಬರುವ ಲೆವೆಲ್ ಕ್ರಾಸಿಂಗ್ (ಸಂಖ್ಯೆ 44) ರೈಲ್ವೆ ಮೇಲು ಸೇತುವೆ ನಿರ್ಮಾಣ ಮಾಡುವುದು. ಇದರಿಂದಾಗಿ ಆ ಭಾಗದ ಸಾರ್ವಜನಿಕರ ಸುಲಭ ಪ್ರಯಾಣಕ್ಕೆ ಅನುಕೂಲ ಆಗಲಿದೆ ಎಂದು ಸಚಿವರು ವಿನಂತಿ ಮಾಡಿದರು.

ಹೆಜ್ಜಾಲ -ಚಾಮರಾಜನಗರ ರೈಲು ಮಾರ್ಗ ಮಂಜೂರಾತಿಗೆ ಮನವಿ:

ಹೆಜ್ಜಾಲ- ಚಾಮರಾಜನಗರ ರೈಲು ಮಾರ್ಗಕ್ಕೆ ಮಂಜೂರಾತಿ ನೀಡುವಂತೆ ಸಚಿವ ಕುಮಾರಸ್ವಾಮಿ ಅವರು ಅಶ್ವಿನಿ ವೈಷ್ಣವ ಅವರಲ್ಲಿ ಮನವಿ ಮಾಡಿದರು. ಈ ಮಾರ್ಗವು ಹೆಜ್ಜಾಲ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಯಳಂದೂರು ಮಾರ್ಗವಾಗಿ ಸಂಚರಿಸುತ್ತದೆ. ಈ ಮಾರ್ಗವು ಬಹಳ ಮುಖ್ಯವಾಗಿದ್ದು, ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತದೆ ಎಂಬ ಅಂಶವನ್ನು ಸಚಿವರು ಮನವರಿಕೆ ಮಾಡಿಕೊಟ್ಟರು.

ಅಲ್ಲದೆ, ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್ ಗೇಜ್ ರೈಲು ಮಾರ್ಗಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಹಾಸನ ಜಿಲ್ಲೆಯ ಸಕಲೇಶಪುರ ರೈಲು ನಿಲ್ದಾಣವನ್ನು ಅಭಿವೃದ್ಧಿ ಮಾಡುವುದು, ಹೊಸಕೋಟೆ ತಾಲೂಕಿನ ತಿಂಡ್ಲು ಗ್ರಾಮದ ಬಳಿಯ ಸರ್ವೀಸ್ ರಸ್ತೆಯಲ್ಲಿ ಮ್ಯಾಜಿಕ್ ಬಾಕ್ಸ್ ಗಳನ್ನು ಅಳವಡಿಸುವುದು ಸೇರಿ ಹಲವಾರು ಪ್ರಸ್ತಾವನೆಗಳನ್ನು ಸಚಿವರು ರೇಲ್ವೆ ಸಚಿವರಿಗೆ ಸಲ್ಲಿಸಿದರು.

ಈ ಎಲ್ಲಾ ಬೇಡಿಕೆಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತ್ವರಿತವಾಗಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ಬುಧವಾರವೂ ರೈಲ್ವೆ ಸಚಿವರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದ್ದರು.

ರೀಲ್ಸ್‌ಗಾಗಿ ಕೋರ್ಟ್ ಅವಮಾನಿಸಬೇಡಿ! – ಪುನೀತ್ ಕೆರೆಹಳ್ಳಿಗೆ ಹೈಕೋರ್ಟ್ ಖಡಕ್ ವಾರ್ನಿಂಗ್

0

ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ವಿಚಾರದಲ್ಲಿ ಪೊಲೀಸರನ್ನು ಪ್ರಶ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದರೆ ಕೋರ್ಟ್ ಆದೇಶದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರನ್ನು ನಿಂದಿಸಿದ್ದಕ್ಕಾಗಿ ಪುನೀತ್ ಕೆರೆಹಳ್ಳಿಗೆ ನ್ಯಾಯಾಲಯ ತೀವ್ರ ಎಚ್ಚರಿಕೆ ನೀಡಿದೆ.

ಚನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ರದ್ದತಿಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ಪೊಲೀಸರ ನಡೆಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿ, ತಾತ್ಕಾಲಿಕ ತಡೆ ನೀಡಿತು.

ಆದರೆ ಇದೇ ವೇಳೆ, ನಿನ್ನೆ ಕೋರ್ಟ್ ತಡೆ ನೀಡಿದ ನಂತರ ಪುನೀತ್ ಕೆರೆಹಳ್ಳಿ ಫೇಸ್‌ಬುಕ್ ಮತ್ತು ರೀಲ್ಸ್ ಮೂಲಕ ಪೊಲೀಸರ ವಿರುದ್ಧ ಹೇಳಿಕೆ ನೀಡಿರುವುದನ್ನು ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ನ್ಯಾಯಾಲಯದ ಗಮನಕ್ಕೆ ತಂದರು.

ಈ ಬಗ್ಗೆ ಕಠಿಣವಾಗಿ ಪ್ರತಿಕ್ರಿಯಿಸಿದ ನ್ಯಾಯಾಲಯ, “ಸಬ್ ಜುಡೀಸ್ ಪ್ರಕರಣದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಸರಿಯಲ್ಲ. ರೀಲ್ಸ್, ಲೈಕ್‌ಗಳಿಗಾಗಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ”
ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ನ್ಯಾಯಾಲಯವು ಬಾಕಿ ಪ್ರಕರಣದ ಬಗ್ಗೆ ಯಾವುದೇ ಸಾಮಾಜಿಕ ಜಾಲತಾಣ ಪೋಸ್ಟ್ ಮಾಡದಂತೆ ಸೂಚಿಸಿ, ಡಿಸಿಪಿ ಮುಂದೆ ಹಾಜರಾಗಿ ಬಾಂಡ್ ಸಲ್ಲಿಸುವಂತೆ ಪುನೀತ್ ಕೆರೆಹಳ್ಳಿಗೆ ಆದೇಶ ನೀಡಿದೆ. ಅಕ್ರಮ ವಲಸಿಗರ ಬಗ್ಗೆ ಮಾತನಾಡುವುದೇ ತಪ್ಪಲ್ಲ, ಆದರೆ ಅದರ ಶೈಲಿ ಮತ್ತು ವಿಧಾನ ಕಾನೂನಿನ ಚೌಕಟ್ಟಿನಲ್ಲಿ ಇರಬೇಕು ಎಂದು ಹೈಕೋರ್ಟ್ ಸ್ಪಷ್ಟ ಸಂದೇಶ ನೀಡಿದೆ.

ಲಕ್ಕುಂಡಿ ನೆಲದೊಳಗೆ ಇತಿಹಾಸದ ನಿಧಿ?: ಪ್ರಾಮಾಣಿಕತೆಗೆ ರಿತ್ತಿ ಕುಟುಂಬಕ್ಕೆ ಶ್ಲಾಘನೆ, ಕೇಂದ್ರದಿಂದ ಸಹಾಯ ಭರವಸೆ

0

ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ್ ಮಹತ್ವದ ಹೇಳಿಕೆ ನೀಡಿ, ಐತಿಹಾಸಿಕ ಊರಿನ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತಮ್ಮ ಬದ್ಧತೆ ವ್ಯಕ್ತಪಡಿಸಿದ್ದಾರೆ. ಲಕ್ಕುಂಡಿ ಅನೇಕರ ರಾಜಧಾನಿಯಾಗಿದ್ದ ಕಾರಣ, ಭೂಮಿ ಅಗೆಯುವಾಗ ನಗ, ನಾಣ್ಯಗಳು ಹಾಗೂ ಪ್ರಾಚ್ಯಾವಶೇಷಗಳು ಸಿಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮಣ್ಣಿನ ಪದರಗಳಲ್ಲಿ ಸಿಗುವ ಆಧಾರಗಳ ಮೂಲಕ ಆಯಾ ಕಾಲಘಟ್ಟದ ಇತಿಹಾಸವನ್ನು ಗುರುತಿಸಬಹುದು. ಆದರೆ ಇಂದಿನ ಕಾಲದಲ್ಲಿ ಜನರು ನಿಧಿ ಹುಡುಕಿ ಕಳ್ಳತನ ಮಾಡುವ ಘಟನೆಗಳು ಹೆಚ್ಚಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು. ಇಂತಹ ಸಂದರ್ಭದಲ್ಲಿ ರಿತ್ತಿ ಕುಟುಂಬ ಪ್ರಾಮಾಣಿಕತೆಯಿಂದ ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿರುವುದು ಶ್ಲಾಘನೀಯ ಎಂದು ಗದ್ದಿಗೌಡರ್ ಅಭಿನಂದನೆ ಸಲ್ಲಿಸಿದರು.

ಕೇಂದ್ರ ಸರ್ಕಾರದ ವತಿಯಿಂದ ಹಾಗೂ ವೈಯಕ್ತಿಕವಾಗಿ ರಿತ್ತಿ ಕುಟುಂಬಕ್ಕೆ ಸಹಾಯ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು. ಲಕ್ಕುಂಡಿಯಂತಹ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ಲಭ್ಯವಾಗಲಿದೆ. ಸ್ಮಾರಕಗಳು ಹಾಳಾಗದಂತೆ ಕಾಯ್ದುಕೊಳ್ಳಲು ಹಾಗೂ ರಕ್ಷಣೆ ಮಾಡಲು ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಲಕ್ಕುಂಡಿ ನನ್ನ ಲೋಕಸಭಾ ಕ್ಷೇತ್ರದ ಅತ್ಯಂತ ಪ್ರಮುಖ ಹಳ್ಳಿ. ಈ ಊರಿನ ಬಗ್ಗೆ ನನಗೆ ವಿಶೇಷ ಗೌರವವಿದೆ. ಲಕ್ಕುಂಡಿಗೆ ವಿಶ್ವ ಪಾರಂಪರಿಕ ಸ್ಥಾನಮಾನ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇನೆ ಎಂದು ಸಂಸದರು ಹೇಳಿದರು.

ಈ ಸಂದರ್ಭದಲ್ಲೇ ಸ್ಥಳೀಯರು ಕೋಟೆ ವೀರಭದ್ರೇಶ್ವರ ದೇವರ ಜಾತ್ರೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮಾರ್ಚ್ 30 ಮತ್ತು 31ರಂದು ನಡೆಯುವ ಜಾತ್ರೆಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕಲ್ಲಂಗಡಿ ಲಾರಿಯಲ್ಲಿ ಸ್ಫೋಟಕಗಳ ಸಾಗಣೆ: ಪಾಲಕ್ಕಾಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆತಂಕ, ಚಾಲಕ ವಶಕ್ಕೆ

0

ಪಾಲಕ್ಕಾಡ್: ವಲಯಾರ್–ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಲಾರಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಕೇರಳ–ತಮಿಳುನಾಡು ಗಡಿಭಾಗದಲ್ಲಿ ಆತಂಕ ಸೃಷ್ಟಿಯಾಗಿದೆ. ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಾಪರಪಟ್ಟಿ ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬುಧವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಸಮೀಪದ ಸರ್ವೀಸ್ ರಸ್ತೆಯಲ್ಲಿ ಲಾರಿಯನ್ನು ತಪಾಸಣೆ ನಡೆಸಿದಾಗ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿದೆ. ಲಾರಿಯ ಮೇಲೆ ರಾಶಿಯಾಗಿ ತುಂಬಿದ್ದ ಕಲ್ಲಂಗಡಿ ಹಣ್ಣುಗಳನ್ನು ತೆರವುಗೊಳಿಸಿ ಪರಿಶೀಲಿಸಿದ ವೇಳೆ, 100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜಿಲೆಟಿನ್ ಸ್ಟಿಕ್‌ಗಳು ಹಾಗೂ ಡಿಟೋನೇಟರ್‌ಗಳು ಪತ್ತೆಯಾಗಿವೆ.

ಪ್ರಾಥಮಿಕ ವಿಚಾರಣೆಯಲ್ಲಿ ಈ ಸ್ಫೋಟಕಗಳನ್ನು ತ್ರಿಶೂರ್ಗೆ ಸಾಗಿಸಲಾಗುತ್ತಿತ್ತು ಎಂದು ಚಾಲಕ ಸೆಂಥಿಲ್ ಕುಮಾರ್ ತಿಳಿಸಿದ್ದಾನೆ. ಮಾಹಿತಿ ದೊರಕುತ್ತಿದ್ದಂತೆಯೇ ದಕ್ಷಿಣ ಪೊಲೀಸ್ ಇನ್ಸ್ಪೆಕ್ಟರ್ ವಿಪಿನ್ ಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದ್ದು, ಬಾಂಬ್ ನಿಷ್ಕ್ರಿಯ ದಳವನ್ನು ಕೂಡ ಸ್ಥಳಕ್ಕೆ ಕರೆಸಲಾಗಿದೆ.

ಚಾಲಕನ ವಿಚಾರಣೆ ಮುಂದುವರೆದಿದ್ದು, ಸ್ಫೋಟಕಗಳ ಮೂಲ, ಉದ್ದೇಶ ಹಾಗೂ ಇದಕ್ಕೆ ಸಂಬಂಧಿಸಿದ ಜಾಲದ ಬಗ್ಗೆ ಹೆಚ್ಚಿನ ಮಾಹಿತಿ ವಿಚಾರಣೆ ನಂತರವೇ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಕಳೆದ ವರ್ಷ ಪಾಲಕ್ಕಾಡ್ ಮತ್ತು ಕೊಯಮತ್ತೂರು ಪೊಲೀಸರು ತಮಿಳುನಾಡಿನಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ 40,000ಕ್ಕೂ ಹೆಚ್ಚು ಜಿಲೆಟಿನ್‌ಗಳು ಹಾಗೂ 5,000ಕ್ಕೂ ಹೆಚ್ಚು ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿದ್ದರು. ಇತ್ತೀಚಿನ ಘಟನೆ ಗಡಿ ಪ್ರದೇಶಗಳಲ್ಲಿ ಸ್ಫೋಟಕ ಕಳ್ಳಸಾಗಣೆ ಪ್ರಕರಣಗಳು ಮತ್ತೆ ತಲೆಎತ್ತುತ್ತಿರುವ ಆತಂಕವನ್ನು ಹೆಚ್ಚಿಸಿದೆ.

ಸಾಲದ ಬಾಧೆಯಿಂದ ಮನನೊಂದು ರೈತ ವಿಷ ಸೇವಿಸಿ ಆತ್ಮಹತ್ಯೆ..!

0

ಹಗರಿಬೊಮ್ಮನಹಳ್ಳಿ: ಸಾಲದ ಬಾಧೆಯಿಂದ ಮನನೊಂದು ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ನೆಲ್ಕುದ್ರಿ 2ನೇ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಎಸ್. ಶರೀಫ್ ವಲಿ (48) ಎಂದು ಗುರುತಿಸಲಾಗಿದೆ.

ಮೃತ ಶರೀಫ್ ವಲಿ ಸುಮಾರು 3 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದು, ನೀರಾವರಿ ನಿರೀಕ್ಷೆಯೊಂದಿಗೆ ಹತ್ತಾರು ಬೆಳೆಗಳನ್ನು ಬೆಳೆದಿದ್ದರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಪೂರೈಕೆಯಾಗದೇ, ಬೆಳೆದ ಬೆಳೆಗೆ ಸಮರ್ಪಕ ಬೆಲೆ ಸಿಗದ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು.

ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸದೆ ಅವರು ನಿರಂತರ ಚಿಂತೆಯಲ್ಲಿದ್ದರು. ಇದಲ್ಲದೆ, ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು 3 ಲಕ್ಷ ರೂ. ಸಾಲ ಹಾಗೂ ಕೈಗಡ ಸಾಲವೂ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಮನನೊಂದು ಬುಧವಾರ ಸಂಜೆ ತಮ್ಮದೇ ಹೊಲದಲ್ಲಿ ಶರೀಫ್ ವಲಿ ಕ್ರಿಮಿನಾಶಕ ಸೇವಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ತಕ್ಷಣ ಹಗರಿಬೊಮ್ಮನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ರು ಕೂಡ ಆಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಈ ಘಟನೆ ಇಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಜೈಲುಗಳಲ್ಲಿ ರಾಜಾತಿಥ್ಯಕ್ಕೆ ಬ್ರೇಕ್: ಸಿಬ್ಬಂದಿ ವರ್ಗಾವಣೆ ಮೂಲಕ ಅಕ್ರಮ ಜಾಲ ಮುರಿಯಲು ಡಿಜಿಪಿ ಅಲೋಕ್ ಕುಮಾರ್ ಪ್ಲಾನ್

0

ಬೆಂಗಳೂರು: ರಾಜ್ಯದ ಜೈಲುಗಳಲ್ಲಿ ಖೈದಿಗಳಿಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಹಾಗೂ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ವರ್ಷಾನುಗಟ್ಟಲೆ ಒಂದೇ ಜೈಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮೂಲಕ ಜೈಲು ವ್ಯವಸ್ಥೆಯನ್ನು ಶುದ್ಧೀಕರಿಸಲು ಇಲಾಖೆ ಮುಂದಾಗಿದೆ.

ಜೈಲು ಸಿಬ್ಬಂದಿ ಹಣ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮಕ್ಕೆ ಮುಂದಾಗಲಾಗಿದೆ. ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಬೆಳವಣಿಗೆಗಳು ಡಿಜಿಪಿ ಅಲೋಕ್ ಕುಮಾರ್ ಅವರ ಗಮನ ಸೆಳೆದಿವೆ.

ಇದೇ ತಿಂಗಳ 9ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಜೈಲು ಸಿಬ್ಬಂದಿಗೆ ಕೌನ್ಸೆಲಿಂಗ್ ನಡೆಸಿ, ಹಂತ ಹಂತವಾಗಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮುಹೂರ್ತ ನಿಗದಿಪಡಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವರ್ಷಗಳಿಂದ ಒಂದೇ ಕಡೆ ನಿಯೋಜನೆಗೊಂಡಿರುವ ಸಿಬ್ಬಂದಿಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ.

ಇನ್ನು ಬೇರೆ ಜೈಲುಗಳಿಂದ OOD (ಔಟ್ ಆಫ್ ಡಿಪ್ಯುಟೇಶನ್) ಮೇಲೆ ಬಂದಿರುವ ಅಧಿಕಾರಿಗಳಿಗೂ ವರ್ಗಾವಣೆಯ ಭೀತಿ ಎದುರಾಗುವ ಸಾಧ್ಯತೆ ಇದೆ. ಸಿಬ್ಬಂದಿಗಳನ್ನು ನಿಯಮಿತವಾಗಿ ಬದಲಾವಣೆ ಮಾಡುವುದರಿಂದ ಜೈಲುಗಳ ಒಳಗಿನ ಅಕ್ರಮ ಜಾಲವನ್ನು ಮುರಿಯಬಹುದು ಹಾಗೂ ಶಿಸ್ತಿನ ಆಡಳಿತ ವ್ಯವಸ್ಥೆ ಜಾರಿಗೊಳಿಸಬಹುದು ಎಂಬುದು ಡಿಜಿಪಿ ಅವರ ಉದ್ದೇಶವಾಗಿದೆ.

ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ನಂತರ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗುತ್ತಿದ್ದು, ಈ ಸರಣಿ ವರ್ಗಾವಣೆಗಳು ಜೈಲು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ನಿರೀಕ್ಷೆ ಮೂಡಿಸಿದೆ.

Bomb Threat: ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ!

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಹುಸಿ ಬಾಂಬ್ ಬೆದರಿಕೆ ಪ್ರಕರಣ ಬೆಳಕಿಗೆ ಬಂದಿದೆ. ಹಲಸೂರು ಪ್ರದೇಶದಲ್ಲಿರುವ ಇಟಲಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿರುವುದು ಪತ್ತೆಯಾಗಿದೆ.

ಜನವರಿ 30ರಂದು ಈ ಬೆದರಿಕೆ ಇ-ಮೇಲ್ ಬಂದಿದ್ದು, ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇ-ಮೇಲ್‌ನಲ್ಲಿ 5 ಆರ್ಡಿಎಕ್ಸ್ ಬಾಂಬ್ ಸ್ಫೋಟ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಇಟಾಲಿಯನ್ ಕಾನ್ಸುಲೇಟಿನ ಸೆಕ್ಯೂರಿಟಿ ಮ್ಯಾನೇಜರ್ ಜಿಯೋಡೊಮೆನಿಕ್ ಒ ಮಿಲಾನೋ ಅವರು ಹಲಸೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ರಾಯಭಾರಿ ಕಚೇರಿಯ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು, ಇ-ಮೇಲ್ ಕಳುಹಿಸಿದವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕೆ.ಆರ್. ನಗರ ಮಹಿಳೆ ಅಪಹರಣ ಕೇಸ್: ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಬಿಗ್ ಶಾಕ್

0

ಬೆಂಗಳೂರು: ಕೆ.ಆರ್. ನಗರ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣಗೆ ಹೈಕೋರ್ಟ್ ಶಾಕ್‌ ಕೊಟ್ಟಿದೆ. ಪ್ರಕರಣ ರದ್ದುಪಡಿಸುವಂತೆ ಸಲ್ಲಿಸಿದ್ದ ಹೆಚ್.ಡಿ.ರೇವಣ್ಣ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶ ಹೊರಡಿಸಿದೆ.

ವಿಚಾರಣೆ ವೇಳೆ ಹೆಚ್.ಡಿ.ರೇವಣ್ಣ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ತೊಡಗಿಸಿಕೊಂಡಿರುವ ಕಾರಣವನ್ನು ಉಲ್ಲೇಖಿಸಿ ಮನವಿ ಸಲ್ಲಿಸಲಾಯಿತು. ಆದರೆ, ಈ ಮನವಿಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಈ ಹಿನ್ನೆಲೆಯಲ್ಲಿ, ಹೆಚ್.ಡಿ.ರೇವಣ್ಣ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.ಈ ಆದೇಶದಿಂದಾಗಿ ಕೆ.ಆರ್. ನಗರ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ  ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಒಡಿಶಾದಲ್ಲಿ ಹಳಿ ತಪ್ಪಿದ ಚೆನ್ನೈ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲು! ತಪ್ಪಿದ ಅನಾಹುತ

0

ಒಡಿಶಾ: ಒಡಿಶಾದ ಜಾಜ್‌ಪುರ ಜಿಲ್ಲೆಯ ಜಖಾಪುರ ರೈಲು ನಿಲ್ದಾಣದ ಸಮೀಪ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ಭುವನೇಶ್ವರದಿಂದ ಕೋಲ್ಕತ್ತಾಗೆ ತೆರಳುತ್ತಿದ್ದ ಈ ರೈಲಿನ ಮೂರು ಬೋಗಿಗಳು ಹಳಿ ತಪ್ಪಿವೆ.

ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಭದ್ರಕ್‌ನಿಂದ ರಕ್ಷಣಾ ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳು ಸ್ಥಳದಲ್ಲೇ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯಗಳು ಸಂಭವಿಸಿಲ್ಲ ಎಂದು ದೃಢಪಡಿಸಿದ್ದಾರೆ. ಜೊತೆಗೆ, ಬೋಗಿಗಳಿಗೆ ಕೂಡ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಘಟನೆಯ ಬಳಿಕ ಹಾನಿಗೊಳಗಾದ ರೈಲು ಮಾರ್ಗದಲ್ಲಿ ಮರುಸ್ಥಾಪನಾ ಕಾರ್ಯವನ್ನು ಆರಂಭಿಸಲಾಗಿದ್ದು, ಹಳಿಗಳನ್ನು ತೆರವುಗೊಳಿಸಿ ರೈಲು ಸಂಚಾರವನ್ನು ಶೀಘ್ರ ಪುನರಾರಂಭಿಸಲು ಎಂಜಿನಿಯರಿಂಗ್ ತಂಡಗಳನ್ನು ನಿಯೋಜಿಸಲಾಗಿದೆ. ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ರೈಲು ಹಳಿ ತಪ್ಪಲು ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಮರುಸ್ಥಾಪನಾ ಕಾರ್ಯಗಳು ಪೂರ್ಣಗೊಂಡು ಸಂಚಾರ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ, ಈ ಕುರಿತು ವಿವರವಾದ ತನಿಖೆ ನಡೆಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

error: Content is protected !!