Home Blog Page 244

ದೊಡ್ಡಬಳ್ಳಾಪುರ| ಶೋಭಾಯಾತ್ರೆ ವೇಳೆ ಮನೆ ಬಳಿ ಬಿದ್ದ ಅಪರಿಚಿತ ಡ್ರೋನ್; ಸ್ಥಳೀಯರಲ್ಲಿ ಆತಂಕ!

0

ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ ನಗರದ ಪಾಲನಜೋಗಹಳ್ಳಿ ಪ್ರದೇಶದಲ್ಲಿ ಮನೆ ಬಳಿ ಅಪರಿಚಿತ ಡ್ರೋನ್ ಬಿದ್ದು ಸ್ಥಳೀಯರಲ್ಲಿ ಭಯ ಮೂಡಿಸಿದೆ.

ಈ ಘಟನೆ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಯ ಸಮಯದಲ್ಲಿ ಸಂಭವಿಸಿತು. ಹಾರುತ್ತಿದ್ದ ಡ್ರೋನ್ ನೋಡಿದ ಸ್ಥಳೀಯರು ಮತ್ತು ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದರು. ಡ್ರೋನ್‌ನಲ್ಲಿ ಬ್ಯಾಟರಿ ಹಾಗೂ ಎಲೆಕ್ಟ್ರಿಕ್ ವೈರ್‌ಗಳಂತಹ ಸಾಮಗ್ರಿಗಳು ಕಂಡುಬಂದಿದ್ದವು. ಸ್ಫೋಟಕ ಹೊಂದಿರುವ ಸಂಭವನೆ ಬಗ್ಗೆ ಆತಂಕ ವ್ಯಕ್ತಪಡಿಸಿ, ಪೊಲೀಸ್‌ ಏಕ್ಸಪರ್ಟ್ ತಂಡ ಸ್ಥಳಕ್ಕೆ ತೆರಳಿ ಎರಡು–ಮೂರು ಗಂಟೆಗಳ ಪರಿಶೀಲನೆ ನಡೆಸಿತು.

ಪರಿಶೀಲನೆಯ ನಂತರ ಡ್ರೋನ್ ವಶಕ್ಕೆ ತೆಗೆದುಕೊಳ್ಳಲ್ಪಟ್ಟಿದ್ದು, ಪೊಲೀಸರು ಅದನ್ನು ಸುರಕ್ಷಿತವಾಗಿ ಸ್ಥಳದಿಂದ ಕಳಿಸಿದ್ದಾರೆ. ಡ್ರೋನ್ ಎಲ್ಲಿಂದ ಬಂದದ್ದು ಮತ್ತು ಅದರ ಉದ್ದೇಶವೇನು ಎಂಬ ವಿಚಾರದಲ್ಲಿ ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

‘ಸಾಧನೆಯ ಮೌನ ಶಿಲ್ಪಿ’ ಗ್ರಂಥ ಲೋಕಾರ್ಪಣೆ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಯಲ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಂಸ್ಥಾಪಕರಾದ ದಿವಂಗತ ಎಂ.ಎಂ. ಢಾಲಾಯತ ಗುರುಗಳ ಜೀವನಗಾಥೆ ಕುರಿತಂತೆ ಅವರ ಕೌಟುಂಬಿಕ ಹಿನ್ನೆಲೆ, ಬಾಲ್ಯಜೀವನ, ವಿದ್ಯಾಭ್ಯಾಸ, ವೃತ್ತಿ ಜೀವನ, ಶಿಕ್ಷಕರ ವೃತ್ತಿ ಆರಂಭ, ಎಂ.ಎಂ ಢಾಲಾಯತ ಗುರುಗಳು ಜನರಿಗೆ ನೀಡಿದ ಆರ್ಥಿಕ ನೆರವು ಹಾಗೂ ಸಮಾಜಸೇವೆಯನ್ನು ಒಳಗೊಂಡ ಒಂದು ಅದ್ಭುತ ಸಾರ್ಥಕ ಜೀವನದ ಕಥೆಯನ್ನು ಒಳಗೊಂಡ ‘ಸಾಧನೆಯ ಮೌನ ಶಿಲ್ಪಿ’ ಪುಸ್ತಕವನ್ನು ಡಿ.ಎಸ್.ಪಿ ಮುರ್ತುಜಾ ಖಾದ್ರಿ ಲೋಕಾರ್ಪಣೆಗೊಳಿಸಿದರು.

ಪುಸ್ತಕ ಬಿಡುಗಡೆ ಮಾಡುವ ಸಮಾರಂಭವನ್ನು ಸಹಶಿಕ್ಷಕ ಎಸ್.ವಿ. ಅಂಗಡಿ ನಡೆಸಿಕೊಟ್ಟರು. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾದ ಡಾ. ಪರಶುರಾಮ ಗುಡಿಮನಿ, ಶಾಲೆಯ ಅಧ್ಯಕ್ಷರಾದ ಎ.ಎಂ. ಢಾಲಾಯತ, ಮುಖ್ಯೋಪಾಧ್ಯಾಯ ಎಸ್.ಎಸ್. ಕುಂಬಾರ, ಸಹ ಶಿಕ್ಷಕರಾದ ಸಿ.ಎಚ್. ಕೊಪ್ಪಳ, ಸಹ ಶಿಕ್ಷಕರಾದ ಎಂ.ವಿ. ಫಿರಂಗಿ, ಸಾಹಿರಾಬಾನು ಢಾಲಾಯತ, ಮಮತಾಜ ಬೇಗಂ ಢಾಲಾಯತ, ಮಂಜುಳಾ ಉಮಚಗಿ, ಜಾಫರ ಖಾಜಿ, ಜೆ.ಜೆ. ಡಂಬಳ, ಕರೀಮ ಸುಣಗಾರ ಉಪಸ್ಥಿತರಿದ್ದರು.

ಪ್ರತಿಯೊಬ್ಬರಿಗೂ ಕಾನೂನು ಅರಿವು ಮುಖ್ಯ: ನಾಗವೇಣಿ

0

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯಾದ್ಯಂತ 240ಕ್ಕೂ ಹೆಚ್ಚು ಅರೆ ಕಾನೂನು ಸ್ವಯಂ ಸೇವಕರು ನೇಮಕಗೊಂಡಿದ್ದಾರೆ. ಪ್ರತಿಯೊಬ್ಬರಿಗೂ ಕಾನೂನು ಅರಿವು ಮುಖ್ಯವಾಗಿದೆ. ಸಮಾಜಕ್ಕಾಗಿ ದುಡಿಯಲು, ಮನೆ-ಮನೆಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಲು ಸ್ವಯಂ ಸೇವಕರು ಸಿದ್ಧರಿದ್ದಾರೆ. ಅವರು ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗಳನ್ನು ಆಲಿಸಬೇಕು. ಇದರಿಂದ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಸಹ ಈ ಮೂಲಕ ಮರಳಿ ಶಾಲೆಗೆ ಸೇರಿಸಬಹುದು. ಗದಗ ಜಿಲ್ಲೆಯನ್ನು ಸಮಸ್ಯೆ ಮುಕ್ತ ಮಾಡಲು ಶ್ರಮಿಸೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನಾಗವೇಣಿ ಹೇಳಿದರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಎ.ಡಿ.ಆರ್ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾ ವಕೀಲರ ಸಂಘ ಹಾಗೂ ಡೀಡ್ಸ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅರೆ ಕಾನೂನು ಸ್ವಯಂ ಸೇವಕರಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಮ್.ಎ. ಸಂಕನಾಳ ಮಾತನಾಡಿ, ಕಾನೂನು ತಿಳುವಳಿಕೆ ಪ್ರತಿಯೊಬ್ಬ ನಾಗರಿಕನ ಮುಖ್ಯ ಉದ್ದೇಶವಾಗಿದೆ. ಆತ್ಮರಕ್ಷಣೆಗಾಗಿ ಕಾನೂನಿನ ಅವಶ್ಯಕತೆ ಇದೆ. ಕಾನೂನು ಕಾರ್ಯಾಗಾರಗಳಿಂದ ಉತ್ತಮ ಸಮಾಜ ನಿರ್ಮಿಸಲು ಸಹಾಯವಾಗುತ್ತದೆ ಎಂದರು.

ಮಹಿಳಾ ಸ್ವಯಂ ಸೇವಕರಾದ ರೂಪಾ ಹಾಗೂ ನಿರ್ಮಲಾ ಪ್ರಾರ್ಥನಾ ಗೀತೆ ಹಾಡಿದರು. ಎ.ಎಸ್. ಮಕಾನಾದಾರ ಸ್ವಾಗತಿಸಿದರು. ಫಕ್ಕೀರಮ್ಮ ಲಕ್ಕುಂಡಿ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಜಿ.ಸಿ. ರೇಷ್ಮಿ, ಡೀಡ್ಸ್ ಯೋಜನಾ ಸಂಯೋಜಕರಾದ ತುಕಾರಾಮ್ ಎಕ್ಕಾರು, ಮುಖ್ಯ ಕಾನೂನು ನೆರವು ಅಭಿರಕ್ಷಕರಾದ ಎಸ್.ವ್ಹಿ. ಗ್ರಾಮಪುರೋಹಿತ ಹಾಗೂ ಸಹಾಯಕ ಕಾನೂನು ನೆರವು ಅಭಿರಕ್ಷಕ ಗುರುರಾಜ ಬಿ.ಗೌರಿ ಉಪಸ್ಥಿತರಿದ್ದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು ಎನ್ನುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸಮಾಜದ ಎಲ್ಲ ವಿಭಾಗಗಳಿಂದ ಸ್ವಯಂ ಸೇವಕರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದ ಉತ್ತಮ ಸಮಾಜ ನಿರ್ಮಿಸುವಲ್ಲಿ ಸಹಾಯವಾಗುತ್ತದೆ.
-ಜಿ.ಆರ್. ಶೆಟ್ಟರ್.
ಸಿ.ಜೆ.ಎಮ್ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು.

ಫೆ. 1ರಂದು ಸಂಗಮೇಶ್ವರ ಆಸ್ಪತ್ರೆ ಉದ್ಘಾಟನೆ

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಹೊಸ ಬಸ್ ನಿಲ್ದಾಣ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗದಗ ಜಿಲ್ಲೆಯ ಪರಿಸರದಲ್ಲಿಯೇ ಬಹುದೊಡ್ಡ ಹಾಗೂ 100 ಹಾಸಿಗೆಯ ‘ಶ್ರೀ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯ ನೂತನ ಕಟ್ಟಡದ ಉದ್ಘಾಟನೆ ಫೆ. 1ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ ಎಂದು ಡಾ. ಪ್ರಶಾಂತ ಧನ್ನೂರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ಗುಂಟೆ ಜಾಗೆಯಲ್ಲಿ 45 ಸಾವಿರ ಚ.ಅಡಿಯಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, ಒಪಿಡಿ ಜತೆಗೆ ಹೈಟೆಕ್ ಹೆರಿಗೆ ಕೊಠಡಿ, ಹೈಟೆಕ್ ಮಾಡ್ಯೂಲರ್ ಆಪರೇಷನ್ ಥೇಟರ್, ಐಸಿಯು, ಎನ್‌ಐಸಿಯು, 247 ತುರ್ತು ಚಿಕಿತ್ಸೆ ಕೊಠಡಿ, ಐಯುಐ ಪ್ರಯೋಗಾಲಯ, ಅಲ್ಟ್ರಾ ಸನೋಗ್ರಫಿ, 247 ಅಂಬ್ಯುಲೆನ್ಸ್ ಸೇವೆ, ಕಿಡ್ನಿ ಸ್ಟೋನ್, ಪೈಲ್ಸ್, ಪಿಸ್ಟೂಲಾ ಹಾಗೂ ವೆರಿಕೋಸ್ ವೇದನೆಗೆ ಲೇಸರ್ ಚಿಕಿತ್ಸೆ, ಲ್ಯಾಪ್ರೋಸ್ಕೋಪಿ, ಹಿಸ್ಟ್ರೋಸ್ಕೋಪಿ, ಎಂಡೋಸ್ಕೋಪಿ, ಡಯಾಲಿಸಿಸ್, ಫೋಟೊಥೆರಪಿ, 2ಡಿ ಇಕೋ, ಯುರೋಪ್ಲೊಮೇಟ್ರಿಯಂತಹ ಸೌಲಭ್ಯಗಳು ಇಲ್ಲಿ ಸಿಗಲಿವೆ ಎಂದು ವಿವರಿಸಿದರು.

ವಿವಿಧ 19ಕ್ಕೂ ಅಧಿಕ ಪರಿಣಿತ ಹಾಗೂ ವಿಶೇಷಜ್ಞರಾಗಿರುವ ವೈದ್ಯರ ಸೇವೆ ಇಲ್ಲಿ ಕಾಲಕಾಲಕ್ಕೆ ಸಿಗಲಿದೆ. ಅಲ್ಲದೇ, ಜಿಲ್ಲೆಯ ಜನತೆ ಅಗತ್ಯವಿದ್ದಾಗ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಹೋಗುವ ಅನಿವಾರ್ಯತೆಯಿತ್ತು. ಆದರೆ, ಪ್ರಸ್ತುತ ಈ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಧುನಿಕ ಚಿಕಿತ್ಸೆ ಸೌಲಭ್ಯದ ಮೂಲಕ ಆ ಕೊರತೆಯನ್ನು ನೀಗಿಸಿ, ಇಲ್ಲಿಯೇ ಚಿಕಿತ್ಸೆ, ವೈದ್ಯಕೀಯ ಸೇವೆ ಸಿಗಲಿದೆ ಎಂದು ಹೇಳಿದರು.

ಡಂಬಳ-ಗದಗ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಜ. ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ಕೂಲಡಸಂಗಮ ಪಂಚಮಸಾಲಿ ಪೀಠದ ಜ. ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹಾಲಕೆರೆ-ಹೊಸಪೇಡೆ-ಬಳ್ಳಾರಿ ಅನ್ನದಾನೇಶ್ವರ ಸಂಸ್ಥಾನಮಠದ ಜ. ಮುಪ್ಪಿನಬಸವಲಿಂಗ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಜ. ವಚನಾನಂದ ಸ್ವಾಮೀಜಿ, ನರೇಗಲ್ಲ ಹಿರೇಮಠ-ಸವದತ್ತಿ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಗವಿಮಠ ಸಂಸ್ಥಾನದ ಜ. ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಡೋಣಿ-ಗದಗ ಕಪ್ಪತ್ತಗುಡ್ಡ ನಂದಿವೇರಿ ಸಂಸ್ಥಾನಮಠದ ಶ್ರೀ ಶಿವಕುಮಾರ ಸ್ವಾಮೀಜಿ, ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಅಬ್ಬಿಗೇರಿ ಹಿರೇಮಠ-ತುಮಕೂರು ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯರು, ಗದಗನ ಸದ್ಗುರು ಮುಕ್ಕಣ್ಣೇಶ್ವರ ಮಠದ ಶ್ರೀ ಶಂಕರಾನಂದ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸುವರು.

ಬಾಗಲಕೋಟ ಕ್ಷೇತ್ರದ ಮಾಜಿ ಸಂಸದರಾದ ಆರ್.ಎಸ್. ಪಾಟೀಲರ ಅಧ್ಯಕ್ಷತೆಯಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರು ನೂತನ ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸುವರು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಕೆ.ಬಿ. ಧನ್ನೂರ, ಡಾ. ಅನ್ನಪೂರ್ಣ ಪಿ. ಧನ್ನೂರ, ಪತ್ರಕರ್ತ ಅರುಣ ಕುಲಕರ್ಣಿ ಉಪಸ್ಥಿತರಿದ್ದರು.

ಬಾಕ್ಸ್
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಕರ್ನಾಟಕ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರೋಣ ಶಾಸಕ ಜಿ.ಎಸ್. ಪಾಟೀಲ, ಎಸ್.ಜಿ. ನಂಜಯ್ಯನಮಠ, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ, ನರಗುಂದ ಶಾಸಕ ಸಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಇತರರು ಆಗಮಿಸಲಿದ್ದಾರೆ ಎಂದು ಡಾ. ಪ್ರಶಾಂತ ಧನ್ನೂರ ವಿವರಿಸಿದರು.

ಬಳ್ಳಾರಿ ನಗರದಲ್ಲಿ ಕಾನೂನು ಶಾಂತಿ ಹದಗೆಟ್ಟಿದೆ; ಕ್ರಮಕ್ಕೆ ಜನಾರ್ದನ ರೆಡ್ಡಿ ಆಗ್ರಹ

0

ಬಳ್ಳಾರಿ/ಬೆಂಗಳೂರು: ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಶಾಸಕ ಜನಾರ್ದನ ರೆಡ್ಡಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಅವರು ಬಳ್ಳಾರಿ ಫೈರಿಂಗ್ ಪ್ರಕರಣವನ್ನು ತಮ್ಮ ಮುಂದಿನ ಹೋರಾಟದಲ್ಲಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಗರದ ಹಲವು ವಾರ್ಡ್‌ಗಳಲ್ಲಿ ಯುವಕರು ಗ್ಯಾಂಗ್‌ಸ್ಟರ್ ತಂತ್ರದಲ್ಲಿ ನಡೆಯುತ್ತಿದ್ದಾರೆ. ಅಕ್ರಮ ಹಣ ಲಾಭಕ್ಕಾಗಿ ಹೋರಾಟ ನಡೆಸುತ್ತಿರುವುದು ಆತಂಕಕಾರಿ. ಪ್ರಮುಖವಾಗಿ, ಬಿಜೆಪಿ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಗಿದ್ದು, ಖಾಸಗಿ ಗನ್‌ಮ್ಯಾನ್‌ಗಳ ಕಾರ್ಯ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ, ಶಾಸಕರು ಸಿಬಿಐ ತನಿಖೆ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ. “ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟವನ್ನು ಮುಂದುವರಿಸುವುದು ಖಚಿತ.
ಬಳ್ಳಾರಿಯಲ್ಲಿ ಶಾಂತಿ, ಕಾನೂನು ಪಾಲನೆ ಮತ್ತು ತ್ವರಿತ ಅಭಿವೃದ್ಧಿಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯುವ ಗ್ಯಾಂಗ್‌ಸ್ಟರ್‌ಗಳ ಚಟುವಟಿಕೆಗಳನ್ನು ತಡೆಯಬೇಕು ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ರಸ್ತೆಯಲ್ಲಿ ಅಪಾಯಕಾರಿ ಬೈಕ್ ರೈಡ್; ವಿದೇಶಿಗನ ವಿಡಿಯೋ ವೈರಲ್

0

ಬೆಂಗಳೂರು: ನಗರ ರಸ್ತೆಯಲ್ಲಿ ವಿದೇಶಿಗನೊಬ್ಬ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಬೈಕ್ ಸವಾರಿ ನಡೆಸಿರುವ ದೃಶ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ತಲೆಗೆ ಹೆಡ್‌ಫೋನ್ ಧರಿಸಿ, ಕೈಯಲ್ಲಿ ಸಿಗರೇಟ್ ಹಿಡಿದು ಯಾವುದೇ ಭಯವಿಲ್ಲದೆ ಬೈಕ್ ಚಲಾಯಿಸುತ್ತಿದ್ದ ಈ ವ್ಯಕ್ತಿ KA 42 EE 1361 ನೋಂದಣಿ ಸಂಖ್ಯೆಯ ಬೈಕ್ ಅನ್ನು ಓಡಿಸುತ್ತಿದ್ದಾನೆ. ಈ ಘಟನೆ ಸಿಲ್ಕ್ ಬೋರ್ಡ್ ಡಬಲ್ ಡೆಕ್ಕರ್ ಫ್ಲೈಓವರ್ ಬಳಿ ನಡೆದಿದೆ.

ಹಿಂಬದಿಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಈ ಅಪಾಯಕಾರಿ ಸವಾರಿ ವಿಡಿಯೋ ಮಾಡಿದ್ದು, ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರು ಟಾಫಿಕ್ ನಿಯಮ ಉಲ್ಲಂಘನೆಗೆ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬೆಂಗಳೂರಿನ ರಸ್ತೆ ಸುರಕ್ಷತೆ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಬೀದಿಗಳನ್ನ ಮಾಫಿಯಾ ರೂಲ್ ಮಾಡ್ತಿದ್ಯಾ? ಹೌದು ಅಂತಿದೆ ಈ ಕಾರಿನ ಬರಹ!

0

ಬೆಂಗಳೂರು: ಬೆಂಗಳೂರಿನಲ್ಲಿ ಕಾರಿನ ಹಿಂಭಾಗದಲ್ಲಿ ಬೆದರಿಕೆಯ ಬರಹ ಬರೆದಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

KA03 AN 6207 ನೋಂದಣಿ ಸಂಖ್ಯೆಯ ಕಾರಿನ ಹಿಂಭಾಗದಲ್ಲಿ “This vehicle belongs to mafia. If you touch this, we touch you” ಎಂಬ ಇಂಗ್ಲಿಷ್ ಭಾಷೆಯ ಬೆದರಿಕೆ ಸಾಲುಗಳನ್ನು ಬರೆಯಲಾಗಿದೆ. ಅಂದರೆ, “ಈ ಕಾರು ಮಾಫಿಯಾಗೆ ಸೇರಿದ್ದು, ಇದನ್ನು ಸ್ಪರ್ಶಿಸಿದರೆ ನಾವು ನಿಮ್ಮನ್ನು ಸ್ಪರ್ಶಿಸುತ್ತೇವೆ” ಎಂಬ ಅರ್ಥದ ಸಂದೇಶ ಇದಾಗಿದೆ.

ಈ ಕಾರಿನ ಫೋಟೋವನ್ನು ‘X Responsibility’ ಎಂಬ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, “ಬೆಂಗಳೂರಿನ ಬೀದಿಗಳನ್ನು ಮಾಫಿಯಾ ಆಳುತ್ತಿದೆಯೇ?” ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಈ ವಿಷಯ ವೈರಲ್ ಆಗುತ್ತಿದ್ದಂತೆ ನಗರ ಪೊಲೀಸರು ತಕ್ಷಣ ಸ್ಪಂದಿಸಿದ್ದು, ಕಾರು ಕಂಡುಬಂದ ಸ್ಥಳದ ಕುರಿತು ಸಾರ್ವಜನಿಕರಿಂದ ಮಾಹಿತಿ ಕೋರಿದ್ದಾರೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ, ಕಾರಿನ ಮಾಲೀಕ ಹಾಗೂ ಬರಹ ಬರೆದ ವ್ಯಕ್ತಿಯ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪದೇಪದೇ ಆರೋಪ ಮಾಡುವುದು ಸರಿಯಲ್ಲ – ಗುತ್ತಿಗೆದಾರರ ಸಂಘದ ವಿರುದ್ಧ ಸಚಿವ ಬೈರತಿ ಸುರೇಶ್ ಆಕ್ರೋಶ!

0

ಬೆಂಗಳೂರು: ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರು ಮಾಡಿರುವ ಆರೋಪಗಳಿಗೆ ನಗರಾಭಿವೃದ್ಧಿ ಹಾಗೂ ನಗರ ಯೋಜನಾ ಸಚಿವ ಬೈರತಿ ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಸಾಕ್ಷ್ಯಾಧಾರವಿಲ್ಲದೆ ಗಾಳಿಯಲ್ಲಿ ಗುಂಡು ಹಾರಿಸುವಂತೆ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಖಂಡಿಸಿದರು. ಈ ಕುರಿತು ನಗರದಲ್ಲಿ ಮಾತನಾಡಿದ ಸಚಿವರು, ಯಾವುದೇ ಕಾಮಗಾರಿಯ ಗುತ್ತಿಗೆ ನೀಡುವ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ ಇರುವುದಿಲ್ಲ. ಪಾರದರ್ಶಕ ಕಾಯ್ದೆಯಡಿ ಸಂಪೂರ್ಣವಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಟೆಂಡರ್ ನೀಡುವ ಪ್ರಕ್ರಿಯೆಯಲ್ಲಿ ಮಂತ್ರಿಗಳು ಭಾಗಿಯಾಗುವುದಿಲ್ಲ. ಅರ್ಹ ಗುತ್ತಿಗೆದಾರರನ್ನು ಅಧಿಕಾರಿಗಳ ತಂಡವೇ ಅಂತಿಮಗೊಳಿಸುತ್ತದೆ ಎಂದು ಹೇಳಿದರು. ಟೆಂಡರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಅವರಿಗೆ ಚೆನ್ನಾಗಿ ತಿಳಿದಿದೆ. ಆದರೂ ಪದೇಪದೇ ಮಂತ್ರಿಗಳ ವಿರುದ್ಧ ವಿನಾಕಾರಣ ಆರೋಪಗಳನ್ನು ಮಾಡುತ್ತಿರುವುದು ಖಂಡನೀಯ ಎಂದು ಬೈರತಿ ಸುರೇಶ್ ಕಿಡಿಕಾರಿದರು.

ದಿನಂಪ್ರತಿ ಈ ರೀತಿಯ ಆರೋಪಗಳನ್ನು ಮಾಡುತ್ತಾ ಬಂದರೆ ಇಲಾಖೆಗಳ ಕಾರ್ಯನಿರ್ವಹಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳಿದ್ದರೆ ಸಾರ್ವಜನಿಕವಾಗಿ ಒದಗಿಸಲಿ ಎಂದು ಸವಾಲು ಹಾಕಿದ ಸಚಿವರು, ವಿನಾಕಾರಣ ಆರೋಪಗಳ ಮೂಲಕ ಸಾರ್ವಜನಿಕ ಜೀವನದಲ್ಲಿರುವವರ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.

ಇನ್ನೂ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ಮಾಡುವ ಕುರಿತು ಮಂಜುನಾಥ್ ಅವರು ನನ್ನ ಬಳಿ ಮನವಿ ಮಾಡಿದ್ದರು ಎಂದು ಸಚಿವರು ನೆನಪಿಸಿದರು. ಹಣಕಾಸು ಇಲಾಖೆಯ ಅನುಮೋದನೆ ಪಡೆದು ಹಂತಹಂತವಾಗಿ ಬಾಕಿ ಇರುವ ಸುಮಾರು 200 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವ ಭರವಸೆ ನೀಡಲಾಗಿತ್ತು ಎಂದು ಅವರು ತಿಳಿಸಿದರು.

ಆಯಾಸ, ಒತ್ತಡವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ಈ ಅಭ್ಯಾಸಗಳನ್ನು ಪಾಲಿಸಿ!

0

ಇಂದಿನ ವೇಗದ ಜೀವನಶೈಲಿಯಲ್ಲಿ ದೇಹಕ್ಕೆ ತಕ್ಕಷ್ಟು ವಿಶ್ರಾಂತಿ ದೊರಕುವುದು ಕಷ್ಟವಾಗುತ್ತದೆ, ಮತ್ತು ನಿದ್ರೆಯ ಕೊರತೆಯಿಂದ ಆಯಾಸ ಮತ್ತು ಒತ್ತಡ ಹೆಚ್ಚಾಗುತ್ತವೆ.

ಆದರೆ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಉತ್ತಮ ನಿದ್ರೆ ಪಡೆಯಬಹುದು. ರಾತ್ರಿ ಮಲಗುವ ಮುನ್ನ ಸ್ನಾನ ಮಾಡುವುದರಿಂದ ದೇಹ ತಾಜಾವಾಗುತ್ತದೆ ಮತ್ತು ಚರ್ಮದ ರಂಧ್ರಗಳು ಸ್ವಚ್ಛಗೊಳ್ಳುತ್ತವೆ, ಆಯಾಸ ಕಡಿಮೆಯಾಗುತ್ತದೆ. ನಿದ್ರೆಗೆ ಮುಂಚೆ ಸಾಕಷ್ಟು ನೀರು ಕುಡಿಯುವುದು ದೇಹದ ನೀರಿನ ಸಮತೋಲನವನ್ನು ಕಾಪಾಡುತ್ತದೆ ಮತ್ತು ಆಯಾಸ ತಪ್ಪಿಸುತ್ತದೆ.

ಚಹಾ, ಕಾಫಿ ಮುಂತಾದ ಕ್ಯಾಫೈನ್ ಸೇವನೆಯಿಂದ ದೂರವಿರುವುದು ನಿದ್ರೆಗೆ ಸಹಾಯ ಮಾಡುತ್ತದೆ. ರಾತ್ರಿಯ ಊಟದ ನಂತರ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವುದು ದೇಹದ ಶಕ್ತಿಯನ್ನು ಸಮತೋಲಕ್ಕೆ ತರುತ್ತದೆ. ಮೊಬೈಲ್, ಟಿವಿ, ಲ್ಯಾಪ್‌ಟಾಪ್ ಬಳಕೆಯಿಂದ ದೂರವಿರುವುದರಿಂದ ನೀಲಿ ಬೆಳಕು ನಿದ್ರೆಯನ್ನು ವ್ಯತ್ಯಯಗೊಳಿಸುವುದನ್ನು ತಡೆಯಬಹುದು. ಬದಲಾಗಿ ಪುಸ್ತಕ ಓದುವುದು ಅಥವಾ ಶಾಂತ ಸಂಗೀತ ಕೇಳುವುದು ಶಿಫಾರಸು ಮಾಡಲ್ಪಡುತ್ತದೆ. ಮಲಗುವ ಮುನ್ನ ಧ್ಯಾನ ಅಥವಾ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಶಾಂತವಾಗುತ್ತವೆ.

ಪಾದಗಳಿಗೆ ಮಸಾಜ್ ಮಾಡುವುದರಿಂದ ನರಗಳು ಸಡಿಲವಾಗುತ್ತವೆ. ಈ ಎಲ್ಲಾ ಅಭ್ಯಾಸಗಳನ್ನು ಪಾಲಿಸುವುದರಿಂದ ಆಯಾಸ ನಿವಾರಣೆ ಮತ್ತು ಆಳವಾದ, ಗುಣಮಟ್ಟದ ನಿದ್ರೆ ಪಡೆಯಬಹುದು.

ಸೂರ್ಯ ನಮಸ್ಕಾರ ಸಾಧನೆಯಿಂದ ಆರೋಗ್ಯ ಭಾಗ್ಯ: ಡಾ. ಎಂ.ವಿ. ಐಹೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಗದಗ: ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಆಸ್ತಿ-ಪಾಸ್ತಿ, ಧನ-ಕನಕಾದಿಗಳ ಸಂಪತ್ತನ್ನು ನಾವು ವ್ಯವಹಾರಿಕವಾಗಿ ಗಳಿಸಬಹುದು. ಆದರೆ ಆರೋಗ್ಯ ಸಂಪತ್ತನ್ನು ಗಳಿಸಲು ನಾವು ಸ್ವತಃ ಸಾಧನೆ ಮಾಡಬೇಕಾಗುತ್ತದೆ. ಸಾಧನೆ ಸಾಕಷ್ಟಿದ್ದರೂ ಸೂರ್ಯನಮಸ್ಕಾರ ಸಾಧನೆ ಸರ್ವಶ್ರೇಷ್ಠವಾಗಿದೆ ಎಂದು ಡಿ.ಜಿ.ಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ವಿ. ಐಹೊಳ್ಳಿ ಅಭಿಪ್ರಾಯಪಟ್ಟರು.

ಎಸ್.ವಾಯ್.ಬಿ.ಎಂ.ಎಸ್ ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಮತ್ತು ಯೋಗ ಚಿಂತನ ಕೂಟ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ರಥಸಪ್ತಮಿ ಆಚರಣೆ ಪ್ರಯುಕ್ತ ಆಯೋಜಿಸಿದ್ದ ಸಾಮೂಹಿಕ ಸೂರ್ಯನಮಸ್ಕಾರ ಯಜ್ಞ ಮತ್ತು ಸೂರ್ಯಾಷ್ಟೋತ್ತರ ಶತನಾಮಾವಳಿ ಪಠಣ ಕಾರ್ಯಕ್ರಮಗಳ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸೂರ್ಯ ನಮಸ್ಕಾರವು ಯೋಗದ ಪ್ರಕ್ರಿಯೆಗಳಾದ ಆಸನ, ಪ್ರಾಣಾಯಾಮ, ಧ್ಯಾನ, ಮಂತ್ರ ಪಠಣಗಳ ಸಂಯೋಜನೆಯುಕ್ತ 12 ಹಂತಗಳ ವ್ಯಾಯಾಮ ಪದ್ಧತಿಯಾಗಿದೆ. ಆಧ್ಯಾತ್ಮಿಕವಾಗಿ ಸೂರ್ಯದೇವನಿಗೆ ವಂದನೆ ಸಲ್ಲಿಸುವುದು ಧಾರ್ಮಿಕ ಆಚರಣೆಯಾಗಿದೆ. ಈ ಸೂರ್ಯನಮಸ್ಕಾರ ಸಾಧನೆಯಿಂದ ನಾವು ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ನೈತಿಕ ಮತ್ತು ಸಾಮಾಜಿಕವಾಗಿ ಆರೋಗ್ಯವಂತರಾಗಿರಬಹುದು. ಹೀಗಾಗಿ ಸೂರ್ಯ ನಮಸ್ಕಾರ ಸಾಧನೆ ಆರೋಗ್ಯ ಭಾಗ್ಯದ ಅಡಿಪಾಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗಿಯಾದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಸೂರ್ಯಾಷ್ಟೋತ್ತರ ಶತನಾಮಾವಳಿಯನ್ನು ಪಠಣ ಮಾಡಿಸಿ ಯೋಗ ಗಾರುಡಿಗರಾದ ಮಾಳಾಡಿಹಳ್ಳಿ ದಿ. ಶ್ರೀ ರಾಘವೇಂದ್ರ ಸ್ವಾಮಿಗಳು ಮಾಡಿದ ಸೂರ್ಯನಮಸ್ಕಾರ ಸಾಧನೆಯನ್ನು ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಇ. ಪ್ರಶಾಂತ, ಜಯಶ್ರೀ ಡಾವಣಗೇರಿ, ವೀಣಾ ಗೌಡರ, ರೇಷ್ಮಾ ಹಡಪದ, ಗಿರಿಜಾ ಅಂಗಡಿ ಸೇರಿದಂತೆ ಯೋಗಪಾಠಶಾಲೆಯ ಸದಸ್ಯರು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಪ್ರಾರ್ಥನೆ, ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ ನಡೆದವು. ಷಡಕ್ಷರಿ ಮೆಣಸಿನಕಾಯಿ ಸರ್ವರನ್ನು ಸ್ವಾಗತಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಾಳೆದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರವಿ ಹುಡೇದ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ಐಹೊಳ್ಳಿ ವಂದಿಸಿದರು.

ಎಲ್.ಟಿ.ಎಂ.ಎಸ್ ಹೆಸ್ಕಾಂನ ಅಸಿಸ್ಟಂಟ್ ಇಂಜಿನಿಯರ್ ಸುನಿತಾ ಓಲಿ ರಥಸಪ್ತಮಿ ದಿನ ಪ್ರಾರಂಭಿಸಿದ ಕಾರ್ಯಗಳ ಫಲ ಏಳು ಪಟ್ಟು ಹೆಚ್ಚುವದೆಂದು ತಿಳಿಸಿದರು. ರಥಸಪ್ತಮಿ ಮತ್ತು ಸೂರ್ಯನಮಸ್ಕಾರ ಕುರಿತು ಅಶೋಕ ಬಾರಕೇರ, ವಿಜಯಲಕ್ಷ್ಮೀ ಆನೆಹೊಸೂರ, ಮಂಜುಳಾ ಬುಳ್ಳಾ, ವಿಜಯಾ ಚನ್ನಶೆಟ್ಟಿ, ಗೌರಿ ಜಿರಂಕಳಿ ಮಾತನಾಡಿದರು. ವೀಣಾಶ್ರೀ ಮಾಲಿಪಾಟೀಲ ಸೂರ್ಯ ದೇವರ ಮಹತ್ವ ತಿಳಿಸುವ ಗೀತೆ ಹಾಡಿದರು.

error: Content is protected !!