Home Blog Page 264

IPL 2026: CSK ವಿರುದ್ದ ಮುಂಬೈಗೆ ಸೋಲು; IPL ನಿಂದ MI ಭಾಗಶಃ ಔಟ್!

ಐಪಿಎಲ್ 2026 44ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಈ ಆವೃತ್ತಿಯ ಎರಡನೇ ಮುಖಾಮುಖಿಯಲ್ಲೂ ಮುಂಬೈ ತಂಡವನ್ನು ಮಣಿಸಿದ ಸಿಎಸ್‌ಕೆ, ಟೂರ್ನಿಯಲ್ಲಿ ತನ್ನ ನಾಲ್ಕನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ, ಈ ಸೋಲಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲೇ ಹೊರ ಬೀಳುವ ಸಾಧ್ಯತೆ ಹೆಚ್ಚಾಗಿದೆ.

ಮೇ 2ರಂದು ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 159 ರನ್‌ಗಳಿಗೆ ಸೀಮಿತವಾಯಿತು. ನಮನ್ ಧೀರ್ 57 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ರಯಾನ್ ರಿಕಲ್ಟನ್ 37 ರನ್ ಕೊಡುಗೆ ನೀಡಿದರು. ಆದರೆ ನಾಯಕ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ನಿರಾಸೆ ಮೂಡಿಸಿದರು.

ಚೆನ್ನೈ ಪರ ಬೌಲಿಂಗ್‌ನಲ್ಲಿ ಅನ್ಶುಲ್ ಕಾಂಬೋಜ್ ಮಿಂಚಿ 4 ಓವರ್‌ಗಳಲ್ಲಿ 32 ರನ್ ನೀಡಿ 3 ವಿಕೆಟ್ ಕಬಳಿಸಿದರು. ನೂರ್ ಅಹ್ಮದ್ 2 ವಿಕೆಟ್ ಪಡೆದುಕೊಂಡರೆ, ಜೇಮೀ ಓವರ್ಟನ್ ಕೂಡ ಉತ್ತಮ ಬೆಂಬಲ ನೀಡಿದರು.

159 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಆರಂಭದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡರೂ, ನಾಯಕ ರುತುರಾಜ್ ಗಾಯಕ್ವಾಡ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಉರ್ವಿಲ್ ಪಟೇಲ್ ಜೊತೆಗೂಡಿ 49 ರನ್‌ಗಳ ಜೊತೆಯಾಟ ಕಟ್ಟಿದ ಅವರು, ಬಳಿಕ ಕಾರ್ತಿಕ್ ಶರ್ಮಾ ಜೊತೆಗೂಡಿ 98 ರನ್‌ಗಳ ಅಮೂಲ್ಯ ಪಾಲುದಾರಿಕೆ ನಿರ್ಮಿಸಿದರು.

ಈ ನಡುವೆ ರುತುರಾಜ್ ಗಾಯಕ್ವಾಡ್ ಸತತ ಎರಡನೇ ಅರ್ಧಶತಕ ಪೂರೈಸಿದರೆ, ಕಾರ್ತಿಕ್ ಶರ್ಮಾ ತಮ್ಮ ಮೊದಲ ಐಪಿಎಲ್ ಅರ್ಧಶತಕ ದಾಖಲಿಸಿದರು. ಇವರ ದಿಟ್ಟ ಆಟದ ನೆರವಿನಿಂದ ಚೆನ್ನೈ ತಂಡ 18.1 ಓವರ್‌ಗಳಲ್ಲಿ ಗುರಿ ತಲುಪಿ ಸುಲಭ ಜಯ ಸಾಧಿಸಿತು.

 

ರಾಜಧಾನಿ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ವಾಯು ಗುಣಮಟ್ಟದಲ್ಲಿ ಸುಧಾರಣೆ!

ಬೆಂಗಳೂರು: ರಾಜ್ಯದಲ್ಲಿ ಗಾಳಿಯ ಗುಣಮಟ್ಟದಲ್ಲಿ ಭಾಗಶಃ ಸುಧಾರಣೆ ಕಂಡುಬಂದಿದ್ದರೂ, ಕೆಲವು ನಗರಗಳಲ್ಲಿ ಇನ್ನೂ ಅನಾರೋಗ್ಯಕರ ಮಟ್ಟ ಮುಂದುವರಿದಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಏರ್ ಕ್ವಾಲಿಟಿ (AQI) ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಸುಧಾರಣೆ ಕಂಡಿದೆ. ಹುಬ್ಬಳ್ಳಿಯಲ್ಲಿ AQI ಇಂದು 73ರಷ್ಟಿದ್ದು, ಉತ್ತಮ ಮಟ್ಟದಲ್ಲಿದೆ. ಆದರೆ ಬೆಂಗಳೂರಿನಲ್ಲಿ AQI 110ಕ್ಕೆ ತಲುಪಿದರೂ, ಇದು ಇನ್ನೂ ಆರೋಗ್ಯಕ್ಕೆ ಹಾನಿಕರ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಮಂಗಳೂರು ನಗರದಲ್ಲಿ ಕೆಲ ತಿಂಗಳ ಹಿಂದೆ AQI 200ರ ಗಡಿ ತಲುಪಿದ್ದು ಆತಂಕ ಮೂಡಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ಆದರೂ, WHO ಮಾನದಂಡಗಳ ಪ್ರಕಾರ ಇಂದಿನ ಮಟ್ಟವೂ ಆರೋಗ್ಯಕ್ಕೆ ಸಂಪೂರ್ಣ ಸುರಕ್ಷಿತವಲ್ಲ ಎಂದು ಹೇಳಲಾಗಿದೆ.

ರಾಜ್ಯದ ಇತರ ನಗರಗಳ ಇಂದಿನ ಗಾಳಿಯ ಗುಣಮಟ್ಟ (AQI) ಹೀಗಿದೆ:

ಬೆಂಗಳೂರು – 110
ಮಂಗಳೂರು – 109
ಮೈಸೂರು – 103
ಬೆಳಗಾವಿ – 68
ಕಲಬುರ್ಗಿ – 73
ಶಿವಮೊಗ್ಗ – 92
ಬಳ್ಳಾರಿ – 112
ಹುಬ್ಬಳ್ಳಿ – 73
ಉಡುಪಿ – 132
ವಿಜಯಪುರ – 84

AQI ಮಟ್ಟಗಳ ವಿವರಣೆ:
0–50 : ಉತ್ತಮ
50–100 : ಮಧ್ಯಮ
100–150 : ಕಳಪೆ
150–200 : ಅನಾರೋಗ್ಯಕರ
200–300 : ಗಂಭೀರ
300 ಮೇಲ್ಪಟ್ಟು : ಅಪಾಯಕಾರಿ

ತಜ್ಞರ ಪ್ರಕಾರ, AQI 100ಕ್ಕಿಂತ ಮೇಲ್ಪಟ್ಟಾಗ ದೀರ್ಘಕಾಲ ಬಾಹ್ಯ ವಾತಾವರಣದಲ್ಲಿ ಇರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ನಾಗರಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ.

 

ಕೂಡ್ಲಿಗಿಯಲ್ಲಿ ಮನಕಲಕುವ ದುರಂತ: ಗೋಡೆ ಕುಸಿದು ಮನೆ ಮಾಲೀಕ ಸಾವು

ವಿಜಯನಗರ:- ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯಲ್ಲಿ ಮನಕಲಕುವ ದುರಂತವೊಂದು ಸಂಭವಿಸಿದೆ.

ನಿನ್ನೆ ಸಂಜೆ ಸಂಭವಿಸಿದ ಅವಘಡದಲ್ಲಿ ಮನೆಯ ಗೋಡೆ ಕುಸಿದು, ಬಸವರಾಜಪ್ಪ (54) ಎಂಬುವವರು ಮೃತಪಟ್ಟಿದ್ದಾರೆ. ಮೃತ ಬಸವರಾಜಪ್ಪ ಅವರು ತಮ್ಮ ಹೊಸ ಮನೆಯ ಕಾಮಗಾರಿಯನ್ನು ನಡೆಸುತ್ತಿದ್ದರು. ಹೊಸ ಮನೆಯ ಬೇಸ್‌ಮೆಂಟ್ ಪಕ್ಕದಲ್ಲಿದ್ದ ಹಳೆಯ ಕಲ್ಲಿನ ಗೋಡೆಯ ನಡುವೆ ಪೈಪ್‌ಲೈನ್ ಅಳವಡಿಸಲು ಕಾರ್ಮಿಕರು ಪಾಯ ತೆಗೆದಿದ್ದರು. ಈ ಪಾಯವನ್ನು ಸಮತಟ್ಟು ಮಾಡಲು ಮುಂದಾದ ವೇಳೆ, ಏಕಾಏಕಿ ಹಳೆಯ ಕಲ್ಲಿನ ಗೋಡೆ ಕುಸಿದು ಬಸವರಾಜಪ್ಪ ಅವರ ಮೇಲೆ ಬಿದ್ದಿದೆ.

ಭಾರೀ ಗಾತ್ರದ ಕಲ್ಲು ಮತ್ತು ಮಣ್ಣಿನಡಿ ಸಿಲುಕಿದ ಬಸವರಾಜಪ್ಪ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯ ಸುದ್ದಿ ತಿಳಿದು ಕಾನಹೊಸಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ರಾಮಪ್ಪ ಬಿದಾರಾಣಿ ಮತ್ತು ತಂಡ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ನೆರವಿನೊಂದಿಗೆ ಸುಮಾರು 45 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಶವವನ್ನು ಹೊರತೆಗೆದಿದ್ದಾರೆ.

ಈ ಸಂಬಂಧ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ! ಹವಾಮಾನ ವರದಿ ಹೀಗಿದೆ

ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಆಲಿಕಲ್ಲು ಮಳೆಯ ಅರ್ಭಟ ಮುಂದುವರಿದಿದ್ದು, ಇಂದೂ ಸಹ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಇಂದು ಗರಿಷ್ಠ 42 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ದಾಖಲಾಗುವ ಸಾಧ್ಯತೆ ಇದ್ದು, ಮುಂದಿನ ಮೂರು ದಿನಗಳವರೆಗೆ ಇದೇ ರೀತಿಯ ಬಿಸಿಗಾಳಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇದೇ ವೇಳೆ ಕರಾವಳಿ ಭಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕದ ಕೆಲ ಭಾಗಗಳಾದ ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉಳಿದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಶುಷ್ಕ ವಾತಾವರಣ ಇರಲಿದೆ.

ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯತೆ? ಖರ್ಗೆ ಹೇಳಿಕೆ ಬೆನ್ನಲ್ಲೇ ಬಿ.ವೈ. ವಿಜಯೇಂದ್ರ ಹೇಳಿದ್ದೇನು..?

ಮೈಸೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆಯನ್ನು ಗಮನಿಸಿದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯತೆ ಇದೆ ಎಂಬ ಅನುಮಾನ ಮೂಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸೂತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ ಎಂದು ಹೇಳಿದರು.

ಕೆಲವರು ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯಮಂತ್ರಿ ಆಗಲಿ ಎನ್ನುತ್ತಿದ್ದಾರೆ. ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಮೇ 15ರಂದು ಸಿಎಂ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು,” ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದರು.

ಇದೇ ವೇಳೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಬದುಕಿನ 50 ವರ್ಷದ ಅಭಿಮಾನೋತ್ಸವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಅವರು, ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾರಂಭಕ್ಕೆ ಸೂತ್ತೂರು ಶ್ರೀಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿದ್ದಾರೆ. ಮೇ 8ರಂದು ಯಡಿಯೂರಪ್ಪ ಅವರು ಚಿತ್ರದುರ್ಗ ಪ್ರವೇಶಿಸಲಿದ್ದು, ಅದ್ಧೂರಿ ಸ್ವಾಗತ ಕೋರಲಾಗುತ್ತದೆ. ಮೇ 9ರಂದು ನಡೆಯುವ ಮುಖ್ಯ ವೇದಿಕೆ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮೇ 14ರಿಂದ ಅಂಡಮಾನ್ʼನಲ್ಲಿ ಮುಂಗಾರು ಪ್ರವೇಶ: ದೇಶಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚು ಮಳೆಯ ಮುನ್ಸೂಚನೆ

ನವದೆಹಲಿ: ದೇಶಾದ್ಯಂತ ತೀವ್ರ ಉಷ್ಣಾಂಶದ ನಡುವೆ ಜನತೆಗೆ ತುಸು ನಿರಾಳತೆ ನೀಡುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹತ್ವದ ಮುನ್ಸೂಚನೆ ನೀಡಿದೆ. ಮೇ 14ರಿಂದ 16ರ ಅವಧಿಯಲ್ಲಿ ನೈಋತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರವೇಶಿಸುವ ಸಾಧ್ಯತೆ ಇದ್ದು, ಮೇ ತಿಂಗಳಲ್ಲಿ ದೇಶಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಪ್ರಸ್ತುತ ದೇಶದ ಹಲವು ಭಾಗಗಳಲ್ಲಿ ಉರಿಬಿಸಿಲಿನ ವಾತಾವರಣ ಮುಂದುವರಿದಿದ್ದರೂ, ಮುಂಗಾರು ಚಟುವಟಿಕೆಗಳ ಆರಂಭದಿಂದ ಶೀಘ್ರದಲ್ಲೇ ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತೀವ್ರತೆ ಕಡಿಮೆಯಾಗುವ ನಿರೀಕ್ಷೆ ಇದೆ.

ಐಎಂಡಿ ಬಿಡುಗಡೆ ಮಾಡಿದ ಮಾಸಿಕ ಮುನ್ಸೂಚನೆ ಪ್ರಕಾರ, ಹಿಮಾಲಯದ ತಪ್ಪಲು ಪ್ರದೇಶಗಳ ಕೆಲವು ಭಾಗಗಳು, ಪೂರ್ವ ಕರಾವಳಿ ರಾಜ್ಯಗಳು, ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಮೇ ತಿಂಗಳಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಗಾಳಿ ದಿನಗಳು ಮುಂದುವರಿಯುವ ಸಾಧ್ಯತೆ ಇದೆ.

ಆದರೆ ದೇಶದ ಸರಾಸರಿ ಮಳೆಯ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಾಗುವ ನಿರೀಕ್ಷೆ ಇದೆ. ಇದ್ರಲ್ಲೂ ಪೂರ್ವ, ಈಶಾನ್ಯ ಹಾಗೂ ಪೂರ್ವ-ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಹವಾಮಾನಶಾಸ್ತ್ರದ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಮಾತನಾಡಿ, ಮೇ ತಿಂಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದರು. ಅದೇ ವೇಳೆ ವಾಯುವ್ಯ ಭಾರತದ ಹಲವು ಪ್ರದೇಶಗಳು, ಮಧ್ಯ ಭಾರತದ ಕೆಲವು ಭಾಗಗಳು, ದಕ್ಷಿಣ ದ್ವೀಪಕಲ್ಪ ಪ್ರದೇಶಗಳು ಹಾಗೂ ಈಶಾನ್ಯ ಭಾರತದ ದಕ್ಷಿಣ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಮುಂಗಾರು ಆಗಮನ ಕುರಿತು ಮಾತನಾಡಿದ ಅವರು, ಮೇ 14ರಿಂದ 16ರೊಳಗೆ ನೈಋತ್ಯ ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ತಲುಪುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.

 ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದು: ವಿಧಾನಸಭೆ ಕಾರ್ಯದರ್ಶಿಯಿಂದ ಅಧಿಕೃತ ಆದೇಶ

ಬೆಂಗಳೂರು: ದೀರ್ಘಕಾಲದ ಕಾನೂನು ಹೋರಾಟ ಮತ್ತು ರಾಜಕೀಯ ಬೆಳವಣಿಗೆಗಳ ನಡುವೆ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ವಿಧಾನಸಭೆ ಕಾರ್ಯದರ್ಶಿ ಶನಿವಾರ ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ಈ ಕ್ರಮ ಜಾರಿಯಾಗಿದೆ.

ಭಾರತೀಯ ಸಂವಿಧಾನದ ವಿಧಿ 191(1)(e) ಹಾಗೂ ಜನಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 8ರ ಅನ್ವಯ ಈ ಅನರ್ಹತೆ ಆದೇಶ ಹೊರಡಿಸಲಾಗಿದೆ. ಈ ಕಾನೂನು ಪ್ರಕಾರ, ಯಾವುದೇ ಜನಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಲ್ಪಟ್ಟರೆ ಅವರು ತಕ್ಷಣದಿಂದಲೇ ಶಾಸಕರಾಗಿ ಮುಂದುವರಿಯಲು ಅರ್ಹರಾಗುವುದಿಲ್ಲ.

ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದ ಬಳಿಕವೂ ಅನರ್ಹತೆ ಆದೇಶ ಹೊರಡಿಸಲು ವಿಧಾನಸಭೆ ಸಚಿವಾಲಯ ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ಪಡೆಯಲು ಸರ್ಕಾರ ಉದ್ದೇಶಪೂರ್ವಕವಾಗಿ ಸಮಯಾವಕಾಶ ನೀಡುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಟೀಕಿಸಿದ್ದರು.

ಆದರೆ ಇದೀಗ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಅಧಿಕೃತ ಆದೇಶದೊಂದಿಗೆ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದುಗೊಂಡಿದೆ. ಈ ಬೆಳವಣಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ.

ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಬಂದಿತ್ತು: ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು: ತಮಗೆ ಎರಡು ಬಾರಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಬಂದಿತ್ತು ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೆಲವು ಕಾರಣಗಳಿಂದಾಗಿ ಆ ಸಂದರ್ಭದಲ್ಲಿ ಆ ಅವಕಾಶವನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

ನನಗೆ ಎರಡು ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಬಂದಿತ್ತು. ಆದರೆ ಆ ಸಮಯದಲ್ಲಿ ನಾನು ನೀರಾವರಿ ಸಚಿವನಾಗಿದ್ದೆ. ಕೆಲ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷ ನನಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ ಎಂದು ಪಾಟೀಲ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಯಸುವ ವಿಚಾರವನ್ನು ಮಾಧ್ಯಮಗಳ ಮುಂದೆ ಹೇಳುವುದಕ್ಕಿಂತ ಪಕ್ಷದ ಸೂಕ್ತ ವೇದಿಕೆಯಲ್ಲಿ ಹೇಳುವುದಾಗಿ ಸ್ಪಷ್ಟಪಡಿಸಿದ ಅವರು, ಅಂತಹ ವಿಷಯವನ್ನು ಹೇಳಬೇಕಾದರೆ ನೇರವಾಗಿ ಹೈಕಮಾಂಡ್ ಮುಂದೆ ಹೇಳುತ್ತೇನೆ. ಪಕ್ಷದ ಹಿರಿಯರು ಚರ್ಚೆ ನಡೆಸುವ ಸಂದರ್ಭದಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ ಎಂದರು.

ಇದೇ ವೇಳೆ, ನನ್ನ ನೇತೃತ್ವದಲ್ಲಿ ಶಾಸಕರು ಗೆದ್ದಿದ್ದಾರೆ” ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಸರ್ಕಾರದಲ್ಲಿ ಮುಖ್ಯಮಂತ್ರಿ ಅತ್ಯುನ್ನತ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.

ಈ ವಿಚಾರವಾಗಿ ನಾನು ಈಗಾಗಲೇ ಪ್ರತಿಕ್ರಿಯಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಅನೇಕ ಮುಖಂಡರು ಹಾಗೂ ಭೂತ್ ಮಟ್ಟದ ಕಾರ್ಯಕರ್ತರು ಒಟ್ಟಾಗಿ ದುಡಿದ ಪರಿಣಾಮ ಜನರು ಕಾಂಗ್ರೆಸ್‌ಗೆ ಆಶೀರ್ವಾದ ನೀಡಿದ್ದಾರೆ ಎಂದು ಹೇಳಿದರು.

ಶಿಡ್ಲಘಟ್ಟ: ಮದುವೆಯಾದ ವರ್ಷದೊಳಗೆ ಯುವತಿ ಅನುಮಾನಾಸ್ಪದ ಸಾವು!

ಚಿಕ್ಕಬಳ್ಳಾಪುರ: ಮದುವೆಯಾದ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಬೇಕಿದ್ದ ನವವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ನಡೆದಿದೆ. ಮೇ 15ರಂದು ವಿವಾಹ ವಾರ್ಷಿಕೋತ್ಸವ ಆಚರಣೆಗೆ ಸಿದ್ಧವಾಗಿದ್ದ ಮನೆ ಈಗ ಶೋಕ ಸಾಗರದಲ್ಲಿ ಮುಳುಗಿದೆ.

ಮೃತಳನ್ನು ಗೌರಿಬಿದನೂರು ಮೂಲದ ಶಕುಂತಲಾ ಅವರ ಪುತ್ರಿ ಪ್ರೇಮಾ ಎಂದು ಗುರುತಿಸಲಾಗಿದೆ. ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯ ಶಿವಕುಮಾರ್ ಜೊತೆ ಸಂಬಂಧಿಕರ ಒಪ್ಪಿಗೆಯೊಂದಿಗೆ ಪ್ರೇಮಾ ವಿವಾಹವಾಗಿದ್ದರು. ಶಿವಕುಮಾರ್ ಪ್ರೇಮಾಳನ್ನು ಪ್ರೀತಿಸಿ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.

ಮದುವೆಯಾದ ಆರಂಭಿಕ ಮೂರು ತಿಂಗಳು ದಾಂಪತ್ಯ ಜೀವನ ಸುಖಕರವಾಗಿತ್ತು. ಆದರೆ ನಂತರ ಪ್ರೇಮಾಳ ಎದೆಯ ಮೇಲೆ ಯುವಕನೊಬ್ಬನ ಹೆಸರಿನ ಟ್ಯಾಟೂ ಇರುವುದನ್ನು ಗಮನಿಸಿದ ಶಿವಕುಮಾರ್ ಅನುಮಾನ ಪಡಲು ಆರಂಭಿಸಿದ್ದಾನೆ ಎನ್ನಲಾಗಿದೆ. ಅದು ಸ್ನೇಹಿತನ ಹೆಸರು ಮಾತ್ರ ಎಂದು ಪ್ರೇಮಾ ಸ್ಪಷ್ಟನೆ ನೀಡಿದ್ದರೂ, ಅದನ್ನೇ ನೆಪ ಮಾಡಿಕೊಂಡು ಪತಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಇದರ ಜೊತೆಗೆ ವರದಕ್ಷಿಣೆ ತರುವಂತೆ ಶಿವಕುಮಾರ್ ನಿರಂತರವಾಗಿ ಒತ್ತಡ ಹೇರಿ ಹಲ್ಲೆ ನಡೆಸುತ್ತಿದ್ದ ಎಂದು ಪ್ರೇಮಾಳ ತಾಯಿ ಶಕುಂತಲಾ ಗಂಭೀರ ಆರೋಪ ಮಾಡಿದ್ದಾರೆ. ತಿಂಗಳ ಹಿಂದೆ ನಡೆದ ಜಗಳದ ಹಿನ್ನೆಲೆಯಲ್ಲಿ ಪ್ರೇಮಾ ತವರು ಮನೆ ಸೇರಿದ್ದಳು. ಬಳಿಕ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಶಿವಕುಮಾರ್ ಮತ್ತೆ ಮನೆಗೆ ಕರೆತಂದಿದ್ದ. ಆದರೆ ತಿಂಗಳೊಳಗೇ ಆಕೆ ಸಾವನ್ನಪ್ಪಿರುವುದು ಕುಟುಂಬದವರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಮೂರು ತಿಂಗಳ ಹಿಂದೆ ಪ್ರೇಮಾಗೆ ಗರ್ಭಪಾತವಾಗಿದ್ದು, ಆ ಸಂದರ್ಭದಲ್ಲೂ ಗಂಡನ ಮನೆಯವರು ನೋಡಿಕೊಳ್ಳಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಶಿವಕುಮಾರ್‌ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆ ನಂಬಲ್ಲ, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ: ಡಿಕೆ. ಶಿವಕುಮಾರ್

ಗುವಾಹಟಿ: ಚುನಾವಣೋತ್ತರ ಸಮೀಕ್ಷೆಗಳು ನಮ್ಮ ಪರವಾಗಿರಲಿ, ಇಲ್ಲದಿರಲಿ ಅದರ ಮೇಲೆ ನನಗೆ ನಂಬಿಕೆ ಇಲ್ಲ. ನನ್ನ ತಂತ್ರಗಾರಿಕೆಯೇ ಬೇರೆ, ಈ ಬಾರಿ ಎಲ್ಲಾ ರಾಜ್ಯಗಳಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಗುವಾಹಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಚುನಾವಣೋತ್ತರ ಸಮೀಕ್ಷೆ ವರದಿಗಳ ಬಗ್ಗೆ ಕೇಳಿದಾಗ, “ಈ ಸಮೀಕ್ಷೆಗಳಲ್ಲಿ ಬಳಸುವ ಮಾದರಿ ಪ್ರಮಾಣ ಬಹಳ ಸಣ್ಣದಾಗಿರುತ್ತವೆ. ಹೀಗಾಗಿ ನಮ್ಮ ಲೆಕ್ಕಾಚಾರ ಬೇರೆ ಇದೆ. ನಾನು ಯಾವುದೇ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ನಂಬುವುದಿಲ್ಲ. ನಾನು ಇಲ್ಲಿಗೆ ಬಂದಿರುವುದೇ ನಮ್ಮ ಶಾಸಕರನ್ನು ರಕ್ಷಿಸಿ, ಮಾರ್ಗದರ್ಶನ ನೀಡಿ, ಶಕ್ತಿ ತುಂಬಲು” ಎಂದು ತಿಳಿಸಿದರು.

ಅಸ್ಸಾಂ ಚುನಾವಣೆ ಬಗ್ಗೆ ಕೇಳಿದಾಗ, “ನಮ್ಮ ಕಾರ್ಯಕರ್ತರು ಬಹಳ ವಿಭಿನ್ನ. ಹೀಗಾಗಿ ಅಸ್ಸಾಂನಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ನಾಯಕರ ಮೇಲೆ ನಮಗೆ ನಂಬಿಕೆ ಇದೆ. ಅವರು ಸಾಕಷ್ಟು ಪರಿಶ್ರಮ ಹಾಕಿದ್ದಾರೆ. ಮತದಾರರ ಮೇಲೆ ವಿಶ್ವಾಸವಿದೆ. ಅವರಿಗೆ ಬದಲಾವಣೆ ಬೇಕಾಗಿದೆ. ಆ ಬದಲಾವಣೆ ಸಿಗಲಿದೆ ಎಂಬ ಆತ್ಮವಿಶ್ವಾಸವಿದೆ” ಎಂದು ತಿಳಿಸಿದರು.

ತಮಿಳುನಾಡು ಚುನಾವಣೆ ಬಗ್ಗೆ ಕೇಳಿದಾಗ, “ದೇಶದಾದ್ಯಂತ  ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದರು. ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಮೈತ್ರಿಕೋಟ ಅಧಿಕಾರಕ್ಕೆ ಬರುವುದೇ ಎಂದು ಕೇಳಿದಾಗ, “ಪ್ರತಿ ರಾಜ್ಯದಲ್ಲೂ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ” ಎಂದರು.