Home Blog Page 3196

ಜೆಡಿಎಸ್ ಅಧ್ಯಕ್ಷರಾಗಿ ಶ್ರೀಶೈಲ ಮೂಲಿಮನಿ ಆಯ್ಕೆ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಸ್ಥಳೀಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷರನ್ನಾಗಿ ತಾಲ್ಲೂಕಿನ ಶಲವಡಿ ಗ್ರಾಮದ ಶ್ರೀಶೈಲ ಮೂಲಿಮನಿ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರ ಸೂಚನೆಯ ಮೆರೆಗೆ ಆಯ್ಕೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ಆದೇಶಿಸಿದ್ದಾರೆ.

ನೂತನ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀಶೈಲ ಮೂಲಿಮನಿ ಅವರು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷದ ಬಲವರ್ಧನೆ ಮಾಡುವುದರ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಮತ್ತು  ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಯನ್ನು ಮನೆ ಮನೆಗೆ ತಲುಪಿಸಿ  ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡುವಂತೆ ಬಿ.ಬಿ.ಗಂಗಾಧರಮಠ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಪಲ್ಟಿ; ಇಂಜಿನ್ ಬುಡದಲ್ಲಿ ಸಿಲುಕಿ ಚಾಲಕ ಸ್ಥಳದಲ್ಲಿಯೇ ಸಾವು

ಕಡಿ ಹೇರಿಕೊಂಡು ಹೊರಟಿದ್ದ ಟ್ರ್ಯಾಕ್ಟರ್……..

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಶಿರಹಟ್ಟಿಯಿಂದ ಕಡಿ ಹೇರಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮವಾಗಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶಿಂಗಟರಾಯನಕೇರಿತಾಂಡಾ ರಸ್ತೆಯ ದಿಂಡೂರು ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ.

ಡೋಣಿ ಗ್ರಾಮದ ಶರಣಪ್ಪ ಚೆನ್ನಬಸಪ್ಪ ಗಾಳಪ್ಪನವರ್ (35) ಮೃತಪಟ್ಟ ದುರ್ಧೈವಿ.

ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಇಂಜಿನ್ ಬುಡದಲ್ಲಿ ಸಿಲುಕಿಕೊಂಡು ಉಸಿರುಗಟ್ಟಿ ಚಾಲಕ ಶರಣಪ್ಪ ಮೃತಪಟ್ಟಿದ್ದಾನೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಶವ ತೆಗೆಯಲು ಹರಸಾಹಸ ಪಟ್ಟರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಕಳ್ಳಬಟ್ಟಿ ಸಾರಾಯಿ ತಯಾರಿಕೆ ಅಡ್ಡೆ ಮೇಲೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ನೇತೃತ್ವದಲ್ಲಿ ದಾಳಿ; ಆರೋಪಿ ಸೀತಾರಾಮ ಬಂಧನ, ಸಾಮಗ್ರಿ ಜಪ್ತಿ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಕಳ್ಳಬಟ್ಟಿ ಸಾರಾಯಿ ತಯಾರಿಸುವ ಅಡ್ಡೆಯ ಮೇಲೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ನೇತೃತ್ವದಲ್ಲಿ ಅಬಕಾರಿ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿ, ಸಾವಿರಾರು ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಂಡ ಘಟನೆ ಜರುಗಿದೆ.

ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದ ಜಮೀನಿನಲ್ಲಿ ಕೆರಳ್ಳಿತಾಂಡಾದ ಸೀತಾರಾಮ ತಂದೆ ಕೃಷ್ಣಪ್ಪ ಲಮಾಣಿ ಎಂಬಾತ ಕಳ್ಳಬಟ್ಟಿ ಸಾರಾಯಿ ತಯಾರಿಸುವ ಸಮಯದಲ್ಲಿ ಮುಂಡರಗಿ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ನೇತೃತ್ವದಲ್ಲಿ ಅಬಕಾರಿ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿರುವ ಅಧಿಕಾರಿಗಳು, ಕಳ್ಳಬಟ್ಟಿ ಸಾರಾಯಿ ತಯಾರಿಸಲು ಉಪಯೋಗಿಸುವ ಬೆಲ್ಲದ ಕೊಳೆ, ಕಬ್ಬಿಣದ ಒಲೆ, ಎಚ್ ಪಿ ಕಂಪನಿಯ ಗ್ಯಾಸ್ ಹಾಗೂ ಬೈಕ್ ಸಮೇತ 46,800 ರೂ. ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.

ಕಳ್ಳಬಟ್ಟಿ ತಯಾರಿಸಲು ಸೀತಾರಾಮನಿಗೆ ಜಮೀನು ನೀಡಿರುವ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಈ ಕುರಿತು ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 13,13(1)(f),15,32(1),34,38(A) ಹಾಗೂ 43 ಉಲ್ಲಂಘನೆ ಆಗಿದ್ದು, 32/2022-23 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಸುವರ್ಣ. ಬಿ ಕೋಟಿ, ಸಿಬ್ಬಂದಿಗಳಾದ ಹನಮಂತ ಹಳ್ಳಿ, ಹನಮಪ್ಪ ನರೇಗಲ್, ಸದಾನಂದ ಹಡಪದ ಹಾಗೂ ಚಾಲಕ ಅಶೋಕ ರಾಮೇನಹಳ್ಳಿ ಇದ್ದರು.

ನವಲಗುಂದ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್‍ಗೂ ಹೆಚ್ಚಾದ ಬೇಡಿಕೆ….ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್…..ತೆರೆದಿದೆ ಮನೆ ಓ.. ಬಾ ಅತಿಥಿ  ಎಂದು ಕಾದು ಕುಳಿತಿರುವ ಹೈಕಮಾಂಡ್….!

ವಿಜಯಸಾಕ್ಷಿ ಸುದ್ದಿ, ನವಲಗುಂದ

ಮುಂಬರುವ 2023 ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‍ಗೆ ಹೆಚ್ಚಿನ ಬೇಡಿಕೆ ಇದ್ದರೂ ಕೊನೆಕ್ಷಣದಲ್ಲಿ ಟಿಕೆಟ್ ಒಬ್ಬರಿಗೆ ಮೀಸಲಾಗಿದ್ದರಿಂದ ಬಂಡಾಯ ಅಭ್ಯರ್ಥಿಗಳು ಈಗಾಗಲೇ ಜೆಡಿಎಸ್ ಬಾಗಿಲಿನ ಕದ ತಟ್ಟುತ್ತಿರುವುದು ಗೌಪ್ಯವಾಗಿ ಉಳಿದಿಲ್ಲವಾದರೂ ಜೆಡಿಎಸ್ ಹೈಕಮಾಂಡ್ ತಟಸ್ಥ ನಿಲುವು ಕಾಯ್ದುಕೊಂಡು ಪಕ್ಷಕ್ಕೆ ಬರುವವರಿಗೆ ತೆರೆದಿದೆ ಮನೆ ಓ.. ಬಾ ಅತಿಥಿ ಎಂದು ಕಾದು ಕುಳಿತಂತೆ ಕಾಣುತ್ತಿದೆ.

ಈ ಮೊದಲು ಜೆಡಿಎಸ್ ಪಕ್ಷದಲ್ಲಿದ್ದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರಿಂದ ಮೂಲ ಜೆ.ಡಿ.ಎಸ್ ಕಾರ್ಯಕರ್ತರಲ್ಲಿ ಈಗ ಎಲ್ಲಿಲ್ಲದ ಆಕ್ರೋಶ, ಕಿಚ್ಚು ಹೊತ್ತಿಕೊಂಡಿದೆ. ಎನ್.ಎಚ್.ಕೋನರಡ್ಡಿ ತಾವು ಪಕ್ಷಬಿಟ್ಟು ಹೋಗುವುದಿರಲಿ ಜೊತೆಗೆ ಪುರಸಭೆಯ ಎಲ್ಲ ಸದಸ್ಯರನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಿ ಇದ್ದ ಮನೆಯನ್ನು ಬರಿದು ಮಾಡಿ ಪಕ್ಷಕ್ಕೆ ದ್ರೋಹ ಮಾಡಿದ್ದು ಕಾರ್ಯಕರ್ತರಲ್ಲಿ ಕಿಚ್ಚು ಹೆಚ್ಚು ಮಾಡಿದಂತೆ ಕಾಣುತ್ತಿದೆ.

ಕಳೆದ ಒಂದು ವರ್ಷದಿಂದ ಹೊಸದಾಗಿ ಪಕ್ಷ ಸಂಘಟನೆಗೆ ಹಲವಾರು ನಾಯಕರು ಹಗಲಿರುಳು ಶ್ರಮಿಸುತ್ತಿದ್ದು ಈ ಭಾರಿ ಹೇಗಾದರೂ ಮಾಡಿ ಜೆ.ಡಿ.ಎಸ್ ಗೆಲ್ಲಿಸಲೇ ಬೇಕೆಂದು ಧಾರವಾಡ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ನೇತ್ರತ್ವದಲ್ಲಿ ಪಣ ತೊಟ್ಟು ನಿಂತಿದ್ದಾರೆ.

ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು: ಪ್ರಮುಖವಾಗಿ ರಾಜ್ಯ ಕಾರ್ಯದರ್ಶಿಗಳಾದ ಪ್ರಕಾಶ ಅಂಗಡಿ, ದೇವರಾಜ ಕಂಬಳಿ, ನವಲಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶ್ರೀಶೈಲ ಮೂಲಿಮನಿ, ಧಾರವಾಡ ಜಿಲ್ಲಾ ರೈತ ಘಟಕದ ಅಧ್ಯಕ್ಷ ಶಿವಶಂಕರ ಕಲ್ಲೂರ, ಜಿಲ್ಲಾ ಉಪಾಧ್ಯಕ್ಷ ಜಿ.ಎನ್.ತೋಟದ, ಅಣ್ಣಿಗೇರಿ ಅಂಜುಮನ್ ಸಂಸ್ಥೆಯ ಹಾಲಿ ಅಧ್ಯಕ್ಷ ಐ.ಜಿ.ಸಾಮುದ್ರಿ ಹಾಗೂ ಅಣ್ಣಿಗೇರಿ ಪುರಸಭೆಯ ಮಾಜಿ ಉಪಾಧ್ಯಕ್ಷ ನಿಂಗಪ್ಪ ಬಡೆಪ್ಪನವರ  ಜೆಡಿಎಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿದ್ದಾರೆ.

ಅಷ್ಟೇ ಅಲ್ಲದೇ ಒಗ್ಗಟ್ಟಾಗಿ ಎಲ್ಲರೂ ಜೊತೆಗೂಡಿಕೊಂಡು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಪ್ರತಿ ಗ್ರಾಮ ಗ್ರಾಮಗಳಿಗೂ ಹೋಗಿ ಸಂಘಟನೆ ಮಾಡುತ್ತಿರುವ ಅವರು ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷದ ಅವಶ್ಯಕತೆ ಮತ್ತು ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆ ಅನುಷ್ಠಾನದಿಂದ ಮಾತ್ರ ರಾಜ್ಯದ ಹಾಗೂ ರೈತರ ಅಭಿವೃದ್ಧಿ ಸಾಧ್ಯ ಎಂಬುದನ್ನು ಕರಪತ್ರದ ಮೂಲಕ ಸಾರಿ ಸಾರಿ ಹೇಳುತ್ತಿರುವುದು ಕಂಡುಬಂದಿದೆ.

ಅಣ್ಣಿಗೇರಿ ನಗರ ಘಟಕದ ಅಧ್ಯಕ್ಷ ವಿರೇಶ ಶಾನಭೋಗರ ಕೂಡ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದರಲ್ಲಿಯೇ ಕೆಲವರು ನಾವೇ ನಿಯೋಜಿತ ಅಭ್ಯರ್ಥಿಗಳೆಂದು ಪ್ರಚಾರ ಮಾಡುತ್ತಿರುವುದು ಇರುಸು ಮುರುಸು ಉಂಟು ಮಾಡಿದೆಯಾದರೂ, ನಮ್ಮ 7 ಜನರಲ್ಲಿ ಯಾರಿಗಾದರೂ ಟಿಕೆಟ್ ಕೊಡಿ ಜೆಡಿಎಸ್ ಅಭ್ಯರ್ಥಿಯನ್ನು ಒಮ್ಮತದಿಂದ ಚುನಾಯಿಸುತ್ತೇವೆಂದು  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಮುಂದೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆಂದು ಜೆ.ಡಿ.ಎಸ್. ಮೂಲಗಳು ತಿಳಿಸಿವೆ.  

ಒಂದು ವೇಳೆ ಜಿಲ್ಲಾಧ್ಯಕ್ಷರಾಗಿರುವ ಬಿ.ಬಿ.ಗಂಗಾಧರಮಠ ಅವರಿಗೆ ಟಿಕೆಟ್ ಕೊಟ್ಟರೇ ಅವರನ್ನು ಗೆಲ್ಲಿಸುತ್ತೇವೆಂದು ಹೇಳಿದ್ದಾರೆ. ಆದರೆ ಬಿ.ಬಿ.ಗಂಗಾಧರಮಠ ಅವರು ಆರೋಗ್ಯ ದೃಷ್ಟಿಯಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ತೆರೆದಿದೆ ಮನೆ ಓ….. ಬಾ ಅತಿಥಿ :

ರೈತರ ಜೀವನಾಡಿ, ಬಂಡಾಯದ ನೆಲದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಕೆಚ್ ಹಾಕಿದಂತೆ ಕಾಣುತ್ತಿದ್ದು, ಈಗ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವವರಲ್ಲಿ ಯಾರು ಉತ್ತಮರು, ಗೆಲ್ಲುವ ಅಭ್ಯರ್ಥಿ ಯಾರು ?  ಎಂಬ ಲೆಕ್ಕಾಚಾರ ಹಾಕುತ್ತಿರುವುದು ಒಂದೆಡೆಯಾದರೆ,  ಕಾಂಗ್ರೆಸ್ ಟಿಕೆಟ್ ಮುಂಚೂಣಿಯಲ್ಲಿರುವ ಕೆ.ಎನ್.ಗಡ್ಡಿ, ಎನ್.ಎಚ್.ಕೋನರಡ್ಡಿ ಹಾಗೂ ವಿನೋದ ಅಸೂಟಿ ಮೂವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಸಿಗುವುದರಿಂದ, ಬಂಡಾಯ ಏಳುವ ಪ್ರಮುಖ ಕಾಂಗ್ರೆಸ್ ನಾಯಕರಿಗಾಗಿ ತೆರೆದಿದೆ ಮನೆ ಓ… ಬಾ ಅತಿಥಿ ಎಂದು ತಮ್ಮ ಪಕ್ಷದ ಅಭ್ಯರ್ಥಿಯ ಹೆಸರು ಘೋಷಣೆ ಮಾಡದೇ ಗೌಪ್ಯತೆಯನ್ನು ಕಾಯ್ದುಕೊಂಡಿದ್ದಾರೆ.  ಈಗಾಗಲೇ ಪ್ರಮುಖ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆಂಬುದು ತಿಳಿದುಬಂದಿದೆ.

ಪಕ್ಷದ ಸಿದ್ದಾಂತ ಒಪ್ಪಿ ಯಾರೇ ಬರಲಿ ಸೇರ್ಪಡೆ ಮಾಡಿಕೊಳ್ಳುತ್ತೇವೆ – ಬಿ.ಬಿ.ಗಂಗಾಧರಮಠ, ಧಾರವಾಡ ಜಿಲ್ಲಾಧ್ಯಕ್ಷ

ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಗಳು ಜೆಡಿಎಸ್ ಪಕ್ಷಕ್ಕೆ ಬಂದರೆ ಸೇರ್ಪಡೆ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಜಿಲ್ಲಾಧ್ಯಕ್ಷರಾಗಿರುವ ಬಿ.ಬಿ.ಗಂಗಾಧರಮಠ ಮಾತನಾಡಿ ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಪಕ್ಷಕ್ಕೆ ಬರುವುದಾದರೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ, ಏನು ಬೇಕಾದರೂ ಆಗಬಹುದು.  ಒಂದು ವೇಳೆ ಎನ್.ಎಚ್.ಕೋನರಡ್ಡಿಯವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗದಿದ್ದರೇ ಜೆಡಿಎಸ್ ಟಿಕೆಟ್ ಕೋಡುತ್ತೀರಾ ಎಂಬ ಪ್ರಶ್ನೆಗೆ ಅವರು,  ಎನ್.ಎಚ್.ಕೋನರಡ್ಡಿಯವರು ನಮ್ಮ ಪಕ್ಷದ ನಾಯಕರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಈಗಲು ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅವರು ಪಕ್ಷಕ್ಕೆ ಮರಳಿ ಬರುವುದಾದರೆ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಜೊತೆ ಮಾತನಾಡಿ ನಿರ್ಧಾರ ಪ್ರಕಟಿಸುತ್ತೇವೆಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಹಿಂಬದಿಯಿಂದ ಟ್ಯಾಕ್ಟರ್ ಹಾಯ್ದು ವೃದ್ಧೆ ಸಾವು

ಸಂಗಮೇಶ್ವರ ದೇವಸ್ಥಾನದ ತೇರಿನ ಮನೆ ಮುಂದೆ ಕುಳಿತಿದ್ದ ಗುರಮ್ಮ ಸಾವು…….

ವಿಜಯಸಾಕ್ಷಿ ಸುದ್ದಿ, ರೋಣ

ಟ್ರ್ಯಾಕರ್ ಹಿಂಬದಿಯಿಂದ ಹಾಯ್ದು ಪರಿಣಾಮ ವೃದ್ಧೆ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ತಾಲೂಕಿನ ಸವಡಿ ಗ್ರಾಮದ
ಸಂಗಮೇಶ್ವರ ದೇವಸ್ಥಾನದ ತೇರಿನ ಮನೆ ಮುಂದೆ ಕುಳಿತಿದ್ದ ವೃದ್ಧೆ ಗುರಮ್ಮ ಸಂಗಪ್ಪ ದೊಡ್ಡನ್ನವರ್ (96) ಟ್ಯಾಕ್ಟರ್ ಹಾಯ್ದ ಪರಿಣಾಮವಾಗಿ ಗಂಭೀರ ಗಾಯಗೊಂಡಿದ್ದಳು.

ತಕ್ಷಣವೇ ಸವಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ರೋಣ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮದ್ಯ ವೃದ್ಧೆ ಗುರಮ್ಮ ಮೃತಪಟ್ಟಿದ್ದಾಳೆ.

ಈ ಕುರಿತು ಅದೇ ಗ್ರಾಮದ ಟ್ರ್ಯಾಕರ್ ಚಾಲಕ ಮಂಜಪ್ಪ ತಂದೆ ಸಂಗಪ್ಪ ಸಜ್ಜನರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ

0

ಗ್ರಾಮ ವಾಸ್ತವ್ಯದಲ್ಲಿ ತಹಸೀಲ್ದಾರ ಕೆ.ಆರ್.ಪಾಟೀಲ……

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಗ್ರಾಮೀಣ ಜನತೆ ತಾಲೂಕಾ ಆಡಳಿತಕ್ಕೆ ಅಲೆದಾಡುವುದನ್ನು ತಪ್ಪಿಸುವುದಕ್ಕಾಗಿ ಸರಕಾರ ಜಾರಿಗೊಳಿಸಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಗ್ರಾಮವಾಸ್ತವ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಸರಕಾರದ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದು ತಹಸೀಲ್ದಾರ ಕೆ.ಆರ್.ಪಾಟೀಲ ಹೇಳಿದರು.

ಅವರು ಶನಿವಾರ ತಾಲೂಕಿನ ಕುಸಲಾಪೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಿಮ್ಮ ಸಮಸ್ಯೆಗಳನ್ನು ಆಲಿಸುವುದಕ್ಕೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಇಲ್ಲಿ ನಿಮ್ಮ ಸಮಸ್ಯೆಗಳ ಕುರಿತು ಮನವಿಯನ್ನು ಸಲ್ಲಿಸಿ, ನಂತರ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ನಿಮಗೆ ಉತ್ತರ ನೀಡಲಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಇತ್ಯರ್ಥ ಪಡಿಸಬೇಕಾದಂತಹ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗುವುದು. ನಮ್ಮ ಹಂತ ಮೀರಿ ಬಂದಂತಹ ಅರ್ಜಿಗಳನ್ನು ಆಯಾ ಇಲಾಖೆಯ ಮೇಲಾಧಿಕಾರಿಗಳಿಗೆ ವಿಲೇವಾರಿ ಮಾಡಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದರು.

ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಸಸಿಯನ್ನು ನೆಟ್ಟು, ಗ್ರಾಮ ಸಂಚಾರ ಮಾಡಿ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿಯ 10 ಫಲಾನುಭವಿಗಳಿಗೆ ಮಾಸಾಶನದ ಮಂಜೂರಾತಿ ಆದೇಶ ಪತ್ರ, ತಾಲೂಕ ಪಂಚಾಯತ ವತಿಯಿಂದ ನರೇಗಾ ಉದ್ಯೋಗ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿ, ಗ್ರಾಪಂ-4, ಕಂದಾಯ ಇಲಾಖೆ-5, ಸರ್ವೆ ಇಲಾಖೆ-3, ಸಿಡಿಪಿಓ-1, ಜಪಿಡಬ್ಲ್ಯೂಡಿ-1, ಅರಣ್ಯ ಇಲಾಖೆ-1, ಸಾರಿಗೆ ಇಲಾಖೆ-1, ಹೆಸ್ಕಾಂ-1, ಶಿಕ್ಷಣ ಇಲಾಖೆ-1 ಹಾಗೂ ಕಾರ್ಮಿಕ ಇಲಾಖೆ-1 ಹೀಗೆ ಒಟ್ಟು 19 ಅರ್ಜಿಗಳು ಸ್ವೀಕೃತವಾದವು.

ಮಜ್ಜೂರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು, ತಾಪಂ ಇಓ ಎಸ್.ನಾರಾಯಣ, ಪಶು ವೈದ್ಯಾಧಿಕಾರಿ ಡಾ. ದಯಾನಂದ ಹಕ್ಕಾಪಕ್ಕಿ, ಶಿಕ್ಷಣ ಇಲಾಖೆಯ ಇಸಿಓ ಹರೀಶ್, ಶಿವಣ್ಣ ಲಮಾಣಿ, ಕಂದಾಯ ನಿರೀಕ್ಷಕ ಮಹಾಂತೇಶ ಮಗದುಮ್ ಮುಂತಾದವರು ಉಪಸ್ಥಿತರಿದ್ದರು.

ಸರಿಯಾದ ದಾಖಲಾತಿಗಳನ್ನು ಒದಗಿಸಿ ಹಕ್ಕು ಪತ್ರಗಳನ್ನು ಪಡೆದುಕೊಳ್ಳಲು ತಹಸೀಲ್ದಾರ್ ವಾಣಿ ಸೂಚನೆ

0

ಗ್ರಾಮ ವಾಸ್ತವ್ಯದಲ್ಲಿ ತಹಸೀಲ್ದಾರ್ ವಾಣಿ ಸಲಹೆ……ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ…….

ವಿಜಯಸಾಕ್ಷಿ ಸುದ್ದಿ, ರೋಣ

ಗ್ರಾಮಸ್ಥರು ಸರಿಯಾದ ದಾಖಲಾತಿಗಳನ್ನು ಒದಗಿಸುವ ಮೂಲಕ ಹಕ್ಕು ಪತ್ರಗಳನ್ನು ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ವಾಣಿ ಉಂಕಿ ಹೇಳಿದರು.
ಅವರು ಶನಿವಾರ ತಾಲೂಕಿನ ಮೇಲ್ಮಠ ಗ್ರಾಮದಲ್ಲಿ ಜರುಗಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಪಿಡಿಒ ಕೂಡಿಕೊಂಡು ಸರ್ವೆ ಕಾರ್ಯವನ್ನು ನಡೆಸಿದರೂ ಸಹ 90 ಜನರ ಪೈಕಿ 8 ಜನರು ಮಾತ್ರ ದಾಖಲಾತಿಗಳನ್ನು ಒದಗಿಸಿದ್ದಾರೆ. ಹೀಗಾಗಿ ಇನ್ನುಳಿದ 82 ಜನರು ಸಹ ದಾಖಲಾತಿಗಳನ್ನು ಒದಗಿಸುವ ಮೂಲಕ ನಿವೇಶನದ ಹಕ್ಕು ಪತ್ರಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಒತ್ತುವರಿ ಕುರಿತು ಪರಿಶೀಲನೆ ನಡೆಸಲು ಸರ್ವೆ ಇಲಾಖೆಯ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿಕೊಡಲಾಗುವುದು ಎಂದರು. ಈ ಬಾರಿ ಗ್ರಾಮ ವಾಸ್ತವ್ಯ ಮೇಲ್ಮಠ ಗ್ರಾಮದಲ್ಲಿ ಅರ್ಥ ಪೂರ್ಣವಾಗಿ ನಡೆಯಿತು. ಮೇಲ್ಮಠ ತಾಲೂಕಿನ ಅತಿ ಚಿಕ್ಕ ಗ್ರಾಮವಾಗಿದ್ದು, ಕೇವಲ 852 ಜನಸಂಖ್ಯೆಯನ್ನು ಹೊಂದಿದೆ. ಗ್ರಾಮದಲ್ಲಿ ಸಂಚರಿಸಿ ಬಂದ ತಹಸೀಲ್ದಾರ್ ವಾಣಿ ಉಂಕಿಯವರು ಸಮಯವನ್ನು ವ್ಯರ್ಥ ಮಾಡದೆ ವಿವಿಧ ಇಲಾಖೆಗಳಿಂದ ಸಾರ್ವಜನಿಕರಿಗೆ ಲಭ್ಯವಾಗುವ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು.

ಇದು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಯಿತು. ಮುಖ್ಯವಾಗಿ ಸರಕಾರಿ ಶಾಲಾ ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಅವಕಾಶ ಕೊಟ್ಟಿದ್ದು ಪಾಲಕರಲ್ಲಿ ಸಂತಸ ಮೂಡಿಸಿತ್ತು. ಸಭೆಯಲ್ಲಿ ಬರಿ ಏಳು ಅರ್ಜಿಗಳು ಮಾತ್ರ ಸಲ್ಲಿಕೆಯಾದವು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು,ಪಿಡಿಒ, ಗ್ರಾಮಲೆಕ್ಕಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಎಪಿಎಮ್ ಸಿ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷ; ಗಾಬರಿ ಬಿದ್ದ ಜನರು

0

ಮಟಮಟ ಮಧ್ಯಾಹ್ನ ನಡೆದ ಘಟನೆ….

ವಿಜಯಸಾಕ್ಷಿ ಸುದ್ದಿ, ನರಗುಂದ

ಎಪಿಎಮ್ ಸಿ ಆವರಣದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಆತಂಕದ ವಾತಾವರಣ ‌ನಿರ್ಮಾಣವಾಗಿ‌ ಗಾಬರಿಬಿದ್ದ ಕೆಲವು ಜನರು ಓಡಾಡಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಇಲ್ಲಿನ ಎಪಿಎಮ್ ಸಿ ಆವರಣದಲ್ಲಿ ಇರುವ ಕಚೇರಿಯ ಹಿಂದಿನ ಪೈಪ್ ನಲ್ಲಿ ನಾಗರಹಾವು ಇತ್ತು. ಅದನ್ನು ಕಂಡ ಕೆಲವು ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿ ಓಡಾಡಿದರು.

ತಕ್ಷಣವೇ ಉರಗ ತಜ್ಞ ಸ್ನೇಕ್ ಬುಡ್ಡಾ ಅವರಿಗೆ ಕಚೇರಿಯ ಸಿಬ್ಬಂದಿ ಕರೆ ಮಾಡಿ ಕರೆಸಿಕೊಂಡಿದ್ದಾರೆ.

ಆಗ ಸ್ಥಳಕ್ಕೆ ಬಂದ ಸ್ನೇಕ್ ಬುಡ್ಡಾ ಅವರು, ಅದನ್ನು ಹಿಡಿಯಲು ‌ಮುಂದಾದರು. ಸಾಕಷ್ಟು ಹೊತ್ತು ಕಾಡಿಸಿದ ನಾಗರಹಾವು ಕೊನೆಗೂ ನೀರಿನ ಜಾರಿನೊಳಗೆ ಹೋಗಿ ಕುಳಿತುಕೊಂಡಿತು.

ನಂತರ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ‌ ನಾಗರಹಾವನ್ನು ಬಿಟ್ಟು ಬರಲಾಯಿತು.

ಗದಗ ಜಿಲ್ಲಾ ಅಧ್ಯಕ್ಷರಾಗಿ ಮಂಜುನಾಥ್ ದಾಮೋದರ ಆಯ್ಕೆ

0

ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ಯುವ ಪರಿಷದ್‌ನ ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಉತ್ಸಾಹಿ ಯುವಕ ಮಂಜುನಾಥ ದಾಮೋದರ ಇವರನ್ನು ಆಲ್ ಇಂಡಿಯಾ ಭಾವಸಾರ ಕ್ಷತ್ರಿಯ ಮಹಾಸಭಾ ಯುವ ಪರಿಷದ್‌ನ ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ರಾಜ್ಯಾಧ್ಯಕ್ಷರಾದ ಅನಂತ್‌ಕುಮಾರ k.G, ಹಾಗೂ AIBKM ಸದಸ್ಯರಾದ ಅಶ್ವತ್ ಸುಲಾಖೆ, AIBKM ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಅರುಣ್ ಕುಮಾರ್, ಮತ್ತು ಸಮಾಜದ ಅಧ್ಯಕ್ಷರಾದ ಮಂಜುನಾಥ ಕರಣೆ ಅವರು ಈ ಆಯ್ಕೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಚುನಾವಣೆ ಎಂಬ ಯುದ್ಧದಲ್ಲಿ ಕಾರ್ಯಕರ್ತರು ಸೈನಿಕರಾಗಿ ಕೆಲಸ ಮಾಡಬೇಕು…….

ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ…..ಜನರ ನಾಡಿಮಿಡಿತದ ಜೊತೆ ಸಂಪರ್ಕ ಸಾಧಿಸಲು ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು………

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕ್ಷೇತ್ರದಲ್ಲಿ ಹಿಂದೆ ಏನು ಅಭಿವೃದ್ಧಿ ಕೆಲಸಗಳಾಗಿದ್ದವು, ಇಂದು ಏನಾಗಿದೆ ಹಾಗೂ ಮುಂದೆ ಭವಿಷ್ಯದಲ್ಲಿ ಬಿಜೆಪಿ ಕಂಡಂತ ಕನಸನ್ನು ಜನರ ಮನೆ ಮನೆ ಬಾಗಿಲಿಗೆ ತಲುಪಿಸಿ ಅವರ ನಾಡಿಮಿಡಿತದ ಜೊತೆ ಸಂಪರ್ಕ ಸಾಧಿಸಬೇಕೆಂದು ಜವಳಿ, ಸಕ್ಕರೆ ಹಾಗೂ ಕೈಮಗ್ಗ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.

ಶನಿವಾರ ಇಲ್ಲಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಅವರು ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಿಜೆಪಿ ಎಂದರೆ ಅದು ಕಾರ್ಯಕರ್ತರ ಪಕ್ಷ, ಪ್ರತಿಭೆ ಇದ್ದವರು ಯಾರೇ ಪಕ್ಷಕ್ಕೆ ಬರಲಿ ಅವರನ್ನು ಮುಂದೆ ಹಾಕಿಕೊಂಡು ನಾವು ಹಿಂದೆ ಸಾಗುತ್ತೇವೆ. ಲಾಲಕೃಷ್ಣ ಅದ್ವಾನಿ, ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಶಿ, ಬಿ.ಎಸ್.ಯಡಿಯೂರಪ್ಪ ಅವರಂತಹ ಮಹಾನ್ ನಾಯಕರು ಕಟ್ಟಿದಂತಹ ಪಕ್ಷ ಇದಾಗಿದೆ. ಜಗತ್ತೇ ಮೆಚ್ಚುವಂತ ನಾಯಕತ್ವ ಹೊಂದಿರುವ ನಮ್ಮೆಲ್ಲರ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಎಂಟು ವರ್ಷದಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಮನೆ ಮನೆಗೆ ತಲುಪಿಸಿ ಮತದಾರರ ಮನವೊಲಿಸಬೇಕು ಎಂದರು.

ನಮ್ಮ ಎದುರಾಳಿ ಯಾವ ಪಕ್ಷದವರು, ಯಾರಿಗೆ ಟಿಕೆಟ್ ಸಿಗುತ್ತದೆ ಎಂಬ ಬಗ್ಗೆ ಚಿಂತೆ ಮಾಡಬೇಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸುವ ಜವಾಬ್ದಾರಿ ಹೊತ್ತುಕೊಂಡು ಜ.21 ರಿಂದ ಜ.29 ರ ವರೆಗೆ ನಡೆಯುವ ವಿಜಯ ಸಂಕಲ್ಪ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕರೆ ನೀಡಿದರು.

ನಂತರ ಮನೆ ಮನೆಗೆ ತೆರಳಿದ ಅವರು ವಿಜಯ ಸಂಕಲ್ಪ ಅಭಿಯಾನದ ಕರಪತ್ರಗಳನ್ನು ನೀಡಿ ನಾಡು ಕಟ್ಟುವ ಕಾರ್ಯದಲ್ಲಿ ಸಮರ್ಥ ನೇತ್ರತ್ವದ ಜೊತೆಯಾಗೋಣವೆಂದು ಬಿಜೆಪಿಯ ಭರವಸೆಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಿದರು.

ವಿಜಯ ಸಂಕಲ್ಪ ಅಭಿಯಾನವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಕಳೆದ ಎರಡು ತಿಂಗಳಿಂದ ಪ್ರತಿ ಮತಗಟ್ಟೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ವಿಜಯ ಸಂಕಲ್ಪ ಅಭಿಯಾನವೆಂದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬ ಉದ್ದೇಶವಾಗಿದೆ.

60 ವರ್ಷ ಆಡಳಿತ ಮಾಡಿದ್ದ ಕಾಂಗ್ರೆಸ್ ಪಕ್ಷ ಮಾಡದ ಅಭಿವೃದ್ಧಿ ಕೆಲಸಗಳನ್ನು ಜಗತ್ತೆ ಮೆಚ್ಚಿಕೊಂಡಿರುವ ನಾಯಕ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಎಂಟು ವರ್ಷಗಳಲ್ಲಿ ಮಾಡಿರುವ ಎ ಟು ಝಡ್ ಜನಪರ ಯೋಜನೆಗಳನ್ನು ಹಾಗೂ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟಿರುವ ಕಾರ್ಯಕ್ರಮಗಳ ಪಟ್ಟಿಯನ್ನು ಗಂಭೀರವಾಗಿ ತೆಗೆದುಕೊಂಡು ಮನೆ ಮನೆಗೆ ತಲುಪಿಸಿದರೆ ಸಾಕು ನಾವು ಚುನಾವಣೆ ಎಂಬ ಯುದ್ದದಲ್ಲಿ ಗೆದ್ದಂತೆ. ಯುದ್ದದಲ್ಲಿ ಕಾರ್ಯಕರ್ತರು ಸೈನಿಕರಾಗಿ ಕೆಲಸ ಮಾಡಬೇಕೆಂದು ಎಸ್.ವಿ.ಸಂಕನೂರ ಕರೆ ನೀಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಎಸ್.ಬಿ.ದಾನಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿ.ಪಂ.ಸದಸ್ಯರಾದ ಎ.ಬಿ.ಹಿರೇಮಠ, ಶಾಂತಾದೇವಿ ನಿಡವಣಿ, ಮುಖಂಡರಾದ ಸಿದ್ದನಗೌಡ ಪಾಟೀಲ, ಶಿವಾನಂದ ಗುಂಡಗೋವಿ, ರಾಯನಗೌಡ ಪಾಟೀಲ, ಎನ್.ಪಿ.ಕುಲಕರ್ಣಿ, ಪುರಸಭೆ ಸದಸ್ಯರಾದ ಮಹಾಂತೇಶ ಕಲಾಲ, ಜ್ಯೋತಿ ಗೊಲ್ಲರ, ರೇಣುಕಾ ಕಲಾಲ, ಸುಮಂಗಲಾ ಬೆಂಡಿಗೇರಿ, ಬಸವರಾಜ ಕಾತರಕಿ, ಬಸವರಾಜ ಕಟ್ಟಿಮನಿ, ಅಡಿವೆಪ್ಪ ಶಿರಸಂಗಿ, ಗೀತಾ ಜನ್ನರ, ಎಂ.ಬಿ.ತೋಟದ, ಈರಣ್ಣ ಚವಡಿ, ಮಹಾಲಕ್ಷ್ಮೀ ಮದಗುಣಕಿ, ಮಲ್ಲಿಕಾರ್ಜುನ ಸಂಗನಗೌಡರ, ಸಂತೋಷ ನಾವಳ್ಳಿ, ವಿನಾಯಕ ದಾಡಿಬಾವಿ ಇತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.  

error: Content is protected !!