Home Blog Page 3202

ಬೆಂಕಿ ಅವಘಡ: ಸುಟ್ಟುಹೋದ ಗ್ಯಾರೇಜ್

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ಗದಗ ರಸ್ತೆಯಲ್ಲಿನ ಟ್ರ‍್ಯಾಕ್ಟರ್ ಗ್ಯಾರೇಜ್‌ಗೆ ಶುಕ್ರವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್‌ನಲ್ಲಿನ ಎಲ್ಲ ಉಪಕರಣಗಳು ಸುಟ್ಟು ಕರಕಲಾಗಿವೆ. ದಾದಾಪೀರ ಅಲ್ಲಾಸಾಬ ಮುಳುಗುಂದ ಅವರಿಗೆ ಸೇರಿದ ಗ್ಯಾರೇಜ್ ಇದಾಗಿದೆ.

ಗ್ಯಾರೇಜನಲ್ಲಿ ಟ್ರ್ಯಾಕರ್ ರಿಪೇರಿ ಮಾಡಲು ಬಳಸುವ ಉಪಕರಣಗಳು, ಆಯಿಲ್ ಪಾಕೆಟ್, ಫಿಲ್ಟರ್, ಪ್ಯಾಕಿಂಗ್ ಕಿಟ್, ಒರಿಂಗ್, ರಬ್ಬರ್ ಪೈಪ್, ಬ್ಯಾಟರಿ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

ಸುದ್ದಿ ತಿಳಿದು ಗ್ಯಾರೇಜ್ ಮಾಲೀಕರು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ ಬೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜು ಮಾಹಿತಿ ತಹಸೀಲ್ದಾರರಿಗೆ ಸಲ್ಲಿಸಿದ್ದಾರೆ.

ಶಹರ ಪೊಲೀಸರ ಕಾರ್ಯಾಚರಣೆ; ಬೆಟ್ಟಿಂಗ್ ನಲ್ಲಿ ತೊಡಗಿದ್ದ ವಿನೋದ್ ಪವಾರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಡಿ.28ರಂದು ಸಿಡ್ನಿಯಲ್ಲಿ ನಡೆದ ಸಿಡ್ನಿ ಸಿಕ್ಸರ್ಸ್-ಮೆಲಬೊರ್ನೆ ರೆನಜೆಡಿಸ್‌ ನಡುವಿನ ಟಿ-20 ಕ್ರಿಕೆಟ್‌ ಪಂದ್ಯಾವಳಿಯ ಸಮಯದಲ್ಲಿ ಸದರಿ ತಂಡಗಳ ಟಾಸ್‌ ಹಾಗೂ ಪಂದ್ಯದ ಸೋಲು-ಗೆಲುವಿನ ಕುರಿತಾಗಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿತನೊಬ್ಬನನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ನಾಲ್ವಾಡಗಲ್ಲಿ ಸಮೀಪದ ಜೋಡಮಾರುತಿ ಗುಡಿಯ ಮುಂದಿನ ಬಯಲು ಜಾಗದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಕಿಲ್ಲಾ ಓಣಿಯ ವಿನೋದ ನಾಗೋಸಾ ಪವಾರ ಎಂಬಾತನನ್ನು ಪೊಲೀಸರು ಬಂಧಿಸಿ, ಆತನಿಂದ 4000 ರೂ ನಗದು ಹಣ ಹಾಗೂ ಬೆಟ್ಟಿಂಗ್‌ಗೆ ಬಳಸಿದ್ದ ಕಾಗದ/ಪೆನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಸದರಿ ಆರೋಪಿತನ ವಿರುದ್ಧ ಕಲಂ 78(1)(ಎ)(6) ಕೆ.ಪಿ ಆಕ್ಟ್‌ ಅಡಿ ಶಹರ ಪೊಲೀಸ್‌ ಠಾಣೆಯ ಮಹಿಳಾ ಪಿಎಸ್‌ಐ ಜಿ.ಟಿ. ಜಕ್ಕಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪೂರ್ಣ ಕಾಮಗಾರಿಯನ್ನು ಉದ್ಘಾಟಿಸಿದರೆ ಪರಿಣಾಮ ನೆಟ್ಟಗಿರದು; ಮಾಜಿ ಶಾಸಕ ಜಿ.ಎಸ್. ಪಾಟೀಲ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ರೋಣ

ಜಿಗಳೂರ ಕೆರೆಯು ಅತ್ಯಂತ ಮಹತ್ವಾಂಕ್ಷಿ ಯೋಜನೆಯಾಗಿದ್ದು, ಕಾಮಗಾರಿ ಪೂರ್ಣಗೊಳ್ಳದೆ ಕ್ಷೇತ್ರದ ಶಾಸಕರು ಉದ್ಘಾಟನೆಗೆ ಮುಂದಾಗಿರುವುದು ಹಾಸ್ಯಸ್ಪದವಾಗಿದೆ. ಒಂದು ವೇಳೆ ಉದ್ಘಾಟನೆಗೆ ಮುಂದಾದಲ್ಲಿ ಪರಿಣಾಮ ನೆಟ್ಟಗಿರಲ್ಲ ಎಂದು ಮಾಜಿ ಶಾಸಕ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ಅವರು ಬುಧವಾರ ತಾಲೂಕಿನ ಜಿಗಳೂರ ಕೆರೆಗೆ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

2008ರಲ್ಲಿ ಅಂದಿನ ಸರಕಾರ ಜಿಗಳೂರ ಗ್ರಾಮದ ಹತ್ತಿರ ಬೃಹತ್ ಕೆರೆ ನಿರ್ಮಿಸಲು ಅನುಮೋದನೆ ನೀಡಿತ್ತು. ಆದರೆ ಅದಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಲಿಲ್ಲ ಜೊತೆಗೆ ತಾಲೂಕು ಸರಹದ್ದಿನ ಜಮೀನುಗಳನ್ನು ಕೆರೆ ನಿರ್ಮಾಣಕ್ಕೆ ಕೊಟ್ಟರೂ ಸಹಿತ ಯೋಜನೆಯಿಂದ ರೋಣ ಪಟ್ಟಣವನ್ನು ಕೈಬಿಡಲಾಗಿತ್ತು. ನಂತರ 2013 ರಲ್ಲಿ ನಾನು ಶಾಸಕನಾಗಿ ಆಯ್ಕೆಗೊಂಡ ಮೇಲೆ ಯೋಜನೆಗೆ 65 ಕೋಟಿ ರೂ. ಬಿಡುಗಡೆಗೊಳಿಸಿ ರೋಣ ಪಟ್ಟಣವನ್ನು ಈ ಯೋಜನೆಗೆ ಒಳಪಡಿಸಿದೆ. ಈಗ ಈ ಯೋಜನೆಯಲ್ಲಿ ರೋಣ, ಗಜೇಂದ್ರಗಡ, ನರೆಗಲ್ಲ ಪಟ್ಟಣಗಳು ಒಳಪಡಲಿವೆ ಎಂದರು.

ಇನ್ನು ಸ್ಥಳೀಯ ಶಾಸಕರಿಂದ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ 16 ಕೋಟಿ ರೂ. ಅನುದಾನವನ್ನು ನೀಡಿ ಸುಂದರ ಕಟ್ಟಡವನ್ನು ನಿರ್ಮಿಸಲಾಗಿತ್ತು. ವಿಪರ್ಯಾಸ ಅಂದರೆ ಶಾಲೆ ಹಾಗೂ ವಸತಿ ನಿಲಯಕ್ಕೆ ಮೂಲಭೂತ ಸೌಲಭ್ಯಗಳ ಅಗತ್ಯವಿದ್ದರೂ ಸಹ ಅವುಗಳನ್ನು ಪೂರೈಸದೇ ಕಟ್ಟಡವನ್ನು ಉದ್ಘಾಟಿಸಿ ಮಕ್ಕಳಿಗೆ ಅನಾನುಕೂಲವಾಗುವಂತೆ ಮಾಡಿದ್ದಾರೆ.

ಮಾರನಬಸರಿ, ಸವಡಿ ಸೇರಿ ಅನೇಕ ಗ್ರಾಮಗಳಲ್ಲಿ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಅನುದಾನವನ್ನು ಬಿಡುಗಡೆಗೊಳಿಸಿದ್ದೆ. ಆದರೆ ಇಂದಿನ ಶಾಸಕರು ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ ಅವುಗಳನ್ನು ಉದ್ಘಾಟಿಸಿದ್ದು ಸರಿಯೇ ಎಂದ ಅವರು ಇದೇ ಮಾದರಿಯಲ್ಲಿ ಜಿಗಳೂರ ಕೆರೆ ಉದ್ಘಾಟನೆಗೆ ಮುಂದಾದರೆ ಸಹಿಸಲು ಸಾದ್ಯವಿಲ್ಲ ಎಂದು ಎಚ್ಚರಿಸಿದರು.

ಪುರಸಭೆಯ ಅಧ್ಯಕ್ಷೆ ರಂಗವ್ವ ಭಜಂತ್ರಿ, ತಾಪಂ ಮಾಜಿ ಸದಸ್ಯರಾದ ಪ್ರಭು ಮೇಟಿ, ಶಿದ್ಲಿಂಗಪ್ಪ ಯಾಳಗಿ, ಪರಶುರಾಮ ಅಳಗವಾಡಿ, ಮುತ್ತಣ್ಣ ಸಂಗಳದ, ಯೂಸುಫ್ ಇಟಗಿ, ವಿ.ಬಿ.ಸೋಮನಕಟ್ಟಿಮಠ, ತೋಟಪ್ಪ ನವಲಗುಂದ ಸೇರಿದಂತೆ ಇತರರಿದ್ದರು.

ಕೆರೆಯು 380 ಎಕರೆ ಪ್ರದೇಶದಲ್ಲಿ ನಡೆಯುತ್ತಿದೆ. ಕಾಮಗಾರಿ ಸಂಪೂರ್ಣ ಮುಗಿದಿಲ್ಲ. ಸ್ವಲ್ಪ ನೀರು ಬಿಟ್ಟಿದ್ದಾರೆ. ಈ ಕೆರೆಗೆ 5 ಟಿಎಂಸಿಗಿಂತಲೂ ಹೆಚ್ಚಿನ ನೀರು ಬೇಕು. ಇನ್ನು ಕೆಲಸ ಸಂಪೂರ್ಣಗೊಳ್ಳಲು ನಾಲ್ಕು ತಿಂಗಳು ಬೇಕು. ಉದ್ಘಾಟನೆ ಬಗ್ಗೆ ನನಗೆ ತಿಳಿದಿಲ್ಲ.

-ಗುಂಡುರಾವ್ ಕುಲಕರ್ಣಿ, ಕೆರೆ ಕಾಮಗಾರಿ ವ್ಯವಸ್ಥಾಪಕರು.

ರೋಣ, ನರೆಗಲ್ಲ, ಗಜೇಂದ್ರಗಡ ಸ್ಥಳೀಯ ಸಂಸ್ಥೆಗಳಿಂದಲೂ 10 ಕೋಟಿ ರೂ.ಗಳ ಅನುದಾನವನ್ನು ಯೋಜನೆಗೆ ಬಳಕೆ ಮಾಡಿಕೊಂಡರೂ ಯೋಜನೆಯು ಶೇ ೨೫ ರಷ್ಟು ಪ್ರಗತಿಯನ್ನು ಸಾಧಿಸಿಲ್ಲ. ಹೀಗಿರುವಾಗ ಸ್ಥಳೀಯ ಶಾಸಕರು ಯಾವ ನೈತಿಕತೆ ಮೇಲೆ ಉದ್ಘಾಟನೆಗೆ ಮುಂದಾಗಿದ್ದಾರೆ ಎಂಬುದೇ ಆಶ್ಚರ್ಯವಾಗಿದೆ. ಯೋಜನೆ ಪೂರ್ಣಗೊಂಡರೆ ಇದೇ ಶಾಸಕರು ಉದ್ಘಾಟನೆ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಜೊತೆಗೆ ನಾನು ಸೇರಿದಂತೆ ಕ್ಷೇತ್ರದ ಜನರು ಎಲ್ಲರೂ ಭಾಗಿಯಾಗುತ್ತೇವೆ. ಆದರೆ ಅಪೂರ್ಣ ಯೋಜನೆಯ ಉದ್ಘಾಟನೆಗೆ ಪ್ರಯತ್ನಿಸಿದರೆ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದು ಜಿ.ಎಸ್.ಪಾಟೀಲ ಎಚ್ಚರಿಸಿದರು.

ಶಾಲಾ ಮಕ್ಕಳಿಂದ ಗುಲಾಬಿ ಹೂವು ಆಂದೋಲನ

ಸಾರ್ವಜನಿಕವಾಗಿ ಧೂಮಪಾನ ಮಾಡುವ ಜನರಿಗೆ ಶಾಲಾ ಮಕ್ಕಳಿಂದ ಗುಲಾಬಿ ಹೂವು

ವಿಜಯಸಾಕ್ಷಿ ಸುದ್ದಿ, ಹೊಸಕೋಟೆ

ತಾಲೂಕಿನ ಮುಗಬಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಪಿಲ್ಲಗುಂಪಿ ಕೈಗಾರಿಕಾ ಪ್ರದೇಶದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕೈಗಾರಿಕಾ ಪ್ರದೇಶದ ಅಂಗಡಿ ಮುಗ್ಗಟ್ಟುಗಳ  ಮಾಲೀಕರಿಗೆ  ಹಾಗೂ ಸಾರ್ವಜನಿಕವಾಗಿ ಧೂಮಪಾನ  ಮಾಡುವ ಸಾರ್ವಜನಿಕರಿಗೆ ಶಾಲಾ ಮಕ್ಕಳಿಂದ  ಗುಲಾಬಿ ಹೂವು ನೀಡಿ  ಧೂಮಪಾನ ವ್ಯಸನಿಗಳಾಗದಂತೆ  ಮನವೊಲಿಸಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ  ವೀಣಾ  ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಶಾಲಾ ಮಕ್ಕಳು  ಮತ್ತು ವಯೋವೃದ್ಧರು  ಧೂಮಪಾನ ಹಾಗೂ ಮಧ್ಯಪಾನ ವ್ಯಸನಿಗಳಾಗುತ್ತಿದ್ದು, ಇದರಿಂದ ಸಮಾಜದ ಆರೋಗ್ಯ ಸಾರ್ವಜನಿಕರ ಆರ್ಥಿಕ ಬದುಕು ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಗ್ಧ ಮಕ್ಕಳಿಂದ  ಗುಲಾಬಿ ಹೂ ನೀಡಿ, ಧೂಮಪಾನ ಹಾಗೂ ಮಧ್ಯಪಾನದ ಬಗ್ಗೆ ಆರೋಗ್ಯ ಶಿಕ್ಷಣವನ್ನು ನೀಡಲಾಗುವ ಈ ವಿಶಿಷ್ಟ ಕಾರ್ಯಕ್ರಮವೇ ಗುಲಾಬಿ ಆಂದೋಲನಎಂದು ತಿಳಿಸಿದರು.

 ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಗುರುರಾಜರವರು  ಹೊಸಕೋಟೆ ತಾಲೂಕಿನಲ್ಲಿ  ತಂಬಾಕು ನಿಯಂತ್ರಣ ಕಾಯ್ದೆ ಅಡಿಯಲ್ಲಿ ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಮುಂತಾದ ಇಲಾಖೆಗಳ ಆರೋಗ್ಯ ಇಲಾಖೆಯೊಂದಿಗಿನ ಸಮನ್ವಯತೆಯೊಂದಿಗೆ ಕಾಲಕಾಲಕ್ಕೆ  ಅಂಗಡಿ ಮುಗ್ಗಟ್ಟುಗಳ ಮೇಲೆ ದಾಳಿ ಮಾಡಿ, ನಿರಂತರ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ್, ಸಮುದಾಯ ಆರೋಗ್ಯ ಅಧಿಕಾರಿ ಕುಮಾರಿ  ಗೋಮತಿ, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಎಚ್ ಸತ್ಯಾವತಿ, ಸಹ ಶಿಕ್ಷಕರಾದ ಶ್ರೀಮತಿ ಅಶ್ವತ್ತಮ್ಮ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.

ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖಾತೆಗಳಿಗೆ ಕನ್ನ; ಲಕ್ಷಾಂತರ ರೂ.‌ ವಂಚಿಸಿ ಗ್ರಾಹಕರಿಗೆ ಸಂತೋಷಕುಮಾರ್ ಮೋಸ

ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವ ನೆಪದಲ್ಲಿ ಗ್ರಾಹಕರಿಗೆ ವಂಚನೆ; ಮಾರಾಟ ಪ್ರತಿನಿಧಿಯಿಂದ ವಂಚನೆ ಆರೋಪ


ವಿಜಯಸಾಕ್ಷಿ ಸುದ್ದಿ, ಮುಳಗುಂದ

ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆ ಸಹಯೋಗದಲ್ಲಿನ ಎಸ್.ಬಿ.ಐ ಬ್ಯಾಂಕ್ ನವರು ವಿತರಣೆ ಮಾಡಲಾಗಿದ್ದ ಕ್ರೆಡಿಟ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ ನೆಪದಲ್ಲಿ ಕ್ರೆಡಿಟ್ ಕಾರ್ಡ್ ಮಾರಾಟ ಪ್ರತಿನಿಧಿಯೊಬ್ಬ 13ಕ್ಕೂ ಹೆಚ್ಚು ಗ್ರಾಹಕರ ಖಾತೆಗಳಿಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದ್ದು. ಹಣ ಕಳೆದುಕೊಂಡ ಕರ್ನಾಟಕ ಬ್ಯಾಂಕ್ ಗ್ರಾಹಕರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಸಂತೋಷಕುಮಾರ ಗೋದಿ ಎಂಬ ವ್ಯಕ್ತಿ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸೇಲ್ಸಮನ್‌ಆಗಿ ಕಾರ್ಯನಿರ್ವಹಿಸುತ್ತಿದ್ದು. ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವ ನೆಪದಲ್ಲಿ ಗ್ರಾಹಕರ ಖಾತೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮಾಹಿತಿಯನ್ನು ತೆಗೆದುಕೊಂಡು ತನ್ನ ಖಾತೆಗೆ ಸುಮಾರು 5.50 ಲಕ್ಷ ರೂ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯ ಗ್ರಾಹಕರ ಖಾತೆಗಳಲ್ಲಿ ಹಣ ಕಡಿತಗೊಂಡಿದ್ದು ತಡವಾಗಿ ತಿಳಿದುಬಂದಿದ್ದು ಬ್ಯಾಂಕಿನಲ್ಲಿ ವಿಚಾರಣೆ ಮಾಡಿದಾಗ ಕ್ರೆಡಿಟ್ ಕಾರ್ಡ ಬಳಿಕೆ ಮಾಡಿದ್ದರಿಂದ ಹಣ ಕಡಿತಗೊಂಡಿದೆ ಎಂಬ ಉತ್ತರ ದೊರೆತಾಗ ಗ್ರಾಹಕರು ನಾವು ಎಲ್ಲಿಯೂ ಕ್ರೆಡಿಟ್ ಕಾರ್ಡ್ ಬಳಿಕೆ ಮಾಡಿರುವುದಿಲ್ಲ ಹೇಗೆ ಕಡಿತಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.

ಆಗ ಸಂತೋಷ್‌ಕುಮಾರ ಗೋದಿ ಎಂಬ ವ್ಯಕ್ತಿಯನ್ನು ವಿಚಾರಣೆ ಮಾಡಿದಾಗ ವಂಚನೆ ಮಾಡಿದ್ದು ಬೆಳಕಿಗೆ ಬಂದಿದ್ದು ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಸಿಪಿಐ ಅಶೋಕ ಸದಲಗಿ ಅವರು. ಹಣ ದೋಚಿದ ಆರೋಪಿ ಸಂತೋಷಕುಮಾರ ಗೋದಿ ಈತನ ವಿರುದ್ದ ವಂಚನೆ ಹಾಗೂ ಆರ್ಥಿಕ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಹಾವೇರಿ, ಉಡುಪಿ, ರಾಯಚೂರಿನಲ್ಲಿ ಜವಳಿ ಪಾರ್ಕ್

ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಭರವಸೆ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ-ಸುವರ್ಣಸೌಧ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಯಡಿ ರಾಜ್ಯದ 6ಕಡೆ ಜವಳಿ ಪಾರ್ಕ್ ಈಗಾಗಲೇ ನಿರ್ಮಿಸಲಾಗಿದೆ. ಹಾವೇರಿ, ಉಡುಪಿ ಹಾಗೂ ರಾಯಚೂರಿನಲ್ಲೂ ಜವಳಿ ಪಾರ್ಕ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.

ಮಂಗಳವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೆ.ಎಸ್. ನವೀನ್ ಹಾಗೂ ಚನ್ನರಾಜ್ ಬಸವರಾಜ್ ಹಟ್ಟಿಹೊಳಿ ಅವರ ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ರಾಜ್ಯ ಸರ್ಕಾರ 2019ರಲ್ಲಿ ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿಯನ್ನು ಜಾರಿಗೊಳಿಸಿದೆ. ಇದರ ಅನ್ವಯ ಪ್ರತ್ಯೇಕ ಉದ್ಯಮಿ ಅಥವಾ ಎಸ್.ಪಿ.ವಿಗಳು ೧೫ ಎಕರೆ ಜಾಗ ಹೊಂದಿ ಜವಳಿ ಪಾರ್ಕ್ ಸ್ಥಾಪಿಸಲು ಮುಂದಾದರೆ ಸರ್ಕಾರದಿಂದ ಸಹಾಯ ನೀಡಲಾಗುವುದು ಎಂದರು.

ಶಾಸಕ ಕೆ.ಎಸ್. ನವೀನ್ ಮಾತನಾಡಿ, ಜಾಗತಿಕವಾಗಿ ಪಾಕಿಸ್ತಾನ ಹಾಗೂ ಚೈನಾ ಬಂಡವಾಳ ಹೂಡಿಕೆದಾರರ ವಿಶ್ವಾಸ ಕಳೆದುಕೊಂಡಿವೆ. ಮುಂದಿನ ದಿನಗಳಲ್ಲಿ ಭಾರತ ಸಿದ್ಧ ಉಡುಪು ತಯಾರಿಕೆ ಕೇಂದ್ರವಾಗಿ ಹೊರಹೊಮ್ಮಲಿದೆ. ರಾಜ್ಯ ಸರ್ಕಾರ ಇದಕ್ಕೆ ಸಿದ್ಧವಾಗಿದ್ದು, ರಾಜ್ಯದಲ್ಲಿ ಜವಳಿ ಉದ್ಯಮಕ್ಕೆ ಬೆಂಬಲ ನೀಡಬೇಕು ಎಂದರು.

ಜವಳಿ ಪಾರ್ಕ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿರುವ ಹಾಗೂ ಉದ್ಯೋಗ ನೀಡದಿರುವ ಉದ್ದಿಮೆದಾರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಚಿವ ಶಂಕರ್ ಪಾಟೀಲ್ ಮುನೇನಕೋಪ್ಪ ಭರವಸೆ ನೀಡಿದರು.

ಖಬರಸ್ತಾನ ಹಾಳುಗೆಡವಿದವರನ್ನು ಬಂಧಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳ ಮನವಿ

0

ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ನಾಯಕನಹಳ್ಳಿ ಬಳಿಯ ಖಬರಸ್ತಾನದಲ್ಲಿಯ ನೂರಕ್ಕೂ ಹೆಚ್ಚು ಸಮಾಧಿಗಳನ್ನು ರವಿವಾರ ರಾತ್ರಿ ನೆಲಸಮ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಸೌಹಾರ್ದತೆ ಕಾಪಾಡಬೇಕೆಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ ಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.

ಕರಾವಳಿ ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಸೃಷ್ಟಿಸುವ ದುರುದ್ದೇಶದಿಂದ ದುಷ್ಕರ್ಮಿಗಳು ಕೃಷ್ಣಾಪುರದ ಜಲೀಲ್ ಎಂಬ ಅಮಾಯಕನನ್ನು ಚಾಕುವಿನಿಂದ ಕೊಲೆ ಮಾಡಿರುವುದು ಸರಣಿ ಕೊಲೆಯ ಮುಂದುವರಿದ ಭಾಗವಾಗಿದ್ದರಿಂದ ನಾಗರಿಕರು ರೋಸಿ ಹೋಗಿದ್ದಾರೆ.

ಪ್ರಭಾವಿಗಳ ಬೆಂಬಲವಿಲ್ಲದೆ ಇಂತಹ ನಿರ್ಭಯವಾಗಿ ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಅಮಾಯಕ ಕುಟುಂಬವೊಂದನ್ನು ಅನಾಥವಾಗಿಸಿದ ಈ ಹತ್ಯೆಯನ್ನು ತಾವು ಗಂಭೀರವಾಗಿ ಪರಿಗಣಿಸಲೇಬೇಕಿದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಹುನ್ನಾರಕ್ಕೆ ಆಡಳಿತಯಂತ್ರವೇ ಬೆಂಬಲಕ್ಕೆ ನಿಂತಿದೆ ಎಂಬ ಭಾವನೆ ನಾಗರಿಕರ ಮನಸ್ಸಿನಲ್ಲಿ ಮನೆ ಮಾಡುವಂತಹ ಸನ್ನಿವೇಶವುಂಟಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕಕಾರಿಯಾಗಿದೆ.

ಇಂತಹ ಬೆಳವಣಿಗೆಯಿಂದ ವ್ಯವಸ್ಥೆಯ ಮೇಲಿನ ಭರವಸೆ ಕುಸಿದು ಹೋಗಿದೆ. ಹತ್ಯೆಯಾದ ಜಲೀಲ್ ಮನೆಗೆ ಹಾಗೂ ಫಾಝಿಲ್ ಮನೆಗೆ ತಾವು ತಕ್ಷಣ ಭೇಟಿ ಕೊಟ್ಟು ಸಾಂತ್ವನ ಹೇಳಿ ವ್ಯವಸ್ಥೆಯ ಮೇಲಿನ ಭರವಸೆಯನ್ನು ಮತ್ತೆ ಮರುಸ್ಥಾಪಿಸಬೇಕು.

ನೈಜ ಆರೋಪಿಗಳನ್ನು ಬಂಧಿಸಿ ಅಪರಾಧ ಸಂಹಿತೆಯ ಕಠಿಣ ಕಾಲಂನಡಿಯಲ್ಲಿ ಕೇಸು ದಾಖಲಿಸಬೇಕು. ಆರೋಪಿಗಳಿಗೆ ಬೆಂಬಲ ನೀಡುತ್ತಿರುವ ಶಕ್ತಿಗಳನ್ನು ಮಟ್ಟ ಹಾಕಬೇಕು. ಹತ್ಯೆಯಾದ ಜಲೀಲ್ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಮುಖ್ಯಮಂತ್ರಿಗಳಾದ ತಾವು ನಮಗೆ ಯಾವುದೇ ರಾಜಕೀಯ ಲಾಭದ ದುರುದ್ದೇಶ ಇಲ್ಲ ಎಂಬುದನ್ನು ಮನಗಂಡು ನಮ್ಮ ಹಕ್ಕೊತ್ತಾಯಗಳಿಗೆ ತಕ್ಷಣ ಸ್ಪಂದಿಸಬೇಕೆಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ. ಕೊಲೆಗೆ ಪ್ರತಿ ಕೊಲೆ ನಿಲ್ಲಲಿ.

ಕೊಲೆಗಡುಕರು ಯಾವುದೇ ಧರ್ಮದ ವಕ್ತಾರರಲ್ಲ. ದೇಶಪ್ರೇಮಿಗಳೇ ಒಂದಾಗಿ. ಮಾನವೀಯತೆಗೆ ಮುಂದಾಗಿ. ನಾಡಿನ ಶಾಂತಿ ಬಯಸುವವರೇ ನಮ್ಮೊಂದಿಗೆ ಕೈಜೋಡಿಸಿ. ಹೊಸಪೇಟೆ ತಾಲೂಕಿನ ಕೊಂಡನಾಯಕನಹಳ್ಳಿ ಬಳಿಯ ಖಬರಸ್ತಾನದಲ್ಲಿಯ ನೂರಕ್ಕೂ ಹೆಚ್ಚು ಸಮಾಧಿಗಳನ್ನು ರವಿವಾರ ರಾತ್ರಿ ನೆಲಸಮ ಮಾಡಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕೋಮು ಸೌಹಾರ್ದತೆ ಕಾಪಾಡಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್.) ಜಿಲ್ಲಾ ಅಧ್ಯಕ್ಷ ಮೊಹಮ್ಮದ್ ರಾಶೀದ್ ಖಾಝಿ, ಜಿಲ್ಲಾ ಕಾರ್ಯದರ್ಶಿ ಮೌಲಾನಾ ನೌಫಲ್ ಮರ್ಝೂಖಿ ರಬ್ಬಾನಿ, ಮೌಲಾನಾ ಸಫ್ವಾನ್ ಹನೀಫಿ ಪಕ್ಷಿಕೆರೆ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಅಬ್ದುಲ್ ಕವಲೂರ್, ರಾಜಾ ಸಾಬ್ ಇಟಗಿ ಇದ್ದರು.

ಶಿಗ್ಲಿ ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಶಿವಪ್ಪ ಕುರಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಹುದ್ದೆಗೆ ಮಂಗಳವಾರ ನಡೆದ ಚುನಾವಣೆಗೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ತಾಪಂ ಇಓ ಎಂ.ವಿ.ಬಡಗೇರ ಅವರು ಅವಿರೋಧ ಆಯ್ಕೆ ಎಂದು ಘೋಷಿಸಿದರು.

ಆಯ್ಕೆಯ ಪ್ರಕ್ರಿಯೆ ಬಳಿಕ ಗ್ರಾಪಂ ಸದಸ್ಯರು, ಬೆಂಬಲಿಗರು ನೂತನ ಉಪಾಧ್ಯಕ್ಷರಿಗೆ ಗೌರವಿಸಿದರು.

ಅಚ್ಚರಿ ಮೂಡಿಸಿದ ಎರಡು ತಲೆಯ ಆಕಳ ಕರು!

0

ವಿಜಯಸಾಕ್ಷಿ ಸುದ್ದಿ, ಹಾವೇರಿ

ಪ್ರಕೃತಿಯಲ್ಲಿ ಅನೇಕಾನೇಕ ಅಚ್ಚರಿಯ ಸಂಗತಿಗಳು ಘಟಿಸುತ್ತಲೇ ಇರುತ್ತವೆ. ಪ್ರತಿಯೊಂದೂ ಒಂದಕ್ಕೊಂದು ಭಿನ್ನವೇ. ಅಂತವುಗಳ ಸಾಲಿಗೆ ಹಾವೇರಿಯ ಒಂದು ಘಟನೆಯೂ ಸೇರ್ಪಡೆಯಾಗಿದೆ.

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಮಡ್ಲೂರು ಗ್ರಾಮದಲ್ಲಿ ವಿಚಿತ್ರ ಆಕಳ ಕರುವೊಂದು ಜನಿಸಿದೆ. ಅಚ್ಚರಿಯೆಂದರೆ, ಈ ಕರು ಎರಡು ತಲೆಗಳನ್ನು ಹೊಂದಿತ್ತು. ಶಾಂತಪ್ಪ ಈರಂಡ್ರಾ ಎಂಬುವರ ಆಕಳು ಈ ಎರಡು ತಲೆಯ ಗಂಡು ಕರುವಿಗೆ ಜನ್ಮ ನೀಡಿತ್ತು.

ದುರದೃಷ್ಟವಶಾತ್ ಕರು ಜನಿಸಿದ ತಕ್ಷಣವೇ ಸಾವನ್ನಪ್ಪಿದೆ. ಎರಡು ತಲೆಯ ವಿಚಿತ್ರ ಕರುವನ್ನು ನೋಡಲು ಗ್ರಾಮಸ್ಥರು ತಂಡೋಪತಂಡವಾಗಿ ಶಾಂತಪ್ಪನ ಮನೆಯ ಕಡೆ ಬರುತ್ತಿದ್ದು, ಅಸುನೀಗಿದ ಎರಡು ತಲೆಯ ಆಕಳ ಕರುವನ್ನು ನೋಡಿ ಮರುಕ ಪಡುತ್ತಿದ್ದಾರೆ. ಪೂಜೆ ಸಲ್ಲಿಸಿ ಪುನಿತರಾದರು.

ಕಲಘಟಗಿ ಮತಕ್ಷೇತ್ರದಲ್ಲಿ ರಂಗೇರುತ್ತಿರುವ ಚುನಾವಣಾ ಅಖಾಡ; ಯಾರು ಹಿತವರು ನಿಮಗೆ, ಈ ಮೂವರೊಳಗೆ..?!

ರಾಜು ದಖನಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕಲಘಟಗಿ ವಿಧಾನಸಭಾ ಮತಕ್ಷೇತ್ರ ಧಾರವಾಡ ಜಿಲ್ಲೆಯ ಹೈ ವೊಲ್ಟೇಜ್ ಮತಕ್ಷೇತ್ರಗಳಲ್ಲಿ ಒಂದಾಗಿದೆ. ಇಲ್ಲಿನ ಮತದಾರರ ಸ್ವಭಾವ ಕೂಡ ಅಷ್ಟೇ ವಿಭಿನ್ನವಾಗಿದೆ. ಕಲಘಟಗಿ ಮತಕ್ಷೇತ್ರ ಎಂದರೆ ಲಾಡ್ ಎನ್ನುವಷ್ಟರ ಮಟ್ಟಿಗೆ ಛಾಪು ಮೂಡಿಸಿದವರು ಮಾಜಿ ಸಚಿವ ಸಂತೋಷ ಲಾಡ್. ಆದರೆ, ಅವರ ಕೆಲ ಕಾರ್ಯವೈಖರಿಗೆ ಮತದಾರರು ಬೇಸತ್ತಂತೆ ಕಾಣುತ್ತಿದೆ.

ಈ ನಡುವೆಯೇ ಬಿಜೆಪಿಯಿಂದ ಅತ್ತು-ಕರೆದು, ಮಾಡಬಾರದ ಹೈ ಡ್ರಾಮಾಗಳನ್ನೆಲ್ಲಾ ಮಾಡಿ, ಟಿಕೆಟ್ ಪಡೆದಿದ್ದ ಹಾಲಿ ಶಾಸಕ ನಿಂಬಣ್ಣವರ, ಕಳೆದ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಲಾಡ್ ವಿರುದ್ಧ ಭಾರೀ ಅಂತರದಲ್ಲಿ ಗೆದ್ದು ಬೀಗಿದ್ದರು.

ಆದರೆ ಈ ಬಾರಿಯ ಚುನಾವಣೆಗೆ ಆಯಾ ಪಕ್ಷದ ಆಕಾಂಕ್ಷಿಗಳ ತೊಡಕೇ ಹೆಚ್ಚಾಗಿದೆ. ಅದರಲ್ಲೂ ಸಂತೋಷ ಲಾಡ್ ಮಾಜಿ ಶಾಸಕರಾಗಿ ಇದೇ ಕ್ಷೇತ್ರವನ್ನು ಪ್ರತಿನಿಧಿಸುವ ವಿಶ್ವಾಸ ವ್ಯಕ್ತಪಡಿಸುತ್ತಿರುವ ನಡುವೆಯೇ, ಮಾಜಿ ಎಂಎಲ್ಸಿ ನಾಗರಾಜ್ ಛೆಬ್ಬಿ ಕೂಡ ಅದೇ ಭಾಗದಲ್ಲಿ ಮನೆ ನಿರ್ಮಾಣ ಮಾಡಿದ್ದಲ್ಲದೆ, ಕಲಘಟಗಿ ಜನರ ನಡುವೆ ಬಿಡುವಿಲ್ಲದಂತೆ ಪ್ರದಕ್ಷಿಣೆ ಪ್ರಾರಂಭಿಸಿದ್ದಾರೆ.

ಆದರೆ ಮೊದಲಿನಿಂದಲೂ ಸ್ಥಳೀಯ ಮಟ್ಟದಲ್ಲಿ ಈ ಇಬ್ಬರೂ ಘಟಾನುಘಟಿ ನಾಯಕರು ಬೇರೊಂದು ಊರಿನಿಂದ ಬಂದವರು ಎನ್ನುವ ಕೂಗು ಬಿಟ್ಟರೆ ಮತ್ಯಾವ ಕೊರತೆಯೂ ಇಲ್ಲ!

ಇವೆಲ್ಲವುಗಳ ನಡುವೆ, ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಬಂಗಾರೇಶ ಹಿರೇಮಠ ಇದೀಗ ಕಲಘಟಗಿ ಮತಕ್ಷೇತ್ರದಲ್ಲಿ ಸದ್ದಿಲ್ಲದೆ ಸಂಚಾರ ಆರಂಭಿಸಿದ್ದಾರೆ. ಧಾರವಾಡ ಜಿಲ್ಲೆಯ ಮಾಜಿ ಸಚಿವ ವಿನಯ ಕುಲಕರ್ಣಿಯವರ ಸಮಕಾಲೀನ ರಾಜಕಾರಣಿ ಬಂಗಾರೇಶ್ ಹಿರೇಮಠ ಈ ಬಾರಿ ಅಜ್ಜ-ಅಮ್ಮನ ಊರಾದ ಕಲಘಟಗಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರು.

ಹಿಂದಿನಿಂದಲೂ ಕಲಘಟಗಿ ಮತಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಬಂಗಾರೇಶ್ ಹೀರೆಮಠರು, ಕಲಘಟಗಿ ಮತಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಭೇಟಿ ನೀಡುತ್ತಿರುವುದು ಇತರರ ನಿದ್ದೆಗೆಡಿಸಿದ್ದಂತೂ ಸತ್ಯ ಎನ್ನುತ್ತಿದ್ದಾರೆ ಸ್ಥಳೀಯ ಮತದಾರ ಪ್ರಭುಗಳು.

ಈ ಬಾರಿಯ ಚುನಾವಣೆಯು ಕಲಘಟಗಿ ಮತಕ್ಷೇತ್ರದಲ್ಲಿ ಅಭಿವೃದ್ಧಿ, ಭರವಸೆಯ ಮಹಾಪೂರವೇ ಹರಿಯಲಿದ್ದು, ಜನರ ಸಮಸ್ಯೆಗಳು ಎಷ್ಟರ ಮಟ್ಟಿಗೆ ಸುಧಾರಿಸಲಿವೆ ಎಂದು ಕಾದು ನೋಡಬೇಕಿದೆ.

error: Content is protected !!