Home Blog Page 3204

ಸಂಭ್ರಮದ ಎಳ್ಳು ಅಮಾವಾಸ್ಯೆ; ಚರಗ ಚೆಲ್ಲಿದ ರೈತ ಬಾಂಧವರು

0

ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ರೈತರು

ವಿಜಯಸಾಕ್ಷಿ ಸುದ್ದಿ, ನವಲಗುಂದ

ರೈತರ ಸಂಭ್ರಮದ ಹಬ್ಬವಾಗಿರುವ ಎಳ್ಳು ಅಮವಾಸ್ಯೆಯ ದಿನದಂದು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಚರಗಾ ಚೆಲ್ಲುವುದು ಈ ನಾಡಿನ ಸಂಪ್ರದಾಯ.

ಪ್ರತಿ ವರ್ಷದಂತೆ ಈ ವರ್ಷವು ರೈತರು ತಮ್ಮ ಕುಟುಂಬ ಪರಿವಾರದೊಂದಿಗೆ ಚಕ್ಕಡಿ, ಟ್ರ್ಯಾಕ್ಟರ್, ಕಾರು, ದ್ವಿಚಕ್ರವಾಹನದಲ್ಲಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಜಮೀನಿನಲ್ಲಿನ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಭೋಜನ ಮಾಡುತ್ತಿರುವ ದೃಶ್ಯಗಳು ಶುಕ್ರವಾರ ಕಂಡುಬಂದವು.

ಹಿಂಗಾರು ಹಂಗಾಮಿನಲ್ಲಿ ಸ್ವಲ್ಪ ತಡವಾದರೂ ಮಳೆಯಾಗಿದ್ದರಿಂದ ಹೊಲ ಗದ್ದೆಗಳೆಲ್ಲ ಹಚ್ಚು ಹಸಿರಾಗಿ ಭೂತಾಯಿ ಕಂಗೊಳಿಸುತ್ತಿದ್ದಳು. ರೈತರು ಬಂಧುಬಳಗವನ್ನು ಕರೆದುಕೊಂಡು ಸಂತಸದಿಂದ ಭೂತಾಯಿ ಮಡಿಲಿಗೆ ಉಡಿ ತುಂಬಿ ರುಚಿಕಟ್ಟಾದ ಹುರಕ್ಕಿ, ಶೇಂಗಾ, ಎಳ್ಳು ಹೋಳಿಗೆ, ಕರಿಗಡಬು, ಪುಂಡಿಪಲ್ಲೆ, ಕುಚ್ಚಿದ ಕಾರ, ಮೊಸರು, ಗುರಳ್ಳ ಹಿಂಡಿ, ಉಂಡಗಡಬು ಹೀಗೆ ವಿವಿಧ ಭಕ್ಷಗಳನ್ನು ಸವಿದು ಸಂತಸಪಟ್ಟರು.

ರೈತ ಮಹಿಳೆಯರು ತಲೆಮೇಲೆ ಬುತ್ತಿಗಂಟು ಹೊತ್ತುಕೊಂಡು ಚಿಕ್ಕ ಮಕ್ಕಳೊಂದಿಗೆ ಸಾಮೂಹಿಕ ಪೂಜೆ ಸಲ್ಲಿಸಿ ಭೋಜನ ಮಾಡಿದ್ದು ಕಣ್ಣುತುಂಬುವಂತಿತ್ತು.
 

.. 

ಪೊಲೀಸರ ಭರ್ಜರಿ ಬೇಟೆ; ನಾಲ್ವರು ಅಂತರ್ ರಾಜ್ಯ ದರೋಡೆಕೋರರ ಬಂಧನ, ಒಂದು ಕೋಟಿ ನಗದು ಜಪ್ತಿ

0

ಐದು ಕಾರುಗಳು, ಏರ್ ಗನ್, ಮೊಬೈಲ್, ‌ಲ್ಯಾಪ್‌ಟಾಪ್‌ಗಳೂ ವಶ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಬೇನಾಮಿ ಹಣ ಸಾಗಣೆ ಮಾಡುವವರನ್ನು ಹಾಗೂ ಬಂಗಾರದ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ದರೋಡೆ ಕೃತ್ಯದಲ್ಲಿ ತೊಡಗಿದ್ದ ಅಂತರ್‌ ರಾಜ್ಯ ದರೋಡೆಕೋರರ ತಂಡವನ್ನು ಬಂಧಿಸಿರುವ ಹಾವೇರಿ ಪೊಲೀಸರು ಬಂಧಿತರಿಂದ ಒಂದು ಕೋಟಿಗೂ ಅಧಿಕ ನಗದು, ಐದು ಕಾರುಗಳು, ಒಂದು ಏರ್ ಗನ್, 6 ಮೊಬೈಲ್ ಫೋನ್‌ಗಳು ಹಾಗೂ 3 ಲ್ಯಾಪ್‌ಟಾಪ್‌ಗಳೂ ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯದ ಅಂತೋನಿ ಅಲಿಯಾಸ್ ಅಂಟಪ್ಪನ್(22 ವರ್ಷ), ಅಬ್ಬಾಸ್ ಇ.ಎಸ್ ಪಿರಾಯಿರಿ(38 ವರ್ಷ), ನಿಶಾದಬಾಬು ಅಲಿಯಾಸ್ ಬಾಬು.ಟಿ(47 ವರ್ಷ) ಮತ್ತು ಭರತಕುಮಾರ ಅಲಿಯಾಸ್ ಕುಟ್ಟಾ(29 ವರ್ಷ) ಬಂಧಿತ ಆರೋಪಿಗಳಾಗಿದ್ದಾರೆ.

ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣವೊಂದರ ಜಾಡು ಹಿಡಿದ ಪೊಲೀಸರು ಹಾವೇರಿ ಎಸ್‌ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ವಿರುದ್ಧ ಬ್ಯಾಡಗಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಡಿವೈಎಸ್ಪಿ ಶಿವಾನಂದ ಚಲವಾದಿ, ಸಿಪಿಐಗಳಾದ ಸಿದ್ದಾರೂಢ ಬಡಿಗೇರ, ಸಂತೋಷ ಪಾಟೀಲ ನೇತೃತ್ವದ ತಂಡ ಇದೀಗ ಆರೋಪಿಗಳನ್ನು ಬಂಧಿಸಿದೆ.

ಶಿಕ್ಷಕನ ಅಟ್ಟಹಾಸಕ್ಕೆ ನಲುಗಿದ್ದ ಶಿಕ್ಷಕಿ ಗೀತಾ ಆಸ್ಪತ್ರೆಯಲ್ಲಿ ಸಾವು

ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದ್ದ ಅತಿಥಿ ಶಿಕ್ಷಕನ ರಾಕ್ಷಸಿ ಕೃತ್ಯ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸೋಮವಾರ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿಯಿಂದ ಹಲ್ಲೆಗೊಳಗಾಗಿದ್ದ ಅತಿಥಿ ಶಿಕ್ಷಕಿ ಗೀತಾ ಬಾರಕೇರ ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಸೋಮವಾರ ಭರತ ಎಂಬ ಹತ್ತು ವರ್ಷದ ಬಾಲಕ ಶಿಕ್ಷಕನ ಅಟ್ಟಹಾಸಕ್ಕೆ ಅಂದೇ ಮೃತಪಟ್ಟಿದ್ದ.

ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಹಾಗೂ ಶಿಕ್ಷಕಿ ಗೀತಾ ಬಾರಕೇರ ನಡುವೆ ಇದ್ದ ಸಂಬಂಧ ಇತ್ತೀಚೆಗೆ ಹಳಸಿತ್ತು ಎನ್ನಲಾಗಿದೆ.

ಇದನ್ನೂ ಓದಿ ಶಿಕ್ಷಕನ ಅಟ್ಟಹಾಸಕ್ಕೆ ವಿದ್ಯಾರ್ಥಿ ಬಲಿ; ಶಿಕ್ಷಕಿ ಸ್ಥಿತಿ ಚಿಂತಾಜನಕ, ಸ್ಥಳದಲ್ಲಿ ಪೊಲೀಸರ ಮೊಕ್ಕಾಂ

ಹದ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ ಇನ್ನೊಬ್ಬ ಅದೇ ಶಾಲೆಯ ಸಂಗನಗೌಡನ ಜೊತೆಗೆ ಅತಿಥಿ ಶಿಕ್ಷಕಿ ಗೀತಾ ಸಲುಗೆಯಿಂದ ನಡೆದುಕೊಂಡಿದ್ದಳು ಎಂದು ಆರೋಪಿ ಮುತ್ತಪ್ಪ ಹಡಗಲಿ ಕೋಪಗೊಂಡಿದ್ದ.

ಇದನ್ನೂ ಓದಿ ವಿದ್ಯಾರ್ಥಿ ಕೊಲೆ ಆರೋಪಿ ಶಿಕ್ಷಕ ಮುತ್ತಪ್ಪ ಹಡಗಲಿ ಬಂಧನ; ಶಿಕ್ಷಕಿ ಮತ್ತೊಬ ಶಿಕ್ಷಕನ ಜೊತೆಗೆ ಸಲುಗೆಯಿಂದ ವರ್ತಿಸಿದ್ದೆ ಕೊಲೆಗೆ ಕಾರಣ?

ಹೀಗಾಗಿ ಸೋಮವಾರದಂದು ಶಿಕ್ಷಕಿ ಗೀತಾ ಬಾರಕೇರ ಅವರ ಪುತ್ರ ನಾಲ್ಕನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಭರತ ಎಂಬಾತನನ್ನು ಸಲಿಕೆಯಿಂದ ಥಳಿಸಿ ಮೊದಲ‌ ಮಹಡಿಯಿಂದ ಕೆಳಗೆ ಎತ್ತಿ ಹಾಕಿದ್ದ. ಬಿಡಿಸಲು ಬಂದಿದ್ದ ಗೀತಾಳ ಮೇಲೂ ತೀವ್ರ ಹಲ್ಲೆ ಮಾಡಿದ್ದ. ಇದರಿಂದಾಗಿ ಭರತ ತೀವ್ರ ಗಾಯಗೊಂಡು ಸೋಮವಾರವೇ ಮೃತಪಟ್ಟಿದ್ದ. 

ಇದನ್ನೂ ಓದಿ ಒಂದೇ ಮನೆಯ ಮೂವರ ಆತ್ಮಹತ್ಯೆ; ಮನಕಲಕುವ ಘಟನೆ

ಅತಿಥಿ ಶಿಕ್ಷಕಿ ಗೀತಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿದ್ದಳು. ಗುರುವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕೈಗಾ-ಇಳಕಲ್ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಲಕ್ಷ್ಮೇಶ್ವರ ಬಂದ್; ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ

0

ಪೊಲೀಸರ- ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ

ವಿಜಯಸಾಕ್ಷಿ ಸುದ್ದಿ, ಗದಗ/ಲಕ್ಷ್ಮೇಶ್ವರ

ಕಳೆದ ಆರು ತಿಂಗಳಿಂದ ಹದಗೆಟ್ಟ ಕೈಗಾ-ಇಳಕಲ್ಲ ರಸ್ತೆ ದುರಸ್ತಿಗಾಗಿ ಕಳೆದ ಎರಡು ದಿನಗಳಿಂದ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ನೀಡಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣ ಸಂಪೂರ್ಣ ಸ್ತಬ್ಧ ಆಗಿದ್ದು, ಅಂಗಡಿ-ಮುಗ್ಗಟ್ಟುಗಳು ಬಂದಾಗಿವೆ. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಲಾರಿ ಟೈರ್ ಸ್ಫೋಟ; 5ಜನರಿಗೆ ಗಾಯ, ಆಟೋ ಗಾಜು ಜಖಂ

ಮುಂಜಾನೆಯಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಹೋರಾಟ ಮಾಡುತ್ತಿರುವ ಕಾರ್ಯಕರ್ತರು, ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಲು ಮುಂದಾಗುತ್ತಿದ್ದಂತೆಯೇ ಪೊಲೀಸರು ತಡೆಯೊಡ್ಡಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಕೆಲ ವಾಹನಗಳಿಗೆ ತಡೆಯೊಡ್ಡಿದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಆರು ತಿಂಗಳಿಂದ ಕೈಗಾ-ಇಳಕಲ್ಲ್ ರಾಜ್ಯ ಹೆದ್ದಾರಿ ಹದಗೆಟ್ಟಿದ್ದು, ಸಾಕಷ್ಟು ಬಾರಿ ದುರಸ್ತಿಗಾಗಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಎರಡು ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೋರಾಟಕ್ಕೆ ತೀವ್ರ ಸ್ವರೂಪ ಕೊಡಲು ಇವತ್ತು ಲಕ್ಷ್ಮೇಶ್ವರ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ವಿದ್ಯಾರ್ಥಿ ಕೊಲೆ ಆರೋಪಿ ಶಿಕ್ಷಕ ಮುತ್ತಪ್ಪ ಹಡಗಲಿ ಬಂಧನ; ಶಿಕ್ಷಕಿ ಮತ್ತೊಬ ಶಿಕ್ಷಕನ ಜೊತೆಗೆ ಸಲುಗೆಯಿಂದ ವರ್ತಿಸಿದ್ದೆ ಕೊಲೆಗೆ ಕಾರಣ?

ಶಿಕ್ಷಕಿ ಗೀತಾ ಮತ್ತೊಬ್ಬ ಶಿಕ್ಷಕ‌ ಸಂಗನಗೌಡನ ಜೊತೆಗೆ ಸಲುಗೆಯಿಂದ ಇದ್ದದ್ದೆ ಕೃತ್ಯಕ್ಕೆ ಕಾರಣ ಎಂದ ಆರೋಪಿ!

ವಿಜಯಸಾಕ್ಷಿ ಸುದ್ದಿ, ಗದಗ/ ನರಗುಂದ

ನಾಲ್ಕನೇ ತರಗತಿ ವಿದ್ಯಾರ್ಥಿ ಭರತ ಬಾರಕೇರ ಕೊಲೆ, ಹಾಗೂ ಶಿಕ್ಷಕಿ ಗೀತಾ ಬಾರಕೇರ, ಬಿಡಿಸಲು ಬಂದ ಮತ್ತೊಬ್ಬ ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಆರೋಪಿ ಅತಿಥಿ ಶಿಕ್ಷಕನನ್ಮು ನರಗುಂದ ಪೊಲೀಸರು ಬಂಧಿಸಿದ್ದಾರೆ.

ಅತಿಥಿ ಶಿಕ್ಷಕ ಮುತ್ತಪ್ಪ ಯಲ್ಲಪ್ಪ ಹಡಗಲಿ ಎಂಬಾತನನ್ನು ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ಈ ಕುರಿತು ತಮ್ಮ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ಘಟನೆಗೆ ಅತಿಥಿ ಶಿಕ್ಷಕಿ ಗೀತಾ ಬಾರಕೇರ ಅವರ ಮೇಲೆ ಇರುವ ಅಸೂಯೆ ಕಾರಣವಾಗಿದ್ದು, ಈ ಮೊದಲು ಮುತ್ತಪ್ಪ ಹಾಗೂ ಗೀತಾ ನಡುವೆ ಸಂಬಂಧ ಇತ್ತು. ಆದರೆ ಇತ್ತೀಚೆಗೆ ಶಾಲಾ ಪ್ರವಾಸಕ್ಕೆ ತೆರಳಿದ್ದಾಗ ಇನ್ನೊಬ್ಬ ಶಿಕ್ಷಕ ಸಂಗನಗೌಡನ ಜೊತೆಗೆ ಅತಿ ಸಲುಗೆಯಿಂದ ಗೀತಾ ನಡೆದುಕೊಂಡಿದ್ದಳಂತೆ. ಆ ಕಾರಣಕ್ಕಾಗಿ ಗೀತಾಳ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸೆಗಿದ್ದಾಗಿ ಆರೋಪಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಎಸ್ಪಿ ಹೇಳಿದರು.

ಇದನ್ನೂ ಓದಿ  ಶಿಕ್ಷಕನ ಅಟ್ಟಹಾಸಕ್ಕೆ ನಲುಗಿದ್ದ ಶಿಕ್ಷಕಿ ಗೀತಾ ಆಸ್ಪತ್ರೆಯಲ್ಲಿ ಸಾವು

ಗೀತಾ ಹಾಗೂ ಆರೋಪಿ ಮುತ್ತಪ್ಪನ ನಡುವೆ ಕಳೆದ ಹಲವು ತಿಂಗಳಿಂದ ನಡೆದಿರುವ ಫೋನ್ ಕಾಲ್, ಮೆಸೇಜ್ ಹಾಗೂ ವಾಟ್ಸಪ್ ಚಾಟ್ ಪರಿಶೀಲನೆ ಮಾಡಿದಾಗ ವಿಷಯ ಬೆಳಕಿಗೆ ಬಂದಿದೆ.

ಆರೋಪಿ ಮುತ್ತಪ್ಪ ಹೇಳಿಕೆ ಇನ್ನೂ ಪರಿಶೀಲನೆ ನಡೆಸಬೇಕು. ಹಲ್ಲೆಗೊಳಗಾದ ಶಿಕ್ಷಕಿ ಗೀತಾ ಹಾಗೂ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಬೇಕಾಗಿದೆ ಎಂದರು.

ಗಾಯಾಳು ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಶಿಕ್ಷಣ ಸಚಿವ ನಾಗೇಶ್

ಹುಬ್ಬಳ್ಳಿ ವರದಿ

ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕ ನಡೆಸಿದ ಅಮಾನವೀಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅತಿಥಿ ಶಿಕ್ಷಕಿ ಗೀತಾ ಯಲ್ಲಪ್ಪ ಬಾರಕೇರ ಅವರ ಆರೋಗ್ಯವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ‌ ಸಚಿವರಾದ ಬಿ.ಸಿ. ನಾಗೇಶ್ ಅವರು ವಿಚಾರಿಸಿದರು.

ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಗಾಯಾಳು ಶಿಕ್ಷಕಿಯ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.

ಶಿಕ್ಷಕಿಯ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆಯ ಕುರಿತು ವೈದ್ಯರಿಂದ ಮಾಹಿತಿ ಪಡೆದರು.

‘ಶಾಲೆಯಲ್ಲಿ ನಡೆದಿರುವ ಈ ಘಟನೆ ಅತ್ಯಂತ ದುರಾದೃಷ್ಟಕರ. ಶಾಲೆಯ ಆವರಣದಲ್ಲಿ ಇಂತಹ ಘಟನೆಗಳನ್ನು ಊಹಿಸಲು ಅಸಾಧ್ಯ. ಘಟನೆಯಿಂದ ಆತಂಕಗೊಂಡಿರುವ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಕೌನ್ಸಿಲಿಂಗ್ ಮಾಡಿ ಧೈರ್ಯ ತುಂಬಲಾಗುತ್ತದೆ. ಘಟನೆಗೆ ಕಾರಣ ಏನು ಎಂಬುದು ಆರೋಪಿಯ ಬಂಧನದ ಬಳಿಕ ತಿಳಿದು ಬರಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸಚಿವ ಬಿ.ಸಿ. ನಾಗೇಶ್ ಅವರು ಮಾಹಿತಿ ನೀಡಿದ್ದಾರೆ.

ಲಾರಿ ಟೈರ್ ಸ್ಫೋಟ; 5ಜನರಿಗೆ ಗಾಯ, ಆಟೋ ಗಾಜು ಜಖಂ

ಜಲ್ಲಿಕಲ್ಲು ಸಿಡಿದು ಅವಘಡ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದಲ್ಲಿ ಇದೀಗ ಎಲ್ಲೆಡೆ ರಸ್ತೆಗುಂಡಿಗಳದ್ದೇ ಹಾವಳಿಯಾಗಿದ್ದು, ಪ್ರಮುಖ ರಸ್ತೆಗಳು ಸಹ ಇದಕ್ಕೆ ಹೊರತಾಗಿಲ್ಲ. ಸೋಮವಾರ ಪಟ್ಟಣದ ಶಿಗ್ಲಿನಾಕಾದ ತಿರುವಿನಲ್ಲಿ ಲಾರಿಯೊಂದರ ಟೈರ್ ಸ್ಫೋಟಗೊಂಡು ರಸ್ತೆಯಲ್ಲಿಯೆ ನಿಂತ ಪರಿಣಾಮ ಸ್ಫೋಟದ ರಭಸಕ್ಕೆ ರಸ್ತೆಯಲ್ಲಿ ಹಾಕಿದ್ದ ಜಲ್ಲಿಕಲ್ಲುಗಳು ಬಡಿದು ಕೆಲವರಿಗೆ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಪರದಾಡುವಂತಾಗಿತ್ತು.

ಟೈರು ಸಿಡಿದ ರಭಸದಿಂದ ಕಲ್ಲುಗಳು ಬಡಿದು ಕೆಲವರು ಗಾಯಗೊಂಡಿದ್ದು, ಒಬ್ಬನ ಕೈ ಮುರಿದಿದೆ. ಬಾಲಕಿಯೋರ್ವಳಿಗೆ ಹೊಟ್ಟೆಗೆ ಪೆಟ್ಟು ಬಿದ್ದಿದೆ. ಮಹಿಳೆಗೆ ಕಿವಿ ಬಳಿ ಕಲ್ಲು ತಗುಲಿ ಆ ಭಾಗ ಊದಿಕೊಂಡಿದೆ ಹಾಗೂ ಎರಡು ಆಟೋರಿಕ್ಷಾ ಗ್ಲಾಸ್ ಚೂರಾಗಿದ್ದು ಘಟನೆಯಿಂದ ಸುತ್ತಮುತ್ತಲಿನ ಜನರು ಕಂಗಾಲಾಗುವಂತಾಗಿದೆ.

ಗಾಯಗೊಂಡವರನ್ನು ಚಿಕಿತ್ಸೆಗಾಗಿ ಲಕ್ಷ್ಮೇಶ್ವರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂ.ಸ್ಯಾಂಡ್ ತುಂಬಿಕೊಂಡು ಹುಬ್ಬಳ್ಳಿ ಕಡೆಗೆ ಹೊರಟಿದ್ದ ಲೈಲಾಂಡ್ ಲಾರಿಯೊಂದರ ಟೈರ್ ಸಿಡಿದು ಘಟನೆ ನಡೆದಿದೆ. ಆಗ ಲಾರಿಯ ಹಿಂಬದಿ ಬರುತ್ತಿದ್ದ ಸಾರ್ವಜನಿಕರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ 5ಕ್ಕೂ ಹೆಚ್ಚು ಜನ ಗಾಯಗೊಂಡು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಕೆಲ ಕಾಲ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ಘಟನೆ ನಡೆದ ತಕ್ಷಣ ಲಾರಿ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿ ಪೋಲೀಸ್ ಠಾಣೆಗೆ ಹೋಗಿದ್ದಾನೆಂದು ತಿಳಿದು ಬಂದಿದೆ. ತನಿಖೆ ಮುಂದುವರಿದಿದೆ.

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ; ಇಬ್ಬರು ಸರಗಳ್ಳರ ಬಂಧನ

ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ಪೊಲೀಸರ ಕಾರ್ಯಾಚರಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಬಂಧಿಸಿ ಅವರಿಂದ ಬಂಗಾರ ಮತ್ತು ದ್ವಿಚಕ್ರವಾಹನ ವಶಪಡಿಸಿಕೊಂಡು ಕಳ್ಳರನ್ನು ಕಸ್ಟಡಿಗೆ ಒಪ್ಪಿಸಿದ್ದಾರೆ.

ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಸರಾಫ್ ಬಜಾರದಲ್ಲಿ ಕಳೆದ ಅ.30ರಂದು ವೃದ್ಧೆಯೋರ್ವರು ತಮ್ಮ ಮನೆಯ ಗೇಟ್ ತೆಗೆಯುವಾಗ ಮೋಟರ್ ಸೈಕಲ್ ಮೇಲೆ ಬಂದು ಕೊರಳಲ್ಲಿನ ಬಂಗಾರದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕಳ್ಳರ ಜಾಡು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ರವಿ ಸುರೇಶ ಭೋಸಲೆ(25) ಮತ್ತು ಮಂಜು ಶಂಕ್ರಪ್ಪ ಅರವಿಂದ ಭೋಸಲೆ(26) ಎಂದು ಗುರುತಿಸಲಾಗಿದೆ.

ಪ್ರಕರಣಗಳನ್ನು ಪತ್ತೆ ಹಚ್ಚಿ ಸುಮಾರು 2ಲಕ್ಷ ರೂ. ಬೆಲೆಬಾಳುವ 40ಗ್ರಾಂ. ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ 25ಸಾವಿರ ರೂ. ಕಿಮ್ಮತ್ತಿನ ಮೋಟರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.

ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರಕಾಶ.ಡಿ, ವಿ.ಜಿ ಪವಾರ, ಎಎಸ್‌ಐ ಜಿ.ಎಂ. ಬೂದಿಹಾಳ, ಸಿಬ್ಬಂದಿಗಳಾದ ಆನಂದಸಿಂಗ್ ದೊಡ್ಡಮನಿ, ಆರ್.ಎಸ್. ಯರಗಟ್ಟಿ, ಎಸ್.ಸಿ. ಕಪ್ಪತ್ತನವರ, ಎಂ.ಎ. ಶೇಖ, ಮೆಹಬೂಬ್ ವಡ್ಡಟ್ಟಿ, ಎಚ್.ಐ ಕಲ್ಲಣ್ಣವರ, ಡಿ.ಎಸ್. ನದಾಫ್, ಎಸ್.ಸಿ. ಕೊರಡೂರ, ಜಿ.ಆರ್. ಗ್ರಾಮಪುರೋಹಿತ, ಎ.ಆರ್. ಕಮ್ಮಾರ, ಎಸ್.ಎಫ್. ತಡಸಿ, ಸಿ.ಎಸ್. ಮಠಪತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿವಾಯ್‌ಎಸ್‌ಪಿ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿಕ್ಷಕನ ಅಟ್ಟಹಾಸಕ್ಕೆ ವಿದ್ಯಾರ್ಥಿ ಬಲಿ; ಶಿಕ್ಷಕಿ ಸ್ಥಿತಿ ಚಿಂತಾಜನಕ, ಸ್ಥಳದಲ್ಲಿ ಪೊಲೀಸರ ಮೊಕ್ಕಾಂ

ವಿದ್ಯಾರ್ಥಿಯನ್ನ ಮಹಡಿಯಿಂದ ಎತ್ತಿ ಹಾಕಿ, ಸಲಾಕೆಯಿಂದ ಥಳಿಸಿದ ಶಿಕ್ಷಕ; ಪ್ರಶ್ನೆಸಿದ ಇತರರ ಮೇಲೂ ಹಲ್ಲೆ

ವಿಜಯಸಾಕ್ಷಿ ಸುದ್ದಿ, ನರಗುಂದ

ಅತಿಥಿ ಶಿಕ್ಷಕನೊಬ್ಬ ಸಲಾಕೆಯಿಂದ ಥಳಿಸಿದ ಪರಿಣಾಮ ಹತ್ತು ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಜರುಗಿದೆ.

ತಾಲೂಕಿನ ಹದ್ಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದ್ದು, ಪ್ರಶ್ನೆಸಿದ ವಿದ್ಯಾರ್ಥಿಯ ತಾಯಿ, ಇನ್ನೊಬ್ಬ ಶಿಕ್ಷಕನ ಮೇಲೂ ಹಲ್ಲೆ ಮಾಡಿದ್ದಾನೆ.

ಮೃತ ವಿದ್ಯಾರ್ಥಿಯನ್ನು ಭರತ (10) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆತ ಮೃತಪಟ್ಟಿದ್ದಾನೆ.

ಶಿಕ್ಷಕಿ ಗೀತಾ ‌ಹಾಗೂ ಇನ್ನೊಬ್ಬ ಪಾಟೀಲ ಎಂಬ ಶಿಕ್ಷಕನ ಮೇಲೆ ಹಲ್ಲೆ ಮಾಡಲಾಗಿದೆ.

ಮೃತ ವಿದ್ಯಾರ್ಥಿ ಭರತನ ತಾಯಿಯೂ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮುತ್ತಪ್ಪ ಹಡಗಲಿ ಎಂಬ ಶಿಕ್ಷಕನಿಂದ ಈ ಹಲ್ಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮುತ್ತಪ್ಪ ಹಡಗಲಿಗೆ ಶಿಕ್ಷಕಿ ಗೀತಾ ಬಾರಕೇರ ಮೇಲೆ ವೈಯಕ್ತಿಕ ದ್ವೇಷ ಇರಬಹುದು ಎನ್ನಲಾಗಿದ್ದು, ಇದರ ಪರಿಣಾಮವೇ ಈ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಇವತ್ತು ಅದೇನಾಗಿದೆಯೋ ಗೊತ್ತಿಲ್ಲ. ವಿದ್ಯಾರ್ಥಿ ಭರತನ ಮೇಲೆ ಹಲ್ಲೆ ಮಾಡಿ ಮಹಡಿಯಿಂದ ದೂಡಿದ್ದಾನೆ. ಇದರಿಂದಾಗಿ ಭರತನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಇದನ್ನು ಪ್ರಶ್ನೆ ಮಾಡಿದ ತಾಯಿ, ಶಿಕ್ಷಕಿ ಗೀತಾ ಬಾರಕೇರ ಮೇಲೂ ಸಲಾಕೆಯಿಂದ ಹಲ್ಲೆ ಮಾಡಿದ್ಷು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಿಡಿಸಲು ಬಂದ ಇನ್ನೊಬ್ಬ ಶಿಕ್ಷಕ ಪಾಟೀಲ ಎಂಬುವರ ಮೇಲೂ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೀತಾ ಬಾರಕೇರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಗೆ ರವಾನೆ ಮಾಡಲಾಗಿದೆ ಎನ್ನಲಾಗಿದೆ.

ಸುದ್ದಿ ತಿಳಿದು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಯಾವುದೇ ಅಹಿತಕರ ಘಟನೆ ಜರುಗಿದಂತೆ ಬಿಗಿ ಬಂದೋಬಸ್ತ ಕೈಗೊಂಡಿದ್ದಾರೆ.

ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಮಹಿಳೆ ಭೀಕರ ಕೊಲೆ; ಕೊಲೆಗೈದು ಕುಡುಗೋಲು ಸಮೇತ ಠಾಣೆಗೆ ಶರಣಾದ ಆರೋಪಿ!

ಜಮೀನೊಂದರಲ್ಲಿ ಘಟನೆ

ವಿಜಯಸಾಕ್ಷಿ ಸುದ್ದಿ, ನರಗುಂದ

ವ್ಯಕ್ತಿಯೊಬ್ಬ ಮಹಿಳೆಯನ್ನು ಭೀಕರವಾಗಿ ಕೊಲೆಗೈದು ಠಾಣೆಗೆ ಶರಣಾದ ಘಟನೆ ನಿನ್ನೆ ಸಂಜೆ ಜರುಗಿದೆ.

ಆರೋಪಿ ಬಸಪ್ಪ ನಾಗಪ್ಪ ಚಂದ್ರ ಎಂಬಾತನೇ ಮಹಿಳೆಯೊಬ್ಬಳನ್ನು ಕೊಲೆಗೈದು ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಜಮೀನೊಂದರಲ್ಲಿ ಈ ಘಟನೆ ಜರುಗಿದ್ದು, ಕಸ್ತೂರಿ ಮಹಾದೇವಪ್ಪ ತಳವಾರ (38) ಕೊಲೆಗೀಡಾದ ಮಹಿಳೆ ಎಂದು ಗುರುತಿಸಲಾಗಿದೆ.

ಆರೋಪಿ ಬಸಪ್ಪ, ಕಸ್ತೂರಿಯನ್ನು ಕುಡುಗೋಲನಿಂದ ತಲೆಗೆ, ಕತ್ತು ಹಾಗೂ ಕೈಗೆ ಹೊಡೆದು ಕೊಲೆ ಮಾಡಿದ್ದಾನೆ.

ವಿಷಯ ಗೊತ್ತಾಗಿ ಪತಿ ಹಾಗೂ ಇತರರು ಸ್ಥಳಕ್ಕೆ ಹೋಗಿ ನೋಡಿದಾಗ ಮಹಿಳೆ ಕಸ್ತೂರಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ನಂತರ ಪೊಲೀಸ್ ಠಾಣೆಗೆ ಬಂದಾಗ ಆರೋಪಿ ಬಸಪ್ಪ ಕುಡುಗೋಲು ಸಮೇತ ಠಾಣೆಗೆ ಶರಣಾದ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ 195/2022 ಕಲಂ 302 ಐಪಿಸಿ,ಕಲಂ 3[2] [V] Sc-sc act ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ, ರಾಜ್ಯ ಸರ್ಕಾರಗಳ ವೈಫಲ್ಯದ ವಿರುದ್ಧ ಡಿ.20 ರಂದು ಬೃಹತ್ ರೈತ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ನವಲಗುಂದ

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯವನ್ನು ವಿರೋಧಿಸಿ ಸ್ಥಳೀಯ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಕೆ.ಎನ್.ಗಡ್ಡಿ ಹಾಗೂ ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಶಿವಾನಂದ ಕರಿಗಾರ ನೇತ್ರತ್ವದಲ್ಲಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿಯ ರೈತ ಭವನದ ಎದುರಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಭಾನುವಾರ ಇಲ್ಲಿಯ ಲೋಕೊಪಯೋಗಿ ಇಲಾಖೆಯ ನಿರೀಕ್ಷಣಾಲಯದಲ್ಲಿ  ಮಾಜಿ ಸಚಿವ ಕೆ.ಎನ್.ಗಡ್ಡಿ ಹಾಗೂ ಶಿವಾನಂದ ಕರಿಗಾರ ಜಂಟಿಯಾಗಿ ಪತ್ರಿಕಾಗೋಷ್ಠಿ ಏರ್ಪಡಿಸಿ ರೈತ ಪ್ರತಿಭಟನೆಯ ರೂಪ ರೇಷೆಗಳನ್ನು ವಿವರಿಸಿದರು.

2022 ರಲ್ಲಿ ಅತಿವೃಷ್ಠಿ ಹಾಗೂ ನೆರೆಹಾವಳಿಯಿಂದ ರೈತರು ಜನಸಾಮಾನ್ಯರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೃಷಿ ಚಟುವಟಿಕೆಗಾಗಿ ಸಾಲ ಮಾಡಿ ದುಬಾರಿ ಬೀಜ, ಗೊಬ್ಬರ, ಕ್ರಿಮಿನಾಶಕ ಸಿಂಪರಣೆ ಹಾಗೂ ಕೃಷಿ ಕೂಲಿ ಕಾರ್ಮಿಕರ ದಿನಗೂಲಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಅತಿವೃಷ್ಠಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತಾಪಿ ವರ್ಗ ದಿಕ್ಕು ತೋಚದಂತಾಗಿದ್ದಾರೆ.

ಅದರಲ್ಲೂ ದಿನಬಳಕೆಯ ವಸ್ತುಗಳ ಬೆಲೆ, ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೆರಿದ್ದರಿಂದ ದುಡಿದ ಹಣದಲ್ಲಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಇತ್ತಕಡೆ ಬ್ಯಾಂಕಿನಲ್ಲಿ ಮಾಡಿದ ಸಾಲದ ಒತ್ತಡ ಸಹಿಸಲಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಘೋಷಣೆ ಮಾಡಿದ ಪರಿಹಾರ ಮಾತ್ರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಯಂತಾಗಿ ಅತಿ ಕನಿಷ್ಟವಾಗಿದೆ.

ಸರ್ಕಾರಕ್ಕೆ ರೈತಪರವಾದ ಬೇಡಿಕೆಗಳನ್ನು ಈಡೇರಿಸುವಂತೆ ಹಲವಾರು ಬಾರಿ ಮನವಿ ಮಾಡಿದರೂ ದಪ್ಪ ಚರ್ಮದ ಈ ಬಿಜೆಪಿ ಸರ್ಕಾರ ಕಣ್ಣು ಕಾಣದೇ ಕಿವಿಯೂ ಕೇಳದಂತಾಗಿ ರೈತ ಹಾಗೂ ಸಾಮಾನ್ಯ ಜನರ ವಿರೋಧಿಯಾಗಿದೆ.

ಕ್ಷೇತ್ರದಲ್ಲಿ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಿದ್ದು ಸಂಚಾರ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಬಸ್‍ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲವಾದ್ದರಿಂದ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮವರೇ ಆದ ಜಿಲ್ಲಾ ಮಂತ್ರಿಗಳಾಗಲಿ, ಮುಖ್ಯಮಂತ್ರಿಗಳಾಗಲಿ ಅಷ್ಟೇ ಅಲ್ಲದೇ ಕೇಂದ್ರ ಸಚಿವರು ಕೂಡ ಸ್ಪಂದಿಸುತ್ತಿಲ್ಲವಾದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯವನ್ನು ಖಂಡಿಸಿ ಬೃಹತ್ತ ರೈತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನೆಯಲ್ಲಿ ಸುಮಾರು 5 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪ್ರಮುಖ ಬೇಡಿಕೆಗಳಾದ ಬೆಳೆಹಾನಿ ಹಾಗೂ ಬೆಳೆವಿಮೆ ಪರಿಹಾರದ ಹಣವನ್ನು ಶೀಘ್ರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಸಂಪೂರ್ಣವಾಗಿ ಬೆಳೆಸಾಲ ಮನ್ನಾ ಮಾಡಬೇಕು, ಗುಂಡಿ ಬಿದ್ದಿರುವ ಎಲ್ಲ ರಸ್ತೆಗಳನ್ನು ಹೊಸದಾಗಿ ನಿರ್ಮಿಸಬೇಕು, ಅತಿವೃಷ್ಠಿಯಿಂದ ಹಾನಿಯಾದ ಮನೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ನೀಡಬೇಕೆಂದು ಒತ್ತಾಯಿಸುತ್ತೇವೆ.  

ಬೇಡಿಕೆ ಈಡೇರಿಸದೇ ಇದ್ದಲ್ಲಿ ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿ ಸರ್ಕಾರ ಕಿತ್ತೊಗುವವರೆಗೂ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆಂದು ಮಾಜಿ ಸಚಿವ ಕೆ.ಎನ್.ಗಡ್ಡಿ, ಶಿವಾನಂದ ಕರಿಗಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಲತೇಶ ಗೊರವರ, ಶಿವರಾಯಪ್ಪ ಮಾದರ, ಅರುಣಕುಮಾರ ಮಜ್ಜಗಿ, ಬಸವರಾಜ ಶಲವಡಿ, ಬಸವರಾಜ ದಿವಟರ, ಶಿರಾಜಅಹ್ಮದ ಧಾರವಾಡ ಪಾಲ್ಗೊಂಡಿದ್ದರು. 

error: Content is protected !!