Home Blog Page 3206

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಕಾರುಬಾರಿಗೆ ಹೈಕೋರ್ಟ್ ಬ್ರೇಕ್!; ಆದೇಶ ಪ್ರತಿ ಲಭ್ಯ

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಮಾದ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಕಾಂಗ್ರೆಸ್ಸಿಗರು

ವಿಜಯಸಾಕ್ಷಿ ಸುದ್ದಿ, ಧಾರವಾಡ/ಗದಗ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸದಂತೆ ಮಂಗಳವಾರ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿತ್ತು. ಈ ಕುರಿತ ಆದೇಶದ ಪ್ರತಿ ಇಂದು ವಿಜಯಸಾಕ್ಷಿಗೆ ಲಭ್ಯವಾಗಿದೆ.

ಜ.24ರಂದು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ವೇಳೆ ನಡೆದ ಪ್ರಮಾದಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ನ ಸದಸ್ಯರಾದ ಲಕ್ಷ್ಮಣ ಚಂದಾವರಿ, ಶಕುಂತಲಾ ಅಕ್ಕಿ, ಕೃಷ್ಣಾ ಪರಾಪೂರ, ಬರಕತ್ ಅಲಿ ಮುಲ್ಲಾ, ರವಿಕುಮಾರ್ ಕಮತರ, ಜೈನುಲಾಬ್ದಿನ್ ನಮಾಜಿ, ಚಂದ್ರಶೇಖರಗೌಡ ಕರಿಸೋಮನಗೌಡರ ಎಂಬವವರು ಹೈಕೋರ್ಟ್ ಮೊರೆ ಹೋಗಿದ್ದರು. ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯನ್ನು ಅಧಿಕಾರಿಗಳು ಪಾರದರ್ಶಕವಾಗಿ ನಡೆಸಿಲ್ಲ. ಹೀಗಾಗಿ ಮರು ಆಯ್ಕೆ ನಡೆಸುವಂತೆ ಕೋರಲಾಗಿತ್ತು.

ಮಂಗಳವಾರ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ಯಾಮಪ್ರಸಾದ್ ಅವರಿದ್ದ ಪೀಠ ತಡೆಯಾಜ್ಞೆ ನೀಡಿ, ಫೆ.21ಕ್ಕೆ ವಿಚಾರಣೆ ಮುಂದೂಡಿದೆ. ಮುಂದಿನ ವಿಚಾರಣೆವರೆಗೆ ಗೆಜೆಟ್ ನೋಟಿಫಿಕೇಶನ್ ಹೊರಡಿಸದಂತೆ ಆದೇಶಿಸಿದೆ. ಅಲ್ಲದೇ, ಚುನಾವಣೆ ಪ್ರಕ್ರಿಯೆ ನಮೂದಿಸಿದ ಠರಾವು ಪುಸ್ತಕ ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿದೆ. ಕಾಂಗ್ರೆಸ್ ಪರವಾಗಿ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಅವರು ವಾದ ಮಂಡಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಚ್.ಕೆ.ಪಾಟೀಲ್ ಅವರು, ‘ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಬಾರದು ಎಂದು ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿರುವುದು ನ್ಯಾಯ ಸಿಗುವ ಭರವಸೆ ಮೂಡಿಸಿದೆ. ಆಯ್ಕೆ ವೇಳೆ ನಡೆದ ಪ್ರಮಾದಗಳನ್ನು ಹೈಕೋರ್ಟ್ ಪರಿಗಣಿಸಿ, ಆಯ್ಕೆಯ ಗೆಜೆಟ್ ನೋಟಿಫಿಕೇಶನ್ ಮಾಡಬಾರದು ಎಂದು ತಡಯಾಜ್ಞೆ ನೀಡಿದೆ. ಅಲ್ಲದೇ ಆಯ್ಕೆ ಪ್ರಕ್ರಿಯೆ ವೇಳೆ ನಡೆದ ಪ್ರಮಾದಗಳಾಗಿರುವ ಕಾಗದ ಪತ್ರಗಳನ್ನು ಸಲ್ಲಿಕೆ ಮಾಡುವಂತೆ ಕೋರ್ಟ್ ಆದೇಶ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.

ಬೊಮ್ಮಾಯಿ ಸಿಎಂ ಸ್ಥಾನದಿಂದ ಕೆಳಗಿಳಿಯೊ ಸಾಧ್ಯತೆ: ಜಾರಕಿಹೊಳಿ

0

ಮೇಕೆದಾಟು ಪಾದಯಾತ್ರೆ ಮುಂದುವರಿಯುತ್ತೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ಬಂದ ಪ್ರತಿ ಸಲವೂ ಮೂವರು ಸಿಎಂ ಆಗಿರ‌್ತಾರೆ. ಈ ಸಲ ಬೊಮ್ಮಾಯಿಯವರು ಎರಡನೇ ಸಿಎಂ ಆಗಿದ್ದು, ಸರಕಾರದ ಅವಧಿ ಮುಗಿಯುವುದರೊಳಗೆ ಮತ್ತೊಬ್ಬರು ಸಿಎಂ ಆಗುವ ಸಾಧ್ಯತೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಕೊಪ್ಪಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಬೊಮ್ಮಾಯಿಯವರಿಗೆ ಆರು ತಿಂಗಳು ಟೈಮ್ ಕೊಟ್ಟಿತ್ತು. ಈಗ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿ ಆರು ತಿಂಗಳು ಮುಗಿದಿದ್ದು ಸಿಎಂ ಬದಲಾವಣೆ ಬಗ್ಗೆ ಸ್ವತಃ ಬಿಜೆಪಿಯವರೇ ಮಾತನಾಡುತ್ತಿದ್ದಾರೆ ಎಂದರು.

ಸಿ.ಎಂ.ಇಬ್ರಾಹಿಂ, ನಾನು ಸೇರಿದಂತೆ ಕಾಂಗ್ರೆಸ್‌ನ ಎಲ್ಲರೂ ಪಕ್ಷದಲ್ಲೇ ಇದ್ದಾರೆ. ಸೆಕ್ಯುಲರ್ ಶಕ್ತಿ‌ ಉಳಿಸಲು ಇಬ್ರಾಹಿಂ ದಳದಿಂದ ಕಾಂಗ್ರೆಸ್‌ಗೆ ಬಂದವರು. ಅವರಿಗೆ ಒಂದಿಷ್ಟು ಅಸಮಾಧಾನ‌ ಇರಬಹುದು. ಹಾಗಂತ ಕಾಂಗ್ರೆಸ್‌ನಿಂದ ಅವರು ದೂರ ಆಗಿಲ್ಲ, ರಾಜಕೀಯವೂ ಕೊನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಅನ್ನೋದು ಎಸ್ ಎಸ್ (ಸಿದ್ದರಾಮಯ್ಯ, ಶಿವಕುಮಾರ್) ಪಕ್ಷ ಎಂಬ ಸಚಿವ ಶ್ರೀ ರಾಮುಲು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲೂ ಒಂದು ಆರ್‌ಎಸ್ಎಸ್ ಬಣ ಹಾಗೂ ಯಡಿಯೂರಪ್ಪ ಬಣ ಇದೆ. ಎಲ್ಲ ಪಕ್ಷಗಳಲ್ಲಿ ಇರುವಂತೆ ಕಾಂಗ್ರೆಸ್‌ನಲ್ಲೂ ಒಂದಷ್ಟು ಭಿನ್ನಾಭಿಪ್ರಾಯಗಳು ಇರಬಹುದು‌ ಎಂದು ಹೇಳಿದರು.

ಈಗಾಗಲೇ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಮುಳುಗುತ್ತಿರುವ ಹಡಗು ಯಾವ ಪಕ್ಷ ಎಂಬುದನ್ನು ತೋರಿಸಿದ್ದಾರೆ ಎಂದ ಸತೀಶ್ ಜಾರಕಿಹೊಳಿ, ಮೇಕೆದಾಟು ಪಾದಯಾತ್ರೆ ಕೋವಿಡ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತವಾಗಿದೆಯೇ ಹೊರತು ಶಾಶ್ವತವಾಗಿ ಪಾದಯಾತ್ರೆ ನಿಂತಿಲ್ಲ. ಮೇಕೆದಾಟು ಪಾದಯಾತ್ರೆಗೆ ಶೀಘ್ರದಲ್ಲೇ ಮರುಚಾಲನೆ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮತ್ತಿತರರು ಇದ್ದರು.

ಗಣರಾಜ್ಯ ದಿವಸ ಲೆನ್ಸ್‌ಕಾರ್ಟ್ 73 ಮಳಿಗೆಗಳ ಆರಂಭ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ:

ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐ-ವೇರ್ ಬ್ರ್ಯಾಂಡ್ ಲೆನ್ಸ್‌ಕಾರ್ಟ್ ಭಾರತದ 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ 19 ರಾಜ್ಯಗಳ 46 ನಗರಗಳಲ್ಲಿ 73 ಮಳಿಗೆಗಳನ್ನು ಪ್ರಾರಂಭಿಸಿದೆ. 2022 ಅರ್ಥಿಕ ವರ್ಷದಲ್ಲಿ ಲೆನ್ಸ್‌ಕಾರ್ಟ್, 400 ಸ್ಟೋರ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ, ಇದರಲ್ಲಿ 73 ಸ್ಟೋರ್‌ಗಳು ಈಗಾಗಲೇ ಪ್ರಾರಂಭವಾಗಿದ್ದು, ಮುಖ್ಯವಾಗಿ ತಮಿಳುನಾಡು -17 ಸ್ಟೋರ್‌ಗಳು, ಕರ್ನಾಟಕದಲ್ಲಿ 10 ಮತ್ತು ತೆಲಂಗಾಣ ಮತ್ತು ಕೇರಳದಲ್ಲಿ ತಲಾ 6 ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ಇದರೊಂದಿಗೆ ಕಂಪನಿಯು ಈ ವರ್ಷದ ಫೆಬ್ರವರಿಯಲ್ಲಿ ತನ್ನ 1000 ನೇ ಮಳಿಗೆಯ ಹೆಗ್ಗುರುತನ್ನು ಸ್ಥಾಪಿಸಲು ತನ್ನ ಕೊನೆಹಂತದ ಕ್ಷಣಗಣನೆ ಪ್ರಾರಂಭಿಸಿದೆ.

73 ಮಳಿಗೆಗಳ ಉದ್ಘಾಟನೆಯಲ್ಲಿ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಛತ್ತೀಸ್‌ಗಢ ಮತ್ತು ಪಂಜಾಬ್‌ನಂತಹ ರಾಜ್ಯಗಳನ್ನು ಒಳಗೊಂಡಿವೆ. ಲೆನ್ಸ್‌ಕಾರ್ಟ್ ದೃಷ್ಟಿ ಆರೈಕೆಯಲ್ಲಿ ಅತಿದೊಡ್ಡ ಚಿಲ್ಲರೆ ನೆಟ್‌ವರ್ಕ್‌ನೊಂದಿಗೆ ಭಾರತದಲ್ಲಿನ ಅತಿದೊಡ್ಡ ಕನ್ನಡಕ ಬ್ರಾಂಡ್ ಆಗಿದೆ ಮತ್ತು ಗಣರಾಜ್ಯೋತ್ಸವದ ಪ್ರಾರಂಭದೊಂದಿಗೆ ದೇಶದಲ್ಲಿ ನೆಟ್‌ವರ್ಕ್ ಅನ್ನು ಇನ್ನಷ್ಟು ಬಲಪಡಿಸುವುದು ಇದರ ಗುರಿಯಾಗಿದೆ.

ಗಣರಾಜ್ಯೋತ್ಸವದ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಲೆನ್ಸ್‌ಕಾರ್ಟ್‌ನ ಸಹ ಸಂಸ್ಥಾಪಕ ಅಮಿತ್ ಚೌಧರಿ, “73 ನೇ ಗಣರಾಜ್ಯೋತ್ಸವದಂದು ದೇಶದಲ್ಲಿ 73 ಮಳಿಗೆಗಳನ್ನು ಪ್ರಾರಂಭಿಸಿರುವುದು ನಿಜಕ್ಕೂ ಹೆಮ್ಮೆ ಪಡುವಂತೆ ಮಾಡಿದೆ. ಲೆನ್ಸ್‌ಕಾರ್ಟ್‌ನಲ್ಲಿ ಜನರು ಜಗತ್ತನ್ನು ನೋಡುವ ಮತ್ತು ಅನುಭವಿಸುವ ವಿಧಾನವನ್ನು ಪರಿವರ್ತಿಸುವುದು ನಮ್ಮ ಉದ್ಧೇಶವಾಗಿದೆ ಮತ್ತು ಈ ಹೊಸ ಔಟ್‌ಲೆಟ್‌ಗಳನ್ನು ತೆರೆಯುವುದರೊಂದಿಗೆ, ಹೆಚ್ಚು ಹೆಚ್ಚು ಜನರು ಲೆನ್ಸ್‌ಕಾರ್ಟ್ ಉತ್ಪನ್ನಗಳನ್ನು ಆನಂದಿಸಬಹುದು. ಜಾಗತಿಕವಾಗಿ 2027 ರ ವೇಳೆಗೆ 1 ಶತಕೋಟಿ ಜನರಿಗೆ ದೃಷ್ಟಿಯನ್ನು ಸಕ್ರಿಯಗೊಳಿಸುವ ಗುರಿ ಹೊಂದಿದ್ದೇವೆ ಇದು ಅದರ ಕಡೆಗೆ ಒಂದು ಧನಾತ್ಮಕ ಹೆಜ್ಜೆಯಾಗಿದೆ.” ಎಂದರು.

ಲೆನ್ಸ್‌ಕಾರ್ಟ್‌ನ ಮುಖ್ಯ ರಿಟೇಲ್ ವಿಸ್ತರಣಾ ಅಧಿಕಾರಿ ಸುನಿಲ್ ಮೆನನ್ ಅವರು ಲಾಂಚ್ ಕುರಿತು ಮಾತನಾಡುತ್ತಾ, ನಾವು ಎಲ್ಲಾ ಸ್ಟೋರ್‌ಗಳಲ್ಲಿ ನಮ್ಮ ಓಮ್ನಿಚಾನಲ್ ಬಲಪಡಿಸುತ್ತಿದ್ದೇವೆ ಆದ್ದರಿಂದ ನಾವು ನಮ್ಮ ಗ್ರಾಹಕರಿಗೆ ಹೆಚ್ಚು ಪರಿಣಾಮಕಾರಿ ಮತ್ತು ಚುರುಕಾದ ಶಾಪಿಂಗ್ ಅನುಭವ ನೀಡುವುದನ್ನು ಮುಂದುವರಿಸಲಿದ್ದೇವೆ.” ಎಂದರು.

ಮುಂದುವರೆಯುತ್ತಾ, ಭಾರತದ ರಿಟೇಲ್ ಉದ್ಯಮವು ಪ್ರಪಂಚದ ಇತರ ಭಾಗಗಳಿಗಿಂತ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ.

ಎರಡನೆಯ ಮತ್ತು ಮೂರನೆಯ ಶ್ರೇಣಿಯ ನಗರಗಳಲ್ಲಿ ವಾಸಿಸುವ ಜನರು ತಮ್ಮ ಒಂದನೇ ಶ್ರೇಣಿಯ ಪ್ರತಿರೂಪಗಳಂತೆ ಆನ್‌ಲೈನ್ ಇ-ಕಾಮರ್ಸ್ ಅನ್ನು ಬಳಸುವುದರ ಜೊತೆಗೆ ರಿಟೇಲ್ ಅಂಗಡಿಯ ಅನುಭವವನ್ನು ಬಯಸುತ್ತಾರೆ. ಲೆನ್ಸ್‌ಕಾರ್ಟ್‌ನ ಫ್ರಾಂಚೈಸಿ ನೆಟ್‌ವರ್ಕ್ ವಿಸ್ತರಣೆಯ ಮೂಲಕ ಈ ಎರಡನೆಯ ಮತ್ತು ಮೂರನೆಯ ಶ್ರೇಣಿಯ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ, ಕಣ್ಣು ತಪಾಸಣೆ ಸೇವೆಗಳಿಗೆ ಪ್ರವೇಶವನ್ನು ಹೆಚ್ಚಿಸುತ್ತೇವೆ.” ಎಂದರು.

ಲೆನ್ಸ್‌ಕಾರ್ಟ್ ಪ್ರಸ್ತುತ ತನ್ನ ಓಮ್ನಿ-ಚಾನೆಲ್ ಶಾಪಿಂಗ್ ಅನುಭವದ ಮೂಲಕ ವಾರ್ಷಿಕವಾಗಿ 7 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ, ಇದರಲ್ಲಿ ಆನ್‌ಲೈನ್ ಸ್ಟೋರ್, ಮೊಬೈಲ್ ಅಪ್ಲಿಕೇಶನ್ ಮತ್ತು 900+ ಓಮ್ನಿ-ಚಾನೆಲ್ ಸ್ಟೋರ್‌ಫ್ರಂಟ್‌ಗಳು ಶೀಘ್ರದಲ್ಲೇ 175 ಕ್ಕೂ ಹೆಚ್ಚು ಸ್ಥಳಗಳಲ್ಲಿ 1000 ಸ್ಟೋರ್‌ಗಳಾಗಿ ಬದಲಾಗುತ್ತವೆ ಮತ್ತು ಆ ಮೂಲಕ ವೇಗವಾಗಿ ಜಾಗತಿಕವಾಗಿ ವ್ಯಾಪಾರ ಬೆಳೆಯುತ್ತಿದೆ.ಪ್ರತಿ ಹೊಸ ಮಳಿಗೆಗಳು ತೆರೆಯುವುದರಿಂದ ಗ್ರಾಹಕರ ನೆಲೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಕಾರು, ಟ್ರ್ಯಾಕ್ಟರ್ ಡಿಕ್ಕಿ; ರೋಣದ ಮೂವರ ಸಾವು,‌ ಇಬ್ಬರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ರೋಣ:

ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ವಾಪಸ್ ಊರಿಗೆ ಬರುತ್ತಿದ್ದ ವೇಳೆ ಕಾರು ಮತ್ತು ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ಬಾದಾಮಿ ಬಳಿ ನಡೆದಿದೆ.

ರೋಣ ತಾಲೂಕಿನ ಡ.ಸ.ಹಡಗಲಿ ಗ್ರಾಮದ
ಬಸನಗೌಡ ಶಂಬುಲಿಂಗಗೌಡ ಪಾಟೀಲ್ (55) ಕಾರು ಚಾಲಕ ಮಂಜುನಾಥ ಮಾರನಬಸರಿ ಹಾಗೂ ಸಂಗಮ್ಮ ಶರಣಪ್ಪಗೌಡ ಪಾಟೀಲ್ ಮೃತ ದುರ್ದೈವಿಗಳಾಗಿದ್ದು, ಶರಣಪ್ಪಗೌಡ ಪಾಟೀಲ್ ಹಾಗೂ ಕಮಲಮ್ಮ ರುದ್ರಗೌಡ ಪಾಟೀಲ್ ತೀವ್ರ ಗಾಯಗೊಂಡಿದ್ದಾರೆ‌.

ಗಾಯಾಳುಗಳು ಗದಗ ಹಾಗೂ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಡ.ಸ.ಹಡಗಲಿ ಮತ್ತು ಅರಹುಣಸಿ ಗ್ರಾಮದ ನಿವಾಸಿಗಳು ಸೋಮವಾರ ಬಾಗಲಕೋಟಿಯ ತಮ್ಮ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿ ಮರುಳಿ ಊರಿಗೆ ಬರುತ್ತಿದ್ದರು. ಈ ವೇಳೆ ಬಾದಾಮಿಯಿಂದ ರೋಣ ಕಡೆಗೆ ಬರುತ್ತಿದ್ದಾಗ ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೈಕೋರ್ಟ್ ಮಹತ್ವದ ತೀರ್ಪು; ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ತಡೆ?

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ತಡೆಯಾಜ್ಞೆ ನೀಡಿ ಧಾರವಾಡ ಹೈಕೋರ್ಟ್ ಪೀಠ ಆದೇಶಿಸಿದೆ ಎನ್ನಲಾಗಿದೆ.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಜ.24ರಂದು ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಸುಳ್ಳು ದಾಖಲೆ ಸೃಷ್ಟಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪಾರದರ್ಶಕವಾಗಿ ನಡೆಸಿಲ್ಲ. ಹೀಗಾಗಿ ಮರು ಚುನಾವಣೆ ಮಾಡುವಂತೆ ಅರ್ಜಿ ಸಲ್ಲಿಸಿತ್ತು.

ಮಂಗಳವಾರ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ಯಾಮಪ್ರಸಾದ್ ಅವರಿದ್ದ ಪೀಠ ಚುನಾವಣೆಗೆ ತಡೆಯಾಜ್ಞೆ ನೀಡಿ, ಫೆ.21ಕ್ಕೆ ವಿಚಾರಣೆ ಮುಂದೂಡಿದೆ.

ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹದಿನಾಲ್ಕು ವರ್ಷಗಳ ಕನಸಿಗೆ ಮಂಕುಬೂದಿ ಎರಚಿದಂತಾಗಿದೆ. ಕಾಂಗ್ರೆಸ್ ಪರವಾಗಿ ಹಿರಿಯ ನ್ಯಾಯವಾದಿ ಉದಯ ಹೊಳ್ಳ ಅವರು ವಾದ ಮಂಡಿಸಿದರು‌.

ಅಮಾಯಕ ಯುವಕನ ಕೊಲೆ ಪ್ರಕರಣ, ಘಟನೆಗೆ ಕಾರಣರಾದ ಎಲ್ಲರನ್ನು ಬಂಧಿಸುವವರೆಗೂ ಬಿಡುವುದಿಲ್ಲ: ಇಬ್ರಾಹಿಂ

ಕೊಲೆಯಾದ ಸಮೀರ್ ಕುಟುಂಬಕ್ಕೆ ಪರಿಹಾರ ಕೊಡಿ; ಹಿರಿಯ ಮುಖಂಡ ಸಿ.ಎಂ. ಇಬ್ರಾಹಿಂ ಒತ್ತಾಯ

ವಿಜಯಸಾಕ್ಷಿ ಸುದ್ದಿ, ನರಗುಂದ:

ಪಟ್ಟಣದಲ್ಲಿ ಕೊಲೆಯಾದ ಅಮಾಯಕ ಸಮೀರ ಶಹಾಪುರ ಕುಟುಂಬಕ್ಕೆ ಪರಿಹಾರ ನೀಡುವಂತೆ ಗದಗ ಜಿಲ್ಲಾಧಿಕಾರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಘಟನೆಗೆ ಕಾರಣರಾದ ಎಲ್ಲರನ್ನು ಬಂಧಿಸುವವರೆಗೂ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಹೇಳಿದರು.

ಕೊಲೆಯಾದ ಸಮೀರ ಶಹಾಪುರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಅವರು, ಅಮಾಯಕ ಯುವಕನ ಕೊಲೆಯಾಗಿರುವುದು ಅತ್ಯಂತ ದುರ್ದೈವದ ಸಂಗತಿ. ಮುಸ್ಲಿಂ ಸಮಾಜದವರು ಯಾವುದೇ ಕಾರಣಕ್ಕೂ ಆತಂಕ, ಉದ್ವೇಗಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಎಂದರು.

ನರಗುಂದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ದೊರಕಿಸಿಕೊಡಲು ಸರಕಾರದ‌ ಮೇಲೆ ಒತ್ತಡ ತಂದು ಗಡುವು ನೀಡಲಾಗಿದೆ. ಅದಾಗ್ಯೂ ಮತ್ತೆನಾದರೂ ಸಹಾಯ, ಸಹಕಾರ ಬೇಕಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಭರವಸೆ ನೀಡಿದರು.

ಫಸಲ್ ಬಿಮಾ ಯೋಜನೆ ಹಣ ದುರ್ಬಳಕೆ; ರೈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ

ವಿಜಯಸಾಕ್ಷಿ ಸುದ್ದಿ, ಗದಗ:

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2020-21 ನೇ ಸಾಲಿನಲ್ಲಿ ಡಂಬಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಶ್ರೀ ನಂದಿವೇರಿಮಠದ ಮಾಲೀಕತ್ವದಲ್ಲಿರುವ ಒಟ್ಟು 14.51 ಹೇ. ಜಮೀನಿಗೆ ನಿಜಲಿಂಗಪ್ಪ ಕೆ. ಆಲೂರ ಎಂಬುವವರು ಅಕ್ರಮವಾಗಿ ತಮ್ಮ ಹೆಸರಿನಲ್ಲಿ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡು ಅಂದಾಜು ರೂ. 542115/- ಸರ್ಕಾರದ / ವಿಮಾ ಸಂಸ್ಥೆಯ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು, ತನಿಖೆಯಿಂದ ತಿಳಿದು ಬಂದಿರುತ್ತದೆ. ಆದ ಕಾರಣ ನಿಜಲಿಂಗಪ್ಪ ಕೆ. ಆಲೂರ ಎಂಬುವವರ ಮೇಲೆ ಮುಂಡರಗಿ ಸಹಾಯಕ ಕೃಷಿ ನಿರ್ದೇಶಕರು ಪೋಲೀಸ್ ಠಾಣೆಯಲ್ಲಿ ಹಣ ದುರುಪಯೋಗ ಪಡಿಸಿಕೊಂಡಿರುವ ಕುರಿತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿರುತ್ತಾರೆ.

ಆದ್ದರಿಂದ ಜಿಲ್ಲೆಯ ರೈತ ಬಾಂಧವರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ದುರುಪಯೋಗ ಆಗುತ್ತಿರುವ ಕುರಿತು ಹಾಗೂ ತಮ್ಮ ಜಮೀನಿನ ಹೆಸರಿನಲ್ಲಿ ಅನಧಿಕೃತ ವ್ಯಕ್ತಿಗಳು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳದಂತೆ ಎಚ್ಚರವಹಿಸಬೇಕೆಂದು ಪ್ರಭಾರಿ ಜಂಟಿ ಕೃಷಿ ನಿರ್ದೇಶಕರಾದ ವೀರೇಶ ಹುನಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಸೇರಿ ಹಲವರಿಗೆ ಕಚ್ಚಿದ ಹೆಜ್ಜೇನು

0

ವಿಜಯಸಾಕ್ಷಿ ಸುದ್ದಿ, ರೋಣ:

ಪಟ್ಟಣದಲ್ಲಿ ದಲಿತ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ನಡೆದಿದೆ.

ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವ ಚಿತ್ರಕ್ಕೆ ಅಪಮಾನವಾಗಿರುವ ಘಟನೆ ಖಂಡಿಸಿ ದಲಿತ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ರ‍್ಯಾಲಿ ತಹಸೀಲ್ದಾರ ಕಚೇರಿಗೆ ಮನವಿ ಸಲ್ಲಿಸಲು ಬಂದ ಸಂದರ್ಭದಲ್ಲಿ ಕಟ್ಟಡಲ್ಲಿದ್ದ ಹೆಜ್ಜೇನು ಏಕಾಏಕಿ ದಾಳಿ ನಡೆಸಿದೆ.

ಹೆಜ್ಜೇನು ದಾಳಿಗೆ ಭಯಬೀತಗೊಂಡ ಪ್ರತಿಭಟನಾ ನಿರತರು ಹಾಗೂ ತಹಸೀಲ್ದಾರ ಕಚೇರಿ ಸಿಬ್ಬಂದಿಗಳು ಹೆಜ್ಜೇನುಗಳಿಂದ ತಪ್ಪಿಸಿಕೊಳ್ಳಲು ಧಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆಯಿತು. ದಾಳಿಯಲ್ಲಿ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಗಾಯವಾಗಿರುವ ಘಟನೆ ನಡೆಯಿತು.

ಫೆ.4ರಂದು ಗದಗ ಬಂದ್!

0

ವಿಜಯಸಾಕ್ಷಿ ಸುದ್ದಿ, ಗದಗ:

ಗಣರಾಜ್ಯೋತ್ಸವದಂದು ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ವಿವಿಧ ಪ್ರಗತಿಪರ ‌ಸಂಘಟನೆಗಳು ಫೆ.4 ರಂದು ಗದಗ ಬಂದ್ ಗೆ ಕರೆ ನೀಡಲಾಗಿದೆ ಎಂದು ಜಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಚವ್ಹಾಣ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ‌ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣ ಮಾಡುತ್ತೇನೆಂದು ಸಂವಿಧಾನಿಕ ಹುದ್ದೆಯಲ್ಲಿರುವ ಮಲ್ಲಿಕಾರ್ಜುನ್ ಅವರೇ ಹೇಳಿರುವುದು ಖಂಡನೀಯ. ಅಲ್ಲದೇ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ದುಃಖಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರು ಯಾವತ್ತೂ ಒಂದು ಜಾತಿಗೆ ಸೀಮಿತವಾಗಿರಲಿಲ್ಲ. ದೇಶದ ಎಲ್ಲ ವರ್ಗಕ್ಕೂ ಸಂವಿಧಾನದ ಮೂಲಕ ನ್ಯಾಯ ಒದಗಿಸಿದ್ದಾರೆ.
ಸ್ವತಂತ್ರ ನಂತರ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಸಿಕ್ಕಿದೆ. ಸಮಾನ ಹಕ್ಕು ಸಿಕ್ಕಿದೆ. ಆದರೆ, ಅಂತಹ ಮಹಾನ್ ವ್ಯಕ್ತಿಯನ್ನು ದೇಶದಲ್ಲಿ ಅಗೌರವದಿಂದ ಕಾಣಲಾಗುತ್ತಿದೆ‌ ಎಂದರು.

ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾಜರ್ಜುನಗೌಡ ಅವರನ್ನು ವಜಾಗೊಳಿಸುವಂತೆ, ಕಾನೂನು ಕೈಗೊಳ್ಳುವಂತೆ ರಾಜ್ಯಾದ್ಯಂತ ಅನೇಕ ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ಈ ಬಗ್ಗೆ ರಾಜ್ಯ ಸರ್ಕಾರ ಚಕಾರ ಎತ್ತುತ್ತಿಲ್ಲ ದುರ್ದೈವದ ಸಂಗತಿ. ಹೀಗಾಗಿ ಶೀಘ್ರವೇ ಜಿಲ್ಲಾ ನ್ಯಾಯಾಧೀಶರ ಮೇಲೆ ಸೂಕ್ತ ‌ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಘಟನೆ ಖಂಡಿಸಿ ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಗದಗ ಬಂದ್ ಇರಲಿದೆ. ಹೀಗಾಗಿ ಬಂದ್ ಗೆ ಬೆಂಬಲ ನೀಡುವಂತೆ ಅನೇಕ ಸಂಘಟನೆಗಳ‌ ಮುಖಂಡರಿಗೆ ಮನವಿ ಮಾಡಲಾಗಿದ್ದು,‌ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವಳಿ‌ ನಗರದ ಜನರು ಸಹಿತ ಬಂದ್ ಹೋರಾಟಕ್ಕೆ ಸಹಕಾರ‌ ನೀಡಿ ಯಶಸ್ವಿಗೊಳಿಸಬೇಕು ಎಂದು ಚಂದ್ರಕಾಂತ ಮನವಿ‌ ಮಾಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ವಿಕಾಸ, ಮುಕ್ತಂಸಾಬ್ ನರಗುಂದ, ರಫೀಕ್ ತೋರಗಲ್, ಬಸವರಾಜ್ ಬಂಕದ, ಈಶ್ವರ ಲಕ್ಷ್ಮೇಶ್ವರ, ಬಾಷಾಸಾಬ್ ಮಲ್ಲಸಮುದ್ರ ಸೇರಿದಂತೆ ಅನೇಕರು ಇದ್ದರು.

ಎಸ್ಪಿ ಮೇಲೆ ತೂಗುಗತ್ತಿ; ಗಲಭೆಗೆ ಕುಮ್ಮಕ್ಕು ನೀಡಿದವರ ಮೇಲೆ ಕ್ರಮ ಕೈಗೊಳ್ತಾರಾ ಶಿವಪ್ರಕಾಶ್?

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ನರಗುಂದ ಕೋಮುಗಲಭೆಯಲ್ಲಿ ಯುವಕನೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ ಉತ್ತರ ವಿಭಾಗದ ಐಜಿ ಅವರು ನರಗುಂದ ಸಿಪಿಐ ನಂದೀಶ್ವರ ಕುಂಬಾರ್ ಅವರನ್ನು‌ ಅಮಾನತು‌ ಮಾಡಿ ಆದೇಶಿಸಿದ್ದಾರೆ. ಇನ್ನುಳಿದ ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕಾರಿ, ಸಿಬ್ಬಂದಿಗಳ ಮೇಲೆ‌ ಕ್ರಮ ಕೈಗೊಳ್ಳುವ ಜವಾಬ್ದಾರಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಹೆಗಲಿಗೆ ಬಿದ್ದಿದೆ.

ನರಗುಂದ ಗಲಭೆ ಪ್ರಕರಣ ಕುರಿತಂತೆ
ಹಲವು ತಿಂಗಳಿಂದ ಹಿಂದೂ-ಮುಸ್ಲಿಂರ ಮಧ್ಯೆ ನಿರಂತರವಾಗಿ ಗಲಾಟೆ, ಗಲಭೆಗಳು ನಡೆಯುತ್ತಿದ್ದರೂ ತಡೆಗಟ್ಟಲು ಮುಂದಾಗಲಿಲ್ಲ. ಅಲ್ಲದೇ, ಘಟನೆ ಬಳಿಕ ಆರೋಪಿಗಳನ್ನು ಶೀಘ್ರವೇ ಬಂಧಿಸಲಿಲ್ಲ. ಅಲ್ಲದೇ, ಎರಡು ಕೋಮಿನ ಮಧ್ಯೆ ಆಗಾಗ ನಡೆಯುತ್ತಿದ್ದ ಸಣ್ಣಪುಟ್ಟ ಗಲಾಟೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲ, ಕರ್ತವ್ಯ ಲೋಪವೆಸಗಿದ್ದಾರೆ ಎಂಬ ಕಾರಣಕ್ಕೆ ನರಗುಂದ ಸಿಪಿಐ‌ ನಂದೀಶ್ವರ ಕುಂಬಾರ ಅವರನ್ನು ಐಜಿಪಿ ಎನ್.ಸತೀಶ್ ಕುಮಾರ್ ಅವರು ಅಮಾನತು‌ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನರಗುಂದ ಪೊಲೀಸ್ ಠಾಣೆಯ ಇನ್ನುಳಿದ ಅಧಿಕಾರಿ, ಸಿಬ್ಬಂದಿಗಳಿಗೆ ನಡುಕ‌ ಶುರುವಾಗಿದೆ.

ತಮ್ಮ ವ್ಯಾಪ್ತಿಗೆ ಬರುವ ನರಗುಂದ ಸಿಪಿಐ ಅವರನ್ನು ಅಮಾನತು ಮಾಡಿ ಆದೇಶಿಸಿರುವ ಐಜಿಪಿ ಅವರು, ಇನ್ನುಳಿದ ಪೊಲೀಸ್ ಸಿಬ್ಬಂದಿಗಳ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ಕೊಲೆ ಪ್ರಕರಣದಲ್ಲಿ ಭಾಗಿಯಾದ ಭಜರಂಗದಳ ಕಾರ್ಯಕರ್ತರಿಗೆ ಯಾವೆಲ್ಲ ಅಧಿಕಾರಿಗಳು ಕುಮ್ಮಕ್ಕು ‌ನೀಡುತ್ತಿದ್ದರು ಎಂಬ ಇತ್ಯಾದಿ ಮಾಹಿತಿಗಳನ್ನು ‌ತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಅಂತಹ ಅಧಿಕಾರಿಗಳ‌ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಎಸ್ಪಿ ಅವರಿಗೆ ವಹಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಎಸ್ಪಿ ಅವರ ಮೇಲೆ ತೂಗುಗತ್ತಿ ಓಡಾಡುತ್ತಿದೆ.

ಗದಗ ಜಿಲ್ಲೆಯ ಇತಿಹಾಸದಲ್ಲೇ ಇಂತಹ ಕೋಮು ಗಲಭೆಗಳು‌ ನಡೆದಿರಲಿಲ್ಲ. ಅಲ್ಲದೇ, ಸಣ್ಣಪುಟ್ಟ ಘಟನೆಗಳು ನಡೆದರೂ ಎರಡು ಕಡೆಯ ಹಿರಿಯರು ಬೈದು ಬುದ್ಧಿವಾದ ಹೇಳಿ ಸರಿಪಡಿಸುತ್ತಿದ್ದರು. ಆದರೆ, ನರಗುಂದದಲ್ಲಿ ಜ.17 ರಂದು ನಡೆದ ಘಟನೆಯಿಂದಾಗಿ ಗದಗ ಜಿಲ್ಲೆಯ ‌ಜನತೆ ತಲೆತಗ್ಗಿಸುವಂತಾಗಿದೆ. ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿರುವ ಜಿಲ್ಲೆಗೆ ಕಪ್ಪು ಮಸಿ ಅಂಟಿದಂತಾಗಿದೆ ಎಂಬ ಮಾತು ಸಾರ್ವಜನಿಕ ‌ವಲಯದಲ್ಲಿ‌ ಕೇಳಿ ಬರುತ್ತಿದೆ.

ಅದರಂತೆ, ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ಕರ್ತವ್ಯಲೋಪ ಎಸಗಿದ ಪೊಲೀಸ್ ಇಲಾಖೆ ಸಿಬ್ಬಂದಿಗಳು‌ ಮತ್ತು ಆರೋಪಿಗಳ ಮೇಲೆ ಸೂಕ್ತ ಕ್ರಮ‌ ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರಾ?. ತಾವೇ ಹೇಳಿದಂತೆ ಈ‌‌ ನಾಲ್ವರು ಆರೋಪಿಗಳಷ್ಟೇ ಅಲ್ಲದೇ ಘಟನೆಗೆ ಕುಮ್ಮಕ್ಕು ‌ನೀಡಿದ ಆರೋಪಿಗಳನ್ನು ಬಂಧಿಸುತ್ತಾರಾ? ಎಂಬುದನ್ನು ‌ಕಾದು ನೋಡಬೇಕಿದೆ.

error: Content is protected !!