Home Blog Page 3207

ಟಿಕೆಟ್ ಆಕಾಂಕ್ಷೆಗಳಿಂದ ಶ್ರೀಮಂತಗಡದ ಹೊಳಲಮ್ಮದೇವಿ ಮೇಲೆ ಪ್ರಮಾಣ; ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಪಣ

ಶಿರಹಟ್ಟಿ-ಲಕ್ಷ್ಮೇಶ್ವರ -ಮುಂಡರಗಿ ಬ್ಲಾಕ್ ಕಾಂಗ್ರೆಸ್ ಚುನಾವಣಾ ಪೂರ್ವಭಾವಿ ಸಭೆ

ಕೆಪಿಸಿಸಿ ಗದಗ ಜಿಲ್ಲಾಧ್ಯಕ್ಷ ಜಿ ಎಸ್. ಪಾಟೀಲ್ ಕರೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ಮೀಸಲು ಮತಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಬಯಸಿ ಈ ವರೆಗೆ 14 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅಂತಿಮವಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಹಿತದೃಷ್ಟಿಯಿಂದ ಅವರ ಗೆಲುವಿಗೆ ಮುಖಂಡರುಗಳು ಹಾಗೂ ಕಾರ್ಯಕರ್ತರು ಶ್ರಮಿಸಬೇಕು ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ಅವರು ಮಂಗಳವಾರ ಶಿರಹಟ್ಟಿ ತಾಲೂಕಿನ ಶ್ರೀಮಂತಗಡದಲ್ಲಿ ಶಿರಹಟ್ಟಿ-ಮುಂಡರಗಿ-ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಚುನಾವಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಅವರು ಆಯ್ಕೆಯಾದ ನಂತರ ಪಕ್ಷಕ್ಕೆ ಹೊಸ ಚೈತನ್ಯ ಬಂದಿದ್ದು, ಜೊತೆಗೆ ಕಳೆದ 50 ವರ್ಷಗಳಿಂದ ಪಕ್ಷ ನಿಷ್ಠೆಯನ್ನು ಹೊಂದಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷವು ಎಐಸಿಸಿ ಅಧ್ಯಕ್ಷ ಹುದ್ದೆ ನೀಡಿದ್ದು ಪಕ್ಷಕ್ಕೆ ಹೆಚ್ಚಿನ ಶಕ್ತಿ ಲಭಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಕೂಡಾ ಬಿಜೆಪಿಗೆ ಸಿಂಹಸ್ವಪ್ನರಾಗಿರುವುದು ಮುಂದಿನ ದಿನಗಳಲ್ಲಿ ಅಧಿಕಾರ ಸಿಗುವಂತಹ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಆದ್ದರಿಂದ ಪಕ್ಷ ಸಂಘಟನೆಗೆ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು.

ಶಿರಹಟ್ಟಿಯಲ್ಲಿ ಆಕಾಂಕ್ಷಿಗಳ ಪ್ರಮಾಣ ಮಾಡಿಸಿದ್ದು ಶ್ಲಾಘನೀಯ. ಇತರರಿಗೆ ಮಾದರಿಯಾದ ಕಾರ್ಯಕ್ರಮ ಇದಾಗಿದೆ ಎಂದರು.

ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದು ಕೆಲವು ಅಧಿಕಾರಿ ಸ್ನೇಹಿತರು ನನ್ನ ಬಳಿ ಹೇಳುತ್ತಿದ್ದಾರೆ. ಸಾರ್ವಜನಿಕರು ಸಹ ಹೆದರಿಕೆಯಿಂದ ಜೀವನ ನಡೆಸುವುದು ಅನಿವಾರ್ಯವಾಗಿದೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸೋಣ. ಪಕ್ಷದ ಅಭಿವೃದ್ದಿ ಕೆಲಸಗಳನ್ನು ಜನತೆಗೆ ತಿಳಿಸಿ ಬೇರು ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು. ಈ ಬಾರಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದರು.

ಅರಣ್ಯ, ಕೈಗಾರಿಕೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ ಮಾತನಾಡಿ, ಸ್ಥಳೀಯರೇ ಶಾಸಕರಾಗಬೇಕು, ಎಐಸಿಸಿ ಮತ್ತು ಕೆಪಿಸಿಸಿ ಸೂಚಿಸುವಂತಹ ಅಭ್ಯರ್ಥಿಗಳ ಬಗ್ಗೆ ಅಪಸ್ವರ ಎತ್ತದೇ ಅವರ ಗೆಲುವಿಗೆ ಶ್ರಮಿಸಿ ಬಿಜೆಪಿ ಸರಕಾರ ಕಿತ್ತೊಗೆದು ಕಾಂಗ್ರೆಸ್ ತರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.

ಹಸನಸಾಬ ದೋಟಿಹಾಳ, ಪ್ರಭುಗೌಡ ಪಾಟೀಲ, ವಾಸಣ್ಣ ಕುರಡಗಿ, ಶಿವಕುಮಾರಗೌಡ ಪಾಟೀಲ, ಶಿವಪ್ರಕಾಶ ಮಹಾಜನಶೆಟ್ಟರ, ಎಸ್.ಪಿ.ಬಳಿಗಾರ, ಭರತ ನಾಯ್ಕ, ಸುಜಾತಾ ದೊಡ್ಡಮನಿ, ಆನಂದ ಗಡ್ಡದ್ದೇವರಮಠ, ಎಲ್.ಡಿ.ಪಾಟೀಲ, ಶೋಭಾ ಮೇಟಿ, ವೀರಣ್ಣ ಅಂಗಡಿ, ಮಹೇಂದ್ರ ಮುಂಡವಾಡ, ದೇವಪ್ಪ ಲಮಾಣಿ, ರಾಮಣ್ಣ ಲಮಾಣಿ (ಶಿಗ್ಲಿ), ಮುತ್ತುರಾಜ ಭಾವಿಮನಿ, ಕೋಟೆಪ್ಪ ವರದಿ, ಸುಶೀಲಾ ಲಮಾಣಿ, ಮಂಜುನಾಥ ಘಂಟಿ, ಮಾಬುಸಾಬ ಲಕ್ಷ್ಮೇಶ್ವರ, ಮಹಾಂತೇಶ ದಶಮನಿ ಮುಂತಾದವರು ಉಪಸ್ಥಿತರಿದ್ದರು.

14 ಅಭ್ಯರ್ಥಿಗಳಿಂದ ಪ್ರಮಾಣ

ಕಾರ್ಯಕ್ರಮದಲ್ಲಿ ಶಿರಹಟ್ಟಿ ಮೀಸಲು ಮತಕ್ಷೇತ್ರದಿಂದ ಈ ವರೆಗೆ 14 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಒಟ್ಟು 14 ಜನ ಆಕಾಂಕ್ಷಿಗಳಿಂದ ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಸ್.ಪಾಟೀಲ, ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುವ ಶ್ರೀ ಹೊಳಲಮ್ಮದೇವಿಯ ಮೇಲೆ ಪ್ರಮಾಣವಚನ ಬೋಧಿಸಿ ಒಗ್ಗಟ್ಟು ಪ್ರದರ್ಶಿಸಿದರು.

ನಾಳೆ ಕನ್ನಡ ಪತ್ರಿಕೆ ಓದಿ- ಪತ್ರಿಕೋಧ್ಯಮ ಉಳಿಸಿ; ಪದವಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

0

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ “ಕನ್ನಡ ಪತ್ರಿಕೆ ಓದಿ – ಪತ್ರಿಕೋಧ್ಯಮ ಉಳಿಸಿ” ಸಂವಾದ ಕಾರ್ಯಕ್ರಮವನ್ನು ಡಿ.7 ರಂದು ಬೆಳಿಗ್ಗೆ 10.30 ಕ್ಕೆ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.


ಗವಿಮಠದ ಶ್ರೀ ಬಸವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಜೆಡಿಎಸ್ ಮುಖಂಡ ಶ್ರೀಶೈಲ ಮೂಲಿಮನಿ, ತಹಶೀಲ್ದಾರ್ ಅನೀಲ ಬಡಿಗೇರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಬಿ.ಬಾಗಡಿ ಆಗಮಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಗೆ  ರೈತ ಭವನದ ಎದುರುಗಡೆ “ ಕನ್ನಡ ಪತ್ರಿಕೆಗಳನ್ನು ಓದಿ ಪತ್ರಿಕೋಧ್ಯಮ ಉಳಿಸಿ”  ಪದವಿ ವಿದ್ಯಾರ್ಥಿಗಳ ಜಾಥಾಕ್ಕೆ ಮಾಜಿ ಸಚಿವ ಕೆ.ಎನ್.ಗಡ್ಡಿ ಚಾಲನೆ ನೀಡಲಿದ್ದಾರೆ.

ಅಷ್ಟೇ ಅಲ್ಲದೇ ಕಾ.ನಿ.ಪ.ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯ ಒಳಗಾಗಿ, ಇಲ್ಲಿಯ ಇತಿಹಾಸ ಪ್ರಸಿದ್ದ ನಾಗಲಿಂಗ ಸ್ವಾಮಿ ಮಠ, ಗವಿಮಠ, ಪಂಚಗೃಹ ಹಿರೇಮಠ ಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದು,  ನಂತರ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ, ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಜೋಡಣೆಗಾಗಿ ನಿರಂತರ ಹೋರಾಟ ಮಾಡುತ್ತಿರುವ ರೈತ ಮುಖಂಡರೊಂದಿಗೆ ಚರ್ಚಿಸಲಿದ್ದಾರೆಂದು ತಾಲ್ಲೂಕಾ ಅಧ್ಯಕ್ಷ ಚರಂತಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಗರದಲ್ಲಿ ಕಾನೂನು ವ್ಯವಸ್ಥೆ ಬಿಗಿಗೊಳಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ

ಗೂಂಡಾಗಳ ಹಾವಳಿ ತಡೆಗಟ್ಟಲು ಎಸ್ ಎಸ್ ಕೆ ಸಮಾಜದಿಂದ ಮನವಿ

ವಿಜಯಸಾಕ್ಷಿ ಸುದ್ದಿ, ಗದಗ

ನಗರದಲ್ಲಿ ಗೂಂಡಾಗಳ ಹಾವಳಿ ಹೆಚ್ಚಾಗಿದ್ದು, ಕಳೆದ ಒಂದುವರೆ ವರ್ಷದಿಂದೀಚೆಗೆ ಶಾಂತಿ ನಗರವಾದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕೊಲೆ, ಮಾರಣಾಂತಿ ಹಲ್ಲೆ, ಕಳ್ಳತನ, ಗೂಂಡಾಗಿರಿ ಹೆಚ್ಚಾಗಿದೆ. ಅವಳಿ ನಗರದಲ್ಲಿ ಕಾನೂನು ವ್ಯವಸ್ಥೆ ಬಿಗಿಗೊಳಿಸುವಂತೆ ಕರ್ನಾಟಕ ಕ್ಷತ್ರಿಯ ಒಕ್ಕೂಟದ ಗದಗ ಜಿಲ್ಲಾ ಯುವ ಘಟಕದ ಜಿಲ್ಲಾಧ್ಯಕ್ಷ ಬಾಬು ಎನ್.ಶಿದ್ಲಿಂಗ್ ಮತ್ತು ಜಿಲ್ಲಾ ಕಾರ್ಯದರ್ಶಿ ಪ್ರವೀಣ ಕೆ.ಜಿತೂರಿ ನೇತೃತ್ವದಲ್ಲಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಬಾಬು ಶಿದ್ಲಿಂಗ, ಡಿ.೨ರ ರಾತ್ರಿ ೧೧ ಗಂಟೆಯ ಸುಮಾರಿಗೆ ನಗರದ ಕಿಲ್ಲಾ ಓಣಿಯ ಹತ್ತಿರ ಕೆಲವು ಸಮಾಜಘಾತುಕ ಗೂಂಡಾಗಳು, ಕುಡಿದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದಾಗ, ಓಣಿಯ ಜನರು ಜಗಳವಾಡಬೇಡಿ ಎಂದು ಬುದ್ಧಿ ಹೇಳಿದ ಕಾರಣಕ್ಕೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ನಗರದಲ್ಲಿ ಈ ಗೂಂಡಾಗಳ ತಂಡವೇ ಇದ್ದು, ಗದಗ ನಗರದಲ್ಲಿ ಆಶಾಂತಿಯನ್ನು ಉಂಟುಮಾಡುತ್ತಿದ್ದಾರೆ. ಆದ್ದರಿಂದ ಮಾನ್ಯರು ಅಮಾಯಕರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಎಸ್.ಎಸ್. ಸಮಾಜದ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ಕಿಶನ್ ಮೇರವಾಡೆ, ರಾಜು ಕಲಾಲ, ಭರತ ಕಲಾಲ, ಮನೋಜಸಿಂಗ್, ಗಣೇಶಸಿಂಗ ಮಿತಡೆ, ಗೋವಿಂದ ಹಬೀಬ, ದತ್ತು ಬಾಕಳೆ, ಗಣೇಶ ನಾಕೋಡ, ಹನಮಂತ ಮಾಂಡ್ರೆ, ಸ್ವರೂಪ ಮಾಂಡ್ರೆ, ಸಂದೀಪ ಬೇವಿನಕಟ್ಟಿ, ಎಸ್.ಎಸ್.ಕೆ. ತರುಣ ಸಂಘದ ಅಧ್ಯಕ್ಷ ವಿಶ್ವನಾಥ ಸೋಳಂಕಿ, ಉಮೇಶ ಹಬೀಬ, ನಂದು ಬೇವಿನಕಟ್ಟಿ, ರಾಜು ಶಿದ್ಲಿಂಗ, ರಾಘು ಹಬೀಬ, ವಿಜಯ ಶಿದ್ಲಿಂಗ್, ಗಣೇಶ ಬಾರಿಗಿಡದ, ಯಲ್ಲಪ್ಪ ಭಾಂಡಗೆ ಸೇರಿದಂತೆ ಕ್ಷತ್ರಿಯ ಸಮಾಜದ ಯುವಕರು ಉಪಸ್ಥಿತರಿದ್ದರು.

ಭೀಕರ ಅಪಘಾತ; ಬೈಕ್ ಗೆ ಬಸ್ ಡಿಕ್ಕಿ,‌ ಮೂವರು ಕಾರ್ಮಿಕರು ಸಾವು

0

ಊಟ ಮುಗಿಸಿಕೊಂಡು ಹೊರಟಿದ್ದವರಿಗೆ ಬಸ್ ಡಿಕ್ಕಿ

ವಿಜಯಸಾಕ್ಷಿ ಸುದ್ದಿ, ರಾಯಚೂರು

ಬೈಕ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಮಧ್ಯರಾತ್ರಿ ನಡೆದಿದೆ.

ಜಿಲ್ಲೆಯ ಮಸ್ಕಿ ತಾಲೂಕಿನ ಗುಡದೂರು ನಾಲೆ ಬಳಿ ನಡೆದಿರುವ ಈ ಘಟನೆಯಲ್ಲಿ ಆಂಧ್ರಪ್ರದೇಶದ ನಂದ್ಯಾಲದ ನಾಗರಾಜ್ (32) ಜೈಪಾಲ್ (20) ಹಾಗೂ ಶ್ರೀನಿವಾಸ್ (28) ಎಂದು ಗುರುತಿಸಲಾಗಿದೆ.

ಭತ್ತದ ಕಟಾವು ಮಿಷನ್ ನಲ್ಲಿ ಕೆಲಸ ಮಾಡುತ್ತಿದ್ದ ಇವರು ನಿನ್ನೆ ರಾತ್ರಿ ಮಸ್ಕಿಯಲ್ಲಿ ಊಟ ಮುಗಿಸಿ ಬೈಕ್ ನಲ್ಲಿ ತೆರಳುವಾಗ ಈ ದುರ್ಘಟನೆ ಜರುಗಿದೆ.

ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಮೆಣಸಿನಕಾಯಿ ಕಳವಿಗೆ ಯತ್ನ; ಸಿಕ್ಕಿ ಬಿದ್ದ ಇಬ್ಬರು, ಒಬ್ಬ ಪರಾರಿ

ಗಣೇಶ ಹಾಗೂ ದುರಗಪ್ಪ ಸಿಕ್ಕಿ ಬಿದ್ದವರು, ಇನ್ನೊಬ್ಬ ಪರಾರಿ?

ವಿಜಯಸಾಕ್ಷಿ ಸುದ್ದಿ, ನರೇಗಲ್ಲ

ರೈತರ ಹೊಲದಲ್ಲಿ ಬೆಳೆದಿದ್ದ ಮೆಣಸಿನಕಾಯಿಯನ್ನು ಕಳವು ಮಾಡಲು ಹೋಗಿ ಸಿಕ್ಕಿಬಿದ್ದಿರುವ ಪ್ರಕರಣ ರೋಣ ತಾಲೂಕಿನಲ್ಲಿ ನಡೆದಿದೆ.

ನ.29ರಂದು ರಾತ್ರಿ 10.30ರಿಂದ 11.30ರ ಸಮಯದಲ್ಲಿ ಪ್ರಕರಣದ ಆರೋಪಿತರಾದ ಮಾರನಬಸರಿಯ ಗಣೇಶ ಶಂಕ್ರಪ್ಪ ಮಾಳೋತ್ತರ, ಮುಶಿಗೇರಿಯ ದುರಗಪ್ಪ ಮರಿಯಪ್ಪ ಮಾದರ ಹಾಗೂ ಮಾರನಬಸರಿಯ ಕಲ್ಲಪ್ಪ ಎಂಬುವರು ತಮ್ಮ ಬೈಕ್‌ನಲ್ಲಿ ರೋಣದ ಜಿಗಳೂರ ಗ್ರಾಮದ ಸರಹದ್ದಿನ ಸಣ್ಣದ್ಯಾಮಪ್ಪ ಬಸಪ್ಪ ಮಡಿವಾಳರ ಎಂಬುವರ 7.35 ಎಕರೆ ವಿಸ್ತೀರ್ಣದ ಹೊಲಕ್ಕೆ ತೆರಳಿ, ಅಂದಾಜು 400 ರೂ. ಮೌಲ್ಯದ 8 ಕೆಜಿ ಮೆಣಸಿನ ಕಾಯಿಯನ್ನು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದರು.

ಈ ಸಮಯದಲ್ಲಿ ದೂರುದಾರ ಸಣ್ಣದ್ಯಾಮಪ್ಪ ಹಾಗೂ ಅವರ ಮಗ ಆರೋಪಿ ಗಣೇಶ ಹಾಗೂ ದುರುಗಪ್ಪ ಇಬ್ಬರನ್ನೂ ಹಿಡಿದುಕೊಂಡಿದ್ದು, 3ನೇ ಆರೋಪಿ ಕಲ್ಲಪ್ಪ ಪರಾರಿಯಾಗಿದ್ದ ಬಗ್ಗೆ ನರೇಗಲ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಂತರಜಿಲ್ಲಾ ದರೋಡೆಕೋರ ಅಂದರ್

ದರೋಡೆ, ಮನೆಗಳ್ಳತನ ಸೇರಿ 13 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಮನೆಗಳ್ಳತನ, ದರೋಡೆ, ಸುಲಿಗೆ, ಹಂದಿ ಕಳ್ಳತನ ಇತ್ಯಾದಿ 13 ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಪೊಲೀಸ್‌ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ಗೋಕುಲ ರಸ್ತೆ, ಗದಗ ಜಿಲ್ಲೆಯ ರೋಣ, ಬೆಳಗಾವಿಯ ಸಂಕೇಶ್ವರ, ಗೋಕಾಕ, ಹುಕ್ಕೇರಿ, ಅಂಕಲಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹೀಗೆ ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಒಟ್ಟೂ 13 ಅಪರಾಧ ಕೃತ್ಯಗಳಲ್ಲಿ ಆರೋಪಿ ರಾಜು ಗಂಗಪ್ಪ ಕಾಮಜೇನಿ ಭಾಗಿಯಾಗಿದ್ದ.

2022ರ ಅಪರಾಧ ತಡೆ ಮಾಸಾಚರಣೆಯ ನಿಮಿತ್ತ ಗೋಕುಲ ಪೊಲೀಸ್‌ ಠಾಣೆಯ ಪಿಐ ಜೆ.ಎಂ.ಕಾಲಮಿರ್ಚಿ ಹಾಗೂ ಪಿಎಸೈ ದೇವೇಂದ್ರ ಮಾವಿನಂಡಿ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ರಾಜು ತಿಗಣಿ, ಮಹೇಶ ಬೆನ್ನೂರ ಪತ್ತೆ ಕಾರ್ಯ ನಡೆಸಿ, ಆರೋಪಿ ರಾಜು ಚಿಕ್ಕಮಗಳೂರು ಸುತ್ತಮುತ್ತ ಪ್ರದೇಶದಲ್ಲಿ ವಾಸವಾಗಿದ್ದಾನೆಂಬ ಮಾಹಿತಿಯನ್ನು ಸಂಗ್ರಹಿಸಿದ್ದರು.

ನಾಲ್ಕು ದಿನಗಳ ಕಾಲ ವೇಷ ಮರೆಸಿಕೊಂಡು ಅಲ್ಲಿಯೇ ಹುಡುಕಾಡಿ, ಇದೀಗ ರಾಜು ಗಂಗಪ್ಪ ಕಾಮಜೇನಿಯನ್ನು ಪತ್ತೆಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಗದಗ ಜಿಲ್ಲಾ ಜೆಡಿಎಸ್ ವಕ್ತಾರರಾಗಿ ರಮೇಶ ಕಲಬುರ್ಗಿ ನೇಮಕ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲಾ ಯುವ ಜೆಡಿಎಸ್ ಘಟಕದ ಮಾಜಿ ಅಧ್ಯಕ್ಷ ಹಾಗೂ ಎಸ್ ಎಸ್ ಕೆ.ಸಮಾಜದ ಯುವ ಮುಖಂಡ ರಮೇಶ ಎನ್. ಕಲಬುರ್ಗಿ ಇವರನ್ನು ಗದಗ ಜಿಲ್ಲಾ ಜೆಡಿಎಸ್ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ.

ಕೇಂದ್ರದ ಮಾಜಿ ಸಚಿವರೂ, ಜೆಡಿಎಸ್ ರಾಜ್ಯ ಅಧ್ಯಕ್ಷರೂ‌ ಆದ ಸಿ ಎಂ.ಇಬ್ರಾಹಿಂ ಅವರು ಆದೇಶ ಹೊರಡಿಸಿದ್ದಾರೆ.

ಇವರ ನೇಮಕಕ್ಕೆ ಜಿಲ್ಲಾ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ, ಜಿಲ್ಲಾ ಕಾರ್ಯ್ಯಾಧ್ಯಕ್ಷ ಎಂ ಆರ್. ಸೋಂಪೂರ‌, ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ, ರೊಣ, ಮುಂಡರಗಿ, ನರಗುಂದ ತಾಲೂಕು ಅಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಗದಗನಲ್ಲಿ ಮೂವರಿಗೆ ಚಾಕು ಇರಿತ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ನಗರದಲ್ಲಿ ಮತ್ತೆ ಚಾಕು ‌ಇರಿಯಲಾಗಿದೆ. ಕ್ಷುಲ್ಲಕ ಕಾರಣಕ್ಕಾಗಿ ಮೂವರಿಗೆ‌ ಆರು ಜನರಿಂದ ಚಾಕುವಿನಿಂದ ಇರಿಯಲಾಗಿದೆ ಎಂದು ಹೇಳಲಾಗುತ್ತದೆ. ಕಿಲ್ಲಾ ಓಣಿಯಲ್ಲಿ ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ.

ವಸಂತ ಬಾಕಳೆ, ಗೋಪಾಲ ಖೋಡೆ ಹಾಗೂ ಮಾಧುಸಾ ಬದಿ ಎಂಬಾತರೇ ಚಾಕುವಿನಿಂದ ಇರಿತಕ್ಕೊಳಗಾದವರು.

ಕೆಲವರು ಬಾಯಿ ಮಾಡುತ್ತಿದ್ದರು ನಾವು ಹೋಗಿ ಬುದ್ದಿ ಹೇಳಿದ್ದಕ್ಕೆ ನಮ್ಮ ಮೇಲೆ ಈ ಚಾಕುವಿನಿಂದ ಮನ ಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಆರೋಪಿಸಿದ್ದಾರೆ.

ರಂಗನವಾಡಿಯ ಶಿವಾನಂದ ಅಲಿಯಾಸ್ ಶಿವು, ಸಾಧಿಕ್ ಅಕಬರಸಾಬ್, ಯೂನಸ್ ಮೋದಿನಸಾಬ್, ಅಲ್ವಿನ್ ಗ್ಯಾಬ್ರೀಲ್ ಹಾಗೂ ಇನ್ನಿಬ್ಬರು ಸೇರಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹೊಟ್ಟೆ, ಮುಂಗೈ, ಗಲ್ಲ, ಎದೆ, ಹಣೆಯ ಭಾಗಗಳಿಗೆ ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡ ಮೂರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ಹಲವು ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೇಶ್ವರ ಪೊಲೀಸರ ಕಾರ್ಯಾಚರಣೆ; ನಗದು, ಚಿನ್ನಾಭರಣ ದೋಚಿದ್ದ ಕಳ್ಳನ ಬಂಧನ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದಲ್ಲಿನ ಮನೆಯೊಂದಕ್ಕೆ ನುಗ್ಗಿ ಹಣ ಹಾಗೂ ಚಿನ್ನಾಭರಣ ಕಳವು ಮಾಡಿದ್ದ ಕಳ್ಳನನ್ನು ಲಕ್ಷೇಶ್ವರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ಪಂಢರಾಪುರದ ಸಚಿನ್ ಮಾನೆಯಿಂದ ಪೊಲೀಸರು 18,500 ರೂ. ನಗದು ಹಾಗೂ 35 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿನ ಮನೆಯಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಲಕ್ಷೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ ಆರೋಪಿ ಪತ್ತೆಗೆ ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಡಿ.ಪ್ರಕಾಶ, ವಿ.ಜಿ.ಪವಾರ, ಎಎಸ್ಐಗಳಾದ ಎಂ.ವಿ. ಮೌಲ್ವಿ, ಜಿ.ಎಂ. ಬೂದಿಹಾಳ ಹಾಗೂ ಸಿಬ್ಬಂದಿಗಳಾದ ಎಂ.ಎ. ಶೇಖ್, ಎಚ್.ಐ. ಕಲ್ಲಣ್ಣವರ, ಡಿ.ಎಸ್. ನದಾಫ್, ಕೊರಡೂರ, ಆನಂದಸಿಂಗ್ ದೊಡ್ಡಮನಿ, ಎಂ.ಬಿ. ವಡ್ಡಟ್ಟಿ, ಮಧುಚಂದ್ರ ಧಾರವಾಡ, ಎಸ್.ಎಫ್.ತಡಸಿ, ಕೆ.ಬಿ. ಹುಲಗೂರ, ಮಹಾದೇವ ಲಮಾಣಿ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಸ್ಕಾಲರ್ಶಿಪ್ ರದ್ದು; ಕಾಂಗ್ರೆಸ್ ಮುಖಂಡ ವಿವೇಕ ಯಾವಗಲ್ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ನರಗುಂದ

ಬಡ ಮಕ್ಕಳಿಗೆ ಕೊಡುವ ಸ್ಕಾಲರ್ಶಿಪ್ ರದ್ದು ಮಾಡಿದ ನೀಚ ಬಿಜೆಪಿ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ವಿವೇಕ ಯಾವಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡವರ ಮಕ್ಕಳು ಶಾಲೆಗೆ ಹೋಗುವ ದಾರಿಯಲ್ಲಿ ಮುಳ್ಳು ಹಾಕುವ ಕೆಲಸ ಮಾಡುತ್ತಿದೆ. ಬಡ ವಿದ್ಯಾರ್ಥಿಗಳಿಗೆ ಕೇಂದ್ರದಿಂದ ಶೇ.75 ಹಾಗೂ ರಾಜ್ಯದಿಂದ ಶೇ.25ರಷ್ಟು ಪಾಲುದಾರಿಕೆಯಲ್ಲಿ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಏಕಾಏಕಿ ಸ್ಥಗಿತಗೊಳಿಸಿದ್ದು ಸರಿಯಲ್ಲ.

ಕೇಂದ್ರ ಸರ್ಕಾರದ ಈ ನಿಲುವನ್ನು ರಾಜ್ಯ ಸರ್ಕಾರ ಖಂಡಿಸಿ, ಈ ಆದೇಶವನ್ನು ಹಿಂಪಡೆಯಬೇಕು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ನರಗುಂದ ಮತ ಕ್ಷೇತ್ರದ ಯುವ ನಾಯಕ ವಿವೇಕ ಯಾವಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!