Home Blog Page 3216

ಬಿಜೆಪಿ ಅಭ್ಯರ್ಥಿ ಪರ ಶಾಸಕ ಕ್ಯಾಂಪೇನ್: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ 48 ಗಂಟೆ ಮುಂಚಿತವಾಗಿ ಅಂದರೆ, ಶನಿವಾರ(ಡಿ.25)ವೇ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಆದರೆ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ.

ಹೌದು, ಅವಳಿ‌ ನಗರದ 34ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ವಿದ್ಯಾವತಿ ಗಡಗಿ ಅವರ ಸಂಬಂಧಿಕರೂ ಎನ್ನಲಾಗುತ್ತಿರುವ ಶಾಸಕ ಯಾದವಾಡ ಅವರು ಕಳೆದ ಒಂದು ವಾರದಿಂದ ಗದಗ ನಗರದಲ್ಲೇ ಠಿಕಾಣಿ ಹೂಡಿದ್ದಾರೆ. ಅಲ್ಲದೇ, ಮುಳಗುಂದ ನಾಕಾದಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತ.

ರಾಜ್ಯ ಚುನಾವಣಾ ಆಯೋಗದ ಪ್ರಕಾರ ‘ ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಮತದಾರರಲ್ಲದ ಬೆಂಬಲಿಗರು, ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಪಕ್ಷದ ಕಾರ್ಯಕರ್ತರು, ಮೆರವಣಿಗೆ, ಪ್ರಚಾರ ಕಾರ್ಯ ನಿರ್ವಹಿಸುವವರು ಇನ್ನಿತರರು ಆ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡುವ ಹಾಗಿಲ್ಲ.

ಆದರೆ, ಕಳೆದ ಒಂದು ವಾರದಿಂದಲೂ ಎಸ್.ಎಸ್.ಯಾದವಾಡ & ಕಂ ಎಂಬ ಭಾರತೀಯ ಜನತಾ ಪಕ್ಷದ ಚಿಹ್ನೆ ಇರುವ ಕಾರೊಂದು ಅವಳಿ ನಗರದಲ್ಲಿ ‌ಓಡಾಡುತ್ತಿದೆ. ಅಷ್ಟೇ ಅಲ್ಲದೆ ಮತದಾನ ದಿನವೂ ಶಾಸಕರ ಬೆಂಬಲಿಗರು ಕಾರ ಸಮೇತ ಮತದಾನ ಕೇಂದ್ರದ ಬಳಿ ಮತದಾರರ ಮನವೊಲಿಸಿತ್ತಿದ್ದರೂ ಚುನಾವಣಾಧಿಕಾರಿಗಳು, ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಆರೋಪಿಸಿದ್ದಾರೆ.

ಮತದಾರರಿಗೆ ಹಣದ ಆಮಿಷ ಆರೋಪ: ಕೈ-ಕಮಲ ಅಭ್ಯರ್ಥಿಗಳ ಮಧ್ಯೆ ವಾಕ್ಸಮರ

ವಿಜಯಸಾಕ್ಷಿ ಸುದ್ದಿ, ಗದಗ:

‘ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಯೊಳಗೆ ನಿಂತು ಮತದಾರರಿಗೆ ಆಮಿಷವೊಡ್ಡಿ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ 10ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮಾಧವ್ ಗಣಾಚಾರಿ ಆರೋಪಿಸಿದರು.

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಟಗೇರಿಯ ಸೇಂಟ್ ಜಾನ್ ಶಾಲೆಯ ಮತಗಟ್ಟೆ ಸಂ.45ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ ಸೇರಿದಂತೆ ಅವರ ಕುಟಂಬದವರು ಮತದಾರರಿಗೆ ಹಣದ ಆಮಿಷವೊಡ್ಡಿ ಮತಯಾಚಿಸುತ್ತಿದ್ದಾರೆ. ಇದಕ್ಕೆ ಪೊಲೀಸರು ಸಾಥ್ ನೀಡುತ್ತಿದ್ದಾರೆ’ ಎಂದು ಗಂಭೀರವಾಗಿ ಆರೋಪಿಸಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ ಮಧ್ಯೆ ಪ್ರವೇಶಿಸಿ ‘ಸುಳ್ಳು ಹೇಳಬೇಡಿ ನಾವ್ಯಾರೂ ಮತಗಟ್ಟೆ ಆವರಣದಲ್ಲಿ ನಿಂತು ಮತಾಯಾಚಿಸಿಲ್ಲ’ ಎಂದು ಮಾಧವ್ ಗಣಾಚಾರಿ ಜೊತೆ ವಾಕ್ಸಮರ ನಡೆಸಿದರು. ಪರಿಸ್ಥಿತಿ ಕೈ‌ಮೀರುವ ಹಂತಕ್ಕೆ‌ತಲುಪಿದಾಗ ಪೊಲೀಸರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಮತಗಟ್ಟೆಯಿಂದ ಹೊರ ಹಾಕಿ ಪರಿಸ್ಥಿತಿ ತಿಳಿಗೊಳಿಸಿದರು.

ಚಳಿ ಎಫೆಕ್ಟ್, ಮಂದಗತಿಯಲ್ಲಿ ಮತದಾನ; ಶೇ.5.61ರಷ್ಟು ಮತದಾನ

ವಿಜಯಸಾಕ್ಷಿ ಸುದ್ದಿ, ಗದಗ:

ಸೋಮವಾರ ಬೆಳಗ್ಗೆಯಿಂದ ಗದಗ-ಬೆಟಗೇರಿ ನಗರಸಭೆ ಚುನಾವಣೆ ನಡೆಯುತ್ತಿದೆ. ಚಳಿ ಇರುವ ಕಾರಣ ಮತದಾರರು ಮತದಾನ ಆರಂಭದ ಮೊದಲ ಎರಡು ಗಂಟೆ ಮಂದ ಮತದಾನ ನಡೆಯಿತು.

ಬೆಳಗ್ಗೆ 7 ಗಂಟೆಯಿಂದ ಮತದಾನ ಜರಗುತ್ತಿದ್ದು 9 ಗಂಟೆಯವರೆಗೆ 7942 ಜನರು ಮತ ಚಲಾಯಿಸಿದ್ದಾರೆ. ಅವಳಿ ನಗರದ 136 ಮತಗಟ್ಟೆಗಳಲ್ಲಿ ಶೇ5.61% ಮತದಾನ ನಡೆದಿದೆ.

ಕೈ ಕೊಟ್ಟ ಮತಯಂತ್ರ, ಮತದಾನ‌ ವಿಳಂಬ; ಮತಗಟ್ಟೆ ಬಾಗಿಲಿಗೆ ಭರ್ಜರಿ ಪೂಜೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ನಗರಸಭೆ ಚುನಾವಣೆ ಆರಂಭಗೊಂಡಿದೆ. ಅಭ್ಯರ್ಥಿಗಳು ಮತಗಟ್ಟೆಗೆ ಭರ್ಜರಿ ಪೂಜೆ ಸಲ್ಲಿಸಿ ಮತದಾನ ಮಾಡಿದರು. ಇನ್ನು ಹಲವೆಡೆ ಕದನ ಕಲಿಗಳು ಮತಗಟ್ಟೆ ಬಾಗಿಲಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೆಲುವಿಗಾಗಿ ಪ್ರಾರ್ಥಿಸಿದರು.

ಅವಳಿ ನಗರದ 19ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ನೆಲವಡಿ ಕುಟುಂಬಸ್ಥರು
ಮತಗಟ್ಟೆ ಬಾಗಿಲಿಗೆ ತೆಂಗಿನಕಾಯಿ ಒಡೆದು, ಹೂ, ಅಡಿಕೆ, ವಿಳ್ಯದೆಲೆ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಪೂಜೆ ಸಲ್ಲಿಸಿದ ಮಹಿಳೆಗೆ ಮತಗಟ್ಟೆ ಅಂಗಳದಲ್ಲೇ ಹಣ ನೀಡಿದರು. ಇನ್ನು ಅಭ್ಯರ್ಥಿ ಕುಟುಂಬಸ್ಥರು ಪೂಜೆ ಮಾಡುವುದನ್ನು ತಡೆಯದ ಚುನಾವಣಾಧಿಕಾರಿಗಳು ಮೂಕ ಪ್ರೇಕ್ಷಕರಂತೆ ಕೈಕಟ್ಟಿ ಅಸಹಾಯಕರಂತೆ ನಿಂತಿದ್ದರು.

ಇನ್ನು ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಮತಯಂತ್ರ ಕೈಕೊಟ್ಟಿದ್ದರಿಂದ 15ನೇ ವಾರ್ಡಿನಲ್ಲಿ
ಸುಮಾರು 45 ನಿಮಿಷ ತಡವಾಗಿ ಆರಂಭವಾಯಿತು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.6 ರಲ್ಲಿನ ಮತಗಟ್ಟೆ ನಂ.62 ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದ ಮತದಾರರು ಕಾಯುತ್ತಾ ನಿಂತಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು
ವಿವಿ ಪ್ಯಾಟ್ ಬದಲಾಯಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು.

ಉತ್ತರಕುಮಾರನ ಪೌರುಷ ಹೆಂಗಳೆಯರ ಮುಂದೆ!; ‘ನೀವು ಬನ್ನಿ ದಾಳಿ ಮಾಡೋಣ’ ಎಂದ ಅಧಿಕಾರಿಗಳು?

ವಿಜಯಸಾಕ್ಷಿ ಸುದ್ದಿ, ಗದಗ:

‘ಸರ್ಕಾರಿ ಕೆಲಸ ದೇವರ ಕೆಲಸ’ ಈ ಧ್ಯೇಯ ವಾಕ್ಯ ಹೆಸರಿಗಷ್ಟೇ. ಆದ್ರೆ, ಕಾರ್ಯಗತದಲ್ಲಿಲ್ಲ ಎಂಬುವುದಕ್ಕೆ ಸರ್ಕಾರಿ ಅಧಿಕಾರಿಗಳ ಇಂತಹ ಬೇಜವಾಬ್ದಾರಿ ಮಾತುಗಳೇ ಸಾಕ್ಷಿ.

ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅವ್ಯಾಹತವಾಗಿ ‌ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ‌ ನಿಷೇಧಿಸುವಂತೆ ಆಗ್ರಹಿಸಿ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಡಿ.29ರಂದು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದಾರೆ. ಆದರೆ, ಪಾದಯಾತ್ರೆ ಕೈಗೊಂಡ ಗ್ರಾ.ಪಂ. ಸದಸ್ಯರಿಗೆ ಹಾಗೂ ಮಹಿಳೆಯರಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ‘ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡುತ್ತೇವೆ. ನೀವು ಬನ್ನಿ!’ ಎಂದು ಕರೆಯುತ್ತಿದ್ದಾರೆ.

ಅಧಿಕಾರಿಗಳ ಇಂತಹ ಬೇಜವಾಬ್ದಾರಿತನ ಮಾತಿಗೆ ಆಕ್ರೋಶಗೊಂಡಿರುವ ಗ್ರಾ.ಪಂ. ಸದಸ್ಯೆ ಅಶ್ವಿನಿ ಮೇಗೂರ ಅವರು ‘ವಿಜಯಸಾಕ್ಷಿ’ಯೊಂದಿಗೆ ಮಾತನಾಡಿ, ‘ಗ್ರಾಮದ ಅಭಿವೃದ್ಧಿಗಾಗಿ ನಾವು ಜನಪ್ರತಿನಿಧಿಗಳಾಗಿದ್ದೇವೆ. ಎಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ, ಅದೇ ವಿಚಾರವಿಟ್ಟುಕೊಂಡು ‘ದಾಳಿ ಮಾಡಲು ನೀವು ಬನ್ನಿ’ ಎಂದು ಕರೆಯುತ್ತಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ‌ ಎಂದು ಆರೋಪಿಸಿದರು.

‘ಅಬಕಾರಿ ಇಲಾಖೆಯಲ್ಲಿ ನಾವು ಸೇವೆ ಸಲ್ಲಿಸುತ್ತಿದ್ದರೆ ಆ ಕಾರ್ಯವನ್ನು ನಾವೇ ಮಾಡುತ್ತಿದ್ದೇವು. ಕಾನೂನು ಬಾಹಿರ ಕೆಲಸ ಮಾಡುತ್ತಿರುವವರ ಕುರಿತು ಮಾಹಿತಿ ನೀಡಿದಾಗ ಗೌಪ್ಯ ಕಾರ್ಯಾಚರಣೆ ನಡೆಸಬೇಕಾದ ಅಧಿಕಾರಿಗಳು, ಅಕ್ರಮದ ಬಗ್ಗೆ ಮಾಹಿತಿ ನೀಡದವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.

ಪ್ರಜಾಪ್ರಭುತ್ವ ಬಲವರ್ಧನೆಗೆ ಕಾಂಗ್ರೆಸ್ ಪಕ್ಷ ಬೆಂಬಲಿಸಿ; ಡಿ.ಆರ್.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ:

‘ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬುನಾದಿಯಾಗಿದ್ದು, ಇದು ಬಲಶಾಲಿಯಾಗಬೇಕು. ಇಲ್ಲಿಯ ಸಾಮಾನ್ಯ ಪ್ರಜೆಯೇ ವ್ಯವಸ್ಥೆಯ ಪ್ರಭು. ಈ ಪ್ರಭುವಿನ ಬದುಕು ಸುಂದರಗೊಳಿಸುವುದೇ ಪ್ರತಿನಿಧಿಯ ಕರ್ತವ್ಯವೆಂದು ನಂಬಿ ಅದನ್ನು ಸಾಕಾರಗೊಳಿಸುವುದೇ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ್ ಹೇಳಿದ್ದಾರೆ.

ಭಾನುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನಪರ ಕೆಲಸಗಳನ್ನು ಮಾಡುವ ಪರಂಪರೆ ಬೆಳೆಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದಾಗಿದೆ. ರಾಜ್ಯದಲ್ಲಿಯೇ ಒಂದು ಆದರ್ಶ ವಸತಿ ವ್ಯವಸ್ಥೆ ಮಾಡಲಾಗಿದೆ. 60 ಕಿ.ಮೀ. ದೂರದಿಂದ ನದಿ ನೀರು ತಂದು ವಿತರಣೆ ಮಾಡಲಾಗುತ್ತಿದೆ. ಅವಳಿ ನಗರವನ್ನು ಕ್ರೀಡಾನಗರವನ್ನಾಗಿ ಮಾಡಲು ಬೇಕಾದ ಎಲ್ಲ ಅನುಕೂಲತೆಗಳನ್ನು ಸೃಷ್ಟಿಸಲಾಗಿದೆ.

ನಗರದ ಸಂಗೀತ, ಕಲೆ, ಸಾಹಿತ್ಯಿಕ, ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಲು ಎಲ್ಲ ಅನುಕೂಲತೆ ಮಾಡಿದೆ. ಸಾರ್ವಜನಿಕ ನೈರ್ಮಲ್ಯ ಕಾಪಾಡುತ್ತ ಗೌರವ ಘಟಕಗಳನ್ನು ಸ್ಥಾಪಿಸಿ ದೇಶದಲ್ಲಿಯೇ ಖ್ಯಾತಿ ಗಳಿಸುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ಅವಳಿ ನಗರದ ಎಲ್ಲ 35 ವಾರ್ಡಗಳಲ್ಲಿ ಚಾರಿತ್ರ್ಯವಂತ ಕ್ರೀಯಾಶೀಲ ಸೇವಾ ಮನೋಭಾವವುಳ್ಳವರನ್ನು ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸಿದ್ದು, ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಮತ ನೀಡುವ ಮೂಲಕ ಆಯ್ಕೆ ಮಾಡುವಂತೆ ಮಾಜಿ ಶಾಸಕ ಡಿ.ಆರ್.ಪಾಟೀಲ್ ಮನವಿ ಮಾಡಿದ್ದಾರೆ.

ಪಕ್ಷೇತರ ಅಭ್ಯರ್ಥಿ ಬೆಂಬಲ; ಕೊನೆ ಘಳಿಗೆಯಲ್ಲಿ ಸ್ನೇಹಲತಾ ಕಿಲಕಿಲ

0

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ನಗರಸಭೆ ಚುನಾವಣೆಗೆ 20ನೇ ವಾರ್ಡ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗಂಗವ್ವ ರುದ್ರಪ್ಪ ಬನ್ನಿಮರದ ಶ್ರೀರಾಮ ಸೇನೆಯ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸ್ನೇಹಲತಾ ಮುತ್ತುರಾಜ ಕುರ್ತಕೋಟಿ ಅವರನ್ನು ಬೆಂಬಲಿಸಿ ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆ.

ಇಲ್ಲಿಯ ಒಕ್ಕಲಗೇರಿಯಲ್ಲಿ ಜರುಗಿದ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ರುದ್ರಪ್ಪ ಬೇವಿನಮರದ ಅವರನ್ನು ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಹೂ ಮಾಲೆ ಹಾಕುವ ಮೂಲಕ ಸ್ವಾಗತಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಗಂಗವ್ವ ರುದ್ರಪ್ಪ ಬನ್ನಿಮರದ ಮಾತನಾಡಿ, ‘ತಾವು ಮೂಲತ: ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದು ತಮ್ಮ ಸ್ಪರ್ಧೆಯಿಂದ ಶ್ರೀರಾಮ ಸೇನೆಯ ಬೆಂಬಲಿತ ಅಭ್ಯರ್ಥಿ ಸ್ನೇಹಲತಾ ಕುರ್ತಕೋಟಿ ಅವರ ಜಯದ ಮೇಲೆ ಪರಿಣಾಮ ಬೀರಲಿದೆ. ಈ ದಿಸೆಯಲ್ಲಿ ತಾವು ಸ್ನೇಹಲತಾ ಕುರ್ತಕೋಟಿ ಅವರನ್ನು ಬೆಂಬಲಿಸಿ ಚುನಾವಣೆಯಿಂದ ನಿವೃತ್ತಿಯಾಗಿರುವದಾಗಿ ಘೋಷಿಸಿದರು.

ಶ್ರೀರಾಮ ಸೇನೆಯ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ ಮಾತನಾಡಿ, ‘20ನೇ ವಿಭಾಗದಲ್ಲಿ ಶ್ರೀರಾಮ ಸೇನೆಯ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸ್ನೇಹಲತಾ ಬೇವಿನಮರದ ಆಯ್ಕೆಯಾಗುವ ಎಲ್ಲ ಸ್ಪಷ್ಟ ಲಕ್ಷಣಗಳಿವೆ. ಇನ್ನೋರ್ವ ಪಕ್ಷೇತರ ಅಭ್ಯರ್ಥಿ ಗಂಗವ್ವ ರುದ್ರಪ್ಪ ಬನ್ನಿಮರದ ಸ್ಪರ್ಧೆಯಿಂದ ಹಿಂದು ಪರ ಮತಗಳು ಇಬ್ಬಾಗವಾಗುವ ಲಕ್ಷಣಗಳಿದ್ದವು. ಈ ಸಂಗತಿಯನ್ನು ಮನಗಂಡು ಓಣಿಯ ಹಿರಿಯರ ಅಭಿಲಾಸೆಯಂತೆ ಪಕ್ಷೇತರ ಅಭ್ಯರ್ಥಿ ಗಂಗವ್ವ ರುದ್ರಪ್ಪ ಬನ್ನಿಮರದ ಚುನಾವಣಾ ಕಣದಿಂದ ನಿವೃತ್ತರಾಗಿ ಸ್ನೇಹಲತಾ ಕುರ್ತಕೋಟಿ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ಮಹೇಶ ರೋಖಡೆ, ಗಣೇಶ ಸತ್ಯಪ್ಪನವರ, ಶಿವಯೋಗಿ ಹಿರೇಮಠ, ಸೋಮಲಿಂಗ ಆಲೂರ, ಹುಲಿಗೆಪ್ಪ ವಾಲ್ಮೀಕಿ, ಚೇತನ ಇರಕಲ್, ಕುಮಾರ ಬನ್ನಿದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಗ್ ಫೈಟ್; ಸೆಡ್ಡು‌ ಹೊಡೆದ ಸ್ವತಂತ್ರರು! ಹಣ, ಹೆಂಡ ಹಂಚಿ‌ ಆಮಿಷವೊಡ್ಡಿದ ಅಭ್ಯರ್ಥಿಗಳು?

*ಶಾಂತಿಯುತ ‌ಮತದಾನಕ್ಕೆ ಜಿಲ್ಲಾಡಳಿತ ಸಿದ್ಧತೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಅವಳಿ ನಗರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಬಿಗ್ ಫೈಟ್ ನಡೆದಿದ್ದು, ಉಭಯ ಪಕ್ಷಗಳ ನಾಯಕರು ಕೊನೆ ಘಳಿಗೆಯ ವರೆಗೂ ಮತದಾರರ ಮನವೊಲಿಸಲು ಹರಸಾಹಸ ಪಟ್ಟರು.

ಇತ್ತ ರಾಷ್ಟ್ರೀಯ ಪಕ್ಷಗಳ ಸ್ಪರ್ಧಾಳುಗಳಿಗಿಂತ ನಾವೇನೂ ಕಮ್ಮಿಯಿಲ್ಲ ಎಂಬಂತೆ ಕೆಲವು ವಾರ್ಡ್‌ಗಳಲ್ಲಿ ಬಂಡಾಯವೆದ್ದು ಸೆಡ್ಡು ಹೊಡೆದಿರುವ ಪಕ್ಷೇತರ ಅಭ್ಯರ್ಥಿಗಳು ಮತದಾನದ ಹಿಂದಿನ ದಿನವಾದ ಭಾನುವಾರ ಕೊನೆ ಹಂತದ ಕಸರತ್ತು ನಡೆಸಿದರು.

ಅದರಂತೆ, ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿಯೇ ಬೀಡು ಬಿಟ್ಟಿರುವ ಸಚಿವ ಸಿ.ಸಿ. ಪಾಟೀಲ್, ಶಾಸಕ ಕಳಕಪ್ಪ ಬಂಡಿ,ಯುವ ನಾಯಕ ಅನಿಲ ಮೆಣಸಿನಕಾಯಿ ಹಾಗೂ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ್, ಮಾಜಿ ಶಾಸಕ ಡಿ.ಆರ್. ಪಾಟೀಲ್ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಅವಳಿ ನಗರದ ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.

ಹಣ, ಸೀರೆ, ಶರ್ಟ್ ಹಂಚಿಕೆ?:

ಬಹಿರಂಗ ಪ್ರಚಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಮತ ಕೋರಿದರು. ಮತ ಯಾಚಿಸುವ ನೆಪದಲ್ಲಿ ಕರಪತ್ರಗಳಲ್ಲಿ ಮುಚ್ಚಿ ಹಣ ಕೊಟ್ಟರೆ, ಇನ್ನು ಕೆಲವರು ಶರ್ಟ್, ಸೀರೆ ಹಂಚಿದ್ದಾರೆ ಎನ್ನಲಾಗಿದೆ. ಒಂದು ವಾರ್ಡ್‌ನಲ್ಲಿ ಅಭ್ಯರ್ಥಿಯೊಬ್ಬರು ಸೀರೆ ಹಂಚಿದರೆ, ಮತ್ತೊಂದು ವಾರ್ಡ್‌ನಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯೇ ಮನೆ ಮನೆಗೆ ಶರ್ಟ್ ಪೀಸ್ ಹಂಚಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಇನ್ನು ಅವಳಿ ನಗರದ 35 ವಾರ್ಡ್‌ಗಳಲ್ಲೂ ಪ್ರತಿ ಮತಕ್ಕೆ ಸುಮಾರು 1,000 ರೂ. ನಿಗದಿಪಡಿಸಿದ್ದಾರೆ, ಕೆಲವೆಡೆ ಕುಟಂಬವೊಂದಕ್ಕೆ ಕನಿಷ್ಠ 5,000 ರೂ. ಹಂಚಿಕೆ ಮಾಡಿದ್ದಾರೆ ಎಂಬ ಆರೋಪಗಳು ಅವಳಿ ನಗರದಲ್ಲಿ ಸದ್ದು ಮಾಡುತ್ತಿವೆ.

ಆಮಿಷವೊಡ್ಡಿ ಮತಭಿಕ್ಷೆ?

ಮತದಾನದ ಮುನ್ನಾ ದಿನ ಗ್ರಾಮೀಣ ಭಾಗಗಳಲ್ಲಿ ‘ಕತ್ತಲ ರಾತ್ರಿ’ ಅಂತಲೇ ಬಿಂಬಿಸಿಕೊಂಡಿದ್ದು, ಈ ದಿನ ಮತದಾರರಿಗೆ ಆಸೆ, ಆಮಿಷಗಳನ್ನು ಒಡ್ಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ, ಮತದಾನಕ್ಕೂ ಮುನ್ನ ಹಣ, ಹೆಂಡ ಹಂಚದಿದ್ದರೆ ಗೆಲ್ಲುವ ಮನೋಭಾವ ಅಭ್ಯರ್ಥಿಗಳಲ್ಲಿ, ಜನರಲ್ಲಿ ಬಲವಾಗಿ ಬೇರೂರಿದೆ. ಹೀಗಾಗಿ ಭಾನುವಾರ (ಡಿ. 26) ಕೆಲವು ವಾರ್ಡ್‌ಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಹಾಗೂ ಪಕ್ಷೇತರ ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡುವ ಮೂಲಕ ಮತ ಯಾಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲಾಡಳಿತ ಸಕಲ ಸಿದ್ಧತೆ

ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಅವಳಿ ನಗರ ವ್ಯಾಪ್ತಿಯಲ್ಲಿ 136 ಮತಗಟ್ಟೆಗಳನ್ನು ತೆರೆಯಲಾಗಿದೆ. 69,839 ಪುರುಷರು, 71,703 ಮಹಿಳೆಯರು ಸೇರಿ ಒಟ್ಟು 1,41,542 ಮತದಾರರಿದ್ದಾರೆ.

ಗದಗ-ಬೆಟಗೇರಿ ಎಲ್ಲ ಮತಗಟ್ಟೆ ಸೇರಿಸಿ 150 ಪೋಲಿಂಗ್ ಪಾರ್ಟಿಸ್ ಮಾಡಿದ್ದು, 600 ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಲಾಗಿದೆ. 136ರಲ್ಲಿ 40 ಸೂಕ್ಷ್ಮ, 96 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 40 ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇನ್ನು ಮೇಲ್ವಿಚಾರಣೆಗಾಗಿ ಪ್ರತಿ 5-6 ವಾರ್ಡ್‌ಗಳಿಗೆ 6 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಮಸ್ಟರಿಂಗ್ ಕೇಂದ್ರಕ್ಕೆ ಡಿಸಿ ಭೇಟಿ

ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ (ಡಿ. 26)ದಂದು ನಗರದ ಗುರುಬಸವ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ಜರುಗಿತು. ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಭೇಟಿ ನೀಡಿ ವೀಕ್ಷಿಸಿದರು. ಈ ವೇಳೆ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಕಿಶನ್ ಕಲಾಲ್ ಉಪಸ್ಥಿತರಿದ್ದರು.

ಡಿ.28 ರಿಂದ ಹತ್ತು ದಿನ ರಾತ್ರಿ ಕರ್ಪ್ಯೂ; ಸಚಿವ ಪಾಟೀಲ

ವಿಜಯಸಾಕ್ಷಿ ಸುದ್ದಿ, ಗದಗ

‘ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯ ವರದಿ ಆಧರಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಡಿ.28ರಿಂದ ಹತ್ತು ದಿನಗಳವರೆಗೆ ರಾತ್ರಿ ಕರ್ಪ್ಯೂ ವಿಧಿಸಿದ್ದಾರೆ’ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಭಾನುವಾರ ಗದಗ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿ, ‘ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್ ಗಳಲ್ಲಿ ಜನಜಂಗುಳಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಶೇ.50 ರಷ್ಟು ಜನರಿಗೆ ಮಾತ್ರ ಸ್ಥಳವಕಾಶ ನೀಡಿ ಆದೇಶಿಸಿದ್ದಾರೆ. ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯನ್ನಿಟ್ಟುಕೊಂಡು ಇಂತಹ ರಾಜ್ಯ ಸರ್ಕಾರ ಇಂತಹ ನಿರ್ಧಾರೆ ತೆಗದುಕೊಂಡಿದೆ’ ಎಂದರು.

‘ಕೋವಿಡ್ ಒಂದು ಮತ್ತು ಎರಡನೇ ಅಲೆಗಳಲ್ಲಿ ಸ್ನೇಹಿತರು, ಹಿತೈಷಿಗಳು, ಕುಟುಂಬಕ್ಕೆ ಆಧಾರಸ್ತಂಭವಾಗಿದ್ದವರನ್ನು ಕಳೆದುಕೊಂಡ ದುಃಖದ ಪರಿಸ್ಥಿತಿಯನ್ನು ಕಣ್ಣಾರೆ‌ ಕಂಡಿದ್ದೇವೆ. ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು. ಹೀಗಾಗಿ ಮುಖ್ಯಮಂತ್ರಿಗಳು ಜಾರಿ ಮಾಡಿರುವ ಆದೇಶವನ್ನು ನಾವೆಲ್ಲರೂ ತಪ್ಪದೇ ಪಾಲಿಸಿ ಜನರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸೋಣ. ಜನ ಜೀವನಕ್ಕೆ ಹಾನಿಯಾಗದಂತೆ ಮೂರನೇ ಅಲೆ ನಿಯಂತ್ರಿಸುವಲ್ಲಿ ಯಶಸ್ವಿಯಾಗೋಣ’ ಎಂದು ಸಚಿವರು ಮನವಿ ಮಾಡಿದರು.

ನೀತಿ ಸಂಹಿತೆ ಉಲ್ಲಂಘನೆ: ಕಾಂಗ್ರೆಸ್ ಅಭ್ಯರ್ಥಿ ಮೇಲೆ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಚುನಾವಣೆಯ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 29ನೇ ವಾರ್ಡಿನ
ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ದೇವಿಂದ್ರಪ್ಪ ಚಂದಾವರಿ
ಹಾಗೂ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ ಬಹಿರಂಗ ಪ್ರಚಾರ ಅಂತ್ಯ; ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಪ್ರಚಾರ

ರಾಜ್ಯ ಚುನಾವಣಾ ಆಯೋಗ ಬಹಿರಂಗ ಪ್ರಚಾರ ಮಾಡಬಾರದೆಂದು ಸೂಚಿಸಿದ್ದರು, ಬೆಂಬಲಿಗರೊಂದಿಗೆ ರಾಜೀವ್ ಗಾಂಧಿ ನಗರದಲ್ಲಿ ಬಹಿರಂಗವಾಗಿ ಮತಯಾಚಿಸಿದ್ದರು. ಈ ಬಗ್ಗೆ ‘ವಿಜಯಸಾಕ್ಷಿ’ ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಅಭ್ಯರ್ಥಿ ಸೇರಿದಂತೆ ಆಟೋ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಆರ್ ಒ ಎನ್.ಟಿ. ನೆಗಳೂರು ಅವರು ಪ್ರಕರಣ ದಾಖಲಿಸಿದ್ದಾರೆ.

ಇನ್ನು ಮಾದರಿ ನೀತಿ ಸಂಹಿತೆ ಹಾಗೂ ಜನಪ್ರಾತಿನಿಧಿಕ ಕಾಯ್ದೆ(ಆರ್ ಪಿ ಆ್ಯಕ್ಟ್)ಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಚಾರಕ್ಕೆ ಬಳಸಲಾದ ಆಟೋ (ಕೆಎ 24 ಎ-1643) ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

error: Content is protected !!