Home Blog Page 3229

ರೋಡ್ ಗ್ರೇಡರ್ ವಾಹನ ಹಾಯ್ದು ವೃದ್ಧ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ
 
ಇಲ್ಲಿಯ ಮಾರುತಿ ನಗರಕ್ಕೆ ಹೋಗುವ ಮೇಲುಸೇತುವೆ ಪಕ್ಕ ರಸ್ತೆ ಕಾಮಗಾರಿ ನಡೆಸುತ್ತಿದ್ದ ರೋಡ್ ಗ್ರೇಡರ್ ವಾಹನಕ್ಕೆ ಸಿಲುಕಿ ವೃದ್ಧನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಮೃತ ಪಟ್ಟ ವ್ಯಕ್ತಿ ಅಲ್ಲಾವುದ್ದೀನ ಇಮಾಮ್ ಹುಸೇನ ಪಾಣಿಗಟ್ಟಿ(೬೨) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿ ತನ್ನ ಬ್ಯಾಂಕ್ ವ್ಯವಹಾರದ ಕಾರ್ಯವನ್ನು ಮುಗಿಸಿಕೊಂಡು ಮಾರುತಿ ನಗರದಲ್ಲಿ ಇರುವ ತನ್ನ ಮನೆಗೆ ತೆರಳುತ್ತಿದ್ದಾಗ ಬ್ರಿಡ್ಜ ಪಕ್ಕ ಹೆದ್ದಾರಿ ರಸ್ತೆ ಕಾಮಗಾರಿ ನಡೆಸುತ್ತಿದ್ದ ರೋಡ್ ಗ್ರೇಡರ್ ವಾಹನಕ್ಕೆ ಸಿಲುಕಿ ವೃದ್ಧ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ರಿವನ ಮಠದ ಜಾತ್ರೆ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

0

ವಿಜಯಸಾಕ್ಷಿ ಸುದ್ದಿ, ನರಗುಂದ:

ಇಲ್ಲಿನ ಪುಣ್ಯರಣ್ಯ ಪತ್ರಿವನ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಕರೆದ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿತು.

ಶ್ರೀ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿವನಮಠ ಇವರ ದಿವ್ಯ ಸಾನಿಧ್ಯದಲ್ಲಿ ನೆಡೆದ ಪೂರ್ವಭಾವಿ ಸಭೆಯಲ್ಲಿ ಮಠದ ಸಕಲ ಸದ್ಭಕ್ತರು ಭಾಗವಹಿಸಿ, ಆಗಸ್ಟ್ ಮೂರರಿಂದ ಜಾತ್ರಾ ಕಾರ್ಯಕ್ರಮ ನೆಡೆಸಲು ನಿರ್ಧರಿಸಲಾಗಿದ್ದು, ಏಳು ದಿನಗಳ ಕಾಲ ಜಾತ್ರೆ ನಡೆಯಲಿದೆ.

ಪ್ರತಿ ದಿನ ಒಂದೊಂದು ಊರಿನಿಂದ ಊಟದ ವ್ಯವಸ್ಥೆ ಮಾಡಲಾಗುವುದು, ಆಗಸ್ಟ್ 10 ರಂದು ತೇರು ಎಳೆಯಲು ನಿರ್ಧರಿಸಲಾಗಿದೆ. ಜಾತ್ರೆಯುದ್ದಕ್ಕೂ ವಿಶೇಷ ಕಾರ್ಯಕ್ರಮ ಜರುಗಲಿದ್ದು, ಜಾತ್ರೆಯ ಕೊನೆಯ ದಿನ ಧರ್ಮಸಭೆ ನೆಡೆಸಲು ನಿರ್ಧರಿಸಲಾಗಿದೆ ಎಂದು ಶ್ರೀ ಗುರು ಸಿದ್ಧವೀರ ಶಿವಯೋಗಿ ಶಿವಾಚಾರ್ಯ ಪತ್ರಿವನಮಠ ಇವರು ಸಕಲ ಸದ್ಭಕ್ತರು ಸಮ್ಮುಖದಲ್ಲಿ ತಿಳಿಸಿದರು.

ಭೀಕರ ಅಪಘಾತ, ಇಬ್ಬರು ಸ್ಥಳದಲ್ಲಿಯೇ ಸಾವು; ಬಿಸಿಎಂ ತಾಲ್ಲೂಕಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್ ಸಾವು

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಗೂಡ್ಸ್ ವಾಹನವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಧಿಕಾರಿಗಳು ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಪರಸಾಪೂರ ಕ್ರಾಸ್ ಬಳಿ ನಡೆದಿದೆ.

ಮೃತರನ್ನು ಶಿರಹಟ್ಟಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕಾಧಿಕಾರಿ ಅಶೋಕ್ ಪಾಟೀಲ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ್‌ ವಿ ಎಸ್ ಬೂದಿಹಾಳ ಎಂದು ಗುರುತಿಸಲಾಗಿದೆ.

ಅಪಘಾತ ಬಳಿಕ ಗೂಡ್ಸ್ ವಾಹನವೂ ಪಲ್ಟಿಯಾಗಿದ್ದು ಚಾಲಕ ಪರಾರಿಯಾಗಿದ್ದಾನೆ. ಸುದ್ದಿ ತಿಳಿದ
ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿ ಥಳಿಸಿ ಬೈಕ್ ಜಖಂಗೊಳಿಸಿದ ಪುಡಾರಿಗಳು

ವಿಜಯಸಾಕ್ಷಿ ಸುದ್ದಿ, ಬೆಟಗೇರಿ:

ಮೊಬೈಲ್ ವಿಷಯಕ್ಕಾಗಿ ಯುವಕರ ನಡುವೆ ಪ್ರಾರಂಭವಾದ ಜಗಳ ಮಾರಾಮಾರಿಯವರೆಗೂ ಹೋಗಿ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವವರೆಗೆ ತಲುಪಿದೆ.

ಬೆಟಗೇರಿಯ ರಂಗಾವಧೂತ ನಗರದ ವೀರೇಶ ರೇವಪ್ಪ ನಿಟ್ಟಾಲಿ ಹಾಗೂ ಆರೋಪಿ ಶರಣಬಸವೇಶ್ವರ ನಗರದ ಜಾವೇದ ಬ್ಯಾಳಿರೊಟ್ಟಿ ಮತ್ತು ಕುರಹಟ್ಟಿ ಪೇಟೆಯ ಸೈಫುಲ್ಲ ನಡುವೆ ವಾರದ ಹಿಂದೆ ಮೊಬೈಲ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು. ಇದೇ ದ್ವೇಷವನ್ನಿಟ್ಟುಕೊಂಡು ಜುಲೈ 5ರಂದು ಮದ್ಯಾಹ್ನ 12-30ರ ಸುಮಾರಿಗೆ ಗದಗದ ವಿ.ಡಿ.ಎಸ್.ಟಿ.ಸಿ ಕಾಲೇಜು ಮೈದಾನದ ಹತ್ತಿರದ ರಸ್ತೆಯಲ್ಲಿ ವೀರೇಶ ತನ್ನ ಬೈಕ್ ಮೇಲೆ ಹೋಗುತ್ತಿದ್ದಾಗ, ಆರೋಪಿತರು ಆಟೋದಲ್ಲಿ ಬಂದವರೇ ರಸ್ತೆಯಲ್ಲೇ ನಿಲ್ಲಿಸಿ, `ಏನಲೇ, ನಿನ್ನ ಆಟ ಭಾಳ ಆಗೈತಿ. ನಮ್ಮ ಹುಡುಗರಿಗೆ ಸಿಟ್ಟಿನ ಮುಖದಿಂದ ನೋಡತೀಯಂತ? ಏನ್ ಮಾಡ್ತೀ, ಈಗ ಮಾಡಿ ತೋರಿಸು’ ಎಂದು ಅವಾಚ್ಯ ಶಬ್ಧಗಳಿಂದ ಬೈದಾಡುತ್ತ, ಆರೋಪಿ ಜಾವೇದ ಹಾಗೂ ಇತರರು ಸೇರಿ ತಮ್ಮ ಕೈಲಿದ್ದ ಬಡಿಗೆಯಿಂದ ವೀರೇಶನ ಬೆನ್ನು, ಕೈಕಾಲುಗಳ ಮೇಲೆ ಹೊಡೆಯಲು ಪ್ರಾರಂಭಿಸಿದ್ದು, ವೀರೇಶ ಭಯಗೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ. ಆರೋಪಿತರೂ ಕೂಡ ವೀರೇಶನ ಬೆನ್ನಟ್ಟಿದ್ದಾರೆ.

ವೀರೇಶ ಅವರಿಂದ ತಪ್ಪಿಸಿಕೊಂಡು ಸ್ವಲ್ಪದೂರ ಓಡಿದಾಗ, ಆರೋಪಿತರು ಅಲ್ಲೇ ನಿಲ್ಲಿಸಿದ್ದ ಫಿರ್ಯಾದಿಯ ಬೈಕ್ ಕಡೆಗೆ ಬಂದು, ಎಲ್ಲರೂ ಸೇರಿ ಅದನ್ನು ಕೆಡವಿ ತಮ್ಮ ಕೈಲಿದ್ದ ಬಡಿಗೆಯಿಂದ ಬಡಿದು, ದೊಡ್ಡ ಕಲ್ಲನ್ನು ಎತ್ತಿ ಬೈಕಿನ ಮೇಲೆ ಹಾಕಿ ಹಾನಿಗೊಳಿಸಿರುವದಾಗಿ ಹಾಗೂ ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಜಾವೇದ ಬ್ಯಾಳಿರೊಟ್ಟಿ, ಸಾಹಿಲ್, ಸೋಹೆಲ್, ರಾಕೇಶ್, ಅಭಿಷೇಕ್, ಯಶವಂತ್, ಸೈಫುಲ್, ಅಭಿಷೇಕ್ ಹಾಗೂ ವಿನೋದ್ ಎಂಬ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶಾಸಕ ರಾಮಣ್ಣ ಲಮಾಣಿ ಲೆಟರ್ ಹೆಡ್ ಅವಾಂತರ; ನಮ್ಮ ಕಾರ್ಯಕರ್ತ, ಗಾಡಿ‌ ಹಿಡಿಬೇಡಿ!

ವಿಜಯಸಾಕ್ಷಿ ಸುದ್ದಿ, ಗದಗ:

ಸಾರ್ವಜನಿಕ ಕಾರ್ಯಗಳಿಗೆ ಜನಪ್ರತಿನಿಧಿಗಳ ಲೆಟರ್ ಹೆಡ್ ಬಳಕೆಯಾಗುವುದು ಸಾಮಾನ್ಯ. ಆದರೆ “ಇಂಥ ವಾಹನ ಯಾರೂ ಹಿಡಿಯಬೇಡಿ, ಯಾಕೆಂದರೆ ಅವನು ನಮ್ಮ ಪಕ್ಷದ ಕಾರ್ಯಕರ್ತ” ಎಂದು ಜನಪ್ರತಿನಿಧಿ ತನ್ನ ಲೆಟರ್ ಹೆಡ್‌ನಲ್ಲಿ ಬರೆದು ಸಹಿ ಹಾಕಿ ಕೊಡುವುದು ಮಾತ್ರ ವಿಚಿತ್ರ.

ಗದಗ ಜಿಲ್ಲೆಯ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಇಂಥ ಅವಾಂತರಕ್ಕೆ‌ ತುತ್ತಾಗುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಶಾಸಕ ಸಾರ್ವಜನಿಕ ಹಿತ ಕಾಯದ ಕೆಲಸಗಳಿಗೆ ತಮ್ಮ ಲೆಟರ್ ಹೆಡ್‌ನಲ್ಲಿ ಸಹಿ ಹಾಕಿ ಕೊಟ್ಟು ಪೇಚಿಗೆ ಸಿಲುಕಿದ್ದರು. ಈಗ ಮತ್ತೇ ಅಂಥ ಅವಾಂತರಕ್ಕೆ ಸಿಲುಕಿದ್ದಾರೆ.

ಆಗಿದ್ದಾದರೂ ಏನು?:

ಶಿರಹಟ್ಟಿ ತಾಲೂಕಿನ ಬೆಳಗಟ್ಟಿ ಗ್ರಾಮದ ಬಸವರಾಜ ಎಂಬಾತನಿಗೆ ಶಾಸಕ ರಾಮಣ್ಣ ಲಮಾಣಿಯವರು ತಮ್ಮ ಲೆಟರ್ ಹೆಡ್ ಕೊಟ್ಟಿದ್ದಾರೆ. ಆ ಪತ್ರಕ್ಕೆ ವಿಷಯವನ್ನು ಓದಿಯೊ? ಓದದೆಯೊ? ಸಹಿ ಹಾಕಿದ್ದಾರೆ. ಅದರಲ್ಲಿದ್ದ ವಿಷಯ, ಜಿ.ಬಸವರಾಜ ಎಂಬುವವರು ನಮ್ಮ ಶಿರಹಟ್ಟಿ ಮತ ಕ್ಷೇತ್ರದವರು. ನಮ್ಮ ಪಕ್ಷದ ಕಾರ್ಯಕರ್ತರು, ಬಹಳ ಚಿರಪರಿಚಿತರು. ಇವರು AP 39 V 3517 ನೋಂದಣಿ ಸಂಖ್ಯೆಯ ಬೊಲೆರೊ ವಾಹನವನ್ನು ಹೊಂದಿದ್ದು, ಇದನ್ನು ಹಿಡಿಯಬಾರದು, ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂಬ ಸಾರವಿರುವ ಪತ್ರಕ್ಕೆ ಸಹಿ ಹಾಕಿ ಕೊಟ್ಟಿದ್ದು ಪತ್ರ ವೈರಲ್ ಆಗಿದೆ.

ಶಾಸಕ ಲಮಾಣಿಯವರ ಲೆಟರ್ ಹೆಡ್ ಬೇಕಾಬಿಟ್ಟಿಯಾಗಿ ಬಳಕೆ, ದುರ್ಬಳಕೆ ಆಗುತ್ತವೆ. ಯಾರೂ ಕೇಳಿದ್ರೂ ಖಾಲಿ ಲೆಟರ್ ಹೆಡ್‌ಗೆ ಸಹಿ ಮಾಡಿ ಕೊಡುತ್ತಾರೆ ಎಂಬ ಆರೋಪ ಕೇಳ ಬಂದಿದೆ.

“ಶಾಲಾ‌ ಮಕ್ಕಳ ಕಾರ್ಯಕ್ರಮದಲ್ಲಿದ್ದಾಗ ಬಂದಿದ್ದ. ನಾನು ಗದ್ದಲದಲ್ಲಿ ಇದ್ದುದರಿಂದ ಪತ್ರಕ್ಕೆ ಸಹಿ ಹಾಕಿದೆ. ಮೋಸದಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡು ಹೋಗಿರುವ ಅವನು ಯಾರು ಎಂಬುದು ನನಗೆ ಗೊತ್ತೇ ಇಲ್ಲ. ಈ ಬಗ್ಗೆ ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ನಾಳೆ ಅವನನ್ನು ಹಿಡಿದು ತಂದು ವ್ಯವಸ್ಥೆ ಮಾಡ್ತಾರೆ.

-ರಾಮಣ್ಣ ಲಮಾಣಿ, ಶಾಸಕರು, ಶಿರಹಟ್ಟಿ.

ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ವರ್ಗಾವಣೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯನ್ನಾಗಿ ಹೊನ್ನಾಂಬ ಅವರನ್ನು ಸರಕಾರ ಸೋಮವಾರ ನಿಯೋಜಿಸಿದೆ.

ಇಲ್ಲಿನ ಜಿಲ್ಲಾಧಿಕಾರಿಯಾಗಿದ್ದ ಎಂ.ಸುಂದರೇಶ ಬಾಬು ಅವರನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಕಾರ್ಪೊರೇಷನ್‌ಗೆ ವರ್ಗಾವಣೆ ಮಾಡಲಾಗಿದ್ದು ವ್ಯವಸ್ಥಾಪಕ ನಿರ್ದೇಶಕ ಹುದ್ದೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಯಾಗಿದ್ದ ಹೊನ್ನಾಂಬ ಅವರನ್ನು ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸರಕಾರ ವರ್ಗಾವಣೆ ಮಾಡಿದೆ.

ಜೂಜಾಟ ಆಡುತ್ತಿದ್ದವರ ಬಂಧನ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಪಟ್ಟಣದ ಚಹಾ ಅಂಗಡಿಯೊಂದರ ಮುಂದೆ ಸಾರ್ವಜನಿಕವಾಗಿ ಇಸ್ಪೀಟ್ ಆಟ ಆಡುತ್ತಿದ್ದವರಲ್ಲಿ ಐವರನ್ನು ಪೊಲೀಸರು ಬಂಧಿಸಿದ ಘಟನೆ ಶಿರಹಟ್ಟಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಪೊಲೀಸ್ ದಾಳಿಯ ಸಮಯದಲ್ಲಿ ಇನ್ನೂ ಕೆಲವರು ತಪ್ಪಿಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆಂದು ತಿಳಿದು ಬಂದಿದೆ.

ಕುಬೇರ ಶಂಕ್ರಪ್ಪ ಲಮಾಣಿ, ಉಮೇಶ ಹನುಮಂತಪ್ಪ ಲಮಾಣಿ, ಮಾನಪ್ಪ ಡಾಕಪ್ಪ ಲಮಾಣಿ, ಮುತ್ತಪ್ಪ ಠಾಕರೆಪ್ಪ ಲಮಾಣಿ, ಪ್ರದೀಪ ಮರಿಯಪ್ಪ ಬೂದಿಹಾಳ ಬಂಧಿತರು. ಬಂಧಿತರು 7850 ರೂ. ಹಣವನ್ನು ಪಣಕ್ಕೆ ಕಟ್ಟಿ ಆಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪುರ ಗ್ರಾಮದ ರೈಲ್ವೇ ಗೇಟ್ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಸಂತೋಷ ವಸಂತ ಛಲವಾದಿ ಎಂಬ ವ್ಯಕ್ತಿಯು ಪಾನ್ ಶಾಪ್ ನಡೆಸುತ್ತಿದ್ದು ಅಕ್ರಮವಾಗಿ ಸಾರ್ವನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ 700ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ; ವ್ಯಕ್ತಿ ಬಂಧನ

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ತಾಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ಇರುವ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಪೊಲೀಸರಿಗೆ ಸಿಕ್ಕುಬಿದ್ದಿದ್ದಾನೆ.

ರಂಗಪ್ಪ ಹನಮಪ್ಪ ಹರಿಜನ ಎಂಬುವವನೇ ಬಂಧಿತ ವ್ಯಕ್ತಿ. ಸುಮಾರು 1686 ರೂ. ಮೌಲ್ಯದ ಮದ್ಯವನ್ನು ಆತ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಅವನ ಬಳಿ ತಲಾ 35.13 ರೂ.ಮುಖಬೆಲೆಯ 90 ಎಂ.ಎಲ್. ನ 48ಟೆಟ್ರಾ ಪ್ಯಾಕೇಟುಗಳು ಸಿಕ್ಕಿದ್ದು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಮಹಿಳೆಯರ ಪ್ರಾಣ ಉಳಿಸಿದ ERSS-112; ಎಸ್ಪಿ ಶಿವಪ್ರಕಾಶ್ ದೇವರಾಜು ಪ್ರಶಂಸೆ

ವಿಜಯಸಾಕ್ಷಿ ಸುದ್ದಿ, ಗದಗ:

ಸರ್ಕಾರವು ಹೊಸದಾಗಿ ಜಾರಿಗೆ ತಂದಿರುವ ಇಆರ್‌ಎಸ್‌ಎಸ್-112 ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಗಳ ಬಗ್ಗೆ ಜಿಲ್ಲೆಯ ಸಾರ್ವಜನಿಕರಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

ಜೂನ್.19ರಂದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಮಹಿಳೆಯೊಬ್ಬಳು ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಯ ನಿರ್ಧಾರ ತಳೆದು ನಗರದ ಹೊರವಲಯದ ಕೆರೆಯ ಬಳಿ ಹೋಗುತ್ತಿದ್ದಾಗ ಇಆರ್‌ಎಸ್‌ಎಸ್ ಕರ್ತವ್ಯದ ಮೇಲಿದ್ದ ಸಿಬ್ಬಂದಿಗಳು ಆ ಮಹಿಳೆಯನ್ನು ತಡೆದು, ವಿಚಾರಣೆ ನಡೆಸಿ ಧೈರ್ಯ ತುಂಬುವ ಸಾಂತ್ವನದ ಮಾತುಗಳನ್ನಾಡಿ, ಮನಃಪರಿವರ್ತನೆ ಮಾಡಿದ್ದಾರೆ ಮತ್ತು ಕ್ಷುಲ್ಲಕ ಕಾರಣಗಳಿಗೆ ಜೀವ ಕಳೆದುಕೊಳ್ಳುವ ನಿರ್ಧಾರ ತಾಳಬಾರದೆಂದು ಆತ್ಮವಿಶ್ವಾಸ ಮೂಡಿಸಿದ್ದರು.

ಇದೇ ರೀತಿ ತಾಲೂಕಿನ ಕಣಗಿಹಾಳ ಗ್ರಾಮದ ಹತ್ತಿರವಿರುವ ರೈಲ್ವೇ ಟ್ರಾಕ್ ಬಳಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವದಕ್ಕಾಗಿ ಟ್ರಾಕ್‌ನ ಹತ್ತಿರ ಹೋಗುತ್ತಿದ್ದಾಗಲೂ ಇಆರ್‌ಎಸ್‌ಎಸ್ ಸಿಬ್ಬಂದಿಗಳು ಆ ಮಹಿಳೆಗೆ ಬುದ್ಧಿವಾದ ಹೇಳಿ ಸುರಕ್ಷಿತವಾಗಿ ತನ್ನ ಮನೆ ತಲುಪುವಂತೆ ಮಾಡಿದ್ದರು.

ಜುಲೈ.6, ಬುಧವಾರ ನಸುಕಿನ 3 ಗಂಟೆಯ ಸುಮಾರಿಗೆ ಗದಗ ನಗರದ ಹೊರವಲಯದಲ್ಲಿರುವ ಸಾರಿಗೆ ನಗರದ ಬಳಿ ಮನೆಗಳ್ಳತನದ ತಯಾರಿಯೊಂದಿಗೆ ಗುದ್ದಲಿ, ಕಬ್ಬಿಣದ ರಾಡ್ ಇತ್ಯಾದಿಗಳೊಂದಿಗೆ ಬೈಕ್ ಹತ್ತಿರ ನಿಂತಿದ್ದ ಆರೋಪಿತನನ್ನು ಗಸ್ತಿನಲ್ಲಿದ್ದ ಇಆರ್‌ಎಸ್‌ಎಸ್ ಸಿಬ್ಬಂದಿಗಳು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಜೂನ್.೨೪ರಂದು ದಾಖಲಾಗಿದ್ದ ಮನೆಗಳ್ಳತನದ ಆರೋಪಿಯೂ ಈತನೇ ಎಂದು ತಿಳಿದುಬಂದಿದ್ದು, ಸದರಿ ಆರೋಪಿತನಿಂದ 2.5 ಲಕ್ಷ. ರೂ ಬೆಲೆಬಾಳುವ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಎಲ್ಲ ಸಂದರ್ಭಗಳಲ್ಲೂ ಧನಾತ್ಮಕವಾಗಿ ಸ್ಪಂದಿಸಿದ ಅಧಿಕಾರಿ/ಸಿಬ್ಬಂದಿಗಳಾದ ಗ್ರಾಮೀಣ ಠಾಣೆಯ ಎಎಸ್ಐ ಎನ್ ಎಫ್ ಬೆಟಗೇರಿ, ಡಿಎಆರ್ ನ ಎಆರ್ ಎಸ್ಐ ಆರ್ ಎಸ್ ರಾಠೋಡ, ಸಿಬ್ಬಂದಿಗಳಾದ ಎಂ.ಎಸ್. ಅಂಗಡಿ(ನಿಸ್ತಂತು), ಎಂ.ಎಸ್. ನೂರುಖಾನವರ(ಎಚ್.ಸಿ), ಎಂ.ಎಸ್. ದೊಡ್ಡಮನಿ(ಮುಳಗುಂದ ಠಾಣೆ) ಹಾಗೂ ನಿಯಾಜ್ ಅಹ್ಮದ್.ಎನ್. ದಳವಾಯಿ, ಎಸ್ ಎಸ್ ತೇಲಸಂಗಿ, ಬಿ ಆರ್ ಚೌಡರ್, ಕೆ‌ ಬಿ ಕಂಬಳಿ ಇವರನ್ನು “Best Responder Of The Month” ಎಂದು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಪ್ರಶಂಸನಾ ಪತ್ರ ನೀಡಿ ಗೌರವಿಸಿ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ಯಾವುದೇ ಸಂದರ್ಭದಲ್ಲೂ ಧೃತಿಗೆಡದೇ ಪೊಲೀಸ್ ಇಲಾಖೆಯ ಸಹಕಾರ ಅವಶ್ಯವೆನಿಸಿದಲ್ಲಿ ತಕ್ಷಣ ಇಲಾಖೆಯ ಸಹಾಯವಾಣಿ ಇಆರ್‌ಎಸ್‌ಎಸ್-112 ಸಂಪರ್ಕಿಸಿ. ನಮ್ಮ ಸಿಬ್ಬಂದಿಗಳು ಸದಾ ಸಹಕಾರಕ್ಕೆ ಸಿದ್ಧವಾಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

error: Content is protected !!