Home Blog Page 3231

ಪ್ಯಾನ್ ಕಾರ್ಡ್ ವಿವರ ಕೇಳಿ ಇಂಜಿನಿಯರ್ ಗೆ ಲಕ್ಷಾಂತರ ರೂ. ದೋಖಾ!

ವಿಜಯಸಾಕ್ಷಿ ಸುದ್ದಿ, ಗದಗ:

ನಾವು ಎಲ್ಲಿಯವರೆಗೂ ಮೋಸ ಹೋಗುತ್ತಿರುತ್ತೇವೆಯೋ, ಅಲ್ಲಿಯವರೆಗೆ ಮೋಸಮಾಡುವವರೂ ಇರುತ್ತಾರೆ ನೋಡಿ. ಆದರೆ, ಮೋಸಗಾರರ ವರಸೆಗಳೂ ಕಾಲಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಇಂದಿನ ದಿನಮಾನದಲ್ಲಿ ಸೈಬರ್ ಕ್ರೈ ಸಂಬಂಧಿತ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿರುವದು ಇದಕ್ಕೆ ಸಾಕ್ಷಿ. ಎಲ್ಲೋ ದೂರದ ಮುಂಬೈ, ದೆಹಲಿ, ಬೆಂಗಳೂರುಗಳಂಥಹ ಮಹಾನಗರಗಳಲ್ಲೇ ಹೆಚ್ಚೆಚ್ಚು ನಡೆಯುತ್ತಿದ್ದ ಇಂಥ ಸೈಬರ್ ವಂಚನೆಗಳು ಇಂದು ನಮ್ಮದೇ ಜಿಲ್ಲೆ, ತಾಲೂಕುಗಳಲ್ಲಿಯೂ ನಡೆಯತೊಡಗಿರುವದರಿಂದ ಜನಸಾಮಾನ್ಯರೂ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸುಳ್ಳಲ್ಲ.

ಅಂಥದೊಂದು ಪ್ರಕರಣ ಗದಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಿವಾಸಿ, ಹಾಶಮಸಾಬ್ ಮಹಮದಗೌಸ್ ಖುದಾವಂದ್ ಮೋಸಕ್ಕೊಳಗಾದ ವ್ಯಕ್ತಿಯಾಗಿದ್ದಾರೆ. ರೋಣ ತಾಲ್ಲೂಕಿನ ಮಲ್ಲಾಪೂರ ಗ್ರಾಮದ ಬಳಿ ಈ ಘಟನೆ ಆಗಿದೆ ಎನ್ನಲಾಗಿದೆ.

2021ರ ಅಕ್ಟೋಬರ್ 24ರಂದು ಹಾಶಮಸಾಹೇಬರ ಮೊಬೈಲ್ ಸಂಖ್ಯೆಗೆ ಕರೆಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕಾಗಿದೆ. ತಕ್ಷಣ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತಿ ಎಂಬರ್ಥದ ಮೆಸೇಜ್ ಕಳುಹಿಸಿ ಲಿಂಕನ್ನೂ ಕೂಡ ನೀಡಿದ್ದ. ಈ ಬಗ್ಗೆ ಗೊಂದಲಕ್ಕೊಳಗಾದ ಹಾಶಮಸಾಬ್ ಲಿಂಕ್ ಒತ್ತಿ ಅಲ್ಲಿ ಕೇಳಿದ ಎಲ್ಲ ಮಾಹಿತಿಯನ್ನೂ ತುಂಬಿದ್ದಾರೆ ಎನ್ನಲಾಗಿದೆ. ಹೀಗೆ ಲಿಂಕ್ ಮೂಲಕ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಹಂತಹಂತವಾಗಿ ಅವರ ಬ್ಯಾಂಕ್ ಖಾತೆಯಿಂದ ರೂ.6,98,675ಗಳನ್ನು ಗೊತ್ತಾಗದಂತೆ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ.

ವಿಷಯ ಗೊತ್ತಾಗುತ್ತಿದ್ದಂತೆ ದಿಗಿಲಿಗೊಳಗಾದ ಹಾಶಮ್ ಸಾಹೇಬ್ ಮೆಸೇಜ್ ಕಳಿಸಿದ್ದ ಮೊಬೈಲ್ ನಂಬರ್ ನ್ನು ಸಂಪರ್ಕಿಸಿ ಹೇಗೋ 2 ಲಕ್ಷ.ರೂ.ಗಳನ್ನು ವಾಪಸ್ ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿರುವದಾಗಿ ತಿಳಿದುಬಂದಿದೆ. ಉಳಿದ ಹಣವೂ ಖಾತೆಗೆ ಮರಳಬಹುದು ಎಂದು ಇಲ್ಲಿಯವರೆಗೂ ಕಾಯ್ದ ಹಾಸಮಸಾಹೇಬ್ ಹಣ ಮರಳಿ ಸಿಗದಿರುವ ಕುರಿತು ಇದೀಗ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರೋಣ ತಾಲ್ಲೂಕಿನಲ್ಲಿ ಮತ್ತೊಂದು ಅಮಾನವೀಯ ಘಟನೆ; ಬಟ್ಟೆ ‌ಬಿಚ್ಚಿಸಿ, ಸೆಗಣಿ ತಿನಿಸಲು ಮುಂದಾದ ಆರೋಪಿಗಳು!

ವಿಜಯಸಾಕ್ಷಿ ಸುದ್ದಿ, ಗದಗ:

ರೋಣ ತಾಲ್ಲೂಕಿನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ
ಪರಿಶಿಷ್ಟ ಜಾತಿಯ‌ ಮೂರು ಜನರಿಗೆ ಏಳು ಜನರ ಗುಂಪೊಂದು ಅಮಾನವೀಯವಾಗಿ ನಡೆದುಕೊಂಡಿದೆ.

ಮೆಣಸಗಿ ಗ್ರಾಮದ ಕಾಂಟ್ರಾಕ್ಟರ್ ಪುಂಡಲೀಕ ಬಸಪ್ಪ ಮಾದರ ಎಂಬಾತ ಗೆಳೆಯರಾದ ಹನಮಂತ ದ್ಯಾಮಪ್ಪ ಮಾದರ ಹಾಗೂ ಗಣೇಶ್ ದುರಗಪ್ಪ ದೇವರಮನಿ ಜೊತೆಗೆ ಗ್ರಾಮದ ಬಸ್ ನಿಲ್ದಾಣದಲ್ಲಿ ನಿಂತುಕೊಂಡಾಗ ಏಕಾಏಕಿ ಎಂಟುತ್ತು ಜನರ ಗುಂಪೊಂದು ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿ ನಿಂದಿಸಿ, ಊರಾಗ ರೌಡಿಸಂ ಮಾಡಾಕತ್ತಿರೇನ ಲೇ …..ಮಕ್ಕಳ ಅಂತಾ ಬೈದಾಡುತ್ತಾ ಫಿರ್ಯಾದಿ ಗುತ್ತಿಗೆದಾರ ಪುಂಡಲೀಕ ಮಾದರ ಎಂಬಾತನ ಎದೆ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಆರೋಪಿತನಾದ ರಾಜು ಬದಾಮಿ ಎಂಬಾತ ಸೆಗಣಿ ಹಿಡಿದುಕೊಂಡು ಬಂದು ಆರೋಪಿ ಪುಂಡಲೀಕನ ಬಾಯಿಯಲ್ಲಿ ಇಡಲು ಒತ್ತಾಯ ಮಾಡಿದ್ದು, ಹಾಗೂ ಗೆಳೆಯರಾದ ಹನಮಂತ ದ್ಯಾಮಪ್ಪ ಮಾದರ, ಗಣೇಶ್ ದುರಗಪ್ಪ ದೇವರಮನಿ ಎಂಬ ಮೂರು ಜನರ ಅಂಗಿ ಬಿಚ್ಚಿಸಿ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ ಜೀವ ಸಹಿತ ಸುಟ್ಟ ಬಿಡೋಣ ಎಂದಿದ್ದಲ್ಲದೇ ಲೈಟಿನ ಕಂಬಕ್ಕೆ ಕಟ್ಟಲು ಆರೋಪಿಗಳು ಮುಂದಾಗಿದ್ದರು ಎಂದು ಹೇಳಲಾಗುತ್ತದೆ. ನಂತರ ಊರ ಬಿಟ್ಟು ಹೋಗುವಂತೆ ಜೀವ ಬೆದರಿಕೆ ಕೂಡ ಹಾಕಲಾಗಿದೆ ಅಂತೆ.

ಇದನ್ನೂ ಓದಿ ರೋಣದಲ್ಲಿ ಅಮಾನವೀಯ ಘಟನೆ; ಮೇಲ್ಜಾತಿ ವ್ಯಕ್ತಿಯನ್ನ ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಹಿಳೆಗೆ ಅರೆಬತ್ತಲೆ ಶಿಕ್ಷೆ!

ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ರಾಜು ಸಿದ್ದಪ್ಪ ಬದಾಮಿ ಅಲಿಯಾಸ್ ಗಾಣಿಗೇರ, ಬಸವರಾಜ ಬದಾಮಿ, ಪ್ರವೀಣ್ ಮಲ್ಲಿಕಾರ್ಜುನ ಗುರಮ್ಮನವರ್, ಈರಪ್ಪ ಪತಂಗ, ಪ್ರಕಾಶ್ ಗಾಣಿಗೇರ, ಚಂದ್ರು ಮುದ್ದಪ್ಪ ಬದಾಮಿ ಎಂಬವರ ಮೇಲೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಈ ಇಡೀ ಪ್ರಕರಣ ನಡೆದಿದ್ದು ಯಾವ ಕಾರಣಕ್ಕಾಗಿ ಎಂಬುದು ಗೊತ್ತಾಗಿಲ್ಲ. ಕಳೆದ ವರ್ಷ ಜುಲೈ ತಿಂಗಳಲ್ಲಿ ರೋಣ ತಾಲ್ಲೂಕಿನ ಅಸೂಟಿ‌ ಗ್ರಾಮದಲ್ಲಿ ಮಹಿಳೆಗೆ ಅರೆಬತ್ತಲೆ ಶಿಕ್ಷೆ ನೀಡಿದ ಪ್ರಕರಣ ಬೆಳಕಿಗೆ ಬಂದಿತ್ತು.

ಪ್ರತಿ ದೂರು ದಾಖಲು;

ಫಿರ್ಯಾದಿ ನಿಂಗಪ್ಪ ಶಿವಲಿಂಗಪ್ಪ ಬದಾಮಿ ಮನೆಯಲ್ಲಿ ಇದ್ದಾಗ ಆರೋಪಿಗಳಾದ ಬಸಪ್ಪ ಭರಮಪ್ಪ ಮಾದರ, ಪುಂಡಲೀಕ ಬಸಪ್ಪ ಮಾದರ, ಶೇಕಪ್ಪ ಭರಮಪ್ಪ ಮಾದರ, ಹನಮಪ್ಪ ಶೇಖಪ್ಪ ಮಾದರ, ಭರಮಪ್ಪ ಶೇಖಪ್ಪ ಮಾದರ, ಗಣೇಶ್ ದುರಗಪ್ಪ ದೇವರಮನಿ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಸ್ ಸಿ ಕೇಸ್ ಹಾಕಿಸಿ ಎಲ್ಲರನ್ನೂ ಒಳಗ ಹಾಕಸ್ತೀವಿ ಅಂತ ಬೆದರಿಕೆ ಹಾಕಿದ್ದಲ್ಲದೆ ಕಲ್ಲು ಮತ್ತು ಬಡಿಗೆಗಳಿಂದ ಹೊಡೆಯಲು ಹೋದಾಗ, ಪುಂಡಲೀಕ ಮಾದರ ಎಂಬಾತ ಫಿರ್ಯಾದಿ ನಿಂಗಪ್ಪನಿಗೆ ಕೈಯಿಂದ ಗುದ್ದಿ, ನೂಕಾಡಿದಾಗ‌ ಬಿದ್ದು ಒಳಪೆಟ್ಟು ಆಗಿದ್ದು, ಇದೇ ಸಂದರ್ಭದಲ್ಲಿ ಶರಣಬಸಪ್ಪ ಬದಾಮಿ ಎಂಬುವರು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ಕಾಣಿಸಲಾಗಿದೆ.

ಗ್ರಾಮೀಣ ಪೊಲೀಸರ ಕಾರ್ಯಾಚರಣೆ; ಇಸ್ಪೀಟು ಆಡುತ್ತಿದ್ದ ಎಂಟು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯ ಕಳಸಾಪೂರ—ಅಡವಿಸೋಮಾಪುರ ರಸ್ತೆಯಯಲ್ಲಿರುವ ಬೆಕ್ಕಿನಹಳ್ಳದಲ್ಲಿ ಜೂಜಾಟದಲ್ಲಿ ತೊಡಗಿದ್ದ 8 ಜನರಿಂದ 21,200ರೂ ವಶಕ್ಕೆ ಪಡೆದ ಘಟನೆ ನಡೆದಿದೆ.

ಜೂಜಾಟದಲ್ಲಿ ತೊಡಗಿದ್ದ ಶಿವಮೂರ್ತೆಪ್ಪ ರಾಮಪ್ಪ ಅಣ್ಣಿಗೇರಿ, ದೇವಪ್ಪ ನಾಗಪ್ಪ ಅಣ್ಣಿಗೇರಿ, ಚಂದ್ರಪ್ಪ ಹನಮಪ್ಪ ಹಾದಿಮನಿ, ತಿಪ್ಪಣ್ಣ ಯಲ್ಲಪ್ಪ ಬೋಸಗಿ, ಯಲ್ಲಪ್ಪ ಹನಮಂತಪ್ಪ ಅಣ್ಣಿಗೇರಿ, ಬಸವರಾಜ ಯಲ್ಲಪ್ಪ ತಳವಾರ, ರಾಘವೇಂದ್ರ ಈರಪ್ಪ ಕಣ್ಣೂರು, ಹಾಗೂ ಅಶೋಕ ದ್ಯಾಮಣ್ಣ ಪೂಜಾರ ಎಂಬುವರನ್ನು ವಶಕ್ಕೆ ಪಡೆದು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಯೋಗದಿಂದ ಮಾನಸಿಕ ನೆಮ್ಮದಿ ಸಾಧ್ಯ; ಬಿಇಓ ಮಾಯಾಚಾರ್ಯ ಅಭಿಮತ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಸಸಿಗಳನ್ನು ನೆಡಬೇಕು ಹಾಗೂ ಯೋಗದಿಂದ ಮಾನಸಿಕ ನೆಮ್ಮದಿ ಶಾರೀರಿಕ ಬೆಳವಣಿಗೆಯಾಗುವುದೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರ್ಯ ಅಭಿಪ್ರಾಯಪಟ್ಟರು. ಮಂಗಳವಾರ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆ ನಂ.೩ ರಲ್ಲಿ ಏರ್ಪಡಿಸಿದ್ದ ಅಂತಾರಾಷ್ಟಿçÃಯ ಯೋಗ ದಿನಾಚರಣೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತು ನಿರಂತರ ಕನ್ನಡ ಕಟ್ಟುವ ಕೆಲಸವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗಾರಜ ಅಂಗಡಿ ಆಯ್ದ ಕೆಲವು ಶಾಲೆಗಳಿಗೆ ಕನ್ನಡಕ್ಕಾಗಿ ಕೆಲಸ ಮಾಡಿದ ಮಹನೀಯರ ಪುಸ್ತಕಗಳನ್ನು ನೀಡುವುದಾಗಿ ಹೇಳಿದರು.

ತಾಲ್ಲೂಕಾ ಕ.ಸಾಪ.ಅಧ್ಯಕ್ಷ ಎಸ್.ಎಂ.ಮೆಣಸಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯೋಗ ಸಪ್ತಾಹ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪುರಸಭೆ ಉಪಾಧ್ಯಕ್ಷೆ ಪದ್ಮಾವತಿ ಪೂಜಾರ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ ಕ್ಕೆ ೧೨೫ ಅಂಕ ಪಡೆದ ಇದೇ ಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ಹಳ್ಳದ, ಪಿಯುಸಿ ವಿಜ್ಞಾನದಲ್ಲಿ ಶೇ.೯೬ ಅಂಕ ಗಳಿಸಿದ ಅಪ್ಪು ಹಾಲಗೇರಿ, ಪುರಸಭೆ ಅಧ್ಯಕ್ಷ ಅಪ್ಪಣ್ಣ ಹಳ್ಳದ, ಉಪಾಧ್ಯಕ್ಷೆ ಪದ್ಮಾವತಿ ಪೂಜಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸಣ್ಣ ಹಳ್ಳದ, ಅಡಿವೆಪ್ಪ ಶಿರಸಂಗಿ ಅವರನ್ನು ಸನ್ಮಾನಿಸಲಾಯಿತು.

ಶ್ರೀನಿವಾಸ ನವೀಂದ್ರಕರ ಸ್ವಾಗತಿಸಿದರು. ಶ್ರೀನಾಥ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದದರು, ಆರ್.ಬಿ.ಹಳ್ಳಿಕೇರಿ ಬಹುಮಾನ ವಿತರಣೆ ಮಾಡಿದರು. ವೇದವತಿ ದಂಡಿಗದಾಸರ ನಿರೂಪಿಸಿದರು. ಎಸ್.ಎಫ್. ನೀರಲಗಿ, ಎಂ.ಎನ್.ವಗ್ಗರ, ಎನ್. ವಾಯ್. ಕಳಸಾಪೂರ, ರಜಿಯಾಬೇಗಂ ಕೊಪ್ಪಳ, ಅಶೋಕ ಮದಗುಣಕಿ, ಎನ್.ಎನ್.ಹಾಲಗೇರಿ, ಆರ್.ಎನ್.ಹಾಲಗೇರಿ ಉಪಸ್ಥಿತರಿದ್ದರು.

ತಾಲ್ಲೂಕು ಆಡಳಿತದಿಂದ ಯೋಗ ದಿನಾಚರಣೆ

ಪಟ್ಟಣದ ಮಾಡೆಲ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ತಹಶೀಲ್ದಾರ್ ಅನೀಲ ಬಡಿಗೇರ ನೇತ್ರತ್ವದಲ್ಲಿ ಯೋಗ ದಿನಾಚರಣೆ ಆಚರಿಸಿ ಶಾಲಾ ವಿದ್ಯಾರ್ಥಿಗಳಿಗೆ ಯೋಗದ ಪ್ರಯೋಜನಗಳ ಕುರಿತು ಅರಿವು ಮೂಡಿಸಲಾಯಿತು. ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ, ಮುಖ್ಯಾಧಿಕಾರಿ ವೀರಪ್ಪ ಹಸಬಿ, ಪುರಸಭೆ ಸಿಬ್ಬಂದಿ, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು

ಬಿಜೆಪಿ ಬಂಡ ನಾಯಕರನ್ನು ನಂಬಬೇಡಿ; ಮಾಜಿ ಸಚಿವ ಕೆ.ಎನ್. ಗಡ್ಡಿ ಆಕ್ರೋಶ

ನವಲಗುಂದದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಚಹಾ ಮಾರುತ್ತಾ ಬಂದು ಆರ್ ಎಸ್ ಎಸ್ ಚಡ್ಡಿ ಹಾಕಿಕೊಂಡು ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ತಮ್ಮ ಅಧೀನದಲ್ಲಿರುವ ಐ.ಟಿ. ಹಾಗೂ ಇ.ಡಿ.ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವದ ವಿರುದ್ಧವಾಗಿ ಸರ್ಕಾರ ನಡೆಸುತ್ತಿರುವ ಬಿಜೆಪಿ ವಿರುದ್ಧ ಮಾಜಿ ಸಚಿವ ಕೆ.ಎನ್.ಗಡ್ಡಿ ತೀವ್ರ ವಾಗ್ದಾಳಿ ನಡೆಸಿದರು.

ಸೋಮವಾರ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ನಾಯಕರು ಭ್ರಷ್ಟಾಚಾರಿಗಳಲ್ಲ, ನಿಜವಾದ ಭ್ರಷ್ಟರನ್ನು ರಕ್ಷಿಸುತ್ತಿರುವವರು ಬಿಜೆಪಿ ಪಕ್ಷದವರು, ಮಾಜಿ ಪ್ರಧಾನಿ ರಾಜೀವ ಗಾಂಧಿಯವರನ್ನು ಹತ್ಯೆ ಮಾಡಿದ ಪಾಪಿಗಳಿಗೆ ಸಾಂತ್ವನ ಹೇಳಿದ ಪಕ್ಷವಿದು. ಈಗ ಕಾಂಗ್ರೆಸ್ ಪಕ್ಷದ ಅಧಿನಾಯಕಿಯಾಗಿರುವ ಸೋನಿಯಾ ಹಾಗೂ ರಾಹುಲ್ ಗಾಂಧಿ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ದುರುದ್ದೇಶದಿಂದ ತನಿಖೆ ಮಾಡಿಸುತ್ತಿದ್ದಾರೆ.

ಇನ್ನು ರಾಜ್ಯದ ಈಗಿನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರು ರಕ್ತದಿಂದ ಪತ್ರ ಬರೆದು ಮಹದಾಯಿ ಹೋರಾಟ ಮಾಡಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದರೂ ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆಗಳ ಬಗ್ಗೆ ಚಕಾರ ಎತ್ತುತ್ತಿಲ್ಲ. ಇಂತಹ ಬಂಡ ನಾಯಕರನ್ನು ನಂಬಬೇಡಿ ಎಂದು ಮಾಜಿ ಸಚಿವ ಕೆ.ಎನ್.ಗಡ್ಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನೀಲಕುಮಾರ ಪಾಟೀಲ, ಜಿಲ್ಲ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ, ಕೆ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ  ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್, ಅಂತಹ ಪಕ್ಷವನ್ನು ಮುನ್ನಡೆಸುತ್ತಿರುವ ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ಇ.ಡಿ.ಸಂಸ್ಥೆಯ ಮೂಲಕ ನೋಟಿಸ್ ಕೊಟ್ಟು ಅವರ ವರ್ಚಸ್ಸನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒಂದು ವರ್ಷ ನಿರಂತರ ಹೋರಾಟ ಮಾಡಿದರು ಕಿವಿಗೊಡಲಿಲ್ಲ, ಈಗ ಅಗ್ನಿಪಥ ಹೋರಾಟ ತೀವ್ರಗೊಂಡಿದೆ. ಕೇಂದ್ರ ಸರ್ಕಾರದವರು ಜನರಿಗಾಗಿ ಸರ್ಕಾರ ನಡೆಸುತ್ತಿಲ್ಲ, ಕೇವಲ ಅದಾನಿ ಹಾಗೂ ಅಂಬಾನಿಗೊಸ್ಕರ ಸರ್ಕಾರ ನಡೆಸುತ್ತಿದ್ದಾರೆ.

ನಮ್ಮ ನಾಯಕರ ವಿರುದ್ಧ ಎಂತಹ ಪ್ರಕರಣಗಳನ್ನು ದಾಖಲಿಸಿದರೂ ಕಾರ್ಯಕರ್ತರು ಎದೆಗುಂದಬಾರದು, ದೇಶಾದ್ಯಂತ ಕಾರ್ಯಕರ್ತರು ಅವರ ಬೆಂಬಲಕ್ಕಿದ್ದೇವೆಂದು ಹೇಳಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಲಿಂಗರಾಜ ವೃತ್ತದ ಬಳಿ ಸಮಾವೇಶಗೊಂಡ ಎಲ್ಲರೂ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು, ನಂತರ ಮೆರವಣಿಗೆ ಮೂಲಕ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.

ನವಲಗುಂದ ಬ್ಲಾಕ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಮುಖಂಡರಾದ ಮಂಜು ಮಾಯಣ್ಣವರ, ಶಿವಾನಂದ ಕರಿಗಾರ, ಆರ್.ಎಚ್.ಕೋನರಡ್ಡಿ, ವಿಜಯಗೌಡ ಪಾಟೀಲ, ಅಪ್ಪಣ್ಣ ಹಳ್ಳದ, ಮಂಜು ಜಾಧವ, ಸದುಗೌಡ ಪಾಟೀಲ, ಕಿರಣ ಉಳ್ಳಿಗೇರಿ, ಅಷ್ಪಾಕ ಮುಲ್ಲಾ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ನೀ ಹುಲಕೋಟಿಗೆ ಬಂದ್ರೆ ಡೇಂಜರ್ ಆಗುತ್ತೆ; ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿಗೆ ಬೆದರಿಕೆ

ವಿಜಯಸಾಕ್ಷಿ ಸುದ್ದಿ, ಗದಗ:

ನೀ ಹುಲಕೋಟಿಗೆ ಬರಬೇಡ…ನೀ ಬಂದ್ರೆ ಡೇಂಜರ್ ಆಗುತ್ತೆ. ಹೀಗಂತ ವ್ಯಕ್ತಿಯೊಬ್ಬ ನೇರವಾಗಿ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಬೆದರಿಕೆ ಹಾಕಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಈ ಕುರಿತು ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಹುಲಕೋಟಿಯಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ವೀಕ್ಷಣೆಗೆ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಜೊತೆಗೆ ಆಗಮಿಸಿದ್ದೆ. ನಾ ಹುಲಕೋಟಿಗೆ ಬಂದ ಸುದ್ದಿ ಹಬ್ಬುತ್ತಿದ್ದಂತೆಯೇ ಇಡೀ ಊರಿನ ವಿದ್ಯುತ್ ಪೂರೈಕೆ ನಿಲ್ಲಿಸಲಾಗಿದೆ. ಕತ್ತಲಿನಲ್ಲಿ ಸಮುದಾಯ ಭವನ‌ದ ಕಾಮಗಾರಿ ವೀಕ್ಷಣೆ ಮಾಡಿದೆ ಎಂದಿದ್ದಾರೆ.

ಕಾಮಗಾರಿ ವೀಕ್ಷಣೆ ನಂತರ ಕಾರ್ಯಕರ್ತ ನಾರಾಯಣ ಎಂಬುವವರು ಮನೆಗೆ ಹೋಗಿ ವಾಪಸು ವಾಹನ ಹತ್ತುವಾಗ ಏಕಾಏಕಿ ವ್ಯಕ್ತಿಯೊಬ್ಬ ಬಂದವನೇ ನೀ ಹುಲಕೋಟಿಗೆ ಬರಬೇಡ….ಬಂದ್ರೆ ಡೇಂಜರ್ ಆಗುತ್ತೆ….ಅಂತ ಏಕವಚನದಲ್ಲಿಯೇ ದಮ್ಕಿ ಹಾಕಿದ ಎಂದು ಅವರು ಆರೋಪಿಸಿದ್ದಾರೆ.

ಈ ಹಿಂದೆಯೂ ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಈ ರೀತಿ ಕರೆಂಟ್ ತಗೆಯೋದು ಮಾಡಿದ್ದಾರೆ. ಇಂತಹದ್ದೆಕ್ಕೆಲ್ಲಾ ಹೆದರುವ ಮಾತಿಲ್ಲ. ಈಗಾಗಲೇ ಅವರಿಗೆ ಭಯ ಆರಂಭವಾಗಿದೆ.
ಗ್ರಾಮದಲ್ಲಿ ನನ್ನನ್ನು ಪ್ರೀತಿಸುವ ಜನ ಇದ್ದಾರೆ. ನಾನೇನೂ ಹೊರಗಿನವನಲ್ಲ. ನಾನು ಕೂಡ ಹುಲಕೋಟಿ ಗ್ರಾಮದ ಮೊಮ್ಮಗ. ಈಗಾಗಲೇ ಗ್ರಾಮದಲ್ಲಿ ಜನ ಬದಲಾಗಿದ್ದು, ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ ಎಂದು ಅನಿಲ ಮೆಣಸಿನಕಾಯಿ ಹೇಳಿದ್ದಾರೆ.

ನಾ ಹುಲಕೋಟಿಗೆ ಆಗಮಿಸುವ ಸುದ್ದಿ ಕೇಳಿದ ಅಭಿಮಾನಿಗಳು, ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಇದನ್ನೆಲ್ಲಾ ನೋಡಿದಾಗ ಗ್ರಾಮದ ಜನ ಬದಲಾವಣೆ ಆಗಿದ್ದು ಖುಷಿ ತಂದಿದೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಸಚಿವ ಮುನೇನಕೊಪ್ಪ ಸ್ವ ಗ್ರಾಮದಲ್ಲಿ ಅವಘಡ; ಹಳ್ಳದ ನಡು ನೀರಿನಲ್ಲಿ ಸಿಲುಕಿದ್ದ ಶಾಲಾ ಮಕ್ಕಳು ಪಾರು

ಸುರಕ್ಷಿತವಾಗಿ ರಕ್ಷಣೆ ಮಾಡಿದ ಅಧಿಕಾರಿಗಳು, ಗ್ರಾಮಸ್ಥರು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತಾಲ್ಲೂಕಿನ ಅಮರಗೋಳ ವ್ಯಾಪ್ತಿಯಲ್ಲಿ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಹಳ್ಳ ಉಕ್ಕಿ ಹರಿದಿದ್ದು ಗ್ರಾಮದಲ್ಲಿರುವ ಸರ್ಕಾರಿ ಶಾಲೆ ಈಗ ನಡುಗಡ್ಡೆಯಂತಾಗಿರುವುದರಿಂದ ಸುಮಾರು 150 ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿರುವ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಜವಳಿ ಮತ್ತು ಸಕ್ಕರೆ ಖಾತೆ ಸಚಿವರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಗ್ರಾಮದಲ್ಲಿಯೇ ಈ ಘಟನೆ ನಡೆದಿದೆ. ಇದರಿಂದಾಗಿ ಗಾಭರಿಗೊಂಡ ಗ್ರಾಮಸ್ಥರು ಹಾಗೂ ಬೆಳವಟಗಿ ಗ್ರಾಮ ಪಂಚಾಯತಿ ಅಧಿಕಾರಿಗಳು ಮಕ್ಕಳ ರಕ್ಷಣೆಗೆ ಮುಂದಾಗಿದ್ದರು.

ಪ್ರೌಢಶಾಲೆಯ ಸುತ್ತಲು ನೀರು ಆವರಿಸಿರುವುದರಿಂದ ವಿದ್ಯಾರ್ಥಿಗಳು ಹೊರ ಬರದಂತೆ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದು ನೀರಿನ ಹರಿವು ಕಡಿಮೆಯಾದ ನಂತರ ಮನೆಗಳಿಗೆ ಕಳುಹಿಸಲಾಗುವುದು. ಅಲ್ಲಿಯವರೆಗೆ ವಿದ್ಯಾರ್ಥಿಗಳನ್ನು ಶಾಲೆಯಲ್ಲಿಯೇ ಕೂಡಿಸಿ ಉಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ನಂತರ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಹರಸಾಹಸ ಪಟ್ಟು  ಟ್ರ್ಯಾಕ್ಟರ್ ಮೂಲಕ ವಿದ್ಯಾರ್ಥಿಗಳನ್ನು ಸುರಕ್ಷೀತವಾಗಿ ರಕ್ಷಣೆ ಮಾಡಿ ಕರೆತಂದು ಮನೆಗೆ ಕಳುಹಿಸಲಾಯಿತು  ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಹಂಪಿಹೋಳಿ ತಿಳಿಸಿದ್ದಾರೆ.

ಅಕ್ರಮ ಮದ್ಯ ಸಾಗಾಟ; ಆರೋಪಿ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ:

ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಾಗಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ನರಗುಂದ ಪೊಲೀಸರು ಬಂಧಿಸಿದ್ದಾರೆ.

ರೋಣ ತಾಲ್ಲೂಕಿನ ಯಾವಗಲ್ ಗ್ರಾಮದ ಮಂಜುನಾಥ್ ನಿಂಗಪ್ಪ ಹೆಬಸೂರು ಎಂಬಾತ 3372 ರೂಪಾಯಿ ಮೌಲ್ಯದ ಮದ್ಯವನ್ನು ತನ್ನ ಗ್ರಾಮಕ್ಕೆ ಸಾಗಾಟ ಮಾಡುತ್ತಿದ್ದಾಗ ನರಗುಂದ ಠಾಣೆಯ ಎಎಸ್ಐ ಬಿ ಆರ್ ಸೊರಟೂರು ಹಾಗೂ ಸಿಬ್ಬಂದಿ ರೋಣ ಕ್ರಾಸ್ ಬಳಿ ದಾಳಿ ಮಾಡಿ ಬಂಧಿಸಿ,‌ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬ ಕಲಹ ಹಿನ್ನೆಲೆ; ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಪೊಲೀಸ್

ವಿಜಯಸಾಕ್ಷಿ ಸುದ್ದಿ, ಗದಗ:

ಕುಟುಂಬ ಕಲಹದಿಂದ‌ ಬೇಸತ್ತಿದ್ದ ಮುಖ್ಯ ಪೇದೆಯೋರ್ವ 303 ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಜರುಗಿದೆ.

ಇಲ್ಲಿನ ಜಿಲ್ಲಾಡಳಿತ ಭವನದ ಖಜಾನೆ ವಿಭಾಗದಲ್ಲಿ ಕರ್ತವ್ಯ ಮಾಡುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ ಕಾನ್ಸ್‌ಟೇಬಲ್ ಕಿರಣಕುಮಾರ್ ಕೊಪ್ಪದ (45) ಎಂಬಾತನೇ ಕತ್ತಿಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ.

ಸಂಜೆ ಆರು ಗಂಟೆಯಿಂದ ಒಂಬತ್ತು ಗಂಟೆಯವರೆಗೆ ಡ್ಯೂಟಿಗೆ ಬಂದಿದ್ದ ಕಿರಣಕುಮಾರ್
ಖಜಾನೆಯ ಕಛೇರಿಯ ಎಲ್ಲಾ ಬಾಗಿಲುಗಳನ್ನು ಹಾಕಿಕೊಂಡು, ಕುರ್ಚಿ ಮೇಲೆ ಕುಳಿತು, ಕೈಯಲ್ಲಿದ್ದ 303 ರೈಫಲ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ರಾತ್ರಿ 9 ಗಂಟೆಗೆ ನೈಟ್ ಡ್ಯೂಟಿ ಮಾಡುವ ಇನ್ನೋರ್ವ ಸಿಬ್ಬಂದಿ ಬಂದು ಬಾಗಿಲು ಬಡಿದರೂ ತೆರೆಯದ ಕಾರಣ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

ಸುದ್ದಿ ತಿಳಿದು ಗಾಬರಿಗೊಂಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ವಿದ್ಯಾನಂದ ನಾಯಕ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಬಾಗಿಲು ಒಡೆದು ನೋಡಿದಾಗ ಕಿರಣಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.

ಕಿರಣಕುಮಾರ್ ಕೈಯಲ್ಲಿದ್ದ ರೈಫಲ್ ನಿಂದ ಕುತ್ತಿಗೆಗೆ ಇಟ್ಟುಕೊಂಡು ಡ್ರ್ಯಾಗರ್ ಕಾಲಿನಿಂದ ಪ್ರೆಸ್ ಮಾಡಿದ್ದಾನೆ. ಆಗ ರೈಫಲ್ ನಿಂದ ಹಾರಿದ ಗುಂಡು, ಕತ್ತನ್ನು ಸೀಳಿಕೊಂಡು ಗೋಡೆಗೆ ಹೋಗಿ ತಾಗಿದೆ. ಇದರಿಂದಾಗಿ ಕಿರಣಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೌಟುಂಬಿಕ ಕಲಹ ಹಾಗೂ ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ತಿಳಿಸಿದ್ದಾರೆ.

ಸುದ್ದಿ ತಿಳಿದು ಎಸ್ಸಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ, ಇನ್ಸ್‌ಪೆಕ್ಟರ್ ಗಳಾದ ಸಾಲಿಮಠ, ರವಿಕುಮಾರ್ ಕಪ್ಪತನವರ್, ಸುಬ್ಬಾಪೂರಮಠ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದರು. ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೈಮಂಡ್ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕನಿಗೆ ವಂಚನೆ; ನೆಕ್ಲೆಸ್ ಮಾಡಿಕೊಡದ ಪಶ್ಚಿಮ ಬಂಗಾಳದ ನವಾಬ್!

ವಿಜಯಸಾಕ್ಷಿ ಸುದ್ದಿ, ಗದಗ:

ಆಭರಣ ತಯಾರು ಮಾಡಿಕೊಡುವ ಪಶ್ಚಿಮ ಬಂಗಾಳ ಮೂಲದ ಅಸಾಮಿಯೊಬ್ಬ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕನೊಬ್ಬನಿಗೆ ನೆಕ್ಲೆಸ್ ‌ಮಾಡಿಕೊಡದೇ‌ ವಂಚಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಗ್ರಾಹಕರೊಬ್ಬರ ಬೇಡಿಕೆಯಂತೆ 20 ಗ್ರಾಮ ತೂಕದ ಗಟ್ಟಿ ಬಂಗಾರವನ್ನು ನೆಕ್ಲೆಸ್ ಮಾಡಿಕೊಡಲು ಆಭರಣ ತಯಾರಿಕೆ ನಿಪುಣತೆ ಹೊಂದಿರುವ ಮೂಲತಃ ಪಶ್ಚಿಮ ಬಂಗಾಳದ, ಸದ್ಯ ಹನಮನಗರಡಿ ಬಳಿಯ ನಿವಾಸಿ ನವಾಬ್ ಅಲಿಯಾಸ್ ಹಸನ ಅಲಿ ಎಂಬಾತನಿಗೆ ಸ್ಟೇಷನ್ ರಸ್ತೆಯಲ್ಲಿ ಇರುವ ಡೈಮಂಡ್ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕ ನಾಗರಾಜ್ ವಿಶ್ವನಾಥ ಸೇಠ್ ಎಂಬುವವರು ಮೇ 30ರಂದು ಕೊಟ್ಟಿದ್ದರು.

ನಾಲ್ಕೈದು ದಿನಗಳಲ್ಲಿ ನೆಕ್ಲೆಸ್ ಮಾಡಿಕೊಡುವುದಾಗಿ ಹೇಳಿ ಹೋಗಿದ್ದ ನವಾಬ್ ಅಲಿಯಾಸ್ ಹಸನ ಅಲಿ ಹೇಳಿದ ಮಾತಿಗೆ ತಪ್ಪಿದ್ದಾನೆ. ಅಷ್ಟೇ ಅಲ್ಲದೆ ಮರಳಿ ಬಂಗಾರವನ್ನು ನೀಡದೆ ವಂಚಿಸಿದ್ದಾನೆ. ಇದರಿಂದಾಗಿ ಡೈಮಂಡ್ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕ ನಾಗರಾಜ್ ಸೇಠ್ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!