Home Blog Page 3245

ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡ ಜನಾರ್ದನ ರೆಡ್ಡಿ

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಬಳ್ಳಾರಿ ಪ್ರವೇಶಕ್ಕೆ ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಶುಕ್ರವಾರ ಬಳ್ಳಾರಿಗೆ ಧಾವಿಸಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ತಮ್ಮ ನಿವಾಸದಲ್ಲಿ ಭರ್ಜರಿ ವರಮಹಾಲಕ್ಷ್ಮೀ ಪೂಜೆ ನೆರವೇರಿಸಿದರು.

ಪತ್ನಿ ಅರುಣಾ ಲಕ್ಷ್ಮಿ, ಪುತ್ರ ಕಿರೀಟಿ ಹಾಗೂ ಪುತ್ರಿ ಬ್ರಹ್ಮಿಣಿ ಜೊತೆಗೆ ವರಮಹಾಲಕ್ಷ್ಮಿ ಪೂಜೆಯಲ್ಲಿ ಖುಷಿಯಿಂದ ಭಾಗಿಯಾಗಿದ್ದರು. ಬೆಳಗ್ಗೆ ಬಳ್ಳಾರಿಯ ನಿವಾಸಕ್ಕೆ ಜಿ. ಜನಾರ್ದನ ರೆಡ್ಡಿ ಆಗಮಿಸಿದರು.

ಸಹೋದರನ ಆಗಮನದ ಬಗ್ಗೆ ಸಹೋದರ ಸೋಮಶೇಖರ ರೆಡ್ಡಿ ಅವರೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಬಳ್ಳಾರಿ ಎಸ್ಪಿ ಎಸ್.ಪಿ. ಸೈದುಲ್ಲಾ ಅಡಾವತ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಶಾರ್ಟ್ ಸರ್ಕ್ಯೂಟ್; ಲಕ್ಷಾಂತರ ರೂ. ಮೌಲ್ಯದ ಟಿವಿ, ವಾಷಿಂಗ್ ಮಷೀನ್ ಸುಟ್ಟು ಕರಕಲು

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಮುಳಗುಂದ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದ ಎದುರಿಗೆ ಇರುವ ಸರ್ವೀಸ್ ಸೆಂಟರ್‌ ನಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾದ ಘಟನೆ ಜರುಗಿದ.

ಹಿರೇಮಠ ಸೇಲ್ಸ್ ಆಂಡ್ ಸರ್ವೀಸ್ ಸೆಂಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಗುರು ಹಿರೇಮಠ ಎಂಬುವವರಿಗೆ ಸೇರಿದ ಈ ಸರ್ವೀಸ್ ಸೆಂಟರ್‌ನಲ್ಲಿ ಫ್ರಿಜ್, ಏರ್ ಕಂಡೀಷನರ್, ವಾಷಿಂಗ್ ಮಷೀನ್ ಸೇರಿ ಹತ್ತು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳಿದ್ದವು.

ಬೆಂಕಿ ಅವಘಡದ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸ ನಡೆಸಿ ಬೆಂಕಿ ನಂದಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಸ್ನಾನ ಮಾಡಲು ಕೆರೆಗೆ ಹೋಗಿದ್ದ ಸಹೋದರರಿಬ್ಬರು ನೀರು ಪಾಲು

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸ್ನಾನ ಮಾಡಲೆಂದು ಕೆರೆಗೆ ತೆರಳಿದ್ದ ಒಂದೇ ಕುಟುಂಬದ ಇಬ್ಬರು ಯುವಕರು ನೀರುಪಾಲಾದ ಘಟನೆ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ಇಂದು ನಡೆದಿದೆ.

ಕಾಶೀಂ ನದಾಫ್ (23) ಹಾಗೂ ಶರೀಫ್ ನದಾಫ್ (20) ಮೃತ ದುರ್ದೈವಿಗಳು. ಸಹೋದರರಿಬ್ಬರು ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದ ಹಳೇ ಕೆರೆಗೆ ಸ್ನಾನ ಮಾಡಲು ತೆರಳಿದ್ದರು.

ಮೊದಲು ಕಾಶೀಂ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದು, ಈಜಲು ಬಾರದೆ ನೀರಿನಲ್ಲಿ ಮುಳುಗಲಾರಂಭಿಸಿದ್ದು, ಈತನ ಸಹಾಯಕ್ಕೆ ಶರೀಫ್ ಧಾವಿಸಿದ್ದಾನೆ. ಆದರೆ ಆತನಿಗೂ ಈಜು ಬಾರದೇ ಇಬ್ಬರೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಗರಗ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಸಹಾಯದಿಂದ ಯುವಕರ ಮೃತದೇಹಗಳನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೊಹರಂ ಹಬ್ಬದಂದೇ ಸಹೋದರರಿಬ್ಬರ ಸಾವು ಗ್ರಾಮದಲ್ಲಿ ಶೋಕ ಮಡುಗಟ್ಟವಂತೆ ಮಾಡಿದೆ.
ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ನಾರಾಯಣಸ್ವಾಮಿ ಯಡವಟ್ಟು; ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳದ ಸಚಿವ

  • ಜನಾಶೀರ್ವಾದ ಯಾತ್ರೆ ವೇಳೆ ಎ. ನಾರಾಯಾಣಸ್ವಾಮಿ ಯಡವಟ್ಟು

ವಿಜಯಸಾಕ್ಷಿ ಸುದ್ದಿ, ಗದಗ

ಮೃತಪಟ್ಟ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಕರ್ತವ್ಯನಿರತ ಸೈನಿಕನ ಮನೆಗೆ ತೆರಳಿ ಸಾಂತ್ವನ ಹೇಳುವ ಮೂಲಕ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಯಡವಟ್ಟು ಮಾಡಿದ್ದಾರೆ.

ನಿನ್ನೆ ಗದಗನಲ್ಲಿ ವಿಠಲಾರೂಢ ಸಮುದಾಯ ಭವನದಲ್ಲಿ ಜನಾಶೀರ್ವಾದ ಯಾತ್ರೆ ಅಭಿನಂದನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸಚಿವರು ಹಾವೇರಿಯಲ್ಲಿ ನಡೆದ ಜನಾಶೀರ್ವಾದ ಯಾತ್ರೆ ಮುಗಿಸಿ ಗದಗ ನಗರಕ್ಕೆ ಆಗಮಿಸುತ್ತಿದ್ದರು.

ಈ ವೇಳೆ ಮಾರ್ಗಮಧ್ಯ ಬಿಜೆಪಿ ಸರಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ಮಾಗಡಿ ಹಾಗೂ ಮುಳಗುಂದ ಪಟ್ಟಣದಲ್ಲಿ ಜನರೊಂದಿಗೆ ಕೆಲ ಕಾಲ ಕಳೆದಿದ್ದರು.

ಜೊತೆಗೆ ಮುಳಗುಂದ ಪಟ್ಟಣದಲ್ಲಿ ಕಳೆದ ಒಂದು ವರ್ಷದ ಹಿಂದೆ ಬಸವರಾಜ ಹಿರೇಮಠ ಎಂಬುವವರು ಪುಣೆಯಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು.

ಮೃತ ಯೋಧನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಬಳಿಕ ಅವರಿಗೆ ಸರಕಾರದಿಂದ ಸಿಗುವ ಪರಿಹಾರದ ಭರವಸೆ ನೀಡಲು ನಿರ್ಧರಿಸಲಾಗಿತ್ತು.

ಆದರೆ ಮೃತ ಯೋಧನ ಮನೆಗೆ ಭೇಟಿ ನೀಡುವ ಬದಲು ಜಮ್ಮು-ಕಾಶ್ಮೀರದಲ್ಲಿ ಸದ್ಯ ಕರ್ತವ್ಯದಲ್ಲಿರುವ ಯೋಧ ರವಿಕುಮಾರ ಕಟ್ಟಿಮನಿ ಎಂಬುವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಆತನ ಪತ್ನಿಗೆ ಸರಕಾರಿ ನೌಕರಿ ಮತ್ತು ಜಮೀನು ಕೊಡಿಸುವ ಭರವಸೆ ನೀಡಿದ್ದಾರೆ.

ಈ ಹೇಳಿಕೆಯಿಂದ ಯೋಧನ ಕುಡುಂಬಸ್ಥರು ತಬ್ಬಿಬ್ಬುಗೊಂಡಿದ್ದಾರೆ. ಬಳಿಕ ಅಲ್ಲಿಯೇ ಇದ್ದ ಕಾರ್ಯಕರ್ತನೊಬ್ಬ ಕರ್ತವ್ಯದಲ್ಲಿದ್ದ ಯೋಧ ರವಿಕುಮಾರನಿಗೆ ವಿಡಿಯೋ ಕರೆ ಮಾಡಿ ಸಚಿವರ ಜೊತೆಗೆ ಮಾತನಾಡಲು ಕೊಟ್ಟಿದ್ದಾರೆ.

ಇದರಿಂದ ಸಚಿವರು ಮತ್ತು ಮನೆಯವರು ಇಬ್ಬರೂ ವಿಚಲಿತರಾಗಿ ತಬ್ಬಿಬ್ಬಾಗಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾಗಿ ಅಲ್ಲಿಂದ ಸಚಿವರು ತೆರಳಿ ನೇರವಾಗಿ ಗದಗ ಕಡೆ ಮುಖಮಾಡಿದರು. ಈ ಘಟನೆ ಸಚಿವರಿಗೆ ತೀವ್ರ ಮುಜುಗರಕ್ಕೆ ಕಾರಣವಾಯಿತು.

ಪೊಲೀಸರ ಕಾರ್ಯಾಚರಣೆ; ಜಮೀನಿನಲ್ಲಿ ಬೆಳೆದಿದ್ದ 16 ಗಾಂಜಾ ಗಿಡಗಳ ವಶ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯ ಗಜೇಂದ್ರಗಡ ಠಾಣೆ ಪೊಲೀಸರು ಜಮೀನೊಂದರ ಮೇಲೆ ದಾಳಿ ನಡೆಸಿ 950 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಗುಡ್ಡೇದಬೈರಾಪುರ ತಾಂಡಾದ ಶರಣಪ್ಪ ಶಿವಪ್ಪ ಅಜ್ಮೀರ ಬಂಧಿತ ಆರೋಪಿ.
ಶಿವಪ್ಪ ರಾಮಜಪ್ಪ ಅಜ್ಮೀರ ಎಂಬುವವರ ಹೆಸರಿನಲ್ಲಿದ್ದ ಜಾಮೀನಿನಲ್ಲಿ ಶರಣಪ್ಪ ಗಾಂಜಾ ಗಿಡ ಬೆಳೆಸಿ ಗಾಂಜಾ ಮಾರಾಟ ಮಾಡುತ್ತಿದ್ದ‌.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗಜೇಂದ್ರಗಡ ಠಾಣೆ ಪಿಎಸ್ ಐ ಗುರುಶಾಂತ ದಾಸ್ಯಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, 4 ದೊಡ್ಡ ಹಾಗೂ 12 ಚಿಕ್ಕ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದು ಆರೋಪಿಯನ್ನು ಬಂಧಿಸಿದ್ದಾರೆ‌. ಪ್ರಕರಣ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಜನಾರ್ದನ ರೆಡ್ಡಿ‌ ಬಳ್ಳಾರಿ ಎಂಟ್ರಿಗೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಜಾಮೀನು ದೊರೆತು ಹೊರಬಂದಿದ್ದರೂ ಬಳ್ಳಾರಿ ಪ್ರವೇಶದಿಂದ ವಂಚಿತವಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಎಂಟು ವಾರಗಳ ಕಾಲ ಬಳ್ಳಾರಿ ಮತ್ತು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಲು ಸುಪ್ರೀಂ ಕೋರ್ಟ್‌ ಷರತ್ತುಬದ್ಧ ಅನುಮತಿ ನೀಡಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ನ್ಯಾಯಾಲಯ ಬಳ್ಳಾರಿ ಪ್ರವೇಶಿಸದಂತೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಬಳ್ಳಾರಿಗೆ ತೆರಳಲು ಅನುಮತಿ ನೀಡುವಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿ ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್‌ ಸಾರನ್‌ ನೇತೃತ್ವದ ಪೀಠ ಬಳ್ಳಾರಿಗೆ 8 ವಾರಗಳ ಕಾಲ ತೆರಳಲು ಅನುಮತಿ ನೀಡಿದೆ.

ಬಳ್ಳಾರಿಗೆ ಭೇಟಿ ನೀಡಿದ ಪ್ರತಿ ಸಲವೂ ಬಳ್ಳಾರಿ, ಕಡಪ, ಅನಂತಪುರ ಜಿಲ್ಲೆಗಳ ಎಸ್‌ಪಿಗೆ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಷರತ್ತು ವಿಧಿಸಿದೆ.

ಬಳ್ಳಾರಿಗೆ ಹೋಗಲು ಜನಾರ್ದನ ರೆಡ್ಡಿಗೆ ಅನುಮತಿ ನೀಡುವುದಕ್ಕೆ ವಿರೋಧಿಸಿದ್ದ
ಸಿಬಿಐ, ಈ ಹಿಂದೆ ಪ್ರಕರಣದ ವಿಚಾರಣೆ ಅಧಿಕಾರಿಯ ವಾಹನ ಸುಡಲಾಗಿತ್ತು.

ಬಳ್ಳಾರಿಯಲ್ಲಿ ಅಕ್ರಮ ಗಣಿ ಪ್ರಕರಣದ 47 ಸಾಕ್ಷಿಗಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳಿಗೆ ಬೆದರಿಕೆ ಇದೆ. ಈ ಕುರಿತು ಸಾಕ್ಷಿಧಾರರೊಬ್ಬರು ಪತ್ರವನ್ನೂ ಬರೆದಿದ್ದಾರೆ. ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾದರೆ ಪ್ರಕರಣ ಬಿದ್ದುಹೋಗುವ ಸಾಧ್ಯತೆಯಿದೆ ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಧವಿ ದಿವಾನ್ ವಾದ ಮಂಡಿಸಿದರು.

ಪ್ರತಿವಾದ ಮಂಡಿಸಿದ ಆರೋಪಿ ಪರ ನ್ಯಾಯವಾದಿ ಮುಕುಲ್ ರೋಹ್ಟಗಿ, ಸಿಬಿಐ ಆರೋಪದಲ್ಲಿ ಸತ್ಯಾಂಶವಿಲ್ಲ. ನನ್ನ ಕಕ್ಷಿಧಾರರು ಈ ಹಿಂದಿನ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ. ಸಿಬಿಐ ಹೇಳುವ ಪ್ರಕಾರ ಷರತ್ತು ಉಲ್ಲಂಘಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ವಾದಿಸಿದ್ದರು.

ಈ ಹಿಂದೆ 2020ರಲ್ಲಿ ಶ್ರೀರಾಮುಲು ತಾಯಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರೆಡ್ಡಿಗೆ ಎರಡು ದಿನ ಬಳ್ಳಾರಿ ಪ್ರವೇಶಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು.

ಸಹೋದರ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಗೆ ಬರಲು ಅನುಮತಿ ಸಿಕ್ಕಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಶಾಸಕ ಸೋಮಶೇಖರ ರೆಡ್ಡಿ, ಕೊನೆಗೂ ನ್ಯಾಯ ದೇವತೆ ಕಣ್ಣು ತೆರೆದಿದ್ದಾಳೆ.

ಜನಾರ್ದನರೆಡ್ಡಿ ಅವರು ಬಳ್ಳಾರಿಗೆ ಬಂದು ಶ್ರಾವಣ ಮಾಸದ ವಿಶೇಷ ಪೂಜೆಗಳಲ್ಲಿ ಭಾಗವಹಿಸಲಿದ್ದಾರೆ. ಯಾವುದೇ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದ ಕುರಿತು ತನಿಖೆಯಾಗಲಿ; ಕೇಂದ್ರ ಸಚಿವ ನಾರಾಯಣಸ್ವಾಮಿ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಪದೇ ಪದೇ ಕಾಂಗ್ರೆಸ್ ನಿಂದಲೇ ದೇಶಕ್ಕೆ ಸ್ವಾತಂತ್ರ್ಯ ಬಂತು ಎನ್ನುತ್ತಿದ್ದಾರೆ.‌ ಯಾರ್ಯಾರು ಬ್ರಿಟಿಷರ ಗುಂಡಿಗೆ ಎದೆಯೊಡ್ಡಿದ್ದರು ಎಂಬುದು ತನಿಖೆ ಆಗಬೇಕಿದೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ಹಾವೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊನ್ನೆ ಒಬ್ಬರು ಕಾಂಗ್ರೆಸ್ ನವರೇ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಎಂದು ಹೇಳ್ತಿದ್ರು,

ದೇಶಕ್ಕೆ ಸ್ವಾತಂತ್ರ್ಯ ಬರಲು ಕೇವಲ ಹಿಂದುಗಳು, ಅಲ್ಪಸಂಖ್ಯಾತರು ಮಾತ್ರ ಹೋರಾಟ ಮಾಡಲಿಲ್ಲ. ಜಾತಿಗೂ ಮೀರಿ ಒಗ್ಗಟ್ಟಿನಿಂದ ಹೋರಾಟ ಮಾಡಿದ್ದರಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಎ. ನಾರಾಯಣಸ್ವಾಮಿ ಟಾಂಗ್ ನೀಡಿದರು.

ಡಾಕ್ಟರ್ಸ್, ನರ್ಸ್ ಸೇರಿ ಎಲ್ಲ ಕೋವಿಡ್ ವಾರಿಯರ್ಸ್ ಗಳನ್ನು ಭೇಟಿ ಮಾಡಿದ್ದೆ. ಆದರೆ ಹಾವೇರಿಗೆ ಬಂದಿದ್ದು, ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪನವರ ಸ್ಮಾರಕಕ್ಕೆ ಭೇಟಿ ನೀಡಿದ್ದು, ನನಗೆ ವಿಶೇಷ ಅನುಭವವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಭಗವಂತ್ ಖೂಬಾ ಬೆಂಬಲಿಗರಿಂದ ಬಂದೂಕು ಪ್ರದರ್ಶನ ಪ್ರಕರಣದಲ್ಲಿ ಸಚಿವರ ಬೆಂಬಲಿಗರು ಮಾಡಿದ ತಪ್ಪಿಗೆ ಪಿಎಸ್‌ಐ, ಕಾನ್ಸಟೆಬಲ್ ಗೆ ಅಮಾನತು ಶಿಕ್ಷೆ ಯಾಕೆ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ
ನಾರಾಯಣಸ್ವಾಮಿ, ನಿಮ್ಮ ಪ್ರಶ್ನೆ ಸರಿಯಿದೆ.

ಆ ಘಟನೆ ಬಗ್ಗೆ ನನಗೆ ಅರಿವಿಲ್ಲ. ಸಮರ್ಥನೆ ಮಾಡುವ ರಾಜಕಾರಣಿಯೂ ನಾನಲ್ಲ. ನನಗೆ ನನ್ನದೇ ಆದ ಬದ್ಧತೆ ಇದೆ ಎಂದು ಹೇಳಿದರು.

ಶಾಸಕ ಶ್ರೀಕಂಠಯ್ಯ ಮೆಂಟಲ್ ಆಗಿದ್ದಾರೆ; ಸುಮಲತಾ ಅಂಬರೀಶ್ ವಾಗ್ದಾಳಿ

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಸಂಸದೆ ಸುಮಲತಾ ಮತ್ತು ಜೆಡಿಎಸ್ ಶಾಸಕ ಶ್ರೀಕಂಠಯ್ಯ ಮಧ್ಯೆ ತೀವ್ರ ಆರೋಪ -ಪ್ರತ್ಯಾರೋಪ ಮುಂದುವರಿದಿದೆ.

ಸಂಸದೆಯ ಸುತ್ತಮುತ್ತ ಗೂಂಡಾಗಳಿದ್ದಾರೆ.‌ ಅಧಿಕಾರಿಗಳಿಗೆ ಕಿರುಕುಳ ಕೊಡುತ್ತಿದ್ದಾರೆ. ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಶಾಸಕ ರವೀಂದ್ರ ವಾಗ್ದಾಳಿ ನಡೆಸಿದ್ದರೆ,

ಇದಕ್ಕೆ ತಿರುಗೇಟು ನೀಡಿರುವ ಸಂಸದೆ ಸಮಲತಾ ಅಂಬರೀಶ್, ಅಕ್ರಮ ಗಣಿಗಾರಿಕೆ ನಿಲ್ಲಿಸುತ್ತಿದ್ದಂತೆ ಶ್ರೀಕಂಠಯ್ಯ ಅವರಿಗೆ ತೊಂದರೆಯಾಗುತ್ತಿದೆ.

ಅವರು ಮೆಂಟಲ್ ಆಗಿದ್ದಾರೆ. ಇದಕ್ಕೆ ಅವರು ಚಿಕಿತ್ಸೆ ಪಡೆಯಲಿ ಎಂದು ಸಲಹೆ ನೀಡಿದ್ದಾರೆ.
ಸುಮಲತಾ ಅವರ ಲೆಟರ್ ಹೆಡ್ ಗಳು ದುರುಪಯೋಗ ಆಗುತ್ತಿವೆ. ಅವರ ಆಪ್ತ ಕಾರ್ಯದರ್ಶಿ ಒಬ್ಬ ವಂಚಕ. 

ಹಣಕ್ಕಾಗಿ ಅಧಿಕಾರಿಗಳಿಗೆ ಪೀಡಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳಿಗೆ ದಬಾಯಿಸಿ ಮಾತನಾಡಿ ಮಾನಸಿಕ ಒತ್ತಡ ತರುತ್ತಿದ್ದಾರೆ. ಅಧಿಕಾರಿಗಳು ಅವರ ಕಷ್ಟಗಳನ್ನು ನನ್ನ ಬಳಿ ತೋಡಿಕೊಂಡಿದ್ದಾರೆ. 

ಎಫ್ ಸಿಸಿ ಜಿಲ್ಲಾಡಳಿತ ಸಂಪೂರ್ಣ ಕುಸಿದಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ದೌರ್ಜನ್ಯ ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಸಂಸದರೆಲ್ಲರೂ ಇದನ್ನು ನೋಡಿಯೂ ಸುಮ್ಮನಿದ್ದಾರೆ ಎಂದು ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಸುಮಲತಾ, ಅವರು ಏನು ಹೇಳುತ್ತಿದ್ದಾರೋ ಅಂತಹ ಸಂಸ್ಕೃತಿ ಅವರದ್ದು. ತಾವು ಯಾವ ರೀತಿ ಬೆಳೆದುಕೊಂಡು ಬಂದಿದ್ದಾರೋ ಅದನ್ನು ಹೇಳುತ್ತಿದ್ದಾರೆ.

ಸಮಸ್ಯೆ ಇದ್ದರೆ ದೂರು ಕೊಡಲಿ, ಅವರ ಸಮಸ್ಯೆ ಅದೊಂದೇ, ಅಕ್ರಮ ಗಣಿಗಾರಿಕೆ ನಿಲ್ಲಿಸುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ. ಕ್ಷೇತ್ರದ ಪ್ರತಿ ಮನೆಯಲ್ಲಿ ಇವರ ಅನ್ಯಾಯ ಹೇಳುತ್ತಾರೆ. ಇಂತವರ ಆರೋಪಗಳಿಗೆಲ್ಲ ಹೆದರುವವಳು ನಾನಲ್ಲ ಎಂದು ಸುಮಲತಾ ಹೇಳಿದ್ದಾರೆ.

ಬೈಕ್ ಗೆ ಕಾರು ಡಿಕ್ಕಿ; ಗರ್ಭಿಣಿ ಸೇರಿ ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ದ್ವಿಚಕ್ರ ವಾಹನಕ್ಕೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಗೋಕಾಕ ಸಮೀಪದ ಲೋಳಸೂರ ಬ್ಯಾಳಿ ಬಸವಣ್ಣ ದೇವಸ್ಥಾನದ ಹತ್ತಿರ ಇಂದು ಸಂಜೆ ನಡೆದಿದೆ.

ಕಾರು ಚಾಲಕ ಅತಿ ವೇಗದಿಂದ ಕಾರು ಚಲಾಯಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ವೇಗದಲ್ಲಿದ್ದ ಕಾರು ಡಿಕ್ಕಿ ಹೊಡೆಯುತ್ತಿದ್ದಂತೆ ದ್ವಿಚಕ್ರ ವಾಹನ ಮೇಲೆ ಕುಳಿತ ಗರ್ಭಿಣಿ ಶ್ಯಾಮಲಾ ಸುರೇಶ ಶಿವಾಪುರ (23), ತಂದೆ ಸಿದ್ಧಪ್ಪ ಪುಂಡಲೀಕ ಮಣ್ಣೀಕೇರಿ ಸ್ಥಳದಲ್ಲೇ ಮೃತಪಟ್ಟರು. ಮತ್ತೋರ್ವನ ಹೆಸರು ತಿಳಿದುಬಂದಿಲ್ಲ.

ಕಾರು ಗುದ್ದಿದ ರಭಸಕ್ಕೆ ಈತನ ಕಾಲುಗಳು ತುಂಡು ತುಂಡಾಗಿ ಬಿದ್ದಿವೆ. ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಣ್ಣ ಕಡಗಣನೆ: ಪಿಡಿಒ ಎಳೆದಾಡಿದ ಅಭಿಮಾನಿಗಳು

ವಿಜಯಸಾಕ್ಷಿ ಸುದ್ದಿ, ಗದಗ

ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸದ ಹಿನ್ನೆಲೆ ಅಭಿಮಾನಿಗಳು ಗ್ರಾಪಂ ಪಿಡಿಒ ಅವರಿಗೆ ಮುತ್ತಿಗೆ ಹಾಕಿ ಎಳೆದಾಡಿದ ಘಟನೆ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಘಟನೆ ಮಂಗಳವಾರ ನಡೆದಿದೆ.

ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ  ಭಾವಚಿತ್ರ ಇಟ್ಟು ಪೂಜೆ ಮಾಡಬೇಕಿತ್ತು. ಆದರೆ, ಪಿಡಿಒ ಗಾಂಧೀಜಿ ಭಾವಚಿತ್ರಕ್ಕೆ ಮಾತ್ರ ಪೂಜೆ ಸಲ್ಲಿಸಿದ್ದರು.

ಇದರಿಂದ ಆಕ್ರೋಶಗೊಂಡ ರಾಯಣ್ಣ ಅಭಿಮಾನಿಗಳು  ಪಿಡಿಓ ರಾಜಕುಮಾರ ಭಜಂತ್ರಿ ಅವರಿಗೆ ಮುತ್ತಿಗೆ ಹಾಕಿ ಎಳೆದಾಡಿ ತೀವ್ರ ತರಾಟೆಗೆ ತೆಗೆದುಕೊಂಡರು.

ಪಿಡಿಓ ಅವರನ್ನು ಎಳೆದಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಹಾಗೆ ನೋಡಿದರೆ ಸ್ವಾತಂತ್ರ್ಯೋತ್ಸವ ದಿನದಂದೇ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆಯೂ ಇದೆ. ಈವರೆಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಮಾತ್ರ ಪೂಜೆ ಸಲ್ಲಿಸುವ ವಾಡಿಕೆ ಇದೆ. ಆದರೆ, ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಈ ಬಾರಿ ರಾಯಣ್ಣ ಭಾವಚಿತ್ರಕ್ಕೂ ಪೂಜೆ ಸಲ್ಲಿಸಬೇಕೆಂದು ಒತ್ತಾಯಿಸಿದ್ದರು. ಆದರೆ, ಈ ಕುರಿತಾಗಿ ಸರ್ಕಾರ ಯಾವುದೆ ಅಧಿಕೃತ ಆದೇಶ ನೀಡದ್ದರಿಂದ ಪಿಡಿಒ ನಿಯಮಾನುಸಾರ ಗಾಂಧೀಜಿ ಭಾವಚಿತ್ರಕ್ಕೆ ಮಾತ್ರ ಪೂಜೆ ಸಲ್ಲಿಸಿದ್ದರು. ಇದು ರಾಯಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಆಗಸ್ಟ್ 13 ರಂದು ಸರ್ಕಾರದ ಆಧೀನ ಕಾರ್ಯದರ್ಶಿ ಮೊಹಮ್ಮದ್ ನಯೀಮ್ ಮೊಮಿನ್ ಅವರು ಆದೇಶ ಹೊರಡಿಸಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನ ಆಗಸ್ಟ್ 15, ಹಾಗೂ ಹುತಾತ್ಮರಾದ ದಿನ ಜನವರಿ 26 ರಂದು ಸ್ಮರಣಾರ್ಥವಾಗಿ ರಾಜಧಾನಿಯಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸುವಂತೆ ಸೂಚಿಸಲಾಗಿದೆ.

error: Content is protected !!