ಮುಳಗುಂದ ನಾಕಾ ಸಮೀಪದ ಕೋಳಿಕೇರಿ ಕ್ರಾಸ್ ಬಳಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 19 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ.
ಸಿದ್ದರಾಮೇಶ್ವರ ನಗರದ ನಿವಾಸಿಯಾಗಿರುವ ರಾಜೇಸಾಬ ಬಸರಿಗಿಡದ ಎಂಬುವವರಿಗೆ ಸೇರಿದ ಗ್ಯಾರೇಜ್ ನಲ್ಲಿ ಅಗ್ನಿ ದುರಂತ ನಡೆದಿದೆ.
ಗ್ಯಾರೇಜ್ ಮುಂಭಾಗದಲ್ಲಿ ನಿಲ್ಲಿಸಿದ್ದ ಯೋಗ್ಯವಾಗಿದ್ದ 4 ಮತ್ತು ಗುಜರಿಗೆ ಸೇರಿದ್ದ 15 ಸೇರಿ 19 ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ. ಅದರಂತೆ, ಗ್ಯಾರೇಜ್ ಹಿಂದೆ ಹಿಂದಿನ ಶೆಡ್ ನಲ್ಲಿನ ಸಿಮೆಂಟ್, ಬಾರ್ ಬೈಂಡಿಂಗ್ ವೈಯರ್ ಸುಟ್ಟಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.
ಇನ್ನು ಗ್ಯಾರೇಜ್ ಪಕ್ಕ ವಿದ್ಯುತ್ ಟಿಸಿ ಇದ್ದು, ಕಿಡಿ ಬಿದ್ದು ಅಗ್ನಿ ಅವಘಡ ಸಂಭವಿಸಿರಬಹುದು. ಇಲ್ಲದಿದ್ದರೆ, ಶಾರ್ಟ್‌ಸರ್ಕ್ಯೂಟ್‌ನಿಂದ ಅಗ್ನಿ ದುರಂತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ರಾಯಚೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದನ್ನು ಖಂಡಿಸಿ ಬುಧವಾರ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್‌ರವರ ಪುತ್ಥಳಿಗೆ ಸಾಮಾಜಿಕ ಕಾರ್ಯಕರ್ತ ಸೈಯದ್ ಖಾಲಿದ್ ಕೊಪ್ಪಳ ಹಾಲಿನ ಅಭಿಷೇಕ ಮಾಡಿದರು.
ಈ ವೇಳೆ ಮಾತನಾಡಿದ ಅವರು, ‘ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ನ್ಯಾಯಾಧೀಶರನ್ನು ಶೀಘ್ರವೇ ಅಮಾನತು ಮಾಡಬೇಕು. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಂವಿಧಾನ ಬದಲಾವಣೆ ಸೂರ್ಯ ಚಂದ್ರರಿರುವರೆಗೂ ಬದಲಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದ ಅವರು, ರಾಜ್ಯದಲ್ಲಿನ ಶಾಂತಿ ಕದಡಿಸುತ್ತಿರುವ ಕೋಮುವಾದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಲ್ಲೇಶ್ ಭಜಂತ್ರಿ, ಶಫೀ ನಗರಕಟ್ಡಿ, ಎಂ.ಪಿ.ಮುಳುಗುಂದ, ಅಕ್ಬರ್ ಅಲಿ ಬೇಗ್, ಗಣೇಶ ಹುಬ್ಬಳ್ಳಿ, ಇರ್ಫಾನ್ ಡಂಬಳ, ಲಾಡಸಾಬ್ ಕಿತ್ತೂರ, ಫ್ರಾನ್ಸಿಸ್ ಕಣಯ್ಯ, ಮುಬಾರಕ್ ನರೇಗಲ್, ಮೆಹಬೂಬ್ ಕುರಹಟ್ಟಿ, ಖ್ವಾಜಾ ಸೈಯದ್, ಚಾಂದ್ ಕೊಟ್ಟೂರು, ಚಿದಾನಂದ, ಮಹಮ್ಮದ್, ದಾವಲಸಾಬ್, ತೌಸೀಫ್, ಜಿಶಾನ್ ಖಾಜಿ, ಆಂಜನೇಯ, ವೀರೇಶ್ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ನದಾಫ್ ಹಾಗೂ ಪಿಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಸ್.ಕೆ.ನದಾಫ್ ಒತ್ತಾಯ
ವಿಜಯಸಾಕ್ಷಿ ಸುದ್ದಿ, ಗದಗ:
ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ವೇಳೆ ನದಾಫ್ ಹಾಗೂ ಪಿಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ, 50-100 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಫೆ.10ರಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ನದಾಫ್ ಹಾಗೂ ಪಿಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಸ್.ಕೆ.ನದಾಫ್ ತಿಳಿಸಿದರು.
ಮಂಗಳವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ನದಾಫ್ ಹಾಗೂ ಪಿಂಜಾರ್ ಜನಾಂಗಕ್ಕೆ ಸೇರಿದ ನಾವುಗಳು ಶೋಷಿತ ಹಾಗೂ ಬಡತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ರಾಜ್ಯದಲ್ಲಿ 25-30 ಲಕ್ಷ ಜನಸಂಖ್ಯೆ ಇದ್ದು, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದೇವೆ. ಹೀಗಾಗಿ ನಮ್ಮ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ನದಾಫ್ ಹಾಗೂ ಪಿಂಜಾರ ಸಮಾಜದವರು ಅರಳೆ ಹತ್ತಿಯ ಮೂಟೆಗಳನ್ನು ಸೈಕಲ್‌ಗಳ ಮೇಲೆ ಹೇರಿಕೊಂಡು ಬೀದಿ ಬೀದಿ ಸುತ್ತುವುದು, ಅನಿರ್ದಿಷ್ಟ ಸ್ಥಳ ಮತ್ತು ಕಾಲಗಳಲ್ಲಿ ಸಂಚರಿಸಿ ಜೀವನ ಸಾಗಿಸುತ್ತಿದ್ದಾರೆ. ದೂರದ ಪರ ಊರುಗಳಿಂದ ಅರೆ ಅಲೆಮಾರಿ ವೃತ್ತಿಪರರು ಅಪರಿಚಿತ ಸ್ಥಳ, ಹಾಳು ಮಂಟಪ, ಊರ ಬಯಲು, ದೇವಸ್ಥಾನ, ಮಸೀದಿಗಳ ಆವರಣದಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ರಾತ್ರಿಗಳನ್ನು ಕಳೆಯಬೇಕಾಗಿದೆ.
ರಾಜ್ಯದಲ್ಲಿ ಅಲೆಮಾರಿ ಎಂದು ಗುರುತಿಸಿರುವ ಈ ಸಮುದಾಯದ ಜನರಿಗೆ ಸದ್ಯ ಪ್ರವರ್ಗ-1 ಮೀಸಲಾತಿ ಸೌಲಭ್ಯ ನೀಡಲು ಅವಕಾಶ ಇದ್ದರೂ ಕೆಲವು ಜಿಲ್ಲೆಯಲ್ಲಿ ಇದನ್ನು ಸಹಿತ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇನಾಮು ನೀಡಿದ ಜಮೀನನ್ನು ಸಚಿವ ಹಾಲಪ್ಪ ಆಚಾರ್ ಅವರ ಅಳಿಯ ಬಸವರಾಜ ಖರೀದಿಸಿ, ಬಡವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಹನುಮಂತಪ್ಪ ಮದ್ಲೂರು ಆರೋಪಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಯಲಬುರ್ಗಾ ತಾಲ್ಲೂಕಿನ ವಜ್ರಬಂಡಿ ಸರ್ವೇ ನಂಬರ್ 17ರಲ್ಲಿ 18.12 ಗುಂಟೆ ಜಮೀನುನನ್ನು ಕಳೆದ ಐವತ್ತು ವರ್ಷಗಳಿಂದ ನಾವು ಉಳಿಮೆ ಮಾಡಿಕೊಂಡು ಬಂದಿದ್ದು, ಈಗ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಚಿವ ಹಾಲಪ್ಪ ಆಚಾರ್ ಅವರ ಅಳಿಯ ಬಸವರಾಜ ಖರೀದಿಸಿದ್ದು, ಇದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮದ ಹನುಮಂತಪ್ಪ ಮದ್ಲೂರು ತಿಳಿಸಿದರು.
ರಾಘವೇಂದ್ರ ಕಾಂತರಾಜ್ ಆಚಾರ್ ಎಂಬುವವರಿಂದ ನಮ್ಮ ತಂದೆ ಕಳಕಪ್ಪ ಜಮೀನು ಖರೀದಿಸಿದ್ದರು. ಇದರಲ್ಲಿ ನಾವು ಅನೇಕ ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿದ್ದೇವೆ. ಇದು ಇನಾಂ ಜಮೀನು ಆಗಿದ್ದು, ಕಾನೂನು ಪ್ರಕಾರ ನಮಗೆ ಅವರು ಖರೀದಿ ಪತ್ರ ಬರೆದುಕೊಟ್ಟಿದ್ದಾರೆ. ಆದರೆ ನಾವು ಅನಕ್ಷರಸ್ಥರಾಗಿರುವುದರಿಂದ ನಮ್ಮ ಮನೆತನದವರು ಪಹಣಿ ಪತ್ರ, ಮ್ಯೂಟೇಶನ್ ಮಾಡಿಸಿಕೊಂಡಿಲ್ಲ ಎಂದರು.
ಕಾಂತಾರಾಜ್ ಎಂಬುವವರಿಗೆ ರಮಾಬಾಯಿ ಎಂಬ ಪುತ್ರಿಯನ್ನು ಸೃಷ್ಟಿಸಿ ಅವರಿಂದ ಖರೀದಿ ಬರೆಸಿಕೊಂಡಿದ್ದಾರೆ. ತಕರಾರು ಇದ್ದ ಜಮೀನನ್ನು ಖರೀದಿಸಿದ್ದಾರೆ. ಅದು ಪಹಣಿ ಆಗಿದ್ದರೂ ಇನ್ನೂ ಮ್ಯೂಟೇಶನ್ ಆಗಿಲ್ಲ. ಆದ್ದರಿಂದ ಸಚಿವರ ಅಳಿಯ ಬಸವರಾಜ ಅವರು ಪ್ರಭಾವಿಗಳು, ಶ್ರೀಮಂತರಾಗಿರುವುದರಿಂದ ನಮ್ಮ ಕಬ್ಜಾ ಇರುವ ಜಮೀನನ್ನು ಖರೀದಿಸಿ ಅನ್ಯಾಯ ಮಾಡಬಾರದು ಎಂದು ಮನವಿ ಮಾಡಿದರು.
ಅಲ್ಲದೆ ಈ ವ್ಯಾಜ್ಯ ಜಿಲ್ಲಾ ನ್ಯಾಯಾಲಯದಲ್ಲಿದೆ. ಈ ಜಮೀನಿಗೆ ಸಂಬಂಧಿಸಿದ ಖರೀದಿ ಪತ್ರ, ಸಾಗುವಳಿ ಪತ್ರ, ಕಬ್ಜಾವತಿ ಸೇರಿದಂತೆ ಎಲ್ಲ ದಾಖಲೆಗಳು ಇವೆ. ಅಲ್ಲದೆ ನಾವೇ ಉಳಿಮೆ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈಗ ಸಮೀಪದಲ್ಲಿ ಗ್ರ್ಯಾನೈಟ್ ಗಣಿಗಾರಿಕೆ ನಡೆಯುತ್ತಿರುವುದರಿಂದ ಈ ಜಮೀನಿನ ಮೂಲಕ ಹಾಯ್ದು ಹೋಗಲು ಇಲ್ಲದವರನ್ನು ಸೃಷ್ಟಿ ಮಾಡಿ ಖರೀದಿ ಮಾಡಿದ್ದಾರೆ. ರಮಾಬಾಯಿ ಎನ್ನುವವರು ಗ್ರಾಮದಲ್ಲಿ ಯಾರೂ ಇಲ್ಲ ಎಂದರು.
ಇನಾಂ ಜಮೀನು ನಾವು ಸಾಗುವಳಿ ಮಾಡುತ್ತಿದ್ದಾಗ, ಇಂದಿರಾ ಗಾಂಧಿ ಅವರ ಕಾಲದಲ್ಲಿ ಊಳುವವನೆ ಒಡೆಯ ಎಂಬ ಕಾನೂನು ಬಂದಾಗ ಜಮೀನಿನ ಸಂಪೂರ್ಣ ಹಕ್ಕು ನಮ್ಮದೇ ಇದೆ. 2018ರಲ್ಲಿ ಈ ಕುರಿತು ಅವರ ಸಂಬಂಧಿಕರೆಂದು ಹೇಳಿಕೊಂಡು ಕೊಪ್ಪಳ, ಹೊಸಪೇಟೆ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಆ ಜಮೀನು ಖರೀದಿಸಲು ನಮಗೆ ತಕರಾರು ಇದೆ ಎಂದರು.
ಗ್ರಾಮದ ಬಸವರಾಜ ಬೊಮ್ಮನಾಳ ಎಂಬುವವರು ಮಾತನಾಡಿ, ರೈತರು ಉಳಿಮೆ ಮಾಡುತ್ತಿರುವ ಈ ಜಮೀನನ್ನು ಸಮೀಪದಲ್ಲಿಯೇ ಗಣಿಗಾರಿಕೆ ನಡೆಸುತ್ತಿರುವ ಸಚಿವ ಹಾಲಪ್ಪ ಆಚಾರ ಅವರ ಅಳಿಯ ಬಸವರಾಜ ರಾಜೂರು ಎಂಬುವವರು ಖರೀದಿಸಿದ್ದಾರೆ. ಈ ಜಮೀನಿನ ಮೂಲಕ ಹಾಯ್ದು ಹೋಗಲು ಸರಳವಾಗುತ್ತಿದೆ ಎಂಬ ಲೆಕ್ಕಾಚಾರದಲ್ಲಿ ಅವರು ಖರೀದಿಸಿದ್ದಾರೆ ಎಂದು ಆರೋಪಿಸಿದರು.
ದಶಕಗಳಿಂದ ಉಳಿಮೆ ಮಾಡುತ್ತಾ ಬಂದಿರುವ ನಮ್ಮ ಜಮೀನನ್ನು ಬಸವರಾಜ ರಾಜೂರು (ಗೌರಾ ಬಸವರಾಜ) ಎಂಬುವರು ಖರೀದಿಸಿದ್ದು, ಬಡವರ ಜಮೀನು ಕಿತ್ತುಕೊಳ್ಳಲು ಮಾಡಿರುವ ಹುನ್ನಾರ ಇದು. –ಹನಮಂತಪ್ಪ ಮುದ್ಲಾಪುರ, ವಜ್ರಬಂಡಿ ಗ್ರಾಮಸ್ಥ
ಸಚಿವ ಹಾಲಪ್ಪ ಆಚಾರ್ ಅವರ ಹೆಸರನ್ನು ಈ ವಿಷಯಕ್ಕೆ ತಳುಕು ಹಾಕುವುದು ಸಮಂಜಸವಲ್ಲ. ನಾನು ವ್ಯವಹಾರಸ್ಥ. ನನಗೆ ನನ್ನದೇ ಆದ ಐಡೆಂಟಿಟಿ ಇದೆ. ರಮಾಬಾಯಿ ಎಂಬುವವರಿಗೆ ಸೇರಿದ ಜಮೀನನ್ನು ದಾಖಲೆ ನೋಡಿ, ವಕೀಲರ ಸಲಹೆ ಪಡೆದು ಖರೀದಿಸಿದ್ದೇನೆ. ಈ ಜಮೀನಿಗೆ ಸಂಬಂಧಿಸಿದಂತೆ ಸಮರ್ಪಕ ದಾಖಲೆ ನೀಡಿದರೆ ಅವರೇ ಪಡೆದುಕೊಳ್ಳಲಿ. ಇದಕ್ಕೆ ನಮ್ಮ ತಕರಾರೇನಿಲ್ಲ. -ಬಸವರಾಜ ರಾಜೂರು, ಜಮೀನು ಖರೀದಿದಾರ.
ನಾಳೆಯಿಂದ ರಾಜ್ಯದ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳಿಗೆ ಸರ್ಕಾರ ಮೂರು ದಿನಗಳವರೆಗೆ ರಜೆ ಘೋಷಿಸಿ ಆದೇಶಿಸಿದೆ.
ಹಿಜಾಬ್-ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಕಾಲೇಜುಗಳಿಗೆ ಸರ್ಕಾರ ಮೂರು ದಿನಗಳ ಕಾಲ ರಜೆ ಘೋಷಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ರಾಜ್ಯಾದ್ಯಂತ ಹಿಜಾಬ್ ವಿವಾದ ತಾರಕಕ್ಕೇರುತ್ತಿದ್ದಂತೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮಂಗಳವಾರ ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ನಾಳೆ 2.30ಕ್ಕೆ ವಿಚಾರಣೆ ಮುಂದೂಡಿದೆ.
–ತಿಳಿ ಹೇಳಿದರೂ ಧಮ್ಕಿ ಹಾಕಿ ಸ್ವೀಕೃತಿ ಪತ್ರ ಪಡೆದರು: ಪಿಡಿಓ
ವಿಜಯಸಾಕ್ಷಿ ವಿಶೇಷ ಸುದ್ದಿ, ಕೊಪ್ಪಳ: ಏನಾದರೂ ಸಾರ್ವಜನಿಕ ಸಮಸ್ಯೆಗಳಿದ್ದರೆ ದೂರು ನೀಡುವುದು, ಕೊಟ್ಟಿರುವ ದೂರಿಗೆ ಸ್ವೀಕೃತಿ ಪತ್ರ ಪಡೆಯುವುದು ಸಾಮಾನ್ಯ. ನೌಕರಿ, ಆಸ್ತಿ ಮತ್ತಿತರ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಖಾಸಗಿಯಾಗಿಯೂ ಸ್ವೀಕೃತಿ ಪತ್ರ ಪಡೆಯುವುದು ಗೊತ್ತಿರುವ ಸಂಗತಿ. ಆದರೆ ಕೊಪ್ಪಳ ಜಿಲ್ಲೆಯ ಗ್ರಾಮ ಪಂಚಾಯತಿಯೊಂದು ನನ್ನ ಸಾವಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳೇ ಕಾರಣ ಎಂದು ಕೊಟ್ಟಿರುವ ಪತ್ರಕ್ಕೆ ಸ್ವೀಕೃತಿ ನೀಡಿ, ದೂರ ಇದರ ನನ್ನು ಪರೋಕ್ಷವಾಗಿ ‘ಸತ್ತು ಹೋಗು” ಎಂದು ಹೇಳಿದಂತಿದೆ.
ವಿಷಯ ಇಷ್ಟೇ: ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ 2022ರ ಜನವರಿ 1ರಿಂದ 8ರವರೆಗೆ ನರೇಗಾ ಯೋಜನೆಯಡಿ ಮಂಗಳೂರಿನ ಮಂಜುನಾಥ ಕಂಬಾರ ಅವರ ಹೊಲದಲ್ಲಿ ಕೃಷಿಹೊಂಡ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ ಸುಮಾರು 65 ಸಾವಿರ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಗ್ರಾಮ ಪಂಚಾಯತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ್.ಜಿ ಅವರು,ಅನುದಾನ ಬಿಡುಗಡೆಗೊಳಿಸಲು 15 ಸಾವಿರ ಲಂಚ ಕೇಳಿದರೆಂದು ಫಲಾನುಭವಿ ಮಂಜುನಾಥ ಕಂಬಾರ ಆರೋಪಿಸಿದರು.
ಈ ವಿಷಯ ಕುರಿತು ಮಂಗಳವಾರ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸರಕಾರದ ನಿಯಮಾವಳಿ ಪ್ರಕಾರ ಕಾಮಗಾರಿ ನಡೆದಿದೆ. ಅವರು ಅನುದಾನ ನೀಡುವ ಭರವಸೆ ಕೊಟ್ಟ ನಂತರವೇ ಹಣ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಲಾಗಿದೆ. ಕೇಳಿದ ಲಂಚ ಕೊಡದಿರುವುದಕ್ಕೆ ಪಿಡಿಒ ಸತಾಯಿಸುತ್ತಿದ್ದಾರೆ ಎಂದು ಮಂಜುನಾಥ ದೂರಿದರು.
ಸಾಕಷ್ಟು ಬಾರಿ ವಿನಂತಿಸಿದರೂ ಪಿಡಿಓ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಸಾಕಷ್ಟು ಕಿರುಕುಳ ನೀಡಿದ್ದಾರೆ. ಇದರಿಂದ ರೋಸಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ, ನನ್ನ ಸಾವಿಗೆ ಗ್ರಾಮ ಪಂಚಾಯತಿ ಅಧಿಕಾರಿಗಳೇ ಕಾರಣ ಎಂದು ಬರೆದ ಪತ್ರವನ್ನು ಗ್ರಾಪಂಗೆ ನೀಡಿದ್ದು, ಅದಕ್ಕೂ ಗ್ರಾಪಂ ಸ್ವೀಕೃತಿ ನೀಡಿರುವುದನ್ನು ಗಮನಿಸಿದರೆ ಪರೋಕ್ಷವಾಗಿ “ಸತ್ತು ಹೋಗು” ಎನ್ನುವಂತಿದೆ ಗ್ರಾಮ ಪಂಚಾಯತಿ ನಿಲುವು ಎಂದು ಅವರು ಅಲವತ್ತುಕೊಂಡರು.
ಈ ವೇಳೆ ಮಂಗಳೂರಿನ ಹನುಮಂತಪ್ಪ ಕಂಬಾರ, ಮಾರುತಿ ಕಂಬಾರ, ಮಲ್ಲನಗೌಡ ಕೋಣನಗೌಡರ ಹಾಗೂ ಮುದುಕಪ್ಪ ಪೂಜಾರಿ ಇದ್ದರು.
ಲಂಚ ಕೇಳಿರುವ ಆರೋಪ ಶುದ್ಧ ಸುಳ್ಳು. ಇದಕ್ಕೆ ಒಂದೇ ಒಂದು ಸಾಕ್ಷ್ಯ ಒದಗಿಸಿದರೂ ಕೆಲಸ ಬಿಟ್ಟು ಬಿಡುವೆ. ಹಿಂದಿನಂತೆ ಪಂಚಾಯಿತಿಯಲ್ಲಿ “ಹೊಂದಿಕೊಂಡು” ಹೋಗಲು ಅವರೇ ಆಮಿಷ ಒಡ್ಡಿದರೂ, ಸರಕಾರಿ ನಿಯಮಗಳ ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅದು ಅವರಿಗೆ ನುಂಗಲಾರದ ತುತ್ತಾಗಿ ಈ ರೀತಿ ಷಡ್ಯಂತ್ರ ರೂಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಪತ್ರ ಪಂಚಾಯಿತಿಗೆ ಕೊಡಲು ಬಂದಾಗ ಕಚೇರಿಯ ಸಿಬ್ಬಂದಿ ತಿಳಿ ಹೇಳಿದರೂ ಕೇಳದೇ ನಮ್ಮ ಸಿಬ್ಬಂದಿಗೆ ಧಮ್ಕಿ ಹಾಕಿ ಸ್ವೀಕೃತಿ ಪತ್ರ ಪಡೆದಿದ್ದಾರೆ. ಈ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಕಾನೂನು ಚೌಕಟ್ಟಿನಲ್ಲಿ ನನ್ನ ಕೆಲಸ ನಾನು ಮಾಡುತ್ತೇನೆ. ಸಾಯುವುದಾಗಿ ಹೇಳುವವರನ್ನು ಎಂದಿಗೂ ಪ್ರಚೋದಿಸುವುದಿಲ್ಲ. -ವೀರೇಶ್.ಜಿ., ಪಿಡಿಓ, ಮಂಗಳೂರು ಗ್ರಾಪಂ, ಕುಕನೂರು ತಾಲೂಕು, ಕೊಪ್ಪಳ ಜಿಲ್ಲೆ.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಹಿಜಾಬ್-ಕೇಸರಿ ಕಿಚ್ಚು ಆರುತ್ತಿಲ್ಲ. ಹಿಜಾಬ್ ಹಾಕಿಕೊಂಡು ಬಂದಿರುವ ವಿದ್ಯಾರ್ಥಿಗಳನ್ನು ಕಾಲೇಜು ಸಿಬ್ಬಂದಿಗಳು ತರಗತಿಯಿಂದ ಹೊರ ಹಾಕಿದ್ದು, ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದಾರೆ.
ಗದಗನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕ್ಕೊಂಡು ಬಂದಿದ್ದಕ್ಕೆ ಕಾಲೇಜು ಸಿಬ್ಬಂದಿಗಳು ತರಗತಿಯಿಂದ ಹೊರಗೆ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು, ‘ನಿನ್ನೆ ತರಗತಿಗೆ ಕೇಸರಿ ಶಾಲು ಹಾಕಿಕೊಂಡು ಬಂದು, ತರಗತಿಯಲ್ಲಿ ಫೋಟೋ ತೆಗೆದುಕೊಂಡರು. ಅಲ್ಲದೇ, ಅವರನ್ನು ತರಗತಿಗೆ ಹಾಜರಾಗಲು ಅನುಮತಿಸಿದರು. ಇಷ್ಟು ದಿವಸ ಕೋಮು ಸೌಹಾರ್ದಯುತವಾಗಿ ಶಿಕ್ಷಣ ಕಲಿಯುತ್ತಿದ್ದೆವು. ಈಗ ನಮ್ಮನ್ನ ತರಗತಿಯಿಂದ ಹೊರಗೆ ಹಾಕಿಸಿ ಅವರು ಪಾಠ ಕೇಳುತ್ತಿದ್ದಾರೆ. ನಿನ್ನೆ ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ಹಾಕುವಂತೆ’ ಎಂದು ಒತ್ತಾಯಿಸಿದರು.
‘ಕಾಲೇಜು ಪ್ರವೇಶ ಪಡೆಯುವಾಗಲೇ ಹಿಜಾಬ್ ಹಾಕ್ಕೊಂಡು ಬಂದರೆ ಅನುಮತಿ ಇಲ್ಲ ಅಂತಾ ಹೇಳಬೇಕಿತ್ತು. ನಾವು ಕಾಲೇಜು ಪ್ರವೇಶ ಪಡೆಯಬೇಕೋ, ಬೇಡ್ವೋ ಎಂಬ ಬಗ್ಗೆ ತೀರ್ಮಾನ ಮಾಡುತ್ತಿದ್ದೆವು. ಇಷ್ಟು ದಿವಸ ಹಿಜಾಬ್ ಹಾಕಿಕೊಂಡು ಬಂದರೆ ಸುಮ್ಮನಿದ್ದವರು ಈಗ್ಯಾಕೆ ಹಿಜಾಬ್ ಹಾಕಿಕೊಂಡು ಬಂದರೆ ತರಗತಿಯಿಂದ ಹೊರಗೆ ಹಾಕುತ್ತಿದ್ದಾರೆ’ ಎಂದು ಪ್ರಶ್ನಿಸಿದರು.
‘ಪರೀಕ್ಷೆಗಳು ಸಮೀಪಿಸುತ್ತಿವೆ. ಈಗಷ್ಟೇ ಅತಿಥಿ ಉಪನ್ಯಾಸಕರು ಬಂದಿದ್ದಾರೆ. ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಬೇಕು. ಹೀಗೆ ತರಗತಿಯಿಂದ ಹೊರಗೆ ಹಾಕಿದರೆ ನಾವು ಪರೀಕ್ಷೆ ಬರೆಯುವುದಾದರೂ ಹೇಗೆ?. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅವರು ಉತ್ತೀರ್ಣ ಮಾಡುತ್ತಾರೆಯೇ? ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು’ ಪ್ರಶ್ನಿಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಕಾಲೇಜಿಗೆ ರಜೆ ಘೋಷಣೆ ಮಾಡಲಾಯಿತು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ಅಂಬೇಡ್ಕರ್ ಪೋಟೋ ತೆಗಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ನಡೆ ಖಂಡಿಸಿ ಫೆಬ್ರವರಿ 11ರಂದು ಕೊಪ್ಪಳ ಬಂದ್‌ಗೆ ಸಂವಿಧಾನ ಉಳಿಸಿ ಅಂದೋಲನ ಸಮಿತಿ ಹಾಗೂ ಇತರ ಜನಪರ ಸಂಘಟನೆಗಳು ಕರೆ ನೀಡಿದ್ದು ಸಾರ್ವಜನಿಕರು ಈ ಚಳವಳಿಗೆ ಸಹಕರಿಸಬೇಕು ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮನವಿ ಮಾಡಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಮಾಡಿದ ಈ ಅಪಮಾನ ವಿರುದ್ಧ ಕೊಪ್ಪಳ ಬಂದ್ ಹೋರಾಟಕ್ಕೆ ಕರೆ ನೀಡಲಾಗಿದ್ದು, ‘ ಗಾಂಧಿ ‘ ಹಾಗೂ ಅಂಬೇಡ್ಕರ್ ಫೋಟೋ ಇರಿಸಬೇಕೆಂಬುದು ಸಾಮಾನ್ಯ ತಿಳಿವಳಿಕೆ. ಹೀಗೆ ಇದ್ದಾಗ್ಯೂ , ಅಂಬೇಡ್ಕರವರಿಗೆ ಅವಮಾನ ಮಾಡುವಂತೆ ನ್ಯಾಯಾಧೀಶರ ನಡೆದುಕೊಂಡ ವರ್ತನೆಯ ವಿರುದ್ಧ ಈಗಾಗಲೇ ಎಲ್ಲ ಕಡೆಗೂ ಪ್ರತಿಭಟನೆ ನಡೆದಿವೆ. ನ್ಯಾಯದಾನ ನೀಡಬೇಕಾದ ಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಇವರ ವರ್ತನೆಯು ಈಗಾಗಲೇ ಜಾತೀವಾದ – ಕೋಮುವಾದಗಳ ಸಂಘರ್ಷದಲ್ಲಿ ಬೇಯುತ್ತಿರುವ ನಮ್ಮ ಸಮಾಜದಲ್ಲಿ ಮತ್ತಷ್ಟು ಧಗೆಯನ್ನು ಹುಟ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನ್ಯಾಯಾಧೀಶರ ಈ ನಡೆಯು ಅವರ ಉದ್ದೇಶವನ್ನು ಪ್ರಶ್ನಾರ್ಹವನ್ನಾಗಿಸುತ್ತದೆ . ಇಂತಹ ವಿವಾದಗಳು ಜನರ ಗಮನವನ್ನು ಅವರ ಮೂಲಭೂತ ಸಮಸ್ಯೆಗಳಿಂದ ದಿಕ್ಕು ತಪ್ಪಿಸುತ್ತವೆ ಎಂಬುದನ್ನು ವಿವೇಚನಾರಹಿತರಾಗುವುದು ಸಾಧ್ಯವೇ ? ಎಂಬ ಪ್ರಶ್ನೆ ಎಲ್ಲಾ ಪ್ರಜ್ಞಾವಂತರನ್ನೂ ಕಾಡುತ್ತಿದೆ . ಘಟನೆ ಅರಿಯದಷ್ಟು ನಡೆದು ಇಷ್ಟು ದಿನ ಕಳೆದರೂ ಕರ್ನಾಟಕದ ಮುಖ್ಯಮಂತ್ರಿಗಳಾಗಲಿ , ಹೈಕೋರ್ಟ ಮುಖ್ಯ ನ್ಯಾಯಾಧೀಶರಾಗಲಿ , ಕಾನೂನು ಸಚಿವರಾಗಲಿ , ಗೃಹ ಸಚಿವರಾಗಲಿ ಈ ಕುರಿತು ಮೌನ ವಹಿಸಿರುವುದು ವಿಷಾದದ ಸಂಗತಿ ಎಂದರು.
ಫೆ.11ರಂದು ಈ ವಿಷಯ ಖಂಡಿಸಿ ಕೊಪ್ಪಳ ಬಂದ್ ಹೋರಾಟ ಅಂಬೇಡ್ಕರ್ ಸರ್ಕಲ್‌ದಿಂದ ಮೆರವಣಿಗೆ ಪ್ರಾರಂಭವಾಗಿ ಗಡಿಯಾರ ಕಂಬ , ಅಶೋಕ್ ಸರ್ಕಲ್ ಮೂಲಕ ಗಂಜ್ ಸರ್ಕಲ್ ನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿ , ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಮುಕ್ತಾಯಗೊಳಿಸಲಾಗುವುದು. ಅಂದಿನ ಆ ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಪಾಲ್ಗೊಳ್ಳುವುದರ ಮೂಲಕ ಕೊಪ್ಪಳ ಬಂದ್ ಚಳುವಳಿಯನ್ನು ಯಶಸ್ವಿಗೊಳಿಸಬೇಕೆಂದು ಸಂವಿಧಾನ ಸಂಘಟನೆಗಳು , ವಿದ್ಯಾರ್ಥಿ ಸಂಘಟನೆಗಳು , ಸಮಸ್ತ ಜನತೆ ಉಳಿಸಿ ಆಂದೋಲನ ಸಮಿತಿಯು ಕೊಪ್ಪಳ ವಿನಂತಿಸಿಕೊಳ್ಳುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗಾಳೆಪ್ಪ ಕಡೆಮನಿ, ಬಸವ ಕೇಂದ್ರದ ರಾಜು ಶಶಿಮಠ ಚಲುವಾದಿ ಸಮಾಜ ಮುಖಂಡ ಸಿದ್ಧಪ್ಪ ಹೊಸಮನಿ, ವಾಲ್ಮೀಕಿ ಸಮಾಜದ ಮುಖಂಡ ರಾಮಣ್ಣ ಕಲ್ಲಣ್ಣನವರ್, ಹಾಲುಮತ ಸಮಾಜದ ಹನುಮಂತಪ್ಪ ಕೌದಿ, ಯಲ್ಲಪ್ಪ ಕಲ್ಲಣೆದೇವರ, ಲೋಕೇಶ್ ಭಜಂತ್ರಿ, ಯಂಕನಗೌಡ ಹೊರತಟ್ನಾಳ, ಶಂಕರ ನಾಯಕ, ಗೈಬುಸಾಬ ಚಟ್ಟಿ ಎ.ವಿ. ಕಣವಿ, ಈಶಣ್ಣ ಕೊರ್ಲಹಳ್ಳಿ, ಪರಶುರಾಮ, ಯಲ್ಲಪ್ಪ ಬಳಗನೂರು, ನಾಗರಾಜ, ಬಾಲಚಂದ್ರ, ಈರಣ್ಣ ಹುಣಸಿನ ಮರ, ಸಂಗಮೇಶ ಬಾದವಾಡಗಿ, ರಮೇಶ ಹಡಪದ್ ಮತ್ತಿತರರು ಇದ್ದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇಲ್ಲಿನ ಕಲ್ಯಾಣ ನಗರ ನಿವಾಸಿ, ರಜಿಯಾಬೇಗಂ ಕುಷ್ಟಗಿ (76) ಅಲ್ಪಕಾಲದ ಅನಾರೋಗ್ಯದಿಂದ ಇಂದು (ಫೆ.8) ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಪತಿ, ನಿವೃತ್ತ ಶಿಕ್ಷಕ ಎಂ.ಡಿ.ಹುಸೇನ್ ಕುಷ್ಟಗಿ, ಮಗ ಸಜ್ಜಾದ ಹುಸೇನ್ ಸೇರಿದಂತೆ ಒಟ್ಟು ಐವರು ಪುತ್ರರು, ನಾಲ್ವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ 5 ಗಂಟೆಗೆ ಕಿನ್ನಾಳ ರಸ್ತೆಯ ಖಬರ್‌ಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತಾಕತ್ತಿದ್ದರೆ ಸಂಸದ ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿ ಜೊತೆ ಸೆಲ್ಫಿ ತಗೊಂಡ್ ಬರಲಿ ನೋಡೋಣ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದರು.
ಕೊಪ್ಪಳದ ಚಿಕ್ಕ ಜಂತಕಲ್ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಪಿಎಂ ಜೊತೆ ಸೆಲ್ಫಿ ತೆಗೆದುಕೊಂಡು ಬರಲಿ ತೋರಿಸಲಿ. ಪ್ರತಾಪ್ ಸಿಂಹ ಎಂಥ ಯೋಗ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಎರಡು ಬಾರಿ ಸಂಸದರಾದ ಮಾತ್ರಕ್ಕೆ ಪ್ರತಾಪ್ ದೊಡ್ಡವರಾಗುವುದಿಲ್ಲ, ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯೋಗ್ಯತೆ ಪ್ರತಾಪ್ ಸಿಂಹಗಿಲ್ಲ. ಅವನೊಬ್ಬ ವೇಸ್ಟ್ ಬಾಡಿ ಎಂದು ಹರಿಹಾಯ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ದರಹೀಮ್ ಎಂದಿರುವ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯನವರಿಗೆ ಸಮವೇ? ಎಂದು ಪ್ರಶ್ನಿಸಿದ ಅವರು, ಹಿಜಾಬ್ ಧರಿಸಿ ಶಾಲೆಗೆ ಬಾರದಂತೆ ರಾಜ್ಯ ಸರ್ಕಾರ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕಾಗಿ ಇಂಥ ವಿಚಾರದಲ್ಲಿ ಚರ್ಚೆ ಮಾಡ್ತಿದೆ ಎಂದು ವ್ಯಂಗ್ಯವಾಡಿದರು.
ಸರ್ಕಾರಿ ಶಾಲೆಗೆ ಸೂಕ್ತ ಕಟ್ಟಡ ಇಲ್ಲ, ಸಾಕಷ್ಟು ಕಡೆ ಶಿಕ್ಷಕರಿಲ್ಲ. ಹೀಗಿರುವಾಗ ಹಿಜಾಬ್, ಶಾಲು ಅಂತಾ ಚರ್ಚೆ ಮಾಡಿದರೆ ಇವರಿಗೆ ಬೇರೆ ಕೆಲಸ ಇಲ್ಲ ಅಂಥಾನೇ ಅರ್ಥ. ಜನರ ದಾರಿ ತಪ್ಪಿಸುವುದೇ ಬಿಜೆಪಿ ಕೆಲಸ. ಸಮವಸ್ತ್ರದ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ. ಮಕ್ಕಳಲ್ಲೂ ವಿಷ ಬೀಜ ಬಿತ್ತಿದರೆ ಪರಿಸ್ಥಿತಿ ಎಲ್ಲಿಗೆ ಬಂತು? ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಜಾತಿ, ಧರ್ಮ ಬಿಟ್ಟು ಒಗ್ಗಟ್ಟಾಗಿದ್ದೇವೆ. ಶಾಲೆಯಲ್ಲಿ ಧರ್ಮದ ವಿಷ ಬೀಜ ಬಿತ್ತುವ ಮಟ್ಟಕ್ಕೆ ಬಿಜೆಪಿ ಇದೆ. ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಲು ಹೀಗೆ ಮಾಡ್ತಿದೆ. ವೋಟ್ ಬ್ಯಾಂಕ್‌ಗಾಗಿ ಬಿಜೆಪಿ ಹಿಜಾಬ್ ಎಳೆದು ತಂದಿದೆ ಎಂದು ಅವರು ಆರೋಪಿಸಿದರು.