Home Blog Page 3252

ಚಳವಳಿಗೆ ಸಾರ್ವಜನಿಕರು ಸಹಕರಿಸಲು ಮನವಿ

0

-ಫೆ.11ರಂದು ಕೊಪ್ಪಳ ಬಂದ್‌

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಗಣರಾಜ್ಯೋತ್ಸವ ದಿನದಂದು ರಾಯಚೂರಿನಲ್ಲಿ ಅಂಬೇಡ್ಕರ್ ಪೋಟೋ ತೆಗಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ನಡೆ ಖಂಡಿಸಿ ಫೆಬ್ರವರಿ 11ರಂದು ಕೊಪ್ಪಳ ಬಂದ್‌ಗೆ
ಸಂವಿಧಾನ ಉಳಿಸಿ ಅಂದೋಲನ ಸಮಿತಿ ಹಾಗೂ ಇತರ ಜನಪರ ಸಂಘಟನೆಗಳು ಕರೆ ನೀಡಿದ್ದು ಸಾರ್ವಜನಿಕರು ಈ ಚಳವಳಿಗೆ ಸಹಕರಿಸಬೇಕು ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮನವಿ ಮಾಡಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರಿಗೆ ಮಾಡಿದ ಈ ಅಪಮಾನ ವಿರುದ್ಧ ಕೊಪ್ಪಳ ಬಂದ್ ಹೋರಾಟಕ್ಕೆ ಕರೆ ನೀಡಲಾಗಿದ್ದು, ‘ ಗಾಂಧಿ ‘ ಹಾಗೂ ಅಂಬೇಡ್ಕರ್ ಫೋಟೋ ಇರಿಸಬೇಕೆಂಬುದು ಸಾಮಾನ್ಯ ತಿಳಿವಳಿಕೆ. ಹೀಗೆ ಇದ್ದಾಗ್ಯೂ , ಅಂಬೇಡ್ಕರವರಿಗೆ ಅವಮಾನ ಮಾಡುವಂತೆ ನ್ಯಾಯಾಧೀಶರ ನಡೆದುಕೊಂಡ ವರ್ತನೆಯ ವಿರುದ್ಧ ಈಗಾಗಲೇ ಎಲ್ಲ ಕಡೆಗೂ ಪ್ರತಿಭಟನೆ ನಡೆದಿವೆ. ನ್ಯಾಯದಾನ ನೀಡಬೇಕಾದ ಸ್ಥಾನದಲ್ಲಿ ಕುಳಿತಿರುವ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಇವರ ವರ್ತನೆಯು ಈಗಾಗಲೇ ಜಾತೀವಾದ – ಕೋಮುವಾದಗಳ ಸಂಘರ್ಷದಲ್ಲಿ ಬೇಯುತ್ತಿರುವ ನಮ್ಮ ಸಮಾಜದಲ್ಲಿ ಮತ್ತಷ್ಟು ಧಗೆಯನ್ನು ಹುಟ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನ್ಯಾಯಾಧೀಶರ ಈ ನಡೆಯು ಅವರ ಉದ್ದೇಶವನ್ನು ಪ್ರಶ್ನಾರ್ಹವನ್ನಾಗಿಸುತ್ತದೆ . ಇಂತಹ ವಿವಾದಗಳು ಜನರ ಗಮನವನ್ನು ಅವರ ಮೂಲಭೂತ ಸಮಸ್ಯೆಗಳಿಂದ ದಿಕ್ಕು ತಪ್ಪಿಸುತ್ತವೆ ಎಂಬುದನ್ನು ವಿವೇಚನಾರಹಿತರಾಗುವುದು ಸಾಧ್ಯವೇ ? ಎಂಬ ಪ್ರಶ್ನೆ ಎಲ್ಲಾ ಪ್ರಜ್ಞಾವಂತರನ್ನೂ ಕಾಡುತ್ತಿದೆ . ಘಟನೆ ಅರಿಯದಷ್ಟು ನಡೆದು ಇಷ್ಟು ದಿನ ಕಳೆದರೂ ಕರ್ನಾಟಕದ ಮುಖ್ಯಮಂತ್ರಿಗಳಾಗಲಿ , ಹೈಕೋರ್ಟ ಮುಖ್ಯ ನ್ಯಾಯಾಧೀಶರಾಗಲಿ , ಕಾನೂನು ಸಚಿವರಾಗಲಿ , ಗೃಹ ಸಚಿವರಾಗಲಿ ಈ ಕುರಿತು ಮೌನ ವಹಿಸಿರುವುದು ವಿಷಾದದ ಸಂಗತಿ ಎಂದರು.

ಫೆ.11ರಂದು ಈ ವಿಷಯ ಖಂಡಿಸಿ ಕೊಪ್ಪಳ ಬಂದ್ ಹೋರಾಟ ಅಂಬೇಡ್ಕರ್‌ ಸರ್ಕಲ್‌ದಿಂದ ಮೆರವಣಿಗೆ ಪ್ರಾರಂಭವಾಗಿ ಗಡಿಯಾರ ಕಂಬ , ಅಶೋಕ್ ಸರ್ಕಲ್ ಮೂಲಕ ಗಂಜ್ ಸರ್ಕಲ್ ನಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿ , ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಮುಕ್ತಾಯಗೊಳಿಸಲಾಗುವುದು. ಅಂದಿನ ಆ ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ರೈತ ಪಾಲ್ಗೊಳ್ಳುವುದರ ಮೂಲಕ ಕೊಪ್ಪಳ ಬಂದ್ ಚಳುವಳಿಯನ್ನು ಯಶಸ್ವಿಗೊಳಿಸಬೇಕೆಂದು ಸಂವಿಧಾನ ಸಂಘಟನೆಗಳು , ವಿದ್ಯಾರ್ಥಿ ಸಂಘಟನೆಗಳು , ಸಮಸ್ತ ಜನತೆ ಉಳಿಸಿ ಆಂದೋಲನ ಸಮಿತಿಯು ಕೊಪ್ಪಳ ವಿನಂತಿಸಿಕೊಳ್ಳುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗಾಳೆಪ್ಪ ಕಡೆಮನಿ, ಬಸವ ಕೇಂದ್ರದ ರಾಜು ಶಶಿಮಠ ಚಲುವಾದಿ ಸಮಾಜ ಮುಖಂಡ ಸಿದ್ಧಪ್ಪ ಹೊಸಮನಿ, ವಾಲ್ಮೀಕಿ ಸಮಾಜದ ಮುಖಂಡ
ರಾಮಣ್ಣ ಕಲ್ಲಣ್ಣನವರ್, ಹಾಲುಮತ ಸಮಾಜದ ಹನುಮಂತಪ್ಪ ಕೌದಿ, ಯಲ್ಲಪ್ಪ ಕಲ್ಲಣೆದೇವರ, ಲೋಕೇಶ್ ಭಜಂತ್ರಿ, ಯಂಕನಗೌಡ ಹೊರತಟ್ನಾಳ, ಶಂಕರ ನಾಯಕ, ಗೈಬುಸಾಬ ಚಟ್ಟಿ ಎ.ವಿ. ಕಣವಿ, ಈಶಣ್ಣ ಕೊರ್ಲಹಳ್ಳಿ, ಪರಶುರಾಮ, ಯಲ್ಲಪ್ಪ ಬಳಗನೂರು, ನಾಗರಾಜ, ಬಾಲಚಂದ್ರ, ಈರಣ್ಣ ಹುಣಸಿನ ಮರ, ಸಂಗಮೇಶ ಬಾದವಾಡಗಿ, ರಮೇಶ ಹಡಪದ್ ಮತ್ತಿತರರು ಇದ್ದರು.

ರಜಿಯಾಬೇಗಂ ಕುಷ್ಟಗಿ ನಿಧನ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಇಲ್ಲಿನ ಕಲ್ಯಾಣ ನಗರ ನಿವಾಸಿ, ರಜಿಯಾಬೇಗಂ ಕುಷ್ಟಗಿ (76) ಅಲ್ಪಕಾಲದ ಅನಾರೋಗ್ಯದಿಂದ ಇಂದು (ಫೆ.8) ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.

ಪತಿ, ನಿವೃತ್ತ ಶಿಕ್ಷಕ ಎಂ.ಡಿ.ಹುಸೇನ್ ಕುಷ್ಟಗಿ, ಮಗ ಸಜ್ಜಾದ ಹುಸೇನ್ ಸೇರಿದಂತೆ ಒಟ್ಟು ಐವರು ಪುತ್ರರು, ನಾಲ್ವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ 5 ಗಂಟೆಗೆ ಕಿನ್ನಾಳ ರಸ್ತೆಯ ಖಬರ್‌ಸ್ಥಾನದಲ್ಲಿ ನಡೆಯಲಿದೆ ಎಂದು‌ ಕುಟುಂಬದ ಮೂಲಗಳು ತಿಳಿಸಿವೆ.

ತಾಕತ್ತಿದ್ದರೆ ಪಿಎಂ ಜೊತೆ ಸೆಲ್ಫಿ ತಕ್ಕೊಂಡ್ ಬನ್ನಿ

0

-ಸಂಸದ ಪ್ರತಾಪ್ ಸಿಂಹಗೆ ಮಾಜಿ ಸಚಿವ ತಂಗಡಗಿ ಸವಾಲು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ತಾಕತ್ತಿದ್ದರೆ ಸಂಸದ ಪ್ರತಾಪ್ ಸಿಂಹ ಪ್ರಧಾನಿ ನರೇಂದ್ರ ಮೋದಿ ಜೊತೆ ಸೆಲ್ಫಿ ತಗೊಂಡ್ ಬರಲಿ ನೋಡೋಣ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದರು.

ಕೊಪ್ಪಳದ ಚಿಕ್ಕ ಜಂತಕಲ್ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಪಿಎಂ‌ ಜೊತೆ ಸೆಲ್ಫಿ ತೆಗೆದುಕೊಂಡು ಬರಲಿ ತೋರಿಸಲಿ. ಪ್ರತಾಪ್ ಸಿಂಹ ಎಂಥ ಯೋಗ್ಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಎರಡು ಬಾರಿ ಸಂಸದರಾದ ಮಾತ್ರಕ್ಕೆ ಪ್ರತಾಪ್ ದೊಡ್ಡವರಾಗುವುದಿಲ್ಲ, ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಯೋಗ್ಯತೆ ಪ್ರತಾಪ್ ಸಿಂಹಗಿಲ್ಲ. ಅವನೊಬ್ಬ ವೇಸ್ಟ್ ಬಾಡಿ ಎಂದು ಹರಿಹಾಯ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ದರಹೀಮ್ ಎಂದಿರುವ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯನವರಿಗೆ ಸಮವೇ? ಎಂದು ಪ್ರಶ್ನಿಸಿದ ಅವರು, ಹಿಜಾಬ್ ಧರಿಸಿ ಶಾಲೆಗೆ ಬಾರದಂತೆ ರಾಜ್ಯ ಸರ್ಕಾರ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ಲ. ಅದಕ್ಕಾಗಿ ಇಂಥ ವಿಚಾರದಲ್ಲಿ ಚರ್ಚೆ ಮಾಡ್ತಿದೆ ಎಂದು ವ್ಯಂಗ್ಯವಾಡಿದರು.

ಸರ್ಕಾರಿ ಶಾಲೆಗೆ ಸೂಕ್ತ ಕಟ್ಟಡ ಇಲ್ಲ, ಸಾಕಷ್ಟು ಕಡೆ ಶಿಕ್ಷಕರಿಲ್ಲ. ಹೀಗಿರುವಾಗ ಹಿಜಾಬ್, ಶಾಲು ಅಂತಾ ಚರ್ಚೆ ಮಾಡಿದರೆ ಇವರಿಗೆ ಬೇರೆ ಕೆಲಸ ಇಲ್ಲ ಅಂಥಾನೇ ಅರ್ಥ. ಜನರ ದಾರಿ ತಪ್ಪಿಸುವುದೇ ಬಿಜೆಪಿ ಕೆಲಸ. ಸಮವಸ್ತ್ರದ ಬಗ್ಗೆ ಚರ್ಚೆಯ ಅಗತ್ಯವೇ ಇಲ್ಲ.
ಮಕ್ಕಳಲ್ಲೂ ವಿಷ ಬೀಜ ಬಿತ್ತಿದರೆ ಪರಿಸ್ಥಿತಿ ಎಲ್ಲಿಗೆ ಬಂತು? ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಜಾತಿ, ಧರ್ಮ ಬಿಟ್ಟು ಒಗ್ಗಟ್ಟಾಗಿದ್ದೇವೆ. ಶಾಲೆಯಲ್ಲಿ ಧರ್ಮದ ‌ವಿಷ ಬೀಜ ಬಿತ್ತುವ ಮಟ್ಟಕ್ಕೆ ಬಿಜೆಪಿ ಇದೆ. ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯ ಮುಚ್ಚಲು ಹೀಗೆ ಮಾಡ್ತಿದೆ. ವೋಟ್ ಬ್ಯಾಂಕ್‌ಗಾಗಿ ಬಿಜೆಪಿ ಹಿಜಾಬ್ ಎಳೆದು ತಂದಿದೆ ಎಂದು ಅವರು ಆರೋಪಿಸಿದರು.

ಸೌಹಾರ್ದಯುತ ಗದಗ ಜಿಲ್ಲೆಗೂ ಕಾಲಿಟ್ಟ ಹಿಜಾಬ್-ಶಾಲು ಸಂಘರ್ಷ!

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಭಾವೈಕ್ಯತೆಯ ನಾಡು. ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿರುವ ಜಿಲ್ಲೆ. ಆದರೆ, ಇತ್ತೀಚೆಗೆ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗುವ ಘಟನೆಗಳು ನಡೆಯುತ್ತಿವೆ. ಇಷ್ಟು ದಿವಸ ದಕ್ಷಿಣ ಕನ್ನಡ ಭಾಗದಲ್ಲಷ್ಟೇ ಕೇಳಿ ಬರುತ್ತಿದ್ದ ಹಿಜಾಬ್, ಕೇಸರಿ ಶಾಲು ನಿಷೇಧದ ಧ್ವನಿ ಇದೀಗ ಗದಗ-ಬೆಟಗೇರಿ ನಗರಕ್ಕೂ ಕಾಲಿಟ್ಟಿದೆ.

ಹೌದು, ಗದಗ‌ನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಬಂದಿದ್ದರು. ಇದಕ್ಕೆ ಪ್ರತಿರೋಧವೊಡ್ಡಿದ ಕೆಲ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಹಾಜರಾದರು. ಇದು ವಿದ್ಯಾರ್ಥಿಗಳ ಮಧ್ಯೆ ಧರ್ಮ ಸಂಘರ್ಷಕ್ಕೆ ಕಾರಣವಾಯಿತು.
ಇನ್ನು ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಹಾಜರಾಗಿದ್ದರೂ ಉಪನ್ಯಾಸಕರು ಈ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳದಿರುವುದು ದುರಾದೃಷ್ಟಕರ ಸಂಗತಿ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ನಿಖಿತಾ ಸುತಾರ್ ಹಾಗೂ ಕವಿತಾ, ‘ನಾವು ನಮ್ಮತನ ಬಿಟ್ಟು ಕೊಡಲು ಸಾಧ್ಯವಿಲ್ಲ. ಹಿಂದೂ ಧರ್ಮ ಅವಹೇಳನ‌ ಮಾಡಿದಾಗ ಧರ್ಮ ಉಳಿಸುವುದು‌ ನಮ್ಮ ಕರ್ತವ್ಯ. ಅವರು ಹಿಜಾಬ್ ಹಾಕಿಕೊಂಡು ‌ಬರುವುದನ್ನು ಬಿಟ್ಟರೆ, ನಾವು ಕೇಸರಿ ಶಾಲು ಹಾಕಿಕೊಂಡು ಬರುವುದಿಲ್ಲ. ಅವರಿಗೆ ಅವರ ಧರ್ಮ ಎಷ್ಟು ಮುಖ್ಯವೋ, ನಮಗೂ ನಮ್ಮ ಧರ್ಮ ಅಷ್ಟೇ ಮುಖ್ಯ. ಹಿಜಾಬ್ ನಿಷೇಧ ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿದ್ದಂತೆ ಕಾಲೇಜಿನಲ್ಲಿ ಹಿಜಾಬ್ ಹಾಕಿಕೊಂಡು ‌ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಷ್ಟು ದಿವಸ ಇಲ್ಲದ ಧರ್ಮ ಈಗ್ಯಾಕೆ?’ ಎಂದು ಪ್ರಶ್ನಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಆಯಿಶಾ, ‘ಸಣ್ಣವರಿದ್ದಾಗ ಹಿಜಾಬ್, ಬುರ್ಕಾ ಹಾಕಿಕೊಂಡು ‌ಬರುತ್ತಿದ್ದೇವೆ. ಹೀಗಾಗಿ ಹಿಜಾಬ್ ಬಿಡುವುದಿಲ್ಲ. ಸರ್ಕಾರ‌ ಈ ಬಗ್ಗೆ ಏನೇ ಆದೇಶ ಮಾಡಿದರೂ, ನಾವು ಹಿಜಾಬ್ ಹಾಕಿಕೊಂಡು ‌ಬರುವುದನ್ನು ಬಿಡುವುದಿಲ್ಲ. ಏಕೆಂದರೆ ನಾವು ಇಸ್ಲಾಂ ಧರ್ಮದ‌ ಪ್ರಕಾರ ನಡೆಯುತ್ತೇವೆ. ನೀವು ನಿಮ್ಮ ಧರ್ಮ ಬಿಟ್ಟು ಕೊಡುತ್ತೀರಾ?. ನಾವು ಸರ್ಕಾರದ ಆದೇಶ ಪಾಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಮ್ಮ ಕಾಲೇಜಿನಲ್ಲಿ ಮೊದಲೆಲ್ಲಾ ಇಂತಹ ಸಮಸ್ಯೆ ಇರಲಿಲ್ಲ. ಹಿಂದೂ-ಮುಸ್ಲಿಂ ಎಲ್ಲರೂ ಸ್ನೇಹಿತರಂತೆ ಇದ್ದೆವು. ಎಲ್ಲ ಜಾತಿ, ಧರ್ಮ ಗೌರವಿಸಬೇಕು. ಈಗ ಕಾಲೇಜಿನಲ್ಲಿ ಆಗುತ್ತಿರುವ ಬೆಳವಣಿಗೆಯಿಂದ ತುಂಬಾ ನೋವಾಗುತ್ತಿದೆ. ಹಿಜಾಬ್ ಈಗಷ್ಟೇ ಅಲ್ಲ. ನಮ್ಮ ಮಧ್ಯೆ ಮನಸ್ತಾಪ‌ ಬೇಡ, ಎಲ್ಲರೂ ಚೆನ್ನಾಗಿ ಉತ್ತಮ ಸ್ನೇಹಿತರಾಗಿ ಇರೋಣ’ ಎಂದು ವಿದ್ಯಾರ್ಥಿನಿ ನಿರೋಷಾ ಮನವಿ ಮಾಡಿಕೊಂಡರು.

ಪದವಿ ಕಾಲೇಜಿಗೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಕಾಲೇಜಿಗೆ ಮೊದಲಿನಿಂದಲೂ ಹಿಜಾಬ್ ಹಾಕಿಕೊಂಡು ಬರುತ್ತಿದ್ದರು. ಆದರೆ, ಇವತ್ತು ಶಾಲು ಹಾಕಿಕೊಂಡು ಬಂದಿದ್ದಾರೆ. ಕಾಲೇಜಿನಲ್ಲಿ ಯಾವತ್ತೂ ಹೀಗೆ ಆಗಿರಲಿಲ್ಲ. ಕಾಲೇಜು ಸಮಿತಿಯ ಸಭೆ ಕರೆದು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕಾಲೇಜು ಪ್ರಾಚಾರ್ಯ ಪ್ರಕಾಶ್ ಹೊಸಮನಿ ತಿಳಿಸಿದರು.

ಶಾರ್ಟ್ ಸರ್ಕ್ಯೂಟ್ : ಬೆಂಕಿ‌ ಕೆನ್ನಾಲೆಗೆ ಕಬ್ಬು ಸುಟ್ಟು ಭಸ್ಮ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಅವಘಡ‌ ಸಂಭವಿಸಿದ ಪರಿಣಾಮವಾಗಿ ಅಪಾರ ಪ್ರಮಾಣದ ಕಬ್ಬಿನ ಬೆಳೆ‌ ನಾಶವಾಗಿರುವ ಘಟನೆ ಭಾನುವಾರ ತೆಗ್ಗಿನಭಾವನೂರಿನಲ್ಲಿ ನಡೆದಿದೆ.

ತಾಲೂಕಿನ ತೆಗ್ಗಿನ ಭಾವನೂರ ಗ್ರಾಮದ ಚಾಂದಸಾಬ ಕಮ್ಮಾರ ಎಂಬ ರೈತರಿಗೆ ಸೇರಿದ ಜಮೀನಿನಲ್ಲಿ ಸೋಂಪಾಗಿ ಬೆಳೆದಿದ್ದ ಕಬ್ಬು ಬೆಂಕಿಯ ‌ಕೆನ್ನಾಲಿಗೆ ಸುಟ್ಟು ಭಸ್ಮವಾಗಿದೆ.

ಚಾಂದಸಾಬ ಕಮ್ಮಾರ ಅವರು ಐದು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು. ಆಳೆತ್ತರಕ್ಕೆ ಬೆಳೆದಿದ್ದ ಕಬ್ಬು ಅದಾಗಲೇ ಕಟಾವು ಹಂತಕ್ಕೆ ಬಂದಿತ್ತು. ಆದರೆ, ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿಗೆ ತುತ್ತಾಗಿದೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳ ಸಿಬ್ಬಂದಿಗಳು ಬೆಂಕಿ‌ ನಂದಿಸಿದರಾದರೂ ಅದಾಗಲೇ ಕಬ್ಬು ಬೆಂಕಿಗೆ ಆಹುತಿಯಾಗಿತ್ತು.

ಕನ್ನಡದ ಕಬೀರ‌ ಇಬ್ರಾಹಿಂ ಸುತಾರ್ ಹೃದಯಾಘಾತದಿಂದ ನಿಧನ; ಸೂಫಿ‌ ಸಂತನ ಅಗಲಿಕೆಗೆ ಕಂಬನಿ

ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ:

ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ನಿಧನರಾಗಿದ್ದಾರೆ. ಜಿಲ್ಲೆಯ
ಮಹಾಲಿಂಗಪೂರದಲ್ಲಿ 76 ವರ್ಷದ ಇಬ್ರಾಹಿಂ ಸುತಾರ್ ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇಬ್ರಾಹಿಂ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಹೃದಯ ಬೇನೆಯಿಂದ ಬಳಲುತ್ತಿದ್ದರು. ಅಲ್ಲದೇ, ಚಿಕಿತ್ಸೆಯನ್ನೂ ಪಡೆದಿದ್ದರು.

ಶನಿವಾರ ಬೆಳ್ಳಂಬೆಳಗ್ಗೆ ಪುನಃ ಲಘು ಹೃದಯಾಘಾತವಾಗಿದೆ. ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ರಾಹಿಂ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಖ್ಯಾತ‌ ಪ್ರವಚನಾಕರರಾಗಿದ್ದ ಇಬ್ರಾಹಿಂ ಸುತಾರ್ ಅವರು ನಾಡಿನೆಲ್ಲೆಡೆ ಪ್ರವಚನ ನೀಡಿ ಭಾವೈಕ್ಯತೆಯ ಸಂದೇಶ ಸಾರಿ ಹೆಸರು ವಾಸಿಯಾಗಿದ್ದರು. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಶ್ರೇಷ್ಠ ಪ್ರವಚಕ, ಸೂಫಿ ಸಂತರಾಗಿದ್ದ ಸುತಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು‌. ಇಬ್ರಾಹಿಂ ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ದಿಂಗಾಲೇಶ್ವರ ಶ್ರೀ ನೇಮಕ ಸಂಭ್ರಮದಲ್ಲಿ ಸೂತಕ?; ಪವಾಡ ಪುರುಷ ಜ. ಫಕ್ಕೀರೇಶ್ವರ ಸ್ವಾಮಿಯ ಮರಿದೇವರು ಸಾವು!

ವಿಜಯಸಾಕ್ಷಿ ಸುದ್ದಿ, ಗದಗ:

ಶಿರಹಟ್ಟಿ ಜ.ಫಕ್ಕೀರೇಶ್ವರ ಸ್ವಾಮಿಯ ಮರಿದೇವರು,ಪವಾಡ ಪುರುಷ ಎಂದೇ ಹೆಸರುವಾಸಿಯಾಗಿದ್ದ ಗದಗ ಜಿಲ್ಲೆಯ ಮಾಗಡಿ ಗ್ರಾಮದ 55 ವರ್ಷದ ಫಕ್ಕೀರಸ್ವಾಮಿ ಎತ್ತಿನಮಠ ಎಂಬುವವರು ಶುಕ್ರವಾರ ಮೃತಪಟ್ಟಿದ್ದಾರೆ.

ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಡಿನ ಭಾವೈಕ್ಯತೆಯ ಪ್ರತೀಕವಾಗಿರುವ ಶಿರಹಟ್ಟಿಯ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾಗಿರುವುದು ಉಭಯ ಮಠಗಳ ಭಕ್ತರಲ್ಲಿ ಸಂಚಲನ ಮೂಡಿಸಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶಿರಹಟ್ಟಿ ಮಠದ ಪೀಠಾಧ್ಯಕ್ಷರಾಗಬೇಕೆಂಬ ಕನಸು ಕಟ್ಟಿಕೊಂಡಿದ್ದ ಮೃತ ಫಕ್ಕೀರಸ್ವಾಮಿ ಎತ್ತಿನಮಠ ಮನನೊಂದಿದ್ದರಂತೆ. ಶುಕ್ರವಾರ ದಿಂಗಾಲೇಶ್ವರ ಶ್ರೀಗಳು ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಫಕ್ಕೀರಸ್ವಾಮಿ ಅವರು ಶಿರಹಟ್ಟಿ ಮಠದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

1988ರಲ್ಲಿ ಸದ್ಯ 13ನೇ ಪಟ್ಟಾಧ್ಯಕ್ಷರಾಗಿರುವ ಜ.ಫಕ್ಕೀರ ಸಿದ್ಧರಾಮ ಶ್ರೀಗಳು ಪಟ್ಟಾಧ್ಯಕ್ಷರಾಗುವ ವೇಳೆಯೇ ಫಕ್ಕೀರಸ್ವಾಮಿ ಎತ್ತಿನಮಠ ಅವರು ತಾವು ಶಿರಹಟ್ಟಿ ಮಠದ ಪಟ್ಟಾಧ್ಯಕ್ಷರಾಗಬೇಕೆಂದು ಪೈಪೋಟಿ ನಡೆಸಿದ್ದರಂತೆ. ಹೀಗಾಗಿ ಅಂದು ಶಿರಹಟ್ಟಿ ಮಠಕ್ಕೆ ಪಟ್ಟಾಭಿಷೇಕ ಮಾಡಬೇಕೆಂಬ ವಿಚಾರಕ್ಕೆ ಗಲಾಟೆ ನಡೆದಿತ್ತಂತೆ. ಆದರೆ, ಭಕ್ತರು ಫಕ್ಕೀರಸ್ವಾಮಿ ಎತ್ತಿನಮಠ ಅವರನ್ನು ಪಟ್ಟಾಧ್ಯಕ್ಷರನ್ನಾಗಿಸಲು ಪರಿಗಣಿಸಲಿಲ್ಲವಂತೆ. ಹೀಗಾಗಿ ಇವರನ್ನು ಮಠದ ಭಕ್ತರೆಲ್ಲರೂ ಫಕ್ಕೀರಸ್ವಾಮಿ ಮರಿದೇವರು ಅಂತಲೇ ಕರೆಯುತ್ತಿದ್ದರು. ಅಲ್ಲದೇ, ಹಳ್ಳಿ ಮೇಲೆ ಭಿಕ್ಷಾಟನೆ ಹೋಗುತ್ತಿದ್ದ ಇವರಿಗೆ ಭಕ್ತ ಸಮೂಹವಿತ್ತಂತೆ.

ಶಿರಹಟ್ಟಿ ಮಠದ ಪೀಠಾಧ್ಯಕ್ಷರಾಗದಿದ್ದರೂ, ಮಾಗಡಿ ಗ್ರಾಮದಲ್ಲಿರುವ ಜ.ಫಕ್ಕೀರಸ್ವಾಮಿ ಶಾಖಾ ಮಠದಲ್ಲಿ ಇರುತ್ತಿದ್ದರು. ಮಾಗಡಿಯಲ್ಲಿದ್ದುಕೊಂಡರೂ ಆಗಾಗ ಶಿರಹಟ್ಟಿ ಮಠಕ್ಕೆ ಭೇಟಿ ನೀಡುತ್ತಿದ್ದರರು. ಮಠಕ್ಕೆಲ್ಲಾ ಬಂದಾಗಲೆಲ್ಲಾ ಮೈಮೇಲೆ ಹಾವು, ಚೇಳು ಬಿಟ್ಟುಕೊಂಡು ಅಡ್ಡಾಡುವುದು, ಭಕ್ತರಿಗೆಲ್ಲಾ ಕಲ್ಲಸಕ್ಕರೆ ಕೊಡುವುದು, ನಾನೇ ಮುಂದಿನ ಪೀಠಾಧ್ಯಕ್ಷನಾಗುತ್ತೇನೆ ಎಂದು ಫಕ್ಕೀರಸ್ವಾಮಿ ಅವರು ಹೇಳಿಕೊಂಡು ಬಂದಿದ್ದರು. ಶ್ರೀಮಠದಲ್ಲಿ ದಿಢೀರನೇ ಇಂತಹ ಬೆಳವಣಿಗೆಯಾಗಿರುವುದನ್ನು ಕಂಡು ಮಾನಸಿಕವಾಗಿ ನೊಂದಿದ್ದಕ್ಕೆ ಹೀಗಾಗಿದೆ ಎಂದು ಭಕ್ತರು ಹೇಳುತ್ತಿದ್ದಾರೆ.

ಈ ಕುರಿತು ‘ವಿಜಯಸಾಕ್ಷಿಗೆ ಪ್ರತಿಕ್ರಿಯಿಸಿದ ಮಾಗಡಿ ಗ್ರಾಮದ ಕೆಲ ಗ್ರಾಮಸ್ಥರು ‘ಫಕ್ಕೀರಸ್ವಾಮಿ ಎತ್ತಿನಮಠ ಅವರು ನಿಧನ ಹೊಂದಿರುವುದು ದುಃಖವನ್ನುಂಟು ಮಾಡಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಶಿರಹಟ್ಟಿಯ ಜ.ಫಕ್ಕೀರೇಶ್ವರ ಮಠದ ಪಟ್ಟಾಧ್ಯಕ್ಷರಾಗಬೇಕೆಂಬ ಕನಸು ಕಂಡಿದ್ದರು. ಅಲ್ಲದೇ, ಅವರು ಕುಟುಂಬದವರೂ ಅವರನ್ನು ಮರಿಸ್ವಾಮಿ ಅಂತಾ ಮಠಕ್ಕೆ ಬಿಟ್ಟಿದ್ದರು. ಈ ಹಿಂದೆ ಪೀಠಾಧ್ಯಕ್ಷಕ್ಕಾಗಿ ಪೈಪೋಟಿ ನಡೆದಿತ್ತು. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಿಂದ ಪಟ್ಟಾಧ್ಯಕ್ಷ ಕೈತಪ್ಪಿತ್ತು ಎಂದು ಫಕ್ಕೀರಸ್ವಾಮಿ ಎತ್ತಿನಮಠ ಅವರ ನಿಧನಕ್ಕೆ ಸಂತಾಪ ಸೂಚಿಸಿ ಬೇಸರ ವ್ಯಕ್ತಪಡಿಸಿದರು.

ಶಿರಹಟ್ಟಿ ಮಠಕ್ಕೆ ಏಕಾಏಕಿ ಉತ್ತರಾಧಿಕಾರಿ ನೇಮಕ ಮಾಡಿರುವುದು ಖಂಡನೀಯ. ಉತ್ತರಾಧಿಕಾರಿ ನೇಮಕ ಮಾಡುವಷ್ಟು ಅವಸರವೇನಿತ್ತು. ದೇಶ, ವಿದೇಶದಲ್ಲಿ ಶ್ರೀಮಠದ ಭಕ್ತರಿದ್ದು, ಅವಕಾಶ ಕೊಡಬೇಕಿತ್ತು. ಇಷ್ಟು ಅವಸರವಸರವಾಗಿ ಮಾಡುವುದು ಏನಿತ್ತು?. ಉತ್ತರಾಧಿಕಾರಿ ನೇಮಕ ಸಂಶಯಕ್ಕೆ ಕಾರಣವಾಗಿದೆ.

ಸಂತೋಷ ಕುರಿ, ಮಾಜಿ ಉಪಾಧ್ಯಕ್ಷ ಪಪಂ

ಉತ್ತರಾಧಿಕಾರಿ ನೇಮಕಕ್ಕೂ ಮುನ್ನ ಶಿರಹಟ್ಟಿ ಮಠದಲ್ಲಿ ಗುರುವಾರ ನಡೆದಿದ್ದೇನು?

ಜ.ಫಕ್ಕೀರೇಶ್ವರ ವಾಣಿಯಂತೆ ದಿಂಗಾಲೇಶ್ವರ ಶ್ರೀಗಳಿಗೆ ಉತ್ತರಾಧಿತ್ವ!

ವಿಜಯಸಾಕ್ಷಿ ಸುದ್ದಿ, ಗದಗ:

ನಾಡಿನ ಧರ್ಮ ಪ್ರವರ್ತರು, ಪ್ರವಚನ ಪ್ರವೀಣರು, ಚತುರವಾಗ್ಮಿ ಬಾಲೆಹೊಸೂರಿನ ಶ್ರೀ ಕುಮಾರ ದಿಂಗಾಲೇಶ್ವರ ಮಹಾಸ್ವಾಮಿಗಳು ನಾಡಿನ ಭಾವೈಕ್ಯತೆಯ ಪ್ರತೀಕವಾಗಿರುವ ಶಿರಹಟ್ಟಿಯ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾಗಿರುವುದು ಉಭಯ ಮಠಗಳ ಭಕ್ತರಲ್ಲಿ ಸಂಚಲನ ಮೂಡಿಸಿದೆ.

ಶಿರಹಟ್ಟಿಯ ಸಂಸ್ಥಾನಮಠದ ಜ.ಫಕ್ಕೀರ ಸಿದ್ಧರಾಮೇಶ್ವರ ಮಹಾಸ್ವಾಮಿಗಳಿಗೆ 74ರ ಇಳಿವಯಸ್ಸು, ಆರೋಗ್ಯವೂ ಕೊಂಚ ಕ್ಷೀಣಿಸಿದೆ. ಶಿರಹಟ್ಟಿ ಸೇರಿ ನಾಡಿನಾದ್ಯಂತ ಇರುವ 60ಕ್ಕೂ ಹೆಚ್ಚು ಶಾಖಾ ಮಠಗಳು, ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟಸಾದ್ಯ. ಶ್ರೀಮಠವನ್ನು ಅತ್ಯಂತ ಪ್ರಗತಿಪತದತ್ತ ಕೊಂಡ್ಯುಯುವ ಸಾಮರ್ಥ್ಯ, ಪ್ರಬುದ್ಧತೆ ಹೊಂದಿರುವ ಮಗನಂತೆ ಕಂಡಿರುವ ದಿಂಗಾಲೇಶ್ವರರಿಗೆ ಮಠದ ಅಧಿಕಾರ ಹಸ್ತಾಂತರಿಸಿ ಆಶೀರ್ವದಿಸುವಂತೆ ಕರ್ತ್ರು ಶ್ರೀ ಜ.ಫಕ್ಕೀರೇಶ್ವರರಿಂದ ವಾಣಿಯಾಗಿದೆ ಎಂದು ಈಗಿನ ಸಿದ್ಧರಾಮ ಶ್ರೀಗಳು ಹೇಳುತ್ತಾರೆ. ಈ ಹಿನ್ನೆಲೆ ಗುರುವಾರ ಶ್ರೀಮಠದ ಹಿರಿಯ ಭಕ್ತರ ಸಮ್ಮುಖದಲ್ಲಿ ಕಾನೂನುಬದ್ಧ, ಸಂಪ್ರದಾಯಬದ್ಧ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲಾಗಿದೆ.

ಉತ್ತರಾಧಿಕಾರಕ್ಕಾಗಿ ಶಿರಹಟ್ಟಿ ಮಠದಲ್ಲಿ ನಡೆದದ್ದೇನು?

ಶಿರಹಟ್ಟಿ ಮಠದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಎಲ್ಲ ರೀತಿಯ ಪ್ರಕ್ರಿಯೆಗಳು ನಡೆದಿವೆ. ಮಠದ ಕರ್ತ್ರು ಗದ್ದುಗೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಿರಹಟ್ಟಿಯ ಶ್ರೀಗಳು ಶ್ರೀಮಠದ ಪರಂಪರೆಯಂತೆ ದಿಂಗಾಲೇಶ್ವರರಿಗೆ ಉಡದಾರ ಕಟ್ಟುವ ಉತ್ತರಾಧಿಕಾರ ಪ್ರಕ್ರಿಯೆ ಚಾಲನೆಗೊಂಡಿತು. ನಗಾರಿಖಾನೆಯಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕ್ರಿಯೆ ನೆರವೇರಿಸಿ ನಂತರ ಮಠದಲ್ಲಿರುವ ಲಕ್ಷ್ಮೀದೇವಿ, ಚೌಡಮ್ಮದೇವಿ ದರ್ಶನ ಪಡೆದು ನಂತರ ಸೇರಿದ್ದ ಭಕ್ತರಿಗೆ ಆಶೀರ್ವಚನ ನೆರವೇರಿಸಲಾಯಿತು.

ಎಲ್ಲ ಪ್ರಕ್ರಿಯೆಗಳು ನಡೆಯವ ವೇಳೆ ಫಕ್ಕೀರೇಶ್ವರರ ಮಹಿಮೆಯೂ ಎನ್ನುವಂತೆ ಕಾಕತಾಳೀಯವಾಗಿ ಅಲಂಕೃತ ಆನೆ, ಮದುವೆ ಕಾರ್ಯಕ್ರಮದ ಹಿನ್ನೆಲೆ ಮಠದಲ್ಲಿ ಗುಗ್ಗಳ, ಪೂರ್ಣಕುಂಭದ ಜತೆಗೆ ಮೊಳಗಿದ ಸಕಲ ವಾದ್ಯಗಳು ಮೊಳಗಿದ್ದು, ಪವಾಡವೇ ನಡೆಯಿತು ಎಂದು ಭಕ್ತರು ಮಾತನಾಡಿಕೊಂಡರು. ಬಳಿಕ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಹಿರಿಯ ಭಕ್ತರ ಒಮ್ಮತದ ತೀರ್ಮಾನ, ಪಾಲ್ಗೊಳ್ಳುವಿಕೆಯೊಂದಿಗೆ ಸಬ್ ರೆಜಿಸ್ಟರ್ ಕಚೇರಿಯಲ್ಲಿ ಉತ್ತರಾಧಿಕಾರದ ನೋಂದಣಿ ಮಾಡಿಸಲಾಯಿತು.

ಬಾಲೆಹೊಸೂರ ಮಠದಲ್ಲಿ

ಶಿರಹಟ್ಟಿಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬಾಲೆಹೊಸೂರ ಮಠದಲ್ಲಿ ಗ್ರಾಮದ ಭಕ್ತರ ಸಭೆ ಮಾಡಿ ದಿಂಗಾಲೇಶ್ವರ ಶ್ರೀಗಳನ್ನು ಶಿರಹಟ್ಟಿ ಮಠದ ಉತ್ತರಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇನ್ನು ಮುಂದೆ ಶಿರಹಟ್ಟಿ ಮತ್ತು ಬಾಲೆಹೊಸೂರಿನ ಎರಡೂ ಮಠಗಳ ಜವಾಬ್ದಾರಿ ಅವರದ್ದಾಗಿದೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಯಾವುದೇ ಆತಂಕ, ಅನುಮಾನ ಬೇಡ ದಿಂಗಾಲೇಶ್ವರರಿಗೆ ಆ ಶಕ್ತಿ, ಸಾಮರ್ಥ್ಯವಿದ್ದು ಅವರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯ ಇಡೀ ನಾಡಿನಾದ್ಯಂತ ಪಸರಿಸಲಿ ಎಲ್ಲರೂ ಆತ್ಮಸಂತೋಷ, ಅಭಿಮಾನದಿಂದ ಒಪ್ಪಿಕೊಳ್ಳಿ ಎಂದು ಭಿನ್ನಹ ಮಾಡಿದರು. ಇದಕ್ಕೆ ಪೂರಕವಾಗಿ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ, ಜಿ.ಎಂ,ಮಹಾಂತಶೆಟ್ಟರ, ದೇವಣ್ಣ ಬಳಿಗಾರ, ಶಿರಹಟ್ಟಿ ಚಂದ್ರಣ್ಣ ನೂರಶೆಟ್ಟರ, ಹುಮಾಯೂನ್ ಮಾಗಡಿ, ಶಿವಪ್ರಕಾಶ ಮಹಾಜನಶೆಟ್ಟರ, ವೈ.ಎಸ್.ಪಾಟೀಲ, ಶಿವಲಿಂಗಯ್ಯ ಶಿವಯೋಗಿಮಠ, ಮಂಜುನಾಥ ಘಂಟಿ, ಕೆ.ಎ.ಬಳಿಗೇರ ಧ್ವನಿ ಗೂಡಿಸಿದರು.

ಈ ಗ್ರಾಮದ ಹಿರಿಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಗ್ರಾಮದ ಜನತೆಗೆ ಒಂದೆಡೆ ನಮ್ಮ ಶ್ರೀಗಳು ಶಿರಹಟ್ಟಿ ಮಠಕ್ಕೆ ಉತ್ತರಾಧಿಕಾರಿಗಳಾಗುವುದು ಸಂತೋಷವಾಗಿದ್ದರೂ ಮತ್ತೊಂದೆಡೆ ನಮ್ಮಿಂದ ದೂರವಾಗುತ್ತಾರೆಂಬ ಎಂಬ ನೋವು ಕಾಡುತ್ತಿದೆ. ಶ್ರೀಗಳು, ಹಿರಿಯರ ನಿರ್ಧಾರಕ್ಕೆ ಬದ್ಧರಾಗುತ್ತೇವೆ ಎಂದು ಗಳಗಳನೇ ಅತ್ತದ್ದನ್ನು ಕಂಡ ದಿಂಗಾಲೇಶ್ವರ ಶ್ರೀಗಳು ಸಣ್ಣ ಮಗುವಿನಂತೆ ಕಣ್ಣೀರು ಸುರಿಸಿ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತ್ತು.

ಎರಡು ಮಹಾನದಿಗಳು ಒಂದಾಗಿ ತ್ರಿವೇಣಿ ಸಂಗಮವಾಗುವಂತೆ ಎರಡೂ ಮಠಗಳ ಕೀರ್ತಿಯನ್ನು ಹೆಚ್ಚಿ ಭಾವೈಕ್ಯತೆ ಮೇಳೈಸಲಿದೆ. ಕರ್ತ್ರು ಫಕ್ಕೀರೇಶ್ವರರ ವಾಣಿಯಾಗಿದೆಯಲ್ಲದೇ ನಮ್ಮ ಮತ್ತು ಭಕ್ತರ ಮನಸ್ಸಿನ ಒಮ್ಮತದ ಭಾವನೆಯೂ ಆಗಿದೆ. ಜ್ಞಾನಸೂರ್ಯ ಸ್ವರೂಪಿಯಾಗಿರುವ ದಿಂಗಾಲೇಶ್ವರ ಕೀರ್ತಿ ನಾಡಿನಾದ್ಯಂತ ಪಸರಿಸಲಿ. ಅವರಿಗೆ ಸ್ನೇಹ-ಪ್ರೀತಿ, ಶಾಂತಿ, ಸಮಾಧಾನ. ಭಾವೈಕ್ಯತೆಯ ಫಕ್ಕೀರೇಶ್ವರರ ಗುಣಗಳನ್ನು ಆಶೀರ್ವದಿಸುತ್ತೇನೆ. ಶಿರಹಟ್ಟಿಯ ಸಂಪ್ರದಾಯದಂತೆ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮಿಗಳು ಉತ್ತರಾಧಿಕಾರಿಗಳು ಶ್ರೀ.ಜ.ಫಕ್ಕೀರೇಶ್ವರ ಸಂಸ್ಥಾನಮಠ ಶಿರಹಟ್ಟಿ(ಕಿರಿಯ ಸ್ವಾಮಿಗಳು) ಎಂಬ ಅಭಿನಾಮದಿಂದ ಕರೆಯಿಸಿಕೊಳ್ಳಲಿದ್ದಾರೆ. ನಮ್ಮ ನಂತರ ಅವರು ಶ್ರೀ ಜ.ಫಕ್ಕೀರ ಶಿವಯೋಗಿ ಸ್ವಾಮಿಗಳು ೧೪ನೇ ಪಟ್ಟಾಧ್ಯಕ್ಷರು ಶ್ರೀ.ಜ.ಫಕ್ಕೀರೇಶ್ವರ ಸಂಸ್ಥಾನಮಠ ಶಿರಹಟ್ಟಿ ಎಂದು ಬೆಳಗಲಿದ್ದಾರೆ.

ಫಕ್ಕೀರ ಸಿದ್ಧರಾಮ ಶ್ರೀಗಳು, ಸಂಸ್ಥಾನಮಠ ಶಿರಹಟ್ಟಿ

ಶ್ರೀ ಫಕ್ಕೀರ ಸಿದ್ಧರಾಮ ಶ್ರೀಗಳು ತಮ್ಮ ಬುದ್ಧಿಶಕ್ತಿ, ಅಂತಃಕರಣ, ಅಂತಃಶಕ್ತಿಯಿಂದ ಕೈಗೊಳ್ಳುವ ತೀರ್ಮಾನ, ಮಠಗಳ ಭಕ್ತರ ಅಭಿಲಾಷೆ, ಹಿರಿಯರ ನಿರ್ಧಾರದಿಂದ ಕೈಗೊಂಡ ತೀರ್ಮಾನಕ್ಕೆ ಬದ್ಧನಾಗಿ ನಡೆದುಕೊಳ್ಳುತ್ತೇನೆ. ಬಾಲೇಹೊಸೂರ ನನ್ನ ತವರು ಮನೆಯಾಗಿದ್ದು ೨ ದಶಕಗಳ ಕಾಲ ಶ್ರೀಮಠ ಅಭಿವೃದ್ಧಿಗಾಗಿ ಬೆವರು ಸುರಿಸಿದ್ದೇನೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ, ಸಹಕಾರಕ್ಕೆ ಜನ್ಮಪೂರ್ತಿ ಋಣಿಯಾಗಿರುವೆ. ಜೀವ ಇರೋವರೆಗೂ ಎರಡೂ ಮಠಗಳನ್ನು ಬೆಳೆಸುವ ಕಾರ್ಯ ಮಾಡುತ್ತೇನೆ

ದಿಂಗಾಲೇಶ್ವರ ಶ್ರೀಗಳು, ಬಾಲೆಹೊಸೂರು

ವಿಚ್ಛೇದನ ಪಡೆದ ಕಾಂಗ್ರೆಸ್ ಜೊತೆ ಹೋಗಲ್ಲ: ಬಿಸಿಪಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಾವು ಈಗಾಗಲೇ ಕಾಂಗ್ರೆಸ್‌ಗೆ ವಿಚ್ಛೇದನ ನೀಡಿದ್ದೇವೆ. ವಿಚ್ಛೇದನಗೊಂಡವರು ಎಂದೂ ಒಂದಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಜೊತೆ ನಾವು ಹೋಗಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ಗೆ ವಿಚ್ಛೇದನ ನೀಡಿ ಬಿಜೆಪಿ ಮನೆಗೆ ಮೊಳೆ ಹೊಡೆದು ಒಳಗೆ ಬಂದಿದ್ದೇವೆ. ಇಲ್ಲಿಯ ಮಕ್ಕಳಾಗಿಯೇ ಉಳಿಯುತ್ತೇವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರಲ್ಲ ಎಂದು ಸ್ಪಷ್ಟಪಡಿಸಿದರು.

ಸರಕಾರದ ಅವಧಿ ಮುಗಿಯುವವರೆಗೂ ಸಿಎಂ ಬದಲಾವಣೆ ಇಲ್ಲ. ಈಗಾಗಲೇ ಅಮಿತ್ ಶಾ, ಅರುಣ್ ಸಿಂಗ್ ಇದನ್ನು ಸ್ಪಷ್ಟವಾಗಿ‌ ತಿಳಿಸಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿಲ್ಲ, ಅವರೇ ರಾಜೀನಾಮೆ ನೀಡಿದ್ದಾರೆ ಎಂದರು.

ಪಕ್ಷದ ಆಂತರಿಕ ವಿಚಾರಗಳನ್ನು ಹಾದಿ ಬೀದೀಲಿ ಮಾತನಾಡಬಾರದು. ಸಚಿವ ಸ್ಥಾನದ ಆಕಾಂಕ್ಷಿಗಳು ಪಕ್ಷದ ಘನತೆಗೆ ಅಡ್ಡಿಯಾಗುವ ಹೇಳಿಕೆಗಳನ್ನು ನೀಡಬಾರದು ಎಂದು ಪರೋಕ್ಷವಾಗಿ ಸ್ವಪಕ್ಷೀಯ ಶಾಸಕರಾದ ರೇಣುಕಾಚಾರ್ಯ, ಬಸನಗೌಡ ಯತ್ನಾಳ ಹಾಗೂ ಸೋಮಶೇಖರ್ ರಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿ.ಸಿ.ಪಾಟೀಲ ಫೋಟೋ ಶೂಟ್‌ನಲ್ಲಿ ಬ್ಯುಜಿಯಾಗಿದ್ದಾರೆ ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಕೃಷಿ ಚಟುವಟಿಕೆಗಳ ಉತ್ತೇಜನಕ್ಕಾಗಿ ಫೋಟೋ ತೆಗೆಸಿಕೊಂಡಿದ್ದರಲ್ಲಿ ತಪ್ಪೇನಿದೆ. ಅದೇನು ನಾಟಕೀಯ ಅಲ್ಲ, ವಾಸ್ತವ. ನಾನೇನು ಕಿಕ್ ಬ್ಯಾಕ್ ಪಡೆದಿಲ್ಲ. ಕಾಂಗ್ರೆಸ್‌ನವರಿಗೆ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಅವರು ಉತ್ತರಿಸಿದರು.

ವಲಸಿಗ ಸಚಿವ ಬಿ.ಸಿ. ಪಾಟೀಲ್ ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರ ಹಿಂದೇಟು! ಮೊದಲ ಭೇಟಿಯಲ್ಲಿಯೇ ಅಪಸ್ವರ?

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿರುವ ಬಿ.ಸಿ.ಪಾಟೀಲ್ ಬುಧವಾರ ಗದಗ ಜಿಲ್ಲೆಗೆ ಮೊದಲ‌ ಬಾರಿಗೆ ಭೇಟಿ ನೀಡಿದರು. ಈ ವೇಳೆ ಸಚಿವರ ಸ್ವಾಗತಕ್ಕೆ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು‌. ಆದರೆ, ಬಿಸಿಪಿ ಅಭಿಮಾನಿಗಳು ಹಾಕಿಸಿದ್ದು ಎನ್ನಲಾದ ಬ್ಯಾನರ್ ಗಳಲ್ಲಿ ಜಿಲ್ಲಾ ಬಿಜೆಪಿಯ ಬಹುತೇಕ ಮುಖಂಡರ ಫೋಟೋಗಳು ಕಾಣಿಸಲಿಲ್ಲ.

ಇದಕ್ಕೆ ಕಾರಣ ಸಿ.ಸಿ.ಪಾಟೀಲ್ ಅವರನ್ನು ಗದಗ ಜಿಲ್ಲೆಯಿಂದ ಎತ್ತಂಗಡಿ ಮಾಡಿದ್ದಕ್ಕೆ, ಶ್ರೀರಾಮುಲು ಅವರಿಗೆ ಜಿಲ್ಲಾ ಉಸ್ತುವಾರಿ ಕೊಡದಿದ್ದಕ್ಕೆ ಹಾಗೂ ಬಿ.ಸಿ.ಪಾಟೀಲ್ ಉಸ್ತುವಾರಿ ಮಂತ್ರಿಯಾಗಿ ನೇಮಕವಾಗಿದ್ದಕ್ಕೆ ಜಿಲ್ಲಾ ಬಿಜೆಪಿ ಬಿಸಿಪಿ ವಿರುದ್ಧ ವ್ಯಕ್ತಪಡಿಸಿದ ಅಸಮಾಧಾನ ಎಂದು ಬಣ್ಣಿಸಲಾಗುತ್ತಿದೆ.

ಅವಳಿ‌ ನಗರದ ಕೆಲವು ಕಡೆಗಳಲ್ಲಿ ‌ಹಾಕಿದ್ದ ದೊಡ್ಡ ಬ್ಯಾನರ್ ಗಳಲ್ಲಿ ಮುಖಂಡರ ಫೋಟೋ ಕಾಣಿಸಿಕೊಂಡಿದ್ದು ಬಿಟ್ಟರೆ, ವಿದ್ಯುತ್ ಕಂಬಗಳಿಗೆ ನೇತು ಹಾಕಿದ್ದ ಬ್ಯಾನರ್ ಬಟ್ಟಿಂಗ್ಸ್ ನಲ್ಲಿ ಎಲ್ಲೂ ಕಾಣಿಸಿಲ್ಲ. ಕೃಷಿ ಸಚಿವ ಅಖಿಲ‌ ಕರ್ನಾಟಕ ಕೌರವ ಶ್ರೀ ಬಿ.ಸಿ.ಪಾಟೀಲ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥಗೌಡ ಪಾಟೀಲ್, ಮುಂಡರಗಿ ಪುರಸಭೆ ಸದಸ್ಯ ಲಿಂಗರಾಜಗೌಡ ಪಾಟೀಲ್, ಗುತ್ತಿಗೆದಾರ ಆನಂದಗೌಡ ಪಾಟೀಲ್ ಅವರ ಬ್ಯಾನರ್ ಮಾತ್ರ ನಗರದಲ್ಲಿ ರಾರಾಜಿಸುತ್ತಿದ್ದವು.

ಇನ್ನು ಸಿ.ಸಿ.ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಗದಗ-ಬೆಟಗೇರಿ ಅವಳಿ ನಗರಕ್ಕೆ ಆಗಮಿಸಿ ಅವರು ನಗರದಲ್ಲಿ ಎಲ್ಲೇ ಹೋದರು ಜೇನು ಹುಳುಗಳಂತೆ ಮುತ್ತಿಕ್ಕಿಕೊಳ್ಳುತ್ತಿದ್ದ ಮುಖಂಡರು, ಕಾರ್ಯಕರ್ತರು ಬಿ.ಸಿ.ಪಾಟೀಲರು ಬಂದಾಗ ಬೆರಳೆಣಿಕೆಯಷ್ಟು ಮುಖಂಡರು ಮಾತ್ರ ಆಗಮಿಸಿದ್ದರು. ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿಯವರು ಆರಂಭದಿಂದಲೂ ಕಾಣಿಸಲಿಲ್ಲ.

ಈ ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ‌.ಪಾಟೀಲ್ ಅವರನ್ನು ಬಾಗಲಕೋಟೆ ಜಿಲ್ಲೆಗೆ ಎತ್ತಂಗಡಿ ಮಾಡಿದ್ದು, ಬಿಜೆಪಿ ಪಾಳೆಯದಲ್ಲಿ ಬೇಸರ ಮೂಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದರು. ಮರಳಿ ಸಚಿವ ಸಿ.ಸಿ.ಪಾಟೀಲ್ ಇಲ್ಲದಿದ್ದರೆ, ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಉಸ್ತುವಾರಿ ಮಂತ್ರಿಯಾಗಿ ನೇಮಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಹಾಕಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದರು.

error: Content is protected !!