Home Blog Page 3254

ಅಂದರ್-ಬಾಹರ್ ಜೂಜಾಟ; ಆರು ಜನರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಆರು ಜನತ ತಂಡವೊಂದು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿ ಬಂಧಿಸಿದ ಘಟನೆ ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುರಡಿತಾಂಡಾದ ಸೇವಾಲಾಲ ದೇವಸ್ಥಾನದ ಎದುರಿಗೆ ಜೂಜಾಟದಲ್ಲಿ ತೊಡಗಿದ್ದ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪದ ಮುದಕಪ್ಪ ಲಕ್ಷ್ಮಣ್ಣ ನಾಗಾವಿ, ಹನಮಂತ ಪಕ್ಕೀರಪ್ಪ ಹೊಸೂರು, ಮುರಡಿ ತಾಂಡಾದ ಕುಮಾರ್ ಮೇಗಪ್ಪ ಬೂದಿಹಾಳ, ಮಹಾಂತೇಶ್ ರತ್ನಪ್ಪ ರಾಥೋಡ್, ಗುಡ್ಡದಬೂದಿಹಾಳ ಗ್ರಾಮದ ಸಿದ್ದನಗೌಡ ನಿಂಗನಗೌಡ ಪಾಟೀಲ್, ಗೋಣೆಶ್ ಅಲಿಯಾಸ್ ರಮೇಶ್ ಮಲ್ಲಪ್ಪ ತಳವಾರ ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರಿಂದ ನಗದು 1950 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ನೇಹ…..

0

ನೀ ಎಣ್ಣೆಯಾಗು, ನಾ ಹಣತೆಯಾಗುವೆ..
ಯಾರೇ ಬತ್ತಿ ಇಡಲಿ ನಗು-ನಗುತಾ ಬೆಳಗೋಣ
ಈ ನಮ್ಮ ಸ್ನೇಹವ..

ನೀ ಬೇಳೆಯಾಗು, ನಾ ಬೆಲ್ಲವಾಗುವೆ,
ಯಾರೇ ಬೇಯಿಸಿದರೂ, ಬೆಂದು ಹೂರಣವಾಗಿ
ಬಡಿಸೋಣ ಹೋಳಿಗೆಯ ರಸದೌತಣವ..

ನೀ ಕಬ್ಬಾಗು, ನಾ ರಸವಾಗುವೆ..
ಯಾರೇ ಹಿಂಡಿ ನೋಯಿಸಿದರೂ ಅವರ
ಬಾಯಿಗೆ ಸಿಹಿ ನೀಡಿ ಸವಿಸೋಣ ನಮ್ಮ ಸ್ನೇಹವ ..

ನೀ ಸುಮವಾಗು, ನಾ ಘಮವಾಗುವೆ…
ಯಾರೇ ಕಿತ್ತು ಎತ್ತಿಕೊಂಡರೂ ಪಸರಿಸೋಣ
ನಮ್ಮ ಸ್ನೇಹದ ಪರಿಮಳವ.. ಅಲಂಕರಿಸೋಣ ಅವರ ಮನೆ, ಮನವ.. 🌸🌼🌹 ✍️

ಪವಿತ್ರ ಬಡಿಗೇರ್ ಕಡಬಗೆರೆ

ಪೊಲೀಸರ ಕಾರ್ಯಚರಣೆ; ಇಬ್ಬರು ಕುಖ್ಯಾತ ಕಳ್ಳರ ಬಂಧನ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಲಕ್ಷ್ಮೇಶ್ವರ ಹಾಗೂ ಮುಳಗುಂದ ಪಟ್ಟಣದಲ್ಲಿ ನಡೆದಿದ್ದ ಎರಡು ಮನೆ ಕಳ್ಳತನ ಪ್ರಕರಣ ಬೇಧಿಸಿರುವ ಲಕ್ಷ್ಮೇಶ್ವರ ಪೊಲೀಸರು, ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.
2021 ರ ಜನವರಿಯಲ್ಲಿ ಮುಳಗುಂದ ಹಾಗೂ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೀಗ ಮುರಿದು ಮನೆ ಕಳ್ಳತನ ಮಾಡಿದ್ದ ಲಕ್ಷ್ಮೇಶ್ವರ ಪಟ್ಟಣದ ಸಂತೋಷ ಮನೋಹರ ಗಬ್ಬೂರು ಹಾಗೂ ರಶೀದ್ ಇಸ್ಮಾಯಿಲಸಾಬ್ ಮುಳಗುಂದ ಎಂಬುವರನ್ನು ಲಕ್ಷ್ಮೇಶ್ವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ಬಾಭರಣ, ಒಂದು ಮೊಬೈಲ್ ಹಾಗೂ ನಗದು 20 ಸಾವಿರ ಜಪ್ತಿ ಮಾಡಿದ್ದಾರೆ.
ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ, ಸಿಪಿಐ ವಿಕಾಸ್ ಪಿ ಲಮಾಣಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಡಿ. ಪ್ರಕಾಶ್, ಪಿ ಎಮ್ ಬಡಿಗೇರ, ಎಎಸ್ಐ ಗುರುರಾಜ್ ಬೂದಿಹಾಳ ಸಿಬ್ಬಂದಿಗಳಾದ ಎಮ್ ಬಿ ವಡ್ಡಟ್ಟಿ, ಮಾರುತಿ ಲಮಾಣಿ, ಚಂದ್ರು ಕಾಕನೂರು, ಎಸ್ ಎಸ್ ಯರಗಟ್ಟಿ, ಎನ್ ಡಿ ಹುಬ್ಬಳ್ಳಿ ಪಾಲ್ಗೊಂಡಿದ್ದರು.

ಕಂದಾಯ ಇಲಾಖೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ; ರೆವಿನ್ಯೂ ಇನ್ಸ್‌ಪೆಕ್ಟರ್ ಪಾಟೀಲ್ ಪರಾರಿ!

ವಿಜಯಸಾಕ್ಷಿ ಸುದ್ದಿ, ಗದಗ

ಖರೀದಿಸಿದ ಜಮೀನು ನೋಂದಣಿ ಮಾಡಲು ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ (ಚವಡಿ ಕೂಟ) ಕಂದಾಯ ಇಲಾಖೆಯ ಕಛೇರಿ ಮೇಲೆ ಎಸಿಬಿ ಅಧಿಕಾರಿಗಳು ಶನಿವಾರ ಸಂಜೆ ದಾಳಿ ಮಾಡಿದ್ದಾರೆ. ಹಣ ಪಡೆದ ಆರೋಪದಲ್ಲಿ ಮಧ್ಯವರ್ತಿ ದಾವಲ ಎಂಬಾತನನ್ನು ‌ವಶಕ್ಕೆ ಪಡೆಯಲಾಗಿದ್ದು, ದಾಳಿಯ ವಿಷಯ ತಿಳಿದ ರೆವಿನ್ಯೂ ಇನ್ಸ್‌ಪೆಕ್ಟರ್ ಎಸ್ ಎಸ್ ಪಾಟೀಲ್ ಪರಾರಿ ಆಗಿದ್ದಾರೆ.

ಗದಗ ತಾಲೂಕಿನ ಅಂತೂರು ಬೆಂತೂರ‌ ಗ್ರಾಮದ ಗುರಯ್ಯ ಲಗ್ಮಯ್ಯನವರ ಎಂಬುವವರು ಜಮೀನು ಖರೀದಿ ಮಾಡಿದ್ದರು. ಅದನ್ನು ಇವರ ಹೆಸರಲ್ಲಿ ನೋಂದಣಿ ಮಾಡಲು ಎಂಟು ಸಾವಿರ ಲಂಚ‌ ಕೇಳಿದ ಆರೋಪ ರೆವಿನ್ಯೂ ಇನ್ಸ್‌ಪೆಕ್ಟರ್ ಎಸ್ ಎಸ್ ಪಾಟೀಲ್ ಅವರ ಮೇಲಿದೆ.

ಇವತ್ತು ಗುರಯ್ಯ ಎಂಬ ರೈತ ಹಣ ಕೊಡಲು ಬಂದಾಗ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಸಂಪರ್ಕಿಸಿದಾಗ ಮಧ್ಯವರ್ತಿ ದಾವಲ ಕೈಯಲ್ಲಿ ಕೊಡಲು ಹೇಳಲಾಗಿತ್ತು ಎಂದು ತಿಳಿದು ಬಂದಿದೆ. ನಂತರ ರೈತ ಎಂಟು ಸಾವಿರ ಹಣವನ್ನು ಮಧ್ಯವರ್ತಿ ದಾವಲ ಎಂಬಾತನ ಕೈಯಲ್ಲಿ ಕೊಟ್ಟಿದ್ದಾರೆ.

ಆಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಮಧ್ಯವರ್ತಿ ದಾವಲನನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ವಿಷಯ ಕಂದಾಯ ಇಲಾಖೆಯಲ್ಲಿ ಇದ್ದ ಸಿಬ್ಬಂದಿ ಎಸ್ ಎಸ್ ಪಾಟೀಲ್ ರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಇದರಿಂದ ರೆವಿನ್ಯೂ ಇನ್ಸ್‌ಪೆಕ್ಟರ್ ಎಸ್ ಎಸ್ ಪಾಟೀಲ್ ಕಚೇರಿಯತ್ತ ಸುಳಿಯದೇ ಅಲ್ಲಿಂದಲೇ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಸಿಬಿ ಎಸ್ಪಿ ನೇಮಗೌಡ, ಡಿವೈಎಸ್ಪಿ ಸುರೇಶ್ ರೆಡ್ಡಿ, ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಗಳಾದ ಆರ್ ಎಫ್ ದೇಸಾಯಿ, ವೀರೇಶ್ ಹಳ್ಳಿ, ಸಿಬ್ಬಂದಿಗಳಾದ ನಾರಾಯಣಗೌಡ್ ತಾಯಣ್ಣವರ್, ಎಮ್ ಎಮ್ ಅಯ್ಯನಗೌಡ್ರ, ಆರ್ ಎಸ್ ಹೆಬಸೂರ, ವೀರೇಶ್ ಜೋಳದ, ಶರೀಫ್ ಮುಲ್ಲಾ, ಮಂಜು ಮುಳಗುಂದ, ಐ ಸಿ ಜಾಲಿಹಾಳ, ಹಾಗೂ ಬಿಸಿನಳ್ಳಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ಸಂಪುಟ ರಚನೆಗೆ ಹೈಮಾಂಡ್ ಸೂಚನೆಗೆ ಕಾಯುತ್ತಿದ್ದೇನೆ: ಸಿಎಂ ಬೊಮ್ಮಾಯಿ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಸಂಪುಟ ರಚನೆ ವಿಚಾರವಾಗಿ ಹೈಕಮಾಂಡ್ ಸೂಚನೆಗೆ ಕಾಯುತ್ತಿದ್ದೇನೆ. ಮಧ್ಯಾಹ್ನದೊಳಗೆ ಲಿಸ್ಟ್ ಬರುತ್ತೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ನನಗಿನ್ನೂ ಯಾವುದೇ ಕರೆ ಬಂದಿಲ್ಲ. ಸೂಚನೆ ಬಂದ ಕೂಡಲೇ ಸಚಿವರ ಪಟ್ಟಿ ಬಗ್ಗೆ ಚರ್ಚಿಸುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಬೊಮ್ಮಾಯಿ, ಸಚಿವ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಭೇಟಿ ವೇಳೆ ಯಾವುದೇ ಚರ್ಚೆಯಾಗಿಲ್ಲ. ವರಿಷ್ಠರ ಸೂಚನೆಯಂತೆ ಸಂಪುಟ ರಚನೆ ಮಾಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಇಂದು ಬೆಂಗಳೂರಿಗೆ ವಾಪಸ್ ಬರಲಿದ್ದು,  ಬಳಿಕ ಕೋವಿಡ್ ಕುರಿತು ಎರಡು ಸಭೆ ನಡೆಸುತ್ತೇನೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಇನ್ನೊಮ್ಮೆ 8 ಜಿಲ್ಲೆಗಳ ಅಧಿಕಾರಿಗಳ ಜೊತೆ ಚರ್ಚಿಸಿ ಕೈಗೊಳ್ಳಬೇಕಾದ ಬಿಗಿ ಕ್ರಮಗಳ ಬಗ್ಗೆ ಸೂಚಿಸಲಾಗುವುದು. ಇನ್ನೊಂದು ಸಭೆಯಲ್ಲಿ ಲಸಿಕೆ ಹಾಗೂ ಸೋಂಕಿತರಿಗೆ ಚಿಕಿತ್ಸೆ ವಿಚಾರವಾಗಿ ಚರ್ಚಿಸಲಾಗುವುದು ಎಂದರು.

ಈವರೆಗೆ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದವರನ್ನು ತಪಾಸಣೆ ನಡೆಸಿ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ಇನ್ಮುಂದೆ ರೈಲ್ವೆ ಮಾರ್ಗಗಳಲ್ಲೂ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗುವುದು ಎಂದು ಸಿಎಂ ತಿಳಿಸಿದರು.

ಪ್ರತ್ಯೇಕ ಅಪಘಾತ; ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದ ಘಟನೆಯಲ್ಲಿ ವಾಹನಗಳು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪಿದ್ದಾರೆ.

ಗದಗ ತಾಲೂಕಿನ ಹಿರೇಹಂದಿಗೋಳ ಗ್ರಾಮದ ಬಳಿ ಟಂ ಟಂ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಹತ್ತು ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಶಿರುಂಜ ಗ್ರಾಮದ ಶರಣಪ್ಪ ಪಾಟೀಲ (10) ಮೃತ ಬಾಲಕ. ಗದಗ ತಾಲೂಕಿನ ಶಿರುಂಜ ಗ್ರಾಮದವರಾದ ಸವಿತಾ ಹುಲಕಟ್ಟಿ, ಹಾಲಪ್ಪ ತಳವಾರ, ಭೀಮವ್ವ ಲಂಕೆನ್ನವರ, ಚನ್ನವ್ವ ತಳವಾರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆಯಲ್ಲಿ ಕಾರು ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಘಟನೆ ಮಾಳವಾಡ ಗ್ರಾಮದ ಹತ್ತಿರ ನಡೆದಿದೆ. ಶಿವಬಸಪ್ಪ ಬಸವಂತಪ್ಪ ಬೂದಿಹಾಳ (54) ಮೃತರು.

ಮಾಳವಾಡದಿಂದ ಅಸೂಟಿ ಗ್ರಾಮದ ಕಡೆಗೆ ಹೊರಟಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಶಿವಬಸಪ್ಪ ಸ್ಥಳದಲ್ಲೇ ಮೃತಪಟ್ಟರೆ, ಯಲ್ಲಪ್ಪ ಚಕ್ರದ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳ್ಳೆಗಾಲ ಶಾಸಕ ಎನ್. ಮಹೇಶ್ ಶೀಘ್ರ ಬಿಜೆಪಿಗೆ

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಶೀಘ್ರವೇ ಬಿಜೆಪಿ ಸೇರುವುದಾಗಿ ಕೊಳ್ಳೇಗಾಲ ಶಾಸಕ‌ ಎನ್.ಮಹೇಶ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮಾಜಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ.

ಬಿಜೆಪಿ ಬರುವಂತೆ ಬಿಎಸ್ ವೈ ಆಹ್ವಾನಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸುವಂತೆ ತಿಳಿಸಿದ್ದಾರೆ ಎಂದು ಹೇಳಿದರು.
ಯಾವುದೇ ಷರತ್ತುಗಳಿಲ್ಲದೆ ಪಕ್ಷ ಸೇರಲು ತೀರ್ಮಾನಿಸಿದ್ದೇನೆ. ಶೀಘ್ರದಲ್ಲೇ ಬಿಜೆಪಿ ಸೇರುವ ದಿನಾಂಕ ನಿಗದಿಯಾಗಲಿದೆ ಎಂದು ಎನ್. ಮಹೇಶ್ ತಿಳಿಸಿದರು.

ತೇಜೋವಧೆ ಮಾಡಲು ನನ್ನ ವಿರುದ್ಧ ಷಡ್ಯಂತ್ರ: ಶಾಸಕ ರೇಣುಕಾಚಾರ್ಯ ಆರೋಪ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಯಾರೋ ಬ್ಲಾಕ್ ಮೇಲ್ ಮಾಡಿ ರೇಣುಕಾಚಾರ್ಯ ವಿಡಿಯೋ ಎಂದು ಹೆದರಿಸುತ್ತಿದ್ದಾರೆ ನಾನು ಯಾವುದೇ ಬ್ಲಾಕ್ ಮೇಲ್ ಖೆಡ್ಡಾಗೆ ಬೀಳಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ತಮ್ಮ ವಿರುದ್ಧದ ವಿಡಿಯೋ ಪ್ರಸಾರ ಮಾಡದಂತೆ ಮಧ್ಯಂತರ ತಡೆ ಕೋರಿ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಎಡಿಟ್ ಮಾಡಿ ಒಬ್ಬರ ಮುಖಕ್ಕೆ ಮತ್ತೊಬ್ಬರ ಮುಖ ಅಂಟಿಸಬಹುದು. ಯಾರೋ ಪುಣ್ಯಾತ್ಮ ನನ್ನ ವಿಡಿಯೋ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.

ನಾನು ಅಂದು ಒಮ್ಮೆ ತಪ್ಪು ಮಾಡಿದ್ದೆ. ಆ ತಪ್ಪಿನಿಂದ ಪಾಠ ಕಲಿತಿದ್ದೇನೆ. ನಡೆಯುವ ಮನುಷ್ಯ ಎಡವುದು ಸಹಜ. ಮತ್ತೆ ಎಂದೂ ಆ ತಪ್ಪು ಮಾಡಿಲ್ಲ. ಕೀಳುಮಟ್ಟದ ರಾಜಕಾರಣವನ್ನು ಸಹಿಸಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಪೊಲೀಸ್ ಠಾಣೆಗಳು ಬಿಜೆಪಿ ಕಾರ್ಯಾಲಯಗಳಾಗಿವೆ: ತಂಗಡಗಿ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:

ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಂತಾಗಿದ್ದಾರೆ. ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳು ಬಿಜೆಪಿ ಕಾರ್ಯಾಲಯಗಳಾಗಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ದೂರಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕಾಂಗ್ರೆಸ್ ಮಾಡ್ತಿದೆ ಅಂತ ಬಿಜೆಪಿಯವರು ಮಾತನಾಡುತ್ತಿದ್ದರು. ಸಲಹೆ ಕೊಡುತ್ತಿದ್ದ ಬಿಜೆಪಿ ಮುಖಂಡರು ಈಗ ಎಲ್ಲಿ ಕಾಣೆಯಾಗಿದ್ದಾರೋ ಗೊತ್ತಿಲ್ಲ. ಮೊಟ್ಟೆಯಲ್ಲೂ ದುಡ್ಡು ಮಾಡಲು ಹೊರಟಿರುವುದು‌ ಖೇದಕರ ಸಂಗತಿ. ಇದರ ಬಗ್ಗೆ ಏನು ಹೇಳುತ್ತಾರೆ ಬಿಜೆಪಿ ಮುಖಂಡರು ಎಂದು ಪ್ರಶ್ನಿಸಿದರು.

ಭ್ರಷ್ಟಾಚಾರ ಯಾವ ಮಟ್ಟಿಗೆ ಮಾಡ್ತಾರೆ ಎನ್ನಲು ಇದು ಎರಡನೇ ಉದಾಹರಣೆ. ಕನಕಗಿರಿಯಲ್ಲಿ ಶೂ, ಸಾಕ್ಸ್ ಭ್ರಷ್ಟಾಚಾರ ಮೊದಲನೆಯದ್ದು. ಜೊಲ್ಲೆಯವರ ಬಗ್ಗೆ ಯಾರೂ ಮಾತನಾಡ್ತಿಲ್ಲ. ಕ್ರಮದ ಬಗ್ಗೆ ಬಿಜೆಪಿ‌ ನಾಯಕರು ಮಾತನಾಡ್ತಿಲ್ಲ. ನೂತನ ಸಿಎಂ ಬೊಮ್ಮಾಯಿಯವರು ಜೊಲ್ಲೆಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ತಂಗಡಗಿ ಆಗ್ರಹಿಸಿದರು.

ಕಡ್ಡಾಯ ರಜೆ ಮೇಲೆ ಇದ್ದ ಪೊಲೀಸ್ ಅಧಿಕಾರಿಗಳನ್ನು ಮತ್ತೇ ಅದೇ ಹುದ್ದೆಗೆ ನಿಯೋಜಿಸಿರುವುದನ್ನು ನೋಡಿದರೆ ಭ್ರಷ್ಟಾಚಾರ ಎಷ್ಟರಮಟ್ಟಿಗೆ ಇದೆ ಎಂದು ಗೊತ್ತಾಗುತ್ತದೆ. ಇದು ನಾಚಿಕೆಗೇಡಿತನ. ಈ ಕುರಿತು ಸಿಎಂಗೆ ಪತ್ರ ಬರೀತಿನಿ. ಮರಳು ಅಕ್ರಮ ದಂಧೆ ಮೇಲೆ ದಾಳಿಯಾಗಿದ್ದು ಪೊಲೀಸ್ ಅಧಿಕಾರಿಗಳು ಕಡ್ಡಾಯ ರಜೆ ಹೋದ ತಕ್ಷಣ. ಜಿಲ್ಲೆಯಲ್ಲಿ ಕಾನೂನೇ ಇಲ್ಲ. ಅಂಧೇರಿ ದರ್ಬಾರ್ ನಡೆದಿದೆ ಎನ್ನುವುದಕ್ಕೆ ಇದು ಸಾಕ್ಷಿ ಎಂದರು.

2022ರಲ್ಲಿ ಚುನಾವಣೆ ಸಾಧ್ಯತೆ: ತನಿಖೆ ಅನ್ನೋದು ಬರೀ ಬಾಯಿ ಮೂಲಕ ನಡೀತಾ ಇದೆ. ಶಿವರಾಜ ತಂಗಡಗಿಗೆ ಭಯ ಅನ್ನೋದೇ ಗೊತ್ತಿಲ್ಲ. ಯಾರ ಬೇಕಾದರೂ ಎಲೆಕ್ಷನ್‌ಗೆ ನಿಲ್ಲಲಿ. ಮತ ಹಾಕುವವರು ಜನ. ಜನ ತೀರ್ಮಾನ ಮಾಡ್ತಾರೆ. ನಮ್ಮ ಪಕ್ಷದ ಹಿರಿಯರು ಹೇಳಿದಾರೆ. ಈ ಸರಕಾರ ಬಹಳ ದಿನ ನಿಲ್ಲಲ್ಲ. 2022ರಲ್ಲಿ ಚುನಾವಣೆ ಸನ್ನೀಹಿತವಾಗುವ ಸಾಧ್ಯತೆ ಇದೆ. ಬೊಮ್ಮಾಯಿಯವರು ಉತ್ತಮ ಆಡಳಿತಗಾರರು. ಆಡಳಿತ ನಡೆಸಲು ಬಿಜೆಪಿಯವರೇ ಬಿಡಲ್ಲ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ರಸಗೊಬ್ಬರಗಳ ಕೊರತೆ ಬಹಳಷ್ಟು ಇದೆ. ವಾರ-ಹತ್ತು ದಿನಗಳವರೆಗೆ ಗಡುವು ಕೊಟ್ಟು ಕಾದು ನೋಡ್ತಿವಿ. ಕೊರತೆ ನಿವಾರಿಸದಿದ್ದರೆ ಖಂಡಿತವಾಗಿ ಬೀದಿಗಿಳಿದು ಹೋರಾಟ ನಿಶ್ಚಿತ ಎಂದು ಅವರು ಎಚ್ಚರಿಸಿದರು.

ಪತ್ನಿಯ ಅಕ್ರಮ ಸಂಬಂಧ ಶಂಕೆ; ಪತಿ ವಿಷ ಸೇವಿಸಿ ಆತ್ಮಹತ್ಯೆ!

ವಿಜಯಸಾಕ್ಷಿ ಸುದ್ದಿ, ಗದಗ

ಪತ್ನಿಯ ಅನೈತಿಕ ಸಂಬಂಧ ಕುರಿತು ಪ್ರಶ್ನಿಸಿದ್ದಕ್ಕೆ ಪತ್ನಿ, ಆಕೆಯ ತಾಯಿ, ಪ್ರಿಯಕರ ಸೇರಿ ಹಲ್ಲೆ ನಡೆಸಿದ್ದರಿಂದ ಮನನೊಂದು ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ರೇಣವ್ವ ಪೂಜಾರ ಎಂಬುವವರು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಗದಗ ತಾಲೂಕಿನ ಹೊಂಬಳ ಗ್ರಾಮದ
ಸಂಜೀವ ಜಾಂಬವಂತ ಪೂಜಾರ ಎಂಬುವವರು ಹತ್ತು ವರ್ಷಗಳ ಹಿಂದೆ ಅದೇ ಗ್ರಾಮದ ಕಲ್ಪನಾ ಎಂಬುವಳನ್ನು ಮದುವೆ ಆಗಿ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದರು.

ಸಂಜೀವ ಜು.11ರಂದು ರಾತ್ರಿಗೆ ಮನೆಗೆ ಬಂದಾಗ ಹೆಂಡತಿ ಕಲ್ಪನಾ ರಾಜು ಬಣಕಾರ ಎಂಬಾತನೊಂದಿಗೆ ಸಲುಗೆಯಿಂದ ಇರುವುದನ್ನು ಕಂಡು ಇದನ್ನು ಕಲ್ಪನಾಳ ತಾಯಿ ನಿಂಗವ್ವಳಿಗೆ ತಿಳಿಸಿದ್ದಾನೆ. ಆದರೆ, ನಿಂಗವ್ವ, ಕಲ್ಪನಾ, ರಾಜು ಬಣಕಾರ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.
ಇದರಿಂದ ಹೆದರಿದ ಸಂಜೀವ ರಾತ್ರಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ಮಲಗಿ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ಸಾವಿಗೆ ಕಲ್ಪನಾ ಸಂಜೀವ ಪೂಜಾರ, ರಾಜು ಬಣಕಾರ, ನಿಂಗವ್ವ ಪೂಜಾರ ಅವರೇ ಕಾರಣ ಎಂದು ಮೃತನ ತಾಯಿ ರೇಣವ್ವ ಪೂಜಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!