Home Blog Page 3255

ಎಸ್ಪಿ ಮೇಲೆ ತೂಗುಗತ್ತಿ; ಗಲಭೆಗೆ ಕುಮ್ಮಕ್ಕು ನೀಡಿದವರ ಮೇಲೆ ಕ್ರಮ ಕೈಗೊಳ್ತಾರಾ ಶಿವಪ್ರಕಾಶ್?

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ನರಗುಂದ ಕೋಮುಗಲಭೆಯಲ್ಲಿ ಯುವಕನೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ ಉತ್ತರ ವಿಭಾಗದ ಐಜಿ ಅವರು ನರಗುಂದ ಸಿಪಿಐ ನಂದೀಶ್ವರ ಕುಂಬಾರ್ ಅವರನ್ನು‌ ಅಮಾನತು‌ ಮಾಡಿ ಆದೇಶಿಸಿದ್ದಾರೆ. ಇನ್ನುಳಿದ ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕಾರಿ, ಸಿಬ್ಬಂದಿಗಳ ಮೇಲೆ‌ ಕ್ರಮ ಕೈಗೊಳ್ಳುವ ಜವಾಬ್ದಾರಿ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಹೆಗಲಿಗೆ ಬಿದ್ದಿದೆ.

ನರಗುಂದ ಗಲಭೆ ಪ್ರಕರಣ ಕುರಿತಂತೆ
ಹಲವು ತಿಂಗಳಿಂದ ಹಿಂದೂ-ಮುಸ್ಲಿಂರ ಮಧ್ಯೆ ನಿರಂತರವಾಗಿ ಗಲಾಟೆ, ಗಲಭೆಗಳು ನಡೆಯುತ್ತಿದ್ದರೂ ತಡೆಗಟ್ಟಲು ಮುಂದಾಗಲಿಲ್ಲ. ಅಲ್ಲದೇ, ಘಟನೆ ಬಳಿಕ ಆರೋಪಿಗಳನ್ನು ಶೀಘ್ರವೇ ಬಂಧಿಸಲಿಲ್ಲ. ಅಲ್ಲದೇ, ಎರಡು ಕೋಮಿನ ಮಧ್ಯೆ ಆಗಾಗ ನಡೆಯುತ್ತಿದ್ದ ಸಣ್ಣಪುಟ್ಟ ಗಲಾಟೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲ, ಕರ್ತವ್ಯ ಲೋಪವೆಸಗಿದ್ದಾರೆ ಎಂಬ ಕಾರಣಕ್ಕೆ ನರಗುಂದ ಸಿಪಿಐ‌ ನಂದೀಶ್ವರ ಕುಂಬಾರ ಅವರನ್ನು ಐಜಿಪಿ ಎನ್.ಸತೀಶ್ ಕುಮಾರ್ ಅವರು ಅಮಾನತು‌ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನರಗುಂದ ಪೊಲೀಸ್ ಠಾಣೆಯ ಇನ್ನುಳಿದ ಅಧಿಕಾರಿ, ಸಿಬ್ಬಂದಿಗಳಿಗೆ ನಡುಕ‌ ಶುರುವಾಗಿದೆ.

ತಮ್ಮ ವ್ಯಾಪ್ತಿಗೆ ಬರುವ ನರಗುಂದ ಸಿಪಿಐ ಅವರನ್ನು ಅಮಾನತು ಮಾಡಿ ಆದೇಶಿಸಿರುವ ಐಜಿಪಿ ಅವರು, ಇನ್ನುಳಿದ ಪೊಲೀಸ್ ಸಿಬ್ಬಂದಿಗಳ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಹಲವು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವವರು, ಕೊಲೆ ಪ್ರಕರಣದಲ್ಲಿ ಭಾಗಿಯಾದ ಭಜರಂಗದಳ ಕಾರ್ಯಕರ್ತರಿಗೆ ಯಾವೆಲ್ಲ ಅಧಿಕಾರಿಗಳು ಕುಮ್ಮಕ್ಕು ‌ನೀಡುತ್ತಿದ್ದರು ಎಂಬ ಇತ್ಯಾದಿ ಮಾಹಿತಿಗಳನ್ನು ‌ತರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ, ಅಂತಹ ಅಧಿಕಾರಿಗಳ‌ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಎಸ್ಪಿ ಅವರಿಗೆ ವಹಿಸಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಎಸ್ಪಿ ಅವರ ಮೇಲೆ ತೂಗುಗತ್ತಿ ಓಡಾಡುತ್ತಿದೆ.

ಗದಗ ಜಿಲ್ಲೆಯ ಇತಿಹಾಸದಲ್ಲೇ ಇಂತಹ ಕೋಮು ಗಲಭೆಗಳು‌ ನಡೆದಿರಲಿಲ್ಲ. ಅಲ್ಲದೇ, ಸಣ್ಣಪುಟ್ಟ ಘಟನೆಗಳು ನಡೆದರೂ ಎರಡು ಕಡೆಯ ಹಿರಿಯರು ಬೈದು ಬುದ್ಧಿವಾದ ಹೇಳಿ ಸರಿಪಡಿಸುತ್ತಿದ್ದರು. ಆದರೆ, ನರಗುಂದದಲ್ಲಿ ಜ.17 ರಂದು ನಡೆದ ಘಟನೆಯಿಂದಾಗಿ ಗದಗ ಜಿಲ್ಲೆಯ ‌ಜನತೆ ತಲೆತಗ್ಗಿಸುವಂತಾಗಿದೆ. ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿರುವ ಜಿಲ್ಲೆಗೆ ಕಪ್ಪು ಮಸಿ ಅಂಟಿದಂತಾಗಿದೆ ಎಂಬ ಮಾತು ಸಾರ್ವಜನಿಕ ‌ವಲಯದಲ್ಲಿ‌ ಕೇಳಿ ಬರುತ್ತಿದೆ.

ಅದರಂತೆ, ಎಸ್ಪಿ ಶಿವಪ್ರಕಾಶ್ ದೇವರಾಜು ಅವರು ಕರ್ತವ್ಯಲೋಪ ಎಸಗಿದ ಪೊಲೀಸ್ ಇಲಾಖೆ ಸಿಬ್ಬಂದಿಗಳು‌ ಮತ್ತು ಆರೋಪಿಗಳ ಮೇಲೆ ಸೂಕ್ತ ಕ್ರಮ‌ ಕೈಗೊಂಡು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರಾ?. ತಾವೇ ಹೇಳಿದಂತೆ ಈ‌‌ ನಾಲ್ವರು ಆರೋಪಿಗಳಷ್ಟೇ ಅಲ್ಲದೇ ಘಟನೆಗೆ ಕುಮ್ಮಕ್ಕು ‌ನೀಡಿದ ಆರೋಪಿಗಳನ್ನು ಬಂಧಿಸುತ್ತಾರಾ? ಎಂಬುದನ್ನು ‌ಕಾದು ನೋಡಬೇಕಿದೆ.

ಫ್ಯಾಬ್ ಇಂಡಿಯಾ; ಕುಶಲ ಕರ್ಮಿಗಳು, ರೈತರಿಗೆ 7ಲಕ್ಷ ಷೇರುಗಳ ಉಡುಗೊರೆ

ಹುಬ್ಬಳ್ಳಿ: ಜೀವನ ಶೈಲಿಯ ಚಿಲ್ಲರೆ ಬ್ರಾಂಡ್ ಫ್ಯಾಬ್ ಇಂಡಿಯಾ ಆರಂಭಿಕ ಸಾರ್ವಜನಿಕ ಕೊಡುಗೆ ಮೂಲಕ 4,000 ಕೋಟಿ ರೂ. ಸಂಗ್ರಹಿಸಲು ಯೋಜಿಸಿದೆ. ಕಂಪನಿಯ ಪ್ರವರ್ತಕರು ಕುಶಲಕರ್ಮಿಗಳು ಮತ್ತು ರೈತರಿಗೆ 7 ಲಕ್ಷಕ್ಕೂ ಹೆಚ್ಚು ಷೇರುಗಳನ್ನು ಉಡುಗೊರೆಯಾಗಿ ನೀಡಲು ಯೋಜಿಸಿದ್ದಾರೆ.

ಶನಿವಾರ, ಕಂಪನಿಯು 500 ಕೋಟಿ ರೂ.ವರೆಗಿನ ಷೇರುಗಳ ವಿತರಣೆಯನ್ನು ಒಳಗೊಂಡಿರುವ ಆಫರ್‌ಗಾಗಿ ಸೆಬಿಗೆ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಹೆಚ್‌ಪಿ) ಸಲ್ಲಿಸಿದೆ. ಇದಲ್ಲದೆ, 2,50,50,543 ಷೇರುಗಳ ಆಫರ್ ಫಾರ್ ಸೇಲ್ ಇರುತ್ತದೆ.

“ಕಂಪನಿ ಅಥವಾ ಅದರ ಅಂಗಸಂಸ್ಥೆಗಳೊಂದಿಗೆ ತೊಡಗಿಸಿಕೊಂಡಿರುವ ಕೆಲವು ಕುಶಲಕರ್ಮಿಗಳು ಮತ್ತು ರೈತರಿಗೆ ಬಹುಮಾನ ಮತ್ತು ಕೃತಜ್ಞತೆ ವ್ಯಕ್ತಪಡಿಸಲು” ಫ್ಯಾಬ್ ಇಂಡಿಯಾದ ಪ್ರವರ್ತಕರಾದ ಬಿಮ್ಲಾ ನಂದಾ ಬಿಸೆಲ್ ಮತ್ತು ಮಧುಕರ್ ಖೇರಾ ಅವರು ಡಿಆರ್‌ಎಚ್‌ಪಿ ಸಲ್ಲಿಕೆ ಬಳಿಕ ಕ್ರಮವಾಗಿ 4,00,000 ಷೇರುಗಳು ಮತ್ತು 3,75,080 ಷೇರುಗಳನ್ನು ವರ್ಗಾಯಿಸಲು ಉದ್ದೇಶಿಸಿದ್ದಾರೆ.

” ಬಿಮ್ಲಾ ನಂದಾ ಬಿಸೆಲ್ ಮತ್ತು ಮಧುಕರ್ ಖೇರಾ ತಮ್ಮ ಡಿಮ್ಯಾಟ್ ಖಾತೆಗಳನ್ನು ತೆರೆದಿದ್ದು ಕ್ರಮವಾಗಿ 4,00,000 ಈಕ್ವಿಟಿ ಷೇರುಗಳು ಮತ್ತು 3,75,080 ಈಕ್ವಿಟಿ ಷೇರುಗಳನ್ನು ವರ್ಗಾಯಿಸಿದ್ದಾರೆ, ಅವುಗಳನ್ನು ಕುಶಲಕರ್ಮಿಗಳು ಮತ್ತು ರೈತರಿಗೆ ಉಡುಗೊರೆಯಾಗಿ ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ” ಎಂದು ಡಿಆರ್‌ಎಚ್‌ಪಿಯಲ್ಲಿ ಹೇಳಲಾಗಿದೆ.

ಷೇರುಗಳ ಹೊಸ ಸಂಚಿಕೆಯಿಂದ ಬರುವ ಆದಾಯವನ್ನು ಕಂಪನಿಯ ಎನ್‌ಸಿಡಿಗಳ ಸ್ವಯಂಪ್ರೇರಿತ ವಿಮೋಚನೆಗಾಗಿ (ಪರಿವರ್ತಿಸಲಾಗದ ಡಿಬೆಂಚರ್‌ಗಳು), ಮುಂಗಡ ಪಾವತಿ ಅಥವಾ ಕೆಲವು ಬಾಕಿ ಇರುವ ಸಾಲಗಳ ಒಂದು ಭಾಗದ ನಿಗದಿತ ಮರುಪಾವತಿ ಮತ್ತು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತದೆ.

ಡಿಆರ್‌ಎಚ್‌ಪಿಯಲ್ಲಿ, ಕಂಪನಿಯು ತನ್ನ ಪರಿಸರ, ಸಾಮಾಜಿಕ ಮತ್ತು ಆಡಳಿತ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದೆ, “ನಮ್ಮ ಜತೆ ಕೆಲಸ ಮಾಡುವ ಜನರನ್ನು ಸಕ್ರಿಯಗೊಳಿಸುವುದು ಮತ್ತು ಮೇಲಕ್ಕೆತ್ತುವುದು, ಪರಿಸರ ಕಾಳಜಿ ವಹಿಸುವುದು ಮತ್ತು ನಮ್ಮ ನಡವಳಿಕೆಯಲ್ಲಿ ನೈತಿಕವಾಗಿರುವುದು ದೀರ್ಘಕಾಲದವರೆಗೆ ಮತ್ತು ಶಾಶ್ವತ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಪನಿ ನಂಬುತ್ತದೆ” ಎಂದು ಡಿಆರ್‌ಎಚ್‌ಪಿಯಲ್ಲಿ ಹೇಳಲಾಗಿದೆ.

“ನಾವು ಸಾಮಾಜಿಕ ಪ್ರಭಾವವನ್ನು ಸೃಷ್ಟಿಸಲು ಮತ್ತು ನಮ್ಮ ಕುಶಲಕರ್ಮಿಗಳು, ಸಮುದಾಯಗಳು, ಉದ್ಯೋಗಿಗಳು ಮತ್ತು ಹೂಡಿಕೆದಾರರಿಗೆ ಆರ್ಥಿಕ ಯೋಗಕ್ಷೇಮ ಉತ್ತೇಜಿಸುವ ಗುರಿ ಹೊಂದಿದ್ದೇವೆ, ಪರಿಸರ ಜವಾಬ್ದಾರಿ ಮತ್ತು ನೈತಿಕ ವಿಧಾನಗಳನ್ನು ಬಳಸುತ್ತೇವೆ” ಎಂದು ಅದು ವಿವರಿಸಿದೆ.

ನರಗುಂದ ಗಲಭೆ ಪ್ರಕರಣ; ಇನ್ಸ್‌ಪೆಕ್ಟರ್ ನಂದೀಶ್ವರ ಕುಂಬಾರ್ ತಲೆದಂಡ

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ನಂದೀಶ್ವರ ಕುಂಬಾರ ತಲೆದಂಡವಾಗಿದೆ.

ಉತ್ತರ ವಲಯದ ಐಜಿಪಿ ಎನ್ ಸತೀಶ್ ಕುಮಾರ್ ಅವರಿಂದ ಆದೇಶವಾಗಿದ್ದು, ಈ ಕುರಿತು ಎಸ್ಪಿ ಶಿವಪ್ರಕಾಶ್ ದೇವರಾಜು ಮಾಹಿತಿ ನೀಡಿದ್ದಾರೆ.

ನರಗುಂದ ಪಟ್ಟಣದಲ್ಲಿ ಕಳೆದ ಹಲವು ದಿನಗಳಿಂದ ಎರಡು ಸಮುದಾಯದ ಯುವಕರ ಮಧ್ಯ ಸಣ್ಣ ಪುಟ್ಟ ಕಲಹ ನಡೆಯುತ್ತಲೇ ಇತ್ತು. ಒಂದು ಹಂತದಲ್ಲಿ ಉರ್ದು ಶಾಲೆಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು. ಆ ನಂತರ ಪಟ್ಟಣದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣ ಇತ್ತು. ಇತ್ತೀಚಿಗೆ ಭಜರಂಗದಳದ ಮುಖಂಡ ಠಾಣೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಹರಿಹಾಯ್ದು ದ್ವೇಷ ಭಾಷಣ ಮಾಡಿದ್ದ. ನಂತರ ಅಂದೇ ರಾತ್ರಿ (ಜನವರಿ 17) ಅಮಾಯಕ ಯುವಕ ಸಮೀರ ಶಹಪುರ ಕೊಲೆ ಆಗಿತ್ತು.

ಬಂಧನ ಮಾಡುವಲ್ಲಿ ಎಡವಿದ್ದ ಪೊಲೀಸರು

ಅಮಾಯಕ ಯುವಕನ ಕೊಲೆ ನಂತರ ಕೊಲೆಗಾರರನ್ನು ಬಂಧಿಸುವಲ್ಲಿಯೂ ನರಗುಂದ ಪೊಲೀಸರು ಎಡವಿದ್ದರು. ಇದೀಗ ಇಡೀ ಪ್ರಕರಣವನ್ನು ಸರಿಯಾಗಿ ನಿಭಾಯಿಸುವಲ್ಲಿ ಕರ್ತವ್ಯ ಲೋಪ ಎಸೆಗಿದ ಆರೋಪ ಹೊರಿಸಿ ನಂದೀಶ್ವರ ಕುಂಬಾರ ಅವರನ್ನು ಉತ್ತರ ವಲಯದ ಐಜಿಪಿ ಸತೀಶಕುಮಾರ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಗವಿಶ್ರೀ ಕಪ್ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಗೆ ನಾಳೆ ಚಾಲನೆ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಗವಿ ಶ್ರೀ ಕಪ್ ರಾಜ್ಯಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಭಾನುವಾರ ಚಾಲನೆ ದೊರೆಯಲಿದೆ ಎಂದು ಕ್ರೀಡಾಕೂಟದ ಆಯೋಜಕ ಶ್ರವಣಕುಮಾರ ತಿಳಿಸಿದರು.

ನಗರದ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಂದ 52 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

ಈ ಟೂರ್ನಿಯ ಪ್ರತಿ ಪಂದ್ಯವು ತಲಾ 12 ಓವರ್ ಗಳ ಪಂದ್ಯವಾಗಿದೆ. ಪ್ರಥಮ ಬಹುಮಾನ 2.50 ಲಕ್ಷ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ದ್ವಿತೀಯ ಬಹುಮಾನ 1 ಲಕ್ಷ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ತೃತೀಯ ಬಹುಮಾನ 50 ಸಾವಿರ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ಹೊಂದಿದೆ. ಗವಿಶ್ರೀ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಗಮಿಸುವ ತಂಡಗಳಿಗೆ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಭಾನುವಾರ ಬೆಳಿಗ್ಗೆ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಟೂರ್ನಿಗೆ ಚಾಲನೆ ನೀಡುವರು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ್, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಸೇರಿ ಹಲವರು ಉಪಸ್ಥಿತರಿರುವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಟೂರ್ನಿಯ ಆಯೋಜಕ ಸೈಯದ್ ಮಹಿಮೂದ್ ಹುಸೇನ್, ಕ್ರಿಕೆಟಿಗ ಮೈನುದ್ದೀನ್ ವರ್ದಿ ಇದ್ದರು.

ಕಡಿಮೆ ಅವಧಿಯಲ್ಲೇ ಅಧಿಕ ಅಭಿವೃದ್ಧಿ; ಶಿವಯೋಗಿ ಶ್ರೀಗಳ ಪ್ರಶಂಸೆ

ಚಿಕ್ಕನರಗುಂದದಲ್ಲಿ ಉದ್ಯಾನವನ, ಗ್ರಾಮಸಭೆ ಕಟ್ಟೆ ಹಾಗೂ ಪಿಂಕ್ ಶೌಚಾಲಯ ಕಟ್ಟಡ ಉದ್ಘಾಟನೆ….ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ಕಾರ್ಯ ವೈಖರಿಗೆ ಶ್ರೀಗಳ, ಗ್ರಾಮಸ್ಥರ ಮೆಚ್ಚುಗೆ

ವಿಜಯಸಾಕ್ಷಿ ಸುದ್ದಿ, ನರಗುಂದ:

‘ಗ್ರಾಪಂ ಸದಸ್ಯರು, ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಹಳೆಯ ಕಾಲದ ಗ್ರಾಮೀಣ ಸೊಗಡನ್ನು ಗ್ರಾಮಸಭೆ ಕಟ್ಟೆಯನ್ನಾಗಿಸಿ ವಿಶೇಷ ಚೇತನರಿಗಾಗಿ ಉದ್ಯಾನವನ, ವಿದ್ಯಾರ್ಥಿನಿಯರಿಗಾಗಿ ಪಿಂಕ್ ಶೌಚಾಲಯ ನಿರ್ಮಿಸಲು ಶ್ರಮಿಸಿದ ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ಅವರ ಕಾರ್ಯ ಶ್ಲಾಘನೀಯ ಎಂದು ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.

ಶುಕ್ರವಾರ ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅವರಣದಲ್ಲಿ ನಿರ್ಮಿಸಿರುವ ಉದ್ಯಾನವನ, ಗ್ರಾಮಸಭೆ ಕಟ್ಟೆ ಹಾಗೂ ಪಿಂಕ್ ಶೌಚಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

‘ಗ್ರಾಪಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಡಿಮೆ ಅವಧಿಯಲ್ಲಿ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ರಾಯರೆಡ್ಡಿಯವರು ಇನ್ನಿತರರಿಗೆ ಮಾದರಿಯಾಗಿದ್ದಾರೆ. ಅಲ್ಲದೇ, ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕವೇ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದ ಅವರು, ನವಲಗುಂದ ತಾಲೂಕಿನಲ್ಲಿ ಗುಮ್ಮಗೋಳ ಹಾಗೂ ನರಗುಂದ ತಾಲೂಕಿಗೆ ಚಿಕ್ಕನರಗುಂದದ ಗ್ರಾಮ ಪಂಚಾಯತಿಗಳು ಮಾದರಿಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಮರಡಿ ಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ‘ಜನಪ್ರತಿನಿಧಿಗಳು ಕ್ರಿಯಾಶೀಲವಾಗಿದ್ದರೆ ಗ್ರಾಮದ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಚಿಕ್ಕನರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರೆಡ್ಡಿ ಅವರು ತಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ಸಾಬೀತು ಪಡಿಸಿದ್ದಾರೆ. ಅದರಂತೆ, ಇನ್ನಿತರ ಗ್ರಾಪಂ ಸದಸ್ಯರು, ಪಿಡಿಒರವರ ಅಭಿವೃದ್ಧಿಶೀಲ ಚಿಂತನೆಗಳು ಗ್ರಾಮದ ಸುಧಾರಣೆಗೆ ಮುನ್ನುಡಿಯಾಗಿದ್ದು, ಜಿಲ್ಲೆಯಲ್ಲಿಯೇ ಚಿಕ್ಕನರಗುಂದ ಗ್ರಾಮ ನಿದರ್ಶನವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ಮಾತನಾಡಿ, ‘ನಮ್ಮ ಗ್ರಾಮದ ಪ್ರಮುಖ ರಸ್ತೆಯೊಂದರ ಬಹುದಿನಗಳ ಸಮಸ್ಯೆ ಬಗೆಹರಿಸುವಲ್ಲಿ ಸಹಕರಿಸಿ ತಾಪಂನಿಂದ ಗ್ರಾಮದ ವಿವಿಧ ಅಭಿವೃದ್ಧಿ ಕಾಮಾಗಾರಿಗಳಿಗಾಗಿ ೧೯ ಲಕ್ಷ ರೂ. ಅನುದಾನ ಒದಗಿಸಿದ ಸಚಿವ ಸಿ.ಸಿ.ಪಾಟೀಲ ಅವರನ್ನು ಅಭಿನಂದಿಸಿದರು. ಗ್ರಾಪಂ ವ್ಯಾಪ್ತಿಯಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳಾಗಲು ತಾಪಂ ಇಒ, ಗ್ರಾಪಂ ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಹಾಗೂ ಗ್ರಾಮಸ್ಥರ ಸಹಕಾರವೇ ಕಾರಣ ಎಂದು ಹೇಳಿದರು.

ಗ್ರಾಮ ಪಂಚಾಯತಿ ಸದಸ್ಯ ಶರಣಪ್ಪ ಹಳೆಮನಿ ಮಾತನಾಡಿ, ಹತ್ತಾರು ಅಭಿವೃದ್ಧಿ ಕೆಲಸಗಳಿಗೆ ಅಧ್ಯಕ್ಷರ ಉತ್ಸಾಹ, ಸರ್ವ ಸದಸ್ಯರ, ಪಿಡಿಒ ಅವರ ಸಂಪೂರ್ಣ ಬೆಂಬಲ ಕಾರಣ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಬಾಪು ಹಿರೇಗೌಡ್ರ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ಶೋಭಾ ಕೋಣನ್ನವರ, ನಿರ್ಮಲಾ ತಳವಾರ, ಗ್ರಾಮದ ಹಿರಿಯರಾದ ಶಂಕ್ರಪ್ಪ ಯರಗಟ್ಟಿ, ರುದ್ರಗೌಡ ರಾಚನಗೌಡ್ರ, ಸಂಗಪ್ಪ ಬಾಚಿ, ಹನಮಂತ ಚಾವಡಿ, ಶ್ರೀನಿವಾಸ್ ರಾಯರೆಡ್ಡಿ, ಪಡಿಯಪ್ಪ ಮರಿಯಣ್ಣವರ, ಮಲ್ಲನಗೌಡ ಸರ್ವಮಾನೇದ, ಮಲ್ಲಿಕಾರ್ಜುನ ಸಾತನ್ನವರ, ಶಂಕರಗೌಡ ಚನ್ನಪ್ಪಗೌಡ್ರ, ಬಸನಗೌಡ ಮುದಿಗೌಡ್ರ, ಪಿಡಿಒ ಶೈನಾಜ್ ಮುಜಾವರ್ ಸೇರಿದಂತೆ ಇನ್ನಿತರರು ಇದ್ದರು.

ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ತಮ್ಮ ಮೂರು ತಿಂಗಳ ಗೌರವಧನದಲ್ಲಿ ಗ್ರಾಮದಲ್ಲಿರುವ ವಿಶೇಷ ಚೇತನರನ್ನು ಗುರುತಿಸಿ ಅವರಿಗೆ ಉದ್ಯಾನವನ ನಿರ್ಮಿಸಿರುವುದು ರಾಜ್ಯದಲ್ಲಿಯೇ ಮಾದರಿ ಕಾರ್ಯವಾಗಿದೆ.

ಬಸವರಾಜ್ ಹೊಂಗಲ್, ಗ್ರಾಪಂ ಮಾಜಿ ಉಪಾಧ್ಯಕ್ಷ

ಚಿಕ್ಕನರಗುಂದ ಗ್ರಾಮದಲ್ಲಿ ನಿರ್ಮಿಸಲಾಗಿರುವ ಗ್ರಾಮ ಸಭಾಕಟ್ಟೆ ನಮ್ಮ ಮುಂದಿನ ಪೀಳಿಗೆಗೆ ಒಂದು ಪಳಿಯುಳಿಕೆಯಾಗಿ ಉಳಿಯುವಂತಾಗಿದೆ.

ಶ್ರೀನಿವಾಸ ರಾಯರೆಡ್ಡಿ, ಗ್ರಾಮಸ್ಥ

ಗದಗಗೆ ‘ಕೌರವ’ ಬೇಡ, ‘ಶ್ರೀರಾಮುಲು’ ಉಸ್ತುವಾರಿ ಬೇಕು!

ಗದಗ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಅಸಮಾಧಾನ! ಸಚಿವ ಶ್ರೀರಾಮುಲುಗೆ ಮುದ್ರಣಕಾಶಿ ಉಸ್ತುವಾರಿ ವಹಿಸುವಂತೆ ಅಭಿಮಾನಿಗಳ ಒತ್ತಾಯ

ದುರಗಪ್ಪ ಹೊಸಮನಿ

ವಿಜಯಸಾಕ್ಷಿ ಸುದ್ದಿ, ಗದಗ:

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಐದು ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ಬದಲಾವಣೆ ಮಾಡಿ ಆದೇಶ ಹೊರಡಿಸುತ್ತಿದ್ದಂತೆ ಕೆಲ ಜಿಲ್ಲೆಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಗದಗ ಜಿಲ್ಲೆಯಲ್ಲೂ ಸದ್ಯ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ನೇಮಕವಾಗಿರುವ ಸಚಿವ ಬಿ.ಸಿ. ಪಾಟೀಲರನ್ನು ಬದಲಾಯಿಸಿ ಎಂಬ ಅಪಸ್ವರ ಕಮಲ ಪಾಳೆಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಸ್ವಂತ ಜಿಲ್ಲೆಯ ಮಂತ್ರಿಗಳಿಗೆ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡಿದ್ದು, ಈ ಹಿಂದೆ ಗದಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದ ಸಿ.ಸಿ. ಪಾಟೀಲರಿಗೆ ಬಾಗಲಕೋಟೆ ಜಿಲ್ಲೆಯ ಜವಾಬ್ದಾರಿ ನೀಡಿದೆ. ನೆರೆಯ ಹಾವೇರಿ ಜಿಲ್ಲೆಯ ಬಿ.ಸಿ. ಪಾಟೀಲ್‌ಗೆ ಗದಗ ಮತ್ತು ಚಿತ್ರದುರ್ಗ ಜಿಲ್ಲೆಗಳ ಉಸ್ತುವಾರಿ ಕೊಟ್ಟಿದ್ದು, ಬಿ.ಸಿ. ಪಾಟೀಲ ನೇಮಕಕ್ಕೆ ಸ್ವಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉಸ್ತುವಾರಿ ಮಂತ್ರಿ ಬದಲಾಯಿಸುವಂತೆ ಪಟ್ಟು ಹಿಡಿದಿದ್ದಾರೆ.

ಕೃಷಿ ಸಚಿವ ಬಿ.ಸಿ. ಪಾಟೀಲರಿಗೆ ಗದಗ ಜಿಲ್ಲೆ ದೂರವಾಗುತ್ತದೆ. ಅಲ್ಲದೆ, ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುವ ಸಾಧ್ಯತೆಗಳಿವೆ. ಹೀಗಾಗಿ ಗದಗ ಜಿಲ್ಲೆಯ ಜನರ ನಾಡಿಮಿಡಿತ ಅರಿತಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಉಸ್ತುವಾರಿ ಜೊತೆಗೆ ಅವರ ಕರ್ಮಭೂಮಿ ಗದಗ ಜಿಲ್ಲೆಯ ಉಸ್ತುವಾರಿಯನ್ನೂ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತ ಸಂದೇಶವುಳ್ಳ ಪೋಸ್ಟ್‌ ಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

‘ಸಚಿವ ಬಿ. ಶ್ರೀರಾಮುಲು ಗದಗ ಜಿಲ್ಲೆ ಜನತೆಯ ಮನಗೆದ್ದಿದ್ದಾರೆ. ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ಇದೆ. ಹೀಗಾಗಿ ಬಳ್ಳಾರಿ ಉಸ್ತುವಾರಿ ಜೊತೆಗೆ ಗದಗ ಜಿಲ್ಲೆ ಉಸ್ತುವಾರಿಯನ್ನೂ ನೀಡಬೇಕು. ಇದರಿಂದ ಗದಗ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೆ, ಶ್ರೀರಾಮುಲು ಅವರಿಗೆ ಗದಗ ಜನರು ಅಂದರೆ ಬಹಳ ಪ್ರೀತಿ ಇದೆ. ಈ ಹಿಂದೆ 2006ರಲ್ಲಿ ಶ್ರೀರಾಮುಲು ಗದಗ ಉಸ್ತುವಾರಿ ಸಚಿವರಾಗಿದ್ದಾಗ ಬಹಳಷ್ಟು ಜನಪರ ಕೆಲಸಗಳಾಗಿವೆ ಹೀಗಾಗಿ ಶ್ರೀರಾಮುಲು ಅವರನ್ನು ಗದಗ ಜಿಲ್ಲೆ ಉಸ್ತುವಾರಿ ಮಂತ್ರಿಯನ್ನಾಗಿ ನೇಮಿಸುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಶ್ರೀರಾಮುಲು ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ.

ಜಿಲ್ಲೆಯ ಸಚಿವರೇ ಉಸ್ತುವಾರಿ ವಹಿಸಿಕೊಂಡರೆ ಆಡಳಿತ ವ್ಯವಸ್ಥೆ ಚುರುಕಾಗಿರುತ್ತದೆ. ಜಿಲ್ಲೆಯ ಆಗುಹೋಗುಗಳ ಬಗ್ಗೆ, ಜನರ ಅಪೇಕ್ಷೆಯ ಕುರಿತು ಅವರಿಗೆ ಸಂಪೂರ್ಣ ಅರಿವಿರುತ್ತದೆ. ಜನ ಸಾಮಾನ್ಯರ ಕೈಗೆಟುಕುತ್ತಾರೆ. ಅಲ್ಲದೆ, ಸಮಸ್ಯೆಗೆ ಶೀಘ್ರವೇ ಸ್ಪಂದಿಸುತ್ತಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಾದ ಕಾಳಜಿ ಮತ್ತು ನೀಲನಕ್ಷೆ ಹೊಂದಿರುತ್ತಾರೆ. ಆದರೆ, ಬೇರೆ ಜಿಲ್ಲೆಯವರು ಅದೂ, ಓರ್ವರಿಗೆ ಎರಡೆರಡು ಜಿಲ್ಲೆಗಳ ಉಸ್ತುವಾರಿ ವಹಿಸಿದರೆ ಅಭಿವೃದ್ಧಿ ಕಷ್ಟಸಾಧ್ಯ. ಏಕೆಂದರೆ, ಈ ಹಿಂದೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉಸ್ತುವಾರಿಗಳಾಗಿದ್ದ ಅಷ್ಟೇನೂ ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ ಎಂಬುವುದು ಜಿಲ್ಲೆಯ ಜನರ ಅಳಲು.

ಸಿಸಿಪಿ ಎತ್ತಂಗಡಿಗೆ ಅಸಮಾಧಾನ

ತವರು ಜಿಲ್ಲೆಯ ಸಿ.ಸಿ. ಪಾಟೀಲರನ್ನು ಬಾಗಲಕೋಟೆಗೆ ಎತ್ತಂಗಡಿ ಮಾಡಿರುವ ಸಿಎಂ ಬಸವರಾಜ ಬೊಮ್ಮಾಯಿ ಬೇರೆ ಜಿಲ್ಲೆಯ ಬಿ.ಸಿ. ಪಾಟೀಲ್‌ಗೆ ಗದಗ ಜಿಲ್ಲಾ ಉಸ್ತುವಾರಿ ನೀಡಿದ್ದಾರೆ. ಇದು ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಅಸಮಾಧಾನವನ್ನುಂಟು ಮಾಡಿದೆ. ಹೀಗಾಗಿ ಅವಳಿ ನಗರಕ್ಕೆ ಸಿಸಿಪಿ ಬಂದಾಗ ಜೇನು ಹುಳುಗಳಂತೆ ಮುತ್ತಿಕ್ಕಿಗೊಳ್ಳುತ್ತಿದ್ದ ಬಿಜೆಪಿಗರು ಬಿಸಿಪಿ ಆಗಮಿಸಿದಾಗ ಸೇರುವುದು, ಸಹಕಾರ ನೀಡುವುದು ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ, ಸಿ.ಸಿ. ಪಾಟೀಲರನ್ನು ಎತ್ತಂಗಡಿ ಮಾಡಿದರೇನಾಯ್ತು ಗದಗ ಜಿಲ್ಲೆಯ ಬಗ್ಗೆ ಸವಿಸ್ತಾರವಾಗಿ ಗೊತ್ತಿರುವ ಬಿ. ಶ್ರೀರಾಮುಲು ಅವರಿಗೆ ಉಸ್ತುವಾರಿ ನೀಡಬೇಕೆಂಬ ಆಗ್ರಹ ಇದಕ್ಕೆ ಪುಷ್ಟಿ ನೀಡಿದಂತಿದೆ.

ಗದಗ ಜಿಲ್ಲೆಯ ಉಸ್ತುವಾರಿಗೆ ಬಿ. ಶ್ರೀರಾಮುಲು ಸೂಕ್ತ ವ್ಯಕ್ತಿ. ಅವರಿಗೆ ಗದುಗಿನ ಗಲ್ಲಿಗಲ್ಲಿಯ ಜನರು ಚಿರಪರಿಚಿತವಾಗಿದ್ದು, ಇದರಿಂದ ಜಿಲ್ಲೆಯ ಜನರಿಗೆ ಅನುಕೂಲವಾಗುತ್ತದೆ. ಅವರು ಉಸ್ತುವಾರಿ ಮಂತ್ರಿಯಾಗಿದ್ದಾಗಲೇ ಗದಗ ಜಿಲ್ಲೆ ರಾಜ್ಯದಲ್ಲಿ ಬೆಳಕಿಗೆ ಬಂದಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಹೀಗಾಗಿ ಬಿ.ಸಿ. ಪಾಟೀಲ್ ಬದಲಿಗೆ ಸಮೀಪದ ಶ್ರೀರಾಮುಲು ಅವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು.

ವಿಶ್ವನಾಥ ಖಾನಾಪುರ, ವಿಕಾಸ ವೇದಿಕೆ ಜಿಲ್ಲಾಧ್ಯಕ್ಷ

ಬೆಟ್ಟ ಅಗೆದು ಇಲಿ ಹಿಡಿದ ಅಧಿಕಾರಿಗಳು! ದೊಡ್ಡ ಸಾಧನೆ ಮಾಡಿದಂತೆ ಪೋಸ್ ಕೊಟ್ಟ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ: ಅಬಕಾರಿ‌ ದಾಳಿ, ಮದ್ಯ‌ ಅಕ್ರಮ ಮಾರಾಟ ಹತ್ತಿಕ್ಕುವ ಪೊಲೀಸರ ಯತ್ನ ಇದ್ದದ್ದೇ. ದೊಡ್ಡ ಮಿಕಗಳನ್ನು ಹಿಡಿದರೆ, ಪ್ರಶಂಸೆ ಮಾಡಬಹುದು. ಆದರೆ ಮುಂಡರಗಿ ತಾಲೂಕಿನ ಡಂಬಳದಲ್ಲಿ ಇತ್ತೀಚೆಗೆ ನಡೆದದ್ದೇ ಬೇರೆ!

ಡಂಬಳ ಗ್ರಾಮದ ಅಂಬೇಡ್ಕರ್ ಭವನದ ಬಳಿ ಇರುವ ಮಹೇಶ ಮೈಲಪ್ಪ ಹರಿಜನ ಎಂಬಾತನ ಮನೆಯಲ್ಲಿ ಅಕ್ರಮವಾಗಿ 5.94 ಲೀಟರ್ ಮಧ್ಯವನ್ನು (ಅಂದಾಜು ಮೌಲ್ಯ 2,319 ರೂಪಾಯಿ) ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿರುವ ಮಾಹಿತಿ ಮೇರೆಗೆ ದಾಳಿ ನಡೆಸಿ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಬ್ಬ ಆರೋಪಿಯನ್ನು ಹಿಡಿಯಲು ಅಬಕಾರಿ ಇಲಾಖೆ ಅಧಿಕಾರಿಗಳ ದಂಡೇ ಹೋಗಿದ್ದು ಗುಡ್ಡ ಅಗೆದು ಇಲಿ ಹಿಡಿದಂತೆ ಎನ್ನುವಂತಾಗಿದೆ. ಸಾಲದ್ದಕ್ಕೆ ಮಹಾನ್ ಸಾಧನೆ ಮಾಡಿದಂತೆ ಅಧಿಕಾರಿಗಳು ಆರೋಪಿಯನ್ನು ಮುಂದೆ ಕುಳ್ಳಿರಿಸಿ ಫೋಟೋ ಪೋಸ್ ಕೊಟ್ಟು ನಗೆಪಾಟಲಿಗೆ ಒಳಗಾಗಿದ್ದಾರೆ.

ರವಿ ಚನ್ನಣ್ಣವರ್ ಸೇರಿ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ

0

-ರಾಜ್ಯ ಸರಕಾರದಿಂದ ಅಧಿಕಾರಿಗಳ ಮತ್ತೊಂದು ಸರ್ಜರಿ

ವಿಜಯಸಾಕ್ಷಿ ಸುದ್ದಿ, ಗದಗ/ಕೊಪ್ಪಳ: ಈಚೆಗಷ್ಟೇ ರಾಜ್ಯ ಸರಕಾರ ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿತ್ತು. ಇದೀಗ ರವಿ ಚನ್ನಣ್ಣವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿದೆ.

ರವಿ ಚನ್ನಣ್ಣವರ್ ಅವರನ್ನು ಅಪರಾಧ ತನಿಖಾ ವಿಭಾಗದಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾಯಿಸಿದೆ. ಅಪರಾಧ ತನಿಖಾ ವಿಭಾಗದ ಎಸ್‌ಪಿಯಾಗಿದ್ದ ಡಾ.ಭೀಮಾಶಂಕರ ಗುಳೇದ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ್ ಉಪ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ. ಭ್ರಷ್ಟಾಚಾರ ನಿಗ್ರಹ ದಳದ ಎಸ್‌ಪಿಯಾಗಿದ್ದ ಅಬ್ದುಲ್ ಅಹ್ಮದ್ ಅವರನ್ನು ಕೆಎಸ್ಆರ್‌ಟಿಸಿಯ ಭದ್ರತಾ ಮತ್ತು ವಿಚಕ್ಷಣಾ ದಳದ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿದೆ. ಕೊಪ್ಪಳ ಎಸ್ಪಿಯಾಗಿದ್ದ ಟಿ.ಶ್ರೀಧರ್ ಅವರನ್ನು ನಾಗರಿಕ ಸೇವಾ ಹಕ್ಕು ನಿರ್ದೇಶನಾಲಯದ ಎಸ್‌ಪಿಯಾಗಿ ವರ್ಗಾಯಿಸಿದೆ. ಒಟ್ಟಾರೆ 9 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ವರ್ಗಾವಣೆಗೊಳಿಸಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.

ಜ.29ರಂದು ವಿಮಾನ ನಿಲ್ದಾಣ ನಿರ್ಮಾಣ ಜಾಗ ಪರಿವೀಕ್ಷಣೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ವಿಷಯ ಚುರುಕು ಪಡೆದಿದೆ. ಈಚೆಗಷ್ಟೇ ವಿಮಾನ ನಿಲ್ದಾಣ ಜಾಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಬೆಂಗಳೂರಿನಲ್ಲಿ ತೀರ್ಮಾನಿಸಲಾಗಿತ್ತು. ಈಗ ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಶಾಭಾವ ಮೂಡಿದೆ.

ಜನೇವರಿ 29ರಂದು ಕೊಪ್ಪಳಕ್ಕೆ ಕರ್ನಾಟಕ ಮೂಲಸೌಲಭ್ಯ‌ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ಆಗಮಿಸಲಿದ್ದು, ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಜಾಗದ ಪರಿವೀಕ್ಷಣೆ ಮಾಡಲಿದ್ದಾರೆ. ನಂತರ ಅಂದು ಮಧ್ಯಾಹ್ನ 12-30ಕ್ಕೆ ಈ ವಿಷಯ ಕುರಿತಂತೆ ಜಿಲ್ಲಾಡಳಿತ ಭವನದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ಸ್ಟೇರಿಂಗ್ ತುಂಡಾಗಿ ಉರುಳಿ ಬಿದ್ದ ಬಸ್; 15ಜನರಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಹುಬ್ಬಳ್ಳಿಯಿಂದ ಬಾಗಲಕೋಟಿಗೆ ತೆರಳುತ್ತಿದ್ದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಸಮೀಪದ ಬೆಣ್ಣೆಹಳ್ಳದ ಸೇತುವೆ ತಿರುವಿನಲ್ಲಿ ಸ್ಟೇರಿಂಗ್ ತುಂಡಾಗಿ ಉರುಳಿ ಬಿದ್ದು ಪರಿಣಾಮ ಹದಿನೈದು ಜನ ಪ್ರಯಾಣಿಕರು ಗಾಯಗೊಂಡ ಘಟನೆ ಜರುಗಿದೆ.

ಬಸ್ ನಲ್ಲಿ ಮೂವತ್ತು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಗಾಯಗೊಂಡ ಪ್ರಯಾಣಿಕರಿಗೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡ ವೃದ್ಧೆಯೊಬ್ಬರ‌ನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಪಿಎಸ್ಐ ಕಲ್ಮೇಶ ಬನ್ನೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!