Home Blog Page 3260

ಕುಡಿದು ಬಂದು ಗಲಾಟೆ ಮಾಡಿದ್ರೆ, ಜೀವ ಬೆದರಿಕೆ ಹಾಕಿದ್ರೆ ಕರ್ತವ್ಯ ಮಾಡೋದು ಹೇಗೆ?; ಶಾಸಕರ‌ ಮುಂದೆ ಅಳಲು ತೋಡಿಕೊಂಡ ವೈದ್ಯಾಧಿಕಾರಿ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

‘ನಾವು MD ಮಾಡಿ ಜನರ ಸೇವೆಗಾಗಿ ಇಲ್ಲಿಗೆ ಬಂದಿರುತ್ತೇವೆ ಹೊರತು ಗತಿಯಿಲ್ಲ ಅಂತಾ ಬಂದಿರುವುದಿಲ್ಲ. ಹೀಗೆ ಕುಡಿದು ಬಂದು ನಮಗೂ ನಮ್ಮ ಸಿಬ್ಬಂದಿಗಳಿಗೂ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದರೆ ಸೇವೆ ಮಾಡಲು ಹೇಗೆ ಸಾಧ್ಯ’ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ವೆಂಕಟೇಶ್ ರಾಠೋಡ್ ಅಸಹಾಯಕತೆ ವ್ಯಕ್ತಪಡಿಸಿದರು.

ಸೋಮವಾರ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಅವರು ಈ ರೀತಿ ಬೇಸರ ವ್ಯಕ್ತಪಡಿಸಿದರು.

ಕೆಲವರು ಕುಡಿದು ಬಂದು ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವಂತಹ ಸಿಬ್ಬಂದಿಗಳಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಇದರಿಂದ ಕರ್ತವ್ಯ ನಿರ್ವಹಿಸಲು ತುಂಬಾ ತೊಂದರೆಯಾಗುತ್ತಿದ್ದು, ಕುಡುಕರ ಹಾವಳಿಯಿಂದ ಸಿಬ್ಬಂದಿಗಳು ಬೇಸತ್ತು ಪ್ರತಿಭಟಿಸುವ ಹಂತಕ್ಕೆ ತಲುಪಿದ್ದಾರೆ. ಸಿಬ್ಬಂದಿಗಳ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಅವರ ಬೆಂಬಲಕ್ಕೆ ನಾನೂ ನಿಲ್ಲಬೇಕಾಗುತ್ತದೆ. ಆದ್ದರಿಂದ ಆಸ್ಪತ್ರೆಗೆ ರಾತ್ರಿ ವೇಳೆ ಖಾಯಂ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ತಕ್ಷಣವೇ ಸ್ಪಂದಿಸಿದ ಶಾಸಕ

ಆಡಳಿತ ವೈದ್ಯಾಧಿಕಾರಿ ಈ ರೀತಿ ಹೇಳಿದ್ದನ್ನು ಆಲಿಸಿದ ಶಾಸಕ ರಾಮಣ್ಣ ಲಮಾಣಿ, ಸಂಬಂದಿಸಿದ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಆಸ್ಪತ್ರೆಗೆ ಕಾಯಂ ಸಿಬ್ಬಂದಿ ನಿಯೋಜಿಸಬೇಕೆಂದು ಸೂಚಿಸಿದರು. ಕುಡಿದು ಬಂದು ಆಸ್ಪತ್ರೆಯಲ್ಲಿ ಗಲಾಟೆ ಮಾಡುವಂತವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಹೇಳಿದ ಅವರು, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ವೈದ್ಯಾಧಿಕಾರಿಗೆ ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ನಾಗರಾಜ್ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಸಂದೀಪ್ ಕಪ್ಪತ್ತನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಿಕ್ಕನರಗುಂದ ಗ್ರಾ.ಪಂ.ಗೆ ಹುಯಿಲಗೋಳ ಗ್ರಾ.ಪಂ. ಸದಸ್ಯರ ಭೇಟಿ; ಅಭಿವೃದ್ಧಿ ಕಾರ್ಯಗಳ ವೀಕ್ಷಣೆ

ವಿಜಯಸಾಕ್ಷಿ ಸುದ್ದಿ, ನರಗುಂದ:

ಜಿಲ್ಲೆಯ ಗದಗ ತಾಲ್ಲೂಕಿನ ಹುಯಿಲಗೋಳ ಗ್ರಾಮದ ಯುವ ಮುಖಂಡ ಕಲ್ಮೇಶ ವಡ್ಡಿನ್, ಸದಸ್ಯರಾದ ಪ್ರಕಾಶ ಮೂಲಿಮನಿ, ಈರಣ್ಣ ಕಳಕಣ್ಣವರ ಅವರು ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಅವಲೋಕಿಸಿದರು.

ಈ ವೇಳೆ ಯುವ ಮುಖಂಡ ಕಲ್ಮೇಶ ವಡ್ಡಿನ ಮಾತನಾಡಿ, ಜಿಲ್ಲೆಯಲ್ಲಿಯೇ ಚಿಕ್ಕನರಗುಂದ ಗ್ರಾ.ಪಂ. ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಗ್ರಾ.ಪಂ. ಅಧ್ಯಕ್ಷ ಮುತ್ತು ರಾಯರೆಡ್ಡಿ ಅವರನ್ನು ಅಭಿನಂದಿಸಿದರು. ಸದಸ್ಯರ, ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದ ಎಲ್ಲ ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಆಸನದ ವ್ಯವಸ್ಥೆ, ವಿಶೇಷ ಚೇತನರಿಗೆ ಉದ್ಯಾನವನ, ಗ್ರಾಮಸಭಾ ಕಟ್ಟೆ ನಿರ್ಮಿಸಿದ್ದಕ್ಕೆ ಹರ್ಷಪಟ್ಟರು.

ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ‘ಚಿಕ್ಕನರಗುಂದ ಪಂಚಾಯತಿಯ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಲು‌ ಆಗಮಿಸಿದ ಹುಯಿಲಗೊಳ ಗ್ರಾ.ಪಂ. ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ನಿಮ್ಮ ಭೇಟಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಉತ್ಸಾಹ ತುಂಬಿದಂತಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪುಗೌಡ ಹಿರೇಗೌಡ್ರ, ಹಿರಿಯರಾದ ಅಡಿವೆಪ್ಪ ಮರಿಯಣ್ಣವರ ಉಪಸ್ಥಿತರಿದ್ದರು.

ಮೂರನೇ ದಿನವೂ ನೂರರ ಗಡಿ ದಾಟಿದ ಸೋಂಕು; 19 ಮಕ್ಕಳು ಸೇರಿ 117 ಜನರಿಗೆ ಕೋವಿಡ್

ವಿಜಯಸಾಕ್ಷಿ ಸುದ್ದಿ, ಗದಗ:

ಸತತ ಮೂರು ದಿನಗಳಿಂದ 100+ ಸೋಂಕಿನ‌ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಮೂರೇ ದಿನದಲ್ಲಿ 361 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಭಾನುವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,05,325 ಮಾದರಿ ಸಂಗ್ರಹಿಸಿದ್ದು, 6,78,688 ನಕಾರಾತ್ಮಕವಾಗಿವೆ. ಶನಿವಾರದ 117 ಪ್ರಕರಣ ಸೇರಿ ಒಟ್ಟು 26,637 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 16 ಸೇರಿ ಒಟ್ಟು 25,814 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 504 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿರುವ ಒಟ್ಟು 504 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 330, ಮುಂಡರಗಿ 59, ನರಗುಂದ 8, ರೋಣ 59 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 46 ಹಾಗೂ ಹೊರ ಜಿಲ್ಲೆಯ 2 ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ಗೂಳಿ ಗುದ್ದಿ ಕಾರ್ಪೆಂಟರ್ ಗಾಯ; ಜಿಮ್ಸ್,ಗೆ ದಾಖಲು

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚುತ್ತಿದ್ದು, ಅವಳಿ ನಗರದ ಪ್ರಮುಖ ರಸ್ತೆಯಲ್ಲೇ ಬೀಡು ಬಿಟ್ಟಿರುತ್ತವೆ. ಇದರಿಂದಾಗಿ ಪ್ರತಿನಿತ್ಯ ದಾರಿ ಹೋಕರು, ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಹ ಭಯದ ವಾತಾವರಣ ಸೃಷ್ಟಿಯಾಗಿದೆ. ಗೂಳಿಯೊಂದು ಗುದ್ದಿದ ಪರಿಣಾಮ ವ್ಯಕ್ತಿಯೋರ್ವ ಗಾಯಹೊಂಡಿರುವ ಘಟನೆ ಶನಿವಾರ ನಡೆದಿದೆ.

ಹೌದು, ಅವಳಿ ನಗರದ ಖಾನತೋಟದ ಜನತಾ ಕಾಲನಿಯ ನಿವಾಸಿ ಇಮ್ತಿಯಾಜ್ ಡಾಲಾಯತ್ ಎಂಬುವವರಿಗೆ ಹಾಯ್ದಿದೆ. ಗುದ್ದಿದ ಪರಿಣಾಮ ತಲೆ ಮತ್ತು ಭುಜಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ‌ ಪಡೆಯುತ್ತಿರುವ ಇಮ್ತಿಯಾಜ್ ತಲೆಗೆ ಹೊಲಿಗೆ(ಸ್ಟಿಚ್) ಹಾಕಿದ್ದಾರೆ. ಭುಜಕ್ಕೆ ಒಳಪೆಟ್ಟು ಬಿದ್ದಿದೆ.

ಇಮ್ತಿಯಾಜ್ ಪರಿಚಯಿಸ್ಥರೊಬ್ಬರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆ, ಗೂಳಿ ಏಕಾಏಕಿ ಬಂದು ಗುದ್ದಿದೆ.
ಹಿಂದೆಯೂ ರೆಹಮಾನ್ ಎಂಬುವವರಿಗೂ ಗೂಳಿ ಗುದ್ದಿ ಗಾಯಗೊಳಿಸಿತ್ತು ಎಂದು ಹೇಳಲಾಗುತ್ತಿದೆ. ನಗರದಲ್ಲಿ ಗೂಳಿಗಳ ಹಾವಳಿ ನಿಯಂತ್ರಿಸುವಂತೆ ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿರತೆ ದಾಳಿಗೆ ಹಸು ಬಲಿ: ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ಗದಗ:

ಚಿರತೆ ದಾಳಿಯಿಂದಾಗಿ ಹಸು ಬಲಿಯಾಗಿರುವ
ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನಾಗೇಂದ್ರಗಡ ಗ್ರಾಮದ ಬಳಿ ನಡೆದಿದೆ.

ಗ್ರಾಮದ ನಿಂಗಪ್ಪ ಎಂಬ ರೈತನಿಗೆ ಸೇರಿದ ಹಸು ಚಿರತೆ ದಾಳಿಗೆ ತುತ್ತಾಗಿದೆ. ಜಮೀನಿನಲ್ಲಿ ಹಸು ಕಟ್ಟಿ ಹೋಗಿದ್ದ ವೇಳೆ ಚಿರತೆ ಹಸು ಮೇಲೆ ದಾಳಿ ನಡೆಸಿ ತಿಂದು ಹಾಕಿದೆ.

ಗಜೇಂದ್ರಗಡ ತಾಲ್ಲೂಕಿನಾದ್ಯಂತ ಹೀಗೆ ಹಲವು ಬಾರಿ ಚಿರತೆ ದಾಳಿ ಮಾಡಿದೆ. ಈ ಹಿಂದಿನಿಂದಲೂ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಅಲ್ಲದೇ, ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶ್ರೀಘ್ರವೇ ಚಿರತೆ ಸೆರೆ ಹಿಡಿಯುವಂತೆ ಅವರು ಒತ್ತಾಯಿಸಿದ್ದಾರೆ.

ಸುದ್ದಿ ತಿಳಿದ ಶಾಸಕ ಕಳಕಪ್ಪ ಬಂಡಿ, ಡಿಎಫ್ಒ ದೀಪಿಕಾ ಬಾಜಪೇಯಿ, ಎಸಿಎಫ್ ಪರಿಮಳ, ಗದಗ ಆರ್ ಎಫ್ ಒ ರಾಜು ಗೋಂದಕರ್, ಹಾಗೂ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಧಾರವಾಡ ಗ್ರಾಮೀಣ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಇರ್ಷಾದ್ ಅಹ್ಮದ್ ನೇಮಕ

ವಿಜಯಸಾಕ್ಷಿ ಸುದ್ದಿ, ಧಾರವಾಡ:

ಜಿಲ್ಲೆಯ ಸಂಶಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಮಾಜಿ ವಕ್ಫ ಮತ್ತು ಹಜ್ ಮಂಡಳಿಯ ನಾಮನಿರ್ದೇಶಿತ ಸದಸ್ಯ ಇರ್ಷಾದ ಅಹ್ಮದ್ ಮುಲ್ಲಾ ಅವರು ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅನುಮೋದನೆಯ ಮೇರೆಗೆ ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಧಾರವಾಡ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಕೊಪ್ಪಳ ನಗರದಲ್ಲಿ ಚಿರತೆ ಪ್ರತ್ಯಕ್ಷ?

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ:
ಕೊಪ್ಪಳ ನಗರದ ಹೊರವಲಯದಲ್ಲಿ, ನೀರಿನ ಸಂಗ್ರಹಾಗಾರ ಇರುವ ಸಿಂದೋಗಿ ರಸ್ತೆಯ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಕಳೆದ ಎರಡು ತಿಂಗಳಿಂದ ಈ ಭಾಗದ ರೈತರು ಚಿರತೆಯನ್ನು ಗಮನಿಸಿದ್ದಾರೆ. ಕಲ್ಲು ಬಂಡೆಯ ಮೇಲೆ ಅದು ಬಿಸಿಲಿಗೆ ಮೈಯೊಡ್ಡಿ ಕೂತಿದ್ದನ್ನು ಕಂಡು ಗಾಬರಿಯಾದ ರೈತರು, ಕೊಪ್ಪಳ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಆದರೆ, ಉಡಾಫೆ ವರ್ತನೆ ತೋರಿದ ಅರಣ್ಯ ಇಲಾಖೆ ಸಿಬ್ಬಂದಿ, ನಗರ ಪ್ರದೇಶದಲ್ಲಿ ಯಾವುದೇ ಚಿರತೆ ಇಲ್ಲ ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ, ಸ್ಥಳೀಯ ಪ್ರದೇಶದ ರೈತರು ಚಿರತೆ ಬಂಡೆಗಲ್ಲಿನಲ್ಲಿ ಕೂತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಕಾರು-ಲಾರಿ ಮಧ್ಯೆ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವು

0

ವಿಜಯಸಾಕ್ಷಿ ಸುದ್ದಿ, ಹಾವೇರಿ:

ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಕಡೂರು ಗ್ರಾಮದ ಬಳಿ ಎರಡು ಕಾರು ಮತ್ತು ಮೆಕ್ಕೆಜೋಳ ತುಂಬಿದ ಲಾರಿ ಮಧ್ಯೆ ಶನಿವಾರ ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಮೃತಪಟ್ಟಿದ್ದು, ಇನ್ನೂ ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಮತ್ತಿಕೋಟೆ ಗ್ರಾಮದ ಶಂಕರಗೌಡ ಬಸನಗೌಡ ನಾಗಪ್ಪಗೌಡರ್ (35), ಕರ್ನಲ್ಲಿ ಗ್ರಾಮದ ಪುನೀತ್ ಹರಮುಚಡಿ (12), ಮುಚಡಿ ಗ್ರಾಮದ ಶಾಂತಮ್ಮ ಶಿವಾನಂದಪ್ಪ ಹೊಟ್ಟಿಗೌಡರ(32) ಹಾಗೂ ರಘು ಶಿವಾನಂದಪ್ಪ ಹೊಟ್ಟಿಗೌಡರ (14) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.

ಇನ್ನು 26 ವರ್ಷದ ಪವಿತ್ರಾ, 16 ವರ್ಷದ ಪೂಜಾ ಹರಮುಚಡಿ, 7 ವರ್ಷದ ಪ್ರೀತಮ್, 50 ವರ್ಷದ ಕಲಾವತಿ ನಾಗಪ್ಪಗೌಡರ, 4 ವರ್ಷದ ಪೃಥ್ವಿ, 25 ವರ್ಷದ ಪ್ರೇಮಾ, 30 ವರ್ಷದ ಜ್ಯೋತಿ ಹಾಗೂ ತಿಪ್ಪೇಶ ರಾಗಿಕೊಪ್ಪ ಎಂಬುವವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದರ ಹಿಂದೆ ಒಂದು ಚಲಿಸುತ್ತಿದ್ದ ಎರಡೂ ಕಾರುಗಳಿಗೆ ಮೆಕ್ಕೆಜೋಳ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರುಗಳಿಗೆ ಡಿಕ್ಕಿ ಹೊಡೆದಿರುವುದರಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ರಟ್ಟೀಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಂಕ್ರಾಂತಿ ಪುಣ್ಯಸ್ನಾನಕ್ಕೆ ಹೋದ ಬಾಲಕರಿಬ್ಬರು ತುಂಗಭದ್ರಾ ನದಿಯಲ್ಲಿ ಸಾವು; ಮುಗಿಲು‌ ಮುಟ್ಟಿದ ಹೆತ್ತವರ ಆಕ್ರಂದನ

  • ಹಬ್ಬದ ಸಂಭ್ರಮಕ್ಕೆ ಸೂತಕದ ಛಾಯೆ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ:

 ಮಕರ ಸಂಕ್ರಾಂತಿಯ ನಿಮಿತ್ತ ತಾಲೂಕಿನ ಹೊಳೆ ಇಟಗಿ ಗ್ರಾಮದ ಪಕ್ಕದಲ್ಲಿರುವ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಅಸುನೀಗಿದ್ದಾರೆ.

ಶನಿವಾರ ಮಧ್ಯಾಹ್ನ ಹೊಳೆಇಟಗಿ ಗ್ರಾಮಕ್ಕೆ ಹೊಂದಿಕೊಂಡಿರುವ ತುಂಗಭದ್ರಾ ನದಿಯಲ್ಲಿ ಸಂಕ್ರಮಣ ನಿಮಿತ್ತ ಸ್ನಾನಕ್ಕಾಗಿ ಹೋದಾಗ ನದಿಯಲ್ಲಿರುವ ಆಳದ ಗುಂಡಿಯಲ್ಲಿ ಮುಳಗಿ ಸೂರಣಗಿ ಗ್ರಾಮದ ಪ್ರಜ್ವಲ್ ಬಸವರಾಜ ಮಾಸ್ತಮ್ಮನವರ (14) ಹಾಗೂ ಹೊಳೆ ಇಟಗಿ ಗ್ರಾಮದ ನಾಗರಾಜ ಕರಬಸಪ್ಪ ಬುರಡಿ (13) ಸಾವನ್ನಪ್ಪಿದ್ದಾರೆ.

ಸುದ್ದಿ ತಿಳಿದು ಸ್ಥಳೀಯರು ನದಿ ಪಾತ್ರಕ್ಕೆ ತೆರಳಿ ಈಜುಗಾರರ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಸ್ಥಳಕ್ಕೆ ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಸಿಪಿಐ ವಿಕಾಸ್ ಲಮಾಣಿ, ಪಿಎಸ್ಐ ನವೀನ್ ಕುಮಾರ್ ಜಕ್ಕಲಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ
ಮೃತ ಬಾಲಕರ ಪಾಲಕರು, ಸಂಬಂಧಿಕರು ಸ್ಥಳದಲ್ಲಿ ಜಮಾಯಿಸಿ, ಮೃತ ದೇಹಗಳನ್ನು ನೋಡಿ ಮಾಡಿದ ಆಕ್ರಂದನ ಕರುಳು ಹಿಂಡುವಂತಿತ್ತು.

ಶನಿವಾರವೂ ಮುಂದುವರೆದ ಸೋಂಕಿನ ಸ್ಫೋಟ; ರೋಣದ 30 ವೈದ್ಯಕೀಯ ವಿದ್ಯಾರ್ಥಿಗಳು ಸೇರಿ‌ 134 ಜನರಿಗೆ ಪಾಸಿಟಿವ್

ವಿಜಯಸಾಕ್ಷಿ ಸುದ್ದಿ, ಗದಗ:

ಕಳೆದೊಂದು ವಾರದಿಂದ ಶಾಲಾ ಕಾಲೇಜು ಮಕ್ಕಳಲ್ಲೂ ಹೆಚ್ಚೆಚ್ಚು ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಜಿಲ್ಲೆಯ ಶಿಕ್ಷಣ ಸಂಸ್ಥೆಗಳಿಗೆ ಕೋವಿಡ್ ಕಂಟಕವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ ನೂರರ ಗಡಿ ದಾಟಿತ್ತು. ಜ.14ರಂದು ಕಾಣಿಸಿಕೊಂಡ 110 ಸೋಂಕಿತರ ಪೈಕಿ 18 ವರ್ಷದೊಳಗಿನ 21 ಜನ ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಸದ್ಯ ಜಿಲ್ಲೆಯಲ್ಲಿ ಈ ವಯೋಮಾನದ 41 ಸಕ್ರಿಯ ಪ್ರಕರಣಗಳಿವೆ.

30 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು

ಜಿಲ್ಲೆಯ ರೋಣದ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಕೊರೊನಾ ಸ್ಫೋಟಗೊಂಡಿದೆ. ಒಂದೇ ದಿನ ರಾಜೀವ್ ಗಾಂಧಿ ಆಯುರ್ವೇದ ಮೆಡಿಕಲ್ ಕಾಲೇಜಿನ ಮೂವರು ವೈದ್ಯ ಉಪನ್ಯಾಸಕರು, 30 ವಿದ್ಯಾರ್ಥಿಗಳು ಸೇರಿ 33 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜ.13ರಂದು ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಿಬ್ಬಂದಿಗಳು ಸೇರಿ 267 ಜನರ ಮಾದರಿ ಸಂಗ್ರಹಿಸಿತ್ತು. ರಾಜೀವ್‌ಗಾಂಧಿ ಆಯುರ್ವೇದಿಕ ಆಸ್ಪತ್ರೆಯಲ್ಲಿ 27ಜನ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 6 ಜನರನ್ನು ಹೋಂ ಐಸೋಲೇಶ್‌ನಲ್ಲಿರಸಲಾಗಿದ್ದು, ಕಂಟೇನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಡಿಎಚ್‌ಒ ಡಾ.ಜಗದೀಶ್ ನುಚ್ಚಿನ್ ತಿಳಿಸಿದ್ದಾರೆ.

ಶನಿವಾರದವರೆಗೆ ಜಿಲ್ಲೆಯಲ್ಲಿ ಸೋಂಕಿನ ಪರೀಕ್ಷೆಗಾಗಿ 7,04,116 ಮಾದರಿ ಸಂಗ್ರಹಿಸಿದ್ದು, 6,77,596 ನಕಾರಾತ್ಮಕವಾಗಿವೆ. ಶನಿವಾರದ 134 ಪ್ರಕರಣ ಸೇರಿ ಒಟ್ಟು 26,520 ಜನರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೂ ಸೋಂಕಿನಿಂದ 319 ಜನ ಮೃತಪಟ್ಟಿದ್ದಾರೆ. ಇಂದಿನ 14 ಸೇರಿ ಒಟ್ಟು 25,798 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 403 ಸಕ್ರಿಯ ಪ್ರಕರಣಗಳಿವೆ.

ಒಟ್ಟು 403 ಸಕ್ರಿಯ ಪ್ರಕರಣಗಳ ಪೈಕಿ ಗದಗ ತಾಲ್ಲೂಕಿನಲ್ಲಿ 262, ಮುಂಡರಗಿ 46, ನರಗುಂದ 4, ರೋಣ 53 ಹಾಗೂ ಶಿರಹಟ್ಟಿ ತಾಲ್ಲೂಕಿನಲ್ಲಿ 37 ಹಾಗೂ ಹೊರ ಜಿಲ್ಲೆಯ 1ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

error: Content is protected !!