ಗದಗ-ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ 35 ವಾರ್ಡ್‌ಗಳಲ್ಲಿ ಒಟ್ಟು 51 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಅದರಂತೆ, ಏಳು ವಾರ್ಡ್‌ಗಳಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ.
ಅವಳಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದರಲ್ಲಿ ಬಹುತೇಕರು ಬಿಜೆಪಿ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯುವ ಮೂಲಕ ಸ್ವಪಕ್ಷದ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದಿದ್ದರು.
ಇವರಲ್ಲಿ ಕೆಲವರು ಕೈ-ಕಮಲ ಅಭ್ಯರ್ಥಿಗಳಿಗೆ ನಡುಕ ಹುಟ್ಟಿಸಿದ್ದರು. ಆದರೆ, ಅವರಲ್ಲಿ ವಾರ್ಡ್ ನಂ. 17ರಲ್ಲಿ ಆಸ್ಮಾ ರೇಶ್ಮಿ ಹಾಗೂ 21ನೇ ವಾರ್ಡಿನ ಮೈಬೂಬಸಾಬ ನದಾಫ್ ಎಂಬ ಇಬ್ಬರು ಪಕ್ಷೇತರರು ಮಾತ್ರ ಗೆದ್ದಿದ್ದು, ಇವರಿಬ್ಬರೂ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಗಳು ಎಂಬುದು ವಿಶೇಷ.
ಅದರಂತೆ, ಅವಳಿ ನಗರದ 2, 10, 11, 16, 20, 23 ಹಾಗೂ 28 ಸೇರಿ ಒಟ್ಟು 7 ವಾರ್ಡ್‌ಗಳಲ್ಲಿ ಪಕ್ಷೇತರರ ಪ್ರಾಬಲ್ಯ ಹೆಚ್ಚಿದೆ. ಇವುಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ಹಿಂದಿಕ್ಕಿ 2ನೇ ಸ್ಥಾನ ಗಳಿಸಿದ್ದಾರೆ. ಇನ್ನು 16ನೇ ವಾರ್ಡ್‌ನಲ್ಲಿ 2ನೇ ಸ್ಥಾನದಿಂದ ಕ್ರಮವಾಗಿ 5ನೇ ಸ್ಥಾನದವರೆಗೆ ಪಕ್ಷೇತರರಿದ್ದು, ಇಲ್ಲಿ ಬಿಜೆಪಿ 6ನೇ ಸ್ಥಾನಕ್ಕೆ ಹೋಗಿದೆ.
ಗದಗ ಬೆಟಗೇರಿ ನಗರಸಭೆಯ 35 ವಾರ್ಡ್ ಗಳ ಪೈಕಿ 18 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ. ಅದರಂತೆ ಕಾಂಗ್ರೆಸ್ 15, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದು, ಕದನ ಕಲಿಗಳು ಚುನಾವಣಾ ಕಣದಲ್ಲಿ ಪಡೆದ ಮತಗಳ ಸಂಪೂರ್ಣ ವಿವರ ಇಂತಿದೆ.
07 ಹಾಗೂ 35ನೇ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿಗಳ ಭರ್ಜರಿ ಗೆಲವು
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ ಬೆಟಗೇರಿ ನಗರಸಭೆಯ 35 ವಾರ್ಡ್ ಗಳ ಪೈಕಿ 18 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಅದರಂತೆ ಕಾಂಗ್ರೆಸ್ ಕಾಂಗ್ರೆಸ್ -15 ಪಕ್ಷೇತರ- 2 ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ನಗರಸಭೆ ಅಧಿಕಾರವನ್ನು ತೆಕ್ಕೆಗೆ ತೆಗೆದುಕೊಂಡಿದೆ.
ಅವಳಿ ನಗರದ ವಾರ್ಡ್ ನಂ.3ರಲ್ಲಿ ಮಾದುಸಾ ಮೇರವಾಡೆ, 5ರಲ್ಲಿ ಶಂಕರ್ ಕಾಕಿ, 7ರಲ್ಲಿ ರಾಘವೇಂದ್ರ ಯಳವತ್ತಿ, 11 ರಲ್ಲಿ ಶ್ವೇತಾ ದಂಡಿನ 12ರಲ್ಲಿ ವಿಜಯಲಕ್ಷ್ಮೀ ದಿಂಡೂರ, 13 ರಲ್ಲಿ ಗೂಳಪ್ಪ ಮುಶಿಗೇರಿ, 14ರಲ್ಲಿ ಪ್ರಕಾಶ ಅಂಗಡಿ, 15ರಲ್ಲಿ ಚಂದ್ರಶೇಖರ್ ತಡಸದ, 19ರಲ್ಲಿ ಮಹಾಂತೇಶ ನಲವಡಿ, 24ರಲ್ಲಿ ನಾಗರಾಜ ತಳವಾರ, 25ರಲ್ಲಿ ವಿನಾಯಕ ಮಾನ್ವಿ, 26ರಲ್ಲಿ ಹುಲಿಗೆಮ್ಮ ಹಬೀಬ, 28ರಲ್ಲಿ ಅನಿಲ್ ಅಬ್ಬಿಗೇರಿ, 31ರಲ್ಲಿ ಶೈಲಾ ಬಾಕಳೆ, 32ರಲ್ಲಿ ಸುನಂದಾ ಬಾಕಳೆ, 33ರಲ್ಲಿ ಅನಿತಾ ಗಡ್ಡಿ, 34ರಲ್ಲಿ ವಿದ್ಯಾವತಿ ಗಡಗಿ, ಹಾಗೂ 35ರಲ್ಲಿ ಉಷಾ ದಾಸರ ಸೇರಿ 15 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಅದರಂತೆ, ವಾರ್ಡ್ ನಂ1 ರಲ್ಲಿ ಲಕ್ಷ್ಮೀ ಸಿದ್ದಮ್ಮನಹಳ್ಳಿ, 2ರಲ್ಲಿ ಸುರೇಶ ಕಟ್ಟಿಮನಿ, 4ರಲ್ಲಿ ಶಕುಂತಲಾ ಅಕ್ಕಿ, 8ರಲ್ಲಿ ಪೂರ್ಣಿಮಾ ಬರದ್ವಾಡ, 6ರಲ್ಲಿ ಲಕ್ಷ್ಮವ್ವ ಭಜಂತ್ರಿ, 9ರಲ್ಲಿ ಚಂದ್ರು ಕರಿಸೋಮನಗೌಡ್ರ, 10ರಲ್ಲಿ ಇಮ್ತಿಯಾಜ್ ಶಿರಹಟ್ಟಿ, 16ರಲ್ಲಿ ಕೃಷ್ಣ ಪರಾಪೂರ, 18ರಲ್ಲಿ ಜೈನುಲಾಬ್ದಿನ್ ನಮಾಜಿ, 20ರಲ್ಲಿ ಪರವೀನಬಾಬು ಮುಲ್ಲಾ, 22ರಲ್ಲಿ ರವಿ ಕಮತರ, 23ರಲ್ಲಿ ಬರಕತ್ ಅಲಿ ಮುಲ್ಲಾ, 27ರಲ್ಲಿ ಲಲಿತಾ ಅಸೂಟಿ, 29ರಲ್ಲಿ ಲಕ್ಷ್ಮಣ ಚಂದಾವರಿ, 30ರಲ್ಲಿ ಪದ್ಮಾ ಕಟಗಿ ಸೇರಿ 15 ವಾರ್ಡ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇನ್ನು ವಾರ್ಡ್ ನಂ.17ನೇ ಆಸ್ಮಾ ರೇಶ್ಮಿ ಹಾಗೂ 21ನೇ ವಾರ್ಡಿನ ಮೈಬೂಬಸಾಬ ನದಾಫ್ ಪಕ್ಷೇತರ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.
ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ ವಾರ್ಡ್ ನಂ.21ರ ಪಕ್ಷೇತರ ಅಭ್ಯರ್ಥಿ ಮೆಹಬೂಬ್ ಸಾಬ ನದಾಫ್ (ಚುಮ್ಮಿ) ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ ವಾರ್ಡ್ ನಂ.32ರ ಬಿಜೆಪಿ ಅಭ್ಯರ್ಥಿ ಸುನಂದಾ ಬಾಕಳೆ, ವಾರ್ಡ್ ನಂ.20 ಕಾಂಗ್ರೆಸ್ ಅಭ್ಯರ್ಥಿ ಪರವೀಬಾನು ಮುಲ್ಲಾ, ವಾರ್ಡ್ ನಂ.10ರ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ, ವಾರ್ಡ್ ನಂ.15 ರ ಬಿಜೆಪಿ ಅಭ್ಯರ್ಥಿ ಚಂದ್ರು ತಡಸದ ಗೆಲುವು ಸಾಧಿಸಿದ್ದಾರೆ.
ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ ವಾರ್ಡ್ ನಂ.1 ಲಕ್ಷ್ಮೀ ಸಿದ್ದಮ್ಮನವರ ಹಾಗೂ 2ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುರೇಶ್ ಕಟ್ಟಿಮನಿ, ವಾರ್ಡ್ ನಂ.7 ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಯಳವತ್ತಿ 1500 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಾರ್ಡ್ ನಂ 26 ರ ಬಿಜೆಪಿ ಹುಲಗೆಮ್ಮ ಹಬೀಬ ಹಾಗೂ 31 ರ ಬಿಜೆಪಿ ಶೈಲಾ ಬಾಕಳೆ ಗೆಲುವು ಸಾಧಿಸಿದ್ದಾರೆ.
ಗುರುವಾರ ನಗರಸಭೆ ಚುನಾವಣೆಯ ಫಲಿತಾಂಶ ಅಭ್ಯರ್ಥಿಗಳ ಎದೆಯಲಿ ಢವಢವ; ಮಧ್ಯಾಹ್ನ 12 ಗಂಟೆಗೆ ಭವಿಷ್ಯ ನಿರ್ಧಾರ!
ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ಜನರ ಬಹು ನಿರೀಕ್ಷಿತ ನಗರಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸುದೀರ್ಘ ಎಂಟು ವರ್ಷಗಳ ಬಳಿಕ ಪ್ರಜಾಪ್ರಭುತ್ವದ ಪರೀಕ್ಷೆ ಎದುರಿಸಿ ಫಲಿತಾಂಶ ಎದುರು ನೋಡುತ್ತಿರುವ ಅಭ್ಯರ್ಥಿಗಳ ಎದೆಯಲಿ ನಡುಕ ಶುರುವಾಗಿದೆ.
ಅವಳಿ ನಗರದ 35 ವಾರ್ಡ್‌ಗಳಲ್ಲಿ ಕಾಂಗ್ರೆಸ್ 35, ಬಿಜೆಪಿ 35, ಜೆಡಿಎಸ್ 12, ಪಕ್ಷೇತರ 51 ಹಾಗೂ ಇನ್ನಿತರ ಪ್ರಾದೇಶಿಕ ಪಕ್ಷಗಳ 12 ಸೇರಿ ಒಟ್ಟು 146 ಜನ ಅಭ್ಯರ್ಥಿಗಳು ಈ ಬಾರಿಯ ನಗರಸಭೆ ಚುನಾವಣೆ ಎದುರಿಸಿದ್ದು, ಮತದಾರರು ಬರೆದ ಭವಿಷ್ಯ ಗುರುವಾರ ಮಧ್ಯಾಹ್ನ 12ಗಂಟೆಗೆ ಅನಾವರಣಗೊಳ್ಳಲಿದೆ.
ಈಗಾಗಲೇ ಹಲವರು ಇಂತಹ ಪರೀಕ್ಷೆಗಳನ್ನು ಎದುರಿಸಿ ಜಯಶೀಲರಾಗಿದ್ದರೆ, ಕೆಲವರಿಗೆ ಅನುತ್ತೀರ್ಣರಾಗಿರುವ ಅನುಭವವಿದೆ. ಹೀಗಾಗಿ ಮರಳಿ ಯತ್ನಿಸು ಎಂಬಂತೆ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿದ್ದಾರೆ.
ಬಿಜೆಪಿಯ ಅನಿತಾ ಗಡ್ಡಿ, ಉಷಾ ದಾಸರ, ಶ್ವೇತಾ ದಂಡಿನ, ಅನ್ನದಾನಿ ಮಾರನಬಸರಿ, ಚೆನ್ನಪ್ಪ ದ್ಯಾಂಪೂರ, ರೇಖಾ ಅಳವಂಡಿ, ನಿರ್ಮಲಾ ಕೊಳ್ಳಿ, ಶಿವರಾಜ್‌ಗೌಡ ಹಿರೇಮನಿ ಪಾಟೀಲ್, ವಿಜಯಲಕ್ಷ್ಮೀ ದಿಂಡೂರ, ಪ್ರಕಾಶ ಅಂಗಡಿ, ಲಕ್ಷ್ಮೀ ಶಂಕರ್ ಕಾಕಿ, ಕಾಂಗ್ರೆಸ್‌ನ ಅಶೋಕ ಮಂದಾಲಿ, ಗಣೇಶಸಿಂಗ್ ಬ್ಯಾಳಿ, ಬೋದ್ಲೆಖಾನ್ ಹಮಿದಾಬೇಗಂ, ಲಕ್ಷ್ಮವ್ವ ಭಜಂತ್ರಿ, ಪರವೀನಬಾನು ಮುಲ್ಲಾ, ಶಿವಪ್ಪ ಬಳ್ಳಾರಿ, ಸೈರಾಬಾನು ಬಳ್ಳಾರಿ, ಪಕ್ಷೇತರ ಅಭ್ಯರ್ಥಿಗಳಾದ ಹೇಮಂತ್ ಗಿಡ್ಡಹನಮಣ್ಣವರ, ಸುರೇಶ ಬೆಳದಡಿ, ಮೈಬೂಬಸಾಬ ನದಾಫ್, ಸ್ನೇಹಲತಾ ಕುರ್ತಕೋಟಿ, ಮಹೇಶ್ ರೋಖಡೆ, ಚೇತನ್ ಇರಕಲ್, ಶಿವರಾಜ್ ಕೋರಸ್, ಮೋಹನ್ ಕಟ್ಟಿಮನಿ, ಮಹಾಲಕ್ಷ್ಮೀ ಡಂಬಳ ಸೇರಿದಂತೆ ಹಲವರು ಇದೇ ಮೊದಲ ಬಾರಿಗೆ ನಗರಸಭೆ ಚುನಾವಣೆಯ ರಣರಂಗದಲ್ಲಿ ಸ್ಪರ್ಧಿಸಿದ್ದು, ಪ್ರಜೆಗಳ ಪ್ರಜಾಪ್ರಭುತ್ವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿಶ್ವಾಸದಲ್ಲಿದ್ದಾರೆ.
ಕಳೆದ ಮೂರು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ನಗರಸಭೆ ಕಚೇರಿ ಬಣಗುಡುತ್ತಿತ್ತು. ಇದರಿಂದ ಸಾಮಾನ್ಯ ಜನರ ಕೆಲಸಗಳು ಸರಿಯಾದ ಸಮಯಕ್ಕೆ ಆಗದೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ, ವಾರ್ಡ್‌ಗಳಲ್ಲಿನ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ.
ಅಧಿಕಾರಿಗಳ ಇಂತಹ ಬೇಜವಾಬ್ದಾರಿತನಕ್ಕೆ ಅವಳಿ ನಗರದ ಜನ ರೋಸಿ ಹೋಗಿದ್ದು, ಸದ್ಯ ಜನಪ್ರತಿನಿಧಿಗಳು ಬರುತ್ತಿದ್ದಾರೆಂದು ನಿಟ್ಟುಸಿರು ಬಿಟ್ಟಿದ್ದಾರೆ. ಅದರಂತೆ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವಳಿ ನಗರದ ಜನರನ್ನು ಬೆನ್ನು ಬಿಡದ ಬೇತಾಳನಂತೆ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಶೀಘ್ರವೇ ಬಗೆಹರಿಸಬೇಕಿದೆ. ನಗರಸಭೆ ವ್ಯಾಪ್ತಿಯ ರಸ್ತೆಗಳ ಸುಧಾರಣೆಯಾಗಬೇಕಿವೆ. ಆಮೆಗತಿಯಲ್ಲಿ ಸಾಗುತ್ತಿರುವ ಒಳಚರಂಡಿ(ಯುಜಿಡಿ) ಕಾಮಗಾರಿಗೆ ವೇಗ ನೀಡಬೇಕಿದೆ. ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಮುಳ್ಳಿನ ಗಿಡಗಂಟಿಗಳು ಬೆಳೆದು ಪಾಳು ಬಿದ್ದಿರುವ ಉದ್ಯಾನವನಗಳ ಪುನರ್ ಅಭಿವೃದ್ಧಿಗೊಳಿಸಬೇಕಿದೆ.
‘ಸೋಲೇ ಗೆಲುವಿನ ಸೋಪಾನ ಎಂಬ ನಾಣ್ಣುಡಿಯಂತೆ ನಗರಸಭೆ ಚುನಾವಣೆಯ ಫಲಿತಾಂಶ ಪರ ಅಥವಾ ವ್ಯತಿರಿಕ್ತವಾಗಿ ಬಂದರೂ ಪರಾಜಿತಗೊಂಡ ಅಭ್ಯರ್ಥಿಗಳು ಧೃತಿಗೆಡಬಾರದು. ಅದರಂತೆ, ಗೆದ್ದ ಅಭ್ಯರ್ಥಿಗಳು ಹೆಚ್ಚು ಬೀಗದೆ ಪ್ರಚಾರ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವತ್ತ ಕಾರ್ಯ ಪ್ರವೃತ್ತರಾಗಬೇಕು ಎಂಬುವುದು ಅವಳಿ ನಗರದ ಪ್ರಜ್ಞಾವಂತರ ಆಶಯವಾಗಿದೆ.
12 ಟೇಬಲ್‌ಗಳ ವ್ಯವಸ್ಥೆ
‘ಗದಗ-ಬೆಟಗೇರಿ ನಗರಸಭೆ ಚುನಾವಣೆಯ ಮತ ಎಣಿಕೆ ಕಾರ್ಯಕ್ಕಾಗಿ ಎರಡು ಎಣಿಕೆ ಕೊಠಡಿಗಳನ್ನು ಗುರುತಿಸಲಾಗಿದ್ದು, ಒಂದು ಕೊಠಡಿಯಲ್ಲಿ 6 ಟೇಬಲ್ ಇರಿಸಲಾಗಿದೆ. ಪ್ರತಿ ಚುನಾವಣಾಧಿಕಾರಿಗಳಿಗೆ ಎರಡರಂತೆ ಒಟ್ಟು 12 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಸದರಿ ಟೇಬಲ್‌ಗಳಿಗೆ ಒಬ್ಬ ಮೇಲ್ವಿಚಾರಕರು ಹಾಗೂ ಒಬ್ಬ ಎಣಿಕೆ ಸಹಾಯಕರು ಹೀಗೆ ಒಟ್ಟು 12 ಎಣಿಕೆ ಮೇಲ್ವಿಚಾರಕರು, 13 ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ಬಾಬು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಜನವರಿ 3ರಿಂದ ಶಾಲಾ-ಕಾಲೇಜುಗಳಲ್ಲಿ ಹಾಗೂ ಕ್ಷೇತ್ರ ಮಟ್ಟದಲ್ಲಿ 15-18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುವುದು. 01 ಜನವರಿ 2007ರ ಮುಂಚಿತವಾಗಿ ಜನಿಸಿದ ಮಕ್ಕಳಿಗೆ ಈ ಲಸಿಕೆ ಹಾಕಲಾಗುವುದು.
ಹೀಗಾಗಿ ಆಧಾರ ಕಾರ್ಡ್, ಸರ್ಕಾರ ನಿಗದಿಪಡಿಸಿದ ಗುರುತಿನ ಚೀಟಿ, 10ನೇ ತರಗತಿಯ ಅಂಕಪಟ್ಟಿ ಅಥವಾ ಶಾಲಾ ಮುಖ್ಯೋಪಾಧ್ಯಾಯರು ನೀಡಿದ ಗುರುತಿನ ಚೀಟಿ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಅದರಂತೆ, ಮೇಲ್ಕಾಣಿಸಿದ ವಯಸ್ಸಿನ ಎಲ್ಲಾ ಮಕ್ಕಳಿಗೂ ಕೋವ್ಯಾಕ್ಸಿನ್ ಲಸಿಕೆ ನೀಡಲಿದ್ದು, ಮೊದಲ ಲಸಿಕೆ ಪಡೆದ ಒಂದು ತಿಂಗಳ ಬಳಿಕ ಎರಡನೇ ಡೋಸ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಗದಗ-ಬೆಟಗೇರಿ ನಗರಸಭೆಗೆ ಸೋಮವಾರ ಮತದಾನ ನಡೆದಿದ್ದು, ಅವಳಿ ನಗರದ 35 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ 146 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಸುಭದ್ರಗೊಂಡಿದೆ. ಡಿ.30ರಂದು ಅಭ್ಯರ್ಥಿಗಳ ಭವಿಷ್ಯ ಹೊರ ಬೀಳಲಿದ್ದು, ಈ ಬಾರಿ ಗದುಗಿನ ಗದ್ದುಗೆ ಯಾರ ಪಾಲಾಗಲಿದೆ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.
ನಗರಸಭೆ ಚುನಾವಣೆಯಲ್ಲಿ ನೆಕ್ ಟು ನೆಕ್ ಫೈಟ್ ನಡೆಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ತಮ್ಮದೇ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ನಗರಸಭೆ ಸಿಂಹಾಸನಕ್ಕಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಹಪಹಪಿಸುತ್ತಿದ್ದಾರೆ. ಈ ಬೆನ್ನಲ್ಲೇ ಯಾರು ಗೆಲ್ಲಲಿದ್ದಾರೆ ಎಂಬ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವಳಿ ನಗರದ ಜನರಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ, ಅಭ್ಯರ್ಥಿಗಳಲ್ಲಿ ಗೊಂದಲದ ಜೊತೆಗೆ ಆತಂಕ ಸೃಷ್ಟಿಸಿದೆ.
ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಗದಗ ಬೆಟಗೇರಿ ಅವಳಿ ನಗರದಲ್ಲಿ ಅತ್ಯಧಿಕ ಮತ ಪಡೆದಿರುವ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದ್ದು, ಖಾಸಗಿ ಏಜೆನ್ಸಿ ಒಂದು ನಡೆಸಿದೇ ಎನ್ನಲಾದ ಸಮೀಕ್ಷೆಯಲ್ಲೂ ಕಮಲ ಕಲಿಗಳು ಮೇಲುಗೈ ಸಾಧಿಸಿದ್ದಾರೆ. ಈ ಸಮೀಕ್ಷೆಯ ಪ್ರಕಾರ ನಗರಸಭೆ ಗದ್ದುಗೆ ಬಿಜೆಪಿ ಪಾಲಾಗಲಿದೆ ಎನ್ನಲಾಗಿದೆ. ಈ ಸಮೀಕ್ಷೆಯ ಪ್ರಕಾರ ಕಮಲ 18-20 ವಾರ್ಡ್‌ಗಳಲ್ಲಿ ಅರಳಲಿದೆ ಎಂದು ಹೇಳಲಾಗುತ್ತಿದೆ.
ಇತ್ತ, ಗದಗ-ಬೆಟಗೇರಿ ನಗರಸಭೆ ಸೇರಿದಂತೆ ಜಿಲ್ಲೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಸುದೀರ್ಘ ಅಧಿಕಾರ ಅನುಭವಿಸಿರುವ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, 10-13 ಸ್ಥಾನಗಳನ್ನಷ್ಟೇ ಗೆಲ್ಲಬಹುದು ಎಂಬುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ಅದರಂತೆ, ಕೆಲ ವಾರ್ಡ್‌ಗಳಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಭರ್ಜರಿ ಸವಾಲೊಡ್ಡಿ ನಡುಕ ಹುಟ್ಟಿಸಿರುವ ಪಕ್ಷೇತರ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ 2-3 ವಾರ್ಡ್‌ಗಳಲ್ಲಿ ಗೆಲ್ಲಲಿದ್ದಾರೆ ಎಂಬುವುದು ಖಾಸಗಿ ಏಜೆನ್ಸಿ ನಡೆಸಿದ ಸಮೀಕ್ಷಾ ವರದಿಯಿಂದ ತಿಳಿದು ಬಂದಿದೆ.
ಬೆಟ್ಟಿಂಗ್ ಜೋರು!
ಗದಗ-ಬೆಟಗೇರಿ ನಗರಸಭೆಯ ಮತದಾನ ಅಂತ್ಯಗೊಳ್ಳುತ್ತಲೇ ಅವಳಿ ನಗರದಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿ ಕೇಳಿ ಬರುತ್ತಿದೆ. ಅವಳಿ ನಗರದ ವಾರ್ಡ್ ನಂ.2,8,9,10,12,16,17,19,22,28,34 ಹಾಗೂ 35ನೇ ವಾರ್ಡ್‌ಗಳಲ್ಲಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ನಡೆದಿದ್ದು, ಯಾರು ಗೆಲ್ಲಬಹುದೆಂಬ ಕುತೂಹಲ ಹೆಚ್ಚಿಸಿದೆ. ಹೀಗಾಗಿ ಅವಳಿ ನಗರದ ಜನತೆ ಫಲಿತಾಂಶಕ್ಕೂ ಮುನ್ನವೇ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್‌ಗೆ ಇಳಿದಿದ್ದಾರೆ ಎನ್ನಲಾಗುತ್ತಿದೆ.
ಗೆಲ್ಲುವ ಪಕ್ಷಕ್ಕೆ ಮಾರಕ?
ಮುಂಬರುವ ತಾಪಂ, ಜಿಪಂ ಹಾಗೂ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗೆ ತಮ್ಮ ಶಕ್ತಿ ಪ್ರದರ್ಶಿಸಲು ನಗರಸಭೆ ಚುನಾವಣೆ ವೇದಿಕೆಯಾಗಿ ಮಾರ್ಪಟ್ಟಿತ್ತು. ಹೀಗಾಗಿ ಮತದಾರರನ್ನು ಸೆಳೆಯಲು ಉಭಯ ಪಕ್ಷಗಳ ನಾಯಕರು, ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ, ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ನಿರೀಕ್ಷೆಗಿಂತ ಕಡಿಮೆ ಮತದಾನ ಆಗಿದ್ದು, ಗೆಲ್ಲುವ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇನ್ನು ಕಡಿಮೆ ಮತದಾನಕ್ಕೆ ಕ್ಷೇತ್ರ ವಿಂಗಡಣೆಯೇ ಕಾರಣ ಎನ್ನಲಾಗುತ್ತಿದೆ. ವಾರ್ಡ್‌ಗಳ ವಿಂಗಡಣೆಯಿಂದಾಗಿ ಬಹುತೇಕ ಮತದಾರರರಿಗೆ ಮತ ಎಲ್ಲಿಗೆ, ಯಾವ ಮತಗಟ್ಟೆಗೆ ಹೋಗಿ ಹಾಕಬೇಕೆಂಬ ಗೊಂದಲ ಸೃಷ್ಟಿಯಾಗಿತ್ತು. ಇದರಿಂದ ಸರಿಯಾದ ಸಮಯಕ್ಕೆ ಮತದಾನ ಮಾಡಲಾಗದೇ ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಹೊಟ್ಟೆಪಾಡಿಗಾಗಿ ಬಹುತೇಕ ಜನ ಅವಳಿ ನಗರದಿಂದ ಬೇರೆ ಜಿಲ್ಲೆ, ರಾಜ್ಯಗಳಿಗೆ ವಲಸೆ ಹೋಗಿದ್ದು, ಇದು ಕೂಡಾ ಕಡಿಮೆ ಮತದಾನ ಆಗಲು ಕಾರಣ ಎಂದು ಬಣ್ಣಿಸಲಾಗುತ್ತಿದೆ.