Home Blog Page 3267

ಜಿಲ್ಲೆಯಲ್ಲಿ ಇಂದಿನಿಂದ ರಾತ್ರಿ ಕರ್ಪ್ಯೂ ಜಾರಿ: ಜಿಲ್ಲಾಡಳಿತ ಕಟ್ಟೆಚ್ಚರ

ವಿಜಯಸಾಕ್ಷಿ ಸುದ್ದಿ, ಗದಗ:

‘ದೇಶದಲ್ಲಿ ಓಮಿಕ್ರಾನ್ ರೂಪಾಂತರ ಪ್ರಕರಣಗಳಲ್ಲಿ ಸ್ಥಿತವಾದ ಏರಿಕೆ ಕಂಡು ಬಂದಿದ್ದು, ರಾಜ್ಯದಲ್ಲಿ ಪ್ರಸರಣದ ಸರಪಳಿ ಮುರಿಯುವ ಸಲುವಾಗಿ ರಾಜ್ಯ ಸರ್ಕಾರದ ಆದೇಶದನ್ವಯ ಇಂದಿನಿಂದ (ಡಿ.28) ಜ.7ರವರೆಗೆ ರಾತ್ರಿ 10 ರಿಂದ ಬೆ.5ರವರೆಗೆ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶಿಸಿದ್ದಾರೆ.

‘ಜಿಲ್ಲೆಯಾದ್ಯಂತ ಇಂದಿನಿಂದ(ಡಿ.28) ಜ.7ರವರೆಗೆ ರಾತ್ರಿ 10 ರಿಂದ ಬೆ.5ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಡಿ.30 ರಿಂದ ಜ.7ರವರೆಗೆ ಜಿಲ್ಲೆಯಲ್ಲಿರುವ ರೆಸ್ಟೋರೆಂಟ್, ಹೋಟೆಲ್, ಕ್ಲಬ್, ಪಬ್‌ಗಳಲ್ಲಿ ಆಸನ ಸಾಮರ್ಥ್ಯದ ಶೇ.50ರಷ್ಟು ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕಾರ್ಯ ನಿರ್ವಹಿಸಬೇಕು. ಅಲ್ಲದೇ, ಇವುಗಳಲ್ಲಿ ಕೆಲಸ ನಿರ್ವಹಿಸತ್ತಿರುವ ಎಲ್ಲ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿದ್ದು, ಕೋವಿಡ್‌ನ ಎರಡೂ ಲಸಿಕೆ ಪಡೆದಿರಬೇಕು ಎಂದು ತಿಳಿಸಿದ್ದಾರೆ.

ಅದರಂತೆ, ‘ಡಿ.28ರಿಂದ ಎಲ್ಲ ಸಭೆಗಳು, ಮದುವೆಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ 300 ಜನರಿಗಷ್ಟೇ ಅವಕಾಶ ನೀಡಿದೆ. ಇಂತಹ ಸಮಾರಂಭಗಳಲ್ಲಿ ಕೋವಿಡ್ ಸೂಕ್ತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಲ್ಲದೇ, ಸಂಘಟಕರು ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು. ಒಂದುವೇಳೆ ಕೋವಿಡ್ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರು ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ.

ಡಿ.28ರಿಂದ ಜಿಲ್ಲೆಯಾದ್ಯಂತ ರಾತ್ರಿ ಕರ್ಪ್ಯೂ ಜಾರಿಯಲ್ಲಿರಲಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಅಲ್ಲದೇ, ಜಿಲ್ಲೆಯ ಜನರು ರಾತ್ರಿ ಕರ್ಪ್ಯೂ ಹಾಗೂ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು

ಶಿವಪ್ರಕಾಶ್ ದೇವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಮುತ್ತು ರಾಯರಡ್ಡಿಯಿಂದ ತ್ಯಾಜ್ಯ ವಿಲೇವಾರಿ ಘಟಕದ ಭೂಮಿ ಪೂಜೆ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮದ ಮಹಿಳಾ ವರ್ಕ್ ಶೆಡ್ ಪಕ್ಕದಲ್ಲಿ 11.82 ಲಕ್ಷ ರೂ ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಭೂಮಿ ಪೂಜೆಯನ್ನು ಗ್ರಾ.ಪಂ.ಅಧ್ಯಕ್ಷ ಮುತ್ತು ರಾಯರಡ್ಡಿ ನೆರವೇರಿಸಿದರು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಬಸಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪು ಹಿರೇಗೌಡ್ರ, ಈರಮ್ಮ ಮುದಿಗೌಡ್ರ, ಶೃತಿ ಬ್ಯಾಳಿ, ನಿರ್ಮಲಾ ತಳವಾರ, ಶೋಭಾ ಕೋಣನ್ನವರ,ಶಂಕ್ರಮ್ಮ ಚಲವಾದಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಮಾರಿ ಶೈನಾಜ್ ಮುಜಾವರ್, ಸಿಬ್ಬಂದಿಗಳು ಭಾಗವಹಿಸಿದ್ದರು.

‘ಪ್ರಜಾಪ್ರಭುತ್ವ’ ಹಬ್ಬಕ್ಕೆ ‘ಪ್ರಜೆ’ಗಳ ನಿರುತ್ಸಾಹ! ಮತ ಹಾಕಲು ಉತ್ಸಾಹ ತೋರದ ಗದಗ-ಬೆಟಗೇರಿ ಮತದಾರರು!

ಬಿಜೆಪಿಗೆ ಮತ ಹಾಕಿ ಎಂದ ಅಧಿಕಾರಿ ಎತ್ತಂಗಡಿ!

ವಿಜಯಸಾಕ್ಷಿ ಸುದ್ದಿ, ಗದಗ;

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಅವಳಿ ನಗರದಲ್ಲಿ ಶಾಂತಿಯುತ ಮತದಾನ ನಡೆಯಿತು.ಅಭ್ಯರ್ಥಿಗಳು ಮತಗಟ್ಟೆ ಬಾಗಿಲಿಗೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು. ಎಂಟು ವರ್ಷಗಳ ಬಳಿಕ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ವೃದ್ಧರು, ಮಹಿಳೆಯರು, ಯುವಕರು, ವಯಸ್ಕರರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದರೆ, ಇನ್ನು ಕೆಲವರು ನಿರುತ್ಸಾಹ ತೋರಿದರು.

ಮಂಗಳವಾರದಿಂದ ರಾಜ್ಯದಲ್ಲಿ ರಾತ್ರಿ ಕರ್ಪ್ಯೂ ಜಾರಿಯಲ್ಲಿರಲಿದ್ದು, ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಇದನ್ನರಿತ ಅವಳಿ ನಗರದ ಬಹುತೇಕ ಜನರು ಸ್ಥಳೀಯ ಸಂಸ್ಥೆಯ ಚುನಾವಣೆ ಇದ್ದರೂ, ಡಿ. 25ರಿಂದ ಸಾಲು ಸಾಲು ಸರ್ಕಾರಿ ರಜೆ ಸಿಕ್ಕಿರುವ ಹಿನ್ನೆಲೆಯಲ್ಲಿ ವೀಕೆಂಡ್ ಟ್ರಿಪ್ ಹೋಗಿದ್ದಾರೆ ಎನ್ನಲಾಗುತ್ತಿದೆ.

ಅವಳಿ ನಗರದ ಒಟ್ಟು 1,41,542 ಮತದಾರರ ಪೈಕಿ 44,975(ಶೇ.64) ಪುರಷರು, 43,207(ಶೇ.60.26) ಜನ ಮಹಿಳಾ ಮತದಾರರು ಸೇರಿ ಒಟ್ಟು 88,182 ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ. ಇದರಿಂದ ಅವಳಿ ನಗರದಲ್ಲಿ ಕೇವಲ ಶೇ.62.30%ರಷ್ಟು ಮತದಾನ ಆಗಿದ್ದು, 53,360 ಮತದಾರರು ಮತದಾನದಿಂದ ದೂರ ಉಳಿದರು.

ಕುಕ್ಕರ್ ಬೇಕೇ, ಹಾಗಾದ್ರೆ ಬಿಜೆಪಿಗೆ ಓಟ್ ಹಾಕಿ!; ಬಿಜೆಪಿ ಅಭ್ಯರ್ಥಿಯಿಂದ ಟೋಕನ್ ಹಂಚಿಕೆ?

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಗೆಲುವಿಗಾಗಿ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಮತಗಿಟ್ಟಿಸಿಕೊಳ್ಳಲು ವಾಮಮಾರ್ಗದ ಜೊತೆಗೆ ಆಸೆ, ಆಮಿಷಗಳನ್ನೊಡ್ಡುತ್ತಿರುವುದು ದುರಂತ.

ಹೌದು, ಅವಳಿ ನಗರದ 30ನೇ ವಾರ್ಡಿನ ಸಾಮಾನ್ಯ ಮೀಸಲು ಕ್ಷೇತ್ರಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ರೇಖಾ ಅಮರನಾಥ್ ಬೆಟಗೇರಿ ಅವರು ನಿನ್ನೆ ರಾತ್ರಿ ಮತದಾರರಿಗೆ ಬಿಜೆಪಿಗೆ ಓಟ್ ಹಾಕಲು ಟೋಕನ್ ಹಂಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಭಾನುವಾರ ರಾತ್ರಿ ‘ಶ್ರೀಗುರು ಪುಟ್ಟರಾಜ ಕೃಪೆ ಎಂದು ಹೆಸರಿರುವ ವಿಸಿಟಿಂಗ್ ಕಾರ್ಡ್ ಹಂಚಿದ್ದಾರೆ. ವಿಸಿಟಿಂಗ್ ಕಾರ್ಡ್ ಹಿಂದುಗಡೆ ತಮ್ಮ ಸೀರಿಯಲ್ ನಂಬರ್ ಇರುವ ಟೋಕನ್‌ನ್ನು ಮತದಾರರಿಗೆ ಹಂಚಿಕೆ ಮಾಡಿ ಆಮಿಷವೊಡ್ಡಿದ್ದಾರೆ ಎನ್ನಲಾಗುತ್ತಿದೆ.

ಅದರಂತೆ, 25ನೇ ವಾರ್ಡ್ ವ್ಯಾಪ್ತಿಯ ಹಾಳದಿಬ್ಬ ಓಣಿಯ 94ರ ಮತಗಟ್ಟೆಯಲ್ಲಿ ಚುನಾವಣಾ ಸಹಾಯಕರೊಬ್ಬರು ಮತ ಹಾಕಲು ಬಂದ ಮತದಾರರಿಗೆ ಬಿಜೆಪಿಗೆ ಮತ ಹಾಕುವಂತೆ ಹೇಳಿದ್ದು, ಅದೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮಂದಾಲಿ ಅಧಿಕಾರಿಯ ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಬಿಜೆಪಿಗೆ ಮತ ಹಾಕುವಂತೆ ಹೇಳಿದ ಅಧಿಕಾರಿಯನ್ನು ಆ ಮತಗಟ್ಟೆಯಿಂದ ಎತ್ತಂಗಡಿ ಮಾಡಿದ ಪ್ರಸಂಗ ನಡೆದಿದೆ.

ಬಿಜೆಪಿ ಅಭ್ಯರ್ಥಿ ಪರ ಶಾಸಕ ಕ್ಯಾಂಪೇನ್: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ 48 ಗಂಟೆ ಮುಂಚಿತವಾಗಿ ಅಂದರೆ, ಶನಿವಾರ(ಡಿ.25)ವೇ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಆದರೆ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಕ್ಯಾಂಪೇನ್ ಮಾಡುತ್ತಿದ್ದಾರೆ.

ಹೌದು, ಅವಳಿ‌ ನಗರದ 34ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ವಿದ್ಯಾವತಿ ಗಡಗಿ ಅವರ ಸಂಬಂಧಿಕರೂ ಎನ್ನಲಾಗುತ್ತಿರುವ ಶಾಸಕ ಯಾದವಾಡ ಅವರು ಕಳೆದ ಒಂದು ವಾರದಿಂದ ಗದಗ ನಗರದಲ್ಲೇ ಠಿಕಾಣಿ ಹೂಡಿದ್ದಾರೆ. ಅಲ್ಲದೇ, ಮುಳಗುಂದ ನಾಕಾದಲ್ಲಿರುವ ಖಾಸಗಿ ಹೋಟೆಲ್ ಒಂದರಲ್ಲಿ ವಾಸ್ತವ್ಯ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದರೂ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ದುರಂತ.

ರಾಜ್ಯ ಚುನಾವಣಾ ಆಯೋಗದ ಪ್ರಕಾರ ‘ ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಮತದಾರರಲ್ಲದ ಬೆಂಬಲಿಗರು, ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಪಕ್ಷದ ಕಾರ್ಯಕರ್ತರು, ಮೆರವಣಿಗೆ, ಪ್ರಚಾರ ಕಾರ್ಯ ನಿರ್ವಹಿಸುವವರು ಇನ್ನಿತರರು ಆ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಗಳ ವ್ಯಾಪ್ತಿಯಲ್ಲಿ ವಾಸ್ತವ್ಯ ಮಾಡುವ ಹಾಗಿಲ್ಲ.

ಆದರೆ, ಕಳೆದ ಒಂದು ವಾರದಿಂದಲೂ ಎಸ್.ಎಸ್.ಯಾದವಾಡ & ಕಂ ಎಂಬ ಭಾರತೀಯ ಜನತಾ ಪಕ್ಷದ ಚಿಹ್ನೆ ಇರುವ ಕಾರೊಂದು ಅವಳಿ ನಗರದಲ್ಲಿ ‌ಓಡಾಡುತ್ತಿದೆ. ಅಷ್ಟೇ ಅಲ್ಲದೆ ಮತದಾನ ದಿನವೂ ಶಾಸಕರ ಬೆಂಬಲಿಗರು ಕಾರ ಸಮೇತ ಮತದಾನ ಕೇಂದ್ರದ ಬಳಿ ಮತದಾರರ ಮನವೊಲಿಸಿತ್ತಿದ್ದರೂ ಚುನಾವಣಾಧಿಕಾರಿಗಳು, ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲಿಗರು ಆರೋಪಿಸಿದ್ದಾರೆ.

ಮತದಾರರಿಗೆ ಹಣದ ಆಮಿಷ ಆರೋಪ: ಕೈ-ಕಮಲ ಅಭ್ಯರ್ಥಿಗಳ ಮಧ್ಯೆ ವಾಕ್ಸಮರ

ವಿಜಯಸಾಕ್ಷಿ ಸುದ್ದಿ, ಗದಗ:

‘ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಯೊಳಗೆ ನಿಂತು ಮತದಾರರಿಗೆ ಆಮಿಷವೊಡ್ಡಿ ಮತ ಹಾಕುವಂತೆ ಒತ್ತಾಯಿಸುತ್ತಿದ್ದಾರೆ’ ಎಂದು ಆರೋಪಿಸಿ 10ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮಾಧವ್ ಗಣಾಚಾರಿ ಆರೋಪಿಸಿದರು.

ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಟಗೇರಿಯ ಸೇಂಟ್ ಜಾನ್ ಶಾಲೆಯ ಮತಗಟ್ಟೆ ಸಂ.45ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ ಸೇರಿದಂತೆ ಅವರ ಕುಟಂಬದವರು ಮತದಾರರಿಗೆ ಹಣದ ಆಮಿಷವೊಡ್ಡಿ ಮತಯಾಚಿಸುತ್ತಿದ್ದಾರೆ. ಇದಕ್ಕೆ ಪೊಲೀಸರು ಸಾಥ್ ನೀಡುತ್ತಿದ್ದಾರೆ’ ಎಂದು ಗಂಭೀರವಾಗಿ ಆರೋಪಿಸಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಇಮ್ತಿಯಾಜ್ ಶಿರಹಟ್ಟಿ ಮಧ್ಯೆ ಪ್ರವೇಶಿಸಿ ‘ಸುಳ್ಳು ಹೇಳಬೇಡಿ ನಾವ್ಯಾರೂ ಮತಗಟ್ಟೆ ಆವರಣದಲ್ಲಿ ನಿಂತು ಮತಾಯಾಚಿಸಿಲ್ಲ’ ಎಂದು ಮಾಧವ್ ಗಣಾಚಾರಿ ಜೊತೆ ವಾಕ್ಸಮರ ನಡೆಸಿದರು. ಪರಿಸ್ಥಿತಿ ಕೈ‌ಮೀರುವ ಹಂತಕ್ಕೆ‌ತಲುಪಿದಾಗ ಪೊಲೀಸರು ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಮತಗಟ್ಟೆಯಿಂದ ಹೊರ ಹಾಕಿ ಪರಿಸ್ಥಿತಿ ತಿಳಿಗೊಳಿಸಿದರು.

ಚಳಿ ಎಫೆಕ್ಟ್, ಮಂದಗತಿಯಲ್ಲಿ ಮತದಾನ; ಶೇ.5.61ರಷ್ಟು ಮತದಾನ

ವಿಜಯಸಾಕ್ಷಿ ಸುದ್ದಿ, ಗದಗ:

ಸೋಮವಾರ ಬೆಳಗ್ಗೆಯಿಂದ ಗದಗ-ಬೆಟಗೇರಿ ನಗರಸಭೆ ಚುನಾವಣೆ ನಡೆಯುತ್ತಿದೆ. ಚಳಿ ಇರುವ ಕಾರಣ ಮತದಾರರು ಮತದಾನ ಆರಂಭದ ಮೊದಲ ಎರಡು ಗಂಟೆ ಮಂದ ಮತದಾನ ನಡೆಯಿತು.

ಬೆಳಗ್ಗೆ 7 ಗಂಟೆಯಿಂದ ಮತದಾನ ಜರಗುತ್ತಿದ್ದು 9 ಗಂಟೆಯವರೆಗೆ 7942 ಜನರು ಮತ ಚಲಾಯಿಸಿದ್ದಾರೆ. ಅವಳಿ ನಗರದ 136 ಮತಗಟ್ಟೆಗಳಲ್ಲಿ ಶೇ5.61% ಮತದಾನ ನಡೆದಿದೆ.

ಕೈ ಕೊಟ್ಟ ಮತಯಂತ್ರ, ಮತದಾನ‌ ವಿಳಂಬ; ಮತಗಟ್ಟೆ ಬಾಗಿಲಿಗೆ ಭರ್ಜರಿ ಪೂಜೆ

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ ಬೆಟಗೇರಿ ನಗರಸಭೆ ಚುನಾವಣೆ ಆರಂಭಗೊಂಡಿದೆ. ಅಭ್ಯರ್ಥಿಗಳು ಮತಗಟ್ಟೆಗೆ ಭರ್ಜರಿ ಪೂಜೆ ಸಲ್ಲಿಸಿ ಮತದಾನ ಮಾಡಿದರು. ಇನ್ನು ಹಲವೆಡೆ ಕದನ ಕಲಿಗಳು ಮತಗಟ್ಟೆ ಬಾಗಿಲಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೆಲುವಿಗಾಗಿ ಪ್ರಾರ್ಥಿಸಿದರು.

ಅವಳಿ ನಗರದ 19ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ನೆಲವಡಿ ಕುಟುಂಬಸ್ಥರು
ಮತಗಟ್ಟೆ ಬಾಗಿಲಿಗೆ ತೆಂಗಿನಕಾಯಿ ಒಡೆದು, ಹೂ, ಅಡಿಕೆ, ವಿಳ್ಯದೆಲೆ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಪೂಜೆ ಸಲ್ಲಿಸಿದ ಮಹಿಳೆಗೆ ಮತಗಟ್ಟೆ ಅಂಗಳದಲ್ಲೇ ಹಣ ನೀಡಿದರು. ಇನ್ನು ಅಭ್ಯರ್ಥಿ ಕುಟುಂಬಸ್ಥರು ಪೂಜೆ ಮಾಡುವುದನ್ನು ತಡೆಯದ ಚುನಾವಣಾಧಿಕಾರಿಗಳು ಮೂಕ ಪ್ರೇಕ್ಷಕರಂತೆ ಕೈಕಟ್ಟಿ ಅಸಹಾಯಕರಂತೆ ನಿಂತಿದ್ದರು.

ಇನ್ನು ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಮತಯಂತ್ರ ಕೈಕೊಟ್ಟಿದ್ದರಿಂದ 15ನೇ ವಾರ್ಡಿನಲ್ಲಿ
ಸುಮಾರು 45 ನಿಮಿಷ ತಡವಾಗಿ ಆರಂಭವಾಯಿತು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ.6 ರಲ್ಲಿನ ಮತಗಟ್ಟೆ ನಂ.62 ರ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದ ಮತದಾರರು ಕಾಯುತ್ತಾ ನಿಂತಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಚುನಾವಣಾಧಿಕಾರಿಗಳು
ವಿವಿ ಪ್ಯಾಟ್ ಬದಲಾಯಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು.

ಉತ್ತರಕುಮಾರನ ಪೌರುಷ ಹೆಂಗಳೆಯರ ಮುಂದೆ!; ‘ನೀವು ಬನ್ನಿ ದಾಳಿ ಮಾಡೋಣ’ ಎಂದ ಅಧಿಕಾರಿಗಳು?

ವಿಜಯಸಾಕ್ಷಿ ಸುದ್ದಿ, ಗದಗ:

‘ಸರ್ಕಾರಿ ಕೆಲಸ ದೇವರ ಕೆಲಸ’ ಈ ಧ್ಯೇಯ ವಾಕ್ಯ ಹೆಸರಿಗಷ್ಟೇ. ಆದ್ರೆ, ಕಾರ್ಯಗತದಲ್ಲಿಲ್ಲ ಎಂಬುವುದಕ್ಕೆ ಸರ್ಕಾರಿ ಅಧಿಕಾರಿಗಳ ಇಂತಹ ಬೇಜವಾಬ್ದಾರಿ ಮಾತುಗಳೇ ಸಾಕ್ಷಿ.

ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅವ್ಯಾಹತವಾಗಿ ‌ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ‌ ನಿಷೇಧಿಸುವಂತೆ ಆಗ್ರಹಿಸಿ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ಡಿ.29ರಂದು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳುತ್ತಿದ್ದಾರೆ. ಆದರೆ, ಪಾದಯಾತ್ರೆ ಕೈಗೊಂಡ ಗ್ರಾ.ಪಂ. ಸದಸ್ಯರಿಗೆ ಹಾಗೂ ಮಹಿಳೆಯರಿಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ‘ಮದ್ಯ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡುತ್ತೇವೆ. ನೀವು ಬನ್ನಿ!’ ಎಂದು ಕರೆಯುತ್ತಿದ್ದಾರೆ.

ಅಧಿಕಾರಿಗಳ ಇಂತಹ ಬೇಜವಾಬ್ದಾರಿತನ ಮಾತಿಗೆ ಆಕ್ರೋಶಗೊಂಡಿರುವ ಗ್ರಾ.ಪಂ. ಸದಸ್ಯೆ ಅಶ್ವಿನಿ ಮೇಗೂರ ಅವರು ‘ವಿಜಯಸಾಕ್ಷಿ’ಯೊಂದಿಗೆ ಮಾತನಾಡಿ, ‘ಗ್ರಾಮದ ಅಭಿವೃದ್ಧಿಗಾಗಿ ನಾವು ಜನಪ್ರತಿನಿಧಿಗಳಾಗಿದ್ದೇವೆ. ಎಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ, ಅದೇ ವಿಚಾರವಿಟ್ಟುಕೊಂಡು ‘ದಾಳಿ ಮಾಡಲು ನೀವು ಬನ್ನಿ’ ಎಂದು ಕರೆಯುತ್ತಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ‌ ಎಂದು ಆರೋಪಿಸಿದರು.

‘ಅಬಕಾರಿ ಇಲಾಖೆಯಲ್ಲಿ ನಾವು ಸೇವೆ ಸಲ್ಲಿಸುತ್ತಿದ್ದರೆ ಆ ಕಾರ್ಯವನ್ನು ನಾವೇ ಮಾಡುತ್ತಿದ್ದೇವು. ಕಾನೂನು ಬಾಹಿರ ಕೆಲಸ ಮಾಡುತ್ತಿರುವವರ ಕುರಿತು ಮಾಹಿತಿ ನೀಡಿದಾಗ ಗೌಪ್ಯ ಕಾರ್ಯಾಚರಣೆ ನಡೆಸಬೇಕಾದ ಅಧಿಕಾರಿಗಳು, ಅಕ್ರಮದ ಬಗ್ಗೆ ಮಾಹಿತಿ ನೀಡದವರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.

ಪ್ರಜಾಪ್ರಭುತ್ವ ಬಲವರ್ಧನೆಗೆ ಕಾಂಗ್ರೆಸ್ ಪಕ್ಷ ಬೆಂಬಲಿಸಿ; ಡಿ.ಆರ್.ಪಾಟೀಲ್

ವಿಜಯಸಾಕ್ಷಿ ಸುದ್ದಿ, ಗದಗ:

‘ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬುನಾದಿಯಾಗಿದ್ದು, ಇದು ಬಲಶಾಲಿಯಾಗಬೇಕು. ಇಲ್ಲಿಯ ಸಾಮಾನ್ಯ ಪ್ರಜೆಯೇ ವ್ಯವಸ್ಥೆಯ ಪ್ರಭು. ಈ ಪ್ರಭುವಿನ ಬದುಕು ಸುಂದರಗೊಳಿಸುವುದೇ ಪ್ರತಿನಿಧಿಯ ಕರ್ತವ್ಯವೆಂದು ನಂಬಿ ಅದನ್ನು ಸಾಕಾರಗೊಳಿಸುವುದೇ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದು ಮಾಜಿ ಶಾಸಕ ಡಿ.ಆರ್.ಪಾಟೀಲ್ ಹೇಳಿದ್ದಾರೆ.

ಭಾನುವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನಪರ ಕೆಲಸಗಳನ್ನು ಮಾಡುವ ಪರಂಪರೆ ಬೆಳೆಸಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದಾಗಿದೆ. ರಾಜ್ಯದಲ್ಲಿಯೇ ಒಂದು ಆದರ್ಶ ವಸತಿ ವ್ಯವಸ್ಥೆ ಮಾಡಲಾಗಿದೆ. 60 ಕಿ.ಮೀ. ದೂರದಿಂದ ನದಿ ನೀರು ತಂದು ವಿತರಣೆ ಮಾಡಲಾಗುತ್ತಿದೆ. ಅವಳಿ ನಗರವನ್ನು ಕ್ರೀಡಾನಗರವನ್ನಾಗಿ ಮಾಡಲು ಬೇಕಾದ ಎಲ್ಲ ಅನುಕೂಲತೆಗಳನ್ನು ಸೃಷ್ಟಿಸಲಾಗಿದೆ.

ನಗರದ ಸಂಗೀತ, ಕಲೆ, ಸಾಹಿತ್ಯಿಕ, ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಲು ಎಲ್ಲ ಅನುಕೂಲತೆ ಮಾಡಿದೆ. ಸಾರ್ವಜನಿಕ ನೈರ್ಮಲ್ಯ ಕಾಪಾಡುತ್ತ ಗೌರವ ಘಟಕಗಳನ್ನು ಸ್ಥಾಪಿಸಿ ದೇಶದಲ್ಲಿಯೇ ಖ್ಯಾತಿ ಗಳಿಸುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ಅವಳಿ ನಗರದ ಎಲ್ಲ 35 ವಾರ್ಡಗಳಲ್ಲಿ ಚಾರಿತ್ರ್ಯವಂತ ಕ್ರೀಯಾಶೀಲ ಸೇವಾ ಮನೋಭಾವವುಳ್ಳವರನ್ನು ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸಿದ್ದು, ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಮತ ನೀಡುವ ಮೂಲಕ ಆಯ್ಕೆ ಮಾಡುವಂತೆ ಮಾಜಿ ಶಾಸಕ ಡಿ.ಆರ್.ಪಾಟೀಲ್ ಮನವಿ ಮಾಡಿದ್ದಾರೆ.

error: Content is protected !!