ಆಟೋ ಚಾಲಕನೊಬ್ಬನಿಗೆ ನಿನ್ನ ಆಟೋ ಸರಿ ಇಟ್ಟಿಲ್ಲ, ಗ್ಲಾಸ್ ಸರಿಯಾಗಿಲ್ಲ ನಿನ್ನ ಗಾಡಿಯ ದಾಖಲೆಗಳನ್ನು ತೋರಿಸು ಇಲ್ಲದಿದ್ದರೆ ನಿನ್ನ ಗಾಡಿಯನ್ನು ಸೀಜ್ ಮಾಡಿ ತೆಗೆದುಕೊಂಡು ಹೋಗುತ್ತೇನೆ ಎಂದು ಆರ್.ಟಿ.ಓ ಸೂಪರ್‌ವೈಜರ್ ಹೆಸರಿನಲ್ಲಿ ವಂಚನೆಗೆ ಮುಂದಾದ ಘಟನೆ ಜರುಗಿದೆ.
ಗಜೇಂದ್ರಗಡದ ಮುತ್ತುರಾಜ್ ಮೂಕಪ್ಪ ಗುಡೂರ ಎಂಬುವವರು ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಶಮೀರ ಜಂದಿಸಾಬ ಸರಖವಾಸ ಎಂಬ ಆಟೋ ಚಾಲಕನಿಗೆ ಆರೋಪಿ ಮುತ್ತುರಾಜ್ ಮೂಕಪ್ಪ ಗುಡೂರ ಎಂಬಾತ ಆಟೋ ಸರಿಯಾಗಿ ಇಟ್ಟುಕೊಂಡಿಲ್ಲ, ದಾಖಲೆ ತೋರಿಸು ಇಲ್ಲದಿದ್ದರೆ ನಿನ್ನ ಆಟೋ ಸೀಜ್ ಮಾಡಿ ತೆಗೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಲ್ಲದೇ ಹತ್ತು ಸಾವಿರ ರೂ. ದಂಡ ಕಟ್ಟು ಅಂತ ಹೇಳಿ, ಆರ್. ಟಿ.ಓ ಸೂಪರ್‌ವೈಜರ್ ಹೆಸರಿನಲ್ಲಿ ಹೆದರಿಸಿ, ವಂಚನೆ ಮಾಡಲು ಯತ್ನಿಸಲಾಗಿದೆ.
ಈ ಕುರಿತು ಬೆಟಗೇರಿ ಬಡಾವಣೆ ಠಾಣೆಯಲ್ಲಿ ಆರೋಪಿ ಮುತ್ತುರಾಜ್ ಮೂಕಪ್ಪ ಗುಡೂರ ಎಂಬಾತನ ಮೇಲೆ ಐಪಿಸಿ-1960(u/s- 511, 384, 419, 420) ೦೦೦೪/೨೦೨೩ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
74ನೇ ಗಣರಾಜ್ಯೋತ್ಸವ ದಿನಾಚರಣೆ – ಶಿಕ್ಷಣ ಇಲಾಖೆಯ ವೈಫಲ್ಯಕ್ಕೆ ಬೇಸರ……
ವಿಜಯಸಾಕ್ಷಿ ಸುದ್ದಿ, ನವಲಗುಂದ: ಹಲವಾರು ಭಾಷೆ, ಉಡುಗೆ- ತೊಡುಗೆ, ಆಚಾರ- ವಿಚಾರಗಳನ್ನು ಹೊಂದಿರುವ ಭಾರತ ದೇಶವು ವೈವಿದ್ಯತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ಬೃಹತ್ತಾದ ಗಣರಾಜ್ಯವನ್ನು ಹೊಂದಿದೆ. ಜನರಿಂದ ಜನರಿಗೋಸ್ಕರ ಜನರಿಗಾಗಿ ನಡೆಸಕ್ಕಂತ ಸರ್ಕಾರನ್ನು ಪ್ರಜಾಪ್ರಭುತ್ವ ಸರ್ಕಾರ ಎಂದು ಹೇಳುತ್ತೇವೆ. ಅಂತಹ ಪ್ರಜಾಪ್ರಭುತ್ವ ಸರ್ಕಾರವನ್ನು ಬಲಿಷ್ಠ ಪಡಿಸಲು ಎಲ್ಲರೂ ಸಹಕರಿಸಿ ಭಾರತದ ಉತ್ತಮ ಪ್ರಜೆಗಳಾಗಿ ಏಕತೆ ಅಭಿವೃದ್ಧಿ ಕಡೆ ಕೈಜೋಡಿಸಿ ನವಭಾರತದ ನಿರ್ಮಾಣ ಮಾಡಬೇಕೆಂದು ತಹಸೀಲ್ದಾರ್ ಅನಿಲ ಬಡಿಗೇರ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ಗುರುವಾರ ಇಲ್ಲಿಯ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 74ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ನೂರಾರು ವರ್ಷಗಳ ನಿರಂತರ ಶೋಷಣೆಗೆ ಒಳಗಾಗಿ ನಲುಗಿ ಹೋಗಿದ್ದ ದೇಶದ ಸ್ವಾತಂತ್ರ್ಯವನ್ನು ಪಡೆಯಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ಸ್ಮರಿಸುವಂತಹ ದಿನವಿದು. ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನಲ್ಲಿಯೇ ಬೃಹತ್ತಾದ ಸಂವಿಧಾನವನ್ನು ರಚನೆ ಮಾಡಿ ಅದನ್ನು ಅಂಗೀಕಾರ ಮಾಡಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ ದಿನವಿದು.
ಎಲ್ಲಿಯ ತನಕ ತಾವು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸುವುದಿಲ್ಲವೋ ಅಲ್ಲಿಯ ತನಕ ಕಾನೂನು ಒದಗಿಸುವ ಯಾವುದೇ ಸ್ವಾತಂತ್ರ್ಯವನ್ನು ಪಡೆದರೂ ಅದು ಪ್ರಯೋಜನಾಗುವುದಿಲ್ಲವೆಂದು ಡಾ.ಬಿ.ಆರ್.ಅಂಬೇಡ್ಕರ ಹೇಳಿರುವ ಮಾತನ್ನು ನೆನಪಿನಲ್ಲಿಟ್ಟುಕೊಂಡು ಸ್ವಾತಂತ್ರ್ಯ, ಸಹೋದರತೆ, ಸಮಾನತೆ ಪಾಲನೆ ಮಾಡಿದಾಗ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಕೃಷಿ ಉತ್ಪಾದನೆಯನ್ನು ಹೆಚ್ಚಿಸಿ ಹೊರ ರಾಷ್ಟ್ರಗಳಿಗೆ ರಪ್ತು ಮಾಡುತ್ತಿರುವ ಈ ದೇಶ ಕೈಗಾರಿಕೆಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಶ್ರೇಷ್ಟತೆಯನ್ನು ಮೆರೆದಿದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಈ ದೇಶದ ಏಕತೆಗೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಪತಿ ಪದಕ ವಿಜೇತ ಸಿಪಿಐ ದೃವರಾಜ ಪಾಟೀಲ, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಸಾವಿತ್ರಮ್ಮ ಪೂಜಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ದಳಗಳ ಪರಿವೀಕ್ಷಣೆ ಮಾಡಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪುರಸಭೆ ಅಧ್ಯಕ್ಷ ಮೋದಿನಸಾಬ ಶಿರೂರ, ಉಪಾಧ್ಯಕ್ಷೆ ಪದ್ಮಾವತಿ ಪೂಜಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಲ್ಲಾಡ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ, ಮುಖ್ಯಾಧಿಕಾರಿ ವಿರೇಶ ಹಸಬಿ. ಪಿಎಸ್‍ಐ ನವೀನ ಜಕ್ಕಲಿ, ಅಬಕಾರಿ ಇನ್ಸಪೆಕ್ಟರ್ ಗೀತಾ ತೆಗ್ಯಾಳ, ಪುರಸಭೆ ಸದಸ್ಯರು, ಚುನಾಯಿತ ಪ್ರತಿನಿಧಿಗಳು. ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆಯ ವೈಪಲ್ಯತೆ ಖೇದಕರ : ಗಣರಾಜ್ಯೋತ್ಸವವನ್ನು ಶಿಸ್ತಿನಿಂದ ಆಚರಿಸಬೇಕೆಂದು ಶಿಕ್ಷಣ ಇಲಾಖೆಯ ಸಭೆ ಮಾಡಿ ಸೂಚನೆ ನೀಡಿದ್ದರು. ಸರಿಯಾದ ವ್ಯವಸ್ಥೆಯನ್ನು ಮಾಡದೇ ತಮ್ಮ ತಮ್ಮ ಶಾಲೆಯ ಮಕ್ಕಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿ ಶಾಂತತೆಗೆ ಭಗ್ನ ಉಂಟಾಗಿರುವುದು ಖೇದಕರ ಸಂಗತಿ ಎಂದು ತಹಸೀಲ್ದಾರ್ ಅನಿಲ ಬಡಿಗೇರ ಬೇಸರ ವ್ಯಕಪಡಿಸಿದರು.
ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠವಾದ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ಪ್ರಜೆಗಳಿಂದಲೇ ನೇರವಾಗಿ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಸಂವಿಧಾನಾತ್ಮಕವಾಗಿ ಬಂದಿರುವುದರಿಂದ ಭವ್ಯ ಭಾರತದ ನಿರ್ಮಾಣಕ್ಕಾಗಿ ಮುಂಬರುವ ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜಾತಿ, ಮತ, ಭಾಷೆ ಹಾಗೂ ಇನ್ನಿತರ ಯಾವುದೇ ಪ್ರೇರಣೆಗಳಿಗೆ ಪ್ರಭಾವಿತರಾಗದೆ ಪ್ರಭಲ ಅಸ್ತ್ರವಾಗಿರುವ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ತಹಸೀಲ್ದಾರ್ ಅನಿಲ ಬಡಿಗೇರ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಬುಧವಾರ ಕಾಲೇಜು ಶಿಕ್ಷಣ ಇಲಾಖೆ, ನ್ಯಾಯಾಂಗ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ನೀಡಲಾಗಿದೆ. ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದರಿಂದ ತಮಗೆ ನೀಡಿರುವ ಪರಮಾಧಿಕಾರವನ್ನು ಉಪಯೋಗಿಸಿಕೊಂಡು ಶೇ.100 ರಷ್ಟು ಮತ ಚಲಾವಣೆ ಮಾಡಿದಾಗ ಮಾತ್ರ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದು ತಹಸೀಲ್ದಾರ್ ಅನಿಲ ಬಡಿಗೇರ ತಿಳಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲರಾದ ಎಸ್.ವಿ.ಮರಡ್ಡಿ ಮಾತನಾಡಿ, ಮತದಾನ ಎಂಬುದೇ ಇದೊಂದು ‘ಉಡುಗೊರೆ’ ಇದ್ದಂತೆ. ಯೋಚನೆ ವಿವೇಚನೆ ಮಾಡಿ ನಿರ್ಭಿಡೆಯಿಂದ ಮತದಾನ ಮಾಡುವ ಮೂಲಕ ತಮಗಿಷ್ಟವಾದ ಸೂಕ್ತ ಜನಪ್ರತಿನಿಧಿಯನ್ನು ಚುನಾಯಿಸಿದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಸಲಹೆ ನೀಡಿ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಮಹಾದೇವ ಬಾಗಡಿ, ನಮ್ಮ ಮಹಾವಿದ್ಯಾಲಯದಲ್ಲಿ ಬಹುತೇಕ ಎಲ್ಲ ವಿದ್ಯಾರ್ಥಿಗಳು ಮತದಾನದ ಹಕ್ಕು ಪಡೆದವರಿದ್ದಾರೆ. ಶೇ.100 ರಷ್ಟು ಮತದಾನ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ಮಹಾವಿದ್ಯಾಲಯದಿಂದ ಎಲ್ಲ ಸಹಕಾರ ನೀಡಿ ಮತದಾರರ ದಿನಾಚರಣೆಯನ್ನು ಯಶಸ್ವಿಗೊಳಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಅನಿಲ ಬಡಿಗೇರ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿ ಭೋದನೆ ಮಾಡಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯನ್ನು ವಿತರಣೆ ಮಾಡಿದರು. ನಂತರ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ‘ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಮಲ್ಲಾಡದ, ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಧ್ಯಕ್ಷ ಚರಂತಯ್ಯ ಹಿರೇಮಠ, ಉಪ ತಹಸೀಲ್ದಾರ್ ಎಸ್.ಸಿ.ಹುಕ್ಕೇರಿ, ಶಿಕ್ಷಕ ಎಸ್.ಬಿ.ಬೆಂಚಿಗೇರಿ ಪಾಲ್ಗೊಂಡಿದ್ದರು. ಸಂಯೋಜಕರಾದ ವಿನಾಯಕ ಮಿರಜಕರ ಸ್ವಾಗತಿಸಿದರು. ಸವಿತಾ ಚಿಕ್ಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸೂಡಿ ವಂದಿಸಿದರು.
ದಿ ಬ್ಯಾಲೆಟ್ ಇಸ್ ದಿ ಸ್ಟ್ರಾಂಗರ್ ದ್ಯಾನ್ ಬುಲೆಟ್
ಮತದಾನ ಮಾಡುವುದಕ್ಕಿಂತ ಶ್ರೇಷ್ಟವಾದುದು ಯಾವುದು ಇಲ್ಲ. ನಾನು ಮತದಾನವನ್ನು ಕಡ್ಡಾಯವಾಗಿ ಮಾಡಿಯೇ ಮಾಡುತ್ತೇನೆ. ನಾನು ಸಮರ್ಥವಾಗಿ ಮತ ಚಲಾವಣೆ ಮಾಡದಿದ್ದರೇ ಸಮಾಜದಲ್ಲಿ ನಾನು ಇದ್ದು ಸತ್ತಂತೆ ಮತ್ತು ನಿಷ್ಕ್ರೀಯವಾದಂತೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಅವರು ಅಮೇರಿಕದ ಅಧ್ಯಕ್ಷರಾಗಿದ್ದ ಅಬ್ರಾಂ ಲಿಂಕನ್ ಹೇಳಿದ ‘ದಿ ಬ್ಯಾಲೆಟ್ ಇಸ್ ದಿ ಸ್ಟ್ರಾಂಗರ್ ದ್ಯಾನ ಬುಲೆಟ್’ ಎಂಬ ಮಾತನ್ನು ಸವಿತಾ ಚಿಕ್ಕಣ್ಣವರ ನೆನಪಿಸಿದರು.
ಪಟ್ಟಣದಲ್ಲಿ ಹಾಡಹಗಲೇ ಕಾರದ ಪುಡಿ ಎರಚಿದ ಯುವಕನೊಬ್ಬ ಕುಡುಗೋಲನಿಂದ ವ್ಯಕ್ತಿಯೋರ್ವನ ಮೇಲೆ ಮನ ಬಂದಂತೆ ಥಳಿಸಿ ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ಜಿಲ್ಲಾಧಿಕಾರಿಗಳು ಮದ್ದೂರು ಪಟ್ಟಣದಲ್ಲಿ ಮಧ್ಯಾಹ್ನ ಜರುಗಿದೆ.
ಜಮೀನಿನ ವಿಚಾರವಾಗಿ ಚೆನ್ನರಾಜ್ ಎಂಬಾತನ ಮೇಲೆ ನಂದನ ಎಂಬ ಯುವಕ ತಾಲೂಕು ಕಛೇರಿಯ ಆವರಣದಲ್ಲಿ ಕುಡುಗೋಲನಿಂದ ಕತ್ತು, ಬೆನ್ನು ಸೇರಿದಂತೆ ಮನ ಬಂದಂತೆ ಥಳಿಸುತ್ತಿದ್ದ. ಇದನ್ನು ಅಲ್ಲಿಯೇ ಇದ್ದ ಕೆಲ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದರೆ, ಇನ್ನೂ ಕೆಲವರು ಆರೋಪಿ ನಂದನ ಎಂಬಾತನನ್ನು ಹಿಡಿದು ಥಳಿಸಿ ಹಲ್ಲೆ ತಪ್ಪಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಚೆನ್ನರಾಜ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಆರೋಪಿ ನಂದನನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ್ದಾರೆ.
ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ ಏಜೆಂಟರಿಗೆ ಕರೆ ನೀಡಿದರು….
ವಿಜಯಸಾಕ್ಷಿ ಸುದ್ದಿ, ನವಲಗುಂದ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೂತ್ ಮಟ್ಟದ ಏಜೆಂಟರು ಯಾವ ರೀತಿ ಕಾರ್ಯನಿರ್ವಹಿಸಬೇಕು, ಪ್ರತಿ ಮತಗಟ್ಟೆಯನ್ನು ಹೇಗೆ ಜಯಿಸಬೇಕು, ಕಾಂಗ್ರೆಸ್ ಪಕ್ಷದ ಇತಿಹಾಸ, ತ್ಯಾಗ ಹಾಗೂ ಅಧಿಕಾರದಲ್ಲಿದ್ದಾಗ ಕೊಟ್ಟಿರುವ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ವಿಶ್ವಾಸ ಗಳಿಸಿಕೊಳ್ಳಬೇಕೆಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ ಏಜೆಂಟರಿಗೆ ಕರೆ ನೀಡಿದರು.
ಮಂಗಳವಾರ ಇಲ್ಲಿಯ ಕೃಷ್ಣ ಕಲ್ಯಾಣ ಕೇಂದ್ರದಲ್ಲಿ ನವಲಗುಂದ ಬ್ಲಾಕ್ ಮಟ್ಟದ ಬೂತ್ ಏಜೆಂಟರಿಗೆ ಏರ್ಪಡಿಸಿದ ಬೂತ್ ಜಯಭೇರಿ ಅಭಿಯಾನದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ಅವರು ನಂತರ ಲೋಕೊಪಯೋಗಿ ಇಲಾಖೆಯ ನಿರೀಕ್ಷಣಾಲಾಯದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಎಲ್ಲ ಟಿಕೆಟ್ ಆಕಾಂಕ್ಷಿಗಳು, ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಭಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ. ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಮಾಡಿರುವ ಭ್ರಷ್ಟಾಚಾರ, ಬೆಲೆ ಏರಿಕೆ, 40% ಕಮೀಷನ್‍ನಿಂದಾಗಿ ಜನರು ಬೇಸತ್ತು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪ್ರಣಾಣಿಕೆಯಲ್ಲಿ ಪ್ರಕಟವಾಗುವ ಅಂಶಗಳನ್ನು ಹಂತ ಹಂತವಾಗಿಯೇ ನಾವು ಮತದಾರರಿಗೆ ಭರವಸೆ ನೀಡುತ್ತಿದ್ದೇವೆ.
ಈಗಾಗಲೇ 200 ಯುನಿಟ್ ವಿದ್ಯುತ್ ಉಚಿತದ ಗೃಹ ಜ್ಯೋತಿ ಯೋಜನೆ ಮತ್ತು ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಮಹಿಳೆಯರ ನೆರವಿನ ಹಸ್ತವಾಗಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ.2000 ಕೊಡುವುದಾಗಿ ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮುಂಬರುವ ದಿನದಲ್ಲಿ 3ನೇ ಗ್ಯಾರಂಟಿಯನ್ನು ಸಹ ರಾಜ್ಯಾಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕರಾಗಿರುವ ಸಿದ್ರಾಮಯ್ಯನವರು ಸದ್ಯದಲ್ಲಿಯೇ ಪ್ರಕಟಿಸಲಿದ್ದಾರೆಂದು ಮುನ್ಸೂಚನೆ ನೀಡಿದರು.
ರಾಜ್ಯ ಕೆ.ಪಿ.ಸಿ.ಸಿ ಉಪಾಧ್ಯಕ್ಷರಾಗಿರುವ ಪಿ.ವಿ.ಮೋಹನ ಮಾತನಾಡಿ ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಮತದಾರರಿಗೆ ಹೇಗೆ ಮನಮುಟ್ಟುವಂತೆ ತಿಳಿಸಬೇಕು, ಮತಗಟ್ಟೆÉಯನ್ನು ಹೇಗೆ ಜಯಿಸಬೇಕೆಂಬುದರ ಬಗ್ಗೆ ನಾವೆಲ್ಲರೂ ಪಾಠ ಮಾಡಿದ್ದೇವೆ. ಎಲ್ಲ ಕಾರ್ಯಕರ್ತರು ಹುಮ್ಮಸ್ಸಿನಿಂದ ಗೆಲುವನ್ನೇ ಮಾನದಂಡವಾಗಿಟ್ಟುಕೊಂಡು ಈ ಭಾರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ.
ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುತ್ತಿರುವುದು ಖುಷಿಯ ವಿಚಾರವಾಗಿದೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೇ ಗೆಲುವು ಶತಸಿದ್ಧ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಂಡಿದ್ದಾರೆಂದು ಪಿ.ವಿ.ಮೋಹನ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಆನಂದ ಗಡ್ಡದೇವರಮಠ, ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಚಿವ ಕೆ.ಎನ್.ಗಡ್ಡಿ, ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ವಿನೋದ ಅಸೂಟಿ, ಶಿವಾನಂದ ಕರಿಗಾರ, ರಾಜಶೇಖರ ಮೆಣಸಿನಕಾಯಿ, ಚಂಬಣ್ಣ ಹಾಳದೋಟರ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಉಪಾಧ್ಯಕ್ಷ ವಿಜಯಗೌಡ ಪಾಟೀಲ, ಉಸ್ತುವಾರಿ ಸುಜಾತಾ ದೊಡ್ಡಮನಿ, ಪ್ರಕಾಶಗೌಡ ಪಾಟೀಲ, ನವಲಗುಂದ ಬ್ಲಾಕ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಅಣ್ಣಿಗೇರಿ ಬ್ಲಾಕ್ ಅಧ್ಯಕ್ಷ ಮಂಜು ಮಾಯಣ್ಣವರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಎ.ಐ.ಸಿ.ಸಿ ಕಾರ್ಯದರ್ಶಿ ವಿಷ್ಣುನಾದ, ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಬ್ಬರು ಸರಕಾರಿ ನೌಕರರ ಮನೆಗಳ ಬೀಗದ ಕೊಂಡಿ ಮುರಿದು ಚಿನ್ನಾಭರಣ ಕಳ್ಳತನ……..
ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ
ಇಬ್ಬರು ಸರಕಾರಿ ನೌಕರರ ಮನೆಯ ಬೀಗದ ಕೊಂಡಿ ಮುರಿದು ನಗದು ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ ಜರುಗಿದೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಶೋಭಾ ತಂದೆ ನಿಜಲಿಂಗಪ್ಪ ನಾರಾಯಣಿ ಎಂಬುವರು ಕಾರ್ಯನಿಮಿತ್ತ ಬಾಗಲಕೋಟಗೆ ಹೋದಾಗ ಸರಕಾರಿ ಆಸ್ಪತ್ರೆಯ ವಸತಿ ಗೃಹದ ಬೀಗದ ಕೊಂಡಿ ಮುರಿದು ಒಳಹೊಕ್ಕ ಕಳ್ಳರು, ಟ್ರೇಜರಿಯ ಕೀಲಿ ಮೀಟಿ ಅದರೊಳಗೆ ಇದ್ದ 2.60.500 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳು ಹಾಗೂ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಇಲ್ಲಿನ ಬಸವೇಶ್ವರ ನಗರದ ಹೆಸ್ಕಾಂ ಉದ್ಯೋಗಿ ಶಿವರಾಜ್ ತಂದೆ ಮಾಲಿಂಗಪ್ಪ ರಾಮನಗೌಡರ ಇವರ ಮನೆಗೆ ಹಾಕಿದ ಬೀಗದ ಕೊಂಡಿ ಮುರಿದು ಒಳಹೊಕ್ಕು ಮನೆಯ ಬೆಡ್ ರೂಮ್ ದಲ್ಲಿದ್ದ ಟ್ರೇಜರಿ ಕದ ತಗೆದು ಅದರಲ್ಲಿದ್ದ ಸುಮಾರು 36 ಸಾವಿರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಪ್ರಕರಣ ದಾಖಲಾಗಿದೆ.
ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯಲ್ಲಿ 1989-90ನೇ ಸಾಲಿನಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಧಾನ ಗುರುಗಳಾದ ಎಮ್. ಎಚ್ ಕೆಳಗಡೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗುರುಗಳಾದ ಡಿ.ಎಮ್ ಬಂಡಿ, ಆರ್.ಎಚ್ ಬಂಡಿ, ವಿ. ರವಿಕುಮಾರ್ ರಾಮೇನಹಳ್ಳಿ, ಶ್ರೀಮತಿ ಡಿ. ಆರ್ ದೇಶಪಾಂಡೆ ಅವರು, ಹಳೆಯ ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಡಾ.ಬಿ.ಡಿ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ಈಶ್ವರ್ ತಿಪ್ಪಾರೆಡ್ಡಿ, ಸುಭಾಷ್ ನಾಯ್ಕರ್, ಕಳಸಣ್ಣವರ, ಜಾಧವ್, ಶೇಕಪ್ಪ ಎಲಿ, ಜಹಾಂಗೀರ್ ಕಟ್ಟಿಮನಿ, ರಾಮಚಂದ್ರ ಪೂಜಾರಿ, ರವಿ ಕಬ್ಬಕ್ಕಿ, ಈಶ್ವರಗೌಡ ಪಾಟೀಲ, ಮೊಹಮ್ಮದ್ ಅಲಿ ಮನಿಯಾರ್, ಗೋವನ್ನವರ್, ಮೂಲಿಮನಿ ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ರಮಜಾನ್ ಯಾದಗಿರಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಕಾವೇರಿ ಮರಡ್ಡಿ ಹಾಗೂ ಗೀತಾ ಬಿರಸಲ ಪ್ರಾರ್ಥಿಸಿದರು. ಸೋಮನಗೌಡ ವಂದಿಸಿದರು.
ಚಿಕ್ಕನರಗುಂದ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ವಿಧ್ಯಾರ್ಥಿಗಳು ಡೊಳ್ಳು ಮೇಳಗಳೊಂದಿಗೆ ಗ್ರಾಮ ಪಂಚಾಯತಿ ಹಾಗೂ ಎಸ್ ಡಿ ಎಮ್ ಸಿ.ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರನ್ನು ಆತ್ಮೀಯವಾಗಿ ವೇದಿಕೆಗೆ ಸ್ವಾಗತಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನರಗುಂದ, ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಗ್ರಾಮ ಪಂಚಾಯತ್ ಚಿಕ್ಕನರಗುಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿವಸಗಳ ಕಾಲ ನೆಡೆಯುತ್ತಿರುವ 2023 ರ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಗ್ರಾ.ಪಂ.ಅಧ್ಯಕ್ಷರಾದ ಲಕ್ಷ್ಮಣ ಕಂಬಳಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಕ್ಕಳಿಗೆ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು, ಹಲವಾರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವದಕ್ಕೆ ಕಲಿಕಾ ಹಬ್ಬ ಪೂರಕವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ ಡಿ ಎಮ್ ಸಿ.ಅಧ್ಯಕ್ಷ ಶರಣಬಸಪ್ಪ ಹಳೇಮನಿ ಅವರು, ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಬರುವ ವಿಷಯಗಳನ್ನು ಚೆನ್ನಾಗಿ ಅರಿತುಕೊಂಡು ಕಾರ್ಯಗತಗೊಳಿಸಲು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಸಹ ಕಲಿಕಾ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಶಿಕ್ಷಣ, ವೈಜ್ಞಾನಿಕ ಮತ್ತು ವಿಮಾರ್ಶಾತ್ಮಕ ಚಿಂತನೆಯನ್ನು ಪ್ರಸಾರಗೊಳಿಸುವುದು ಹಾಗೂ ವಿಧ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಈ ಕಲಿಕಾ ಹಬ್ಬದ ಗುರಿಯಾಗಿದೆ ಎಂದು ಕಾಲೇಜು ಪ್ರಾಚಾರ್ಯರಾದ ಶ್ರೀಕಾಂತ ದಂಡನಾಯ್ಕರ್ ತಿಳಿಸಿದರು.
ಶಿಕ್ಷಕರಾದ ಪಿ.ಸಿ.ಕಲಹಾಳ ಮಾತನಾಡಿ, ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರತಿಬಿಂಬಿಸಲು ಈ ಕಲಿಕಾ ಹಬ್ಬದ ಮೂಲಕ ಉತ್ಸಾಹ ಬೆಳಿಸಿಕೊಂಡು ವಿಧ್ಯಾಭ್ಯಾಸದಲ್ಲಿ ಜಾಣರಾಗಿ ಮುಂದುವರೆಯಬೇಕೆಂದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಪಂಚಾಯತಿ ಮಾಜಿ ಅಧ್ಯಕ್ಷರಾದ ಮುತ್ತು ರಾಯರಡ್ಡಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್, ಗ್ರಾ.ಪಂ.ಸದಸ್ಯರಾದ ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಈರಮ್ಮ ಮುದಿಗೌಡ್ರ, ಶೋಭಾ ಕೋಣನ್ನವರ, ಮುಖ್ಯೋಪಾಧ್ಯಾಯರಾದ ವಿದ್ಯಾಸಾಗರ್ ಬೋಗಾರ್, ಸುರೇಶ ಭಜಂತ್ರಿ, ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಸಂಪನ್ಮೂಲ ಶಿಕ್ಷಕರು ಬೆನಕನಕೊಪ್ಪ, ಸಂಕಧಾಳ ಗ್ರಾಮದ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಉಪಸ್ಥಿತರಿದ್ದರು. ಗ್ರಾಮದ ನಾಗರಿಕರು ಹಾಜರಿದ್ದು ಕಾರ್ಯಕ್ರಮ ನೋಡಿ ಆನಂದಿಸಿದರು.
ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ರೋಹಿಣಿ ಕುರ್ತಕೋಟಿ ಸ್ವಾಗತಿಸಿದರು. ಅನ್ನಪೂರ್ಣ ತೇಲಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಜೆ.ಬಿ.ಆರೈರ ವಂದನಾರ್ಪಣೆ ಮಾಡಿದರು.
ಸ್ಥಳೀಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧ್ಯಕ್ಷರನ್ನಾಗಿ ತಾಲ್ಲೂಕಿನ ಶಲವಡಿ ಗ್ರಾಮದ ಶ್ರೀಶೈಲ ಮೂಲಿಮನಿ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಅವರ ಸೂಚನೆಯ ಮೆರೆಗೆ ಆಯ್ಕೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ಆದೇಶಿಸಿದ್ದಾರೆ.
ನೂತನ ಜವಾಬ್ದಾರಿ ವಹಿಸಿಕೊಂಡಿರುವ ಶ್ರೀಶೈಲ ಮೂಲಿಮನಿ ಅವರು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷದ ಬಲವರ್ಧನೆ ಮಾಡುವುದರ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಮತ್ತು ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಯನ್ನು ಮನೆ ಮನೆಗೆ ತಲುಪಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡುವಂತೆ ಬಿ.ಬಿ.ಗಂಗಾಧರಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.