Home Blog Page 3303

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಪಂ ಪಿಡಿಓ, ಅಧ್ಯಕ್ಷರ ನೇತೃತ್ವದಲ್ಲಿ ಹತ್ತಾರು ಕಾರ್ಯಕ್ರಮಗಳು!

ವಿಜಯಸಾಕ್ಷಿ ಸುದ್ದಿ, ನರಗುಂದ

ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಚಿಕ್ಕನರಗುಂದ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ಶೈನಾಜ್ ಮುಜಾವರ ಹಾಗೂ ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ನೇತೃತ್ವದಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ರಸ್ತೆ ಹಾಗೂ ಗೋಡೆ ಮೇಲೆ ಚಿತ್ರ ಬಿಡಿಸುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ರಸ್ತೆ, ದೇವಸ್ಥಾನಗಳ ಮುಂದೆ ಜಾಗೃತಿ ಕಲಾಕೃತಿಗಳನ್ನು ಬರೆಸುವ ಮೂಲಕ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗುತ್ತಿದೆ.

ತಾಲೂಕಿನ ಚಿಕ್ಕ ನರಗುಂದ ಗ್ರಾಮದಲ್ಲಿ ಗ್ರಾಪಂ ವತಿಯಿಂದ ನರಗುಂದ, ಚಿಕ್ಕನರಗುಂದ ಒಳ ರಸ್ತೆ, ಚಿಕ್ಕನರಗುಂದ ಬೆನಕೊಪ್ಪ, ಸಂಕದಾಳ ಮುಖ್ಯ ರಸ್ತೆ ಹಾಗೂ ಗ್ರಾಮದ ಪ್ರಮುಖ ಸಾರ್ವಜನಿಕ ಸ್ಥಳಗಳು, ದೇವಸ್ಥಾನ, ನೀರಿನ ಟ್ಯಾಂಕ್, ಗೋಡೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕೊರೊನಾ ಜಾಗೃತಿ ಚಿತ್ರ ಹಾಗೂ ಬರವಣಿಗೆ ಸಂದೇಶ ಬರೆಯಿಸಲಾಗಿದೆ.

ಕೊರೊನಾ ವೈರಸ್ ಚಿತ್ರ ಬರೆಯಿಸಿ ಆ ಚಿತ್ರದ ಸುತ್ತಮುತ್ತಲೂ ನನ್ನ ಮಾಸ್ಕ್ ನನ್ನ ಲಸಿಕೆ, ಸಾರ್ವಜನಿಕ ಸ್ಥಳಗಳಲ್ಲಿ ಉಗಳಬಾರದು, ಮಾಸ್ಕ್ ಧರಿಸಿ, ಕೊರೊನಾ ಓಡಿಸಿ, ನಿಮ್ಮ ಆರೋಗ್ಯ ಸುರಕ್ಷಿತವಾಗಿ ಕಾಪಾಡಿಕೊಳ್ಳಿ, ಆರು ಅಡಿ ಸಾಮಾಜಿಕ ಅಂತರ ಕಾಪಾಡಿ, ಸ್ಯಾನಿಟೇಸರ್ ಬಳಸಿ, ಆಗಾಗ ಸಾಬೂನಿನಿಂದ ಕೈ ತೊಳೆಯಿರಿ, ಕೈ ತೊಳೆಯದೆ ಕಣ್ಣು, ಮೂಗು, ಬಾಯಿ ಮುಟ್ಟಬೇಡಿ, ಬಿಸಿ ನೀರನ್ನು ಸೇವಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂಬ ಬರಹಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪಿಡಿಓ ಹೇಳಿದ್ದಾರೆ.

ಮೈಕ್ ಮುಖಾಂತರ ಹಾಗೂ ಕಾಲ್ನಡಿಗೆ ಜಾತಾ ನಡೆಸಲಾಗುತ್ತಿದೆ ಎಂದು ಪಿಡಿಓ ಶೈನಾಜ್ ಮುಜಾವರ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷಾದ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ ಬಾಪು ಹಿರೇಗೌಡರ, ಲಕ್ಷ್ಮಣ ಕಂಬಳಿ, ಶರಣಪ್ಪ ಹಳೇಮನಿ, ಜಡಿಯಪ್ಪಗೌಡ ಚನ್ನಪ್ಪಗೌಡರ, ಈರವ್ವ ಮುದಿಗೌಡರ, ಶೃತಿ ಬ್ಯಾಳಿ, ಶೋಭಾ ಕೋಣಣ್ಣವರ, ನೀರ್ಮಲಾ ತಳವಾರ, ಶಂಕ್ರವ್ವ ಚಲವಾದಿ ಹಾಗೂ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಪಂ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತರು ಇದ್ದರು.

ಯಡಿಯೂರಪ್ಪ ಆಲದ ಮರ, ಯೋಗೇಶ್ವರ್ ನನ್ನು ಸಂಪುಟದಿಂದ ಕೈ ಬಿಡಬೇಕು; ರೇಣುಕಾಚಾರ್ಯ

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕೆಂದು ಈಗಾಗಲೇ 65 ಜನ ಶಾಸಕರು ಸಹಿ ಮಾಡಿ ಪತ್ರ ನೀಡಿದ್ದಾರೆ. ಹೀಗಾಗಿ ಸಿ.ಪಿ. ಯೋಗೇಶ್ವರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಸಿಪಿವೈಗೆ ಜಲ ಸಂಪನ್ಮೂಲ ಹಾಗೂ ಇಂಧನ ಖಾತೆಯೊಂದಿಗೆ ರಾಮನಗರ ಜಿಲ್ಲೆಯ ಉಸ್ತುವಾರಿ ಬೇಕಾಗಿತ್ತು. ಆದರೆ, ಅದು ಸಿಕ್ಕಿಲ್ಲ. ಈ ಕಾರಣಕ್ಕೆ ಅವರಿಗೆ ತಳಮಳ ಶುರುವಾಗಿದೆ. ಹೀಗಾಗಿಯೇ ಇಂತಹ ಕೆಲಸ ಮಾಡುತ್ತಿದ್ದಾರೆ. ದೆಹಲಿ ನಾಯಕರ ಮನೆಯ ಗೇಟ್ ಮುಟ್ಟಿ, ಅಲ್ಲಿ ಪೋಟೋ ತೆಗೆಸಿಕೊಂಡು ಸಿಎಂ ಬದಲಾವಣೆ ಕುರಿತು ಸುಳ್ಳು ಹೇಳುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾಗಲಿ, ಆಗ ನನ್ನ ಹೋರಾಟ ಶುರುವಾಗಲಿದೆ. ಯೋಗೇಶ್ವರ್ ಅವರನ್ನು ವಜಾ ಮಾಡಬೇಕು. ಜೊತೆಗೆ ಮೆಗಾಸಿಟಿ ಹಗರಣದ ಹಿನ್ನೆಲೆಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಯೋಗೇಶ್ವರ್ ನ ಮೇಲೆ ಕ್ರಮ ಕೈಗೊಳ್ಳಲು ಸಿಎಂಗೆ ಹೆದರಿಕೆ ಇಲ್ಲ. ಸಿಎಂ ಅವರ ರೆಡಿಮೇಡ್ ಫುಡ್ ಅಲ್ಲ. ಅವರು ಪಕ್ಷ ಸಂಘಟನೆ ಹಾಗೂ ಸಾಕಷ್ಟು ಹೋರಾಟದ ಮೂಲಕ ಮೇಲೆ ಬಂದವರು. ಯಡಿಯೂರಪ್ಪ ಆಲದ ಮರ ಇದ್ದಂತೆ. ನಾವು ಅವರ ನೆರಳಲ್ಲಿ ಇದ್ದೇವೆ. ಅವರ ಬೆನ್ನಿಗೆ ಚೂರಿ ಹಾಕಿದರೆ ನಾವು ಬಿಡಲ್ಲ. ಸದ್ಯ ಕೋವಿಡ್ ಇರುವುದರಿಂದ ನಾವು ಸುಮ್ಮನಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಮೊಟ್ಟ ಮೊದಲ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆ!

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಚರ್ಮದ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಅದು ರಾಜ್ಯದಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯ 50 ವರ್ಷದ ರೋಗಿಯಲ್ಲಿ ಸ್ಕಿನ್ ಮ್ಯೂಕರ್ ಮೈಕೋಸಿಸ್ ಕಾಯಿಲೆ ಕಂಡು ಬಂದಿದೆ. ಈ ವ್ಯಕ್ತಿ ಕಳೆದ ಒಂದು ತಿಂಗಳ ಹಿಂದೆ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದರು. ಈ ವ್ಯಕ್ತಿ ಮಧುಮೇಹದಿಂದ ಬಳಲುತ್ತಿದ್ದರು. ಸದ್ಯ ಇವರಲ್ಲಿಯೇ ಚರ್ಮದ ಕಪ್ಪು ಶಿಲೀಂಧ್ರ ಪತ್ತೆಯಗಿದೆ.

ಈ ವ್ಯಕ್ತಿಯ ಬಲಗಿವಿಯ ಸಮೀಪ ಚರ್ಮದ ಕಪ್ಪು ಶಿಲೀಂಧ್ರ ರೋಗ ಪತ್ತೆಯಾಗಿದೆ. ಇದು ಭಾರತದಲ್ಲಿಯೇ ಪ್ರಪ್ರಥಮ ಪ್ರಕರಣ ಎಂದು ವೈದ್ಯರ ತಂಡ ಹೇಳಿದೆ. ಇಲ್ಲಿಯ ಜಿಲ್ಲಾಸ್ಪತ್ರೆ ವೈದ್ಯರ ತಂಡದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಕೊರೊನಾ ರೋಗಿಗಳು ಹಾಗೂ ಗುಣಮುಖರಾದವರಲ್ಲಿ ಇಲ್ಲಿಯವರೆಗೂ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಹಾಗೂ ಹಳದಿ ಫಂಗಸ್ ಕಂಡು ಬರುತ್ತಿತ್ತು. ಸದ್ಯ ಚರ್ಮದ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಿದ್ದರಾಮಯ್ಯ ಅವರಿಗೆ ನಿನ್ನೆ ರಾತ್ರಿಯಿಂದ ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಅವರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೂ ಒಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅವರ ಆಪ್ತ ವೈದ್ಯ ಡಾ. ರವಿ ಕುಮಾರ್ ಅವರು ತಪಾಸಣೆ ನಡೆಸಿದ ಬಳಿಕ, ವಿಶ್ರಾಂತಿಗೆ ಸೂಚಿಸಿದ್ದಾರೆ. ಹೀಗಾಗಿ ವೈದ್ಯರ ಸಲಹೆಯಿಂದಾಗಿ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇಹಲೋಕ ತ್ಯಜಿಸಿದ ಹಿರಿಯ ಸಾಹಿತಿ ಭೀಮಯ್ಯ ಮೇಷ್ಟ್ರು!

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಹಿರಿಯ ಸಾಹಿತಿ, ಕನ್ನಡ ಕಿಂಕರ ಎಂದೇ ಖ್ಯಾತಿಯಾಗಿದ್ದ ಭೀಮಯ್ಯ ಮೇಷ್ಟ್ರು ಇಹಲೋಕ ತ್ಯಜಿಸಿದ್ದಾರೆ.

ಭೀಮಯ್ಯ(96) ಇಂದು ವಿಧಿವಶರಾಗಿದ್ದಾರೆ. ಈ ಮೂಲಕ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಇದರಿಂದಾಗಿ ಸಾರಸ್ವತ ಲೋಕ ಕಣ್ಣೀರು ಸುರಿಸುತ್ತಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಮಾರೇನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ 1925ರಲ್ಲಿ ಭೀಮಯ್ಯ ಮೇಷ್ಟ್ರು ಜನಿಸಿದ್ದರು. ಇವರ ತಾತ ಸಣ್ಣಲಿಂಗೇಗೌಡ ಅವರ ಪ್ರಭಾವಕ್ಕೆ ಒಳಗಾಗಿದ್ದ ಭೀಮಯ್ಯ ಅವರು, ಆಧಾತ್ಮ ಮತ್ತು ತತ್ವ ಸಾಧನೆಯನ್ನು ಗಳಿಸಿಕೊಂಡಿದ್ದರು.

ರಾಮಾಯಣ, ಗದುಗಿನ ಭಾರತ, ದೇವಿ ಮಹಾತ್ಮೆ ಇವರ ಪಾಲಿಗೆ ಆಧಾತ್ಮ ಪಠ್ಯಗಳಾಗಿದ್ದವು.

ಇವರು 1950ರ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದಿದ್ದರು. ಆದರೆ, ಎಲ್ಲರಂತೆ ಸರ್ಕಾರಿ ಕೆಲಸಕ್ಕೆ ಸೇರದೆ, ಹಳ್ಳಿಯಲ್ಲಿಯೇ ಉಳಿದರು. ನೈತಿಕ ಮೌಲ್ಯಗಳ ಕುರಿತು ಮಾತನಾಡುತ್ತಿದ್ದರಿಂದಾಗಿ ಇವರನ್ನುಇವರು ‘ಭೀಮಯ್ಯ ಮೇಷ್ಟ್ರು’ ಎಂದೇ ಪ್ರಸಿದ್ಧಿ ಪಡೆದಿದ್ದರು.

ಇವರು, ‘ಆನಂದ ಮಠ’ ಎಂಬ ಸಂಘವನ್ನು ಸ್ಥಾಪಿಸಿದ್ದರು. ನಾಟಕ, ಕಾವ್ಯ, ವಚನಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ‘ಸತ್ವ ಪರೀಕ್ಷೆ’, ‘ಜೀವನಾಮೃತ’, ದೇವಿ ಮಹಾತ್ಮೆ ಕಥೆಯನ್ನು ಆಧರಿಸಿದ ‘ಚಿದಾನಂದ ಲೀಲೆ’ ಎಂಬ ನಾಟಕಗಳನ್ನು ರಚಿಸಿದ್ದರು. ರಾಮಾಯಣ ದರ್ಶನಂ ಮಹಾಕಾವ್ಯದ ಸರಳ ಗದ್ಯಾನುವಾದ ‘ರಾಮಾಯಣ ಸಂದರ್ಶನ’, ‘ಮಂಕು ಭೀಮನ ಬೊಗಳೆ’ ಎಂಬ ಕೃತಿಗಳನ್ನು ರಚಿಸಿದ್ದರು. ಹಿರಿಯೂರಿನಲ್ಲಿ ನಡೆದಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು. ಪಟ್ಟನಾಯಕನಹಳ್ಳಿ ಮಠದ ‘ಸ್ಪಟಿಕಶ್ರೀ’ ಪ್ರಶಸ್ತಿ. ತತ್ವಜ್ಞಾನಿ ಪಟೇಲ್ ಬೊಮ್ಮೆಗೌಡ ಸ್ಮಾರಕದ ತತ್ವಶ್ರೀ ಪ್ರಶಸ್ತಿಯನ್ನು ಪಡೆದಿದ್ದರು.

ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು ಹಾಗೂ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ.

ರಾಜ್ಯದ ಮಣ್ಣಿನ ಮಗ ಪ್ರಧಾನಿಯಾಗಿ ಇಂದಿಗೆ 25 ವರ್ಷ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ದಿನಕ್ಕೆ ಇಂದಿಗೆ 25 ವರ್ಷಗಳು ತುಂಬಿವೆ. ಅವಧಿ ಚಿಕ್ಕದಾದರೂ ಅವರ ಸಾಧನೆ ಊಹೆಗೆ ಮೀರಿದ್ದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕೊಂಡಾಡಿದ್ದಾರೆ.

ದೇವೇಗೌಡ ಅವರು ಪ್ರಧಾನಿಯಾಗಿ ಇಂದಿಗೆ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸರಣಿ ಟ್ವೀಟ್ ಗಳನ್ನು ಮಾಡಿ, ತಂದೆಯ ಕಾರ್ಯ ಸ್ಮರಿಸಿ, ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು, ಮಣ್ಣಿನ ಮಗ, ರಾಜ್ಯದ ಹೆಮ್ಮೆಯ ಸುಪುತ್ರ ಎಚ್.ಡಿ. ದೇವೇಗೌಡ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನ ಇಂದು. ಈ ದಿನ ಭರ್ತಿ 25 ವರ್ಷಗಳನ್ನು ಪೂರೈಸಿದೆ. ಹೀಗಾಗಿ ನಾವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ಐಟಿ ಉದ್ಯಮಕ್ಕೆ ಹತ್ತು ವರ್ಷಗಳ ಕಾಲ‌ ಟ್ಯಾಕ್ಸ್ ಹಾಲಿಡೇ, ಬಾಂಗ್ಲಾ ದೇಶ ಹಾಗೂ ಭಾರತದ ನಡುವಿನ ಗಂಗಾ ನದಿ ವಿವಾದ ಬಗೆಹರಿಸಿದ್ದು ದೇವೇಗೌಡ ಅವರ ದೊಡ್ಡ ಸಾಧನೆ ಎಂದು ಬಣ್ಣಿಸಿದ್ದಾರೆ. ಈಶಾನ್ಯದ ರಾಜ್ಯಗಳಿಗೆ ಭೇಟಿ ನೀಡಿ ಬರೋಬ್ಬರಿ ರೂ. 6 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದರು.

ಏರ್ ಪೋರ್ಟ್, ರೈಲ್ವೆ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳು, ವಿಶ್ವವಿದ್ಯಾಲಯಗಳನ್ನು ನಿರ್ಮಿಸಲು ವಿಶೇಷ ಅನುದಾನ ನೀಡಿದ್ದರು. ಅಂದು ಕಾಶ್ಮೀರಕ್ಕೆ ಐದು ಬಾರಿ ಭೇಟಿ ನೀಡಿ, ರೂ. 3 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿದ್ದರು. ದೆಹಲಿ ಮೆಟ್ರೋಗೆ ಚಾಲನೆ ನೀಡಿದ್ದರು. ನಾಗಾ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸಿ ಯುದ್ದವಿರಾಮ ಘೋಷಿಸಿದ್ದರು. ಕೇವಲ ಕಡಿಮೆ ಅವಧಿಯಲ್ಲಿ ದೇಶಕ್ಕೆ ಆಗುವ ಅಪಾಯ ತಪ್ಪಿಸಿ, ಸಾಕಷ್ಟು ಅಭಿವೃದ್ಧಿಕಾರ್ಯಗಳನ್ನು ಮಾಡಿದ್ದಲ್ಲದೆ, ದೇಶದ ಮೂಲೆ ಮೂಲೆಯ ಜನರ ನೋವು ಆಲಿಸಿ, ಪರಿಹರಿಸುವ ಕಾರ್ಯವನ್ನು ಅಂದು ದೇವೇಗೌಡ ಅವರು ಮಾಡಿದ್ದರು ಎಂದು ಕುಮಾರಸ್ವಾಮಿ ನೆನೆದು ಜನರೊಂದಿಗೆ ಹಂಚಿಕೊಂಡಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ದೇವೇಗೌಡ ಅವರು, 11 ತಿಂಗಳುಗಳ ಕಾಲ ಅಧಿಕಾರ ನಡೆಸಿದ್ದರು. ಅವರು ಅಧಿಕಾರ ವಹಿಸಿದ್ದ ಆ ದಿನಕ್ಕೆ ಇಂದಿಗೆ 25 ವರ್ಷಗಳು ಕಳೆದಿವೆ. ಹೀಗಾಗಿ ಜೆಡಿಎಸ್ ಪಕ್ಷದಿಂದ ಬೆಳ್ಳಿ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕನ್ನಡ ಮಣ್ಣಿನ ಹೆಮ್ಮೆಯ ಮಗನಿಗೆ ರಾಜ್ಯದ ಜನರು ಕೂಡ ಹಾರೈಸುತ್ತಿದ್ದಾರೆ.

ಆಸ್ತಿಗಾಗಿ ಅಣ್ಣನನ್ನೇ ಕೊಲೆ ಮಾಡಿರುವ ತಮ್ಮ!

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಆಸ್ತಿ ವಿಚಾರವಾಗಿ ಅಣ್ಣನನ್ನೇ ತಮ್ಮ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಠನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಜರುಗಿದೆ.
ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (54) ತಮ್ಮನಿಂದಲೇ ಕೊಲೆಯಾದ ದುರ್ದೈವಿ. ಸುರೇಶ್ ಕೊಲೆ ಮಾಡಿದ ಸಹೋದರ.

ಕೊಲೆಯಾಗಿರುವ ಬಾಲಕೃಷ್ಣ ಮೈಸೂರಿನಲ್ಲಿ ವಾಸಿಸುತ್ತಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲ ಅವರು ಗ್ರಾಮಕ್ಕೆ ಬಂದಿದ್ದರು.
ಜಮೀನು ವಿಚಾರವಾಗಿ ಬಾಲಕೃಷ್ಣ ಹಾಗೂ ಸುರೇಶ್ ನಡುವೆ ಈ ಹಿಂದೆ ವೈಮನಸ್ಸು ಇತ್ತು. ಹೀಗಾಗಿ ಒಂದೇ ಮನೆಯ ಮಧ್ಯೆ ಗೋಡೆ ಕಟ್ಟಿಕೊಂಡು ಬೇರೆ ಬೇರೆಯಾಗಿಯೇ ಇದ್ದರು. ಆ ನಂತರವೂ ಇಬ್ಬರ ನಡುವೆ ಆಸ್ತಿ ವಿಚಾರವಾಗಿ ಜಗಳವಾಗುತ್ತಿತ್ತು.

ನಿನ್ನೆ ರಾತ್ರಿ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು, ಸುರೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಜಗಳ ಬಿಡಿಸಲು ಬಂದ ಅತ್ತಿಗೆ ಸರಳ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆದರೆ, ಅಣ್ಣ ಬಾಲಕೃಷ್ಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸರಳ ಅವರು ಗಂಭೀರವಾಗಿ ಗಾಯಗೊಂಡಿದ್ದರಿಂದಾಗಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುರೇಶ್ ನನ್ನು ಬಂಧಿಸಲಾಗಿದೆ.

ಅನಾಥ ವೃದ್ಧೆಗೆ ಊಟ ಮಾಡಿಸಿದ ಪೊಲೀಸ್!

ವಿಜಯಸಾಕ್ಷಿ ಸುದ್ದಿ, ಲಕ್ನೋ

ರಸ್ತೆ ಬದಿಯಲ್ಲಿದ್ದ ಅನಾಥ ವೃದ್ಧೆಗೆ ಅನ್ನ ತಿನ್ನಿಸಿ ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ. ಸದ್ಯ ಅವರು ಊಟ ಮಾಡಿಸುತ್ತಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ಯಾರಾಲಿಂಪಿಯನ್ ರಿಂಕು ಹುಡಾ ಎಂಬುವವರು ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಲವರು ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಗೆ ಹ್ಯಾಟ್ಸ್ ಆಫ್, ಒಳ್ಳೆಯ ಕೆಲಸ ಮಾಡಿದ್ದೀರಿ ಸರ್, ನಿಮ್ಮ ಮೇಲೆ ಗೌರವ ಇದೆ ಅಣ್ಣ.. ಹೀಗೆ ಹಲವು ಜನರು ಹಲವು ರೀತಿಯಲ್ಲಿ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ.

ವೈರಸ್ ಭಾರತಕ್ಕೆ ವಕ್ಕರಿಸಿದ ನಂತರ ಹಲವು ಜನರ ಮಾನವೀಯ ಮುಖಗಳು ಬೆಳಕಿಗೆ ಬರುತ್ತಿದ್ದರೆ, ಹಲವರ ಅಮಾನವೀಯ ಗುಣಗಳೂ ಬೆಳಕಿಗೆ ಬರುತ್ತಿವೆ.

ಮಗಳೊಂದಿಗೆ 1200 ಕಿ.ಮೀ ಸೈಕಲ್ ನಲ್ಲಿಯೇ ಕ್ರಮಿಸಿ ಸುದ್ದಿಯಾಗಿದ್ದ ವ್ಯಕ್ತಿ ಇನ್ನಿಲ್ಲ!

ವಿಜಯಸಾಕ್ಷಿ ಸುದ್ದಿ, ಪಾಟ್ನಾ

ಕೊರೊನಾ ಲಾಕ್ ನ್ ಸಂದರ್ಭದಲ್ಲಿ ಸೈಕಲಿನಲ್ಲಿಯೇ ಮಗಳೊಂದಿಗೆ 1,200 ಕಿ.ಮೀ ಕ್ರಮಸಿ ಸುದ್ದಿಯಾಗಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೋಹನ್ ಪಾಸ್ವಾನ್ ಎಂಬುವವರೇ ಸಾವನ್ನಪ್ಪಿರುವ ವ್ಯಕ್ತಿ. ದರ್ಭಾಂಗ ಜಿಲ್ಲೆಯಲ್ಲಿರುವ ಮನೆಯಲ್ಲಿಯೇ ಮೋಹನ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಿಂದಿನ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ ತನ್ನ ತಂದೆಯನ್ನು ಸೈಕಲ್ ನಲ್ಲಿಯೇ ಕೂರಿಸಿಕೊಂಡು 1,200 ಕಿ.ಮೀ ಕ್ರಮಿಸಿ ಧೈರ್ಯ ತೋರಿದ್ದಳು.

ದೆಹಲಿಯಿಂದ ಬಿಹಾರ ಜಿಲ್ಲೆಯ ದರ್ಭಾಂಗಕ್ಕೆ ಸೈಕಲ್ ನಲ್ಲಿಯೇ ತನ್ನ ತಂದೆಯನ್ನು ಜ್ಯೋತಿ ಎಂಬ ಬಾಲಕಿ ಕರೆದುಕೊಂಡು ಹೋಗಿದ್ದಳು. ಈ ಮಧ್ಯೆ ಹಲವು ಏಳು- ಬೀಳುಗಳನ್ನು ಎದುರಿಸಿಕೊಂಡು ತನ್ನ ತಂದೆಯ ಜೊತೆ ಕೊನೆಗೂ ಊರು ಸೇರಿದ್ದಳು.

ನಾವು ತುಂಬಾನೇ ಬಡವರಾಗಿದ್ದು, ನಮ್ಮ ಕೈಯಲ್ಲಿ ಅಲ್ಪ-ಸ್ವಲ್ಪ ಹಣವಿತ್ತು. ಬಾಡಿಗೆ ಮನೆಯಲ್ಲಿದ್ದ ನಮ್ಮನ್ನು ಮಾಲೀಕ ಹಣ ಪಾವತಿಸಲು ಒತ್ತಾಯಿಸಿದ್ದರು. ಇಲ್ಲವೆಂದಲ್ಲಿ ಮನೆ ಖಾಲಿ ಮಾಡಬೇಕು ಎಂದು ಹೇಳಿದ್ದರು. ಹೀಗಾಗಿ ಊರಿಗೆ ಹೋಗಲು ಮುಂದಾಗಿದ್ದೇವು. ಟ್ರಕ್ ಚಾಲಕನ ಬಳಿ ನಮ್ಮನ್ನು ಕರೆದೊಯ್ಯುವಂತೆ ಕೇಳಿಕೊಂಡೆವು. ಆಗ ಆತ ರೂ. 6 ಸಾವಿರ ನೀಡಬೇಕು ಎಂದು ತಿಳಿಸಿದ. ಆದರೆ, ನಮ್ಮ ಬಳಿ ಹಣವಿರಲಿಲ್ಲ. ರೂ. 500 ನೀಡಿ ಒಂದು ಸೈಕಲ್ ಖರೀದಿಸಿ ಅದರಲ್ಲಿಯೇ ದರ್ಭಾಂಗಕ್ಕೆ ತಲುಪಿದೇವು ಎಂದು ಜ್ಯೋತಿ ಕುಮಾರಿ ಹೇಳಿದ್ದಳು.

ಜ್ಯೋತಿಯ ತಂದೆ ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿದ್ದರು. ಕೊರೊನಾದಿಂದ ರಿಕ್ಷಾವನ್ನು ಮಾಲೀಕನಿಗೆ ಕೊಟ್ಟಿದ್ದಾರೆ. ಆ ನಂತರ ಕೆಲಸವಿಲ್ಲದೆ ಜೀವನ ನಡೆಸಲು ಕಷ್ಟಪಡುತ್ತಿದ್ದರು. ಕಾಲಿನಿಂದ ಬಳಲುತ್ತಿದ್ದ ಜ್ಯೋತಿ ತಂದೆಗೆ ನಡೆದಾಡಲು ಕಷ್ಟವಾಗುತ್ತಿತ್ತು. ಅವರ ಬಳಿ ರೂ. 600 ಮಾತ್ರ ಇತ್ತು. ದಾನಿಗಳ ನೆರವಿನಿಂದ ಹಾಗೂ ಕ್ಯಾಂಪ್ ಗಳು ನೀಡುವ ಆಹಾರದ ಮೂಲಕ ದಿನಕಳೆಯುತ್ತಿದ್ದೆವು ಎಂದಿದ್ದಳು. ಆದರೆ, ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಜಾಗದ ಸಮಸ್ಯೆ – ಎರಡು ಕುಟಂಬಗಳ ನಡುವೆ ಮಾರಾಮಾರಿ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು, ಒಂದು ಗುಂಪಿನ ಮೂವರು ಹಾಗೂ ಇನ್ನೊಂದು ಗುಂಪಿನ ಓರ್ವ ವ್ಯಕ್ತಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಆದರೆ,ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಈ ಗುಂಪುಗಳ ನಡುವೆ ಆಗಾಗ ಜಾಗದ ಕುರಿತು ತಕರಾರು ನಡೆಯುತ್ತಿತ್ತು. ಆದರೆ ಇಂದು ಇದೇ ಕಾರಣಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಗಬ್ಬೂರು ಬೈಪಾಸ್ ಬಳಿಯ ಹತ್ತಿರವಿರುವ ಆಟೋಮೊಬೈಲ್ ಹಿಂದಿನ ಜಾಗವೇ ಕಲಹದ ಮೂಲ ಕಾರಣ ಎನ್ನುತ್ತಾರೆ ಸ್ಥಳೀಯರು.

ಸೋಮವಾರ ಮತ್ತೆ ಇದೆ ವಿಚಾರ ವಿಕೋಪಕ್ಕೆ ಹೋಗಿ ವಾಗ್ವಾದ ನಡೆದು ಮಾರಣಾಂತಿಕವಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ.

ಪಾಲಿಕೆಯ ಮಾಜಿ ಸದಸ್ಯ ಬಸೀರ ಅಹ್ಮದ್ ಗುಡ್ಮಾಲ್ ಕುಟುಂಬ ಹಾಗೂ ಆಸೀಪ್ ದಡವಾಡ್ ಕುಟುಂಬದ ಮಧ್ಯೆ ಜಾಗೆಯ ಬಗ್ಗೆ ಇರುವ ಹಳೆ ವೈಷಮ್ಯ ಹೊಗೆಯಾಡುತ್ತಿದೆ. ಇಂದು ಇದೇ ವಿಚಾರ ವಿಕೋಪಕ್ಕೆ ತಿರುಗಿ ಎರಡು ಗುಂಪಿನ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆಸೀಪ್ ದಡವಾಡ್, ಇರ್ಫಾನ್, ಸಾಬೀರ್ ಹಾಗೂ ಅವರ ಸಹಚರರು, ರಿಯಾಜ್ ಆಹ್ಮದ್ ಗುಡ್ಮಾಲ್, ಶಬ್ಬೀರ್ ಅಹ್ಮದ್ ಗುಡ್ಮಾಲ್ ಎಂಬುವವರ ಮಧ್ಯೆಯೇ ಹೊಡೆದಾಟ ನಡೆದಿದೆ. ಈ ಸಂದರ್ಭದಲ್ಲಿಯೇ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ.

ಈ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬಸೀರ್ ಗುಡ್ಮಾಲ್ ಅವರು, ಸಮಾಜ ಸೇವೆಗೆ ಎಂದೇ ಬಳಕೆಯಾಗುತ್ತಿದ್ದ ಆಂಬುಲೇನ್ಸ್ ಸಮೇತ ಘಟನಾ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಗುಡ್ಮಾಲ್ ಕುಟುಂಬದವರು ಅಂಬುಲೇನ್ಸ್ ನಲ್ಲಿ ಮಾರಕಾಸ್ತ್ರಗಳನ್ನು ತುಂಬಿಕೊಂಡು ಬಂದು ನಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದಡವಾಡ್ ಪರಿವಾರದವರು ಆರೋಪಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕಸಬಾ ಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

error: Content is protected !!