ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಎಂದಾಕ್ಷಣ ಗವಿಮಠ ಕಣ್ಮುಂದೆ ಬರುತ್ತದೆ. ಗವಿಮಠದ ಜಾತ್ರೆ ದಕ್ಷಿಣದ ಕುಂಭಮೇಳ, ಉತ್ತರದ ಸಿದ್ಧಗಂಗೆ ಎಂತಲೂ ಫೇಮಸ್. 2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಜಾತ್ರಾ ಮಹೋತ್ಸವ, ಈ ವರ್ಷ ಮತ್ತೇ ಹಿಂದಿನ ವರ್ಷಗಳ ವೈಭವವನ್ನು ಕಟ್ಟಿ ಕೊಡುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆದಿವೆ.
ಈ ಸಲ ಕೊರೋನಾ ಪ್ರಕರಣಗಳು ಕಳೆದ ಒಂದೂವರೆ ವರ್ಷಗಳ ಹಿಂದಿನ ದಿನಗಳಿಗಿಂತ ಕಡಿಮೆಯಾಗಿದ್ದು, ಅಜ್ಜನ ಅರ್ಥಪೂರ್ಣ ಜಾತ್ರಾ ಮಹೋತ್ಸವಕ್ಕೆ ತಯಾರಿ ನಡೆದಿದೆ.
2022ರ ಜನೇವರಿ 19ರಂದು ಅಜ್ಜನ ಜಾತ್ರೆಯ ಮಹಾರಥೋತ್ಸವಕ್ಕೆ ದಿನ ನಿಗದಿಯಾಗಿದ್ದು, ಹಿಂದಿನಂತೆ ಮೂರು ದಿನಗಳ ಸಾಂಸ್ಕೃತಿಕ ಉತ್ಸವ, ಹದಿನೈದು ದಿನಗಳ ಮಹಾ ಅನ್ನದಾಸೋಹ, ಸಂಜೆ ಮಹಾರಥೋತ್ಸವ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕುರಿತು ವಿಶೇಷ ಚಟುವಟಿಕೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ತಾಯಿ, ಮಗ ಮತ್ತು ಕಬ್ಜಾದಾರರ ನಡುವೆ ಉಂಟಾದ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಪೊಲೀಸ್ ಠಾಣೆಯಲ್ಲಿ ಪೊಲೀಸರ ಹೊಡೆತದಿಂದ ಗದಗ-ಬೆಟಗೇರಿಯ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟನಂತೆ ಎಂಬ ವದಂತಿ ಮೂರ್ನಾಲ್ಕು ದಿನಗಳಿಂದ ಅವಳಿ ನಗರದಲ್ಲಿ ಹರಿದಾಡುತ್ತಿದೆ.
ಗದಗ ಶಹರ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಆಗಿದ್ದಾನೆ ಎನ್ನಲಾಗುತ್ತಿರುವ ಆದರ್ಶ ನಗರದ 45 ವರ್ಷದ ವ್ಯಕ್ತಿ ಸಂತೋಷ ಅಲಿಯಾಸ್ ಸಂತೋಷ್ ಕುಮಾರ ಪೊಲೀಸರ ಹೊಡೆತದಿಂದಲೇ ಸಾವನ್ನಪ್ಪಿದ್ದರೂ, ಪೊಲೀಸರು ಅವೆಲ್ಲವನ್ನು ಮುಚ್ಚಿಹಾಕಿ ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬ ಕಥೆ ಕಟ್ಟುತ್ತಿದ್ದಾರಂತೆ ಎಂಬ ಊಹಾಪೋಹಗಳು ಎದ್ದಿವೆ.
ಈ ಘಟನೆಯಿಂದ ಗದಗ-ಬೆಟಗೇರಿ ಅವಳಿ ನಗರದ ಜನತೆ ಅಕ್ಷರಶಃ ಬೆಚ್ಚಿಬಿದ್ದಿದ್ದು, ಸಂತೋಷ್‌ಗೆ ನಿಜಕ್ಕೂ ಎದೆನೋವು ಕಾಣಿಸಿಕೊಂಡಿತ್ತಾ? ಅಥವಾ ಪೊಲೀಸರ ಹೊಡೆತದಿಂದಲೇ ಆತ ಸಾವನ್ನಪ್ಪಿದನಾ? ವೈದ್ಯರು ಹೇಳುವ ಪ್ರಕಾರ ಆತನಿಗೆ ಹೃದಯಾಘಾತ ಸಂಭವಿಸಿತಾ?
ಅಷ್ಟಕ್ಕೂ ನ. 4 ರಂದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ನಡೆದದ್ದಾರು ಏನು? ಪ್ರಕರಣದಿಂದ ಪಾರಾಗಲು ಪೊಲೀಸರು ಹೃದಯಾಘಾತ ಎಂಬ ಕಥೆ ಕಟ್ಟಿದರೆ? ಎಂಬ ಅವಳಿ ನಗರದ ಜನರ ಪ್ರಶ್ನೆಗೆ ಪೊಲೀಸರೇ ಉತ್ತರ ನೀಡಬೇಕಿದೆ.
ಕಬ್ಜಾದಾರನ ಹೆಂಡತಿಗೆ ಕಿರುಕುಳ?:
ಮೃತ ವ್ಯಕ್ತಿ ಸಂತೋಷನಿಗೆ ಎರಡು ಅಂತಸ್ತಿನ ಮನೆಯಿದ್ದು, ಅವರ ತಾಯಿ ತಾವಿದ್ದ ಮನೆಯಲ್ಲಿಯೇ ಕೆಳಗಿನ ಅಂತಸ್ತಿನ ಮನೆಯನ್ನು ನಾಲ್ಕು ಲಕ್ಷ ರೂ.ಗಳಿಗೆ ಬೇರೆಯವರಿಗೆ ಕಬ್ಜಾ ಕೊಟ್ಟಿದ್ದಾರಂತೆ. ಈಕೆಯ ಹಿರಿಯ ಮಗ ಸಂತೋಷ ಕಬ್ಜಾ ಕೊಟ್ಟಿರುವ ಮನೆಯನ್ನು ಬಿಡಿಸಿಕೊಳ್ಳುವಂತೆ ತನ್ನ ತಾಯಿಗೆ ಹೇಳುತ್ತಿದ್ದ. ಆಗ ತಾಯಿ, ಸದ್ಯ ಹಣವಿಲ್ಲ, ಹಣ ಕೂಡಿದ ಮೇಲೆ ಮನೆ ಬಿಡಿಸಿಕೊಳ್ಳುವುದಾಗಿ ಹೇಳಿದ್ದರಂತೆ.
ತನ್ನ ತಾಯಿ ಇಷ್ಟೆಲ್ಲ ಹೇಳಿದರೂ, ಸುಮ್ಮನಾಗದ ಸಂತೋಷ ದೀಪಾವಳಿ ಅಮಾವಾಸ್ಯೆ (ನ.೪) ರಂದು ಕಬ್ಜಾದಾರನ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನಂತೆ. ಆಗ ಕಬ್ಜಾದಾರನ ಹೆಂಡತಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವುದಾಗಿ ಹೇಳಿದ್ದು, ಸಂತೋಷನೂ ದೂರು ಕೊಡುವುದಾಗಿ ಹೇಳಿ ಗದಗ ಶಹರ ಪೊಲೀಸ್ ಠಾಣೆಗೆ ಹೋಗಿದ್ದಾನೆ.
ಆಗ ಪೊಲೀಸರು, ನಿಂದೇ ತಪ್ಪು, ಪದೇ ಪದೇ ತಾಯಿ ಜೊತೆಗೆ ಜಗಳ ಮಾಡ್ತೀಯಾ, ಕಬ್ಜಾದಾರರ ಜೊತೆಗೂ ಕಿರಿಕಿರಿ ಮಾಡ್ತಿಯಾ ಅಂತ ವರಸೆ ತೋರಿಸಿದ್ದಾರೆ. ಆಗ ಆತ ಠಾಣೆಯ ಆವರಣದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಗಾಬರಿ ಬಿದ್ದ ಪೊಲೀಸರು ಜಿಮ್ಸ್ ಗೆ ಕರೆದೊಯ್ದಿದ್ದಾರೆ. ಆಗ ವೈದ್ಯರು, ಮೃತಪಟ್ಟ ಬಗ್ಗೆ ಖಚಿತ ಪಡಿಸಿದ್ದಾರೆ. ಆಗ ಪೊಲೀಸರ ಜಂಛಾಬಲವೇ ಉಡುಗಿಹೋಗಿದೆ.
ಠಾಣೆಗೆ ಬಂದದ್ದು ಎಷ್ಟು ಹೊತ್ತಿಗೆ?:
ಕೆಲವು ಮೂಲಗಳು ಹೇಳುವ ಅಂದು ಸಂಜೆ 6.40 ಗಂಟೆಗೆ ಸಂತೋಷ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಆದರೆ, ದೂರು ಕೊಡುವುದಾಗಿ ಸಂತೋಷ ಶಹರ ಪೊಲೀಸ್ ಠಾಣೆಗೆ ಬಂದಿದ್ದು ಎಷ್ಟೊತ್ತಿಗೆ? 6.40ಕ್ಕೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ ಎಂದಾದರೆ, ಸಂತೋಷನಿಗೆ ಎದೆನೋವು ಕಾಣಿಸಿಕೊಂಡಿದ್ದು ಯಾವಾಗ? ಎಂಬ ಬಗ್ಗೆ ಮಾಹಿತಿ ಇಲ್ಲ.
ಅನುಮಾನ ಹುಟ್ಟಿಸಿದ ಎಸ್‌ಪಿ ಹೇಳಿಕೆ
ಕೆಲ ಪೊಲೀಸ್ ಮೂಲಗಳ ಪ್ರಕಾರ ಸಂತೋಷ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾನೆ ಎಂಬುದಾಗಿದೆ. ಆದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರ ಹೇಳಿಕೆಯು ಕೆಲವು ಅನುಮಾನ ಹುಟ್ಟಿಸಿದೆ. ಅವರು ಹೇಳಿದ್ದು ಹೀಗಿದೆ.
‘ಮೃತ ಸಂತೋಷನು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಮೂರ್ಛೆರೋಗ(ಪಿಟ್ಸ್) ಬಂದಿದೆ. ಅದನ್ನು ಲಾಕಪ್ ಡೆತ್ ಅನ್ನೋದಿಲ್ಲ. ಕಾನೂನು ಪ್ರಕಾರ ಪೊಲೀಸರ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದರೆ ಅದು ಲಾಕಪ್ ಡೆತ್ ಅಂತಾರೆ. ಪಿಟ್ಸ್ ಆಗಿದೆ ನಮ್ಮವರೇ(ಪೊಲೀಸರು) ಆಸ್ಪತ್ರೆಗೆ ಸೇರಿಸಿದ್ದರು. ಕಾರ್ಡಿಯಾಕ್ ಆರೆಸ್ಟ್ ಆಗಿದೆ ಎಂದು ‘ವಿಜಯಸಾಕ್ಷಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ಸಂತೋಷನ ಸಾವಿನ ಸುತ್ತ ಅನುಮಾನದ ಹುತ್ತ ಕಾಡುತ್ತಿದೆ.
ಮೂರು ತಿಂಗಳ ಹೆಣ್ಣು ಮಗು ಹಾಗೂ ಪತ್ನಿ ಕೊಲೆಗೈದು ಪತಿ ಮಹಾಶಯನೊಬ್ಬ ನೇಣಿಗೆ ಶರಣಾದ ಮನ ಕಲುಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದ ತೋಟದ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.
ಮೂರು ತಿಂಗಳದ ಕಂದಮ್ಮ ರೂಪಶ್ರೀ, ಪತ್ನಿ ಸುಧಾ, ಪತಿ ಮಲ್ಲಪ್ಪ ಗಡಾದ ಮೃತಪಟ್ಟವರು.
ನಾಗೇಂದ್ರಗಡ ಗ್ರಾಮದ ಹೊರವಲಯದಲ್ಲಿರುವ ಜಮೀನನಲ್ಲಿ ಇರುವ ಮನೆಯಲ್ಲಿ ವಾಸವಾಗಿದ್ದರು.
ಮೃತ ಮಲ್ಲಪ್ಪ ಗಡಾದ ಮನೆಯ ಹಾಲ್ ನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಲ್ಲಪ್ಪನ ಪತ್ನಿ ಸುಧಾ ಹಾಗೂ ಮಗಳು ರೂಪಶ್ರೀ ಮತ್ತೊಂದು ರೂಮಿನಲ್ಲಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ರೋಣ ಸಿಪಿಐ ಸುಧೀರಕುಮಾರ್ ಬೆಂಕಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಘಟನೆಗೆ ಕುಟುಂಬ ಕಲಹ ಕಾರಣವಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಟೈರ್ ಸ್ಫೋಟಗೊಂಡ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ವೊಂದು ರಸ್ತೆಯ ಬದಿಗೆ ವಾಲಿದ್ದು, ಓರ್ವ ವಿದ್ಯಾರ್ಥಿನಿ ಸೇರಿ ಹಲವರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ಹಿರೇಕೊಪ್ಪ ಗ್ರಾಮದ ಬಳಿ ನಡೆದಿದೆ.
ಗದಗದಿಂದ ಅರಹುಣಸಿ ಗ್ರಾಮಕ್ಕೆ ತೆರುಳುತ್ತಿದ್ದ ಬಸ್ ಹಿರೇಕೊಪ್ಪ ಗ್ರಾಮದ ಬಳಿ ಹೋಗುತ್ತಿದ್ದಂತೆ ದಿಢೀರನೇ ಟೈರ್ ಸ್ಪೋಟಗೊಂಡಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿದರೂ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಾಲಕ ಬಸ್ ನಿಲುಗಡೆ ಮಾಡಲು ರಭಸವಾಗಿ ಹಾಕಿದ ಬ್ರೇಕ್‌ನಿಂದ ಬಸ್‌ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಗದಗನ ಜಿಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಪಟ್ಟಣದ ಸುತ್ತಮುತ್ತಲಿನ ಕ್ರಷರ್‌ಗಳಲ್ಲಿ ನಿಯಮ ಮೀರಿ ಬ್ಲಾಸ್ಟಿಂಗ್ ಮಾಡಲಾಗುತ್ತಿದ್ದು, ಇದರಿಂದ ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದರು.
ಮಂಗಳವಾರ ಶಿರಹಟ್ಟಿ ಪೊಲೀಸ್ ಠಾಣೆಗೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ ಪರಿಶೀಲಿಸಿದ ಬಳಿಕ ನಡೆದ ಸಾರ್ವಜನಿಕರ ಸಭೆಯಲ್ಲಿ ಅವರು ದೂರಿದರು.
ಪಟ್ಟಣದ ವಿದ್ಯಾನಗರ ಭಾಗದಲ್ಲಿ ಬರುವ ಕ್ರಷರ್‌ಗಳಲ್ಲಿ ಅಕ್ರಮವಾಗಿ ಬ್ಲಾಸ್ಟಿಂಗ್ ಮಾಡುತ್ತಿದ್ದಾರೆ. ಈ ವೇಳೆ ಭಾರೀ ಪ್ರಮಾಣದಲ್ಲಿ ಸದ್ದು ಆಗುತ್ತಿದ್ದು, ಕ್ರಮೇಣ ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ಇದರಿಂದ ನಿತ್ಯವೂ ಕಿರಿಕಿರಿಯುಂಟಾಗುತ್ತಿದೆ. ಅಲ್ಲದೇ, ಕ್ರಷರ್‌ಗಳಿಂದ ಮಿತಿಮೀರಿ ಜಲ್ಲಿ, ಎಂಸ್ಯಾಂಡ್ ಸಾಗಿಸುವ ಟಿಪ್ಪರ್‌ಗಳ ಹಾವಳಿ ಹೇಳತೀರದಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರು ‘ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸ್ಥಳೀಯ ಮಟ್ಟದ ಮುಖಂಡರು ಇನ್ನು ಮುಂದೆ ವಿವಿಧ ಅಪರಾಧ ಪ್ರಕರಣಗಳ ರಾಜಿ ಸಂಧಾನ ನಡೆಸುವುದು ಬೇಡ. ಪ್ರತಿ ಪ್ರಕರಣಗಳನ್ನು ಸ್ವತಃ ನಾವೇ ಇತ್ಯರ್ಥ ಪಡಿಸುತ್ತೇವೆ. ಇದಕ್ಕೆ ತಾವೆಲ್ಲರೂ ಸಹಕರಿಸಬೇಕು. ಪ್ರಕರಣಗಳಲ್ಲಿ ರಾಜಿ ಸಂಧಾನ ಮಾಡುವುದರಿಂದ ಅಪರಾಧಗಳಲ್ಲಿ ಭಾಗಿಯಾದವರು ಕೆಲವೇ ದಿನಗಳಲ್ಲಿ ತಮ್ಮ ಹಳೆಯ ಪ್ರವೃತ್ತಿಯನ್ನೇ ಮುಂದುವರಿಸುತ್ತಾರೆ. ಅಲ್ಲದೇ, ರಾಜಿ ಸಂಧಾನ ಮಾಡಿಸಿದವರ ಮಾತನ್ನೂ ಕೇಳುವುದಿಲ್ಲ.
ಹೀಗಾಗಿ ಇಂತಹ ಪ್ರಕ್ರಿಯೆಯನ್ನು ಕೈಬಿಡಬೇಕು. ಪ್ರತಿ ಹಳ್ಳಿಗೂ ಸಹ ಪೊಲೀಸ್ ಸಿಬ್ಬಂದಿ ಗಸ್ತು ಮಾಡಬೇಕು. ಗ್ರಾಮಗಳಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಸಂಪರ್ಕಿಸಬೇಕು ಎಂದು ಎಸ್‌ಪಿ ಶಿವಪ್ರಕಾಶ್ ದೇವರಾಜು ಹೇಳಿದರು. ಈ ಸಂದರ್ಭದಲ್ಲಿ ಡಿ ಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ವಿಕಾಸ ಲಮಾಣಿ, ಪಿಎಸ್ಐ ನವೀನ ಜಕ್ಕಲಿ ಇದ್ದರು.
ಸಭೆಯಲ್ಲಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಫಕ್ಕೀರೇಶ ರಟ್ಟಿಹಳ್ಳಿ, ಮಾಬುಸಾಬ್ ಲಕ್ಷ್ಮೇಶ್ವರ, ಯಲ್ಲಪ್ಪಗೌಡ ಪಾಟೀಲ್, ಚಾಂದಸಾಬ ಮುಳಗುಂದ, ಬಸವಣ್ಣೆಪ್ಪ ತುಳಿ, ಬಸವರಾಜ ವಡವಿ, ಮುತ್ತುರಾಜ್ ಬಾವಿಮನಿ, ಯಲ್ಲಪ್ಪ ಇಂಗಳಗಿ, ಪರಶುರಾಮ ಡೊಂಕಬಳ್ಳಿ ಉಪಸ್ಥಿತರಿದ್ದರು.
ಇಲ್ಲಿನ ಪುರಸಭೆ ಮುಂಭಾಗದಲ್ಲಿರುವ ವೀರಕೇಸರಿ ಬಾಬಾಸಾಹೇಬ್ ಪುತ್ಥಳಿ ಬಳಿ ಕನ್ನಡಪರ ಹೋರಾಟಗಾರರ ಒಕ್ಕೂಟದಿಂದ 66ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸೋಮವಾರ 30 ಅಡಿ ಉದ್ದ 9 ಅಡಿ ಅಗಲ ವಿಸ್ತೀರ್ಣದ ಬೃಹತ್ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಧ್ವಜಾರೋಹಣವನ್ನು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಚನ್ನು ನಂದಿ, ಕರ್ನಾಟಕ ನವ ನಿರ್ಮಾಣ ಸೇನೆ ತಾಲ್ಲೂಕ ಅಧ್ಯಕ್ಷ ಮುತ್ತು ರಾಯರಡ್ಡಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಬಸವರಾಜ ತಾವರೆ. ಸ್ವಾಭಿಮಾನಿ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಚಿಂತಾಲ, ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಪಾರುಖ್ ಮಜಿದಮನಿ, ಪುರಸಭೆ ಮುಖ್ಯಾಧಿಕಾರಿ ಅಮಿತ್ ತೇರದಾಳ, ವಿ.ಎಚ್.ಕೆಂಚನಗೌಡ್ರ, ಮಾರುತಿ ಅಬ್ಬಿಗೇರಿ, ಬಸವರಾಜ ನೇಸರಗಿ, ಮಂಜುನಾಥ್ ಮೆಣಸಗಿ, ಸಂಗಮೇಶ ಬ್ಯಾಳಿ, ರಾಜು ಹೂಲಿ, ಸಿದ್ದಪ್ಪ ಆಯಟ್ಟಿ ಉಪಸ್ಥಿತರಿದ್ದರು.
ಕನ್ನಡವೆಂಬುದು ಈ ರಾಜ್ಯದ ಮಾತೃಭಾಷೆಯಾಗಿದ್ದು, ಅನ್ಯ ಭಾಷಿಗರ ಹಾವಳಿಯಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆಯಾ ಎಂಬ ಆತಂಕ ಕಾಡುತ್ತಿದೆ. ಹೀಗಾಗಿ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಬಳಸುವ ಮೂಲಕ ಉಳಿಸಬೇಕಾಗಿರುವ ಅನಿವಾರ್ಯತೆ ನಮ್ಮೆದುರಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರೆಡ್ಡಿ ಬೇಸರ ವ್ಯಕ್ತಪಡಿಸಿದರು.
66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಐತಿಹ್ಯವಿದೆ. ಅದರದ್ದೇ ಆದ ಶಕ್ತಿ ಸಾಮರ್ಥ್ಯವಿದೆ. ಕುವೆಂಪು ಸೇರಿದಂತೆ ಅನೇಕ ಕವಿಗಳು, ಸಾಹಿತಿಗಳು ಕನ್ನಡ ನಾಡು ನುಡಿಯ ಬಗ್ಗೆ ಹಾಡಿಹೊಗಳಿರುವ ನಿದರ್ಶನಗಳಿದ್ದು, ಕನ್ನಡದ ಕಂಪನ್ನು ಪಸರಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
ದೇಶದಲ್ಲಿ 1951 ನವೆಂಬರ್ 1 ರಂದು ಭಾಷಾವಾರು ಪ್ರಾಂತಗಳ ರಚನೆಯಾಯಿತು. ಆಗ ಕನ್ನಡ ಭಾಷೆ ಮಾತನಾಡುವ ಜನರು ಇರುವ ಭಾಗವನ್ನು ಸೇರಿಸಿ ಮೈಸೂರು ರಾಜ್ಯ ನಿರ್ಮಾಣವಾಯಿತು. ಇದಕ್ಕಾಗಿ ಅನೇಕ ಕನ್ನಡದ ಅಭಿಮಾನಿಗಳು ಹೋರಾಟ ಮಾಡಿದ್ದರು.
ಈ ಹಿಂದೆ ಆಡಳಿತದ ಅನುಕೂಲಕ್ಕಾಗಿ ಹೈದ್ರಾಬಾದ್, ಮುಂಬೈ ಕರ್ನಾಟಕವೆಂದು ಹರಿದು ಹಂಚಿಹೋಗಿತ್ತು. ಆಲೂರ ವೆಂಕಟರಾಯರು ಸೇರಿದತೆ ಅನೇಕರ ಹೋರಾಟದ ಫಲವಾಗಿ ಮೈಸೂರು ರಾಜ್ಯವೆಂಬುವುದು ಕರ್ನಾಟಕವೆಂದು ಮರುನಾಮಕರಣವಾಯಿತು ಎಂದು ಕನ್ನಡ ಏಕೀಕರಣದ ಹೋರಾಟವನ್ನು ಮುತ್ತು ರಾಯರಡ್ಡಿ ಸ್ಮರಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ನಡೆಯಿತು. ಈ ವೇಳೆ ಶಾಲಾ ಮಕ್ಕಳು, ಗ್ರಾಮಸ್ಥರು ಭಾಗವಹಿಸಿದ್ದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾದ ಕಳ್ಳತನ, ಮೋಸ, ವಂಚನೆ ಪ್ರಕರಣಗಳಲ್ಲಿ 74 ಪ್ರಕರಣಗಳನ್ನು ಬೇಧಿಸಿ 80 ಜನರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ ಒಂದು ಕೆ.ಜಿ. 38 ಗ್ರಾಂ ಚಿನ್ನಾಭರಣಗಳು, ಸುಮಾರು ಐದು ಕೆ.ಜಿ.ಯಷ್ಟು ಬೆಳ್ಳಿಯ ಆಭರಣಗಳು ಸೇರಿ ಒಟ್ಟು 64,55,099 ಸಾವಿರ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದು, ಮಾಲೀಕರಿಗೆ ಸ್ವತ್ತುಗಳನ್ನು ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ತಿಳಿಸಿದರು.
ಸೋಮವಾರ ಪೊಲೀಸ್ ಭವನದಲ್ಲಿ ನಡೆದ ಕಳುವು ಪ್ರಕರಣಗಳಲ್ಲಿ ಪತ್ತೆಯಾದ ಸ್ವತ್ತುಗಳನ್ನು ಮಾಲೀಕರಿಗೆ ಹಿಂದುರಿಗಿಸುವ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2020 ನವೆಂಬರ್ 21 ರಿಂದ 2021 ಅಕ್ಟೋಬರ್ 25ರವರೆಗೆ ಒಟ್ಟು 81,28,590 ರೂ. ಕಳ್ಳತನವಾಗಿದ್ದು, 64,55,099 ರೂ. ಮೊತ್ತವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಸಂಬಂಧಿಸಿದ ಮಾಲೀಕರಿಗೆ ಸ್ವತ್ತುಗಳನ್ನು ಹಸ್ತಾಂತರಿಸಲಾಗಿದೆ ಎಂದರು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಸುಮಾರು 33,65,685 ರೂ ಮೌಲ್ಯದ 1ಕೆ.ಜಿ.38 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿದ್ದು, ಈವರೆಗೆ ಒಟ್ಟು 29,78,795 ರೂ. ಮೌಲ್ಯದ 887 ಗ್ರಾಂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 2,65,854 ರೂ. ಮೌಲ್ಯದ 5 ಕೆ.ಜಿ. 274 ಗ್ರಾಂ ಬೆಳ್ಳಿಯ ಆಭರಣಗಳು ಕಳ್ಳತನವಾಗಿದ್ದು, ಅದರಲ್ಲಿ 2,63,664 ರೂ ಮೌಲ್ಯದ 5 ಕೆ.ಜಿ.253 ಗ್ರಾಂ ಬೆಳ್ಳಿಯ ಒಡವೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದರು.
ಅದರಂತೆ, ಒಟ್ಟು 18,16,000 ರೂ. ಮೌಲ್ಯದ 35 ವಾಹನಗಳು ಕಳ್ಳತನವಾಗಿದ್ದು, ಅದರಲ್ಲಿ ಒಟ್ಟು 16,16,೦೦೦ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಸಿಲೆಂಡರ್, ತಾಮ್ರದ ತಂತಿ, ಮೊಬೈಲ್, ಬ್ಯಾಟರಿ, ವೆಲ್ಡಿಂಗ್ ಹಾಗೂ ಇನ್ನಿತರ ವಸ್ತುಗಳು ಸೇರಿ ಒಟ್ಟು 5,49,125 ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ಅದರಲ್ಲಿ ಒಟ್ಟು 3,89,950 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕಳ್ಳತನವಾಗಿದ್ದು ಒಟ್ಟು 8,79,200 ನಗದು ಹಣದಲ್ಲಿ 2,27,200 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಅ.25 ರವರೆಗೆ ಮೂರು ಮೋಸ, ವಂಚನೆ ಪ್ರಕರಣ ದಾಖಲಾಗಿದ್ದು, ಒಂಬತ್ತು ಜನರನ್ನು ಬಂಧಿಸಿ ಒಟ್ಟು 9,79,500 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಅವರು, ಪೊಲೀಸರ ಮೇಲೆ ಸಾರ್ವಜನಿಕರು ಇಟ್ಟಿರುವ ಭರವಸೆಯನ್ನು ಉತ್ತೇಜಿಸಲು ‘ಪ್ರಾಪರ್ಟಿ ಪರೇಡ್ ನಡೆಸಲಾಗುತ್ತದೆ ಎಂದರು. ಇದೇ ವೇಳೆ ನಿರ್ಗಮಿತ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ನರಗುಂದ ಡಿಎಸ್‌ಪಿ ಶಂಕರ್ ರಾಗಿ, ವಿವಿಧ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳಾದ ರವಿ ಕಪ್ಪತ್ತನವರ, ಪಿ.ವಿ.ಸಾಲಿಮಠ, ಬಿ.ಜಿ.ಸುಬ್ಬಾಪುರಮಠ, ಸುಧೀರ್‌ಕುಮಾರ್ ಬೆಂಕಿ, ವಿಕಾಸ್ ಲಮಾಣಿ, ಸುನೀಲ್ ಸವದಿ, ಪಿಎಸ್‌ಐಗಳಾದ ಭಾರತಿ ತಳವಾರ, ಜಿ.ಟಿ.ಜಕ್ಕಲಿ, ರಾಜೇಶ್ ಬಟಕುರ್ಕಿ, ರೇಣುಕಾ ಮುಂಡೆವಾಡಗಿ, ಶರಣಮ್ಮ ಕವಲೂರ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಮುಂದಿನ ಚುನಾವಣೆಗೆ ಬೊಮ್ಮಾಯಿಯವರ ನೇತೃತ್ವದಲ್ಲೇ ಬಿಜೆಪಿ ಅಣಿಯಾಗುತ್ತೆ. ಬಿಜೆಪಿಯಿಂದ ಅವರೇ ಮುಂದಿನ ಸಿಎಂ ಅಭ್ಯರ್ಥಿ. ಅದರಲ್ಲಿ ತಪ್ಪೇನಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬೊಮ್ಮಾಯಿಯವರು ಅತ್ಯುತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯನ್ನು ಅವರ ನೇತೃತ್ವದಲ್ಲೇ ಎದುರಿಸಿದ್ದು ಸಿಂದಗಿಯಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ. ಹಾನಗಲ್‌ನಲ್ಲೂ ಬಿಜೆಪಿ ಅಭ್ಯರ್ಥಿ ಪರ ಉತ್ತಮ ಅಭಿಪ್ರಾಯ ಇದೆ ಎಂದರು.
ಬೆಲೆ ಏರಿಕೆ ಕುರಿತು ಡಿಕೆಶಿ ಸೇರಿದಂತೆ ಪ್ರತಿಪಕ್ಷಗಳ ಮುಖಂಡರ ಆರೋಪ ಕುರಿತಾಗಿ ಮಾತನಾಡಿದ ಅವರು ಡಿಕೆಶಿ ಮತ್ತು ಪ್ರತಿಪಕ್ಷಗಳ ಮುಖಂಡರು ಮೊದಲಿನಿಂದಲೂ ಬಿಜೆಪಿ ಬಗ್ಗೆ ಭ್ರಮೆ ಹೊಂದಿದ್ದಾರೆ. ರಾಜ್ಯದ ಮತದಾರರು ಬುದ್ಧಿವಂತರಿದ್ದಾರೆ. ಅವರೇ ತಕ್ಕ ಉತ್ತರ ನೀಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.
ಪೆಟ್ರೋಲ್, ಡೀಸೆಲ್ ಸೇರಿಸಂತೆ ಇತರ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದನ್ನು ಒಪ್ಪಿಕೊಳ್ಳುತ್ತೇವೆ. ಜನಸಾಮಾನ್ಯರಿಗೆ ತೊಂದರೆ ಆಗುತ್ತಿರುವುದಕ್ಕೆ ವಿಷಾದಿಸುತ್ತೇವೆ. ಆದರೆ ಇದನ್ನು ನಮ್ಮ ಸರಕಾರ ಜನರಿಗೆ ಹೊರೆ ಆಗಲಿ ಎಂದು ಮಾಡುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆ ಅನುಸರಿಸಿ ಇಂಥ ತೀರ್ಮಾನಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಸ್ಥಿತಿ ಬಂದೊದಗಿದೆ. ಶೀಘ್ರವೇ ಎಲ್ಲ ಸರಿ ಹೋಗುವ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು ರಾಜ್ಯದೆಲ್ಲೆಡೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದ ಅವರು, ಪುನೀತ್ ಸಾವು ರಾಜ್ಯಕ್ಕೆ ದಿಗ್ಭ್ರಮೆ ಮೂಡಿಸಿದೆ. ಆದರೂ ಆಚರಣೆಗಳನ್ನು ಮುಂದುವರಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇದೆ. ಕೋವಿಡ್ ಕಾರಣದಿಂದ ಸರಳವಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಪುನೀತ್ ನೋಡಿಕೊಳ್ಳುತ್ತಿದ್ದ ಅನಾಥಾಶ್ರಮಗಳ ದತ್ತು ತೆಗೆದುಕೊಳ್ಳುವ ಕುರಿತು ಪರಿಪೂರ್ಣ ಮಾಹಿತಿ ಪಡೆದು ನಂತರ ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಓ ಬಿ.ಫೌಜಿಯಾ ತರುನ್ನೀಮ್ ಇತರರು ಇದ್ದರು.