ಚಿಕ್ಕಪ್ಪನ ಪುತ್ರನೇ ಯುವತಿ ಮೇಲೆ ಅತ್ಯಾಚಾರ ಎಸಗಿ ಜೀವಬೆದರಿಕೆ ಹಾಕಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಕ್ಟೋಬರ್ 4ರಂದು ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯ ನಿವಾಸಿಯಾದ ಸಂತ್ರಸ್ತೆಯನ್ನು ಚಿಕ್ಕಪ್ಪನ ಪುತ್ರ ಸೀತಾಫಲ ಹಣ್ಣು ತರಲು ಹೋಗೋಣ ಎಂದು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ಬುಧವಾರ ಗೋಗಿ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಸೆಕ್ಷನ್ 376 ಮತ್ತು 506ರಡಿ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿಕೊಂಡಿದ್ದಾರೆ.
ಬೆಳ್ಳಂಬೆಳಿಗ್ಗೆ ಐಟಿ ಅಧಿಕಾರಿಗಳು ಬಿಎಸ್ ವೈ ಆಪ್ತನ ಮನೆ ಸೇರಿ ನಾಲ್ಕು ಕಡೆ ಸ್ಥಳಗಳ ಮೇಲೆ ರೇಡ್ ನಡೆಸುವ ಮೂಲಕ ಮಾಜಿ ಸಿಎಂ ಬಿಎಸ್ ವೈಗೆ ಶಾಕ್ ನೀಡಿದ್ದಾರೆ.
ಬಿಎಸ್ ವೈ ಆಪ್ತ ಸೇರಿದಂತೆ ಬೆಂಗಳೂರಿನ ಆಪ್ತರು, ಉದ್ಯಮಿಗಳು ಸೇರಿ 50 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಕರ್ನಾಟಕ, ಗೋವಾ ವಿಭಾಗದ 300 ಐಟಿ ಅಧಿಕಾರಿಗಳು ಬೆಂಗಳೂರಿನ 50 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಉಮೇಶ್ ಅವರ ಅವರ ಭಾಷ್ಯಂ ಸರ್ಕಲ್ ನಲ್ಲಿರುವ ಮನೆ, ಕಚೇರಿ ಸೇರಿ ಅವರಿಗೆ ಸೇರಿದ್ದ 4 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಟ್ರೀಕ್ಸ್ ಕಂಪನಿಯ ಹೇರ್ ಕಲರ್ ನಕಲು ಮಾಡಿ ಗ್ರಾಹಕರಿಗೆ ಮಾರಾಟ ಮಾಡಿ ವಂಚಿಸುತ್ತಿರುವ ಕುರಿತು ಗದಗನ ಬ್ಯೂಟಿ ಪಾರ್ಲರ್ ಮಾಲೀಕರೊಬ್ಬರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಗದಗ ನಗರದ ಬ್ಯಾಂಕ್ ರಸ್ತೆಯ ವರ್ಧಮಾನ್ ಮಾರ್ಕೆಟ್ ದಲ್ಲಿರುವ ಮಹಾಲಕ್ಷ್ಮಿ ಬ್ಯೂಟಿ ಸೆಂಟರ್ ಮಾಲೀಕ ನಗರದ ಶಹಾಪುರ ಪೇಟೆಯ ಭರತಕುಮಾರ ಕರ್ನಾಜಿ ಲೋಹಾರ ವಿರುದ್ಧ ಹೈಜೆನಿಕ್ ರೀಸರ್ಚ್ ಇನ್‌ಸ್ಟಿಟ್ಯೂಟ್ ದೂರು ದಾಖಲಿಸಿದೆ.
ನಗರ ಠಾಣೆಯ ಪೊಲೀಸರು, ಬ್ಯೂಟಿ ಪಾರ್ಲರ್ ನಲ್ಲಿ ಇದ್ದ 250 ಎಂಎಲ್ ನ 2 ಸ್ಟ್ರೀಕ್ಸ್ ಪ್ರೊಫೆಷನಲ್ ಹೇರ್ ಕಲರ್ ಪಡೆದು ಪರಿಶೀಲಿಸಿದ್ದು, ಹೈಜೆನಿಕ್ ರಿಸರ್ಚ್ ಇನ್‌ಸ್ಟಿಟ್ಯೂಟ್ ತಯಾರಿಸುವ ಸ್ಟ್ರೀಕ್ಸ್ ಕಂಪನಿಯ ಲೋಗೋ ಬಳಸಿ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಖಚಿತಪಟ್ಟಿದೆ.
ನಗರಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆಯೊಂದು ಕುಸಿದು ಐದು ವರ್ಷದ ಬಾಲಕ ಸೇರಿ ಏಳು ಜನ ಮೃತಪಟ್ಟ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಇಂದು ಸಂಜೆ ಜರುಗಿದೆ.
ಭೀಮಪ್ಪ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಎರಡು ದಿನಗಳಿಂದ ಆಗಾಗ ಸುರಿಯುತ್ತಿರುವ ಭಾರಿ ಮಳೆಗೆ ಮಣ್ಣಿನ ಗೋಡೆ ನೆನದು ಏಕಾಏಕಿ ಮನೆ ನೆಲಸಮಗೊಂಡಿದೆ. ಮನೆಯಲ್ಲಿದ್ದ ಎಂಟು ಜನ ಕುಟುಂಬ ಸದಸ್ಯರ ಪೈಕಿ ಅವಶೇಷಗಳಡಿ ಸಿಲುಕಿ ಐದು ವರ್ಷದ ಮಗು ಸೇರಿ ಐವರು ಜೀವಂತ ಸಮಾಧಿಯಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಸ್ಥಳೀಯರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅದರಲ್ಲಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಎಸ್ ಡಿಆರ್ ಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಂಬುಲೆನ್ಸ್ ಜೊತೆಗೆ ಸ್ಥಳಕ್ಕೆ ಧಾವಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ
ಪಿಟ್ ಇಂಡಿಯಾ ಅಭಿಯಾನದಡಿ ನಡೆದ ಕ್ರಿಕೆಟ್ ಪಂದ್ಯಾವಳಿ ವೇಳೆ ಸಿಕ್ಸರ್ ವಿಷಯಕ್ಕೆ ಪಂಚಾಯತ್ ರಾಜ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿದ ಘಟನೆ ರೋಣ ಪಟ್ಟಣದಲ್ಲಿ ನಡೆದಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಪಿಟ್ ಇಂಡಿಯಾ ಅಭಿಯಾನ, ಸ್ವಚ್ಛ ಭಾರತ ಅಭಿಯಾನ, ಅಜಾದಿ ಕಾ ಅಮೃತ ಮಹೋತ್ಸವ ಹಾಗೂ ಸ್ವೀಪ್ ವತಿಯಿಂದ ಕ್ರೀಡಾಕೂಟ ನಡೆಯುತ್ತಿದೆ.
ಮಂಗಳವಾರ ಆರೋಗ್ಯ ಇಲಾಖೆ ಹಾಗೂ ತಾಲೂಕು ಪಂಚಾಯತಿ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಆರೋಗ್ಯ ಇಲಾಖೆ ತಂಡದ ಆಟಗಾರ ಸಿಕ್ಸ್ ಹೊಡೆದಾಗ, ತಾಲೂಕು ಪಂಚಾಯತಿ ತಂಡದ ಆಟಗಾರ ಕ್ಯಾಚ್ ಹಿಡಿದರು. ಆದರೆ, ಬ್ಯಾಟಿಂಗ್ ಮಾಡುವ ತಂಡದ ಆಟಗಾರರು ಬೌಂಡರಿ ಗೇರೆ ಟಚ್ ಮಾಡಿ ಕ್ಯಾಚ್ ಹಿಡಿದಿದೆ ಎಂದು ವಾದಿಸಿದಾಗ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಈ ವೇಳೆ ಮಧ್ಯೆ ಪ್ರವೇಶಿಸಿದ ತಾಪಂ ಇಒ ಸಂತೋಷ ಪಾಟೀಲ ಪಂದ್ಯಾವಳಿ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಎರಡೂ ತಂಡದ ಆಟಗಾರರು ವಾಗ್ವಾದ ನಿಲ್ಲಿಸಿ ವಾಪಸ್ ತೆರಳಿ ಆಟ ಪ್ರಾರಂಭಿಸಿದರು.
ವೈದ್ಯನಿಗೆ ಕಪಾಳಮೋಕ್ಷ
ತಾಲೂಕು ಪಂಚಾಯತಿ ಸಿಬ್ಬಂದಿಯೊಬ್ಬರು ಆರೋಗ್ಯ ಇಲಾಖೆಯ ವೈದ್ಯರೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದರ ಪರಿಣಾಮವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಆಕ್ರೋಶಗೊಂಡರು. ಇದೇ ಸಂದರ್ಭದಲ್ಲಿ ಸಹನೆ ಕಳೆದುಕೊಂಡ ಸಿಬ್ಬಂದಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈಯ್ದಾಡಿಕೊಂಡಿದ್ದರಿಂದ ಕೆಲಕಾಲ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಪರಸ್ಪರರು ಮತ್ತೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಇದೀಗ ಈ ಪ್ರಕರಣ ಜಿಲ್ಲೆಯ ನೌಕರರಲ್ಲಿ ಚರ್ಚೆಯ ವಿಷಯವಾಗಿದ್ದು, ಮುಂದೆ ಏನಾಗುತ್ತೋ ಎಂಬುದೀಗ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಜನರಿಗೆ ಬುದ್ದಿ ಹೇಳಬೇಕಾದ ಅಧಿಕಾರಿ ವರ್ಗ, ಕೈ ಕೈ ಮಿಲಾಯಿಸುವು ಹಂತಕ್ಕೆ ಹೋಗಿದ್ದು ವಿಪರ್ಯಾಸ.
ಉತ್ತರ ಕರ್ನಾಟಕದ ಭಜಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಾಮಾನ್ಯ. ಆದರೆ, ಈ ಭಜಿಯೇ ತಾಯಿ ಮತ್ತು ಮಗನ ಜೀವಕ್ಕೆ ಕುತ್ತು ತಂದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಹುದಲಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಹುದಲಿ ಗ್ರಾಮದ ಪಾರ್ವತಿ ಮಾರುತಿ ಮಳಗಲಿ (58) ಮತ್ತು ಮಗ ಸೋಮನಿಂಗ ಮಾರುತಿ ಮಳಗಲಿ (28) ಮೃತ ದುರ್ದೈವಿಗಳು.
ಏನಾಯಿತು: ಹೊಲಕ್ಕೆ ಹೋಗಿದ್ದ ತಾಯಿ ಮತ್ತು ಮಗ ಕೆಲಸ ಮುಗಿಸಿ ಸಂಜೆ ಮನೆಗೆ ಮರಳಿ ಭಜಿ ಮಾಡಿ ಇಬ್ಬರೂ ಸೇರಿ ತಿಂದಿದ್ದಾರೆ. ಕೆಲ ಸಮಯದ ನಂತರ ಇಬ್ಬರಿಗೂ ವಾಂತಿ ಭೇದಿ ಶುರುವಾಗಿದೆ.
ಸ್ಥಳೀಯ ವೈದ್ಯರ ಬಳಿಗೆ ತೋರಿಸಿದ್ದು, ವೈದ್ಯರು ಫುಡ್ ಫಾಯಿಸನ್ ಔಷಧಿ ಕೊಟ್ಟಿದ್ದಾರೆ. ಔಷಧಿ ತೆಗೆದುಕೊಂಡರೂ ವಾಂತಿ ಭೇದಿ ಕಡಿಮೆಯಾಗದೇ ತೀವ್ರ ಅಸ್ವಸ್ಥಗೊಂಡಿದ್ದರಿಂದ ಇಬ್ಬರನ್ನೂ ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ, ದಾರಿ ಮಧ್ಯದಲ್ಲಿಯೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರೇ ವಾಸಿಸುತ್ತಿದ್ದರು. ಫುಡ್ ಫಾಯಿಸನ್ ನಿಂದ ಸಾವು ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ ಸತ್ಯ ಬಯಲಾಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಮಾರಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2021-22 ಕ್ಕೆ ಸಂಬಂಧಿಸಿದಂತೆ, ಗದಗ-ಬೆಟಗೇರಿ ನಗರಸಭೆ ಮತದಾರ ಪಟ್ಟಿ ತಯಾರಿಸುವ ಕುರಿತಂತೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರ ಪಟ್ಟಿಗಳನ್ನು ಸಿದ್ದಪಡಿಸುವ ಕುರಿತು ಆಯೋಗವು ನೀಡಿರುವ ವೇಳಾಪಟ್ಟಿಯಂತೆ ಅಕ್ಟೋಬರ್ 4 ರಂದು ವಿಧಾನಸಭಾ ಕ್ಷೇತ್ರಗಳ ಮತದಾರ ಪಟ್ಟಿಗಳನ್ನು ಅಳವಡಿಸಿಕೊಂಡು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಸದರಿ ಮತದಾರ ಪಟ್ಟಿಗಳು ಮತದಾರರ ಪರಿಶೀಲನೆಗಾಗಿ ಗದಗ-ಬೆಟಗೇರಿ ನಗರಸಭೆ, ತಹಶೀಲ್ದಾರ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ವೆಬ್ ಸೈಟ್ www.gadag.nic.in ನಲ್ಲಿ ಪರಿಶೀಲನೆಗೆ ಲಭ್ಯವಿರುತ್ತವೆ.
ಸದರಿ ನಗರ ಸ್ಥಳೀಯ ಸಂಸ್ಥೆಗಳ ಮತದಾರರ ಹೆಸರು ತಾವು ವಾಸವಿರುವ ವಾರ್ಡಿನ ವ್ಯಾಪ್ತಿಯಲ್ಲಿ ಇರದೆ ಬೇರೆ ವಾರ್ಡಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಹಾಗೂ ಗ್ರಾಮೀಣ ಮತದಾರರ ಹೆಸರನ್ನು ಅಥವಾ ವಿಧಾನಸಭಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಹೆಸರುಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗಾಗಿ ತಯಾರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಆಕ್ಷೇಪಣೆಯನ್ನು ಸಂಬಂಧಿಸಿದ ಗದಗ ತಾಲೂಕಿನ ಗೊತ್ತುಪಡಿಸಿದ ಅಧಿಕಾರಿಯಾದ ತಹಶೀಲ್ದಾರ, ಗದಗ ಇವರಿಗೆ ಅಕ್ಟೋಬರ್ 11 ರೊಳಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣೆ ವಿಭಾಗದ ಪ್ರಕಟಣೆ ತಿಳಿಸಿದೆ.
ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಟ್ರಜರಿಯಲ್ಲಿಟ್ಟಿದ್ದ ಚಿನ್ನ, ಬೆಳ್ಳಿ ಆಭರಣ ಹಾಗೂ ನಗದು ಕಳ್ಳವು ಮಾಡಿದ ಘಟನೆ ಗದಗ ಕೆಎಚ್ ಬಿ ಕಾಲೋನಿಯಲ್ಲಿ ನಡೆದಿದೆ.
ಬ್ಯಾಂಕ್ ಉದ್ಯೋಗಿ ಸುರೇಂದ್ರ ಗುಡಿ ಅವರು ಬೇರೆ ಊರಿಗೆ ಹೋಗಿದ್ದಾಗ, ಮನೆಯಲ್ಲಿ ಯಾರು ಇರದ ಸುಳಿವು ಅರಿತ ಕಳ್ಳರು ಮನೆಗೆ ಕನ್ನ ಹಾಕಿದ್ದು, 6 ಗ್ರಾಂ ಚಿನ್ನ, 610 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 25 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.