Home Blog Page 3358

10 ಲಕ್ಷ ರೂ. ಕಳ್ಳತನ ಪ್ರಕರಣ; ಲಕ್ಷ್ಮೇಶ್ವರ ಪೊಲೀಸರ ಬಲೆಗೆ ಬಿದ್ದ ಅಂತರ್ ಜಿಲ್ಲಾ ಖದೀಮರು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:

ಲಕ್ಷ್ಮೇಶ್ವರ ಠಾಣೆಯ ಸಿಪಿಐ ವಿಕಾಸ ಲಮಾಣಿ ನೇತೃತ್ವದ ಪೊಲೀಸ್ ತಂಡ ಶನಿವಾರ ಅಂತರ್ ಜಿಲ್ಲಾ ಕಳ್ಳರ ಬಂಧನ ಮಾಡಿ ಬಂಧಿತರಿಂದ 5 ಲಕ್ಷ ನಗದು, ಬೈಕ್ ವಶಪಡಿಸಿಕೊಂಡಿದ್ದಾರೆ.

ಕಳೆದ ಏ.8ರಂದು ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಪಟ್ಟಣದ ಗಣ್ಯ ವ್ಯಾಪಾರಸ್ಥರ ಕಾರ್ಖೂನರೊಬ್ಬರು 10 ಲಕ್ಷ ರೂ.ಗಳ ಹಣವನ್ನು ತೆಗೆದುಕೊಂಡು(ಡ್ರಾ) ಬೈಕ್‌ನ ಸೈಡ್ ಬ್ಯಾಗ್‌ನಲ್ಲಿರಿಸಿಕೊಂಡು ಹೋಗುವಾಗ ೩ ಜನ ಕಳ್ಳರ ತಂಡ ಹಣವನ್ನು ಕ್ಷಣಾರ್ಧದಲ್ಲಿ ಎಗರಿಸಿಕೊಂಡು ಪರಾರಿಯಾಗಿದ್ದರು.

ಘಟನೆಯಿಂದ ವ್ಯಾಪಾರಸ್ಥರು, ಸಾರ್ವಜನಿಕರು ಭೀತಿಗೊಳಗಾಗಿದ್ದರು. ಪ್ರಕರಣದ ಜಾಡು ಹಿಡಿದು ಹೊರಟ ಸಿಪಿಐ ವಿಕಾಸ ಲಮಾಣಿ ನೇತೃತ್ವದ 5 ಜನ ಪೊಲೀಸರ ತಂಡ 8 ದಿನಗಳ ಕಾಲ ಗದಗ, ಹುಬ್ಬಳ್ಳಿ, ಬೆಳಗಾವಿ, ಭದ್ರಾವತಿ, ಬಾಗೇಪಲ್ಲಿ ಸೇರಿ ಅನೇಕ ಕಡೆ ಸುತ್ತಿದ್ದಾರೆ.

ಜಿಲ್ಲೆಯ ಎಸ್‌ಪಿ ಶಿವಪ್ರಕಾಶ್ ದೇವರಾಜು ಮತ್ತು ಡಿಎಸ್‌ಪಿ ಶಿವಾನಂದ ಪವಾಡಶೆಟ್ಟೆ ಅವರ ಮಾರ್ಗದರ್ಶನದಲ್ಲಿ ಕೊನೆಗೂ ಕಳ್ಳರ ಪತ್ತೇ ಮಾಡಿ ಅವರಿಂದ 5 ಲಕ್ಷ ರೂ.ನಗದು, ಬೈಕ್ ವಶಪಡಿಸಿಕೊಳ್ಳುವಲ್ಲಿ ಯಶ್ವಸಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಂಜಿ ಕೃಷ್ಣಪ್ಪ ಮತ್ತು ಈತನ ಮಗ (ಬಾಲಾಪರಾಧಿ) ಬಂಧಿತರಾಗಿದ್ದಾರೆ. ಇನ್ನೋರ್ವ ಆರೋಪಿತ ಭದ್ರಾವತಿಯ ಪಿ.ಆಂಜನೇಯಲು ನಾಪತ್ತೆಯಾಗಿದ್ದಾನೆ.
ಸಿಪಿಐ ವಿಕಾಸ ಲಮಾಣಿ, ಪಿಎಸ್‌ಐ ಪ್ರಕಾಶ ಡಿ, ಅವರೊಂದಿಗೆ ಸಿಬ್ಬಂದಿಗಳಾದ ಪಿ.ಎಂ.ರಗ್ರೇಜಿ, ಎಂ.ಜಿ.ವಡ್ಡಟ್ಟಿ, ಎಚ್.ಐ.ಕಲ್ಲಣ್ಣವರ, ಡಿ.ಎಸ್.ನದಾಫ್ ಅವರು ಕಾರ್ಯನಿರ್ವಹಿಸಿದ್ದು, ಪೊಲೀಸರ ಕಾರ್ಯಕ್ಕೆ ಪಟ್ಟಣದ ವ್ಯಾಪಾರಸ್ಥರು, ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ನೀರು ಪಾಲಾಗಿದ್ದ ಬಾಲಕರ ಮೃತದೇಹ‌ ಪತ್ತೆ; ಕ್ವಾರಿ ಮಾಲೀಕರ ವಿರುದ್ಧ ಗ್ರಾಮಸ್ಥರ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ:

ಅಕ್ರಮ ಗಣಿಗಾರಿಕೆಯಿಂದ ಕೆರೆಯಂತೆ ನಿರ್ಮಾಣವಾಗಿರುವ ಗರ್ಸಿನ ಕಣಿವೆಯಲ್ಲಿ ನಿಂತಿದ್ದ ನೀರಿನಲ್ಲಿ ಶುಕ್ರವಾರ ಸಂಜೆ ಈಜಲು ಹೋಗಿ ನೀರು ಪಾಲಾಗಿದ್ದ ಇಬ್ಬರು ಬಾಲಕರ ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ನಿರಂತರ ಶೋಧ ಕಾರ್ಯಾಚರಣೆ ನಡೆಸಿ ಶನಿವಾರ ಹೊರತೆಗೆದಿದ್ದಾರೆ.

ಗದಗ ತಾಲ್ಲೂಕಿನ ಚಿಕ್ಕಹಂದಿಗೋಳ ಗ್ರಾಮದ ಹೊರವಲಯದಲ್ಲಿರುವ ಗರ್ಸಿನ ಕಣಿವೆಯಲ್ಲಿ ( ಕ್ವಾರಿ) ಶುಕ್ರವಾರ ಶಾಗೋಟಿ ಗ್ರಾಮದ ಬಸವರಾಜ್ ರೋಣದ (17), ಈರಪ್ಪ ಜೋಡಿಗೇರ (17) ಎಂಬ ಇಬ್ಬರು ಬಾಲಕರು ಈಜಲು ಹೋಗಿ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಬಾಲಕರ ಪತ್ತೆಗಾಗಿ
ಅಣ್ಣಿಗೇರಿ, ಗದಗ ಅಗ್ನಿಶಾಮಕ ದಳದ ಸಿಬ್ಬಂದಿ, ಚಿಕ್ಕಹಂದಿಗೋಳ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಹಾಗೂ ಪೊಲೀಸರು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ್ದರು. ಬೆಳಕಿನ ಸಮಸ್ಯೆಯಿಂದಾಗಿ ಶುಕ್ರವಾರ ರಾತ್ರಿ ಶೋಧ ಕಾರ್ಯ ಸ್ಥಗಿತಗೊಳಿಸಿದ್ದರು. ಶನಿವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆಸಿ ಮೃತದೇಹ‌ ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ.

ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸಿದ ಕ್ವಾರಿ ಮಾಲೀಕರ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಈಜಲು ಹೋದ ಇಬ್ಬರು ಬಾಲಕರು ನೀರು ಪಾಲು; ಕುಟುಂಬಸ್ಥರ ಆಕ್ರಂದನ

ವಿಜಯಸಾಕ್ಷಿ ಸುದ್ದಿ, ಗದಗ:

ಅಕ್ರಮ ಗಣಿಗಾರಿಕೆಯಿಂದ ಕೆರೆಯಂತೆ ನಿರ್ಮಾಣವಾಗಿರುವ ಗರ್ಸಿನ ಕಣಿವೆಯಲ್ಲಿ ನಿಂತಿದ್ದ ನೀರಿನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಶುಕ್ರವಾರ ನಡೆದಿದೆ.

ಗದಗ ತಾಲ್ಲೂಕಿನ ಚಿಕ್ಕಹಂದಿಗೋಳ
ಗ್ರಾಮದ ಹೊರವಲಯದಲ್ಲಿರುವ ಗರ್ಸಿನ ಕಣಿವೆಯಲ್ಲಿ ಈ ಘಟನೆ ನಡೆದಿದೆ. ಶಾಗೋಟಿ ಗ್ರಾಮದ ರಾಜು ರೋಣದ (17), ಈರಪ್ಪ (17) ಎಂಬ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ.

ಕೆರೆಯಂತಿರುವ ಗರ್ಸಿನ ಕಣಿವೆಯಲ್ಲಿ ಮುಳಗಿರುವ ಬಾಲಕರಿಗಾಗಿ ಅಣ್ಣಿಗೇರಿ, ಹುಬ್ಬಳ್ಳಿ ಅಗ್ನಿಶಾಮಕ ದಳದ ಸಿಬ್ಬಂದಿ, ಚಿಕ್ಕಹಂದಿಗೋಳ ಗ್ರಾಮ ಪಂಚಾಯತಿ ಸದಸ್ಯರು, ಸಿಬ್ಬಂದಿಗಳು ಹಾಗೂ ಪೊಲೀಸರು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇನ್ನು ಬಾಲಕರು ನೀರು ಪಾಲಾಗಿರುವ ಕಣಿವೆಯ ಪಕ್ಕದಲ್ಲಿ ಬಾಲಕರ ಬಟ್ಟೆಗಳು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮನೆಗೆ ಬಿದ್ದ ಸಿಡಿಲು; ಮಹಿಳೆ ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ:

ಗದಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುರುವಾರ ಗುಡುಗು ಸಹಿತ ಮಳೆ ಸುರಿಯಿತು.

ಮುಂಡರಗಿ ತಾಲ್ಲೂಕಿನ ಡಂಬಳ ಹೋಬಳಿಯ ಜಂತ್ಲಿ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆಯಿತು. ಲತಾ ಮಲ್ಲಪ್ಪ ಕಲಕೇರಿ (27) ಮೃತ ದುರ್ದೈವಿಯಾಗಿದ್ದಾಳೆ.

ಮನೆಯ ಮೇಲಿದ್ದ ಡಿಟಿಎಚ್( ಡಿಶ್‌ಗೆ) ಸಿಡಿಲು ಬಡಿದಿದ್ದು, ಇದರ ಪರಿಣಾಮ ವೈಯರ್ ತುಂಡರಿಸಿದೆ. ಅಲ್ಲದೆ, ಸಿಡಿಲಿನ ಶಾಖಕ್ಕೆ ಮನೆಯಲ್ಲಿದ್ದ ಲತಾ ಕಲಕೇರಿ ಮೃತಪಟ್ಟಿದ್ದಾಳೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಎಂ.ಎ.ನದಾಫ ಹಾಗೂ ಗ್ರಾಮಲೆಕ್ಕಾಧಿಕಾರಿ ಸತ್ಯಪ್ಪ ಗೋಡಿ ಪರಿಶೀಲನೆ ನಡೆಸಿದರು. ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಲಾರಿಗೆ ಕಾರು ಡಿಕ್ಕಿ; ನಗರಸಭೆ ಉಪಾಧ್ಯಕ್ಷೆ ಪಾರು

ವಿಜಯಸಾಕ್ಷಿ ಸುದ್ದಿ, ಗದಗ:

ವೇಗವಾಗಿ ಬರುತ್ತಿದ್ದ ಕಾರು ಮುಂದೆ ಹೊರಟಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನಗರಸಭೆ ಉಪಾಧ್ಯಕ್ಷೆ, ಹಾಗೂ ಕಾರು ಚಾಲನೆ ಮಾಡುತ್ತಿದ್ದ ಪುತ್ರ ಗಾಯಗೊಂಡ ಘಟನೆ ತಾಲ್ಲೂಕಿನ ಹುಲಕೋಟಿ ಗ್ರಾಮದ ರೂರಲ್ ಇಂಜನಿಯರಿಂಗ್ ಕಾಲೇಜ್ ಬಳಿ ನಡೆದಿದೆ.

ಹುಬ್ಬಳ್ಳಿಯಿಂದ ಗದಗ ಕಡೆ ಬರುತ್ತಿದ್ದಾಗ ಈ ದುರ್ಘಟನೆ ಜರುಗಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಏರಬ್ಯಾಗ್ ಒಪನ್ ಆದ ಪರಿಣಾಮ ಯಾವುದೇ ಗಂಭೀರ ಗಾಯವಾಗಿಲ್ಲ ಎನ್ನಲಾಗಿದೆ.

ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ತಲೆಗೆ ಸ್ವಲ್ಪ ಪ್ರಮಾಣದ ಪೆಟ್ಟು ಬಿದ್ದಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪುತ್ರ ದತ್ತು ಬಾಕಳೆ ಕಾರು ಚಾಲನೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಸಚಿವ ಪಾಟೀಲರ ಮನೆ ಮುಂದೆ ದಿಂಗಾಲೇಶ್ವರ ಶ್ರೀಗಳ ಧರಣಿ; ಶ್ರೀಗಳು ನರಗುಂದ ಪ್ರವೇಶಿಸದಂತೆ ತಡೆಯಲು ಪೊಲೀಸರ ನಿಯೋಜನೆ

ವಿಜಯಸಾಕ್ಷಿ ಸುದ್ದಿ, ನರಗುಂದ:

ಬಾಲೆಹೊಸೂರು ಮತ್ತು ಶಿರಹಟ್ಟಿಯ ಜ.ಫ.ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರ ಮಧ್ಯದ ‌ಸಮರ‌ ಮುಂದುವರೆದಿದೆ. ಇದರ ಭಾಗವಾಗಿ ದಿಂಗಾಲೇಶ್ವರ ಶ್ರೀಗಳು ನರಗುಂದ ಪಟ್ಟಣದಲ್ಲಿರುವ ಸಚಿವ ಸಿ.ಸಿ.ಪಾಟೀಲರ ಮನೆ ಮುಂದೆ ಇಂದು(ಏ.27) ಧರಣಿ ಕೂರುತ್ತಿದ್ದಾರೆ. ಆದರೆ, ಶ್ರೀಗಳನ್ನು ನರಗುಂದ ಪ್ರವೇಶಿಸದಂತೆ ತಡೆಯಲು ಪೊಲೀಸರು ಕಣ್ಗಾವಲಿರಿಸಿದ್ದಾರೆ‌.

ಹೌದು, ಧರಣಿ ಕೂರಲು ನರಗುಂದಕ್ಕೆ ಹೋಗುವ ಶಿರಹಟ್ಟಿಯ ದಿಂಗಾಲೇಶ್ವರ ಶ್ರೀಗಳನ್ನ ತೆಡೆಯಲು ಗದಗದಿಂದ ನರಗುಂದಕ್ಕೆ ಸಂಪರ್ಕ ಕಲ್ಪಿಸುವ ಹಲವು ರಸ್ತೆಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಶ್ರೀಗಳನ್ನು ತಡೆಯಲು ಡಿವೈಎಸ್ ಪಿ ವೈ.ಎಸ್.ಏಗನಗೌಡರ್, ಸಿಪಿಐ ಎಂ.ಜಿ.ಮಠಪತಿ ನೇತೃತ್ವದಲ್ಲಿ ನಾಕಾಬಂದಿ ಹಾಕಲಾಗಿದೆ.

ನರಗುಂದ ಹೊರವಲಯದ ಕಲಕೇರಿ ಸೇರಿದಂತೆ ಪಟ್ಟಣದ ಮೂರು ಭಾಗದಲ್ಲಿ ನಾಕಾಬಂದಿ ಹಾಕಿರುವ ಪೊಲೀಸರು ಕುರ್ಲಗೆರಿ, ಅಳಗವಾಡಿ ರಸ್ತೆಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಮೂಲಕ ದಿಂಗಾಲೇಶ್ವರ ಶ್ರೀಗಳು ನರಗುಂದ ಪ್ರವೇಶಿಸಿದಂತೆ ನೋಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ‌. ಕೆಎಸ್ ಆರ್ ಪಿ ತುಕಡಿ ಜೊತೆ 30ಕ್ಕೂ ಹೆಚ್ಚು ಪೊಲೀಸರರನ್ನು ನಿಯೋಜಿಸಲಾಗಿದೆ. ಈಗಾಗಲೇ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.

ಫೆ‌.21ನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗದುಗಿನ ತೋಂಟದಾರ್ಯ ಜಾತ್ರಾ ಮಹೋತ್ಸವದಂದು ಘೋಷಿಸಿದ್ದರು. ಇದಕ್ಕೆ ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ದಿಂಗಾಲೇಶ್ವರ ಹೇಳಿಕೆ,‌ ನಡೆ‌ ಖಂಡಿಸಿ ದಿಂಗಾಲೇಶ್ವರ ಶ್ರೀಗಳ ಪೂರ್ವಾಶ್ರಮದ ಬಗ್ಗೆ ಗೊತ್ತು‌ ಎಂದು ಸಚಿವ ಸಿ.ಸಿ.ಪಾಟೀಲರು ಹೇಳಿದ್ದರು. ಸಚಿವರ ಹೇಳಿಕೆಗೆ ಕೆಂಡಾಮಂಡಲರಾಗಿದ್ದ ದಿಂಗಾಲೇಶ್ವರ ಶ್ರೀಗಳು ಸಾಬೀತು ಪಡಿಸುವಂತೆ ಒತ್ತಾಯಿಸಿ
ಸಚಿವರ ವಿರುದ್ಧ ಧರಣಿ ಕೂರಲು ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಧಾರಾಕಾರ ಮಳೆ, ಧರೆಗುರುಳಿದ ಮರ; ಕೂದಲೆಳೆ ಅಂತರದಲ್ಲಿ ಪಾರಾದ ಬಸ್‌ನಲ್ಲಿದ್ದ ಪ್ರಯಾಣಿಕರು

ವಿಜಯಸಾಕ್ಷಿ ಸುದ್ದಿ, ಗದಗ:

ಜಿಲ್ಲೆಯ ಹಲವೆಡೆ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಗದಗ-ಬೆಟಗೇರಿ ನಗರದಲ್ಲಿ ಸುರಿದ ಗಾಳಿ, ಗುಡುಗು ಸಹಿತ ಭಾರೀ ಮಳೆಗೆ ಕೆಲವೆಡೆ ಮರಗಳು ಧರೆಗುರುಳಿದವು.

ಅವಳಿ ನಗರದ ಪಾಲಾ ಬದಾಮಿ ರಸ್ತೆಯ ಗಾಂಧಿ ಸರ್ಕಲ್ ಬಳಿ ಗಾಳಿ, ಮಳೆಯ ರಭಸಕ್ಕೆ ಬೃಹತ್ ಗಾತ್ರದ ಮರ ನೆಲಕ್ಕುರುಳಿತು. ಆದರೆ, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಬಸ್ ಮತ್ತು ಬಸ್‌ನಲ್ಲಿದ್ದ ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾದ ಘಟನೆ ನಡೆಯಿತು. ಕಣ್ಣುಮುಂದೆಯೇ ಮರ ಬೀಳುವುದನ್ನು ಕಂಡ ಮರದ ಪಕ್ಕದಲ್ಲಿಯೇ ನಿಂತಿದ್ದ ಜನರ ಎದೆ ಒಂದು ಕ್ಷಣ ಝಲ್ಲೆನಿಸಿತು.

ಅದರಂತೆ, ಮಹಾತ್ಮಾ ಗಾಂಧಿ ವೃತ್ತ ಸೇರಿದಂತೆ ಅವಳಿ ನಗರದ ವಿವಿಧೆಡೆ ಅಳವಡಿಸಲಾಗಿದ್ದ ವಿವಿಧ ಕಾರ್ಯಕ್ರಮಗಳ ಪ್ಲೆಕ್ಸ್, ಬ್ಯಾನರ್‌ಗಳು ಹಾರಿಹೋದವು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಗುಡುಗು ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.

ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸ; ರೌಡಿಶೀಟರ್ ಗ್ಯಾಂಗ್ ಥಳಿತಕ್ಕೆ ಯುವಕ ಸಾವು

ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಬಡ್ಡಿ ವ್ಯವಹಾರಸ್ಥರ ಅಟ್ಟಹಾಸಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ.

ಹೌದು, ಬಡ್ಡಿ ದಂಧೆಕೋರರರಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಮೃತ್ಯುಂಜಯ ಭರಮಗೌಡರ್ (26) ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಜಿಮ್ಸ್ ನಲ್ಲಿ ಸಾವನ್ನಪ್ಪಿದ್ದಾನೆ.

ಕಳೆದ ಮಾರ್ಚ್ 23ರಂದು‌ ಬಡ್ಡಿ ಹಣಕ್ಕಾಗಿ ಯುವಕನನ್ನು ರೌಡಿಶೀಟರ್ ಉಮೇಶ್ ಸುಂಕದ ಹಾಗೂ ಉದಯ ಸುಂಕದ ಮತ್ತು ಅವರ ಗ್ಯಾಂಗ್ ಮೃತ್ಯುಂಜಯ ಭರಮಗೌಡರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು.
ಮೂರು ದಿನ‌ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದರು.

ಮೃತ್ಯುಂಜಯ ಭರಮಗೌಡರ್ ಮಾಡಿದ್ದ 2 ಲಕ್ಷ ರೂ. ಸಾಲಕ್ಕೆ ಒಂದು ಲಕ್ಷ ರೂ. ಬಡ್ಡಿ ಹಣ ಕೊಡುವಂತೆ ದಂಧೆಕೋರರು ಒತ್ತಾಯಿಸಿದ್ದರು.
ಹಣ ವಸೂಲಿ‌ ಮಾಡುವ ಸಲುವಾಗಿ ಬಡ್ಡಿ ಜಮೀನಿಗೆ ಕರೆದ್ಯೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದರು. ಮಾಧ್ಯಮದಲ್ಲಿ ಸುದ್ದಿ ಪ್ರಸಾರದ ಬಳಿಕ ಪೊಲೀಸರು ಉಮೇಶ್ ಸುಂಕದ ಸೇರಿದಂತೆ ಮೂವರನ್ನು ಬಂಧಿಸಿದ್ದರು.

ಬಡ್ಡಿ ದಂಧೆಕೋರರಿಂದ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಮೃತ್ಯುಂಜಯ ಭರಮಗೌಡರ್ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 29 ದಿನಗಳ ಬಳಿಕ ಕೊನೆಯುಸಿರೆಳೆದಿದ್ದಾನೆ‌.

ಗದಗನ ಬೆಟಗೇರಿ ಭಾಗದಲ್ಲಿ ವ್ಯಾಪಕ ಬಡ್ಡಿ ವ್ಯವಹಾರದ ಆರೋಪ ಕೇಳಿ‌ ಬರುತ್ತಿದ್ದು, ಬಡ್ಡಿ ದಂಧೆಕೋರರಿಗೆ ಪೊಲೀಸರು ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಇನ್ನಷ್ಟು ಜೀವ ಬಲಿಯಾಗುವುದರಲ್ಲಿ ಅನುಮಾನವಿಲ್ಲ ಎಂದು ಅವಳಿ ನಗರದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ‌.

ಪ್ರತ್ಯೇಕ ಪ್ರಕರಣ; ಜಿಲ್ಲೆಯಲ್ಲಿ ಸಿಡಿಲಿಗೆ ಮೂವರು ಸ್ಥಳದಲ್ಲೇ ಸಾವು

ವಿಜಯಸಾಕ್ಷಿ ಸುದ್ದಿ, ಮುಂಡರಗಿ/ಶಿರಹಟ್ಟಿ:

ಶನಿವಾರ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಸುರಿದ ಮಳೆಗೆ ಕುರಿಗಾಯಿ, ಮಾವಿನ ಮರಗಳ ಕಾವಲುಗಾರ ಹಾಗೂ ದನಗಾಯಿ ಅಸುನೀಗಿರುವ ಎರಡು ಪತ್ಯೇಕ ಘಟನೆಗಳು ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ನಡೆದಿವೆ.

ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಹನುಮಂತಪ್ಪ ಸಿದ್ದಪ್ಪ ಮನ್ನಾಪುರ (೨೨) ಎಂಬ ಕುರಿಗಾಹಿ ಸಿಡಿಲು ಬಡಿದು ಸಾವಿಗೀಡಾಗಿದ್ದಾನೆ. ಕುರಿಗಳನ್ನು ರಕ್ಷಿಸಲು ಹೋಗಿ ಹನುಮಂತಪ್ಪ ಮನ್ನಾಪುರ ಜೀವ ಕಳೆದುಕೊಂಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಕಂದಾಯ ನಿರೀಕ್ಷಕ ಎಂ.ಎ.ನದಾಫ. ಉಪ ತಹಶಿಲ್ದಾರ ಸಿ‌.ಕೆ.ಬಳೂಟಗಿ. ಗ್ರಾಮಲೆಕ್ಕಾಧಿಕಾರಿ ಕು.ಸೌಮ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅದರಂತೆ, ಶಿರಹಟ್ಟಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಧ್ಯಾಹ್ನದಿಂದಲೂ ಮೋಡ ಕವಿದ ವಾತಾವರಣವಿತ್ತು, ಸಂಜೆ ಸುರಿದ ಗುಡುಗು ಸಹಿತ ಮಳೆಯಿಂದ ರಕ್ಷಿಸಿಕೊಳ್ಳಲು ಜಮೀನಿನಲ್ಲಿರುವ ಮಾವಿನ ಮರದ ಕೆಳಗೆ ದನ ಮೇಯಿಸಲು ತೆರಳಿದ್ದ ಶಿರಹಟ್ಟಿ ತಾಲೂಕಿನ ಹರಿಪುರ ಗ್ರಾಮದ ಮುರುಗೇಶ್ ಈಶ್ವರಪ್ಪ ಹೊಸಮನಿ(೪೪), ಮಾವಿನ ಮರ ಕಾಯುತ್ತಿದ್ದ ಖಾನಾಪುರ ಗ್ರಾಮದ ಬಾಬುಸಾಬ್ ಖಾದಿರಸಾಬ್ ದೊಡ್ಡಮನಿ(೫೫) ಎಂಬುವವರು ಸಿಡಿಲು ಬಡಿದು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನಾ ಸ್ಥಳಕ್ಕೆ ಶಿರಹಟ್ಟಿ ಸಿಪಿಐ ವಿಕಾಸ್ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ಷ್ಮೇಶ್ವರ ಸುತ್ತಮುತ್ತ ಆಲಿಕಲ್ಲು ಮಳೆ ಸುರಿದರೆ, ಗದಗ-ಬೆಟಗೇರಿ ಅವಳಿ ನಗರದಲ್ಲಿ ತುಂತುರು ಮಳೆಯಾಯಿತು. ಬಿಸಿಲಿನ ಬೇಗೆಯಿಂದ ಬಳಲಿದ್ದ ಭೂಮಿಗೆ ತಂಪೆರೆಯಿತು.

ರೌಡಿಶೀಟರ್ ಪುಂಡಾಟ, ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ, ಬೈಕ್ ಗೆ ಬೆಂಕಿ; ಬೆಟಗೇರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ವಿಜಯಸಾಕ್ಷಿ ಸುದ್ದಿ, ಗದಗ:

ಮಹಿಳೆಗೆ ಮೆಸೇಜ್ ಮಾಡುವಲ್ಲಿ ಉಂಟಾದ ವೈಷಮ್ಯದಿಂದಾಗಿ ವ್ಯಕ್ತಿವೊರ್ವನಿಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ಬೆಟಗೇರಿಯ ಮಂಜುನಾಥ ನಗರದಲ್ಲಿ ಶನಿವಾರ ನಡೆದಿದ್ದು, ಘಟನೆಯ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಗಜೇಂದ್ರಸಿಂಗ್ ಎಂಬ ವ್ಯಕ್ತಿಯೇ ಚಾಕು ಇರಿತಕ್ಕೊಳಗಾಗಿ ಸಾವನ್ನಪ್ಪಿರುವ ದುರ್ದೈವಿಯಾಗಿದ್ದು, ರೌಡಿಶೀಟರ್ ಆಗಿರುವ ಶಿವರಾಜ್ ಪೂಜಾರ ಎಂಬುವವನು ಚಾಕು ಇರಿದಿದ್ದಾನೆ. ಅಷ್ಟೇ ಅಲ್ಲದೆ ಬೈಕ್ ಗೆ ಬೆಂಕಿ ಹಚ್ಚಿದ್ದಾನೆ. ಮಹಿಳೆಗೆ ಮೆಸೇಜ್ ಮಾಡುವಲ್ಲಿ ಉಂಟಾದ ವೈಷಮ್ಯದಿಂದಾಗಿ ರೌಡಿ ಶೀಟರ್ ಶಿವರಾಜ್ ಹಾಗೂ ಆತನ ಹಿಂಬಾಲಕ, ಶುಕ್ರವಾರ ಸಂಜೆ ಗಜೇಂದ್ರಸಿಂಗ್ ಮನೆಗೆ ಬಂದು ದಮ್ಕಿ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಕುಟುಂಬಸ್ತರು ಆರೋಪಿಸಿದ್ದಾರೆ.

ರೌಡಿ ಶೀಟರ್ ಶಿವರಾಜ್ ಪೂಜಾರ್ ಗೆ ಗಜೆಂದ್ರಸಿಂಗ್ ಮತ್ತು ಆತನ ಸಹೋದರ ಸೇರಿ ಶುಕ್ರವಾರ ಹಲ್ಲೆ ಮಾಡಿದ್ದರ ಬಗ್ಗೆ ಕೇಳಲು ಹೋದಾಗ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಶಿವರಾಜ್ ಹಾಗೂ ‌ಗಜೇಂದ್ರಸಿಂಗ್ ಮಧ್ಯೆ ಪರಸ್ಪರ ಚಾಕು ಇರಿತವಾಗಿದೆ. ಆದರೆ ಶಿವರಾಜ್ ನ ಬಲವಾದ ಚಾಕು ಇರಿತದಿಂದ ಗಜೇಂದ್ರ ನಿಗೆ ತೀವ್ರ ರಕ್ತಸ್ರಾವ ಆಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಗಜೇಂದ್ರ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತ ಗಜೇಂದ್ರ ಸಿಂಗ್

ಇನ್ನು ಸ್ನೇಹಿತ ಗಜೇಂದ್ರಸಿಂಗ್‌ನಿಗೆ ಚಾಕು ಇರಿದಿದ್ದಕ್ಕೆ ಆಕ್ರೋಶಗೊಂಡ ಗಜೇಂದ್ರನ ಹಿಂಬಾಲಕರು ಶಿವರಾಜ್ ಪೂಜಾರ್ ಹಾಗೂ ಮಲ್ಲೇಶ್ ಕಣಕೆ ಎಂಬುವವರಿಗೆ ಚಾಕು ಹಾಕಿದ್ದಾರೆ. ಸದ್ಯ ಈ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಳಿಕ ಬೆಟಗೇರಿಯ ಮಂಜುನಾಥ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಬೀಡುಬಿಟ್ಟಿದ್ದಾರೆ.

ಪರಸ್ಪರ ಚಾಕು ಇರಿದಿರುವವರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರಿದ್ದಾರೆ. ಗಜೇಂದ್ರಸಿಂಗ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ, ಶಿವರಾಜ್ ಪೂಜಾರ್ ಕಳೆದ ನಗರಸಭೆ ಚುನಾವಣೆಯಲ್ಲಿ ೪ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಯ ಪತಿಯ ಸಹೋದರನಾಗಿದ್ದಾನೆ. ನಗರಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಗಜೇಂದ್ರಸಿಂಗ್ ಪ್ರಚಾರ ಮಾಡಿದ್ದನಂತೆ. ಇದು ಶಿವರಾಜ್ ಪೂಜಾರ್‌ನನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ದ್ವೇಷದಿಂದಲೇ ನಿನ್ನೆ(ಏ.೧೫) ಶಿವರಾಜ್ ಗಜೇಂದ್ರನನ್ನು ಥಳಿಸಿದ್ದನಂತೆ. ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಗೆ ಬಂದ ಗಜೇಂದ್ರನ ಮನೆಯವರು ಮೌಖಿಕವಾಗಿ ಪೊಲೀಸರಿಗೆ ತಿಳಿಸಿದ್ದರಂತೆ. ಆದರೆ, ಪೊಲೀಸರು ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಕ್ರಮ ಕೈಗೊಂಡಿದ್ದರೆ, ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ ಎಂದು ಗಜೇಂದ್ರನ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿ ತಿಳಿದ ಎಸ್ಪಿ ಶಿವಪ್ರಕಾಶ್ ದೇವರಾಜು ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.