Home Blog Page 3409

ಸಿಡಿಲು ಬಡಿದು ಅಪ್ಪ ಮಗ ಸೇರಿ ಮೂವರ ಸಾವು

0

ವಿಜಯಸಾಕ್ಷಿ ಸುದ್ದಿ, ವಿಜಯನಗರ:

ಸಿಡಿಲು ಬಡಿದು ಅಪ್ಪ ಮಗ ಸೇರಿ ಮೂವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.

ಮಲ್ಲಿಕಾರ್ಜುನ (34), ಮಗ ಮೈಲಾರಿ (11), ಉಪ್ಪಾರ ಹನುಮಂತಪ್ಪ (35) ಮೃತ ದುರ್ದೈವಿಗಳು. ಜತೆಗೆ 2 ಆಡುಗಳು ಸಾವನ್ನಪ್ಪಿವೆ.

ಹಗರಿಬೊಮ್ಮನಹಳ್ಳಿ ಕೆಳಬಾಗದಲ್ಲಿ ಆಡು ಮೇಯಿಸಲು ತೋಟಕ್ಕೆ ಹೋಗಿದ್ದ ವೇಳೆ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಲುವ ಹತಾಶೆಯಿಂದ ಆರೆಸ್ಸೆಸ್ ಟೀಕೆಗಿಳಿದ ಎಚ್ಡಿಕೆ, ಸಿದ್ದರಾಮಯ್ಯ

  • ಹಾನಗಲ್ ನಲ್ಲಿ ಸಿಎಂ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಹಾವೇರಿ:

ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನೂರಕ್ಕೆ ನೂರು ಶತಸಿದ್ಧ. ಕಾಂಗ್ರೆಸ್, ಜೆಡಿಎಸ್ ನಾಯಕರು ಹತಾಶೆಯಿಂದ ಆರೆಸ್ಸೆಸ್ ಟೀಕೆ ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆರೋಪಿಸಿದರು.

‌‌ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಹಾನಗಲ್ ದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಭಿವೃದ್ಧಿ ಅಂದ್ರೆ ಉದಾಸಿ, ಉದಾಸಿ ಅಂದ್ರೆ ಅಭಿವೃದ್ಧಿ. ಅವರು ಕ್ಷೇತ್ರದ ಜನಮನಲ್ಲಿದ್ದಾರೆ ಎಂದರು.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಡಿಕೆಶಿ ಟೀಕೆ, ನಿಂದನೆ ಮಾಡಲು ಸ್ಪರ್ಧೆಗೆ ಇಳಿದಿದ್ದಾರೆ. ಅವರಿಗೆ ಸಂಘ ಪರಿವಾರ ಬೈಯದಿದ್ದರೆ ತಿಂದ ಅನ್ನ ಜೀರ್ಣ ಆಗಲ್ಲ. ಅಲ್ಪಸಂಖ್ಯಾತರ ಜಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪನವರ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಲ್ಯಾಣ ಮಾಡಿದ್ದಾರೆ. ನಾವು ಯಾವುದೇ ಕೋಮಿನ ವಿರೋಧಿಗಳಲ್ಲ. ಆದರೆ, ಜೆಡಿಎಸ್, ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಮಿದುಳೂ ಇಲ್ಲ. ತತ್ವ ಸಿದ್ಧಾಂತವೂ ಇಲ್ಲ ಎಂದು ಮಾತಿನ ಚಾಟಿ ಬೀಸಿದರು.

ಡಿಕೆಶಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗಾಗಿ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಮೆಚ್ಚಿಸಲು ಆರ್ ಎಸ್ ಎಸ್ ಬೈಯುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಗೆ ಅಡ್ರೆಸ್ ಇಲ್ಲ ಎಂದು ಕುಟುಕಿದರು.

ಮಾಜಿ ಸಿಎಂ ಕುಮಾರಸ್ವಾಮಿಯವರೇ ಒಮ್ಮೆ ಆರೆಸ್ಸೆಸ್ ಶಾಖೆಗೆ ಬನ್ನಿ, ನಮಸ್ತೆ ಸದಾ ವತ್ಸಲೇ ಪ್ರಾರ್ಥನೆ ಮಾಡಿ, ಬೆಳಗ್ಗೆ ಭಾಗವಾ ಧ್ವಜಕ್ಕೆ ನಮಸ್ಕಾರ ಮಾಡಿ ಎಂದು ಸಲಹೆ ನೀಡಿದ ರೇಣುಕಾಚಾರ್ಯ, ಬ್ಲೂ ಫಿಲಂ ಅನುಭವ ನಿಮಗೆ ಇರಬೇಕು. ನಿಮ್ಮ ಪಕ್ಷದಲ್ಲಿರಬೇಕು.

ಹಿಡಿದು ಮರಿ ಮಕ್ಕಳ ವರೆಗೆ ಕುಟುಂಬ ರಾಜಕಾರಣ ಮಾಡುವುದೇ ರಾಜ್ಯಕ್ಕೆ ನೀವು ನೀಡಿದ ಕೊಡುಗೆಯಾಗಿದೆ ಎಂದರು. ಸಿದ್ದರಾಮಯ್ಯ ನವರು
ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಹಗುರವಾಗಿ ಮತನಾಡುತ್ತಿದ್ದಾರೆ. ಡಿಕೆಶಿ ಬ್ಲಾಕ್ ಮೇಲ್ ತಂತ್ರಗಾರಿಕೆ ಹೆಸರಾದವರು. ಬತ್ತಳಿಕೆಯಲ್ಲಿ ಬಾಣ ಇದ್ದರೆ ಈಗಲೇ ತೆಗೆಯರಿ. ನೀವು ಇನ್ನೂ 20 ವರ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೀರಿ ಎಂದು ಹರಿಹಾಯ್ದರು.

ಮಾಜಿ ಸಿಎಂ ಯಡಿಯೂರಪ್ಪ ಯಾವತ್ತಿದ್ದರೂ ರಾಜಾಹುಲಿನೇ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತೆ ಎಂದು ಈಗಲೂ ಜನ ಹೇಳುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.

ತುರ್ತು ಭೂ ಸ್ಪರ್ಶ ಮಾಡಿದ ಭೈರತಿ ಸುರೇಶ್ ಹೆಲಿಕಾಪ್ಟರ್

ವಿಜಯಸಾಕ್ಷಿ ಸುದ್ದಿ, ಹಾವೇರಿ:

ಹೆಲಿಕಾಪ್ಟರ್ ಮೂಲಕ ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಯಿಂದಾಗಿ ದಾರಿ ಮಧ್ಯಯೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆಯಿತು.

ಹಾನಗಲ್ ಉಪಚುನಾವಣೆ ಪ್ರಚಾರಕ್ಕಾಗಿ ಭೈರತಿ ಸುರೇಶ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿದ್ದರು. ಆದರೆ, ದಾರಿ ಮಧ್ಯೆ ಸಿಗ್ನಲ್ ಸಿಗದೇ ರೂಟ್ ಮ್ಯಾಪ್ ತೋರಿಸದಿದ್ದಾಗ ಫೈಲಟ್ ಶಿಗ್ಗಾವಿ ತಾಲೂಕು ಬಸವನಾಳ ಗ್ರಾಮದ ಆಟದ ಮೈದಾನದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದು, ಶಾಸಕ ಭೈರತಿ ಸುರೇಶ್ ಅಪಾಯದಿಂದ ಪಾರಾಗಿದ್ದಾರೆ.


ಶಾಲಾ ಮೈದಾನದಲ್ಲಿ ಹೆಲಿಕಾಪ್ಟರ್ ಇಳಿದಿದ್ದರಿಂದ ಗ್ರಾಮದ ಯುವಕರು, ಮಕ್ಕಳು ಆಶ್ಚರ್ಯಚಕಿತರಾಗಿ ಗುಂಪುಗುಂಪಾಗಿ ಆಗಮಿಸಿ ಕಾಪ್ಟರ್ ನೋಡಲು ಮುಬಿದ್ದರು.

ಗ್ರಾಮದ ಮುಖಂಡರು ಭೈರತಿ ಸುರೇಶ್ ಅವರಿಗೆ ಮಾಲಾರ್ಪಣೆ ಮಾಡಿ ಸ್ವಾಗತ ಕೋರಿದರು. ಶಾಲೆಯ ಆವರಣದಲ್ಲೇ ಕೆಲಕಾಲ ವಿಶ್ರಾಂತಿ ಪಡೆದ ಶಾಸಕ ಭೈರತಿ ಬಳಿಕ ಕಾಪ್ಟರ್ ಏರಿ ಹುಬ್ಬಳ್ಳಿಯತ್ತ ಪ್ರಯಾಣಿಸಿದರು.

ಹಾಡುಹಗಲೇ ಮೂವರಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ‌ ದಾಳಿ; ಬೆಚ್ಚಿದ ಜನ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ;

ಪಟ್ಟಣದಲ್ಲಿ ಯುವಕನೋರ್ವನ ಮೇಲೆ ಹಾಡುಹಗಲೇ ಕಾರಿನಲ್ಲಿ ಬಂದ ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ. ಈ ಘಟನೆ ಕಣ್ಣಾರೆ ಕಂಡ ಜನ ಬಿಚ್ಚಿ ಬಿದ್ದಿದ್ದು, ಕೆಲಕಾಲ ಆತಂಕದ ವಾತಾವರಣ ಮೂಡಿತ್ತು.

ಪಟ್ಟಣದ ಹುಲಗೇರಿಬಣದ ನೂರಅಹ್ಮದ ಇಮಾಮಸಾಬ ಮಕಾಂದಾರ(೩೬) ಹಲ್ಲೆಗೊಳಗಾದ ಯುವಕ. ನೂರಅಹ್ಮದ ಮಕಾಂದಾರ ಪಟ್ಟಣದ ಸರ್ಕಾರಿ ಪಶು ಆಸತ್ರೆ ಹತ್ತಿರದ ರಸ್ತೆಯಲ್ಲಿ ತನ್ನ ದ್ವಿಚಕ್ರವಾಹದಲ್ಲಿ ಹೊರಟ್ಟಿದ್ದ ವೇಳೆಯಲ್ಲಿ ಕಾರಿನಲ್ಲಿ ಬಂದ ಯುವಕರು ಏಕಾಏಕಿ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.

ಇದರಿಂದಾಗಿ ಆತ ಸ್ಥಳದಲ್ಲಿಯೇ ಕುಸಿದು ಬಿದ್ದು ಅರಪ್ರಜ್ಞಾವಸ್ಥೆ ತಲುಪಿದ್ದರಿಂದ ಅಲ್ಲಿಂದ ಅವನನ್ನು ಬಿಟ್ಟು ಪರಾರಿಯಾಗಿದ್ದಾರೆ. ಆತನ ಎರಡೂ ಕಾಲುಗಳಿಂದ ನೆತ್ತರು ಹರಿದು ತೀವೃ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕೂಡಲೇ ಆತನಿಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನೆಗೆ ಆಸ್ತಿ ವಿವಾದ ಮತ್ತು ಹಳೆಯ ವೈಷಮ್ಯವೇ ಕಾರಣವೆನ್ನಲಾಗುತ್ತಿದೆ. ಈ ಕುರಿತು ಮಾಹಿತಿ ಪಡೆದಿರುವ ಪಿಎಸ್‌ಐ ಪ್ರಕಾಶ ಡಿ. ಪ್ರಕರಣ ದಾಖಲಿಸಿಕೊಂಡು ಘಟನೆಗೆ ಕಾರಣರಾದವರ ಪತ್ತೆ ಕಾರ್ಯ ಕೈಗೊಂಡಿದ್ದಾರೆ.  

ಸ್ವಾಭಿಮಾನಿಗಳ ಸಾಕರಮೂರ್ತಿ ವೀರರಾಣಿ ಕಿತ್ತೂರು ಚನ್ನಮ್ಮ; ಮುತ್ತು ರಾಯರಡ್ಡಿ

ವಿಜಯಸಾಕ್ಷಿ ಸುದ್ದಿ, ಚಿಕ್ಕನರಗುಂದ:

ಕನ್ನಡನಾಡಿನ ವೀರ ಮಹಿಳೆಯರಲ್ಲಿ ಅಗ್ರ ಪಂಕ್ತಿಗೆ ಸೇರಿರುವ, ಸ್ವಾಭಿಮಾನಿಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚನ್ನಮ್ಮ ಎಂದು ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಹೇಳಿದರು.

ಕಿತ್ತೂರು ಚನ್ನಮ್ಮ ಜಯಂತಿ ಅಂಗವಾಗಿ ಸ್ಥಳೀಯ ಗ್ರಾಪಂ ಸಭಾಭವನದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸಿಡಿದೆದ್ದು ದಿಟ್ಟ ಹೋರಾಟ ನಡೆಸಿ ಬ್ರಿಟಿಷ್ ರ ವಿರುದ್ಧ ವಿಜಯ ಸಾಧಿಸಿದ ದಿನ ಇದು. ಹೋರಾಟದಲ್ಲಿ ತೋರಿದ ಧೈರ್ಯ, ಸಾಹಸ, ಕಿಚ್ಚು ಚೆನ್ನಮ್ಮನನ್ನು ಅಜರಾಮರವಾಗಿಸಿದೆ. ಬೇರೆಯವರ ಜೀವನಕ್ಕಾಗಿ ತ್ಯಾಗ ಮಾಡಿದವರ ಹೆಸರು ಯಾವುದೇ ಕಾರಣಕ್ಕೂ ಅಳಿಯಬಾರದು. ಸದಾ ಉಳಿಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಸದಸ್ಯ ಶರಣಬಸಪ್ಪ ಹಳೇಮನಿ ಮಾತನಾಡಿ, ದೇಶ ಸೇವೆಗಾಗಿ ಪ್ರಾಣಾರ್ಪಣೆ ಮಾಡಿದ್ದಕ್ಕಾಗಿ ವೀರರಾಣಿ ಚನ್ನಮ್ಮಳನ್ನು ಈಗಲೂ ಸ್ಮರಿಸುತ್ತೇವೆ. ತ್ಯಾಗ ಮಾಡಿದವರು ಪೂಜಿಸಲ್ಪಡುತ್ತಾರೆ ಎಂಬುದಕ್ಕೆ ಕಿತ್ತೂರು ರಾಣಿ ಚೆನ್ನಮ್ಮಳೇ ಸಾಕ್ಷಿ ಎಂದು ಹೇಳಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಮಲ್ಲವ್ವ ಮರಿಯಣ್ಣವರ, ಸದಸ್ಯರಾದ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಬಾಪುಗೌಡ ಹಿರೇಗೌಡ್ರ, ಶರಣಬಸಪ್ಪ ಹಳೇಮನಿ, ಲಕ್ಷ್ಮಣ ಕಂಬಳಿ, ಈರಮ್ಮ ಮುದಿಗೌಡ್ರ, ಶ್ರುತಿ ಬ್ಯಾಳಿ, ಶಂಕ್ರಮ್ಮ ಚಲವಾದಿ, ತಾಪಂ ಮಾಜಿ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಗ್ರಾಪಂ ಮಾಜಿ ಸದಸ್ಯ ಕೃಷ್ಣರಡ್ಡಿ ರಾಯರಡ್ಡಿ, ಶಂಕರಗೌಡ ಚನ್ನಪ್ಪಗೌಡ್ರ, ಪಿಡಿಓ ಶೈನಾಜ್ ಮುಜಾವರ್, ಹಿರಿಯರಾದ ಶಂಕ್ರಪ್ಪ ಯರಗಟ್ಟಿ, ಬಸನಗೌಡ ಮುದಿಗೌಡ್ರ, ಬಸವರಾಜ ಭೂಮಣ್ಣವರ, ಮುತ್ತು ತೊರಗಲ್, ಅಡಿವೆಪ್ಪ ಮರಿಯಣ್ಣವರ, ಶ್ರೀನಿವಾಸ ತಿಮ್ಮರಡ್ಡಿ, ಬಸವರಾಜ ಗುಂಜಲ್, ಮಂಜು ಕುಲಕರ್ಣಿ, ಚನ್ನಪ್ಪ ಬ್ಯಾಳಿ, ನಿಂಗಪ್ಪ ಹಾದಿಮನಿ, ಗ್ರಾಪಂ ಕಾರ್ಯದರ್ಶಿ ಕೆಂಚಪ್ಪ ಮಾದರ, ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ನಾಲ್ವರು ಮಕ್ಕಳಿಗೆ ವಿಷ ಹಾಕಿ ತಾನೂ ಆತ್ಮಹತ್ಯೆಗೆ ಶರಣಾದ ಮಾಜಿ ಯೋಧ

0

ವಿಜಯಸಾಕ್ಷಿ ಸುದ್ದಿ, ಬೆಳಗಾವಿ:

ತಂದೆ ತನ್ನ ನಾಲ್ವರು ಮಕ್ಕಳಿಗೆ ವಿಷ ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ನಡೆದಿದೆ.

ಗೋಪಾಲ ದೊಡ್ಡಪ್ಪ ಹಾದಿಮನಿ, ಮಹಾದೇವಿ (46), ಸೌಮ್ಯಾ (19) ಸ್ವಾತಿ (16), ಸಾಕ್ಷಿ (12), ಸೃಜನ ಮೃತರು.

ಗೋಪಾಲ ಮಾಜಿ ಯೋಧನಾಗಿದ್ದು, ಪತ್ನಿಯು ಜು.6ರಂದು ಬ್ಲಾಕ್ ಫಂಗಸ್ ನಿಂದ ತೀರಿಕೊಂಡಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಾಜಿ ಯೋಧ ಇದೇ ಕಾರಣಕ್ಕೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಂಕೇಶ್ವರ ಸರ್ಕಾರ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತದೇಹಗಳನ್ನು ಹೊರತರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟ್ಟ ಕಂದಮ್ಮನ ಮೃತದೇಹ ಕಂಡು ಗ್ರಾಮಸ್ಥರು ಮಮ್ಮಲ‌ ಮರುಗಿದರು.
ಸಂಕೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಡೆತ್ ನೋಟ್, ಇಪ್ಪತ್ತು ಸಾವಿರ ರೂ.ಪತ್ತೆ

ನಮ್ಮ ಸಾವಿಗೆ ನಾವೇ ಕಾರಣ. ಬೇರೆ ಯಾರೂ ಅಲ್ಲ. ಇಪ್ಪತ್ತು ಸಾವಿರ ಹಣವಿದೆ. ಅಂತ್ಯಕ್ರಿಯೆಗೆ ಬಳಸಿ. ಅಂತ್ಯಕ್ರಿಯೆ ನಡೆಸಿದವರಿಗೆ ಧನ್ಯವಾದಗಳು ಎಂದು ಡೆತನೋಟ್ ನಲ್ಲಿ ಬರೆಯಲಾಗಿದೆ ಎನ್ನಲಾಗಿದೆ.

ವಿಜಯಸಾಕ್ಷಿ ವರದಿ ಫಲಶ್ರುತಿ; ಕ್ರೀಡಾಪಟುಗೆ ಆರ್ಥಿಕ ಸಹಾಯ

0

ವಿಜಯಸಾಕ್ಷಿ ಸುದ್ದಿ,ಕೊಪ್ಪಳ

ತಾಲೂಕಿನ ಗಬ್ಬೂರು ಗ್ರಾಮದ ಕ್ರೀಡಾಪಟು ಎರಿಸ್ವಾಮಿ ಹರಿಜನ ಅವರಿಗೆ ಕೊಪ್ಪಳದ ಡಿಆರ್ ಎಎಸ್ಐ ಚಂದ್ರಪ್ಪ ಶಿಡ್ಲಪ್ಪನವರ ಅವರು ಆರ್ಥಿಕ ಸಹಾಯ ನೀಡಿದರು.

ಕ್ರೀಡಾಪಟು ಎರಿಸ್ವಾಮಿ ಹರಿಜನ ಅವರ ಕುರಿತು ಪತ್ರಿಕಾ ವರದಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡ ಸುದ್ದಿ ನೋಡಿದ ಚಂದ್ರಪ್ಪ ಅವರು ಗಬ್ಬೂರು ಗ್ರಾಮಕ್ಕೆ ತೆರಳಿ ಎರಿಸ್ವಾಮಿ ತಾಯಿಗೆ 15 ಸಾವಿರ ರೂಪಾಯಿ ನಗದು ನೀಡಿ ಶುಭ ಕೋರಿದರು.

ಗದಗ ನಗರದ ಶ್ರೀ ಪ್ರಭುರಾಜೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿ.ಈಡಿ ಓದುತ್ತಿರುವ ಎರಿಸ್ವಾಮಿ ರಾಷ್ಟ್ರಮಟ್ಟದ ಥ್ರೋಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ. ಇದೇ ಅಕ್ಟೋಬರ್ 29ರಿಂದ 31ರವರೆಗೆ ಹರಿಯಾಣ ರಾಜ್ಯದ ರೋಥಕ್ ಎಂ.ಡಿ. ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸೀನಿಯರ್ ಥ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ಇದೇ ಅಕ್ಟೋಬರ್ 25 ರಿಂದ 29 ರವರೆಗೆ ಎರಿಸ್ವಾಮಿಗೆ ಪರೀಕ್ಷೆಗಳಿವೆ. ಹಾಗಾಗಿ ಟೀಮ್ನೊಂದಿಗೆ ಹರಿಯಾಣಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮುಗಿಸಿಕೊಂಡು ಸ್ವಂತ ಖರ್ಚಿನಲ್ಲಿ ಹೋಗಬೇಕೆಂದರೆ ಆರ್ಥಿಕ ಸಮಸ್ಯೆ ಎದುರಾಗಿದೆ. ಇದನ್ನು ಗಮನಿಸಿದ ಚಂದ್ರಪ್ಪ ಅವರು ಆರ್ಥಿಕ ಸಹಾಯ ನೀಡಲು ಮುಂದೆ ಬಂದರು.

ಕಷ್ಟದಿಂದಲೇ ಮೇಲೆ ಬಂದ ಚಂದ್ರಪ್ಪ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಹಲವಾರು ಜನರಿಗೆ ವೈಯಕ್ತಿಕ ಸಹಾಯ ಮಾಡಿದ ಅವರು ಗಿಣಿಗೇರಿ ಕೆರೆ ಅಭಿವೃದ್ಧಿಗೆ 21 ಸಾವಿರ ರೂಪಾಯಿ ದೇಣಿಗೆ ನೀಡಿದ್ದರು. ಕ್ರೀಡಾಪಟು ಎರಿಸ್ವಾಮಿಗೆ ಆರ್ಥಿಕ ಸಹಾಯ ಮಾಡಿದ್ದಕ್ಕೆ ಗಬ್ಬೂರು ಗ್ರಾಮಸ್ಥರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಯಾರಾದರೂ ಆರ್ಥಿಕ ಸಹಾಯ ಮಾಡುವವರಿದ್ದರೆ ಎರಿಸ್ವಾಮಿ (9741 169676) ಅವರನ್ನು ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಗಾಯಕ ಅಮರೇಶ್ ಜವಳಿ, ಸಂಗೊಳ್ಳಿ ರಾಯಣ್ಣ ಸೇನೆ ತಾಲೂಕು ಅಧ್ಯಕ್ಷ ಕುಬೇರ ಮಜ್ಜಿಗಿ, ಯುವ ಮುಖಂಡರಾದ ವೈ.ಎಂ. ಕೋಲ್ಕಾರ್, ಬಸವರಾಜ ಹಳ್ಳಿ ಶರಣಪ್ಪ ದೊಡ್ಮನಿ ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಥ್ರೋ ಬಾಲ್ ಕ್ರೀಡೆಗೆ ಆಯ್ಕೆಯಾದ ಗ್ರಾಮೀಣ ಪ್ರತಿಭೆಗೆ ಬೇಕಿದೆ ಸಹಾಯ ಹಸ್ತ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಪ್ರತಿಭೆ ಯಾರ ಸ್ವತ್ತೂ ಅಲ್ಲ, ಪ್ರತಿಭೆಗೆ ಬಡತನ, ಸಿರಿತನದ ಬೇಧವಿಲ್ಲ. ಬಡತನದ ಬೇಗುದಿಯಲ್ಲೇ ಬೆಳೆದ ಕ್ರೀಡಾ ಪ್ರತಿಭೆಯೊಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ರಾಜ್ಯವನ್ನು, ಅದರಲ್ಲೂ ಕಲ್ಯಾಣ ಕರ್ನಾಟಕವನ್ನು ಬೆಳಗಲು ಸಹಾಯಹಸ್ತ ಬೇಕಿದೆ.

ತಾಲೂಕಿನ ಗಬ್ಬೂರು ಗ್ರಾಮದ ಎರಿಸ್ವಾಮಿ ಹರಿಜನ ಎಂಬ ಗ್ರಾಮೀಣ ಯುವ ಪ್ರತಿಭೆ ರಾಷ್ಟ್ರ ಮಟ್ಟದ ಥ್ರೋ ಬಾಲ್ ಕ್ರೀಡಾಕೂಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾನೆ.

ಗದಗ ನಗರದ ಶ್ರೀ ಪ್ರಭುರಾಜೇಂದ್ರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಪಿ.ಈಡಿ ಓದುತ್ತಿರುವ ಎರಿಸ್ವಾಮಿ ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ರಾಜ್ಯ ಥ್ರೋ ಬಾಲ್ ಅಸೋಸಿಯೇಷನ್ ಕೈಗೊಂಡಿದ್ದ ಥ್ರೋ ಬಾಲ್ ಸೀನಿಯರ್ ವಿಭಾಗದ ತಂಡಕ್ಕೆ ಆಯ್ಕೆಯಾಗಿದ್ದರು. ಈ ಮೂಲಕ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಆಯ್ಕೆಯಾದ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆ ಎರಿಸ್ವಾಮಿಗೆ ಸಲ್ಲುತ್ತದೆ.

ಇದೇ ಅಕ್ಟೋಬರ್ 29 ರಿಂದ 31 ರವರೆಗೆ ಹರಿಯಾಣ ರಾಜ್ಯದ ರೋಥಕ್ ಎಂ.ಡಿ. ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸೀನಿಯರ್ ಥ್ರೋ ಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಬಡತನದ ಕುಟುಂಬದಲ್ಲಿ ಜನಿಸಿ ಈ ಮಟ್ಟಕ್ಕೆ ಸಾಧನೆ ಮಾಡುವ ಮೂಲಕ ಗಬ್ಬೂರು ಗ್ರಾಮಕ್ಕೆ ಹಾಗೂ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದ ಎರಿಸ್ವಾಮಿ ಅವರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಸಹಾಯದ ನೀರೀಕ್ಷೆ:
ಎರಿಸ್ವಾಮಿಗೆ ಅ.25 ರಿಂದ 29 ರವರೆಗೆ ಪರೀಕ್ಷೆಗಳಿವೆ. ಹಾಗಾಗಿ ಟೀಮ್‌ನೊಂದಿಗೆ ಹರಿಯಾಣಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಪರೀಕ್ಷೆ ಮುಗಿ‌ಸಿಕೊಂಡು ಹೋಗಬೇಕೆಂದರೆ ಆರ್ಥಿಕ ಸಮಸ್ಯೆ ಎದುರಾಗಿದೆ. ಹಾಗಾಗಿ ಯಾರಾದರೂ ದಾನಿಗಳು ಮುಂದೆ ಬಂದು ಈ ಕ್ರೀಡಾ ಪಟುಗೆ ಸಹಾಯ ಮಾಡಿದರೆ ಆತ ಇನ್ನಷ್ಟು ಸಾಧನೆ ಮಾಡಲು ನೆರವು ನೀಡಿದಂತಾಗುತ್ತದೆ. ಹೆಚ್ಚಿನ ಮಾಹಿತಿಗೆ ಎರಿಸ್ವಾಮಿ ಸಂಪರ್ಕಿಸಿ: 97411 69676

ಅನೈತಿಕ ಸಂಬಂಧದ ಶಂಕೆ; ಕೊಲೆ ಮಾಡಿ ಹೂತು ಹಾಕಿದ್ದ ಆರೋಪಿ ಮಹಾಂತೇಶ್

ವಿಜಯಸಾಕ್ಷಿ ಸುದ್ದಿ, ಗದಗ:

ಕಂಠಮಟ ಸಾರಾಯಿ‌ ಕುಡಿದು ಭರ್ಜರಿ ಚಿಕನ್ ಪಾರ್ಟಿ ಮಾಡಿ ಗೆಳೆಯನ್ನನ್ನು ಕೊಲೆಗೈದು ಹಳ್ಳದಲ್ಲಿ ಎಸೆದು ಹೋಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ‌ ಗ್ರಾಮದಲ್ಲಿ ನಡೆದಿದೆ.

ಕೊತಬಾಳ‌ ಗ್ರಾಮದ ಸಿದ್ದಪ್ಪ ಪಾಗದ (48) ಎಂಬಾತನೇ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಮಹಾಂತೇಶ್ ಎಂಬಾತನೇ ಕೊಲೆ ಮಾಡಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆಯಾದ ಸಿದ್ದಪ್ಪ ಪಾಗದ, ಕೊಲೆ ಆರೋಪಿ ಮಹಾಂತೇಶ್ ನ‌ ಮನೆಯಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ.

ನಿನ್ನೆ ರಾತ್ರಿ ಕೊತಬಾಳ ಗ್ರಾಮದ ಹೊರವಲಯದ ಆರೋಪಿಯ ಜಮೀನಿಗೆ ಇಬ್ಬರು ಪಾರ್ಟಿ ಮಾಡಲು ತೆರಳಿದ್ದರು. ಮದ್ಯ ಹಾಗೂ ಚಿಕನ್ ಪಾರ್ಟಿ ಮಾಡಿದ ನಂತರ ಆರೋಪಿ ಮಹಾಂತೇಶ್ ಪಿಕಾಸಿಯಿಂದ ಸಿದ್ದಪ್ಪನಿಗೆ ಹೊಡೆದು ಕೊಲೆ ಮಾಡಿದ್ದಾನೆ.

ನಂತರ ಪಕ್ಕದ ಹಳ್ಳದಲ್ಲಿ ಶವ ತಂದು ಹೂತು ಹಾಕಿ ಪರಾರಿಯಾಗಿದ್ದ.

ಮಾಹಿತಿ ತಿಳಿದ ರೋಣ ಸಿಪಿಐ ಸುಧೀರಕುಮಾರ್ ಬೆಂಕಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಭೇಟಿ ಕೊಲೆಗೆ ಕಾರಣ ಹಾಗೂ ಆರೋಪಿಯ ಬಗ್ಗೆ ಮಾಹಿತಿ ಪಡೆದರು.

ಆರೋಪಿ ಮಹಾಂತೇಶ್ ನನ್ನು ಪೊಲೀಸರ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಜಮೀನಿನಲ್ಲಿ ಚಾಲುಕ್ಯ ಕಾಲದ ಶಿಲ್ಪಗಳು ಪತ್ತೆ; ಕ್ರಿ.ಶ. 12ನೇ ಶತಮಾನದ, ಲಿಪಿ, ಸುಂದರ ಕೆತ್ತನೆಯುಳ್ಳ ದೇವಾಲಯ ತಳಹದಿಯ ರತಿಕ್ರೀಡೆ ವಿಗ್ರಹಗಳು ಗೋಚರ

ವಿಜಯಸಾಕ್ಷಿ ಸುದ್ದಿ, ಡಂಬಳ (ಧರ್ಮಪುರ)

ಡಂಬಳ ಗ್ರಾಮದ ಜಮೀನಿನೊಳಗೆ ಚಾಲುಕ್ಯ ಕಾಲದ ಶಿಲ್ಪಗಳು ಪತ್ತೆಯಾಗಿವೆ. ಹೊಲದಲ್ಲಿರುವ ಮರವೊಂದರಲ್ಲಿ ಜೇನು ಕಟ್ಟಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸ್ಥಳೀಯರು ತೆರಳಿದಾಗ ಇಲ್ಲಿ ದೇಗುಲದ ಅವಶೇಷಗಳು ಲಭಿಸಿವೆ.

ತಳವಿನ್ಯಾಸ ನಕ್ಷತ್ರದಾಕಾರದ ದೇವಾಲಯದ ಪಾಣಿಪೀಠ ಸ್ವಲ್ಪ ಮಟ್ಟಿಗೆ ನಕ್ಷತ್ರದಾಕಾರದ ತಳಹದಿ, ನವರಂಗ, ಮಧ್ಯದಲ್ಲಿರುವ ವೃತ್ತಾಕಾರದ ನಾಟ್ಯಪೀಠವು ಸುಂದರವಾದ ಅಷ್ಟದಳ ಕಮಲದ ಹೂವಿನ ಸುಂದರ ಕೆತ್ತನೆಯಿದ್ದು ಚಾಲುಕ್ಯ ಶೈಲಿಯ ಕಂಬಗಳು ಅಲ್ಲಲ್ಲಿ ಮುರಿದು ಬಿದ್ದಿದ್ದು ಕಾಣುತ್ತಿವೆ.

ರತಿ ಕ್ರಿಡೆಯ ಆಕಾರದ ಸುಂದರ ಕೆತ್ತನೆಯ ವಿಗ್ರಹಗಳು ಪತ್ತೆಯಾಗಿದ್ದು, ಶಿಥಿಲಾವಸ್ಥೆಯಲ್ಲಿ ಇರುವುದು ಕಾಣುತ್ತಿವೆ. ಆನೆ, ಸಿಂಹ ಯಾಳಿಗಳ ಸಾಲುಗಳನ್ನು ಉಬ್ಬುಶಿಲ್ಪಗಳಲ್ಲಿ ಬಿಡಿಸಲಾಗಿವೆ. ವಿವಿಧ ನರ್ತನೆಯ ಶಿಲ್ಪಗಳು ಕೆತ್ತಲಾಗಿರುವ ಶಿಲೆಗಳು, ಬಿದ್ದಿರುವ ಕಂಬಗಳು, ದೇವಾಲಯ ಗರ್ಭಗೃಹ ಮೆಲ್ಭಾಗ ಬಿದ್ದು ಮಣ್ಣಿನೊಳಗೆ ದೇವಾಲಯ ಹುದುಗಿದೆ ಎಂದು ಊಹಿಸಲಾಗಿದೆ.

ಶಿಲ್ಪಗಳು ಚಾಲುಕ್ಯಶೈಲಿಯಲ್ಲಿ ಇರುವುದರಿಂದ ಈ ದೇವಾಲಯ ಕ್ರಿ.ಶ. 12ನೇ ಶತಮಾನದ್ದೆಂದು ಊಹಿಸಲಾಗಿದೆ. ಈ ದೇವಾಲಯದ ಕಂಬಗಳ ಹಾಗೂ ಪೀಠದ ಸುತ್ತಮುತ್ತಲೂ ಸುಂದರ ಕೆತ್ತನೆಯ ಮುಖ ಮಂಟಪ ಲಲಾಟದ ಲಕ್ಷ್ಮಿ ವಿಗ್ರಹ ಕಿರುಶಿಲ್ಪವಿರುವುದು ಕಾಣುತ್ತದೆ. ಇಲ್ಲಿ ಪತ್ತೆಯಾಗಿರುವ ಶಾಸನದ ಹಾಗೂ ಈ ದೇವಾಲಯದ ಬಗ್ಗೆ ಸಂಪೂರ್ಣವಾಗಿ ಇತಿಹಾಸ ತಜ್ಞರಿಂದ ಕೂಡಲೇ ಸಂಶೋಧನೆ ಮಾಡಿಸಿ, ಈ ದೇವಾಲಯ ಪುನರ್ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಂಶೋಧನೆ ಮಾಡಿಸಿ ವರದಿ
ಐತಿಹಾಸಿಕ ಹಿನ್ನೆಲೆಯುಳ್ಳ ಡಂಬಳ ಗ್ರಾಮದೊಳಗೆ ಇಂದು ಸಿಕ್ಕಿರುವ ಕ್ರಿ.ಶ. 12 ಶತಮಾನದ ಶಾಸನದ ಬಗ್ಗೆ ಮಾಹಿತಿ ನಮಗೆ ಲಭ್ಯವಾಗಿದೆ. ಕೂಡಲೇ ಇದಕ್ಕೆ ಸಂಬಂಧಿಸಿದ ಇಲಾಖೆಯವರ ಗಮನಕ್ಕೆ ತಂದು, ಅದರ ಬಗ್ಗೆ ಸಂಶೋಧನೆ ಮಾಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

ಡಾ| ಆಶಪ್ಪ ಪೂಜಾರ
ತಹಸೀಲ್ದಾರ್, ಮುಂಡರಗಿ

ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ

ಮುರ್ತುಜಸಾಬ ತಾಂಬೋಟಿ ಅವರ ಜಮೀನಿನೊಂದರಲ್ಲಿ ಪುರಾತನ ಕಾಲದ ಶಾಸನ ಹಾಗೂ ದೇವಾಲಯದ ಅವಶೇಷಗಳು ದೊರೆತಿರುವ ಮಾಹಿತಿ ಲಭ್ಯವಾಗಿದೆ. ಶೀಘ್ರವಾಗಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಇಂತಹ ಇತಿಹಾಸ ಹಿನ್ನೆಲೆಯುಳ್ಳ ದೇವಾಲಯಗಳನ್ನು ಸಂರಕ್ಷಣೆ ಮಾಡತ್ತೇವೆ.

  • ರವೀಂದ್ರ ಹತ್ತಿಕಾಳ
    ಸಂರಕ್ಷಣಾ ಸಹಾಯಕ ಅಧಿಕಾರಿಗಳು
    ಪುರಾತತ್ವ ಇಲಾಖೆ ಗದಗ