ಮಂಗಳವಾರ ಗುಜರಾತಿನ ಅಹಮದಾಬಾದ್ ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ದೆಹಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ 20-20 ಪಂದ್ಯದ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬೆಟಗೇರಿಯ ತೆಗ್ಗಿನಪೇಟಿ ನಿವಾಸಿ ತಿಪ್ಪಣಸಾ ಯಶವಂತಸಾ ಕಬಾಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಕೋರ್ ಹಾಗೂ ಫಲಿತಾಂಶದ ಮೇಲೆ ನೂರು ರೂಪಾಯಿಗೆ ಎರಡು ನೂರು ರೂಪಾಯಿ ಕೊಡುವುದಾಗಿ ಸಾರ್ವಜನಿಕರಿಗೆ ಕರೆ ಮಾಡಿ ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆತನಿಂದ 1600 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ.
ಆರೋಪಿ ತಿಪ್ಪಣಸಾ ಯಶವಂತಸಾ ಕಬಾಡಿ ತಾನು ಕಟ್ಟಿಸಿಕೊಂಡ ಹಣವನ್ನು ಬೆಟಗೇರಿಯ ಪರ್ವತಗೌಡ ಪೆಟ್ರೋಲ್ ಬಂಕ್ ಬಳಿಯ ನಿವಾಸಿ ಕಿಶೋರ್ ಕುಮಾರ್ ಗಜಾನನಸಾ ಬದಿ ಎಂಬಾತನಿಗೆ ಕೊಡುವುದಾಗಿ ಹೇಳಿಕೆಯ ಹಿನ್ನೆಲೆಯಲ್ಲಿ ಆತನ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಹೋಟೆಲ್ ನಲ್ಲಿ ಗ್ರಾಹಕರಿಗೆ ಉಪಹಾರ ಹಾಗೂ ಊಟ ಕೊಟ್ಟ ಆರೋಪದ ಹಿನ್ನೆಲೆಯಲ್ಲಿ ನಗರದ ಹೊಸಬಸ್ ನಿಲ್ದಾಣದ ಹತ್ತಿರದ ಪಲ್ಲವಿ ಹೋಟೆಲ್ ಮಾಲೀಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೋವಿಡ್ ನಿಯಮದಂತೆ ಹೋಟೆಲ್ ನಲ್ಲಿ ಗ್ರಾಹಕರಿಗೆ ಅವಕಾಶ ಇಲ್ಲ. ಕೇವಲ ಪಾರ್ಸಲ್ ಮಾತ್ರ ಕೊಡಬೇಕು.
ಹೋಟೆಲ್ ಗೆ ಡಿಎಆರ್ ಹೆಡ್ ಕ್ವಾರ್ಟರ್ಸ್ ನ ಶಶಿಧರ ಶರಣಪ್ಪ ಹಡಗಲಿ ಎಂಬ ಅಧಿಕಾರಿ ಭೇಟಿ ಕೊಟ್ಟ ಸಮಯದಲ್ಲಿ ಗ್ರಾಹಕರಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಂಡು ಬರಲಿಲ್ಲ. ಸ್ಯಾನಿಟೇಸರ್ ಮಾಡದೇ, ಥರ್ಮಲ್ ಸ್ಕ್ಯಾನರ್ ಹೋಟೆಲ್ ನಲ್ಲಿ ಇಡದೇ ಕೊರೋನಾ ಸೋಂಕು ಹರಡಲು ಪ್ರೇರೇಪಣೆ ನೀಡಿದ್ದಾರೆ ಎಂದು ಪಲ್ಲವಿ ಹೋಟೆಲ್ ಮಾಲೀಕ ಸುಧಾಕರ ಸಿದ್ದಯ್ಯ ಶೆಟ್ಟಿ ಎಂಬುವರು ಮೇಲೆ 2020 ರ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿಯಲ್ಲಿ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕೊರೋನಾ ಸೋಂಕಿನ ಎರಡನೇ ಅಲೆ ತಡೆಗಟ್ಟಲು ಜಿಲ್ಲಾಡಳಿತ ಜಿಲ್ಲೆಯಲ್ಲಿ ಜಾತ್ರೆ, ಉರುಸ್, ಮೆರವಣಿಗೆ, ರಾಜಕೀಯ ಸಭೆ, ಸಮಾರಂಭ ಸೇರಿದಂತೆ ಜನ ಗುಂಪಾಗಿ ಕೂಡದಂತೆ ನಿಷೇದಾಜ್ಞೆ ವಿಧಿಸಿದೆ.
ಆದರೆ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ಕಾಲಕಾಲೇಶ್ವರ ಗ್ರಾಮದ ಖ್ಯಾತ ಕಾಲಕಾಲೇಶ್ವರ ಜಾತ್ರೆ ಸಾಂಗವಾಗಿ ನಡೆದಿದೆ. ಮಂಗಳವಾರ ನಸುಕಿನಲ್ಲಿ ನೂರಾರು ಭಕ್ತರು ರಥೋತ್ಸವ ನಡೆಸಿದ ಆರೋಪ ಕೇಳಿ ಬಂದಿದೆ. ಅದೂ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ತೇರು ಎಳೆದಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ನೂರಾರು ಜನರು ಸರಕಾರದ ಆದೇಶ ಉಲ್ಲಂಘಿಸಿ ತೇರು ಎಳೆದ ಪೋಟೋಗಳು ಈಗ ವೈರಲ್ ಆಗಿವೆ.
ಇದೇ ರೀತಿ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ ಬಡ್ನಿ ಗ್ರಾಮದಲ್ಲಿ ಮಾರುತಿ ದೇವರ ರಥೋತ್ಸವ ನಡೆಸಿದ ಆರೋಪದ ಮೇಲೆ ಗ್ರಾಮದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಹದಿಮೂರು ಜನರ ವಿರುದ್ಧ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದನ್ನು ಸ್ಮರಿಸಬಹುದು.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ.ಇದರ ನಡುವೆ ಫ್ರಂಟ್ ಲೈನ್ ಕೊರೋನಾ ವಾರಿಯರ್‌ಗಳಾದ ಪೊಲೀಸರಿಗೂ ಸಹ ಕೊರೋನಾ ಪಾಸಿಟಿವ್ ದೃಢವಾಗಿದೆ.
ಜಿಲ್ಲೆಯ ಗಂಗಾವತಿ ಗ್ರಾಮೀಣ ವೃತ್ತದ ಸಿಪಿಐ, ಟ್ರಾಫಿಕ್ ಪಿಎಸ್ಐ ಸೇರಿದಂತೆ ಒಟ್ಟು 17 ಜನ ಪೊಲೀಸರಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಇನ್ನೂ ಎಲ್ಲರಿಗೂ ಸಹ ಯಾವುದೇ ಕೊರೋನಾ ಲಕ್ಷಣಗಳು ಇಲ್ಲದಿದ್ದರೂ ಸಹ ಪಾಸಿಟಿವ್ ಕಂಡುಬಂದಿದ್ದು, ಎಲ್ಲರೂ ಹೋಮ್ ಐಸೂಲೇಷನಲ್ಲಿ ಇದ್ದಾರೆ. ಯಾರು ಸಹ ಆತಂಕಕ್ಕೆ ಒಳಗಾಗದಿರಿ ಯಾರಿಗೂ ರೋಗದ ಲಕ್ಷಣ ಕಂಡು ಬಂದಿಲ್ಲ, ಧೈರ್ಯದಿಂದ ಎದುರಿಸಿ ಕೊರೋನಾ ವಿರುದ್ಧ ಗೆಲ್ಲುತ್ತಾರೆ ಎಂದು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ ಅವರು ಆತ್ಮಸ್ಥೈರ್ಯ ತುಂಬಿದ್ದಾರೆ.
-ಲಕ್ಷಾಂತರ ಮೌಲ್ಯದ ವಸ್ತುಗಳು, ಆಹಾರ ಪದಾರ್ಥಗಳು ಬೆಂಕಿಗಾಹುತಿ.!
ವಿಜಯಸಾಕ್ಷಿ ಸುದ್ದಿ, ಗಂಗಾವತಿ: ಸ್ಥಳೀಯ ಜುಲೈ ನಗರದ ಏರಿಯಾದಲ್ಲಿರುವ ಬೇಕರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಬುಧವಾರ ನಡೆದಿದೆ. ಅಗ್ನಿ ಸ್ಪರ್ಶದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳು, ವಸ್ತುಗಳು ಸುಟ್ಟುಕರಕಲಾಗಿವೆ.
ಆಂಧ್ರ ಮೂಲದ ಉದ್ಯಮಿಗೆ ಸೇರಿದ ದುರ್ಗಾ ಬೇಕರಿ ಇದಾಗಿದ್ದು, ನಗದು ಇಪ್ಪತ್ತು ಸಾವಿರ ಸಮೇತ, ಅಪಾರ ಪ್ರಮಾಣದ ಬೇಕರಿ ಐಟಮ್‌ಗಳು, ಪ್ರಿಜ್, ಬ್ಯಾಟರಿ ಇನ್ವೇರ್ಟರ್, ಬೈಕ್, ಸೇರಿದಂತೆ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಒಟ್ಟು ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚು ವಸ್ತುಗಳು ಸಂಪೂರ್ಣ ಸುಟ್ಟ ಕರಕಲಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ, ಭಾರಿ ಅನಾಹುತ ತಪ್ಪಿಸಿದ್ದಾರೆ. ಈ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದೇ ನಾಣ್ಯದ ಎರಡು ಮುಖಗಳಂತಿರುವ ಕಂದಾಯ ಮತ್ತು ಪೊಲೀಸ್ ಇಲಾಖೆಗಳು ಸೋಮವಾರ ರಾತ್ರಿ ನಡೆದ ಅವಮಾನವೀಯ ಘಟನೆಯಿಂದ ಮಂಗಳವಾರ ಬೆಳಕಾಗುವುದರಲ್ಲಿ ಹಾವು ಮುಂಗಿಸಿಯಂತಾಗಿವೆ. ರೋಣ ಪಟ್ಟಣದಲ್ಲಿ ಸೋಮವಾರ ರಾತ್ರಿ ೮ ಘಂಟೆ ಸುಮಾರಿಗೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಪಿ. ರಾಮಣ್ಣವರ ಹಾಗೂ ಬಿ.ಕೆ. ಮಾದರ ಎಂಬುವರು ಊಟ ತರಲು ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್‌ಗೆ ತೆರಳಿದ್ದರು. ಆಗ ಪೊಲೀಸರು ಏಕಾಏಕಿ ಗ್ರಾಮ ಲೆಕ್ಕಾಧಿಕಾರಿಗಳ ಮೆಲೆ ನುಗ್ಗಿ, ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಬಾಸುಂಡೆಗಳೆದ್ದಿವೆ.
ಈ ಘಟನೆಯಿಂದ ಕಂದಾಯ ಇಲಾಖೆಯ ಸಿಬ್ಬಂದಿ ರೊಚ್ಚಿಗೆದ್ದಿದ್ದು, ಮಂಗಳವಾರ ಪ್ರತಿಭಟನೆಗೆ ಕಾರಣವಾಯಿತು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದ್ದರೂ ಮೇಲಧಿಕಾರಿಗಳ ಆದೇಶವನ್ನು ಪಾಲಿಸಬೇಕು ಮತ್ತು ಕೊವಿಡ್ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಯ ಕರ್ತವ್ಯವನ್ನು ನಿಭಾಯಿಸಬೇಕು ಎಂಬ ದೃಷ್ಟಿಯಿಂದ ದಿನದ ೨೪ ಘಂಟಗಳ ಕಾಲ ಕೆಲಸ ಮಾಡುತ್ತಿದ್ದೇವೆ. ಆದರೆ, ರಾತ್ರಿ ಊಟ ತರುವ ವೇಳೆಯಲ್ಲಿ ಪೊಲೀಸರು ಹಲ್ಲೆ ಮಾಡಿದ್ದು ಅಕ್ಷ್ಯಮ್ಯ ಅಪರಾಧವಾಗಿದ್ದು, ಕೂಡಲೆ ಅವರನ್ನು ಅಮಾನತು ಮಾಡಬೇಕು ಎಂದು ಪ್ರತಿಭಟನಾ ನಿರತಗ್ರಾಮ ಲೆಕ್ಕಾಧಿಕಾರಿಗಳು ಆಗ್ರಹಿಸಿದರು.
ಸಂಧಾನ ವಿಫಲ…
ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆಯ ತಿಳಿದ ತಹಸೀಲ್ದಾರ ಜೆ.ಬಿ. ಜಕ್ಕಣಗೌಡ್ರ ಹಾಗೂ ಪೊಲೀಸ್ ಅಧಿಕಾರಿಗಳು ಸಂಧಾನ ಸಭೆಯನ್ನು ನಡೆಸಿದರೂ ಸಭೆ ವಿಫಲವಾಯಿತು. ಇಲಾಖೆ ವಹಿಸಿದ ಕಾರ್ಯಗಳನ್ನು ನಿಭಾಯಿಸಲು ಗ್ರಾಮ ಲೆಕ್ಕಾಧಿಕಾರಿಗಳು ಮಧ್ಯರಾತ್ರಿಯೂ ತೆರಳಬೇಕಾಗುತ್ತದೆ. ಇಂತಹ ಸಂಧರ್ಭದಲ್ಲಿ ನಮಗೆ ತೊಂದರೆಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಸಿಬ್ಬಂದಿ ಮೆಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಸುದ್ದಿಗೋಷ್ಠಿ
ಘಟನೆ ಕುರಿತು ಕಾರ್ಯಲಯದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಹಸೀಲ್ದಾರ ಜೆ.ಬಿ. ಜಕ್ಕಣಗೌಡ್ರ, ಪೊಲೀಸರಿಗೆ ಹೊಡೆಯುವ ಹಕ್ಕನ್ನು ಯಾರೂ ಕೊಟ್ಟಿಲ್ಲ. ಇಲಾಖೆಯ ಸಿಬ್ಬಂದಿ ಮೇಲೆ ಪೊಲೀಸರು ಹಲ್ಲೆ ಮಾಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಘಟನೆಗೆ ಕಾರಣರಾದ ಪೊಲೀಸರ ಮೇಲೆ ಸಿಪಿಐ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸುವ ಮೂಲಕ ಲಿಖಿತವಾಗಿಯೂ ಪತ್ರ ರವಾನಿಸಲಾಗುವುದು. ಸಂಧಾನ ಸಭೆ ನಡೆಸಿಲ್ಲ. ಬದಲಾಗಿ ಘಟನೆಯ ವಿವರವನ್ನು ನಾನು ಮತ್ತು ಪೊಲೀಸ್ ಅಧಿಕಾರಿಗಳು ಪಡೆದುಕೊಂಡಿದ್ದೇವೆ ಎಂದರು.
ನ್ಯಾಯ ಸಿಗಬೇಕು
ಸೋಮವಾರ ರಾತ್ರಿ ೮ ಗಂಟೆ ಸುಮಾರಿಗೆ ಕಚೇರಿಯಿಂದ ಪಾರ್ಸೆಲ್ ಊಟ ತರಲು ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್‌ಗೆ ಹೋದ ಸಂದರ್ಭದಲ್ಲಿ ಪೊಲೀಸರು ಏಕಾಏಕಿ ನಮ್ಮನ್ನು ಮನಸೋ ಇಚ್ಛೆ ಥಳಿಸಿದರು. ನಾವು ಗ್ರಾಮ ಲೆಕ್ಕಾಧಿಕಾರಿಗಳು ಎಂದು ಗುರುತಿನ ಚೀಟಿ ತೋರಿಸಿದರೂ ರಕ್ತ ಮಂಜುಗಟ್ಟುವಂತೆ ಬಡಿದಿದ್ದಾರೆ. ನಮಗೆ ನ್ಯಾಯ ಸಿಗಬೇಕು ಎಂದು ಹಲ್ಲೆಗೊಳಗಾದ ಗ್ರಾಮ ಲೆಕ್ಕಾಧಿಕಾರಿಗಳಾದ ಎಸ್.ಪಿ. ರಾಮಣ್ಣವರ ಹಾಗೂ ಬಿ.ಕೆ. ಕಮ್ಮಾರ ಆಗ್ರಹಿಸಿದರು.
ಕ್ಷುಲ್ಲಕ ಕಾರಣಕ್ಕೆ ಪುಂಡರ ಗುಂಪೊಂದು ಇಬ್ಬರು ಯುವಕರ ಮೇಲೆ ಗೂಂಡಾಗಿರಿ ಮಾಡಿ ಥಳಿಸಿದ ಘಟನೆ ಸ್ಥಳೀಯ ವಿದ್ಯಾನಗರದಲ್ಲಿ ಸಂಜೆ ನಡೆದಿದೆ.
ಇಲ್ಲಿನ ಉಣಕಲ್ ಬಳಿ ಇರುವ ಶೆಲ್ ಪೆಟ್ರೋಲ್ ಬುಕ್ ನಲ್ಲಿ ಪುಂಡರು ತಮ್ಮ ಬೈಕಿಗೆ ಪೆಟ್ರೋಲ್ ಹಾಕಿಸಲು ಸರದಿ ಸಾಲಿನಲ್ಲಿ ನಿಂತಿದ್ದರು, ಆಗ ಇಬ್ಬರು ಯುವಕರು ಇರುವ ಬೈಕ್ ಈ ಪುಂಡ್ ರ ಬೈಕಿಗೆ ಟಚ್ ಆಗಿದೆ. ಹಾಗೆಯೇ ಟಚ್ ಆಗಿದ್ದೇ ತಡ ಪುಂಡರ ಕೋಪ ನೆತ್ತಿಗೇರಿ ಆ ಇಬ್ಬರೂ ಯುವಕರನ್ನು ಹಿಗ್ಗಾ-ಮುಗ್ಗಾ ಥಳಿಸಿತು.
ಬಿಡಿಸಲು ಬಂದ ಸ್ಥಳೀಯರಿಗೂ ಪುಂಡರು ಅವಾಜ್ ಹಾಕಿದರು. ಆಗ ಸ್ಥಳೀಯರು ಪುಂಡರಿಗೆ ಪ್ರತಿರೋಧ ಒಡ್ಡಿದರು. ಇದರಿಂದಾಗಿ ಪುಂಡರು ಕಾಲಿಗೆ ಬುದ್ದಿ ಹೇಳಿದರು.
ಈ ಘಟನೆಯಿಂದಾಗಿ ಪೆಟ್ರೋಲ್ ಬಂಕ್ ನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಣೇಶ್ ಹಾಗೂ ನಾರಾಯಣ ಎಂಬ ಯುವಕರು ಥಳಿಸಿಕೊಂಡವರು. ಇದೇ ವೇಳೆ ಸರದಿ ಸಾಲಿನಲ್ಲಿ ನಿಂತಿದ್ದ ಸಾರ್ವಜನಿಕರಿಗೂ ಥಳಿಸುವ ಬೆದರಿಕೆ ಹಾಕಿದ ಘಟನೆಯೂ ನಡೆಯಿತು.
ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಸೋಮವಾರ ನೆಡೆದ ಗುಜರಾತಿನ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಸ್ಕೋರ್ ಹಾಗೂ ಫಲಿತಾಂಶದ ಮೇಲೆ ಬೆಟ್ಟಿಂಗ್ ನಲ್ಲಿ ತೊಡಗಿದ್ದವರ ಮೇಲೆ ಗದಗ ಸೈಬರ್ ಪೊಲೀಸರು, ಹಾಗೂ ರೋಣ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.
ರೋಣ ಪಟ್ಟಣದ ಜಕ್ಕಲಿ ಕ್ರಾಸ್ ನಲ್ಲಿ ಲೋಕೇಶ್ ನಾಗಪ್ಪ ಕುಂಬಾರ ಎಂಬಾತ ಸಾವಿರಕ್ಕೆ ಎರಡು ಸಾವಿರ ಕೊಡುವುದಾಗಿ ಜನರಿಂದ ಹಣ ಪಡೆದು ಬೆಟ್ಟಿಂಗ್ ನಲ್ಲಿ ತೊಡಗಿದ್ದಾಗ ಪಿಎಸ್ಐ ವಿನೋದ ಪೂಜಾರಿ ಹಾಗೂ ಸಿಬ್ಬಂದಿ ದಾಳಿ ಬಂಧಿಸಿ, ಆತನಿಂದ 2500 ರಷ್ಟು ಮೌಲ್ಯದ ಮೊಬೈಲ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ರೋಣದಲ್ಲಿ ನಡೆಯುವ ಬೆಟ್ಟಿಂಗ್ ಹಣ ಪಡೆಯುವ ಮುಖ್ಯ ಬುಕ್ಕಿ ಜಗ್ಗು@ ಜಗದೀಶ್ ಬಸವರಾಜ್ ಕುಂಬಾರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಗದಗನಲ್ಲಿ ನಡೆದ ಪ್ರಕರಣದಲ್ಲಿ ಸೈಬರ್ ವಿಭಾಗದ ಪೊಲೀಸರು ದಾಳಿ ಮಾಡಿ ಇಬ್ಬರು ವರ್ತಕರನ್ನು ಬಂಧಿಸಿ ಅಪಾರ ಪ್ರಮಾಣದ ನಗದು ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ನಗರದ ಮಕಾನಗಲ್ಲಿಯ ಸಾಯಿಬಾಬಾ ಟ್ರೇಡರ್ಸ್ ಮುಂದೆ ಬೆಟ್ಟಿಂಗ್ ನಲ್ಲಿ ತೊಡಗಿದ್ದ ತೌಶೀಪ್ ದಸ್ತಗೀರಸಾಬ ಕಾಗದಗಾರ ಹಾಗೂ ಅಣ್ಣಿಗೇರಿಯ ಗಿರೀಶ್ ಬಸವರಾಜ್ ಕೊರ್ಲಹಳ್ಳಿ ಎಂಬುವವರನ್ನು ಮೊಬೈಲ್ ಮೂಲಕ ಜನರಿಂದ ಹಣ ಹಚ್ಚಿಸಿಕೊಂಡು ಬೆಟ್ಟಿಂಗ್ ನಲ್ಲಿ ತೊಡಗಿದ್ದ ಖಚಿತ ಮಾಹಿತಿ ಪಡೆದ ಸೈಬರ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಿ ಅವರಿಂದ 33500 ರೂ, ನಗದು, ಒಂದು ಮೊಬೈಲ್ ವಶಪಪಡಿಸಿಕೊಂಡಿದ್ದಾರೆ.
ಇವರಿಬ್ಬರು ಪಡೆದ ಹಣ ಪ್ರಮುಖ ಬುಕ್ಕಿ ಗುರುಪ್ರಸಾದ ಚನ್ನಪ್ಪ ಪವಾಡಶೆಟ್ಟರ ಎಂಬಾತನಿಗೆ ರವಾನಿಸುತ್ತಿದ್ದರು ಎಂದು ಆರೋಪಿಗಳು ಹೇಳಿದ ಮಾಹಿತಿಯಿಂದಾಗಿ ಗುರುಪ್ರಸಾದ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ತಾಲೂಕಿನ ಬಡ್ನಿ ಗ್ರಾಮದಲ್ಲಿ ಮಂಗಳವಾರ ಸಂಜೆ ಹನಮಂತ ದೇವರ ರಥೋತ್ಸವ ಜರುಗುತ್ತಿರುವುದನ್ನು ತಹಸೀಲ್ದಾರ ಭ್ರಮರಾಂಬ ಗುಬ್ಬಿಶೆಟ್ಟಿ ನೇತೃತ್ವದಲ್ಲಿ ಪೊಲೀಸರು ತಡೆದು, ಜಾತ್ರೆ ಬಂದ್ ಮಾಡಿಸಿದರು.
ಕೊರೊನಾ ಅಲೆ ನಿಯಂತ್ರಿಸಲು ಸರ್ಕಾರ ಜಾತ್ರೆಗಳನ್ನು ರದ್ದು ಪಡಿಸಿದ್ದರೂ ಮಂಗಳವಾರ ಬಡ್ನಿ ಗ್ರಾಮದಲ್ಲಿ ನೂರಾರು ಭಕ್ತರು ಸೇರಿ ರಥೋತ್ಸವ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಸುದ್ದಿ ತಿಳಿದ ತಹಸೀಲ್ದಾರರು ಪೊಲೀಸ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಜತೆಗೆ ಗ್ರಾಮಕ್ಕೆ ದೌಡಾಯಿಸಿ ಜಾತ್ರೆಯನ್ನು ತಡೆದಿದ್ದಾರೆ.
ಜಾತ್ರೆ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಗ್ರಾಮಸ್ಥರು ಯಾವುದೇ ಮಾಹಿತಿ ನೀಡದೆ, ಮಾಸ್ಕ್, ಅಂತರ ಕಾಯದೆ ಮಂಗಳವಾರ ಜಾತ್ರೆ ನಡೆಸಲು ಮುಂದಾಗಿದ್ದರು. ಮಾಹಿತಿ ಹಿನ್ನೆಲೆ ಜಾತ್ರೆ ತಡೆಯಲಾಗಿದೆ. ದೇವಸ್ಥಾನ ಕಮಿಟಿಯವರ ಮೇಲೆ ಪ್ರಕರಣ ದಾಖಲಿಸಲಾಗುವುದು. ಕರ್ಫ್ಯೂ ಸಂದರ್ಭದಲ್ಲಿ ಜಾತ್ರೆ ಇರುವ ಬಗ್ಗೆ ಮಾಹಿತಿ ಇದ್ದು, ಕದ್ದುಮುಚ್ಚಿ ಜಾತ್ರೆ, ಮದುವೆ, ಇತರೇ ಕಾರ್ಯಕ್ರಮ ಮಾಡಲು ಮುಂದಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಸಿದರು.