Home Blog Page 3475

ರೇಖಾ ಕದರೀಶ್ ಹತ್ಯೆ – ಮತ್ತೆ ಮೂವರ ಬಂಧನ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಾಜಿ ಕಾರ್ಪೊರೇಟರ್ ರೇಖಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಡ ರಾತ್ರಿ ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಮೂವರ ಆರೋಪಿಗಳ ಹೆಸರು ಮತ್ತು ಬಂಧನವನ್ನು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ಪುರುಷೋತಮ್, ಅಜಯ್, ಸ್ಟೀಫನ್ ಎಂಬ ಮೂವರು ಆರೋಪಿಗಳನ್ನು ಖಚಿತ ಮಾಹಿತಿಯ ಮೇರೆಗೆ ಬಂಧಿಸಿದ್ದಾರೆ.

ಪೊಲೀಸರ 3 ತಂಡಗಳು ನಗರದಲ್ಲಿ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದವು. ತಡರಾತ್ರಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಗೆ ಮುಂದಿನಿಂದ ಚುಚ್ಚಿದ್ದು ಪೀಟರ್, ಹಿಂಬದಿಯಿಂದ ಸೂರ್ಯ ಅಟ್ಯಾಕ್ ಮಾಡಿದ್ದಾನೆ. ಸ್ಟೀಫನ್, ಅಜಯ್ ಕಾವಲು ಕಾಯ್ದಿದ್ದಾರೆ. ಸಿಸಿ ಕ್ಯಾಮರಾ ತಿರಿಗಿಸುವ ಕೆಲಸವನ್ನು ಪುರುಷೋತ್ತಮ್ ಮಾಡಿದ್ದಾನೆ.
ಇಡೀ ಅಟ್ಟ್ಯಾಕ್ ಪ್ಲಾನ್ ಮತ್ತು ಆರೋಪಿಗಳೆಲ್ಲರ ಜೊತೆ ಸ್ಟೀಫನ್ ವಹಿಸಿಕೊಂಡಿದ್ದ.

ಚುಚ್ಚುವ ಸಮಯದಲ್ಲಿ ಬಿಡಿಸಲು ಬಂದವರಿಗೆ ಕೊಡದಲ್ಲಿ ಹೊಡೆದವನು ಸೂರ್ಯ ಎನ್ನುವ ಮಾಹಿತಿ ಬಹಿರಂಗವಾಗಿದೆ. ಮೂವರು ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ರೇಖಾ ಕದಿರೇಶ್ ಹತ್ಯೆ ಪ್ರಕರಣ – ಆರೋಪಿಗಳು ಅಂದರ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆಯ ಪ್ರಮುಖ ಆರೋಪಿಗಳಾಗಿರುವ ಪೀಟರ್ ಮತ್ತು ಸೂರ್ಯನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿಯ ಕಾಮಾಕ್ಷಿಪಾಳ್ಯದ ಸುಮನಹಳ್ಳಿಯ ಶನಿ ಮಹಾತ್ಮ ದೇವಸ್ಥಾನದ ಬಳಿ ಆರೋಪಿಗಳು ಪೊಲೀಸರಿಗೆ ಸಿಕ್ಕಿದ್ದಾರೆ. ನಿನ್ನೆ ಬೆಳಗ್ಗೆ ಮಾಜಿ ಕಾರ್ಪೊರೇಟರ್ ರೇಖಾ ಹತ್ಯೆ ನಡೆದಿದ್ದು, ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಪೊಲೀಸರು ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಗೆ ಆರಂಭದಲ್ಲಿ ಪೊಲೀಸರು ಶರಣಾಗುವಂತೆ ಹೇಳಿದರೂ ಕೇಳಲಿಲ್ಲ. ಆಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅನಿವಾರ್ಯವಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಇನ್ಸ್ ಪೆಕ್ಟರ್ ಗಳಾದ ಶಿವಾನಂದ್ ಮತ್ತು ಚಿದಾನಂದ್ ರವರು ಫೈರಿಂಗ್ ಮಾಡಿ ಬಂಧಿಸಿದ್ದಾರೆ.

ಸಿಎಂ ಯಡಿಯೂರಪ್ಪ, ಆರೋಪಿಗಳನ್ನು 24 ಗಂಟೆಗಳಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದರು. ಗೃಹ ಸಚಿವರು ಕೂಡ ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಸದ್ಯ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ, ಆರೋಪಿಗಳು ಮೊಬೈಲ್ ನಲ್ಲಿ ಕೊಲೆಯ ದೃಶ್ಯ ಸೆರೆ ಹಿಡಿದಿದ್ದರು ಎಂದು ಕೂಡ ತಿಳಿದು ಬಂದಿದೆ.

ಕಾರಹುಣ್ಣಿಮೆ: ಎತ್ತು ಗುದ್ದಿ ಸೈನಿಕನಾಗುವು ಕನಸ್ಸು ಹೊತ್ತ ಯುವಕ ಸಾವು

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಕರಿಹರಿಯುವ ಹಬ್ಬದ ಸಂದರ್ಭದಲ್ಲಿ ಎತ್ತು ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಜೀವ ಬಿಟ್ಟಿದ್ದಾನೆ.

ಕೋವಿಡ್-೧೯ ಹಿನ್ನೆಲೆ ಕಾರಹುಣ್ಣಿಮೆ ದಿನ ಎತ್ತುಗಳನ್ನು ಓಡಿಸುವ ಹಬ್ಬ ಆಚರಣೆ ಮಾಡಬಾರದು ಎಂದು ತಾಲೂಕಾಡಳಿತ, ಪೊಲೀಸ್ ಮತ್ತು ಗ್ರಾಪಂನವರು ಸೂಚಿಸಿದ್ದರೂ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಗುರುವಾರ ಸಂಜೆ ಕರಿ ಹರಿಯುವ ಹಬ್ಬ ಆಚರಣೆ ಮಾಡಿದ್ದರು.

ಈ ವೇಳೆ ರಭಸದಿಂದ ಓಡಿ ಬಂದ ಎತ್ತೊಂದು ಗ್ರಾಮದ ಯುವಕ ಕಿರಣಕುಮಾರ ಮಲಕಾಜಪ್ಪ ನೆರ್ತಿ (22) ಎಂಬಾತನಿಗೆ ಬಲವಾಗಿ ಗುದ್ದಿದೆ. ತೀವ್ರ ಗಾಯಗೊಂಡ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಆತ ಶುಕ್ರವಾರ ಸಂಜೆ ಅಸುನೀಗಿದ್ದಾನೆ.

ಮೃತ ಯುವಕ ಪದವೀಧರನಾಗಿದ್ದು, ತಂದೆ ನಿವೃತ್ತ ಸೈನಿಕ. ಯುವಕನೂ ತಂದೆಯ ಸೈನಿಕ ಕೋಟಾದಡಿ ಸೈನಿಕ ಸೇವೆ ಸೇರಲು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ಪ್ರಕರಣ ದಾಖಲು

ಸೂರಣಗಿ ಗ್ರಾಮದ ದೊಡ್ಡ ಹನುಮಪ್ಪನ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಕೋವಿಡ್ ನಿಯಮ ಉಲ್ಲಂಘಿಸಿ ಎತ್ತುಗಳನ್ನು ಓಡಿಸುವ ಹಬ್ಬವನ್ನು ಆಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಕರಿ ಹರಿಯುವ ಹಬ್ಬದಲ್ಲಿ ರಭಸದಿಂದ ಓಡಿ ಬಂದ ಎತ್ತು ತನ್ನನ್ನು ಹಿಡಿಯಲು ಪ್ರಯತ್ನಿಸಿದ ಯುವಕ ಕಿರಣ್ ಕುಮಾರ್ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ, ಯುವಕ ಗಂಭೀರವಾಗಿ ಗಾಯಗೊಂಡಿದ್ದ.

ನಿಯಮ ಮೀರಿ ಕರಿ ಹರಿಯುವ ಹಬ್ಬ ಆಯೋಜಿಸಿದ್ದ, ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಪಾಲ್ಗೊಂಡಿದ್ದ ಆರೋಪದಲ್ಲಿ 21 ಜನರ ವಿರುದ್ಧ ಕೋವಿಡ್ ನಿಯಮಾನುಸಾರ ಪ್ರಕರಣ ದಾಖಲಿಸಲಾಗಿದೆ ಎಂದು ಲಕ್ಷ್ಮೇಶ್ವರ ಠಾಣೆ ಪಿಎಸ್‌ಐ ಎಸ್.ವೈ. ಲೋಹಾರ ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ರಾಜ್ಯಪಾಲರ ಅನುಮೋದನೆ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕ್ರಿಯಾಯೋಜನೆ ರೂಪಿಸಲು ರೂ. 1492.97 ಕೋಟಿ ಬಳಕೆ ಯೋಜನೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

ಗಿರಿಜನ ಉಪಯೋಜನೆಗೆ ರೂ. 100 ಕೋಟಿ, ವಿಶೇಷ ಘಟಕ (ಎಸ್ಸಿನಪಿ) ರೂ. 300 ಕೋಟಿ ಹಾಗೂ ಸಾಮಾನ್ಯ ಯೋಜನೆಗೆ ರೂ. 1092.97 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಅದರಂತೆ ಕ್ರಿಯಾಯೋಜನೆ ರೂಪಿಸಲು ರಾಜ್ಯಪಾಲರಿಂದ ಅನುಮೋದನೆ ಸಿಕ್ಕಿದೆ.

ಪ್ರಸಕ್ತ ಸಾಲಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಒದಗಿಸಲಾಗಿರುವ ರೂ. 1492.97 ಕೋಟಿ ಅನುದಾನಕ್ಕೆ ಮಂಡಳಿ ವ್ಯಾಪ್ತಿಯ ಜಿಲ್ಲೆ ಹಾಗೂ ತಾಲೂಕುಗಳಿಗೆ ನಂಜುಂಡಪ್ಪ ವರದಿ ಆಧರಿಸಿ ಅನುದಾನ ಹಂಚಿಕೆ ಮಾಡಲಾಗಿದೆ.

ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಲಯಗಳು, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ನೀರಾವರಿ, ಕುಡಿಯುವ ನೀರು, ರಸ್ತೆ ಮತ್ತು ಸಂಪರ್ಕ, ಅಂತರ್ಜಲ ಸಂರಕ್ಷಣೆ, ಕೃಷಿ ವಲಯಕ್ಕೆ ಹೆಚ್ಚಿನ ಆಧ್ಯತೆ ನೀಡಿ ಆದ್ಯತೆಗಳನುಗುಣವಾಗಿ ಯೋಜನೆ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ಡಾ. ನಂಜುಂಡಪ್ಪ ವರದಿ ಅನ್ವಯ ಕಲ್ಯಾಣ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 32 ತಾಲೂಕುಗಳು ಹಿಂದುಳಿದಿವೆ. ಆ ತಾಲೂಕುಗಳ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರಸಕ್ತ ಸಾಲಿನಲ್ಲಿಯೂ ಸುಮಾರು ರೂ. ಒಂದುವರೆ ಸಾವಿರ ಕೋಟಿ ಅನುದಾನ ನೀಡಿದ್ದು, ಸಮರ್ಪಕವಾಗಿ ವಿನಿಯೋಗವಾಗಬೇಕು.

ಕೊರೊನಾ; ಜಿಲ್ಲೆಯಲ್ಲಿ ಎರಡಂಕಿ ಕಾಯ್ದುಕೊಂಡ ಸೋಂಕು!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಶುಕ್ರವಾರ 23 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಇಂದು 23 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25705 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -09, ಮುಂಡರಗಿ-07, ನರಗುಂದ-01, ರೋಣ-04, ಶಿರಹಟ್ಟಿ-02, ಹೊರಜಿಲ್ಲೆಯ-00 ಸೇರಿದಂತೆ 23 ಪ್ರಕರಣಗಳು ದೃಢಪಟ್ಟಿವೆ.

ಶುಕ್ರವಾರವೂ ಕೋವಿಡ್ ನಿಂದ ಯಾವುದೇ ಸಾವು ಸಂಭವಿಸಿದ ಕುರಿತು ವರದಿಯಾಗಿಲ್ಲ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 294 ಜನರು ಮೃತಪಟ್ಟಿದ್ದಾರೆ.

ಇಂದು 24 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25163 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 248 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 75 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸರ್ಕಾರವನ್ನೇ ಕೆಡವುವ ಶಕ್ತಿ ಇದ್ದವನು ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತೇನೆಯೇ?

ವಿಜಯಸಾಕ್ಷಿ ಸುದ್ದಿ, ಮೈಸೂರು

ನಾನು ನೊಂದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇಲ್ಲಿಯ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಟ್ಟರು ನಾನೊಬ್ಬನೇ ಕೊಡುತ್ತೇನೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು ನಾನೇಕೆ ಆ ಪಕ್ಷಕ್ಕೆ ಹೋಗಲಿ. ಬಿಜೆಪಿ ಪಕ್ಷ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ನಾನು ಬಿಜೆಪಿಗೆ ದ್ರೋಹ ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಾನು ಮುಂಬಯಿಗೆ ಹೋಗಿದ್ದು ಸತ್ಯ. ದೇವೇಂದ್ರ ಫಡ್ನವಿಸ್ ನನ್ನ ರಾಜಕೀಯ ಗಾಡ್ ಫಾದರ್. ಅವರ ಬಳಿ ನನ್ನ ಮನಸ್ಸಿನ ನೋವುಗಳನ್ನು ಹೇಳಿಕೊಂಡಿದ್ದೇನೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ. ಕೆಲವು ಹಿರಿಯರ ಸಲಹೆ ಮೇರೆಗೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಬಹಿಸಿದ್ದೆ ಎಂದು ಹೇಳಿದ್ದಾರೆ.

ಇನ್ನು 8 ರಿಂದ 10 ದಿನ ನನಗೆ ಮಾಧ್ಯಮದವರು ಬಿಟ್ಟು ಬಿಡಿ. ನಾನು ಅಲ್ಲಿಯವರೆಗೂ ಏನು ಮಾತಾಡಲ್ಲ. ಯಡಿಯೂರಪ್ಪ ಎರಡು ವರ್ಷ ಪೂರೈಸುತ್ತಾರೆ. ಮುಂದಿನ ಚುನಾವಣೆಯು ಅವರ ನೇತೃತ್ವದಲ್ಲಿ ನಡೆಯಲಿದೆ. ನಾವು ಮತ್ತೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.

ಸರ್ಕಾರ ಬೀಳಿಸಿ ಸರ್ಕಾರ ರಚಿಸುವ ಶಕ್ತಿ ದೇವರು ಕೊಟ್ಟಿದ್ದಾನೆ. ಹೀಗಿದ್ದರೂ ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತೇನೆಯೇ? ಎಂದು ಪ್ರಶ್ನಿಸಿದ ಅವರು, ಸ್ವಾಮೀಜಿ ಅವರ ಬಳಿ ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸುವ ಸ್ಥಿತಿಗೆ ನಾನು ಬಂದಿಲ್ಲ. ನಾನು ಸ್ವಾಮೀಜಿ ಬಳಿ ಬಂದಿದ್ದು ಅವರ ಮಾತೃ ಶ್ರೀ ನಿಧನಕ್ಕೆ ಸಂತಾಪ ಸೂಚಿಸಲು ಬಂದಿದ್ದೇನೆ. ಇಲ್ಲಿ ಯಾವ ರಾಜಕಾರಣವನ್ನು ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.
ಇನ್ನೊಬ್ಬರನ್ನು ಸಚಿವನನ್ನಾಗಿ ಮಾಡುವ ಶಕ್ತಿ ಇರುವ ನಾನು, ಸಚಿವನಾಗಲು ಲಾಬಿ ಮಾಡುವುದಿಲ್ಲ. ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ ಮಾಡಿದವನು ನಾನು. ಇಲ್ಲಿ ಸಚಿವ ಸ್ಥಾನದ ಲಾಬಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಬೆಳಗಾವಿಯಿಂದ ವಿಶೇಷ ವಿಮಾನದಲ್ಲಿ ಬಂದಿದ್ದ ರಮೇಶ್ ಜಾರಕಿಹೊಳಿಗೆ ಸಹೋದರ ಲಕನ್ ಜಾರಕಿಹೊಳಿ ಸಾಥ್ ನೀಡಿದ್ದರು.

ಹೋರಿಯ ಮೇಲೆಯೂ ಮುಂದಿನ ಸಿಎಂ ಸಿದ್ಧರಾಮಯ್ಯ!

ವಿಜಯಸಾಕ್ಷಿ ಸುದ್ದಿ, ಗದಗ

ಕಾರ ಹುಣ್ಣಿಮೆ ಸಂಭ್ರಮದಲ್ಲಿಯೂ ಕಾಂಗ್ರೆಸ್ ನ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆಯಾಗಿದೆ. ಹೋರಿ ಮೇಲೆ ಮುಂದಿನ ಸಿಎಂ ಸಿದ್ಧರಾಮಯ್ಯ ಎಂದು ಅಭಿಮಾನಿಗಳು ಬರೆದು ಸಂಭ್ರಮಿಸಿದ್ದಾರೆ.
ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕರಿ ಹರಿಯುವ ಸಂಭ್ರಮದಲ್ಲಿ ಈ ದೃಶ್ಯ ಕಂಡು ಬಂದಿದೆ. ಕಾರ ಹುಣ್ಣಿಮೆ ಪ್ರಯುಕ್ತ ಗ್ರಾಮೀಣ ಪ್ರದೇಶದಲ್ಲಿ ಕರಿ ಹರಿಯುವ ಸ್ಪರ್ಧೆ ಆಯೋಜಿಸಲಾಗಿತ್ತು.

ಹೋರಿಗಳಿಗೆ ಬಣ್ಣ ಹಚ್ಚಿ ಅಲಂಕರಿಸಿ ರೈತರು ಓಟಕ್ಕೆ ಹಚ್ಚುತ್ತಾರೆ. ಓಟದಲ್ಲಿ ಯಾವ ಹೋರಿ ಮೊದಲು ಬರುತ್ತದೆಯೋ ಆ ಹೋರಿಗೆ ಪ್ರಶಸ್ತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಬರೆದ ಹೋರಿ ಪ್ರಥಮ ಸ್ಥಾನ ಗಳಿಸಿದೆ. ಈ ಹೋರಿ ಬಸಪ್ಪ ಮಾಯಣ್ಣವರಿಗೆ ಸೇರಿದ್ದು ಎನ್ನಲಾಗಿದೆ.

ಕರಿ ಹರಿಯುವದರಲ್ಲಿ ಮುಂಚೂಣಿಯಲ್ಲಿ ಬಂದ ಸಿದ್ಧರಾಮಯ್ಯ ಹೋರಿ. ಕಾಂಗ್ರೆಸ್ ನ ಸದ್ಯದ ಸಿಎಂ ಚರ್ಚೆ ಸಿದ್ಧರಾಮಯ್ಯರಿಗೆ ವರದಾನವಾಯ್ತಾ? ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಹೈಕಮಾಂಡ್ ಗೆ ದೂರು‌ ಸಲ್ಲಿಸುವ ಮೂಲಕ ಸಿದ್ದರಾಮಯ್ಯ ವರಿಗೆ ಡಿಕೆಶಿ ಲಾಭ ಮಾಡಿಕೊಟ್ಟರಾ? ಸಿದ್ಧರಾಮಯ್ಯ ಮುಂದಿನ ಸಿಎಂ ಆಗಲಿ ಎಂಬ ವಿಷಯಕ್ಕೆ ಡಿಕೆಶಿ ಮತ್ತುಷ್ಟು ಪುಷ್ಠಿ ನೀಡಿದರಾ? ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಧಾರವಾಡ; ಸಂಜೆಯಿಂದ ವಾರಾಂತ್ಯ ಕರ್ಫ್ಯೂ, ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ

0

ವಿಜಯಸಾಕ್ಷಿ ಸುದ್ದಿ, ಧಾರವಾಡ

ಇಂದು ಜೂನ್ 25 ಶುಕ್ರವಾರ ಸಂಜೆ 7 ಗಂಟೆಯಿಂದ ಜೂನ್ 28 ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಜೂನ್ 20 ರಂದು ಹೊರಡಿಸಿದ ಆದೇಶದ ಅನುಬಂಧ (2)ರಲ್ಲಿ ತಿಳಿಸಿರುವಂತೆ ನಾಳೆ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ದಿನಸಿ, ತರಕಾರಿ, ಹಾಲು, ಮಾಂಸಾಹಾರ, ಪ್ರಾಣಿಗಳಿಗೆ ಆಹಾರ ಮತ್ತಿತರ ಅಗತ್ಯವಸ್ತುಗಳು ಮತ್ತು ಮದ್ಯ ಮಾರಾಟಕ್ಕೆ ಅವಕಾಶವಿರುತ್ತದೆ. ಈ ಅವಧಿಯಲ್ಲಿ ಬೀದಿ ಬದಿ ವ್ಯಾಪಾರ ಚಟುವಟಿಕೆಗಳು ನಡೆಯಲಿವೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ನಡೆಯಲಿದೆ.

ಹೋಟೆಲ್‍ಗಳು ಈ ಅವಧಿಯಲ್ಲಿ ಕೇವಲ ಪಾರ್ಸೆಲ್ ಸೇವೆ ನೀಡಬಹುದಾಗಿದೆ. ಹೋಂ ಡೆಲೆವರಿ ವಹಿವಾಟುಗಳಿಗೆ ಅವಕಾಶವಿದೆ. ವ್ಯಾಪಾರಿಗಳು ಕೋವಿಡ್-19 ರ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ತುರ್ತು ಸೇವೆ ನೀಡುವ ಚಟುವಟಿಕೆಗಳು ಹಾಗೂ ಕೈಗಾರಿಕೆ ಸಂಸ್ಥೆಗಳ ಕಾರ್ಯಗಳಿಗೆ ಅವಕಾಶವಿರುತ್ತದೆ. ಟೆಲಿಕಾಂ ಮತ್ತು ಅಂತರ್ಜಾಲ ಸೇವೆ ನೀಡುವ ಸಂಸ್ಥೆಗಳ ಅಗತ್ಯ ಸಿಬ್ಬಂದಿ ಮಾತ್ರ ಸಂಚರಿಸಬಹುದು.

ಉಳಿದವರು ಮನೆಯಿಂದ ಕೆಲಸ ನಿರ್ವಹಿಸಬೇಕು. ರೋಗಿಗಳ ಆರೈಕೆದಾರರು, ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಳ್ಳಲು ಅಗತ್ಯ ದಾಖಲೆಗಳೊಂದಿಗೆ ಉದ್ದೇಶಿತ ಕಾರ್ಯಕ್ಕೆ ತೆರಳಬಹುದು. ಬಸ್, ರೈಲು ಹಾಗೂ ವಿಮಾನಗಳ ಸಂಚಾರ ಇರಲಿದೆ. ಕಡಿಮೆ ಸಂಖ್ಯೆಯಲ್ಲಿ ಬಸ್‍ಗಳು ರಸ್ತೆಗಿಳಿಯಲಿವೆ. ಮಧ್ಯಾಹ್ನ 2 ಗಂಟೆಯ ನಂತರ ಅನಗತ್ಯ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಈಗಾಗಲೇ ಅನುಮತಿ ಪಡೆದಿರುವ ಮದುವೆ ಸಮಾರಂಭಗಳನ್ನು 40 ಕ್ಕಿಂತ ಹೆಚ್ಚು ಜನರು ಸೇರದೆ ಆಯೋಜಿಸಬಹುದು. ಅಂತ್ಯಕ್ರಿಯೆಗಳಲ್ಲಿ ಗರಿಷ್ಠ 5 ಜನ ಮಾತ್ರ ಭಾಗವಹಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಹಾನಗಲ್ ನಲ್ಲಿ ಈಗನಿಂದಲೇ ಶುರುವಾಗಿದೆ ಟಿಕೆಟ್ ಫೈಟ್!?

ವಿಜಯಸಾಕ್ಷಿ ಸುದ್ದಿ, ಹಾವೇರಿ

ಇತ್ತೀಚೆಗಷ್ಟೇ ಬಿಜೆಪಿಯ ಹಿರಿಯ ಶಾಸಕ ಸಿ.ಎಂ. ಉದಾಸಿ ನಿಧನರಾಗಿದ್ದು, ಅವರ ಸಾವಿನಿಂದಾಗಿ ಹಾನಗಲ್ ವಿಧಾನಸಭಾ ಕ್ಷೇತ್ರ ತೆರವುಗೊಂಡಿದೆ. ಹೀಗಾಗಿ ಟಿಕೆಟ್ ಫೈಟ್ ಈಗನಿಂದಲೇ ಶುರುವಾಗಿದೆ.
ಉಪಚುನಾವಣೆ ಘೋಷಣೆಗೂ ಮುನ್ನವೆ ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಹಾವೇರಿ ಜಿಲ್ಲೆಯಲ್ಲಿನ ಹಾನಗಲ್ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ಗುದ್ದಾಟ ಪ್ರಾರಂಭವಾಗಿದೆ.

ಮಾಜಿ ಸಚಿವ ಮನೋಹರ ತಹಶೀಲ್ದಾರ‌ ನೇತೃತ್ವದಲ್ಲಿ ನಿನ್ನೆ ಕೆಲವು ಕಾಂಗ್ರೆಸ್ ಕಾರ್ಯರ್ತರು ಹಾಗೂ ಮುಖಂಡರ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ಹಾನಗಲ್ ತಾಲೂಕಿನವರಿಗೆ ಪಕ್ಷದ ಟಿಕೆಟ್ ನೀಡುವಂತೆ ಸಭೆಯಲ್ಲಿ ಒತ್ತಾಯ ಮಾಡಲಾಗಿದೆ.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಗೆ ಪಕ್ಷದ ಟಿಕೆಟ್‌ ನೀಡದಂತೆ ಪರೋಕ್ಷವಾಗಿ ಸಭೆಯಲ್ಲಿ ಎಚ್ಚರಿಸಲಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ತಾಲೂಕಿನ ಯಾರಿಗಾದರೂ ಟಿಕೆಟ್ ನೀಡುವಂತೆ ಗ್ರಾಮ ಮಟ್ಟದಿಂದ ಹೋರಾಟ ಮಾಡಲು ನಿರ್ಧಾರ ಮಾಡಲಾಗಿದೆ.

ತಾಲೂಕಿನವರನ್ನು ಬಿಟ್ಟು ಪಕ್ಷವು ಬೇರೆಯವರಿಗೆ ಟಿಕೆಟ್‌ ನೀಡಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಲಾಯಿತು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದು ಹೈಕಮಾಂಡ್ ಗೆ ಎಚ್ಚರಿಸಲಾಗಿದೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸಚಿವ ಮನೋಹರ ತಹಸೀಲ್ದಾರ್ ಗೆ ಪಕ್ಷವು ಟಿಕೆಟ್ ನೀಡಿರಲಿಲ್ಲ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಶ್ರೀನಿವಾಸ್ ಮಾನೆಗೆ ಟಿಕೆಟ್ ನೀಡಲಾಗಿತ್ತು. ಆದರೆ, ಅವರು ಸೋಲು ಕಂಡಿದ್ದರು. ಸೋಲಿನ ನಂತರವೂ ಮಾನೆ, ಕ್ಷೇತ್ರದಲ್ಲಿ ಮನೆ ಮಾಡಿಕೊಂಡು ಸಂಘಟನೆಯಲ್ಲಿ ತೊಡಗಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಮನೋಹರ ತಹಶೀಲ್ದಾರ ಸದ್ಯ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಕಳೆದ ಬಾರಿ ಸೋತಿರುವ ಶ್ರೀನಿವಾಸ್ ಮಾನೆ ಹಾಗೂ ಹಲವು ಮುಖಂಡರು ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ.

ಹಂಪಿ ವೀಕ್ಷಣೆಗೆ ಅವಕಾಶ; ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿರುವ ಪ್ರವಾಸಿಗರು

ವಿಜಯಸಾಕ್ಷಿ ಸುದ್ದಿ, ವಿಜಯನಗರ

ಕೊರೊನಾ ಹಾವಳಿ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಹಲವು ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಣೆ ಮಾಡಿದೆ. ಹೀಗಾಗಿ ಪ್ರವಾಸಿಗರು ಹಂಪಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿಯೇ ಕಳೆದ ಎರಡು ತಿಂಗಳುಗಳಿಂದ ಹಂಪಿ ದೇವಾಲಯ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳ ವೀಕ್ಷಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.

ಸದ್ಯ ತೆರವುಗೊಂಡಿರುವುದರಿಂದಾಗಿ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ಹಂಪಿ ಕ್ಷೇತ್ರಕ್ಕೆ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸುತ್ತಿದ್ದಾರೆ. ಬೆಳಿಗ್ಗೆ 6 ರಿಂದ ಸಂಜೆ 5ರ ವರೆಗೆ ಸ್ಮಾರಕಗಳ ವೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಜನರು ಬೆಳಿಗ್ಗೆಯೇ ಹಂಪಿಯತ್ತ ದೌಡಾಯಿಸುತ್ತಿದ್ದಾರೆ.

ಹಂಪಿಯಲ್ಲಿನ ವಿಶ್ವಪ್ರಸಿದ್ಧ ಸ್ಮಾರಕಗಳಾದ ವಿಜಯವಿಠ್ಠಲ ದೇವಸ್ಥಾನ, ಆವರಣದಲ್ಲಿನ ಸಪ್ತಸ್ವರ ಮಂಟಪ, ಕಲ್ಲಿನ ರಥ, ರಾಣಿ ಸ್ನಾನಗೃಹ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪ, ಕಡಲೆ ಕಾಳು ಗಣಪ ಸೇರಿದಂತೆ ಇನ್ನಿತರ ಪ್ರದೇಶಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದ್ದಾರೆ. ಹೀಗಾಗಿ ಸ್ಮಾರಕಗಳ ಪ್ರವೇಶ ದ್ವಾರದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಭದ್ರತಾ ಸಿಬ್ಬಂದಿ ಮಾಸ್ಕ್‌ ಧರಿಸಿದವರಿಗೆ ಮಾತ್ರ ಒಳ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದು, ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಒಬ್ಬೊಬ್ಬರನ್ನೇ ಒಳಗೆ ಬಿಡುತ್ತಿದ್ದಾರೆ.

ನಾಲ್ಕು ಕಡೆಗಳಲ್ಲಿ ಟಿಕೆಟ್‌ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗಬಾರದಂತೆ ಆನ್‌ ಲೈನ್‌ ಟಿಕೆಟ್ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ.