ವಿಜಯಸಾಕ್ಷಿ ಸುದ್ದಿ, ಗಂಗಾವತಿ
ಯಾರೇ ಮುಂದಿನ ಸಿಎಂ ಆಗಲಿ, ಬಿಡಲಿ, ಮೊದಲು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಈ ವಿಷಯದಲ್ಲಿ ಬೇಜವಾಬ್ದಾರಿ ಹೇಳಿಕೆ ಕೊಡೋದನ್ನ ನಿಲ್ಲಿಸಲಿ ಎಂದು ಮಾಜಿ ಎಂಎಲ್‌ಸಿ ಎಚ್.ಆರ್ ಶ್ರೀನಾಥ್ ಹೇಳಿದರು.
ಜಿಲ್ಲೆಯ ಗಂಗಾವತಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಸಿಎಂ ಆಗಬೇಕು, ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಹೇಳಿಕೆ ನೀಡ್ತಾ ಇದ್ರೆ, ಇತ್ತ ಬಿಜೆಪಿಯವರು ಸಿಎಂ ಬದಲಾವಣೆಗಾಗಿ ಕಿತ್ತಾಟ ನಡೆಸ್ತಾ ಇದ್ದಾರೆ. ಮೊದಲು ಶಾಸಕರು ಜನಸೇವೆಯ ಕಾಳಜಿ ತೋರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸದ್ಯಕ್ಕೆ ಜೆಡಿಎಸ್ ನನ್ನ ಪಕ್ಷ; ಮುಂದಿನ ಬೆಳವಣಿಗೆಗಳ ಬಗ್ಗೆ ಗೊತ್ತಿಲ್ಲ
ಇದೇ ವೇಳೆ ನೀವು ಕಾಂಗ್ರೆಸ್‌ಗೆ ಹೋಗ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಚ್.ಆರ್ ಶ್ರೀನಾಥ್, ನಾನು ಹಾಗೂ ನಮ್ಮ ತಂದೆಯವರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ, ಇಂದಿರಾಗಾಂಧಿಯವರ ಗರಡಿ ಮನೆಯಲ್ಲಿ ಬೆಳೆದಿದ್ದೇವೆ. ಆದರೆ ಇದೀಗ ನಾನು ಜೆಡಿಎಸ್ ಪಕ್ಷದಲ್ಲಿ ಇದ್ದು, ಮುಂದೆ ಯಾವ ರೀತಿ ಬೆಳವಣಿಗೆ ಆಗುತ್ತೆ ಗೊತ್ತಿಲ್ಲ. ಆದರೆ ಸದ್ಯ ಜೆಡಿಎಸ್ ಪಕ್ಷದ ಸಂಘಟನೆ ಮಾಡುತ್ತೀದ್ದೇವೆ ಎಂದು ಕಾಂಗ್ರೆಸ್‌ಗೆ ಹೋಗುವ ಸುಳಿವು ನೀಡಿದರು.
ಅನ್ಸಾರಿ ಎದುರಾಗಬಹುದು ಇಲ್ಲವೇ ಇಬ್ಬರೂ ಒಂದಾಗಬಹುದು
ಅನ್ಸಾರಿಯವರು ಜೆಡಿಎಸ್‌ಗೆ ಬಂದ್ರೆ ಸ್ವಾಗತ ಮಾಡ್ತಿರಾ ಎಂದಾಗ ಪ್ರತಿಕ್ರಿಯಿಸಿದ ಎಚ್.ಆರ್ ಶ್ರೀನಾಥ್, ಜೆಡಿಎಸ್ ಸ್ವಾಗತ ಮಾಡೋದು ಬಿಡೋದು ದೇವೆಗೌಡ್ರು ನಿರ್ಧಾರ ಮಾಡ್ತಾರೆ. ಆದ್ರೆ ಮುಂದಿನ ಚುನಾವಣೆಯಲ್ಲಿ ನನಗೆ ಅನ್ಸಾರಿ ಎದುರಾಗಬಹುದು ಅಥವಾ ನಾವಿಬ್ಬರು ಒಂದಾಗಬಹುದು. ಆದ್ರೆ ಸದ್ಯ ಅನ್ಸಾರಿ ಹಾಗೂ ನನ್ನ ನಡುವೆ ಹೊಂದಾಣಿಕೆ ಸರಿ ಇಲ್ಲ. ಈ ಹಿಂದೆ ಕಾಂಗ್ರೆಸ್‌ಗೆ ಅನ್ಸಾರಿ ಬಂದಾಗ ನನಗೆ ಮಾತು ಕೊಟ್ಟು ಇಕ್ಬಾಲ್ ಅನ್ಸಾರಿ ತಪ್ಪಿದ್ರು. ಇದರಿಂದ ಅವರನ್ನು ನಂಬೋದು ಅಸಾಧ್ಯ ಎಂದರು.
ಸಿಎಂ ಯಾರದ್ರೇನು? ಶಾಸಕರು ಬೇಜವಾಬ್ದಾರಿ ಹೇಳಿಕೆ ಕೊಡೋದನ್ನ ನಿಲ್ಲಿಸಲಿ: ಎಚ್.ಆರ್ ಶ್ರೀನಾಥ್
ಬಂಧನದ ಭೀತಿಯಲ್ಲಿ ಸಿಡಿ ಲೇಡಿ!
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಸಿಡಿಯಲ್ಲಿನ ಯುವತಿಯ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಎಸ್ ಐಟಿ ತಂಡ ಯುವತಿಯನ್ನು ಬಂಧಿಸಲು ಮುಂದಾಗಿದ್ದರಿಂದ, ಬಂದಿಸದಂತೆ ನಿರ್ದೇಶಿಸಬೇಕು ಎಂದು ಸಂತ್ರಸ್ತ ಯುವತಿ ಹೈಕೋರ್ಟ್ ಗೆ ಮನವಿ ಮಾಡಿದ್ದಳು. ಇದೀಗ ಯುವತಿಯ ಮನವಿಯನ್ನು ಹೈಕೋರ್ಟ್ ನಿರಾಕರಿಸಿದೆ. ಹೀಗಾಗಿ ಯುವತಿಗೆ ಬಂಧನದ ಬೀತಿ ಎದುರಾಗಿದೆ.
ರಮೇಶ್ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ದೂರು ದಾಖಲಿಸಲಾಗಿತ್ತು. ಆ ದೂರು ರದ್ದುಪಡಿಸುವಂತೆ ಕೋರಿ ಯುವತಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಈ ವೇಳೆ ಯುವತಿ ಪರ ವಕೀಲ ಸಂಕೇತ್ ಏಣಗಿ ವಾದ ಮಂಡಿಸಿ, ಅತ್ಯಾಚಾರ ಆರೋಪ ಸಂಬಂಧ ಯುವತಿ ದಾಖಲಿಸಿದ ದೂರಿನ ಸಂಬಂಧ ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ತನಿಖಾಧಿಕಾರಿಗಳು ಬಂಧಿಸಿಲ್ಲ. ಆದರೆ, ರಮೇಶ್ ಜಾರಕಿಹೊಳಿ ದಾಖಲಿಸಿರುವ ದೂರಿನ ಸಂಬಂಧ ಯುವತಿ ಬಂಧಿಸುವ ಸಾಧ್ಯತೆಯಿದೆ. ಹೀಗಾಗಿ ಆಕೆಗೆ ಬಂಧನದ ಭೀತಿಯಿದ್ದು, ಅರ್ಜಿದಾರ ಯುವತಿಯನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಮೇಶ್ ಜಾರಕಿಹೊಳಿ ದಾಖಲಿಸಿರುವ ದೂರನ್ನು ರದ್ದುಪಡಿಸಲು ಕೋರಿ ಸಿಆರ್‌ಪಿಸಿ 482 ಅಡಿ ಸಲ್ಲಿಸಿದ ಅರ್ಜಿ ಇದಾಗಿದೆ. ಹಾಗಾಗಿ, ಅರ್ಜಿದಾರಳನ್ನು ಬಂಧಿಸದಂತೆ ಈ ಅರ್ಜಿಯಲ್ಲಿ ಸೂಚಿಸಲಾಗುವುದಿಲ್ಲ. ಅಗತ್ಯವಿದ್ದರೆ ನಿರೀಕ್ಷಣಾ ಜಾಮೀನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ಮೂಲಕ ಯುವತಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಯಿತು.
ಹು-ಧಾ ಪಾಲಿಕೆ ಚುನಾವಣೆ ಹೊಸ ಅಲೆ ಸೃಷ್ಟಿಸಲು ಸಿದ್ಧ:ಆಮ್ ಆದ್ಮಿ
ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ರಾಜ್ಯ ರಾಜಕಾರಣದಲ್ಲಿ ಆಮ್ ಆದ್ಮಿ ಪಕ್ಷವು ಹೊಸ ಸಂಚಲನ ಸೃಷ್ಟಿಸುವ ಉದ್ದೇಶದಿಂದ ಈ ಭಾರಿ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕೆಲಸವನ್ನು ಅರವಿಂದ ಕೇಜ್ರಿವಾಲ್ ನಿರ್ದೇಶನದ ಮೇರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮುಖಂಡರಾದ ಪೃಥ್ವಿರಾಜ್ ರೆಡ್ಡಿ ತಿಳಿಸಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯ ಅಂದರೇ ಸರ್ಕಾರದ ಕಣ್ಣಿಗೆ ಬೀಳುವುದು ಬೆಂಗಳೂರು ಮಾತ್ರ ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಹಿತದೃಷ್ಟಿಯಿಂದ ಈ ಬಾರಿ ಪಾಲಿಕೆ ಚುನಾವಣೆಯ ಮೂಲಕ ರೂಪರೇಷಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಅಭ್ಯರ್ಥಿಗಳನ್ನು ಕೂಡ ಅಂತಿಮಗೊಳಿಸಲಾಗುತ್ತಿದೆ ಎಂದರು.
ಹುಬ್ಬಳ್ಳಿ- ಧಾರವಾಡ ಮಹಾನಗರಗಳನ್ನು ವಿಶ್ವದರ್ಜೆಯ ಮಾದರಿಯ ನಗರಗಳನ್ನಾಗಿ ಮಾಡುವ ಪರಿಕಲ್ಪನೆಯೊಂದಿಗೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತರೆ ಪಕ್ಷಗಳ ಹಾಗೇ ನಾವು ಬ್ಯಾಂಕ್ ಬ್ಯಾಲೆನ್ಸ ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲಾ, ಪಕ್ಷದಿಂದ ಉತ್ತಮವಾದ, ಸಮರ್ಥ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸುತ್ತೆವೆ ಎಂದು ಅವರು ಹೇಳಿದರು
ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಬರ್ಬರ ಹತ್ಯೆ!
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಬಿಬಿಎಂಪಿ ಮಾಜಿ ಕಾಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಛಲವಾದಿ ಪಾಳ್ಯದ ಫವರ್ ಗಾರ್ಡನ್ ನಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ರೇಖಾರನ್ನು ಮನೆಯಿಂದ ಹೊರ ಕರೆದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ, ಮಾರ್ಗಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. ಸದ್ಯ ಕೊಲೆಯಾಗಿರುವ ರೇಖಾ 2 ಬಾರಿ ಬಿಜೆಪಿಯಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದರು.
2018ರ ಫೆಬ್ರವರಿ 8ರಂದು ರೇಖಾ ಪತಿ ಕದಿರೇಶ್ ಅವರನ್ನು ಮಲ್ಲೇಶ್ವರಂನ ದೇವಸ್ಥಾನದ ಬಳಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಶೋಬನ್ ಗ್ಯಾಂಗ್, ಕದಿರೇಶ್ ಅವರನ್ನು ಕೊಚ್ಚಿ ಕೊಲೆ ಮಾಡಿತ್ತು. ಸದ್ಯ ರೇಖಾ ಅವರ ಮೇಲೆಯೂ ಅದೇ ಗ್ಯಾಂಗ್ ಹಲ್ಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಬೆಲೆ ಏರಿಕೆ ನಿರ್ಧಾರ ಖಂಡಿಸಿ ಪ್ರತಿಭಟನೆ
ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಜೂ.24-ಇಂಧನ ಬೆಲೆ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಗಾಯದ ಮೇಲೆ ಬರೆ ಎಳೆಯುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಜೈ ಭೀಮ ಯುವ ಶಕ್ತಿ ಸೇನಾ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ ಸಂಕಷ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸದೇ, ಇಂಧನ ದರ ಹಾಗೂ ಅಗತ್ಯ ವಸ್ತುಗಳ ದರ ಏರಿಕೆಯ ಅಮಾನವೀಯವಾಗಿದೆ. ಈ ನಡೆಯನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕೋವಿಡ್ ಲಾಕ್ ಡೌನ್ ಕಾರಣಕ್ಕೆ ತಮ್ಮ ಉದ್ಯೋಗ, ಆದಾಯ ಕಳೆದುಕೊಂಡಿರುವ ಜನರಿಗೆ ಜೀವನೋಪಾಯವೇ ಕಷ್ಟವಾದ ಸಮಯದಲ್ಲಿ ಬೆಲೆ ಏರಿಕೆ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಾನಿರತ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ನಷ್ಟ ಸರಿದೂಗಿಸಲು ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚಗಳನ್ನು ತಡೆಗಟ್ಟುವ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು. ಕೋವಿಡ್ ಪರಿಹಾರದ ಹೆಸರಿನಲ್ಲಿ ಒಂದು ಕೈಯಲ್ಲಿ ಪುಡಿಗಾಸನ್ನು ನೀಡಿ ಇನ್ನೊಂದು ಕೈಯಲ್ಲಿ ಈ ರೀತಿ ವಿದ್ಯುತ್, ಪೆಟ್ರೋಲ್ ಗಳ ಮೂಲಕ ಸುಲಿಗೆ ಮಾಡುವುದು ಜನಪರ ಸರ್ಕಾರದ ಲಕ್ಷಣವೇ..? ವಿದ್ಯುತ್ ದರ ಏರಿಕೆಯ ಈ ಜನವಿರೋಧಿ ತೀರ್ಮಾನವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕೆಂದು ಒತ್ತಾಯಿಸಿದರು.
ಟೆಸ್ಟ್ ವಿಶ್ವ ಚಾಂಪಿಯನ್ ಶಿಪ್ ಗೆದ್ದ ತಂಡಕ್ಕೆ ಎಷ್ಟು ಬಹುಮಾನದ ಮೊತ್ತ ಸಿಗಲಿದೆ?
ವಿಜಯಸಾಕ್ಷಿ ಸುದ್ದಿ, ನವದೆಹಲಿ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಲ್ಲಿ ನ್ಯೂಜಿಲೆಂಡ್ ಗೆದ್ದು ಬೀಗಿದೆ. ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು ಆದರೆ, ಮಳೆ ಎಲ್ಲವನ್ನೂ ಹಾಳು ಮಾಡಿದೆ. ನಿರಂತರ ಮಳೆಯಿಂದಾಗಿ ಬಹಳಷ್ಟು ಆಟ ಹಾಳಾಯಿತು. ಈ ಕಾರಣಕ್ಕಾಗಿ, ಈ ಪಂದ್ಯಕ್ಕೆ ಮೀಸಲು ದಿನವನ್ನು ಐಸಿಸಿ ಇಟ್ಟುಕೊಂಡಿತ್ತು. ಇದರಲ್ಲಿ ಭಾರತ ಸೋತಿದೆ.
ಈ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಹುಮಾನದ ಮೊತ್ತವನ್ನು ಘೋಷಿಸಿತ್ತು. ಫೈನಲ್ ನಲ್ಲಿ ಗೆಲ್ಲುವ ತಂಡವು 1.6 ಮಿಲಿಯನ್ ಯುಎಸ್ ಡಾಲರ್ ಅಂದರೆ ರೂ. 11.71 ಕೋಟಿ ಬಹುಮಾನ ಪಡೆಯಲಿದೆ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೆಫ್ ಅಲಾರ್ಡಿಸ್ ಹೇಳಿದ್ದಾರೆ. ರನ್ನರ್ ಅಪ್ ತಂಡಕ್ಕೆ ಎಂಟು ಲಕ್ಷ ಡಾಲರ್ ಅಂದರೆ ರೂ. 5.85 ಕೋಟಿ ನೀಡಲಾಗುತ್ತದೆ.
ಡ್ರಾ ಆದಲ್ಲಿ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುವುದು ಮತ್ತು ವಿಜೇತ ತಂಡಕ್ಕೆ ಬಹುಮಾನದ ಮೊತ್ತವನ್ನು ಸಮಾನವಾಗಿ ವಿಂಗಡಿಸಲಾಗುವುದು ಎಂದು ಐಸಿಸಿ ಹೇಳಿತ್ತು. ವಿಜೇತ ತಂಡಕ್ಕೆ ಟ್ರೋಫಿಯಾಗಿ ಮೇಸ್ ಆಫ್ ದಿ ಟೆಸ್ಟ್ ಚಾಂಪಿಯನ್‌ಶಿಪ್ ನೀಡಲಾಗುವುದು. ಈ ಮೇಸ್ ಅನ್ನು ಪ್ರತಿ ವರ್ಷ ಟೆಸ್ಟ್ ಶ್ರೇಯಾಂಕದಲ್ಲಿ ಪ್ರಥಮ ಶ್ರೇಯಾಂಕಿತ ತಂಡಕ್ಕೆ ಹಸ್ತಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಈ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸುವ ಉಳಿದ ತಂಡಗಳಿಗೂ ಐಸಿಸಿ ಬಹುಮಾನ ನೀಡಲು ಮುಂದಾಗಿದೆ. ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕೆ ಸುಮಾರು ರೂ. 3.29 ಕೋಟಿ, ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಗೆ ರೂ. 2.56 ಕೋಟಿ ನೀಡಲಾಗುವುದು.
5ನೇ ಶ್ರೇಯಾಂಕದ ತಂಡಕ್ಕೆ ರೂ. 1.46 ಕೋಟಿ, ಉಳಿದ ನಾಲ್ಕ ತಂಡಗಳಿಗೆ ರೂ. 73 ಲಕ್ಷ ನೀಡಲಾಗುವುದು ಎಂದು ಐಸಿಸಿ ಹೇಳಿತ್ತು.
ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಸಿಎಂ ಫೈಟ್!
ವಿಜಯಸಾಕ್ಷಿ ಸುದ್ದಿ ಬೆಂಗಳೂರು
ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ವಿಷಯಗಳು ಸ್ಫೋಟಗಳೊಳ್ಳುತ್ತಿವೆ. ಚುನಾವಣೆ ಗೆಲ್ಲುವ ಮೊದಲೇ ಕೈ ಪಾಳಯದಲ್ಲಿ ಮುಂದಿನ ಸಿಎಂ ಯಾರು ಎಂಬ ಕಾದಾಟ ಶುರುವಾಗಿದೆ.
ಬಿಜೆಪಿ ಪಾಳಯದಲ್ಲಿ ನಾಯಕತ್ವದ ಫೈಟ್ ಶುರುವಾದ ಬೆನ್ನಲ್ಲಿಯೇ ಕಾಂಗ್ರೆಸ್ ನಲ್ಲಿ ಕೂಡ ಶುರುವಾಗಿದೆ. ಕಾಂಗ್ರೆಸ್ ನಲ್ಲಿಯೂ ಚುನಾವಣೆಗೂ ಮುನ್ನ ಸಿಎಂ ಅಭ್ಯರ್ಥಿ ಯಾರ ಪ್ರಶ್ನೆ ಮೂಡಿದೆ.
ಬಿಜೆಪಿಯಲ್ಲಿ ಇದೇ ರೀತಿ ಫೈಟ್ ಶುರುವಾಗಿತ್ತು. ಆದರೆ, ಹೈಕಮಾಂಡ್ ಮಧ್ಯ ಪ್ರವೇಶಿಸಿ ತಣ್ಣಗೆ ಮಾಡಿದೆ. ಇದರ ಮಧ್ಯೆ ಕಾಂಗ್ರೆಸ್ ನಲ್ಲಿ ಕೂಡ ನಾಯಕತ್ವದ ಗುದ್ದಾಟ ನಡೆದಿದೆ. ಹೈಕಮಾಂಡ್ ಎಂಟ್ರಿ ಬಳಿಕವೂ ತಣ್ಣಗಾಗಬೇಕಿದ್ದ ಬಣ ಬಡಿದಾಟ ಮತ್ತಷ್ಟು ಜೋರಾಗಿದೆ. ಸಿದ್ದರಾಮಯ್ಯ ಬಣದ ಶಾಸಕರು ಸಿದ್ದು ಸಿಎಂ ಜಪವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಸಿದ್ದರಾಮಯ್ಯ ಪರ ದಿನಕ್ಕೊಬ್ಬರು ಸದ್ದು ಮಾಡುತ್ತಿದ್ದಾರೆ. ಶಾಸಕ ಜಮೀರ್, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದರು. ಇಂದು ಹರಿಹರ ಶಾಸಕ ರಾಮಪ್ಪ ಮತ್ತು ಅಖಂಡ ಶ್ರೀನಿವಾಸಮೂರ್ತಿ ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಅದರಲ್ಲಿಯೂ ಹರಿಹರ ಶಾಸಕ ರಾಮಪ್ಪ ಮಾತನಾಡಿ, ಡಿಕೆಶಿಗೆ ಇನ್ನೂ ವಯಸ್ಸಿದೆ, ಮುಂದೆ ಸಿಎಂ ಆಗೋ ಅವಕಾಶ ಇದೆ. 2023ಕ್ಕೆ ಸಿದ್ದರಾಮಯ್ಯನೇ ಸಿಎಂ ಆಗ್ಬೇಕು ಎಂದಿದ್ದಾರೆ.
ಇತ್ತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇಸರ ಹೊರಹಾಕಿದ್ದಾರೆ. ಸಿಎಂ ಆಗಲು ನನಗೇನು ಅರ್ಜೆಂಟ್ ಇಲ್ಲ. ಇದನ್ನು ನಾಯಕರು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸಂಸದ ಡಿಕೆ ಸುರೇಶ್ ಅಂತೂ ಈಗ ಮಾತಾಡ್ತಿರೋರೆಲ್ಲಾ ಅಧಿಕಾರಕ್ಕಾಗಿ ಪಕ್ಷಕ್ಕೆ ಬಂದವರು ಎಂದು ಸಿದ್ದು ಬಣಕ್ಕೆ ಟಾಂಗ್ ಕೊಟ್ಟಿದ್ದಾರೆ.
ನಿಂತಿಲ್ಲ ಅಕ್ಕಿ ಅಕ್ರಮ ದಂಧೆ; 1.81ಲಕ್ಷ ರೂ.ಮೌಲ್ಯದ ಅಕ್ಕಿ ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಅಕ್ಕಿ ಅಕ್ರಮ ದಂಧೆ ಜಿಲ್ಲೆಯಲ್ಲಿ ಇನ್ನೂ ನಿಂತಿಲ್ಲ ಎಂಬುದಕ್ಕೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್‌ನಲ್ಲಿ ಬುಧವಾರ ನಡೆದ ಘಟನೆ ಸಾಕ್ಷಿಯಾಗಿದೆ.
ಖಚಿತ ಮಾಹಿತಿ ಮೇರೆಗೆ ಗಂಗಾವತಿ ತಹಶೀಲ್ದಾರ ನಾಗರಾಜ, ಆಹಾರ ನಿರೀಕ್ಷಕ ಎಚ್.ಐ.ಬಗಲಿ ಸೇರಿದಂತೆ ಇತರ ಅಧಿಕಾರಿಗಳು ದಾಳಿ ನಡೆಸಿ ಸುಮಾರು 1.81 ಲಕ್ಷ ರೂಪಾಯಿ ಮೌಲ್ಯದ 82.70 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಐಚರ್ ವಾಹನವನ್ನು ಸುಪರ್ದಿಗೆ ತೆಗೆದುಕೊಂಡಿರುವ ಅಧಿಕಾರಿಗಳು ವಾಹನವು ವಿಶ್ವನಾಥ ಗಂಗಾವತಿ ಎಂಬುವವರಿಗೆ ಸೇರಿದ್ದು ಎಂದು ಪತ್ತೆ ಮಾಡಿದ್ದಾರೆ. ವಾಹನದ ಚಾಲಕ ಮೆಹಬೂಬ್ ಪಾಷಾ ಮತ್ತು ರಫೀ ಖಾನ್ ಪರಾರಿಯಾಗಿದ್ದು, ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವತಃ ಎಸ್ಪಿ, ಡಿಸಿ ಕೆಲ ದಿನಗಳ ಹಿಂದೆ ಅಕ್ಕಿ ಅಕ್ರಮವನ್ನು ಬಯಲಿಗೆಳೆದಿದ್ದರು. ಆದರೂ ಅಕ್ರಮಕ್ಕೆ ಕಡಿವಾಣ ಬೀಳದಿರುವುದು ಅಕ್ರಮದ ಕಬಂಧಬಾಹುಗಳು ಎಲ್ಲಿಯವರೆಗೆ ಬೆಳೆದಿರಬಹುದು ಎಂಬುದು ಊಹೆಗೆ ನಿಲುಕದ ಸಂಗತಿಯಾಗಿದೆ.
ಕೊರೊನಾ; ಜಿಲ್ಲೆಯಲ್ಲಿ ತೀವ್ರ ಇಳಿಕೆ ಕಂಡ ಸೋಂಕು!
ವಿಜಯಸಾಕ್ಷಿ ಸುದ್ದಿ, ಗದಗ
ಗದಗ ಜಿಲ್ಲೆಯಲ್ಲಿ ಬುಧವಾರ 15 ಜನರಿಗೆ ಸೋಂಕು ಕಾಣಿಸಿಕೊಂಡಿದೆ.
ಇಂದು 15 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 25664 ಏರಿಕೆ ಕಂಡಿದೆ.
ಗದಗ ನಗರ ಹಾಗೂ ತಾಲೂಕಿನಲ್ಲಿ -06, ಮುಂಡರಗಿ-01, ನರಗುಂದ-03, ರೋಣ-02, ಶಿರಹಟ್ಟಿ-03, ಹೊರಜಿಲ್ಲೆಯ-00 ಸೇರಿದಂತೆ 15 ಪ್ರಕರಣಗಳು ದೃಢಪಟ್ಟಿವೆ.
ಬುಧವಾರವೂ ಕೋವಿಡ್ ನಿಂದ ಯಾವುದೇ ಸಾವು ಸಂಭವಿಸಿದ ಕುರಿತು ವರದಿಯಾಗಿಲ್ಲ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದಾಗಿ 294 ಜನರು ಮೃತಪಟ್ಟಿದ್ದಾರೆ.
ಇಂದು 28 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 25110 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.
ಇಂದು ಜಿಲ್ಲೆಯಲ್ಲಿ 260 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 75 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ರೈತರಿಗೆ ಬೆಳೆ ವಿಮೆ ಪಾವತಿಗೆ ಸಹಕರಿಸಿ; ಜಿಲ್ಲಾಧಿಕಾರಿ ಸೂಚನೆ
ವಿಜಯಸಾಕ್ಷಿ ಸುದ್ದಿ, ಗದಗ
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮಾ ಪಾವತಿಸುವ ರೈತರಿಗೆ ಬೆಳೆ ವಿಮೆ ಕಂತು ಪಾವತಿಸಲು ಸಮರ್ಪಕ ಮಾಹಿತಿ ಒದಗಿಸುವುದರೊಂದಿಗೆ ವಿಮೆ ಮೊತ್ತ ಪಾವತಿಗೆ ಕೃಷಿ ಇಲಾಖೆ ಹಾಗೂ ಬ್ಯಾಂಕ್ ಅಧಿಕಾರಿಗಳು ಸೂಕ್ತ ಸಹಕಾರ ಒದಗಿಸಬೇಕೆಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲೆಯಲ್ಲಿ ಮುಂಗಾರು 2021 ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರನ್ನು ನೋಂದಣಿ ಮಾಡುವಲ್ಲಿ ಕಡ್ಡಾಯವಾಗಿ ರೈತರಿಂದ ಲಿಖಿತ ರೂಪದಲ್ಲಿ ಅರ್ಜಿ ಮತ್ತು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳಬೇಕು. ಈ ಯೋಜನೆಯಲ್ಲಿ ಬೆಳೆ ಸಮೀಕ್ಷೆ ತಂತ್ರಾಂಶದೊಂದಿಗೆ ತಾಳೆ ಮಾಡಿ, ಬಿತ್ತಿದ ಬೆಳೆಯನ್ನು ಬೆಳೆ ವಿಮೆ ಯೋಜನೆಯಲ್ಲಿ ನೋಂದಾಯಿಸಬೇಕು ಹಾಗೂ ಇದರ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದರು.
ಯಾವುದೇ ಕಾರಣಕ್ಕೂ ರೈತರಿಂದ ನಿಗದಿಗಿಂತ ಹೆಚ್ಚಿನ ದರವನ್ನು ಸಾರ್ವಜನಿಕ ಸೇವಾ ಕೇಂದ್ರದವರು ಪಡೆದುಕೊಳ್ಳಬಾರದು. ರೈತರು ಸಲ್ಲಿಸಿದ ಅರ್ಜಿಗಳನ್ನು ಕೊನೆಯ ದಿನಾಂಕದವರೆಗೆ ಕಾಯದೆ ಅವರು ಅರ್ಜಿ ಸಲ್ಲಿಸಿದ ದಿನವೇ ತಂತ್ರಾಂಶದಲ್ಲಿ ಅಳವಡಿಸಲು ಮುಂದಾಗಬೇಕು. ಜಿಲ್ಲೆಯ ರೈತರಿಗೆ ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳ ವಿತರಣೆಯಾಗದಂತೆ ಕ್ರಮ ವಹಿಸಬೇಕು. ಈ ಕುರಿತು ಕೃಷಿ ವಿಚಕ್ಷಣಾ ದಳದ ಅಧಿಕಾರಿಗಳು ಕಾಲ ಕಾಲಕ್ಕೆ ತಪಾಸಣೆ ನಡೆಸಿ ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಮಾರಾಟ ಮಾಡುವವರ ಹಾಗೂ ಕಳಪೆ ಬಿತ್ತನೆ ಬೀಜ ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ನೂಕುನುಗ್ಗಲು ತಪ್ಪಿಸಿ
ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ನೂಕುನುಗ್ಗಲು ಆಗದಂತೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆಯಾಗದಂತೆ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ವಿತರಣೆಯಾಗುವಂತೆ ಸೂಕ್ತ ಕ್ರಮ ವಹಿಸಬೇಕೆಂದು ಅವರು ತಿಳಿಸಿದರು.
ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೀಟನಾಶಕಗಳ ದಾಸ್ತಾನು ವಿವರಗಳನ್ನು ಪ್ರರ್ದಶಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಪ್ರಸಕ್ತ ಸಾಲು ಮತ್ತು ಹಂಗಾಮಿನಲ್ಲಿ ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ / ಪಡೆಯದ ರೈತರು ಸದರಿ ಯೋಜನೆಯಡಿ ಭಾಗವಹಿಸಬಹುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ, ಕಂದಾಯ ರಶೀದಿ ಮತ್ತು ಆಧಾರ್ ಸಂಖ್ಯೆ ನೀಡಬೇಕು. ಬ್ಯಾಂಕನಲ್ಲಿ ಬೆಳೆ ಸಾಲ ಮಂಜೂರಾದ ಎಲ್ಲ ರೈತರನ್ನು ಕಡ್ಡಾಯವಾಗಿ ಈ ಯೋಜನೆಯಲ್ಲಿ ಒಳಪಡಿಸಲಾಗುವುದು. ರೈತರು ಬೆಳೆ ವಿಮೆಯಡಿ ನೋಂದಾಯಿಸಲು ಕೊನೆಯ ದಿನಾಂಕ ಹೆಸರು (ಮಳೆ ಆಶ್ರಿತ) ಬೆಳೆಗೆ ಜುಲೈ. 15, ಇನ್ನುಳಿದ ಬೆಳೆಗೆ ಜು.31 ಆಗಿದ್ದು, ಸೂರ್ಯಕಾಂತಿ (ನೀರಾವರಿ, ಮಳೆ ಆಶ್ರಿತ) ಬೆಳೆಗಳಿಗೆ ಆಗಸ್ಟ್. 16 ಆಗಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ತೋಟಗಾರಿಕೆ, ಅಂಕಿ ಸಂಖ್ಯಾ ಅಧಿಕಾರಿಗಳು, ವಿಮಾ ಕಂಪನಿ ಅಧಿಕಾಗಿಗಳು, ವಿವಿಧ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

