Home Blog Page 3485

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಸವಾಲೆಸೆದ ಮಾಜಿ ಮೇಯರ್!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವಾಣಿಜ್ಯನಗರಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿದ್ದರೂ ಕೂಡ ರಸ್ತೆ ಗುಂಡಿಗಳಿಗೆ ಮಾತ್ರ ಮುಕ್ತಿ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ರಸ್ತೆಯ ಗುಂಡಿಗಳಲ್ಲಿ ಪ್ರಧಾನಿ ಮೋದಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಭಾವಚಿತ್ರಗಳನ್ನು ತಗ್ಗು ಗುಂಡಿಗಳಲ್ಲಿ ಹರಿಬಿಟ್ಟು ಅವುಗಳಿಗೆ ಸನ್ಮಾನಿಸಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಅವಳಿ ನಗರದ ಶೇ%80ರಷ್ಟು ಪ್ರಮುಖ ರಸ್ತೆ ಮಾರ್ಗಗಳು ತಗ್ಗು ದಿನ್ನಿಗಳಿಂದ ಕೂಡಿವೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿದೆ.

ಕೇವಲ ಐಷಾರಾಮಿ ಕಾರಲ್ಲಿ ತಿರುಗುವ ಸಚಿವರು ಒಮ್ಮೆ ಅವಳಿ ನಗರದ ಬೀದಿಗಳಲ್ಲಿ ಬೈಕ್ ಮೇಲೆ ಸಂಚಾರ ಮಾಡಿ ತೊರಿಸಲಿ ಎಂದು ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ ಶೆಟ್ಟರ್ ಗೆ ಸವಾಲೆಸೆದರು.

ನಂತರ ಕಾಂಗ್ರೆಸ್ ಕಾರ್ಯಕರ್ತರು ತಗ್ಗು ಗುಂಡಿಗಳಲ್ಲಿನ ಕೊಳಚೆ ನೀರಲ್ಲಿ ಹೂ, ಶಾಲೂ ಗಳನ್ನ ನರೇಂದ್ರ ಮೋದಿ ಹಾಗೂ ಜಗದೀಶ್ ಶೆಟ್ಟರ್ ಭಾವಚಿತ್ರಕ್ಕೆ ಹೊದಿಸಿ ನಂತರ ಇಬ್ಬರ ಭಾವಚಿತ್ರಗಳನ್ನೊಳಗೊಂಡ ದೋಣಿಗಳ ಹರಿಬಿಟ್ಟು ಪ್ರತಿಭಟನೆ ನಡೆಸಿ,
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಸ್ತೆ ಹಾಗೂ ತಗ್ಗು ಗುಂಡಿಗಳನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ ಹಾಗೂ ಕಾರ್ಯಕರ್ತರು ಇದ್ದರು.

ಬಾಲ ಚೈತನ್ಯ ಆರೈಕೆ ಕೇಂದ್ರಕ್ಕೆ ಸಂಸದ ದೇವೇಂದ್ರಪ್ಪ ಭೇಟಿ

ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ

ತಾಲೂಕಿನ ಹಿರೇಹಡಗಲಿಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಬಾಲ ಚೈತನ್ಯ ಕೇಂದ್ರಕ್ಕೆ ಸಂಸದ ವೈ ದೇವೇಂದ್ರಪ್ಪ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೇಂದ್ರಕ್ಕೆ ಬಂದಿರುವಂತಹ ಮಕ್ಕಳನ್ನು ಆತ್ಯಂತ ಮುತುವರ್ಜಿಯಿಂದ ನೋಡಿಕೊಂಡು ಮಕ್ಕಳಿಗೆ ಉತ್ತಮವಾದ ಆಹಾರ, ಉತ್ತಮ ಚಿಕಿತ್ಸೆ ನೀಡುವುದರ ಮೂಲಕ ಮಕ್ಕಳನ್ನು ಸಂರಕ್ಷಿಸಿ ಅವರ ಮುಂದಿನ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ಎಂದು ಕೇಂದ್ರದ ಸಿಬ್ಬಂದಿಗೆ ಸೂಚಿಸಿದರು.

ಇಂದಿನ ಮಕ್ಕಳು ಮುಂದಿನ ಪ್ರಜೆಗಳು, ಹಾಗೂ ಬೆಳೆಯುವ ಸಿರಿ ಮೊಳಕೆಯಲ್ಲಿ” ಎನ್ನುವ ಹಾಗೆ ಮೊದಲಿನ ಹಂತದಲ್ಲಿಯೇ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸಿ ಸರಿಯಾದ ಪೌಷ್ಟಿಕತೆಯನ್ನು ಒದಗಿಸಲು ಎಲ್ಲರೂ ಕೈಜೋಡಿಸಬೇಕೆಂದರು.

ನಂತರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ತಾಯಂದಿರ ಜೊತೆ ವೈ ದೇವೇಂದ್ರಪ್ಪ, ಮಕ್ಕಳ ಆರೋಗ್ಯದ ಕುರಿತು ಹಾಗೂ ಪೌಷ್ಟಿಕತೆ ಒದಗಿಸುವ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಿ. ರಾಮನಗೌಡ, ಆರೋಗ್ಯ ಇಲಾಖೆಯ ಸಿಬ್ಬಂದಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಇಂದು ಸಂಜೆಯಿಂದ ಸೋಮವಾರದವರೆಗೂ ವೀಕೆಂಡ್ ಕರ್ಫ್ಯೂ; ಡಿಸಿ ಸುಂದರೇಶ್ ಬಾಬು

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಕೊರೊನಾ ವೈರಸ್ ಸಧ್ಯ ನಿಯಂತ್ರಣಕ್ಕೆ ಬರುತ್ತಿದೆ. ಇದರ ಮಧ್ಯೆ ಸರ್ಕಾರ 19 ಜಿಲ್ಲೆಗಳಲ್ಲಿ ಇಂದು ಸಂಜೆ 7 ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಗದಗ ಜಿಲ್ಲೆಯಲ್ಲೂ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.

ವೀಕೆಂಡ್ ಕರ್ಫ್ಯೂವಿನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ, ಅಂಗಡಿ ತೆರೆಯಲು, ಹಾಗೂ ವೈದ್ಯಕೀಯ ಸೇವಾ ವಲಯ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ. ಸಾರ್ವಜನಿಕರ ಅನಗತ್ಯ ಓಡಾಟಕ್ಕೆ ಮಾತ್ರ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಕೂಡ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.

ವೀಕೆಂಡ್ ಕರ್ಫ್ಯೂನಲ್ಲಿ ಯಾವುದಕ್ಕೆಲ್ಲಾ ಅವಕಾಶ?
• ಅಗತ್ಯ ವಸ್ತುಗಳ ಉತ್ಪಾದನೆಯ ಎಲ್ಲಾ ಕೈಗಾರಿಕೆಗಳು, ಸಂಸ್ಥೆಗಳಿಗೆ ಅವಕಾಶ.
• ಎಲ್ಲಾ ಕೇಂದ್ರ-ರಾಜ್ಯ ಸರ್ಕಾರದ ಕಚೇರಿಗಳು ತೆರೆಯಲಿವೆ.
• ಕೋವಿಡ್ ಸಂಬಂಧಿತ ಕೆಲಸ ಮಾಡುವ ಕಂಪನಿಗಳು ಓಪನ್.
• ಟೆಲಿಕಾಂ ಹಾಗೂ ಇಂಟರ್ ನೆಟ್ ಸರ್ವೀಸ್ ಪೂರೈಕೆದಾರರ ಓಡಾಟಕ್ಕೆ ಅವಕಾಶ.
• ರೋಗಿಗಳು, ಅವರ ಕುಟುಂಬಸ್ಥರು ಹಾಗೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವವರಿಗೆ ಸಂಬಂಧಪಟ್ಟ ಪ್ರೂಫ್ ತೋರಿಸಿ ಓಡಾಟಕ್ಕೆ ಅವಕಾಶ ನೀಡಲಾಗಿದೆ.
• ರೈಲು ವಿಮಾನ ಸಂಚಾರ ಇರಲಿದೆ..
• ಬಾರ್ ತೆರೆಯಲು ಕೂಡ ಅವಕಾಶವಿದ್ದು, ಮಧ್ಯಾಹ್ನ 2ರ ವರೆಗೆ ಎಂದಿನಂತೆ ಪಾರ್ಸೆಲ್ ಗೆ ಅವಕಾಶವಿದೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ.
• ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಐದು ಜನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಜಿಲ್ಲಾಡಳಿತ ಕೂಡ ಅನಾವಶ್ಯಕವಾಗಿ ಜನರ ಓಡಾಟಕ್ಕೆ ಬ್ರೇಕ ಹಾಕಿದೆ. ಅನಾವಶ್ಯಕವಾಗಿ ಓಡಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಇಂದು ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5ರ ವರೆಗೆ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ತಿಳಿಸಿದ್ದಾರೆ.

ಸತ್ತ ಮಗು ತಾಯಿಯ ಕಣ್ಣೀರಿಗೆ ಬದುಕಿ ಬಂದನಾ?

ವಿಜಯಸಾಕ್ಷಿ ಸುದ್ದಿ, ಹರಿಯಾಣ

ಅನಾರೋಗ್ಯದಿಂದ ಬಳಲುತ್ತಿದ್ದ 7 ವರ್ಷದ ಮಗು ಸತ್ತಿದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಭಾರದ ಹೃದಯ ಹೊತ್ತ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಆ ನಂತರ ನಡಿದಿದ್ದೇ ಪವಾಡ!

ಈ ಸಂದರ್ಭದಲ್ಲಿ ಹೆತ್ತಮ್ಮನ ಗೋಳಾಟ ಮುಗಿಲು ಮುಟ್ಟಿತ್ತು. ‘ಮಗನೇ ಒಮ್ಮೆ ಕಣ್ಣುಬಿಡಪ್ಪಾ, ನಿನ್ನ ದಮ್ಮಯ್ಯ… ನನ್ನ ಬಿಟ್ಟು ಹೋಗ್ಬೇಡಾ…’ ಎಂದು ಕಂದನ ದೇಹವನ್ನು ಅಲ್ಲಾಡಿಸುತ್ತಾ ಗೋಗರೆಯುತ್ತಿದ್ದಳು. ತಾಯಿಯ ಕರುಳ ಕೂಗು ಆ ದೇವರಿಗೆ ಕೇಳಿಸಿರಬೇಕು ಅನ್ನಿಸುತ್ತೆ, ಶವವಾಗಿ ಮಲಗಿದ್ದ ಮಗುವಿನ ದೇಹದಲ್ಲಿ ದಿಢೀರ್ ಚಲನೆ ಕಂಡುಬಂದಿರುವುದು ಒಂದು ಪವಾಡವೇ ಎಂದು ಹೇಳಬಹುದು.

ಹರಿಯಾಣದ ಜಜ್ಜಾರ್ ಜಿಲ್ಲೆಯ ಹಿತೇಶ್ ಎಂಬುವವರ ಮಗ ಕುನಾಲ್ ಶರ್ಮಾನಿಗೆ ಕಳೆದ ತಿಂಗಳು ಟೈಫಾಯಿಡ್ ಜ್ವರ ಕಾಣಿಸಿಕೊಂಡಿತ್ತು. ತೀವ್ರ ಅಸ್ವಸ್ಥನಾಗಿದ್ದ ಕುನಾಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 26ರಂದು ಮಗು ಮೃತಪಟ್ಟಿದೆ ಎಂದು ದೆಹಲಿ ವೈದ್ಯರು ಘೋಷಿಸಿದ್ದರು.

ಪಾಲಕರು 7 ವರ್ಷದ ಮಗುವನ್ನು ಕಳೆದುಕೊಂಡ ನೋವಿನಲ್ಲಿ ಕಣ್ಣೀರು ಹಾಕುತ್ತಲೇ ಸ್ವಗ್ರಾಮಕ್ಕೆ ಮೃತದೇಹ ತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಅಂತಿಮ ವಿಧಿವಿಧಾನ ಮಾಡಿಸುವ ವೇಳೆಯಲ್ಲಿ ದೂರದೂರಲ್ಲಿದ್ದ ಕುನಾಲ್ ನ ಅಜ್ಜಿ, ಮೊಮ್ಮಗನ ಅಂತಿಮ ದರ್ಶನ ಪಡೆಯಬೇಕೆಂದು ಹಠ ಹಿಡಿದಿದ್ದರಿಂದ ಅವರಿಗಾಗಿ ಸ್ವಲ್ಪ ಸಮಯ ಎಲ್ಲರೂ ಕಾಯುತ್ತಿದ್ದರು. ಆದರೆ ಅವರು ಬರುವಷ್ಟರಲ್ಲಿ ಶವವಾಗಿದ್ದ ಮಗು ಬದುಕಿಬಂದ ಪವಾಡವೇ ನಡೆದು ಹೋಗಿದೆ.

ಹೆತ್ತ ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ‘ಎದ್ದೇಳಪ್ಪಾ… ಕಂದಾ… ಅಮ್ಮನ ಮುಖ ನೋಡೋ…’ ಎಂದು ಮಗನ ದೇಹವನ್ನೆಲ್ಲ ಸವರುತ್ತಾ ಎಳೆದಾಡಿದ್ದಾಳೆ. ಆ ವೇಳೆ ಮಗ ಕುನಾಲ್ ದೇಹದಲ್ಲಿ ಚಲನೆ ಕಂಡು ಬಂದಿದ್ದು, ಕೂಡಲೇ ತಂದೆ ಹಿತೇಶ್, ಮಗುವಿನ ಮೇಲೆ ಹಾಕಿದ್ದ ಬಟ್ಟೆ ತೆಗೆದು ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟರು. ಆಗ ಮಗನ ದೇಹದಲ್ಲಿ ಮತ್ತಷ್ಟು ಮತ್ತಷ್ಟು ಚಲನ ಕಂಡು ಬಂದಿದ್ದು, ಎದೆಯ ಬಡಿತವೂ ಶುರುವಾಯಿತು.

ಕೂಡಲೇ ಕುಟುಂಬಸ್ಥರು ಮಗು ಎತ್ತಿಕೊಂಡು ಪಾಲಕರು ಸಮೀಪದ ಖಾಸಗಿ ಆಸ್ಪತ್ರೆಗೆ ಓಡಿ ಬಂದಿದ್ದಾರೆ. ಮಗು ಬದುಕುವ ಸಾಧ್ಯತೆ ಶೇ.15 ಮಾತ್ರ ಎಂದು ಹೇಳಿದ್ದರು. 20 ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ಜೂ. 15 ರಂದು ಸಂಪೂರ್ಣ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ.

ಮೂರು ರಾಜ್ಯಗಳಲ್ಲಿ ಸಂಭವಿಸಿದ ಭೂ ಕಂಪನ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಮೂರು ರಾಜ್ಯಗಳಲ್ಲಿ ಬೆಳ್ಳಂ ಬೆಳಿಗ್ಗೆಯೇ ಜನರಿಗೆ ಭೂ ಕಂಪನದ ಅನುಭವವಾಗಿದೆ.
ಈಶಾನ್ಯ ರಾಜ್ಯಗಳಾದ ಆಸ್ಸಾಂ, ಮಣಿಪುರ ಹಾಗೂ ಮೇಘಾಲಯಗಳಲ್ಲಿ ಶುಕ್ರವಾರ ಬೆಳಿಗ್ಗೆ ಲಘ ಭೂಕಂಪ ಸಂಭವಿಸಿದೆ.

ಆಸ್ಸಾಂನ ಸೋನಿಪತ್ ನಲ್ಲಿ 4.1 ತೀವ್ರತೆ, ಮಣಿಪುರದ ಚಂಡೇಲ್ ಹಾಗೂ ಪಶ್ಚಿಮಖಾಸಿ ಹಿಲ್ಸ್ ಪ್ರದೇಶದಲ್ಲಿ 3.0ತೀವ್ರತೆ, ಮೇಘಾಲಯದಲ್ಲಿ 2.6 ತೀವ್ರತೆಯ ಲಘು ಭೂ ಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಸಂಸ್ಥೆ(ಎನ್ ಸಿಎಸ್) ತಿಳಿಸಿದೆ.

ಆಸ್ಸಾಂ ರಾಜ್ಯದ ತೇಜ್ ಪುರದಲ್ಲಿ ಕಳೆದ ಮೂರು ದಿನಗಳಲ್ಲಿಯೇ ಎರಡನೇ ಬಾರಿ ಭೂಕಂಪ ಸಂಭವಿಸಿದೆ. ಇತ್ತೀಚೆಗಷ್ಟೇ ರೇಜ್ ಪುರದಲ್ಲಿ 3.0 ತೀವ್ರವತೆಯ ಭೂಕಂಪ ಸಂಭವಿಸಿತ್ತು. 10 ಕಿ.ಮೀ ಆಳದಲ್ಲಿ ಸಂಭವಿಸಿದ ಈ ಕಂಪನದ ಕೇಂದ್ರಬಿಂದು ತೇಜ್ ಪುರದ ಪಶ್ಚಿಮಕ್ಕೆ 60ಕಿ.ಮೀ ದೂರದಲ್ಲಿತ್ತು. ಶುಕ್ರವಾರ ಸಂಭವಿಸಿದ ಭೂಕಂಪ 22 ಕಿ.ಮೀ ಆಳದಲ್ಲಿ ಸಂಭವಿಸಿದೆ. ತೇಜ್ ಪುರದಿಂದ 36 ಕಿ.ಮೀ ದೂರದಲ್ಲಿ ಕೇಂದ್ರ ಬಿಂದು ಇತ್ತು ಎಂದು ಸಂಸ್ಥೆ ತಿಳಿಸಿದೆ.

ಮಣಿಪುರದ ಚಾಂಡೇಲ್ ನಲ್ಲಿ ಸಂಭವಿಸಿದ ಕಂಪನದ ತೀವ್ರತೆ 3.0ರಷ್ಟಿತ್ತು. ಇದು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಇದಕ್ಕೂ ಮುನ್ನ ಇದೇ ರಾಜ್ಯದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಮಲೆನಾಡಿನಲ್ಲಿ ಭಾರಿ ಮಳೆ – ಕಾರುಗಳು ಪರಸ್ಪರ ಡಿಕ್ಕಿ!

ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು

ಮಲೆನಾಡು ಪ್ರದೇಶದಲ್ಲಿ ಮಳೆರಾಯ ತನ್ನ ಅಟ್ಟಹಾಸ ಮೆರೆಯುತ್ತಿದ್ದಾನೆ. ಹೀಗಾಗಿ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಸುತ್ತಮುತ್ತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ-ಭದ್ರಾ ನದಿಗಳು ಮೈ ತುಂಬಿ ಹರಿಯುತ್ತಿವೆ. ಭದ್ರಾ ನದಿ ಹರಿವಿನ ಪ್ರಾಮಾಣದಲ್ಲಿ ಭಾರೀ ಏರಿಕೆಯಾಗಿದೆ.

ಹೊರನಾಡು-ಕಳಸ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಮುಳುಗುವ ಹಂತಕ್ಕೆ ಬಂದಿದೆ. ಒಂದು ವೇಳೆ ಈ ಸೇತುವೆ ಮುಳುಗಡೆಯಾದರೆ ಹೊರನಾಡು, ಕಳಸ, ಮಾವಿನಹೊಳೆ, ಮೆಣಸಿನಹಾಡ್ಯ, ತುರಾ, ಬಲಿಗೆ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳ ಸಂಪರ್ಕವೇ ಕಡಿತಗೊಳ್ಳುತ್ತದೆ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್.ಆರ್. ಪುರ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ.

ಹಲವೆಡೆ ಗಾಳಿ ಕೂಡ ವಿಪರೀತವಾಗಿ ಸುರಿಯುತ್ತಿದೆ. ಮುಗ್ರಹಳ್ಳಿ ಸೇತುವೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಮೂಡಿಗೆರೆ ತಾಲೂಕಿನ ನಿಡುವಾಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗವಿದ್ದ ಬೃಹತ್ ಮರಗಳು ಗಾಳಿಯಿಂದ ಧರೆಗುರುಳಿವೆ. ಬಿದರಹಳ್ಳಿ ಬಳಿ ಭಾರೀ ಗಾಳಿ ಹಾಗೂ ಮಳೆಯಿಂದ ಚಾಲಕರ ನಿಯಂತ್ರಣ ತಪ್ಪಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕೊರೊನಾ ಇಳಿಮುಖ – ಕೋವಿಡ್ ಕೇಂದ್ರಗಳು ಬಂದ್!

ವಿಜಯಸಾಕ್ಷಿ ಸುದ್ದಿ, ಧಾರವಾಡ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 84 ಕೋವಿಡ್ ಕೇರ್ ಸೆಂಟರ್ ಗಳ ಪೈಕಿ 64 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆತಂಕ ಮೂಡಿಸಿತ್ತು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗಕ್ಕೂ ಸೋಂಕು ಪಸರಿಸಿತ್ತು. ಹೀಗಾಗಿ ಎಲ್ಲೆಡೆ ಭಯ ವ್ಯಕ್ತವಾಗಿತ್ತು.

ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕೊರೊನಾ ಹತೋಟಿಗೆ ಬಂದಿತ್ತು. ಲಾಕ್ ಡೌನ್ ನಿಂದಾಗಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಲು ಪ್ರಾರಂಭಿಸಿತು. ಸದ್ಯ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5 ಸಾವಿರದ ಗಡಿಗೆ ಬಂದು ನಿಂತಿದೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದ ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆರೆಯಲಾಗಿತ್ತು. ಸದ್ಯ ಸೋಂಕು ಹತೋಟಿಗೆ ಬಂದ ಕಾರಣಕ್ಕೆ ಕೋವಿಡ್ ಕೇರ್ ಸೆಂಟರ್ ಗಳ ಕಾರ್ಯ ಸ್ಥಗಿತಗೊಳಿಸಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ 10, ಹುಬ್ಬಳ್ಳಿ ಗ್ರಾಮೀಣ 14, ಕಲಘಟಗಿ 12, ಅಣ್ಣಿಗೇರಿ 8, ಕುಂದಗೋಳ 16, ನವಲಗುಂದ 8, ಅಳ್ನಾವರ 5 ಸೇರಿದಂತ ಜಿಲ್ಲೆಯಲ್ಲಿ ಒಟ್ಟು 84 ಕೇಂದ್ರಗಳನ್ನು ತೆರೆಯಲಾಗಿತ್ತು. ಹೋಮ್ ಐಸೋಲೇಷನ್‍ ನಲ್ಲಿದ್ದ ಕೆಲವರನ್ನು ಈ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಕೊರೊನಾ ಸೋಂಕಿತರೊಂದಿಗೆ ಅವರ ಕುಟುಂಬಸ್ಥರಿಗೂ ಕೂಡ ಇರಲು ಅವಕಾಶ ಕಲ್ಪಿಸಲಾಗಿತ್ತು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 2,011 ಸೋಂಕಿತರು ಕೋವಿಡ್ ಕೇರ್ ಸೆಟಂರ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

ಇಷ್ಟೊಂದು ಜನ ರೋಗಿಗಳ ಪೈಕಿ 1,940 ಜನರು ಗುಣಮುಖರಾಗಿ ಮನೆಗೆ ಮರಳಿದ್ದರು. ಸದ್ಯ ಕೇವಲ 71 ಜನ ಮಾತ್ರ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಚಿಕಿತ್ಸೆ ಪಡೆಯುತ್ತಿರುವ 20 ಕೋವಿಡ್ ಕೇರ್ ಸೆಟಂರ್ ಬಿಟ್ಟು, 64 ಕೇಂದ್ರಗಳನ್ನು ಮುಚ್ಚಲಾಗಿದೆ.

ಕೊರೊನಾ ಲಸಿಕೆ ಪಡೆದ ಅರ್ಧ ಗಂಟೆಯಲ್ಲಿಯೇ ವ್ಯಕ್ತಿ ಸಾವು!

ವಿಜಯಸಾಕ್ಷಿ ಸುದ್ದಿ, ಕಾರವಾರ

ಕೋವಿಡ್ ಲಸಿಕೆ ಪಡೆದು ಅರ್ಧ ಗಂಟೆ ವಿಶ್ರಾಂತಿ ಪಡೆದಿದ್ದ ವ್ಯಕ್ತಿಯೊಬ್ಬ ಹೃದಯಾಘಾತಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಂಕೋಲಾದಲ್ಲಿ ಲಸಿಕೆ ಪಡೆದ ಬಳಿಕ ಮಾತ್ರೆ ಪಡೆದುಕೊಳ್ಳಲು ತೆರಳುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡಿದ್ದರು. ಆ ನಂತರ ವಿಶ್ರಾಂತ ಪಡೆಯುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂತ್ರಿ ಗ್ರಾಮದ ನಿವಾಸಿ ಮಾದೇವ್ ಪುಟ್ಟು ನಾಯ್ಕ್ (67) ಮೃತ ದುರ್ದೈವಿ. ನಿನ್ನೆ ಬೆಳಿಗ್ಗೆ ಈ ವ್ಯಕ್ತಿ ಪತ್ನಿಯೊಂದಿಗೆ ತೆರಳಿ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಆ ನಂತರ ವಿಶ್ರಾಂತಿ ಪಡೆದು ಮಾತ್ರೆ ತರಲು ಹೊರಟಿದ್ದರು.
ಮಾತ್ರೆ ತೆಗೆದುಕೊಳ್ಳಲು ತಾಲೂಕಾಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದರು.

ಹೃದಯಾಘಾತಕ್ಕೊಳಗಾಗಿದ್ದ ಮಾದೇವ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ವೈದ್ಯರು ಸಾಕಷ್ಟು ಪ್ರಯತ್ನ ನಡೆಸಿದರೂ ವ್ಯಕ್ತಿ ಮಾತ್ರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ವ್ಯಕ್ತಿ ಹೃದಯಾಘಾತದಿಂದ ಸಾವಿಗೀಡಾಗಿರುವ ಕುರಿತು ತಾಲೂಕು ವೈದ್ಯಾಧಿಕಾರಿ ಡಾ. ನಿತಿನ್ ಹೊಸ್ಮೇಳಕರ್ ಹೇಳಿದ್ದಾರೆ.

ಮಾದೇವ ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ವೈದ್ಯರು, ಪೊಲೀಸ್ ನೀರಿಕ್ಷಕ ಕೃಷ್ಣಾನಂದ ನಾಯ್ಕ್, ಪಿಎಸ್ ಐ ಪ್ರೇಮನಗೌಡ ಪಾಟೀಲ್ ಮತ್ತು ಕುಟುಂಬಸ್ಥರು ಚರ್ಚಿಸಿದ ನಂತರ ಪರಿಸ್ಥಿತಿ ತಿಳಿಗೊಂಡಿತ್ತು.
ಸಾವನ್ನಪ್ಪಿದ್ದ ವ್ಯಕ್ತಿ ಈ ಹಿಂದೆಯೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದರು. ಮೃತ ಮಾದೇವ ಅವರೊಂದಿಗೆ ಲಸಿಕೆ ಪಡೆದಿದ್ದ 9 ಜನರಿಗೆ ಯಾವುದೇ ಸಮಸ್ಯೆಯಾಗಿಲ್ಲ.

ಇವಳು ಪ್ರೀತಿಸಿ ಮದುವೆಯಾಗಿದ್ದು ಅವನನ್ನಲ್ಲ, ಅವಳನ್ನು!

ವಿಜಯಸಾಕ್ಷಿ ಸುದ್ದಿ, ಲಂಡನ್

ಇಬ್ಬರೂ ಪರಸ್ಪರ ಪ್ರೀತಿಸಿದ್ದರು. ಆದರೆ, ಪತ್ನಿಗೆ ಹನಿಮೂನ್ ಗೆ ತೆರಳಿದ್ದಾಗ ಗೊತ್ತಾಯ್ತು ಪತಿರಾಯ ಅವನಲ್ಲ! ಅವಳು! ಎನ್ನುವುದು. ಇಂತಹ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ನಂತರ ಪತ್ನಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತ್ರ ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ.

ಬ್ರಿಟನ್ ನ ಗ್ರಾಫಿಕ್ ಡಿಸೈನರ್ ಜೆಕ್ ಮತ್ತು ಅಮೆರಿಕದ ಹಾರ್ವಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆ ನಂತರ ಇಬ್ಬರೂ ಹನಿಮೂನ್ ಗೆ ಸುಂದರ ದ್ವೀಪಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಹಾರ್ವಿಗೆ ತನ್ನ ಪತಿ ಪುರುಷನೇ ಅಲ್ಲ ಎಂಬುವುದು ತಿಳಿದಿದೆ. ಈ ಸಂದರ್ಭದಲ್ಲಿ ತನ್ನ ತಪ್ಪು ಒಪ್ಪಿಕೊಂಡ ಪತಿರಾಯ, ನಾನು ಕೂಡ ಮಹಿಳೆಯಂತೆಯೇ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾನೆ. ಆದರೆ, ಎಲ್ಲರಂತೆ ಪತಿಯನ್ನು ನಿಂದಿಸದ ಹಾರ್ವಿ, ಅವನ ಇಷ್ಟದಂತೆ ಇರಲು ಅನುಮತಿ ನೀಡಿದ್ದಾರೆ.

ಪತಿಯ ನಿಜವಾದ ಸಂಗತಿ ತಿಳಿದ ನಂತರ ಪತ್ನಿ ಹಾರ್ವಿ, ತನ್ನ ಉಳಿತಾಯದ ಹಣದಿಂದ ಅಂದರೆ ರೂ. 45 ಸಾವಿರ ಪೌಂಡ್ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ಹಾರ್ವಿ ಮತ್ತು ಜೆಕ್ ಮತ್ತೊಮ್ಮೆ ಮದುವೆಯಾಗಲು ನಿರ್ಧರಿಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಜೆಕ್ ತನ್ನ ಹೆಸರನ್ನು ರಾಯನಾ ಎಂದು ಬದಲಿಸಿಕೊಂಡಿದ್ದಾನೆ. ಸದ್ಯ ಇಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಪಂಚಮಸಾಲಿಗರಿಗೆ ಸಿಎಂ ಸ್ಥಾನ ನೀಡುವಂತೆ ಸ್ವಾಮೀಜಿ ಮನವಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಬೆಳವಣಿಗೆಗಳು ಕಂಡು ಬಂದಿದ್ದು, ಸಿಎಂ ಬದಲಾವಣೆ ಮಾಡದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಪರ ನೂರಾರು ಮಠಾಧೀಶರು ಒತ್ತಾಯಿಸಿದ್ದರೆ. ಇನ್ನೊಂದು ಕಡೆ ಪಂಚಮಸಾಲಿ ಶ್ರೀಗಳು ಮಾತ್ರ ಸಿಎಂ ಬದಲಾವಣೆಗೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯಕ್ಕೆ ಭೇಟಿ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕಳೆದ ಮೂರು ದಿನಗಳಿಂದ ಸರಣಿ ಸಭೆ ನಡೆಸಿ ಸಚಿವರು, ಶಾಸಕರು, ಪಕ್ಷದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಗುರುವಾರ ರಾತ್ರಿ ಕುಮಾರಕೃಪ ಅತಿಥಿಗೃಹದಲ್ಲಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿ ಎಂದು ಹೇಳಿದ್ದಾರೆನ್ನಲಾಗಿದೆ.

ಸದ್ಯ ಆಡಳಿತದಲ್ಲಿರುವವರಿಂದ ದುರುಪಯೋಗ ಆಗುತ್ತಿದೆ. ಹಾಗಾಗಿ ಹೊಸಬರಿಗೆ ಅವಕಾಶ ನೀಡಬೇಕು. ಈಗಾಗಲೇ ಯಡಿಯೂರಪ್ಪ ಅವರನ್ನು ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಈ ಸಮಾಜ ಮಾಡಿದೆ ಆದರೂ ಅವರು ಸಮಾಜದ ಋಣ ತೀರಿಸದೇ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ ಎನ್ನಲಾಗುತ್ತಿದೆ‌.

ಸಮಾಜದ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದವರು, ಒಡಕು ಮೂಡಿಸುವ ಕೆಲಸ ಮಾಡಿದ್ದು, ಅವರನ್ನು ಬದಲಾವಣೆ ಮಾಡಬೇಕು. ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಶ್ರೀಗಳು ಅರುಣ್ ಸಿಂಗ್ ಅವರಿಗೆ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.