Home Blog Page 3489

ಕೊರೊನಾ ಸಾವಿನ ಸಂಖ್ಯೆ ಮುಚ್ಚಿಟ್ಟ ಸರಕಾರ, ಇದು ಮನುಷ್ಯತ್ವದ ಲಕ್ಷಣವಲ್ಲ; ಎಚ್ ಕೆ ಪಾಟೀಲ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸಮಯದಲ್ಲಿ ಜನರು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರವಾಗಲಿ ಹಾಗೂ ಕೇಂದ್ರ ಸರ್ಕಾರವಾಗಲಿ ಅವರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿಲ್ಲ. ಜವಾಬ್ದಾರಿ ಇಲ್ಲದಂತೆ ನಡೆದುಕೊಳ್ಳುತ್ತಿವೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಮಹಾಮಾರಿಯಿಂದಾಗಿ ರಾಜ್ಯದಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಜನರು ಕಣ್ಣೀರಿನೊಳಗೆ ಕೈ ತೊಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಅಂತಹ ಕುಟುಂಬಗಳಿಗೆ ನೆರವು ಕಲ್ಪಿಸುವುದನ್ನು ಬಿಟ್ಟು ಸರ್ಕಾರ ಅಮಾನವೀಯ ಹೆಜ್ಜೆಗಳನ್ನು ಇಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ ದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿಯೇ ರಾಷ್ಟ್ರೀಯ ವಿಪತ್ತು ಎಂದು ಈ ಕಾಲವನ್ನು ಘೋಷಿಸಿ ಎಂದು ನಾವು ಮನವಿ ಮಾಡಿದ್ದೆವು. ಆದರೆ, ಜನಪರ ಕಾಳಜಿ ಇಲ್ಲದ ಬಿಜೆಪಿ ಆ ಕಾರ್ಯ ಮಾಡಲಿಲ್ಲ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾನೂನು ಜಾರಿಗೊಳಿಸಿದ್ದರು. ಅದು ಜನಪರವಾದ ಕಾನೂನಾಗಿತ್ತು. ಈ ಕಾನೂನಿನಲ್ಲಿ ಸಾಕಷ್ಟು ನಿದರ್ಶನವನ್ನು ನೀಡಿದ್ದರು. ಈ ಕಾನೂನಿನ ಅಡಿ ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಸಾವನ್ನಪ್ಪಿದ ವ್ಯಕ್ತಿಗಳಿಗೆ 4 ಲಕ್ಷ ರೂ. ಪರಿಹಾರ ನೀಡುವ ಕಾನೂನು ಜಾರಿಗೊಳಿಸಿದ್ದರು.

ಮೊದಲನೆ ಅಲೆಯ ಸಂದರ್ಭದಲ್ಲಿಯೇ ವಿರೋಧ ಪಕ್ಷಗಳು ವಿಪತ್ತು ನಿರ್ವಹಣೆ ಎಂದು ಘೋಷಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅವರು ಆ ಮಹಾನ್ ಕಾರ್ಯ ಮಾಡುವ ಮನಸ್ಸು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಡಿಸಿದರು. ಆದರೆ, ಏಪ್ರೀಲ್ ತಿಂಗಳಿನಲ್ಲಿ ಕೊರೊನಾ ಅಲೆಯನ್ನು ವಿಪತ್ತು ಎಂದು ಘೋಷಿಸಿದ್ದಾರೆ. ಆದರೆ, ಪರಿಹಾರ ವಿಷಯವನ್ನು ಹಿಂಪಡೆಯಲಾಗಿದೆ. ಇದರಿಂದಾಗಿ ಬಡವರಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಎಚ್ ಕೆ ಪಾಟೀಲ ಮನವಿ ಮಾಡಿದರು.

ಪರಿಹಾರ ಕೊಡಿ

ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ನಿಂದ ಕೊಡಲಾಗುವುದಿಲ್ಲ. ಎಸ್‌ಡಿಆರ್‌ಎಫ್‌ನಿಂದ ಹಣ ಕೊಡಬಹುದು ಎಂದು ರಾಜ್ಯ ಸರ್ಕಾರಕ್ಕೆ ಎತ್ತಿ ಹಾಕಿದ್ದಾರೆ. ನೀವು ಎಲ್ಲಿಂದಾದರೂ ಕೊಡಿ, ಕೋವಿಡ್‌ನಿಂದ ಮರಣ ಹೊಂದಿದವರಿಗೆ ರೂ. 5 ಲಕ್ಷ ಹಣವನ್ನು ತಕ್ಷಣವೇ ಪರಿಹಾರವಾಗಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿ 35ರಿಂದ 50 ವರ್ಷದೊಳಗಿದ್ದು, ಕುಟುಂಬಕ್ಕೆ ಆಧಾರವಾಗಿದ್ದರೆ, ಅಂತಹ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದರೆ, ಆ ಕುಟುಂಬಕ್ಕೆ ರೂ. 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದಾರೆ. ಆದರೆ, ಇವರು ಪರಿಹಾರ ಮೊತ್ತವನ್ನು ಏಕೆ ಕಡಿಮೆ ಮಾಡಿದ್ದಾರೆ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಎಚ್.ಕೆ. ಪಾಟೀಲ ಆಗ್ರಹಿಸಿದ್ದಾರೆ.

3.28 ಲಕ್ಷ ಸಾವು

ಸರ್ಕಾರ ಕೊರೊನಾದಿಂದ ಸಾವನ್ನಪ್ಪಿದವರ ಅಂಕಿ-ಸಂಖ್ಯೆಗಳನ್ನು ಮರೆ ಮಾಚುವ ಕೆಲಸ ಮಾಡುತ್ತಿದೆ. ಎರಡನೇ ಅಲೆಯಲ್ಲಿ ಜೂ. 14ರೊಳಗಾಗಿ ರಾಜ್ಯದಲ್ಲಿ 33,033 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಮೊದಲನೇ ಅಲೆಯಲ್ಲಿ 23 ಸಾವಿರದಷ್ಟು ಜನ ಸಾವನ್ನಪ್ಪಿದ್ದರು. ಆದರೆ, ಈ ಅಂಕಿ-ಸಂಖ್ಯೆ ಸುಳ್ಳು. ರಾಜ್ಯದಲ್ಲಿ ಜೂ. 14ರೊಳಗೆ 3,27,988 ಸಾವುಗಳು ಕೊರೊನಾದಿಂದ ಸಂಭವಿಸಿವೆ.

ಕೊರೊನಾದಿಂದ ಸತ್ತವರ ಅಂಕಿ-ಸಂಖ್ಯೆ ಮರೆಮಾಚುವುದು ಮಾನವೀಯತೆ, ಮನುಷ್ಯತ್ವದ ಲಕ್ಷಣವಲ್ಲ. ಯಾವ ಕಾರಣಕ್ಕಾಗಿ ಸಾವಿನ ಸಂಖ್ಯೆ ಮುಚ್ಚಿಡಲಾಗುತ್ತಿದೆ? ಮರಣದ ಮಾಸಿಕ ವರದಿಗಳನ್ನು ಹಾಗೂ ಮೆಡಿಕಲ್ ಕಾಲ್ ಆಫ್ ಡೆತ್ ಸುದ್ದಿಗಳನ್ನು ಪ್ರಕಟಿಸುವುದನ್ನೇ ಸರ್ಕಾರ ನಿಲ್ಲಿಸಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಎಚ್.ಕೆ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ; ಜಿಲ್ಲೆಯಲ್ಲಿ ಬುಧವಾರ 52 ಜನರಿಗೆ ಸೋಂಕು, ಇಬ್ಬರ ಸಾವು

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಬುಧವಾರ 52 ಜನರಿಗೆ ಸೋಂಕು ತಗುಲಿದೆ. ಇಂದು ಕೋವಿಡ್ ನಿಂದಾಗಿ ಇಬ್ಬರು ಮೃತಪಟ್ಟಿದ್ದ ಬಗ್ಗೆ ಜಿಲ್ಲಾಡಳಿತ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ಬಂದಿದೆ. ಇದರಿಂದಾಗಿ ಮೃತರ ಸಂಖ್ಯೆ 290 ಕ್ಕೇರಿದೆ.

ಗದಗ ತಾಲೂಕಿನ ಕಳಸಾಪೂರ ನಿವಾಸಿ 60 ವರ್ಷದ ವ್ಯಕ್ತಿ ಜೂನ್ 02 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜೂನ್ 15 ರಂದು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಕುಂದ್ರಳ್ಳಿ ನಿವಾಸಿ 70 ವರ್ಷದ ಮಹಿಳೆ ಮೇ-30 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ನಿಮೋನಿಯಾ ಹಾಗೂ ಬಹು ಅಂಗಾಂಗ ವೈಫಲ್ಯ ಕಾಯಿಲೆಯಿಂದ ಜೂನ್ 10 ರಂದು ಮೃತಪಟ್ಟಿದ್ದಾರೆ.

ಇವರಿಬ್ಬರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು 52 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 25498 ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -20, ಮುಂಡರಗಿ-12, ನರಗುಂದ-04, ರೋಣ-06, ಶಿರಹಟ್ಟಿ-08, ಹೊರಜಿಲ್ಲೆಯ-02 ಸೇರಿದಂತೆ 52 ಪ್ರಕರಣಗಳು ದೃಢಪಟ್ಟಿವೆ.

ಇಂದು 67 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 24649 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 559 ಜನ ಸೋಂಕಿತರು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 85 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗಂಗೆಯಲ್ಲಿ ನವಜಾತ ಶಿಶು ತೇಲಿ ಬಿಟ್ಟ ಪಾಲಕರು!

ವಿಜಯಸಾಕ್ಷಿ ಸುದ್ದಿ, ಗಾಜಿಪುರ

ಕೊರೊನಾದಿಂದಾಗಿ ದೇಶದ ಜನರು ಸಾಕಷ್ಟು ಸಂಕಷ್ಟ ಪಡುತ್ತಿದ್ದಾರೆ. ಹಲವರು ಶವಗಳನ್ನು ಅಂತ್ಯ ಸಂಸ್ಕಾರ ಮಾಡಲು ಆಗದೆ, ಗಂಗಾ ನದಿಯಲ್ಲಿ ತೇಲಿ ಬಿಟ್ಟ ಮಾಹಿತಿಯೂ ತಿಳಿದು ಬಂದಿತ್ತು. ಕಳೆದ ತಿಂಗಳವಷ್ಟೇ ನೂರಾರು ಶವಗಳು ತೇಲಿ ಬಂದಿದ್ದವು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಸದ್ಯ ಗಂಗೆಯಲ್ಲಿ ನವಜಾತು ಶಿಶುವೊಂದು ತೇಲಿ ಬಂದಿರುವ ಕುರಿತು ವರದಿಯಾಗಿದೆ.

ಬುಧವಾರ ಮರದ ಪೆಟ್ಟಿಗೆಯೊಂದು ತೇಲಿ ಬಂದಿದ್ದು, ಇದರಲ್ಲಿ 22 ದಿನಗಳ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ ಎನ್ನಲಾಗಿದೆ. ಗಾಜಿಪುರದ ದಾದ್ರಿ ಘಾಟ್‌ ನಲ್ಲಿ ದೋಣಿ ನಡೆಸುತ್ತಿದ್ದ ನಾವಿಕನಿಗೆ ಈ ಪೆಟ್ಟಿಗೆ ಹಾಗೂ ಅದರಲ್ಲಿದ್ದ ಮಗು ಸಿಕ್ಕಿದೆ. ಗಂಗಾ ನದಿಯಲ್ಲಿ ಮರದ ಪೆಟ್ಟಿಗೆಯಲ್ಲಿ ಪತ್ತೆಯಾಗಿರುವ ನವಜಾತ ಶಿಶುವಿನ ಸಂಪೂರ್ಣ ಜವಾಬ್ದಾರಿಯನ್ನು ಉತ್ತರ ಪ್ರದೇಶ ಸರ್ಕಾರ ವಹಿಸಿಕೊಂಡಿದೆ ಎನ್ನಲಾಗಿದೆ.

ಈ ಹೆಣ್ಣು ಶಿಶುವನ್ನು ಉಳಿಸಿದ ನಾವಿಕನಿಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಧನ್ಯವಾದ ಅರ್ಪಿಸಿದ್ದಾರೆ. ಇದರೊಂದಿಗೆ ನಾವಿಕನಿಗೆ ವಸತಿ ಸೌಕರ್ಯ ನೀಡುವುದಾಗಿ ಹೇಳಿದ್ದಾರೆ. ಮರದ ಪೆಟ್ಟಿಗೆಯಲ್ಲಿ ದುಪ್ಪಟ್ಟಾದಲ್ಲಿ ಸುತ್ತಿದ್ದ ನವಜಾತ ಶಿಶುವಿನೊಂದಿಗೆ, ದೇವರ ಪೋಟೋಗಳು, ಪೂಜಾ ಸಾಮಗ್ರಿಗಳು ಮತ್ತು ಮಗುವಿನ ಕುಂಡಲಿ, ಜಾತಕ ಪತ್ತೆಯಾಗಿವೆ. ಶಿಶುವಿನ ಹೆಸರನ್ನು ಜಾತಕದಲ್ಲಿ ಗಂಗಾ ಎಂದು ಬರೆಯಲಾಗಿದ್ದು, ಜಾತಕದಲ್ಲಿ ಮಗುವಿನ ವಯಸ್ಸು ಕೇವಲ ಮೂರು ವಾರಗಳು ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ಸಿಎಂ ಬದಲಾವಣೆ ಕುರಿತು ಆನಂತರ ತಿಳಿಸುತ್ತೇನೆ – ಅರುಣ್ ಸಿಂಗ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬಂದಿಳಿದಿದ್ದಾರೆ. ಅಲ್ಲದೇ, ಈ ಸಂದರ್ಭದಲ್ಲಿ ಸಿಎಂ ಬದಲಾವಣೆ ಕುರಿತು ಮುಂದೆ ತಿಳಿಸುತ್ತೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಹೈ ಕಮಾಂಡ್ ನಿರ್ದೇಶನದ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ಇಂದು ಬೆಂಗಳೂರಿಗೆ ಆಗಮಿಸಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

ಸಿಎಂ ಬದಲಾವಣೆ ಕುರಿತು ನನಗೆ ಎಷ್ಟು ತಿಳಿದಿದೆಯೋ ಅಷ್ಟನ್ನೂ ಹೇಳಿದ್ದೇನೆ. ಹೆಚ್ಚಿನ ಮಾಹಿತಿ ತಿಳಿಯಬೇಕಿದೆ. ಈ ಬಗ್ಗೆ ಮುಂದೆ ಹೇಳುತ್ತೇನೆ ಎಂದು ಹೇಳಿದ್ದಾರೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಜೀವವನ್ನು ಲೆಕ್ಕಿಸದೆ, ಸಾರ್ವಜನಿಕರ ಸೇವೆ ಮಾಡಿದ್ದಾರೆ. ಸೇವೆಯೇ ಸಂಘಟನೆ ಎಂಬ ಮನೋಭಾವದಿಂದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸೇವೆ ಮಾಡುವುದು ನಮ್ಮ ಪರಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಜನರ ಸೇವೆ ಮಾಡುತ್ತಿಲ್ಲ. ಆದರೆ ಬಿಜೆಪಿ ಕಾರ್ಯಕರ್ತರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಗಿಡ ನೆಡುವುದು, ಒನ್ ಟೈಪ್ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿದ್ದಾರೆ. ಅರುಣ್ ಸಿಂಗ್ ಸ್ವಾಗತಕ್ಕೆ ದೆಹಲಿ ವಿಶೇಷ ಪ್ರತಿನಿಧಿ ಶಂಕರ್ ಗೌಡ ಪಾಟೀಲ್ ಆಗಮಿಸಿದ್ದರು. ಅವರೊಂದಿಗೆ ನಾಯಕರು ಕೂಡ ಇದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡದ್ದಕ್ಕೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಸಹ ನಡೆಯಿತು.

ಮಹಾಮಾರಿಗೆ 421 ಜನ ಪೋಷಕರು ಬಲಿ? ತಬ್ಬಲಿಯಾದ ಮಕ್ಕಳೆಷ್ಟು?

ವಿಜಯಸಾಕ್ಷಿ ಸುದ್ದಿ, ಬೀದರ್

ಮಹಾಮಾರಿಯಿಂದಾಗಿ ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿವೆ. ಗಡಿ ಜಿಲ್ಲೆಯಲ್ಲಿ ಈ ಸೋಂಕಿಗೆ ಬರೋಬ್ಬರಿ 420 ಜನ ಪಾಲಕರು ಬಲಿಯಾಗಿದ್ದಾರೆ. ಹೀಗಾಗಿ ಹಲವು ಮಕ್ಕಳು ತಬ್ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಸಾಕಷ್ಟು ಮಕ್ಕಳು ಈ ರೀತಿ ಅನಾಥರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 143 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಕಡು ಬಡತನದ 42 ಮಕ್ಕಳನ್ನು ಬಾಲ ಸ್ವರಾಜ್ಯ ಯೋಜನೆಯಲ್ಲಿ ಸೇರಿಸಲಾಗಿದೆ.

ಸಂಪೂರ್ಣವಾಗಿ ಪೋಷಕರನ್ನು ಕಳೆದುಕೊಂಡ 5 ಅನಾಥ ಮಕ್ಕಳು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹುಮ್ನಬಾದ್ ತಾಲೂಕಿನಲ್ಲಿ 4 ಹಾಗೂ ಬೀದರ್ ನಗರದ ಓರ್ವ ಬಾಲಕ ಸೇರಿ ಜಿಲ್ಲೆಯಲ್ಲಿ ಒಟ್ಟು ಐದು ಬಾಲಕರು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಇಂತಹ ಅನಾಥ ಮಕ್ಕಳಿಗೆ ಸರ್ಕಾರದಿಂದ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕಾಗಿದ್ದು, ಸರ್ಕಾರದ ಬಾಲ ಸ್ವರಾಜ್ಯ ಯೋಜನೆಗೆ ಈ ಅನಾಥ ಮಕ್ಕಳ ಎಲ್ಲಾ ಮಾಹಿತಿ ನೀಡಲಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗಾ ಹಿರೇಮಠ ಹೇಳಿದ್ದಾರೆ.

ಇಸ್ರೇಲ್, ಪ್ಯಾಲಿಸ್ತೇನ್ ಮಧ್ಯೆ ಮತ್ತೊಮ್ಮೆ ಯುದ್ದದ ಭೀತಿ!

ವಿಜಯಸಾಕ್ಷಿ ಸುದ್ದಿ, ಜೆರುಸಲೇಂ

ಪ್ಯಾಲೆಸ್ತೀನ್ ಪ್ರದೇಶದಿಂದ ಸ್ಫೋಟಕ ಬಲೂನ್ ಗಲು ಹಾರಿ ಬಂದ ಬೆನ್ನಲ್ಲಿಯೇ ಗಾಜಾಪಟ್ಟಿಯ ಮೇಲೆ ಇಸ್ರೇಲ್ ಮತ್ತೊಮ್ಮೆ ವೈಮಾನಿಕ ದಾಳಿ ನಡೆಸಿದೆ.
11 ದಿನಗಳ ಕಾಲ ಪ್ಯಾಲೆಸ್ತಿನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಭಯ ಆವರಿಸಿತ್ತು. ನಂತರ ಮೇ 21ರಂದು ಉಭಯ ದೇಶದವರು ಕದನ ವಿರಾಮ ಘೋಷಿಸಿದ್ದರು. ಆದರೆ ಇದೀಗ ಮತ್ತೆ ಯುದ್ಧದ ಭಯ ಆವರಿಸುತ್ತಿದೆ.

ಬೆಂಕಿಯ ಬಲೂನ್ ಗಳು ದಕ್ಷಿಣ ಇಸ್ರೇಲ್‌ ನ ಸುಮಾರು 20 ಕಡೆ ಬೆಂಕಿ ಬೀಳಲು ಕಾರಣವಾಗಿವೆ ಎಂದು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಇಸ್ರೇಲ್ ನಲ್ಲಿ ಬೆಂಜಮಿನ್ ನೆತನ್ಯಾಹು ಸರ್ಕಾರ ಉರುಳಿ ನೆಫ್ಟಾಲಿ ಬೆನ್ನೆಟ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ದಾಳಿ ನಡೆದಿದೆ.

ದಕ್ಷಿಣ ಗಾಜಾನಗರದ ಖಾನ್ ಯೂನೆಸ್ ನ ಪೂರ್ವ ಭಾಗ ಗುರಿಯಾಗಿಸಿಕೊಂಡು ಇಸ್ರೇಲ್ ವಾಯುಪಡೆಗಳು ದಾಳಿ ನಡೆಸಿವೆ ಎಂದು ಪ್ಯಾಲೇಸ್ತಿನ್ ಮೂಲಗಳು ತಿಳಿಸಿವೆ.
ಈ ದಾಳಿ ಬಗ್ಗೆ ಪ್ರತ್ರಿಕ್ರಿಯೆ ನೀಡಿದ ಇಸ್ರೇಲ್, ಗಾಜಾ ಪಟ್ಟಿಯಿಂದ ಸ್ಫೋಟಕಗಳಿರುವ ಬಲೂನ್ ಹಾರಾಡಿದ ಪರಿಣಾಮ ಇದಕ್ಕೆ ಪ್ರತಿಯಾಗಿ ಖಾನ್ ಯೂನೆಸ್ ನಲ್ಲಿನ ಭಯೋತ್ಪಾದಕರಿಗೆ ಸೌಲಭ್ಯಗಳು ಒದಗಿಸುವ ಮತ್ತು ಸಭೆಗಳನ್ನು ನಡೆಸುವ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

ಪರೀಕ್ಷೆಯಿಲ್ಲದೆ ವಿದ್ಯಾರ್ಥಿಗಳ ಪಾಸ್ – ಸಂಭ್ರಮಾಚರಣೆ!

ವಿಜಯಸಾಕ್ಷಿ ಸುದ್ದಿ, ತುಮಕೂರು

ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ.
ತಿಪಟೂರು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಸ್ ಆಗಿದ್ದಕ್ಕೆ ಸಂಭ್ರಮಾಚರಣೆ ಆಚರಿಸಿದ್ದಾರೆ. ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ.

ತಾವೆಲ್ಲ ಪಾಸ್ ಆಗಿದ್ದಕ್ಕೆ ಕುಂಬಳಕಾಯಿ, ತೆಂಗಿನಕಾಯಿ ಒಡೆದು ವಿದ್ಯಾರ್ಥಿಗಳು ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ. ಅಲ್ಲದೇ, ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಕಾಲೇಜಿನ‌ ಗೇಟ್ ಮುಂದೆ ವಿದ್ಯಾರ್ಥಿಗಳು ಸಂಭ್ರಮಾಚರಣೆ ಆಚರಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಜಯಕಾರ ಹಾಕಿದ್ದಾರೆ.

ಮಹಾಮಾರಿಗೆ ಬಲಿಯಾದ ಐದು ದಿನಗಳ ಬಾಣಂತಿ!

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಮಹಾಮಾರಿಗೆ 5 ದಿನಗಳ ಬಾಣಂತಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ ಸೋಂಕಿಗೆ ಬಲಿಯಾದ ಮಹಿಳೆ. ನಗರದಲ್ಲಿನ ಮಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ.

ತಾಯಿಯನ್ನು ಕಳೆದುಕೊಂಡು ಐದು ದಿನದ ಮಗು ತಬ್ಬಲಿಯಾಗಿದೆ. ಶಿಲ್ಪಶ್ರೀ (32) ಕೊರೊನಾಗೆ ಬಲಿಯಾದ ಬಾಣಂತಿ. ಮಹಿಳೆಯಲ್ಲಿ ಕಳೆದ ಒಂದು ವಾರದ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಕಳೆದ ಐದು ದಿನಗಳ ಹಿಂದೆಯೇ ಮಿಮ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಶಿಲ್ಪಶ್ರೀ ಜನ್ಮ ನೀಡಿದ್ದರು. ಸದ್ಯ 5 ದಿನಗಳ ಮಗುವನ್ನು ಬಿಟ್ಟು ತಾಯಿ ಇಹಲೋಕ ತ್ಯಜಿಸಿದ್ದು, ಮಗು ತಬ್ಬಲಿಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಧಾನಿ ಮೋದಿ ಭೇಟಿ ಮಾಡಿದ ಡಿವಿಎಸ್! ಕುತೂಹಲಕ್ಕೆ ಕಾರಣವಾದ ಭೇಟಿ!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಯ ವಿಚಾರ ಬಹಳ ಸದ್ದು ಮಾಡುತ್ತಿರುವ ಕಾರಣಕ್ಕೆ ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ಭೇಟಿ ನೀಡಿದ್ದಾರೆ. ಅದಕ್ಕೂ ಮುನ್ನ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಪ್ರಧಾನಿ ಮೋದಿ ಅವರು ದೆಹಲಿಯ ತಮ್ಮ ನಿವಾಸಕ್ಕೆ ಕರೆಸಿಕೊಂಡು ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೆಲ ಸಚಿವರ, ಶಾಸಕರ ಅಸಮಾಧಾನ, ನಾಯಕತ್ವ ಬದಲಾವಣೆ ಮಟ್ಟದಲ್ಲಿನ ಚರ್ಚೆ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಅರುಣ್ ಸಿಂಗ್ ಅವರು ಇಂದು ಮಧ್ಯಾಹ್ನ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನವೇ ಡಿವಿಎಸ್ ರಿಂದ ಪ್ರಧಾನಿ ಮೋದಿ ಭೇಟಿಯಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಭೇಟಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ತರಬಹುದು ಎಂದು ಹೇಳಲಾಗುತ್ತಿದೆ.

ಅಪಘಾತದಲ್ಲಿ ಒಂದೇ ಕುಟುಂಬದ 10 ಜನ ಸಾವು!

ವಿಜಯಸಾಕ್ಷಿ ಸುದ್ದಿ, ಆನಂದ

ಕಾರ್-ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ 10 ಜನರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಬೆಳ್ಳಂಬೆಳಿಗ್ಗೆ ಗುಜರಾತ್‌ನ ಆನಂದ್ ಜಿಲ್ಲೆಯ ಇಂದ್ರನಾಜ್ ಗ್ರಾಮದ ಸಮೀಪ ನಡೆದಿದೆ.

ಕಾರಿನಲ್ಲಿದ್ದ ಒಂದೇ ಕುಟುಂಬದ 10 ಜನರು ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ ಮಕ್ಕಳೂ ಇದ್ದರು. ವೇಗವಾಗಿ ಬಂದ ಟ್ರಕ್ ಎದುರಿಗೆ ಬರುತ್ತಿದ್ದ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ಲರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘತಾಕ್ಕೊಳಗಾದ ಕಾರು ವಾಟಾಮನ್ ಗೆ ಹೋಗುತ್ತಿತ್ತು. ಇನ್ನು ಡಿಕ್ಕಿ ಹೊಡೆದ ಈ ಟ್ರಕ್ ವಾಟಾಮನ್ ಕಡೆಯಿಂದ ಬರುತ್ತಿತ್ತು. ಈ ವೇಳೆ ಮುಖಾಮುಖಿಯಾಗಿದ್ದರಿಂದ ಕಾರು ನುಜ್ಜುಗುಜ್ಜಾಗಿದೆ. ಕಾರಿನೊಳಗೆ ಸಿಲುಕಿರುವ ಶವಗಳನ್ನು ಹೊರತೆಗೆಯುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಇದೀಗ ಮೃತರ ಗುರುತು ಪತ್ತೆಹಚ್ಚುವ ಕೆಲಸ ನಡೆದಿದೆ.