Home Blog Page 440

ಬೆಳ್ಳಟ್ಟಿಯಲ್ಲಿ ವಿಜೃಂಭಣೆಯ ಹಿಂದೂ ಸಮ್ಮೇಳನ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಹೋಬಳಿ ಮಟ್ಟದ ಹಿಂದೂ ಸಮ್ಮೇಳನವು ಸಡಗರ ಸಂಭ್ರಮದಿಂದ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಬೃಹತ್ ಭಾವಚಿತ್ರ ಮೆರವಣಿಗೆಯ ಮೂಲಕ ಶೋಭಾಯಾತ್ರೆ ಹಾಗೂ ಸಂಜೆ 5 ಗಂಟೆಗೆ ಶ್ರೀ ಭೀಮರಡ್ಡಿ ಸರ್ಕಲ್‌ನಲ್ಲಿ ಬೃಹತ್ ಸಮಾವೇಶ ನಡೆಯಿತು.

ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಬನ್ನಿಕೊಪ್ಪದ ಸುಜ್ಞಾನದೇವ ಸ್ವಾಮೀಜಿ, ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ರಾಜೇಂದ್ರಕುಮಾರ ಹಲಗಲಿ ವಹಿಸಿ ಮಾತನಾಡಿದರು. ದಿಕ್ಸೂಚಿ ಭಾಷಣವನ್ನು ನಾಗಪುರದ ಅಖಿಲ ಭಾರತೀಯ ಸಂಘಟನಾ ಮಂತ್ರಿ ಭಾರತೀಯ ಶಿಕ್ಷಣ ಮಂಡಲದ ಶಂಕರಾನಂದಜಿ ನೀಡಿದರು.

ಜ. 26ರಂದು ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಮಾರಂಭ, ಸಾಂಸ್ಕೃತಿಕ ಸಂಜೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗಜೇಂದ್ರಗಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ವತಿಯಿಂದ ಜ. 26ರಂದು ಬೆಳಗಾವಿಯ ನಂದಗಡದಲ್ಲಿ ರಾಜ್ಯ ಮಟ್ಟದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಸಮಾರಂಭ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಹೆಚ್.ಎಸ್. ಸೋಂಪೂರ ಹೇಳಿದರು.

ಶುಕ್ರವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಧಾರವಾಡದ ರೇವಣಸಿದ್ದೇಶ್ವರ ಪೀಠದ ಶ್ರೀ ಬಸವರಾಜ ದೇವರು, ರಾಜಗುರು ಮಡಿವಾಳ ಮಹಾಸ್ವಾಮಿಗಳು, ಚನ್ನವೀರ ದೇವರು ದಿವ್ಯ ಸಾನ್ನಿಧ್ಯ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಭುವನೇಶ್ವರಿ ಭಾವಚಿತ್ರ ಅನಾವರಣಗೊಳಿಸುವರು, ವಿಧಾನ ಪರಿಷತ್ ಶಾಸಕ ಚನ್ನರಾಜ ಹಟ್ಟಿಹೊಳಿ ತಾಯಿ ಚನ್ನಮ್ಮ ಭಾವಚಿತ್ರ ಅನಾವರಣಗೊಳಿಸುವರು. ಶಾಸಕ ದೊಡ್ಡನಗೌಡ ಪಾಟೀಲ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅನಾವರಣಗೊಳಿಸುವರು ಎಂದು ತಿಳಿಸಿದರು.

ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳ್ಳಿ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ಪ್ರತಿಷ್ಠಾನದಿಂದ ಕಳೆದ 16 ವರ್ಷಗಳಿಂದ ರಾಯಣ್ಣ ಹುತಾತ್ಮ ದಿನಾಚರಣೆ ಆಚರಿಸುತ್ತಾ ಬಂದಿದ್ದು, ಈ ವರ್ಷ ಇನ್ನೂ ಅದ್ಧೂರಿಯಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಹಿಂದಿನ ಸರ್ಕಾರ ಆದೇಶ ಹೊರಡಿಸಿದಂತೆ ಆಗಸ್ಟ್ 15 ಹಾಗೂ ಜನವರಿ 26ರಂದು ಎಲ್ಲ ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲಾಗಿತ್ತು. ಅದು ಕಡ್ಡಾಯವಾಗಿ ಜಾರಿಯಾಗಬೇಕು ಎಂದು ಹೇಳಿದರು.

ಅಹಿಂದ ನಾಯಕಿ ಭಾಗ್ಯಶ್ರೀ ಬಾಬಣ್ಣ ಮಾತನಾಡಿ, ರಾಜ್ಯಮಟ್ಟದ ಈ ಕಾರ್ಯಕ್ರಮಕ್ಕೆ ಎಲ್ಲಾ ಜಿಲ್ಲೆಯಿಂದ ಹೆಚ್ಚಿನ ಜನರು ಆಗಮಿಸಬೇಕೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶೇಖಣ್ಣ ಕಾಳೆ, ಹೇಮಂತ, ನಾಗರಾಜು ಮುಂತಾದವರಿದ್ದರು.

ಇದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಜ್ಞರ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿಗಳಾದ ಬಿ.ಎಸ್. ಪಾಟೀಲರಿಗೆ ರಾಜ್ಯ ಮಟ್ಟದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರಶಸ್ತಿ ನೀಡಲಾಗುವುದು ಎಂದು ಹೆಚ್.ಎಸ್. ಸೋಂಪೂರ ತಿಳಿಸಿದರು.

ಜ.25ರಂದು ಶ್ರೀ ಹೊಳಲಮ್ಮದೇವಿಯ ಪ್ರಾಣ ಪ್ರತಿಷ್ಠಾಪನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಶ್ರೀಮಂತಗಡದ ಶ್ರೀ ಹೊಳಲಮ್ಮದೇವಿ ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದರಿಂದ ಗರ್ಭಗುಡಿಯನ್ನು ಮುಚ್ಚಲಾಗಿತ್ತು.

ಇದೀಗ ಶ್ರೀ ಹೊಳಲಮ್ಮದೇವಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ಜ.23ರ ಶುಕ್ರವಾರ ಸಾಯಂಕಾಲ 5.30ಕ್ಕೆ ಗೋಮಾತಾ ಪೂಜೆ, ಮುತ್ತೈದೆಯರಿಂದ ಪೂರ್ಣಕುಂಭ ಪೂಜಾ ಪ್ರವೇಶ ಕಾರ್ಯಕ್ರಮ ನೆರವೇರಿದ್ದು, ಜ.24ರಂದು ದೇವತಾ ಶಾಂತಿ ಪೂಜಾ ಕಾರ್ಯಕ್ರಮ ಜರುಗಲಿದೆ. ಜ.25ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಹೊಳಲಮ್ಮ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವತಾ ಶಾಂತಿಹೋಮ, ಗೋ ಹೋಮ, ಪೂರ್ಣಾಹುತಿ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳು ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳ್ಳಟ್ಟಿಯ ಬಸವರಾಜ ಸ್ವಾಮೀಜಿ ಇವರ ಅಮೃತ ಹಸ್ತದಿಂದ ನೆರವೇರಲಿದೆ ಎಂದು ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಎಸ್ಆರ್‌ಟಿಸಿ ಬಸ್‌ಗೆ ಕಾರು ಡಿಕ್ಕಿ; ಸೀಟ್‌ ಬೆಲ್ಟ್‌ ನಿಂದ ಉಳೀತು ವೃದ್ದ ದಂಪತಿ ಜೀವ!

0

ರಾಮನಗರ:- ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ವೃದ್ಧ ದಂಪತಿ ಪ್ರಯಾಣಿಸುತ್ತಿದ್ದ ಕಾರು ಕೆಎಸ್ಆರ್‌ಟಿಸಿ ಬಸ್‌ಗೆ ಡಿಕ್ಕಿಯಾಗಿ ಮೂರ್ನಾಲ್ಕು ಪಲ್ಟಿಯಾದ ಘಟನೆ ಜರುಗಿದೆ.

ಕಳೆದ ಡಿಸೆಂಬರ್‌ನಲ್ಲಿ ರಾಮನಗರದ ಸಂಗಬಸವನದೊಡ್ಡಿ ಗ್ರಾಮದ ಬಳಿ ಈ ಅಪಘಾತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಸೀಟ್ ಬೆಲ್ಟ್ ಧರಿಸಿದ್ದರಿಂದ ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರು ಮೂಲದ 84 ವರ್ಷದ ಅಬ್ದುಲ್ ಫಜಲ್ ತಮ್ಮ ಪತ್ನಿ ಜೊತೆ ಸಂಬಂಧಿಕರ ಮದುವೆಗೆ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಎಕ್ಸ್‌ಪ್ರೆಸ್‌ವೇ ಎಕ್ಸಿಟ್ ಬಳಿ ಬಸ್ ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿಯಾಗಿತ್ತು. ಡಿಕ್ಕಿ ರಭಸಕ್ಕೆ ಕಾರು ಮೂರ್ನಾಲ್ಕು ಬಾರಿ ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದಿತ್ತು.

ವೃದ್ಧ ದಂಪತಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಲಿಚೆಂಟೈನ್ ಪ್ರಧಾನಿಗೆ ಸಚಿವ ಎಂ.ಬಿ.ಪಾಟೀಲ್ ಮನವಿ!

0

ದಾವೋಸ್‌: ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದ ಸಂದರ್ಭದಲ್ಲಿ, ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದ ಭಾಗವಾಗಿರುವ ಬಂಡವಾಳ ಹೂಡಿಕೆ ಬದ್ಧತೆಯ ಬಹುಪಾಲನ್ನು ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ರಾಜ್ಯ ಸರ್ಕಾರವು ಲಿಚೆಂಟೈನ್ ಪ್ರಧಾನಿಗೆ ಮನವಿ ಮಾಡಿಕೊಂಡಿದೆ.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಲಿಚೆಂಟೈನ್ ಪ್ರಧಾನಿ ಬ್ರಿಗೆಟ್ ಹ್ಯಾಸ್ ಅವರನ್ನು ಭೇಟಿ ಮಾಡಿ, ಆ ದೇಶದ ಕೈಗಾರಿಕಾ ಪರಿಣತಿಯನ್ನು ಕರ್ನಾಟಕದ ತಯಾರಿಕಾ ಹಾಗೂ ನಾವೀನ್ಯತಾ ಪರಿಸರದೊಂದಿಗೆ ಸಮರ್ಥವಾಗಿ ಬಳಸಿಕೊಳ್ಳುವ ಕುರಿತು ಫಲಪ್ರದ ಚರ್ಚೆ ನಡೆಸಿದರು. ಈ ವೇಳೆ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಲಿಚೆಂಟೈನ್ ಪ್ರಧಾನಿಗೆ ರಾಜ್ಯಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಲಾಯಿತು.

ಇದೇ ವೇಳೆ ಜಾಗತಿಕ ಕ್ಲೌಡ್ ಮತ್ತು ಡಿಜಿಟಲ್ ಮೂಲಸೌಲಭ್ಯ ಕಂಪನಿಗಳನ್ನು ರಾಜ್ಯಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಅಮೆಜಾನ್ ವೆಬ್ ಸರ್ವಿಸಸ್ ಉಪಾಧ್ಯಕ್ಷ ಮೈಕಲ್ ಪುಂಕೆ ಅವರೊಂದಿಗೆ ವಿವರವಾದ ಮಾತುಕತೆ ನಡೆಸಲಾಗಿದ್ದು, ಕರ್ನಾಟಕದಲ್ಲಿನ ಕುಶಲ ತಂತ್ರಜ್ಞರು, ನವೋದ್ಯಮಗಳು ಮತ್ತು ಡಿಜಿಟಲ್ ಮೂಲಸೌಲಭ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡೇಟಾ ಸೆಂಟರ್ ಕ್ಷೇತ್ರಕ್ಕೆ ಅಗತ್ಯವಾದ ಉತ್ತೇಜನೆಗಳು, ವಿದ್ಯುತ್ ಲಭ್ಯತೆ ಹಾಗೂ ಮೂಲಸೌಲಭ್ಯಗಳನ್ನು ಒದಗಿಸುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿದೆ. ಅಲ್ಲದೆ ಉದ್ಯಮ ಸ್ನೇಹಿ ವಾತಾವರಣದ ಬಗ್ಗೆ ವೋಲ್ವೊ ಕಂಪನಿಯೂ ತೃಪ್ತಿ ವ್ಯಕ್ತಪಡಿಸಿದ್ದು, ತಯಾರಿಕೆ, ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಸದ್ಬಳಕೆಯ ಮೂಲಕ ರಾಜ್ಯದಲ್ಲಿನ ವಾಹನ ತಯಾರಿಕಾ ಚಟುವಟಿಕೆಗಳನ್ನು ವಿಸ್ತರಿಸಲು ಸರ್ಕಾರ ಆಹ್ವಾನ ನೀಡಿದೆ.

ಕುಡಿದು ವಾಹನ ಚಾಲನೆ: ಬೆಂಗಳೂರಿನಲ್ಲಿ 11,500 ಡಿಎಲ್ ರದ್ದು, ಶಾಲಾ ಬಸ್ ಚಾಲಕರ ಮೇಲೂ ಕಠಿಣ ಕ್ರಮ!

0

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಸಂಚಾರಿ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಕಳೆದ ವರ್ಷ ಡ್ರಿಂಕ್ ಅಂಡ್ ಡ್ರೈವ್ ಪ್ರಕರಣದಲ್ಲಿ ಸಿಕ್ಕಿಬಿದ್ದ 12,900 ಚಾಲಕರ ಪೈಕಿ 11,500 ಜನರ ಚಾಲನಾ ಪರವಾನಗಿಯನ್ನು (ಡಿಎಲ್) ರದ್ದು ಮಾಡಲಾಗಿದೆ.

ಈ ಕುರಿತು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸ್ಪಷ್ಟಪಡಿಸಿದ್ದು, ಪದೇ ಪದೇ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಚಾಲಕರ ಡಿಎಲ್‌ಗಳನ್ನು ಪರಿಶೀಲಿಸಿ ರದ್ದುಗೊಳಿಸಲಾಗಿದೆ ಎಂದರು. ಉಳಿದ ಪ್ರಕರಣಗಳ ಪರಿಶೀಲನೆಯೂ ಮುಂದುವರಿದಿದೆ. ಇತ್ತೀಚೆಗೆ ಶಾಲಾ ವಾಹನ ಚಾಲಕರು ಕುಡಿದು ವಾಹನ ಚಾಲನೆ ಮಾಡುತ್ತಿರುವ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, 5,110 ಶಾಲಾ ವಾಹನಗಳ ತಪಾಸಣೆಯಲ್ಲಿ 26 ಬಸ್ ಚಾಲಕರು ಮದ್ಯಪಾನ ಮಾಡಿಕೊಂಡು ಚಾಲನೆ ಮಾಡುತ್ತಿರುವುದು ಪತ್ತೆಯಾಗಿದೆ.

ಈ ಚಾಲಕರ ವಿರುದ್ಧ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಡಿಎಲ್ ರದ್ದುಗೊಳಿಸುವಂತೆ ಆರ್‌ಟಿಒಗೆ ವರದಿ ಸಲ್ಲಿಸಲಾಗಿದೆ. ಶಾಲಾ ಆಡಳಿತ ಮಂಡಳಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ನಮ್ಮ ಬಿಜೆಪಿ ಮೈತ್ರಿಗೆ ಯಾವುದೇ ಅಡ್ಡಿ ಆತಂಕ ಇಲ್ಲ: ನಿಖಿಲ್ ಕುಮಾರಸ್ವಾಮಿ

0

ಮಂಡ್ಯ: ಮಂಡ್ಯ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಅವರ ಸ್ಥಾನಕ್ಕೆ ಶೋಭೆ ತರುವಂತ ಮಾತಗಳನ್ನಾಡಲಿ. ಅವರು ರಾಜಕೀಯವಾಗಿ ಬೆಳೆದು ಬಂದ ದಾರಿಯನ್ನ ಮರೆತಿದ್ದಾರೆ. ಆ ದಾರಿಯನ್ನ ಮರೆತಿರುವವರು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿಗೆ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಮಂಡ್ಯದ ಹನಕೆರೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು. ನಮಗೂ ನಾಲಿಗೆಯಿದೆ ಅವರ ತರ ಹರಿಬಿಡುವುದಿಲ್ಲ. ಸಮಯ ಬಂದಾಗ ಜಿಲ್ಲೆಯ ಜನ ಇದಕ್ಕೆ ಉತ್ತರ ಕೊಡ್ತಾರೆ. ಅವರು ಹೇಳಿಕೆ ಕೊಡುವುದಕ್ಕಿಂತ ಮುಂಚೆ ಯೋಚನೆ ಮಾಡಿ ಮಾತನಾಡಲಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಅನ್ನು ಓಡಿಸುವಂತ ಶಕ್ತಿ ಇರುವುದು ಜಿಲ್ಲೆಯ ಜನತೆಗೆ. ಯಾರನ್ನ ಜಿಲ್ಲೆಯಲ್ಲಿ ಉಳಿಸಿಕೊಬೇಕು ಯಾರನ್ನ ಕಳಿಸಬೇಕು ಎಂದು ಜಿಲ್ಲೆಯ ಜನ ತೀರ್ಮಾನಿಸುತ್ತಾರೆ. ಕಳೆದ ಎರಡೂವರೆ ವರ್ಷದ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ರಾಜ್ಯದ ಜನ ನೋಡಿದ್ದಾರೆ. ಇವತ್ತು ಗಲ್ಲಿ ಗಲ್ಲಿ ಗಲ್ಲಿಯಲ್ಲಿ ರಾಜ್ಯ ಸರ್ಕಾರವನ್ನು ಬಾಯಿಗೆ ಬಂದಂಗೆ ಬೈತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಬಿಜೆಪಿ ಮೈತ್ರಿ ಗಟ್ಟಿಯಾಗಿದೆ. ರಾಷ್ಟ್ರಮಟ್ಟದ ನಾಯಕರ ಜೊತೆ ನಮ್ಮ ಮೈತ್ರಿ ಆಗಿದೆ. ರಾಜ್ಯದಲ್ಲಿ ನಮ್ಮ ಬಿಜೆಪಿ ಮೈತ್ರಿಗೆ ಯಾವುದೇ ಅಡ್ಡಿ ಆತಂಕ ಇಲ್ಲ ಮೈತ್ರಿ ಗಟ್ಟಿಯಾಗಿದೆ. ಇಲ್ಲಿನ ಕೆಲವರು ತಮ್ಮ ರಾಜಕೀಯ ಅಸ್ತಿತ್ವ ಕಳೆದುಕೊಳ್ಳೋ ಭೀತಿಯಲ್ಲಿ ಮೈತ್ರಿ ಬೇಡ ಅಂತಿದ್ದಾರೆ. ನಾವು ನೀವು ಮೈತ್ರಿ ಬಗ್ಗೆ ಚರ್ಚೆ ಮಾಡಿದ್ರೆ ಏನು ಸಿಗುವುದಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಮಂಡ್ಯ ಜಿಲ್ಲೆಯ ಹನಕೆರೆ, ಬೂದನೂರು. ಕೊಮ್ಮೇರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಿದರು.ಕಾರ್ಯಕರ್ತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡರು. ಮಂಡ್ಯದ ಹನಕರೆ ಬಳಿ ಟ್ರ್ಯಾಕ್ಟರ್ ಗಳ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ, ಹಾರ ಹಾಕಿ ನಿಖಿಲ್ ಕುಮಾರಸ್ವಾಮಿ ಅವರನ್ನ ಜೆಡಿಎಸ್ ಕಾರ್ಯಕರ್ತರು ಹಾಗೂ ತಾಲ್ಲೂಕಿನ ಪ್ರಮುಖ ಮುಖಂಡರು ಅದ್ದೂರಿಯಾಗಿ ಸ್ಚಾಗತ ಕೋರಿದರು.

ನಂತರ ಮಂಡ್ಯ ಹುಲಿವಾನ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾಲಭೈರವೇಶ್ವರಸ್ವಾಮಿ ಮಹಾದ್ವಾರ, ಶ್ರೀ ಹಿರಿದೇವಮ್ಮ ಶ್ರೀ ಅಚ್ಚಾಳಮ್ಮ ಮತ್ತು ಶ್ರೀ ಅಟ್ಟಿಲಕ್ಕಮ್ಮನವರ ದೇವಸ್ಥಾನ ಲೋಕಾರ್ಪಣೆ ಸಮಾರಂಭದಲ್ಲಿ ಗ್ರಾಮಸ್ಥರು ಎತ್ತಿನಗಾಡಿ ಮೂಲಕ ಅದ್ದೂರಿ ಸ್ವಾಗತ ಕೋರಿದರು.

KLE ಚೇರ್ಮನ್ ಹುದ್ದೆಯಿಂದ ಪ್ರಭಾಕರ ಕೋರೆ ನಿರ್ಗಮನ: ಪ್ರೀತಿ ಕೋರೆ ನೂತನ ಕಾರ್ಯಾಧ್ಯಕ್ಷ

0

ಬೆಳಗಾವಿ: ಸುದೀರ್ಘ 40 ವರ್ಷಗಳ ಕಾಲ ಕರ್ನಾಟಕ ಲಿಂಗಾಯತ ಎಜುಕೇಶನ್ ಸಂಸ್ಥೆ (ಕೆಎಲ್ಇ)ಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಡಾ. ಪ್ರಭಾಕರ ಕೋರೆ ಇದೀಗ ಆ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಗೆ ಸಲ್ಲಿಸಿದ್ದ ತಮ್ಮ ನಾಮಪತ್ರವನ್ನು ಅಚ್ಚರಿಯಾಗಿ ವಾಪಸ್ ಪಡೆದಿದ್ದಾರೆ.

ಕೆಎಲ್ಇ ನಿರ್ದೇಶಕ ಹುದ್ದೆಗೆ ಡಾ. ಪ್ರಭಾಕರ ಕೋರೆ ಮೊದಲು ನಾಮಪತ್ರ ಸಲ್ಲಿಸಿದ್ದರು. ಆದರೆ, ನಂತರ ದಿಢೀರ್ ನಿರ್ಧಾರವಾಗಿ ನಾಮಪತ್ರ ಹಿಂಪಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದ್ದಾರೆ. 1984ರಲ್ಲಿ ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾದ ಅವರು, ಬಳಿಕ ದೀರ್ಘಕಾಲ ಕಾರ್ಯಾಧ್ಯಕ್ಷ ಹುದ್ದೆಯನ್ನು ನಿರ್ವಹಿಸಿದ್ದರು.

ಡಾ. ಪ್ರಭಾಕರ ಕೋರೆ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕೆಎಲ್ಇ ಸಂಸ್ಥೆ ಕೇವಲ 40 ಅಂಗ ಸಂಸ್ಥೆಗಳನ್ನು ಹೊಂದಿತ್ತು. ಅವರ ನಾಯಕತ್ವದಲ್ಲಿ ಸಂಸ್ಥೆ ಗಣನೀಯವಾಗಿ ವಿಸ್ತರಿಸಿಕೊಂಡು, ಪ್ರಸ್ತುತ 240ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿರುವ ಬೃಹತ್ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ.

ಕೆಎಲ್ಇ ನಿರ್ದೇಶಕ ಹುದ್ದೆಗೆ ಸ್ಪರ್ಧಿಸಿದ್ದ ಮಹಾಂತೇಶ ಕೌಜಲಗಿ, ಅಮಿತ್ ಕೋರೆ, ಡಾ. ವಿಶ್ವನಾಥ್ ಪಾಟೀಲ ಸೇರಿದಂತೆ ಒಟ್ಟು 14 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ, ಡಾ. ಪ್ರಭಾಕರ ಕೋರೆ ಅವರ ಪುತ್ರಿ ಪ್ರೀತಿ ಕೋರೆ ಅವರು ಕೆಎಲ್ಇ ಸಂಸ್ಥೆಯ ನೂತನ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಪ್ರೀತಿ ಕೋರೆ ಅವರು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆಎಲ್ಇ ಸಂಸ್ಥೆಯ ಮುಂದಿನ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದಾರೆ.

ಗೋ ಬ್ಯಾಕ್ ಗವರ್ನರ್ ಅನ್ನೋದು ರಾಜಕೀಯ ನಾಟಕ: ಹೆಚ್.ಡಿ. ಕುಮಾರಸ್ವಾಮಿ ಕಿಡಿ

0

ಮಂಡ್ಯ: ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗೋ ಬ್ಯಾಕ್ ಎನ್ನುತ್ತಿರುವ ರಾಜ್ಯ ಕಾಂಗ್ರೆಸ್ ಏನು ಸಾಧಿಸುವುದಿಲ್ಲ. ಗೋ‌ ಬ್ಯಾಕ್ ಗವರ್ನರ್‌ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.

ಬದಲಿಗೆ ಕಳೆದ ಎರಡೂ ಮುಕ್ಕಾಲು ವರ್ಷಗಳಲ್ಲಿ ನಡೆಸಿರುವ ಅನ್ಯಾಯ, ಅಕ್ರಮಗಳನ್ನು ಮರೆಮಾಚಲು ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ಕಾಂಗ್ರೆಸ್ ಸರ್ಕಾರ ಅಪಪ್ರಚಾರ ಮಾಡುತ್ತಿದೆ ಎಂದು ಅವರು ದೂರಿದರು. ಮೇಲುಕೋಟೆ ವಿಧಾನಸಭೆ ಕ್ಷೇತ್ರದ ಶಿವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಮಾರಮ್ಮ ದೇವಿ ದೇವಾಲಯ ಉದ್ಘಾಟನೆ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ಈ ಹಿಂದೆ ಕಾಂಗ್ರೆಸ್ ರಾಜ್ಯಪಾಲರುಗಳ ವಿಷಯದಲ್ಲಿ ಹೇಗೆ ನಡೆದುಕೊಂಡಿತ್ತು ಎಂಬುದರ ಬಗ್ಗೆ ಒಮ್ಮೆ ನೆನಪು ಮಾಡಿಕೊಂಡರೆ ಅವರ ಬಣ್ಣ ಏನೆಂದು ಗೊತ್ತಾಗುತ್ತದೆ. ವಿಶೇಷ ಅಧಿವೇಶನ ಕರೆದು ಅಲ್ಲಿ ಸಮಯ ಪೋಲು ಮಾಡುತ್ತಿದ್ದಾರೆ. ರಾಜ್ಯಪಾಲರು ಭಾಷಣ ಓದದಿರುವ ಅಥವಾ ಮೊಟಿಕುಗೊಳಿಸಿರುವ ಘಟನೆ ಇದೇ ಮೊದಲ ಬಾರಿ ನಡೆದಿದ್ದು ಅಲ್ಲ.

ಜೆ‌.ಹೆಚ್. ಪಟೇಲರು ಸಿಎಂ ಆಗಿದ್ದಾಗ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಅಂದಿನ ಸಂದರ್ಭವನ್ನು ನೆನಪು ಮಾಡಿಕೊಳ್ಳಬೇಕು. ಈಗ ನೋಡಿದರೆ ಅನಗತ್ಯವಾಗಿ ವಿಧಾನಸಭೆ ಕಲಾಪದಲ್ಲಿ ಸಂಘರ್ಷ ನಡೆಯುತ್ತಿದೆ. ಈ ಸಂಘರ್ಷಗಳಿಂದ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದಾ? ಗೋ‌ ಬ್ಯಾಕ್ ಗವರ್ನರ್‌ ಅನ್ನೋದು ಕೇವಲ ರಾಜಕೀಯ ನಾಟಕ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ಮನರೇಗಾ ವಿಷಯ ಇಟ್ಟಿಕೊಂಡು ಕೇಂದ್ರ ಸರ್ಕಾರವನ್ನು ನಿಂದಿಸುವುದು ಈ ಸರ್ಕಾರದ ಉದ್ದೇಶ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆದಿದ್ದಾರೆ‌ ಎಂದ ಕೇಂದ್ರ ಸಚಿವರು; ಪದೇ ಪದೇ ದಲಿತರ ಹೆಸರು ಬಳಸಿ ತಮ್ಮ ಸ್ಥಾನಮಾನ ಗಟ್ಟಿಗೊಳಿಸುವ ಪ್ರಯತ್ನದಲ್ಲಿದ್ದಾರೆ‌. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಬಳಸಿದ್ದಾರೆ. ಇದು ದಲಿತರ ಉದ್ಧಾರವೇ? ಎಂದು ಕಿಡಿಕಾರಿದರು.

ಕಾಫಿನಾಡಲ್ಲೊಂದು ಸಾಗರ ದಾಟಿದ ಪ್ರೇಮ‌ ಕಥೆ: ಪ್ರೀತಿ ಮೂಲಕ ಒಂದಾದ ಭಾರತದ ರಾಮ, ಚೀನಾದ ಬುದ್ಧ!

0

ಚಿಕ್ಕಮಗಳೂರು: ಕಾಫಿನಾಡಲ್ಲಿ ಸಾಗರ ದಾಟಿ ಬಂದ ಅಪರೂಪದ ಪ್ರೇಮಕಥೆಯೊಂದು ಇದೀಗ ಮದುವೆಯಾಗಿ ಮುಕ್ತಾಯ ಕಂಡಿದೆ. ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ನಿವಾಸಿ ರೂಪಕ್ ಹಾಗೂ ಚೀನಾ ಮೂಲದ ಯುವತಿ ಜಡೆ ಪ್ರೀತಿಯ ಮೂಲಕ ಒಂದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿ, ಬಳಿಕ ಅದೇ ಪ್ರೀತಿ ಮದುವೆಯವರೆಗೆ ತಲುಪಿದೆ. ಕಾಫಿನಾಡ ಹುಡುಗ ಮತ್ತು ಚೀನಾ ಹುಡುಗಿ ಆಸ್ಟ್ರೇಲಿಯಾದಲ್ಲಿ ಪ್ರೀತಿಸಿ, ಭಾರತದಲ್ಲಿ ಮದುವೆಯಾಗಿ ಗಮನ ಸೆಳೆದಿದ್ದಾರೆ.

ಇವರ ಅದ್ಧೂರಿ ವಿವಾಹ ಸಮಾರಂಭವು ಚಿಕ್ಕಮಗಳೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಚೀನಾ ಮೂಲದ ಯುವತಿ ಜಡೆ ಕೈಹಿಡಿದ ರೂಪಕ್‌ಗೆ, ವಧುವಿನ ತಂದೆ-ತಾಯಿ ಚೀನಾದಿಂದಲೇ ಆಗಮಿಸಿ ಧಾರೆ ಎರೆದಿದ್ದು ವಿಶೇಷವಾಗಿತ್ತು.

ಭಾರತ ಮತ್ತು ಚೀನಾದ ಸಂಪ್ರದಾಯಗಳಲ್ಲಿ ಹಲವು ಸಾಮ್ಯತೆಗಳಿವೆ ಎಂದು ಹೇಳಿದ ಜಡೆ, ಎರಡು ದೇಶಗಳ ಸಂಸ್ಕೃತಿಯ ಒಗ್ಗೂಡಿಕೆಗೆ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಚಿಕ್ಕಮಗಳೂರಿನ ನೈಸರ್ಗಿಕ ಸೌಂದರ್ಯ ನೋಡಿ ಫಿದಾ ಆಗಿರುವುದಾಗಿ ಹೇಳಿದರು.

ಇಬ್ಬರ ಮದುವೆಗೆ ಕುಟುಂಬಸ್ಥರು ಸಂಪೂರ್ಣ ಒಪ್ಪಿಗೆ ನೀಡಿದ್ದು, ಸಂಬಂಧಿಕರೆಲ್ಲರನ್ನು ಕರೆದು ರೂಪಕ್ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಯುವಕ-ಯುವತಿ ಇಬ್ಬರೂ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದಾರೆ. ಕಾಫಿನಾಡಲ್ಲಿ ನಡೆದ ಈ ಭಾರತ–ಚೀನಾ ಪ್ರೇಮವಿವಾಹವು ಎಲ್ಲರ ಗಮನ ಸೆಳೆದಿದೆ.

error: Content is protected !!