Home Blog Page 449

ಶಿವಮೊಗ್ಗ ಡಬಲ್ ಮರ್ಡರ್ ಪ್ರಕರಣ ಭೇದ: ತಮ್ಮನ ಮಗನಿಂದಲೇ ನಡೆಯಿತು ಪೈಶಾಚಿಕ ಕೃತ್ಯ

0

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ನಡೆದ ವೃದ್ಧ ದಂಪತಿ ಸಾವಿನ ಪ್ರಕರಣ ಇದೀಗ ಭೀಕರ ಸತ್ಯವನ್ನು ಬಹಿರಂಗಪಡಿಸಿದೆ. ಮನೆಯಲ್ಲಿಯೇ ಮೃತಪಟ್ಟಿದ್ದ ಚಂದ್ರಪ್ಪ (80) ಮತ್ತು ಜಯಮ್ಮ (75) ಅವರನ್ನು ಕೊಲೆ ಮಾಡಿರುವುದು ಸಂಬಂಧಿಕ ಹಾಗೂ ವೈದ್ಯ ಡಾ. ಮಲ್ಲೇಶ್ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

ತಮ್ಮ ದೊಡ್ಡಪ್ಪ–ದೊಡ್ಡಮ್ಮನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನೇ, ಸಾಲದ ಒತ್ತಡದಿಂದ ಹಣಕ್ಕಾಗಿ ಬೇಡಿಕೆ ಇಟ್ಟು, ನಿರಾಕರಣೆ ಎದುರಾದಾಗ ಪಕ್ಕಾ ಯೋಜನೆಯೊಂದಿಗೆ ಕೊಲೆ ಎಸಗಿದ್ದಾನೆ. ಚಿಕಿತ್ಸೆ ನೆಪದಲ್ಲಿ ಇಬ್ಬರಿಗೂ ಅನಸ್ಥೇಶಿಯಾ ಇಂಜೆಕ್ಷನ್ ನೀಡಿದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗ ಎಸ್‌ಪಿ ನಿಖಿಲ್ ಪ್ರಕಾರ, ಆರೋಪಿ ಇಬ್ಬರಿಗೂ ಹೈ ಡೋಸ್ ಔಷಧ ನೀಡಿ ಯಾವುದೇ ಗಾಯದ ಗುರುತು ಬಾರದಂತೆ ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿ, ಸುಮಾರು 80 ಗ್ರಾಂ ಚಿನ್ನವನ್ನು ಅಡವಿಟ್ಟು ಸಾಲ ತೀರಿಸಲು ಯತ್ನಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಆರಂಭದಲ್ಲಿ ಪ್ರಕರಣ ದರೋಡೆ ಕೊಲೆ ಎಂದು ಶಂಕಿಸಲಾಗಿತ್ತು. ಮಕ್ಕಳು ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆಗೆ ಭೇಟಿ ನೀಡಿದಾಗ ಬೆಡ್‌ರೂಮ್‌ನಲ್ಲಿ ಚಂದ್ರಪ್ಪ ಮತ್ತು ಹಾಲ್‌ನಲ್ಲಿ ಜಯಮ್ಮ ಶವ ಪತ್ತೆಯಾಗಿತ್ತು. ತನಿಖೆ ಮುಂದುವರಿದಂತೆ, ನಿಜವಾದ ಆರೋಪಿ ಮನೆಯೊಳಗೇ ಇದ್ದ ಸಂಬಂಧಿಕ ವೈದ್ಯನೇ ಎಂಬುದು ಬಯಲಾಗಿದೆ.

ಈ ಘಟನೆ, ನಂಬಿಕೆಯ ಸಂಬಂಧವೇ ಹೇಗೆ ಭೀಕರ ಅಪರಾಧಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಭಯಾನಕ ಉದಾಹರಣೆಯಾಗಿದೆ.

ಕಲಬುರಗಿಯಲ್ಲಿ ಮತ್ತೊಂದು ಬರ್ಬರ ಹತ್ಯೆ: ಲಾಡ್ಜ್ ಹಿಂಭಾಗದಲ್ಲಿ ಯುವಕನನ್ನು ಕೊಚ್ಚಿ ಕೊಲೆ

0

ಕಲಬುರಗಿ: ನಗರ ಮತ್ತೊಂದು ಭೀಕರ ಕೊಲೆಗೆ ಸಾಕ್ಷಿಯಾಗಿದೆ. ನಗರದ ಲಾಡ್ಜ್ ಒಂದರ ಹಿಂಭಾಗದ ಪಾಳುಬಿದ್ದ ಪಾರ್ಕ್‌ನಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮೃತ ಯುವಕನನ್ನು ಸಯ್ಯದ್ ಮೆಹಬೂಬ್ ಅಲಿಯಾಸ್ ಬಾಡಿ (21) ಎಂದು ಗುರುತಿಸಲಾಗಿದೆ. ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫಾರೆನ್ಸಿಕ್ ತಜ್ಞರು ಹಾಗೂ ಶ್ವಾನ ದಳದಿಂದಲೂ ತನಿಖೆ ಮುಂದುವರಿದಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಮೆಹಬೂಬ್ ಕೆಲ ಕಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಈ ಹಿನ್ನೆಲೆ ಹಳೆಯ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇನ್ನು ಮಗನ ಸಾವಿನ ಸುದ್ದಿ ಕೇಳಿ ಮೆಹಬೂಬ್‌ನ ತಂದೆ ಭಾವೋದ್ರಿಕ್ತರಾಗಿದ್ದು,
“ಅವನು ಮನೆಗೆ ಬರ್ತಿರಲಿಲ್ಲ. ಯಾವಾಗಲೂ ಹೊರಗಡೆಯೇ ಇರುತ್ತಿದ್ದ. ಈಗ ಮಗನನ್ನೇ ಕಳೆದುಕೊಂಡೆ” ಎಂದು ಕಣ್ಣೀರಿಟ್ಟಿದ್ದಾರೆ.

ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ಮೂಲಕ ಹುಡುಕಾಟ ತೀವ್ರಗೊಳಿಸಲಾಗಿದೆ.

ರಾಜೀವ್‌ ಗೌಡ ನಟೋರಿಯಸ್‌ ಕ್ರಿಮಿನಲ್‌, ಆತನ ಮೇಲೆ 16 ಕೇಸ್‌ ಇದೆ: ಎಸ್‌ಪಿ ಕುಶಾಲ್ ಚೌಕ್ಸಿ

0

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಪೌರಾಯುಕ್ತರಿಗೆ ಅಸಭ್ಯವಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗ ಒಂದು ವಾರ ಕಳೆದರೂ ಬಂಧನವಾಗದಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿದೆ. ಘಟನೆ ನಡೆದ ದಿನದಿಂದಲೇ ರಾಜೀವ್ ಗೌಡ ಭೂಗತವಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹೆಚ್ಚಾಗಿದೆ.

“ರಾಜೀವ್ ಗೌಡ ಬೆನ್ನಿಗೆ ಪ್ರಭಾವಿ ನಾಯಕರು ನಿಂತಿದ್ದಾರೆ” ಎಂದು ಬಿಜೆಪಿ–ಜೆಡಿಎಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಪ್ರಕರಣವು ಕೇವಲ ಕ್ರಿಮಿನಲ್ ವಿಚಾರವಾಗಿರದೆ, ರಾಜಕೀಯ ರಕ್ಷಣೆ ಆರೋಪಕ್ಕೆ ತಿರುಗಿದೆ.

ಸರ್ಕಾರಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದಂತಹ ಗಂಭೀರ ಪ್ರಕರಣದಲ್ಲಿ, ದಿನಗಳಾದರೂ ಬಂಧನವಾಗದಿರುವುದು ಜನಸಾಮಾನ್ಯರಲ್ಲಿ ‘ಉಳ್ಳವರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ’ ಎಂಬ ಭಾವನೆಗೆ ಕಾರಣವಾಗಿದೆ.

ರಾಜೀವ್ ಗೌಡ ಎಫ್‌ಐಆರ್ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ, ಬಂಧನಕ್ಕೆ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್, “ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳಿರುವುದೂ ಮಹತ್ವ ಪಡೆದಿದೆ.

ಇನ್ನೊಂದೆಡೆ, ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ, ರಾಜೀವ್ ಗೌಡ ವಿರುದ್ಧ 16ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಸ್ಪಷ್ಟಪಡಿಸಿದ್ದು, ಅವರನ್ನು ‘ನಟೋರಿಯಸ್ ಕ್ರಿಮಿನಲ್’ ಎಂದು ವಿವರಿಸಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧೆಡೆ ವಿಶೇಷ ತಂಡಗಳ ಮೂಲಕ ಹುಡುಕಾಟ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಾಯುಕ್ತ ದಾಳಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ: ಜಮೀರ್ ಆಪ್ತನ ಮನೆಯಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ

0

ಬೆಂಗಳೂರು: ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಸರ್ಫರಾಜ್ ಖಾನ್ ವಿರುದ್ಧ ನಡೆದ ಲೋಕಾಯುಕ್ತ ದಾಳಿ ಭಾರೀ ಸಂಚಲನ ಮೂಡಿಸಿದೆ. ದಾಳಿಯಲ್ಲಿ ಒಟ್ಟು 14.38 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿರುವುದು ಇದೀಗ ಅಧಿಕೃತವಾಗಿ ಬಹಿರಂಗವಾಗಿದೆ.

ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪ್ರಕಾರ, ದಾಳಿಯಲ್ಲಿ 4 ಮನೆಗಳು, 37 ಎಕರೆ ವ್ಯವಸಾಯ ಭೂಮಿ ದಾಖಲೆಗಳು (ಸುಮಾರು 8 ಕೋಟಿ ರೂ. ಮೌಲ್ಯ), 2.99 ಕೋಟಿ ರೂ. ಚಿನ್ನಾಭರಣ, ಐಷಾರಾಮಿ ಕಾರುಗಳು, 66,500 ರೂ. ನಗದು, 1 ಕೋಟಿ 29 ಸಾವಿರ ರೂ. ಬ್ಯಾಂಕ್ ಠೇವಣಿ ಪತ್ತೆಯಾಗಿವೆ.

ಡಿಸೆಂಬರ್ 12ರಂದು ಸರ್ಫರಾಜ್ ಖಾನ್‌ಗೆ ಸಂಬಂಧಿಸಿದಂತೆ ಒಟ್ಟು 13 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು.

ಇದಕ್ಕೂ ಮುನ್ನ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಪಂ ವ್ಯಾಪ್ತಿಯ ವಣಚಲಿನಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪಗಳು ಕೇಳಿಬಂದಿದ್ದು, ಸರ್ಫರಾಜ್ ಖಾನ್ ವಿರುದ್ಧದ ಸಂಶಯವನ್ನು ಮತ್ತಷ್ಟು ಗಟ್ಟಿಮಾಡಿದೆ.

ಪ್ರಯಾಗ್‌ರಾಜ್‌ನಲ್ಲಿ ಆತಂಕದ ಕ್ಷಣ: ವಾಯುಪಡೆಯ ತರಬೇತಿ ವಿಮಾನ ಪತನ

0

ಲಕ್ನೋ: ಪ್ರಯಾಗ್‌ರಾಜ್‌ನಲ್ಲಿ ಇಂದು ಮಧ್ಯಾಹ್ನ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜನವರಿ 21ರಂದು ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಸಂಭವಿಸಿದ ಈ ಘಟನೆ, ಸಂಗಮದ ಸಮೀಪದ ಪ್ರದೇಶದಲ್ಲಿ ನಡೆದಿದೆ.

ಸಂಗಮದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಕೆರೆಯಲ್ಲಿ ಮೈಕ್ರೋಲೈಟ್ ತರಬೇತಿ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ಅಪಘಾತದ ತಕ್ಷಣವೇ ರಕ್ಷಣಾ ಪಡೆಗಳು ಕಾರ್ಯಾಚರಣೆಗೆ ಧಾವಿಸಿದ್ದು, ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಪೈಲಟ್‌ಗಳಿಗೆ ಸಣ್ಣಮಟ್ಟದ ಗಾಯಗಳಾಗಿದ್ದರೂ, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನಾ ಸ್ಥಳದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಅಪಘಾತದ ಕಾರಣ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

‘200 ಡಾಲರ್ ಹೂಡಿಕೆ ಮಾಡಿ, 10 ಪಟ್ಟು ಲಾಭ’ ವಿಡಿಯೋ ಫೇಕ್: ಸಾರ್ವಜನಿಕರಿಗೆ ಸುಧಾ ಮೂರ್ತಿ ತೀವ್ರ ಎಚ್ಚರಿಕೆ

0

ಡೀಪ್‌ಫೇಕ್ ತಂತ್ರಜ್ಞಾನ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ರೀತಿಯ ವಂಚನೆಗೆ ದಾರಿ ಮಾಡಿಕೊಟ್ಟಿದೆ. “ಇಷ್ಟು ಹಣ ಹೂಡಿಕೆ ಮಾಡಿ, ಅಷ್ಟೇ ಲಾಭ ಗಳಿಸಿ” ಎಂಬ ಆಕರ್ಷಕ ಮಾತುಗಳೊಂದಿಗೆ ಹರಿದಾಡುತ್ತಿರುವ ಅನೇಕ ಸೆಲೆಬ್ರಿಟಿ ವಿಡಿಯೋಗಳು ನಿಜವಲ್ಲ — ಅವು ಡೀಪ್‌ಫೇಕ್ ಮೂಲಕ ತಯಾರಿಸಲಾದ ನಕಲಿ ವಿಡಿಯೋಗಳಾಗಿವೆ.

ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಬಳಸಿಕೊಂಡು ನಕಲಿ ವಿಡಿಯೋಗಳನ್ನು ಸೃಷ್ಟಿಸಲಾಗಿದೆ. ಇದರಿಂದ ಸಾರ್ವಜನಿಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಅವರು ಈ ವಂಚನೆ ವಿರುದ್ಧ ಧ್ವನಿ ಎತ್ತಿದ್ದಾರೆ. “200 ಡಾಲರ್ ಹೂಡಿಕೆ ಮಾಡಿ ಹತ್ತು ಪಟ್ಟು ಲಾಭ ಪಡೆಯಬಹುದು” ಎಂದು ತಾನು ಹೇಳುತ್ತಿರುವಂತೆ ತೋರಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ.

“ನನ್ನ ಚಿತ್ರ ಮತ್ತು ಧ್ವನಿಯನ್ನು ಬಳಸಿ ಹಣಕಾಸು ಹೂಡಿಕೆಗಳ ಪ್ರಚಾರ ಮಾಡುತ್ತಿರುವ ವಿಡಿಯೋಗಳು ಸಂಪೂರ್ಣವಾಗಿ ನಕಲಿ. ಇವು ನನ್ನ ಅರಿವಿಲ್ಲದೆ ಡೀಪ್‌ಫೇಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗಿದೆ” ಎಂದು ಸುಧಾ ಮೂರ್ತಿ ತಿಳಿಸಿದ್ದಾರೆ. ಇಂತಹ ವಂಚನೆಗಳಿಂದ ಕೆಲವರು ಹಣ ಕಳೆದುಕೊಂಡಿರುವುದನ್ನೂ ಅವರು ಬಹಿರಂಗಪಡಿಸಿದ್ದಾರೆ.

“ನಾನು ಎಂದಿಗೂ ಹೂಡಿಕೆ, ಹಣಕಾಸು ಲಾಭಗಳ ಬಗ್ಗೆ ಮಾತನಾಡುವುದಿಲ್ಲ. ನನ್ನ ವಿಚಾರಗಳು ಕೆಲಸ, ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಭಾರತೀಯ ಸಂಸ್ಕೃತಿಯ ಸುತ್ತ ಮಾತ್ರ ಇರುತ್ತವೆ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಇಂತಹ ವಿಡಿಯೋಗಳನ್ನು ನಂಬಿ ಯಾವುದೇ ಹಣಕಾಸು ನಿರ್ಧಾರ ತೆಗೆದುಕೊಳ್ಳಬೇಡಿ. ಯಾವುದೇ ಹೊಸ ಯೋಜನೆ ಕಂಡುಬಂದರೆ ಬ್ಯಾಂಕ್ ಅಥವಾ ಅಧಿಕೃತ ಮೂಲಗಳಿಂದ ಪರಿಶೀಲಿಸಿ. ಅನುಮಾನಾಸ್ಪದ ವಿಷಯ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದಿದ್ದಾರೆ.

ಡೀಪ್‌ಫೇಕ್ ವಂಚನೆ ವಿರುದ್ಧ ಜಾಗೃತಿಯೇ ಅತ್ಯಂತ ದೊಡ್ಡ ರಕ್ಷಣೆ ಎಂಬ ಸಂದೇಶವನ್ನು ಸುಧಾ ಮೂರ್ತಿ ಸ್ಪಷ್ಟವಾಗಿ ನೀಡಿದ್ದಾರೆ.

15 ಅಡಿ ಜಿಗಿತದಿಂದ ಬದಲಾಗಿದೆ ಜೀವನ: ಕೂದಲು ಕಳೆದುಕೊಂಡರೂ ಜನರ ಹೃದಯ ಗೆದ್ದ ನಟ ರಾಜೇಂದ್ರನ್

‘ಮೊಟ್ಟ ರಾಜೇಂದ್ರನ್’ ಎಂದರೆ ತಕ್ಷಣ ನೆನಪಾಗುವುದು ಬೋಳು ತಲೆ, ವಿಶಿಷ್ಟ ಮುಖಭಾವ ಮತ್ತು ನಿರಂತರ ನಗು. ಹೆಸರು ಗೊತ್ತಿಲ್ಲದವರಿಗೆಲೂ ಅವರ ಮುಖ ಮಾತ್ರ ನೋಡಿದರೆ ಸಾಕು — “ಅಯ್ಯೋ, ಈ ನಟನೇ!” ಎಂದು ಹೇಳುತ್ತಾರೆ. ತಮಿಳು ನಟ ರಾಜೇಂದ್ರನ್ ಇಂದು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಜನಪ್ರಿಯ ಹಾಸ್ಯನಟ. ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದರೂ, ಪರಭಾಷೆ ಪ್ರೇಕ್ಷಕರಿಗೆ ಅವರು ತುಂಬಾ ಪರಿಚಿತ.

ಆದರೆ ಈ ಬೋಳುತನ ಅವರ ಸ್ಟೈಲ್ ಅಲ್ಲ… ಅದು ವಿಧಿಯ ಬರೆಹ. ಒಂದು ಕಾಲದಲ್ಲಿ ದಪ್ಪ ಕೂದಲಿನೊಂದಿಗೆ ನಾಯಕನಾಗಿ ಕಾಣಿಸಿಕೊಂಡ ರಾಜೇಂದ್ರನ್, ಒಂದು ಅಪಘಾತದಿಂದ ಸಂಪೂರ್ಣ ಬದಲಾಗಬೇಕಾಯಿತು.

ಸಿನಿಮಾ ಜೀವನವನ್ನು ಅವರು ಸ್ಟಂಟ್ ಮ್ಯಾನ್ ಆಗಿ ಆರಂಭಿಸಿದ್ದರು. ಅನೇಕ ದೊಡ್ಡ ನಟರಿಗೆ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿ, 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಫೈಟರ್ ಆಗಿ ಹೆಸರು ಮಾಡಿದ್ದರು. ಹಲವು ಪ್ರಶಸ್ತಿಗಳನ್ನೂ ಪಡೆದಿದ್ದರು.

ಆದರೆ ಮಲಯಾಳಂ ಚಿತ್ರದ ಚಿತ್ರೀಕರಣದ ವೇಳೆ 15 ಅಡಿ ಎತ್ತರದಿಂದ ನೀರಿಗೆ ಜಿಗಿಯಬೇಕಾದ ದೃಶ್ಯ ಅವರ ಜೀವನವನ್ನೇ ತಿರುವು ಮಾಡಿತು. “ನಾನು ಜಿಗಿದ ನೀರು ಕಾರ್ಖಾನೆಗಳಿಂದ ಹರಿದುಬರುವ ರಾಸಾಯನಿಕ ನೀರು ಎಂದು ನಂತರ ತಿಳಿಯಿತು” ಎಂದು ರಾಜೇಂದ್ರನ್ ಹೇಳಿಕೊಂಡಿದ್ದಾರೆ. ಆ ದಿನದಿಂದಲೇ ಕೂದಲು ಉದುರಲು ಆರಂಭವಾಗಿ, ಸ್ವಲ್ಪ ದಿನಗಳಲ್ಲಿ ಸಂಪೂರ್ಣ ಬೋಳಾದರು. ಹುಬ್ಬುಗಳೂ ಮಾಯವಾದವು. ಜೊತೆಗೆ ದೇಹದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಉಂಟಾದವು.

ಆದರೂ ಅವರು ಕುಗ್ಗಲಿಲ್ಲ. ಹೋರಾಟ ಮುಂದುವರಿಸಿದರು. ನಟನಾಗಿ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬಂದರು. ಖಳನಾಯಕ ಪಾತ್ರಗಳು ಕೈ ತಪ್ಪಿದರೂ, ಹಾಸ್ಯ ಪಾತ್ರಗಳು ಅವರಿಗೆ ಹೊಸ ಜೀವನ ಕೊಟ್ಟವು. ನಿರ್ದೇಶಕರು ವಿಗ್ ಕೂಡ ಹಾಕಿಸದೇ ಅವರ ಸಹಜ ರೂಪದಲ್ಲೇ ನಟಿಸಲು ಅವಕಾಶ ನೀಡಿದರು.

“ನಾನು ಮೈನಸ್ ಎಂದುಕೊಂಡಿದ್ದೇ, ಇಂದು ನನ್ನ ಪ್ಲಸ್ ಆಗಿದೆ” ಎಂದು ರಾಜೇಂದ್ರನ್ ಹೇಳುತ್ತಾರೆ. ಇಂದು ಅವರು ಕೇವಲ ಹಾಸ್ಯನಟ ಅಲ್ಲ — ಲಕ್ಷಾಂತರ ಜನರಿಗೆ ಪ್ರೇರಣೆಯ ಸಂಕೇತ.

ಮಂಡ್ಯ| ಹಂದಿ ಮುಖದಂತಿರುವ ವಿಚಿತ್ರ ಮೇಕೆ ಮರಿ ಜನನ; ಹುಟ್ಟಿದ ಕೆಲವೇ ಕ್ಷಣದಲ್ಲಿ ಸಾವು!

0

ಮಂಡ್ಯ: ಜಿಲ್ಲೆಯ ಮಂಡ್ಯ ತಾಲ್ಲೂಕಿನ ದ್ಯಾಪಸಂದ್ರ ಗ್ರಾಮದಲ್ಲಿ ಅಪರೂಪದ ಹಾಗೂ ವಿಚಿತ್ರ ಘಟನೆ ನಡೆದಿದೆ. ಹಂದಿ ಮುಖದಂತಿರುವ ಮೇಕೆ ಮರಿ ಜನನವಾಗಿದ್ದು, ಇದನ್ನು ಕಂಡ ರೈತರು ಹಾಗೂ ಗ್ರಾಮಸ್ಥರು ಅಚ್ಚರಿ ಹಾಗೂ ಭಯಕ್ಕೆ ಒಳಗಾಗಿದ್ದಾರೆ.

ಗ್ರಾಮದ ರೈತ ಹುಚ್ಚಪ್ಪ ಅವರಿಗೆ ಸೇರಿದ ಮೇಕೆಯು ಇಂದು ಬೆಳಿಗ್ಗೆ ಈ ವಿಚಿತ್ರ ಮರಿಗೆ ಜನನ ನೀಡಿದೆ. ಮೇಕೆ ಮರಿಯ ಮುಖ ಹಂದಿಯ ಮುಖವನ್ನು ಹೋಲುವ ರೀತಿಯಲ್ಲಿ ಕಂಡುಬಂದಿದ್ದು, ಜನನವಾಗುತ್ತಿದ್ದಂತೆ ಇದನ್ನು ಕಂಡ ರೈತ ಹುಚ್ಚಪ್ಪ ಗಾಬರಿಗೊಂಡಿದ್ದಾರೆ. ಆದರೆ ದುರ್ಬಾಗ್ಯವಶಾತ್, ಜನನವಾದ ಕೆಲವೇ ಹೊತ್ತಿನಲ್ಲಿ ಮೇಕೆ ಮರಿ ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ರೈತ ಹುಚ್ಚಪ್ಪ ಅವರು ಊರಿನ ಜನರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ದ್ಯಾಪಸಂದ್ರ ಗ್ರಾಮದ ಜನರು ವಿಚಿತ್ರ ಮೇಕೆ ಮರಿಯನ್ನು ನೋಡಲು ಸ್ಥಳಕ್ಕೆ ಧಾವಿಸಿದ್ದು, ಅಪರೂಪದ ದೃಶ್ಯ ನೋಡಿ ಅಚ್ಚರಿಗೊಂಡಿದ್ದಾರೆ. ಕೆಲವರು ಭಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಕುತೂಹಲದಿಂದ ಮರಿ ವೀಕ್ಷಿಸಿದರು.

ವಿಚಿತ್ರ ರೂಪದ ಮೇಕೆ ಮರಿ ಜನನವು ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ಕುರಿತು ಹಲವು ಊಹಾಪೋಹಗಳು ಹರಡಿವೆ. ನಂತರ ರೈತ ಹುಚ್ಚಪ್ಪ ಅವರು ಸತ್ತಿರುವ ಮೇಕೆ ಮರಿಯನ್ನು ತಮ್ಮ ಜಮೀನಿನಲ್ಲಿ ಮಣ್ಣುಮಾಡಿದ್ದಾರೆ.

ಭದ್ರಾವತಿ| ವೃದ್ಧ ದಂಪತಿ ಅನುಮಾನಾಸ್ಪದ ಸಾವು; ಕೊಲೆ ಶಂಕೆ, ತನಿಖೆ ಚುರುಕು!

0

ಭದ್ರಾವತಿ: ನಗರದ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿ ಪ್ರದೇಶದಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ವಿಐಎಸ್ಎಲ್ ನಿವೃತ್ತ ಉದ್ಯೋಗಿ ಚಂದ್ರಪ್ಪ (75) ಹಾಗೂ ಅವರ ಪತ್ನಿ ಜಯಮ್ಮ (65) ಮೃತರು. ಮೃತದೇಹಗಳು ಮನೆಯಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಪತ್ತೆಯಾಗಿದ್ದು, ದೇಹಗಳ ಮೇಲೆ ಯಾವುದೇ ಗಾಯಗಳು ಅಥವಾ ಹಲ್ಲೆ ನಡೆಸಿದ ಸ್ಪಷ್ಟ ಗುರುತುಗಳು ಕಂಡುಬಂದಿಲ್ಲ. ದಂಪತಿ ಮನೆಯಲ್ಲಿ ಇಬ್ಬರೇ ವಾಸವಾಗಿದ್ದು, ಅವರಿಗೆ ಮೂವರು ಪುತ್ರರಿದ್ದಾರೆ. ಆದರೆ ಅವರು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ವೃದ್ಧ ದಂಪತಿಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ವರದಿ ನಿರೀಕ್ಷಿಸಲಾಗುತ್ತಿದೆ.

ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉಡುಪಿ| ಕಾಂಗ್ರೆಸ್-ಬಿಜೆಪಿ ನಡುವೆ ಧ್ವಜ ದಂಗಲ್​​: ಉಡುಪಿ ಡಿಸಿ ನಡೆ ಬಗ್ಗೆ ಜೋರಾಯ್ತು ಚರ್ಚೆ!

0

ಉಡುಪಿ: ಶೀರೂರು ಮಠದ ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಉಡುಪಿಯ ಜೋಡುಕಟ್ಟೆಯಿಂದ ಶ್ರೀ ಕೃಷ್ಣ ಮಠದವರೆಗೆ ನಡೆದ ಪರ್ಯಾಯ ಮೆರವಣಿಗೆಗೆ ಕೇಸರಿ ಧ್ವಜ ತೋರಿಸಿ ಚಾಲನೆ ನೀಡಿದ ವಿಚಾರ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಕೇಸರಿ ಧ್ವಜ ಪ್ರದರ್ಶಿಸಿ ಮೆರವಣಿಗೆಗೆ ಚಾಲನೆ ನೀಡಿದ್ದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಕ್ಷೇಪಿಸಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದೆ. ಜ.18ರ ಮುಂಜಾನೆ ಸುಮಾರು 3 ಗಂಟೆಗೆ ನಡೆದ ಪರ್ಯಾಯ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಅವರು ಭಾಗವಹಿಸಿದ್ದರು. ಮೆರವಣಿಗೆ ಆರಂಭಕ್ಕೂ ಮೊದಲು ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಅವರು ಕೇಸರಿ ಧ್ವಜವನ್ನು ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಿದ್ದು, ಅದನ್ನು ಡಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ನಡೆ ಸರ್ಕಾರಿ ಸೇವಾ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್, ಈ ಕುರಿತು ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಪರ್ಯಾಯ ಮಹೋತ್ಸವದ ಸಂದರ್ಭದಲ್ಲಿ ತಾವು ನಗರಸಭೆಯ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾಗಿ ತಿಳಿಸಿದ್ದಾರೆ. ಶತಮಾನಗಳ ಇತಿಹಾಸ ಹೊಂದಿರುವ ಪರ್ಯಾಯ ಪದ್ಧತಿಯಂತೆ ಧ್ವಜ ನಿಶಾನೆ ತೋರಿಸುವುದು ಸಂಪ್ರದಾಯದ ಭಾಗವಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಪ್ರೇರಿತ ಭಾಗವಹಿಸುವಿಕೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನೊಂದೆಡೆ, ಕಾಂಗ್ರೆಸ್ ನೀಡಿರುವ ದೂರಿಗೆ ಬಿಜೆಪಿ ಹಾಗೂ ಸಂಘಟನೆಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉಡುಪಿ ಪರ್ಯಾಯ ಮಹೋತ್ಸವದ ಧಾರ್ಮಿಕ ಸಂಪ್ರದಾಯವನ್ನು ಪ್ರಶ್ನಿಸುವುದು ತಪ್ಪು ಎಂದು ಬಿಜೆಪಿ ವಲಯಗಳು ಆರೋಪಿಸಿದ್ದು, ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುವುದು ಅನಾವಶ್ಯಕ ರಾಜಕೀಯ ಎಂದು ಕಿಡಿಕಾರಿವೆ. ಈ ಮೂಲಕ ಪರ್ಯಾಯ ಮಹೋತ್ಸವದ ಧ್ವಜ ವಿಚಾರ ಉಡುಪಿಯಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.

error: Content is protected !!