Home Blog Page 47

ಡಿಕೆಶಿ ಪ್ರಮಾಣವಚನದ ದಿನಾಂಕದತ್ತ ರಾಜ್ಯದ ಕಣ್ಣು: ಎಲ್ಲಿ? ಯಾವಾಗ

ಬೆಂಗಳೂರು: ರಾಜ್ಯ ರಾಜಕೀಯದ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಹೊಸ ಸರ್ಕಾರ ರಚನೆಗೆ ದಾರಿ ಸುಗಮವಾಗಿದೆ. ಈಗ ರಾಜ್ಯದ ಗಮನ ಸಂಪೂರ್ಣವಾಗಿ ಮುಂದಿನ ಮುಖ್ಯಮಂತ್ರಿ ಹಾಗೂ ಪ್ರಮಾಣವಚನ ಸಮಾರಂಭದತ್ತ ನೆಟ್ಟಿದೆ.

ಕಾಂಗ್ರೆಸ್ ನಾಯಕತ್ವದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದರೂ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಬಹುತೇಕ ಖಚಿತ ಎನ್ನುವ ವಾತಾವರಣ ಪಕ್ಷದೊಳಗೆ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಎಐಸಿಸಿ ನಾಯಕರೊಂದಿಗೆ ನಿರ್ಣಾಯಕ ಸಭೆ ನಡೆಸಲಿದ್ದಾರೆ.

ಸಚಿವ ಸಂಪುಟದ ಸ್ವರೂಪ, ಸಚಿವ ಸ್ಥಾನಗಳ ಹಂಚಿಕೆ, ಪ್ರಾದೇಶಿಕ ಹಾಗೂ ಜಾತಿ ಸಮೀಕರಣ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಅಂತಿಮ ಚರ್ಚೆಗಳು ನಡೆಯಲಿವೆ. ಈ ಸಭೆಯ ಬಳಿಕವೇ ಮುಖ್ಯಮಂತ್ರಿ ಹಾಗೂ ಸಂಪುಟದ ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ಇದೇ ವೇಳೆ, ಪ್ರಮಾಣವಚನ ಕಾರ್ಯಕ್ರಮಕ್ಕೆ ಸೂಕ್ತ ಮುಹೂರ್ತದ ಹುಡುಕಾಟವೂ ಜೋರಾಗಿದೆ. ಡಿ.ಕೆ. ಶಿವಕುಮಾರ್ ಜ್ಯೋತಿಷಿಗಳ ಸಲಹೆ ಪಡೆದಿದ್ದು, ಶುಭ ಸಮಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಭಾಗವಹಿಸುವಂತೆ ವೇಳಾಪಟ್ಟಿ ರೂಪಿಸಲಾಗುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಸೇರಿದಂತೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ದೆಹಲಿಯಲ್ಲಿ ನಡೆಯುವ ಇಂದಿನ ಸಭೆಯ ಬಳಿಕ ಕರ್ನಾಟಕದ ಮುಂದಿನ ರಾಜಕೀಯ ಅಧ್ಯಾಯಕ್ಕೆ ಅಧಿಕೃತ ಚಾಲನೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.

‘40 ದಿನಗಳ ಸಂಕಲ್ಪ’ ಫಲಿಸಿತೇ? ಮುಕ್ತಿಮಂದಿರ ಭೇಟಿ ಬಳಿಕ ಡಿಕೆಶಿಗೆ ಸಿಎಂ ಪಟ್ಟ

ಲಕ್ಷ್ಮೇಶ್ವರ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದರ ಬೆನ್ನಲ್ಲೇ ಗದಗ ಜಿಲ್ಲೆಯ ಐತಿಹಾಸಿಕ ಪುಣ್ಯಕ್ಷೇತ್ರ ಮುಕ್ತಿಮಂದಿರ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದೆ. ಉಪಮುಖ್ಯಮಂತ್ರಿಯಾಗಿದ್ದ ವೇಳೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರು ಈ ಕ್ಷೇತ್ರಕ್ಕೆ ರಹಸ್ಯ ಭೇಟಿ ನೀಡಿ ವಿಶೇಷ ಸಂಕಲ್ಪ ಮಾಡಿದ್ದರು ಎಂಬ ಮಾಹಿತಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಏಪ್ರಿಲ್ 19ರಂದು ಯಾವುದೇ ರಾಜಕೀಯ ಪ್ರಚಾರವಿಲ್ಲದೆ, ತಮ್ಮ ಆಪ್ತರಿಗೂ ಮಾಹಿತಿ ನೀಡದೇ ಮುಕ್ತಿಮಂದಿರಕ್ಕೆ ಆಗಮಿಸಿದ್ದ ಡಿಕೆ ಶಿವಕುಮಾರ್, ಲಿಂಗೈಕ್ಯ ವೀರ ಗಂಗಾಧರ ಮಹಾಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಕಟ್ಟುನಿಟ್ಟಿನ ಭದ್ರತೆಯ ನಡುವೆ ನಡೆದ ಈ ಭೇಟಿ ವೇಳೆ ಗರ್ಭಗುಡಿಗೆ ಮಾಧ್ಯಮಗಳು ಹಾಗೂ ಸ್ಥಳೀಯ ಮುಖಂಡರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಮುಕ್ತಿಮಂದಿರದ ಪೀಠಾಧಿಪತಿಗಳಾದ ಶ್ರೀ ವಿಮಲರೇಣುಕಾ ವೀರಮುಕ್ತಿ ಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಪ್ರಧಾನ ಅರ್ಚಕರ ಸಮ್ಮುಖದಲ್ಲಿ ಡಿಕೆಶಿ ವಿಶೇಷ ಪೂಜೆ, ಜಪ ಮತ್ತು ಧ್ಯಾನದಲ್ಲಿ ತೊಡಗಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ. ರಾಜ್ಯದ ಉನ್ನತ ಹುದ್ದೆ ಪ್ರಾಪ್ತಿಗಾಗಿ ಅವರು ಸಂಕಲ್ಪ ಮಾಡಿದ್ದರು ಎನ್ನುವ ಮಾತುಗಳು ಇದೀಗ ಮತ್ತೆ ಮುನ್ನೆಲೆಗೆ ಬಂದಿವೆ.

ಈ ಭೇಟಿಯ ನಂತರ ಕೇವಲ 40 ದಿನಗಳೊಳಗೆ ರಾಜ್ಯ ರಾಜಕೀಯದಲ್ಲಿ ನಡೆದ ಬೆಳವಣಿಗೆಗಳ ಪರಿಣಾಮವಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿರುವುದು ಕ್ಷೇತ್ರದ ಭಕ್ತರು ಮತ್ತು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದರಿಂದ ಮುಕ್ತಿಮಂದಿರದ ಆಧ್ಯಾತ್ಮಿಕ ಪ್ರಭಾವ ಹಾಗೂ ಕ್ಷೇತ್ರದ ಮಹಿಮೆಯ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ.

‘ಕಾಲ ಹತ್ತಿರ ಬಂದಿದೆ’… ಡಿಕೆಶಿ ಸಿಎಂ ಆಗುವ ಕುರಿತು ಇಕ್ಬಾಲ್ ಹುಸೇನ್ ರಹಸ್ಯ ಸಂಕೇತ!

ರಾಮನಗರ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತ ರಾಜಕೀಯ ಬೆಳವಣಿಗೆಗಳ ನಡುವೆ ಶಾಸಕ ಇಕ್ಬಾಲ್ ಹುಸೇನ್ ನೀಡಿರುವ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ದೊರೆಯುವ ಕುರಿತು ಮಾತನಾಡಿದ ಅವರು, ಬಹುಕಾಲದ ನಿರೀಕ್ಷೆ ಈಡೇರುವ ಹಂತಕ್ಕೆ ಬಂದಿದೆ ಎಂದು ಸೂಚನೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, “ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಗರ ಬಹುಕಾಲದ ಆಸೆ ಒಂದಿತ್ತು. ಆ ಆಸೆಯನ್ನು ಭಗವಂತ ಈಡೇರಿಸುವ ಕೆಲಸ ಮಾಡುತ್ತಿದ್ದಾನೆ. ನಾನು ಈ ಹಿಂದೆ ಬಹಿರಂಗವಾಗಿ ಹೇಳಿದ್ದೆ. ಇನ್ನು ಕೆಲವರು ಮೌನವಾಗಿ ಪ್ರಾರ್ಥನೆ ಮಾಡಿದ್ದರು. ಆ ಪ್ರಾರ್ಥನೆ ನೆರವೇರುವ ಸಮಯ ಈಗ ಸಮೀಪಿಸಿದೆ” ಎಂದು ಹೇಳಿದ್ದಾರೆ.

“ನಮ್ಮ ನಾಯಕರಿಗೆ ಅವಕಾಶ ಸಿಗುತ್ತಿರುವುದರಿಂದ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇಂದು ಬಕ್ರೀದ್ ಹಬ್ಬದ ದಿನವಾಗಿರುವುದರಿಂದ ರಾಜಕೀಯ ಚರ್ಚೆಗಳನ್ನು ಹೆಚ್ಚಿಸಲು ಇಷ್ಟಪಡುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.

ಪರಮೇಶ್ವರ್ ಅವರ ಮುಖ್ಯಮಂತ್ರಿ ಹುದ್ದೆ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅವರು ನಮ್ಮ ಹಿರಿಯ ನಾಯಕರು. ಅವಕಾಶ ಕೇಳುವುದು ಅವರ ಹಕ್ಕು. ಅವರು ಪಕ್ಷಕ್ಕಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಆದರೆ ನಮ್ಮ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಸಿಗಬೇಕು ಎಂಬುದು ನಮ್ಮ ಜಿಲ್ಲೆಯ ಜನರ ಹಾಗೂ ಬೆಂಬಲಿಗರ ಅಭಿಲಾಷೆ” ಎಂದು ಹೇಳಿದ್ದಾರೆ.

ಈ ಹೇಳಿಕೆಗಳ ಮೂಲಕ ಕಾಂಗ್ರೆಸ್‌ನ ಮುಂದಿನ ನಾಯಕತ್ವದ ಕುರಿತು ಮತ್ತೆ ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

ಮುಂಬೈ ಇಂಡಿಯನ್ಸ್‌ಗೆ ಮೇಜರ್ ಸರ್ಜರಿ?: ಹಾರ್ದಿಕ್ ಪಾಂಡ್ಯ ನಾಯಕತ್ವಕ್ಕೆ ಕತ್ತರಿ ಸಾಧ್ಯತೆ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಭಾರೀ ಬದಲಾವಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ..

ಅದರ ಮೊದಲ ಹೆಜ್ಜೆಯಾಗಿ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ಕಳೆದ ಮೂರು ಸೀಸನ್‌ಗಳಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. ಈ ಅವಧಿಯಲ್ಲಿ ಪಾಂಡ್ಯ 38 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಅದರಲ್ಲಿ ಕೇವಲ 15 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಉಳಿದ 23 ಪಂದ್ಯಗಳಲ್ಲಿ ಎಂಐ ಸೋಲು ಕಂಡಿದೆ.

ಈ ಲೆಕ್ಕಾಚಾರದಲ್ಲಿ ಹಾರ್ದಿಕ್ ಪಾಂಡ್ಯ ಅವರ ಗೆಲುವಿನ ಶೇಕಡಾವಾರು ಕೇವಲ 39.4% ಮಾತ್ರವಾಗಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡವನ್ನು 158 ಪಂದ್ಯಗಳಲ್ಲಿ ಮುನ್ನಡೆಸಿದ್ದ ರೋಹಿತ್ ಶರ್ಮಾ 55.06% ಗೆಲುವಿನ ಸಾಧನೆ ಹೊಂದಿದ್ದರು. ಹೀಗಾಗಿ ಪಾಂಡ್ಯ ನಾಯಕತ್ವದಲ್ಲಿ ತಂಡ ತನ್ನ ಹಳೆಯ ಪ್ರಭಾವ ಕಳೆದುಕೊಂಡಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಇದರಿಂದಾಗಿ ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ನಾಯಕತ್ವ ಬದಲಾವಣೆಯತ್ತ ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಹೊಸ ನಾಯಕ ಯಾರು ಎಂಬುದರ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

ಹೀಗಾಗಿ ಐಪಿಎಲ್ 2027ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಆಟಗಾರ ಯಾರು ಎಂಬ ಕುತೂಹಲ ಈಗಲೇ ಆರಂಭವಾಗಿದೆ.

ಉತ್ತರ ಪ್ರದೇಶದಲ್ಲಿ ಬಿರುಗಾಳಿ ಅವಾಂತರ: ಸೇತುವೆ ಕುಸಿದು ಐವರು ಸಾವು

ಹಮೀರ್‌ಪುರ: ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಶುಕ್ರವಾರ ಬೀಸಿದ ಭಾರೀ ಬಿರುಗಾಳಿಗೆ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಠ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಬೆಟ್ವಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ಕಂದೌರ್-ಮೊರಕಂದರ್ ಸೇತುವೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನಿರ್ಮಾಣ ಕಾರ್ಯ ನಡೆಯುತ್ತಿರುವ ವೇಳೆ ಬಲವಾದ ಗಾಳಿ ಬೀಸಿದ ಪರಿಣಾಮ ಸೇತುವೆಯ ಸ್ಲ್ಯಾಬ್ ಹಾಗೂ ಪಿಯರ್ ಭಾಗಗಳು ಸ್ಕ್ಯಾಫೋಲ್ಡಿಂಗ್ ರಚನೆಯೊಂದಿಗೆ ಏಕಾಏಕಿ ಕುಸಿದು ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ತಂಡಗಳು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಅನಾರೋಗ್ಯದಿಂದ ಮಾಜಿ ಸಚಿವ ವೆಂಕಟರಮಣಪ್ಪ ನಿಧನ!

ತುಮಕೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ ವೆಂಕಟರಮಣಪ್ಪ (80) ಅವರು ಇಂದು ನಿಧನರಾಗಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಸುಮಾರು 6 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಬೆಳಗ್ಗಿನ ಜಾವ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದು, ಪುತ್ರ ಶಾಸಕ ಹೆಚ್‌.ವಿ ವೆಂಕಟೇಶ್‌, ಕುಮಾರಸ್ವಾಮಿ, ಪುತ್ರಿ ಪದ್ಮಾವತಿ ಅವರನ್ನ ಅಗಲಿದ್ದಾರೆ.

ವೆಂಕಟರಮಣಪ್ಪ ಅವರು 2008ರಲ್ಲಿ ರೇಷ್ಮೆ ಮತ್ತು ಸಣ್ಣ ಕೈಗಾರಿಕಾ ಸಚಿವರಾಗಿ, 2018ರಲ್ಲಿ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಒಟ್ಟು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಮೃತರ ಪಾರ್ಥೀವ ಶರೀರವನ್ನು ತುಮಕೂರಿನ ಗುರುಭವನದಲ್ಲಿ ಮಧ್ಯಾಹ್ನ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ: ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹವಾಮಾನದಲ್ಲಿ ಭಾರಿ ಏರುಪೇರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಕೆಲವೆಡೆ ಬಲವಾದ ಗಾಳಿಯೂ ಬೀಸಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಭಾಗಗಳಲ್ಲಿ ಒಂದೆರಡು ಕಡೆಗಳಲ್ಲಿ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಉತ್ತರ ಒಳನಾಡಿನಲ್ಲಿ ಕಲಬುರ್ಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹವಾಮಾನದ ತೀವ್ರತೆ ಹೆಚ್ಚಿರಲಿದ್ದು, ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಜೊತೆಗೆ ಸಾಧಾರಣ ಮಳೆಯೂ ಸಂಭವಿಸಬಹುದು. ಕೊಪ್ಪಳ ಜಿಲ್ಲೆಯಲ್ಲಿ ಕೂಡ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ.

ರಾಜಧಾನಿ ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಅದೇ ರೀತಿ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಜಿಟಿಜಿಟಿ ಅಥವಾ ಸಾಧಾರಣ ಮಳೆಯ ಸಾಧ್ಯತೆ ಇದ್ದು, ಗಾಳಿಯ ವೇಗವೂ ಹೆಚ್ಚಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಸಾರ್ವಜನಿಕರು ಹಾಗೂ ರೈತರು ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಮನವಿ ಮಾಡಿದೆ.

ಸಿದ್ದರಾಮಯ್ಯ ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್!

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ.

ನಿನ್ನೆ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಘೋಷಿಸಿದ್ದರು. ಇದೀಗ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅಧಿಕೃತವಾಗಿ ಅಂಗೀಕರಿಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಹಾರ ಕೂಟ ನಡೆಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು. ನಂತರ ಅವರು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಅವರಿಗೆ ಅಧಿಕೃತ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು.

ರಾಜ್ಯಪಾಲ ಗೆಹ್ಲೋಟ್ ಅವರು ತಮ್ಮ ಸಂವಿಧಾನಾತ್ಮಕ ಅಧಿಕಾರವನ್ನು ಬಳಸಿಕೊಂಡು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ತ್ಯಾಗ- ಭ್ರಾತೃತ್ವದ ಸಂದೇಶ ಸಾರಿದ ಬಕ್ರೀದ್

ವಿಜಯಸಾಕ್ಷಿ ಸುದ್ದಿ, ಮುಳಗುಂದ: ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಪವಿತ್ರ ಈದ್-ಉಲ್-ಅಝ್ಹಾ (ಬಕ್ರೀದ್) ಹಬ್ಬವನ್ನು ಮುಳಗುಂದ ತಾಲ್ಲೂಕಿನಾದ್ಯಂತ ಭಕ್ತಿಭಾವ, ಹಾಗೂ ಧಾರ್ಮಿಕ ಶ್ರದ್ಧೆಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೇಶದ ಶಾಂತಿ, ಸಮಾಜದ ಸೌಹಾರ್ದತೆ ಹಾಗೂ ಜನರ ಸುಖ-ಸಮೃದ್ಧಿಗಾಗಿ ವಿಶೇಷ ದುಆ ಮಾಡಿದರು. ಮಸೀದಿಗಳು ಹಾಗೂ ಈದ್ಗಾಗಳಲ್ಲಿ ಭಕ್ತರ ಸಂಭ್ರಮ ಕಳೆಗಟ್ಟಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಊರಿನ ಖಾಜಿ ಜನಾಬ್, ಬಕ್ರೀದ್ ಹಬ್ಬವು ತ್ಯಾಗ, ಸಹನೆ, ಭಕ್ತಿ ಮತ್ತು ಅಲ್ಲಾಹನಿಗೆ ಸಂಪೂರ್ಣ ಸಮರ್ಪಣೆಯ ಸಂದೇಶ ಸಾರುತ್ತದೆ ಎಂದು ಹೇಳಿದರು. ಇಬ್ರಾಹಿಂ (ಅಲೈಹಿಸ್ಸಲಾಂ) ಅವರ ತ್ಯಾಗ ಮತ್ತು ದೇವಭಕ್ತಿಯ ಸ್ಮರಣಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ತಾಜುದ್ದೀನ್ ಎಂ. ಕಿಂಡ್ರಿ ಮಾತನಾಡಿ, ಬಕ್ರೀದ್ ಹಬ್ಬವು ಮಾನವೀಯತೆ, ಪ್ರೀತಿ, ಹಂಚಿಕೆ ಹಾಗೂ ಭಾವೈಕ್ಯತೆಯ ಪ್ರತೀಕವಾಗಿದೆ ಎಂದರು.
ಸೃಷ್ಟಿಕರ್ತನು ಎಲ್ಲರ ಬದುಕಿನಲ್ಲಿ ಆರೋಗ್ಯ, ನೆಮ್ಮದಿ, ಬರಕತ್ ಹಾಗೂ ಯಶಸ್ಸು ಕರುಣಿಸಲಿ. ಸಮಾಜದಲ್ಲಿ ಪರಸ್ಪರ ಪ್ರೀತಿ, ಸೌಹಾರ್ದತೆ ಮತ್ತು ಭ್ರಾತೃತ್ವ ಮತ್ತಷ್ಟು ಬಲವಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಯುವ ನಾಯಕ ಕೆ.ಎಚ್. ಪಾಟೀಲ್ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯ ಕೋರಿದರು.
ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಹಮೀದ್ ಮುಜಾವರ, ಕಾರ್ಯದರ್ಶಿ ಹೈದರ್ ಖವಾಸ್, ಖಜಾಂಚಿ ಮುನ್ನಾ ಢಾಲಾಯತ, ಸದಸ್ಯರಾದ ದಾವಲಸಾಬ ಲಕ್ಷ್ಮೇಶ್ವರ, ದಾವೂದ್ ಜಮಾಲಸಾಬ, ಹಿರಿಯರಾದ ಬುಡ್ಡೆಸಾಬ ಖವಾಸ್, ಮಾಬೂಸಾಬ ಅಬ್ಬುನವರ, ಇಬ್ರಾಹಿಂ ಹಣಗಿ, ರಸೂಲ್ ಚಿಂಚಲಿ, ಹಸನಸಾಬ ಹುಬ್ಬಳ್ಳಿ, ಮಕ್ತುಮ್ ಸಾಬ ನದಾಫ, ಇಮಾಮಸಾಬ್ ಮುಜಾವರ, ನಜೀರ್ ಅಣ್ಣಿಗೇರಿ, ನದ್ದಿಮುಲ್ಲಾ ಸರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.
 “ಬಕ್ರೀದ್ ಹಬ್ಬವು ಕೇವಲ ಧಾರ್ಮಿಕ ಆಚರಣೆ ಅಲ್ಲ, ಅದು ತ್ಯಾಗ, ಭಕ್ತಿ, ಮಾನವೀಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಪವಿತ್ರ ಹಬ್ಬವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಭ್ರಾತೃತ್ವ ಇನ್ನಷ್ಟು ಗಟ್ಟಿಯಾಗಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ”
ತಾಜುದ್ದೀನ್ ಎಂ. ಕಿಂಡ್ರಿ, ಅಧ್ಯಕ್ಷರು, ಅಂಜುಮನ್ ಇಸ್ಲಾಂ ಸಂಸ್ಥೆ,

ಎಸ್‌ಐಆರ್ ವಿರುದ್ಧ ಮೇ 30ರಂದು ಬೃಹತ್ ಪ್ರತಿಭಟನೆ

0
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೇಂದ್ರ ಚುನಾವಣಾ ಆಯೋಗ ಜಾರಿಗೆ ತರುತ್ತಿರುವ ಮತದಾರರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ ರಾಜ್ಯದ ಮತದಾರರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಮೇ 30ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಹಂತದ “ಎಸ್‌ಐಆರ್ ಕರ್ನಾಟಕ ಪ್ರತಿರೋಧ” ಬೃಹತ್ ಹಕ್ಕೊತ್ತಾಯ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ.
ಕೊಪ್ಪಳದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಸಾಹಿತಿಗಳು, ಚಿಂತಕರು, ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಿಂದ ದೇಶದ 13 ರಾಜ್ಯಗಳಲ್ಲಿ ಈಗಾಗಲೇ ಕನಿಷ್ಠ 5 ಕೋಟಿ ಅರ್ಹ ಮತದಾರರು ಸೇರಿ ಒಟ್ಟು 6.5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಲಾಗಿದೆ.
ಹೊಸದಾಗಿ ಹೆಸರು ನೋಂದಾಯಿಸಲು 2002 ಹಾಗೂ 2025ರ ಮತದಾರರ ಪಟ್ಟಿಯ ದಾಖಲೆಗಳ ಜೊತೆಗೆ ಕಠಿಣ ದಾಖಲೆಗಳನ್ನು ಕೇಳಲಾಗುತ್ತಿದೆ. “ಲಾಜಿಕಲ್ ಡಿಸ್ಕ್ರಿಪೆನ್ಸಿ” ನೆಪದಲ್ಲಿ ವಿವಾಹಿತ ಮಹಿಳೆಯರು, ಅಲೆಮಾರಿಗಳು, ದಲಿತರು, ಗ್ರಾಮೀಣ ಬಡವರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗವು ಜನವಿರೋಧಿ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ ಜನಸ್ನೇಹಿ ಪರಿಷ್ಕರಣೆ ತರಬೇಕು. ಮತದಾರರ ಹಕ್ಕು ಕಸಿಯುವ “ಲಾಜಿಕಲ್ ಡಿಸ್ಕ್ರಿಪೆನ್ಸಿ” ಸಾಫ್ಟ್‌ವೇರ್ ಬಳಕೆ ನಿಲ್ಲಿಸಬೇಕು. ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಾರ್ವಜನಿಕ ಪರಿಶೀಲನೆಗೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಕರಡು ಪಟ್ಟಿ ಪ್ರಕಟವಾದ ಬಳಿಕ ಗ್ರಾಮ ಹಾಗೂ ವಾರ್ಡ್ ಸಭೆಗಳನ್ನು ಕಡ್ಡಾಯವಾಗಿ ನಡೆಸಬೇಕು. ದಾಖಲೆ ಸಲ್ಲಿಕೆ ಮತ್ತು ಮೇಲ್ಮನವಿ ಸಲ್ಲಿಸಲು ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಲಾಗಿದೆ.
ರಾಜ್ಯ ಸರ್ಕಾರವು ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕು. ದಾಖಲೆಗಳಿಲ್ಲದ ಬಡವರಿಗೆ ವಾಸಸ್ಥಳ ದೃಢೀಕರಣ ಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮೇ 30ರಂದು ಬೆಳಿಗ್ಗೆ 11 ಗಂಟೆಗೆ ನಗರದ ಗಡಿಯಾರ ಕಂಬದಿಂದ ಅಶೋಕ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಅಶೋಕ ವೃತ್ತದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
error: Content is protected !!