Home Blog Page 5

MBBS ಪದವೀಧರರಿಗೆ ಸಿಹಿಸುದ್ದಿ: ವಾಕ್-ಇನ್ ಸಂದರ್ಶನದ ಮೂಲಕ ಸರ್ಕಾರಿ ಆಸ್ಪತ್ರೆಗಳಲ್ಲಿ ನೇಮಕಾತಿ!

ಬೆಂಗಳೂರು: ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆರೋಗ್ಯ ಸಚಿವ ಯು.ಟಿ. ಖಾದರ್ ಹಲವು ಮಹತ್ವದ ಕ್ರಮಗಳನ್ನು ಘೋಷಿಸಿದ್ದಾರೆ. ಆರೋಗ್ಯ ಇಲಾಖೆಯ ಕಾರ್ಯವ್ಯಾಪ್ತಿ ದೊಡ್ಡದಾಗಿರುವುದರಿಂದ ವೈದ್ಯರ ನೇಮಕಾತಿಯಿಂದ ಹಿಡಿದು ಆರೋಗ್ಯ ಸೇವೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ನೀತಿ ರೂಪಿಸುವಿಕೆವರೆಗೆ ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಂದಿನ ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ಅವರು ಆರಂಭಿಸಿದ್ದ ಜನಪರ ಯೋಜನೆಗಳು ಮತ್ತು ಸುಧಾರಣಾ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಖಾದರ್ ಹೇಳಿದ್ದಾರೆ. ಆರೋಗ್ಯ ಸೇವೆಗಳು ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಸುಲಭವಾಗಿ ತಲುಪುವಂತೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

ಆಯುಷ್ಮಾನ್ ಕರ್ನಾಟಕ ಯೋಜನೆ ಕುರಿತು ನಡೆದ ವಿಮರ್ಶಾ ಸಭೆಯಲ್ಲಿ ಮಾತನಾಡಿದ ಸಚಿವರು, ಯೋಜನೆಯಡಿ ಚಿಕಿತ್ಸೆ ಪಡೆಯುವ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ರೋಗಿಗಳಿಂದ ಪಡೆಯಲು ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಆಸ್ಪತ್ರೆಗಳು ಹೆಚ್ಚುವರಿ ಹಣ ವಸೂಲಿ ಮಾಡಿದರೆ, ಅದರ ಬಗ್ಗೆ ಜಿಲ್ಲಾ ಮಟ್ಟದ ಆರೋಗ್ಯ ಮಿತ್ರರು ಅಥವಾ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ದೂರುಗಳು ಬಂದಲ್ಲಿ ಸಂಬಂಧಿತ ಆಸ್ಪತ್ರೆಗಳ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಇನ್ನೊಂದೆಡೆ, ಎಂಬಿಬಿಎಸ್ ಪದವಿ ಪೂರ್ಣಗೊಳಿಸಿರುವ ವೈದ್ಯರಿಗೆ ಸರ್ಕಾರ ಮಹತ್ವದ ಅವಕಾಶ ಕಲ್ಪಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಎಂಬಿಬಿಎಸ್ ಪದವೀಧರರು ನೇರವಾಗಿ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ನೇಮಕವಾಗುವ ವೈದ್ಯರಿಗೆ ಮಾಸಿಕ 60 ಸಾವಿರ ರೂ. ವೇತನ ನಿಗದಿಪಡಿಸಲಾಗಿದ್ದು, ಆರೋಗ್ಯ ಸೇವೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಸಹಕಾರಿಯಾಗಲಿದೆ ಎಂದು ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

ತಮ್ಮ ಖಾತೆಯ ಜವಾಬ್ದಾರಿ ಕುರಿತು ಪ್ರತಿಕ್ರಿಯಿಸಿದ ಯು.ಟಿ. ಖಾದರ್, “ಯಾವ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿರ್ವಹಿಸುವುದು ನಮ್ಮ ಕರ್ತವ್ಯ. ಜನರ ನಿರೀಕ್ಷೆಗಳನ್ನು ಈಡೇರಿಸುವ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ನಾನು ಸಂಪೂರ್ಣ ತೃಪ್ತಿ ಮತ್ತು ಸಮಾಧಾನದಿಂದ ಈ ಹೊಣೆಗಾರಿಕೆಯನ್ನು ನಿರ್ವಹಿಸುತ್ತೇನೆ” ಎಂದು ಹೇಳಿದ್ದಾರೆ.

ಜೂನ್ 18ರ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್ ಖರ್ಗೆ!

ಬೆಂಗಳೂರು: ರಾಜ್ಯಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ರಾಜ್ಯ ರಾಜಕೀಯದಲ್ಲಿ ಚುರುಕುಗೊಂಡಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಜೂನ್ 18ರಂದು ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ದೇಶದಾದ್ಯಂತ ಒಟ್ಟು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರ ಅಂಗವಾಗಿ ಖರ್ಗೆ ಅವರು ವಿಧಾನಸಭೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿಯಾಗಿರುವ ವಿಶಾಲಾಕ್ಷಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಭಾರೀ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಪಕ್ಷದ ಒಗ್ಗಟ್ಟು ಮತ್ತು ಶಕ್ತಿಯನ್ನು ಪ್ರದರ್ಶಿಸಿದರು. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವು ಪ್ರಮುಖರು ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿದರು.

ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಕೆ.ಹೆಚ್. ಮುನಿಯಪ್ಪ, ಭೈರತಿ ಸುರೇಶ್ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

‘ನನ್ನ ಪಾತ್ರ ಮಾಡಬೇಕು ಎಂದು ರಣವೀರ್ ಸಿಂಗ್ ಲಂಡನ್‌ಗೆ ಬಂದಿದ್ದರು’: ಲಲಿತ್ ಮೋದಿ

ಮುಂಬೈ: ಐಪಿಎಲ್ ಸ್ಥಾಪಕ ಲಲಿತ್ ಮೋದಿ ಅವರ ಜೀವನ ಚರಿತ್ರೆ ಆಧಾರಿತ ಬಹುನಿರೀಕ್ಷಿತ ಬಯೋಪಿಕ್‌ ನಿರ್ಮಾಣಕ್ಕೆ ವೇಗ ಸಿಕ್ಕಿದ್ದು, ಚಿತ್ರದ ಕಥೆ ಹಾಗೂ ಚಿತ್ರಕಥೆ ಸಿದ್ಧಪಡಿಸುವ ಕಾರ್ಯ ಅಂತಿಮ ಹಂತದತ್ತ ಸಾಗುತ್ತಿದೆ. ಈ ಬಗ್ಗೆ ಸ್ವತಃ ಲಲಿತ್ ಮೋದಿ ಮಾಹಿತಿ ನೀಡಿದ್ದು, ತಮ್ಮ ಪಾತ್ರದಲ್ಲಿ ನಟಿಸಲು ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಆಸಕ್ತಿ ವ್ಯಕ್ತಪಡಿಸಿದ್ದ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ.

ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಲಿತ್ ಮೋದಿ, “ನನ್ನ ಜೀವನ ಆಧಾರಿತ ಸಿನಿಮಾ ಸಿದ್ಧವಾಗುತ್ತಿದೆ. ಸ್ಕ್ರಿಪ್ಟಿಂಗ್ ಕೆಲಸ ಪ್ರಗತಿಯಲ್ಲಿದೆ. ಯೋಜನೆಗಾಗಿ ಈಗಾಗಲೇ ನೂರಾರು ಸಂದರ್ಶನಗಳನ್ನು ನಡೆಸಲಾಗಿದೆ. ಸ್ನೇಹಾ ರಜನಿ ನೇತೃತ್ವದ ತಂಡ ಕಥೆ ಮತ್ತು ಚಿತ್ರಕಥೆ ಅಭಿವೃದ್ಧಿಪಡಿಸುತ್ತಿದೆ” ಎಂದು ತಿಳಿಸಿದ್ದಾರೆ.

ಬಯೋಪಿಕ್‌ನಲ್ಲಿ ತಮ್ಮ ಪಾತ್ರಕ್ಕೆ ಸೂಕ್ತ ನಟ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ರಣವೀರ್ ಸಿಂಗ್ ಎರಡು ವರ್ಷಗಳ ಹಿಂದೆ ಲಂಡನ್‌ಗೆ ಬಂದು ನನ್ನನ್ನು ಭೇಟಿಯಾಗಿದ್ದರು. ನನ್ನ ಜೀವನ ಮತ್ತು ಐಪಿಎಲ್ ನಿರ್ಮಾಣದ ಹಿಂದಿನ ಕಥೆಯನ್ನು ಅರ್ಥಮಾಡಿಕೊಳ್ಳಲು ಅವರು ವಿಶೇಷ ಆಸಕ್ತಿ ತೋರಿದ್ದರು” ಎಂದು ಹೇಳಿದ್ದಾರೆ.

“ತಮ್ಮ ಸಿನಿ ಜೀವನದಲ್ಲಿ ಯಾವಾಗಲಾದರೂ ಐತಿಹಾಸಿಕ ವ್ಯಕ್ತಿಯ ಪಾತ್ರ ಮಾಡಬೇಕಾದರೆ ಅದು ಲಲಿತ್ ಮೋದಿ ಪಾತ್ರವಾಗಿರಬೇಕು ಎಂದು ರಣವೀರ್ ಹೇಳಿದ್ದರು. ಅವರು ನನ್ನ ಪಾತ್ರವನ್ನು ಅಭಿನಯಿಸಲು ಬಯಸಿದ್ದರು. ರಣವೀರ್ ಒಬ್ಬ ಅದ್ಭುತ ಕಲಾವಿದ” ಎಂದು ಮೋದಿ ಪ್ರಶಂಸಿಸಿದ್ದಾರೆ.

ಆದರೆ, ಪ್ರಸ್ತುತ ರಣವೀರ್ ಸಿಂಗ್ ಅವರ ಬ್ಯುಸಿ ಶೆಡ್ಯೂಲ್ ಹಿನ್ನೆಲೆಯಲ್ಲಿ ಅವರು ಈ ಪ್ರಾಜೆಕ್ಟ್‌ನಲ್ಲಿ ಭಾಗವಹಿಸುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ಮೂಲಕ ಕ್ರಿಕೆಟ್ ಉದ್ಯಮಕ್ಕೆ ಹೊಸ ಆಯಾಮ ನೀಡಿದ ಲಲಿತ್ ಮೋದಿ ಅವರ ಜೀವನದ ಏರಿಳಿತಗಳು, ವಿವಾದಗಳು, ಯಶಸ್ಸು ಹಾಗೂ ಜಾಗತಿಕ ಮಟ್ಟದ ಕ್ರಿಕೆಟ್ ಬ್ರ್ಯಾಂಡ್ ನಿರ್ಮಾಣದ ಕಥೆಯನ್ನು ಈ ಬಯೋಪಿಕ್ ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ಚಿತ್ರದ ನಿರ್ದೇಶಕ ಹಾಗೂ ಉಳಿದ ತಾರಾಗಣದ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ಕಾಡಾನೆಗೆ ಮಹಿಳೆ ಬಲಿ, ಚಿರತೆ ದಾಳಿಗೆ ನಾಲ್ವರು ಗಾಯ: ರಾಜ್ಯದಲ್ಲಿ ಹೆಚ್ಚಿದ ವನ್ಯಜೀವಿ ಆತಂಕ

0

ಕೊಡಗು: ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ವನ್ಯಜೀವಿ ದಾಳಿಗಳು ಗ್ರಾಮೀಣ ಪ್ರದೇಶಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿವೆ. ಕೊಡಗಿನಲ್ಲಿ ಕಾಡಾನೆ ದಾಳಿಗೆ ನಿವೃತ್ತ ಐಜಿಪಿಯ ಪತ್ನಿ ಸಾವನ್ನಪ್ಪಿದರೆ, ಹಾಸನದಲ್ಲಿ ಚಿರತೆ ದಾಳಿಗೆ ನಾಲ್ವರು ಗಾಯಗೊಂಡಿದ್ದಾರೆ.

ಪೊನ್ನಂಪೇಟೆ ತಾಲೂಕಿನ ಕೋಣನಕಟ್ಟೆಯಲ್ಲಿ ನಿವೃತ್ತ ಐಜಿಪಿ ಅಣ್ಣಳಮಾಡ ಸುನೀಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (60) ಮೇಲೆ ಕಾಡಾನೆ ದಾಳಿ ನಡೆಸಿದೆ. ಬೆಳಗ್ಗೆ ತಮ್ಮ ಖಾಸಗಿ ಎಸ್ಟೇಟ್‌ಗೆ ತೆರಳಿದ್ದ ವೇಳೆ ನಡೆದ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೆಲ ಕಾರ್ಮಿಕರು ಸಹ ಗಾಯಗೊಂಡಿದ್ದಾರೆ.

ಇನ್ನೊಂದೆಡೆ, ಹೊಳೆನರಸೀಪುರ ತಾಲೂಕಿನ ಅಂಕವಳ್ಳಿ ಗ್ರಾಮದಲ್ಲಿ ಚಿರತೆ ಏಕಾಏಕಿ ಜಮೀನಿಗೆ ನುಗ್ಗಿ ರೈತರ ಮೇಲೆ ದಾಳಿ ನಡೆಸಿದೆ. ನವೀನ್, ನಾಗರಾಜ್, ಜಯಮ್ಮ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದಾಳಿಯ ಬಳಿಕ ಚಿರತೆ ಅಂಕವಳ್ಳಿಯಿಂದ ಬೂವನಹಳ್ಳಿ ಕಡೆಗೆ ತೆರಳಿ ಮತ್ತೋರ್ವ ಮಹಿಳೆ ವಸಂತಮ್ಮ ಅವರ ಮೇಲೂ ದಾಳಿ ನಡೆಸಿದೆ. ಗ್ರಾಮಸ್ಥರ ಗದ್ದಲದಿಂದ ಚಿರತೆ ಸಮೀಪದ ದನದ ಕೊಟ್ಟಿಗೆಯೊಳಗೆ ಸೇರಿಕೊಂಡಿದ್ದು, ಗ್ರಾಮಸ್ಥರು ಕೊಟ್ಟಿಗೆ ಬಾಗಿಲು ಮುಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮೈಸೂರಿನ ವನ್ಯಜೀವಿ ವೈದ್ಯ ಡಾ. ಆದರ್ಶ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಅರವಳಿಕೆ ಮದ್ದು ನೀಡಿ ಚಿರತೆಯನ್ನು ಸೆರೆಹಿಡಿಯುವ ಕಾರ್ಯ ನಡೆಯುತ್ತಿದೆ. ಜಿಲ್ಲಾಧಿಕಾರಿ ಲತಾ ಕುಮಾರಿ, ಚಿರತೆ ಇರುವ ಸ್ಥಳವನ್ನು ಗುರುತಿಸಲಾಗಿದ್ದು ಶೀಘ್ರದಲ್ಲೇ ಸೆರೆ ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.

ಕೇರಳಕ್ಕೆ ಮುಂಗಾರು ಪ್ರವೇಶಿಸಿದ ಬೆನ್ನಲ್ಲೇ ಕರ್ನಾಟಕದಲ್ಲೂ ವರುಣನ ಅಬ್ಬರ: ಕರಾವಳಿ ಜಿಲ್ಲೆಗಳಲ್ಲಿ ಮಳೆ

ಉಡುಪಿ/ಮಂಗಳೂರು: ಕೇರಳದಲ್ಲಿ ಮುಂಗಾರು ಮಾರುತ ಪ್ರವೇಶಿಸಿದ ಬೆನ್ನಲ್ಲೇ ಕರ್ನಾಟಕದ ಕರಾವಳಿ ಭಾಗಗಳಲ್ಲೂ ಮಳೆಯ ಚಟುವಟಿಕೆಗಳು ಚುರುಕುಗೊಂಡಿವೆ. ಉಡುಪಿ, ಮಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ವಾತಾವರಣ ಕಂಡುಬರುತ್ತಿದೆ.

ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಆಗಮಿಸಿದ ಒಂದೆರಡು ದಿನಗಳ ಬಳಿಕ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲೂ ಮಳೆ ಆರಂಭವಾಗುತ್ತದೆ. ಅದೇ ರೀತಿಯಾಗಿ ಈ ಬಾರಿ ಕೂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜನರಿಗೆ ಬಿಸಿಲಿನ ತಾಪದಿಂದ ಕೆಲಮಟ್ಟಿನ ನಿರಾಳತೆ ಸಿಕ್ಕಿದೆ.

ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಕಾಲುವೆಗಳು, ಚರಂಡಿಗಳು ಮತ್ತು ಮಳೆನೀರು ಹರಿಯುವ ಮಾರ್ಗಗಳನ್ನು ತಕ್ಷಣ ಸ್ವಚ್ಛಗೊಳಿಸುವಂತೆ ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ. ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ಸಂಭವನೀಯ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಅಗ್ನಿಶಾಮಕ ದಳ ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಸಜ್ಜಾಗಿರುವಂತೆ ಸೂಚಿಸಲಾಗಿದೆ. ತುರ್ತು ಪರಿಸ್ಥಿತಿಗಳಿಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಇನ್ನೊಂದೆಡೆ, ಹವಾಮಾನ ಇಲಾಖೆ ಕರಾವಳಿ ಭಾಗಗಳಿಗೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಸಮುದ್ರದಲ್ಲಿ ಗಾಳಿ ವೇಗ ಹೆಚ್ಚಾಗುವ ಹಾಗೂ ಅಲೆಗಳ ಅಬ್ಬರ ಹೆಚ್ಚುವ ಸಾಧ್ಯತೆ ಇರುವುದರಿಂದ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮೋದಿ ನನ್ನ ಆಪ್ತ ಸ್ನೇಹಿತ: ಭಾರತ-ಅಮೆರಿಕ ನಡುವೆ ಶೀಘ್ರವೇ ಮಹತ್ವದ ವ್ಯಾಪಾರ ಒಪ್ಪಂದ – ಟ್ರಂಪ್

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳು ಮತ್ತಷ್ಟು ಬಲವಾಗಲಿದ್ದು, ಉಭಯ ದೇಶಗಳ ನಡುವೆ ಶೀಘ್ರದಲ್ಲೇ ಮಹತ್ವದ ವ್ಯಾಪಾರ ಒಪ್ಪಂದವೊಂದು ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ವೈಟ್‌ಹೌಸ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮಗೆ ಉತ್ತಮ ಸ್ನೇಹ ಮತ್ತು ಆತ್ಮೀಯ ಬಾಂಧವ್ಯವಿದೆ ಎಂದು ಹೇಳಿದ್ದಾರೆ.

“ನಾವು ಶೀಘ್ರದಲ್ಲೇ ಮಹತ್ವದ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳಲಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನನಗೆ ಅತ್ಯಂತ ಇಷ್ಟದ ನಾಯಕರು. ಅವರು ನನ್ನ ಆಪ್ತ ಸ್ನೇಹಿತರಾಗಿದ್ದು, ನಮ್ಮಿಬ್ಬರ ನಡುವೆ ಉತ್ತಮ ಸಂಬಂಧ ಮತ್ತು ಪರಸ್ಪರ ಗೌರವವಿದೆ. ಈ ವ್ಯಾಪಾರ ಒಪ್ಪಂದವು ಭಾರತ ಹಾಗೂ ಅಮೆರಿಕ ನಡುವಿನ ಆರ್ಥಿಕ ಮತ್ತು ರಾಜತಾಂತ್ರಿಕ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ” ಎಂದು ಟ್ರಂಪ್ ತಿಳಿಸಿದ್ದಾರೆ.

ಇದೇ ವೇಳೆ ಭಾರತದ ತೆರಿಗೆ ಮತ್ತು ಸುಂಕ ನೀತಿಗಳ ಕುರಿತು ತಮ್ಮ ಹಿಂದಿನ ಅಸಮಾಧಾನವನ್ನು ಟ್ರಂಪ್ ಪುನರುಚ್ಚರಿಸಿದರು. ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಹಲವು ವರ್ಷಗಳಿಂದ ಹೆಚ್ಚಿನ ಪ್ರಮಾಣದ ಸುಂಕ ವಿಧಿಸುತ್ತಿದೆ ಎಂದು ಅವರು ಆರೋಪಿಸಿದರು.

“ಅಮೆರಿಕದ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳಿಗೆ ಉತ್ತಮ ಅವಕಾಶಗಳು ದೊರೆಯುತ್ತಿವೆ. ಆದರೆ ಅಮೆರಿಕದ ಉತ್ಪನ್ನಗಳಿಗೆ ಭಾರತದಲ್ಲಿ ಹೆಚ್ಚಿನ ಸುಂಕ ವಿಧಿಸಲಾಗುತ್ತಿದೆ. ಈ ವಿಷಯದಲ್ಲಿ ಭಾರತವು ಅಮೆರಿಕದ ಉದಾರ ನೀತಿಗಳಿಂದ ಹೆಚ್ಚು ಪ್ರಯೋಜನ ಪಡೆದುಕೊಂಡಿದೆ” ಎಂದು ಟ್ರಂಪ್ ಅಭಿಪ್ರಾಯ ವ್ಯಕ್ತಪಡಿಸಿದರು.

ಒಂದೇ ರಾತ್ರಿ ಬೆಂಗಳೂರು ಬದಲಾಗುವುದಿಲ್ಲ: ಕಸ, ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡುವುದಾಗಿ ಕೃಷ್ಣ ಬೈರೇಗೌಡ ಭರವಸೆ

ಬೆಂಗಳೂರು: ಸಚಿವ ಸಂಪುಟ ಪುನರ್ರಚನೆಯ ಬಳಿಕ ಬೆಂಗಳೂರು ಅಭಿವೃದ್ಧಿ ಖಾತೆಯ ಜವಾಬ್ದಾರಿ ಪಡೆದಿರುವ ಸಚಿವ ಕೃಷ್ಣ ಬೈರೇಗೌಡ ಅವರು, ಈ ಹುದ್ದೆ ಅತ್ಯಂತ ಸವಾಲಿನದ್ದಾಗಿದ್ದು, ನಗರದ ಜನರ ಜೀವನಮಟ್ಟ ಸುಧಾರಿಸುವುದೇ ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಖಾತೆ ಹಂಚಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಕಂದಾಯ ಇಲಾಖೆಯಲ್ಲಿ ಆರಂಭಿಸಿರುವ ಹಲವು ಯೋಜನೆಗಳು ಮತ್ತು ಸುಧಾರಣಾ ಕಾರ್ಯಗಳನ್ನು ಪೂರ್ಣಗೊಳಿಸಲು ಅವಕಾಶ ನೀಡುವಂತೆ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದೆ. ಆದರೆ ನಾಯಕತ್ವವು ಬೆಂಗಳೂರು ಅಭಿವೃದ್ಧಿ ಖಾತೆಯ ಜವಾಬ್ದಾರಿಯನ್ನು ನೀಡಿದೆ ಎಂದು ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಇಲಾಖೆ ಸುಲಭದ ಜವಾಬ್ದಾರಿಯಲ್ಲ. ನಗರವು ಸಂಚಾರ ದಟ್ಟಣೆ, ಕಸ ನಿರ್ವಹಣೆ, ಮೂಲಸೌಕರ್ಯ ಕೊರತೆ ಸೇರಿದಂತೆ ಹಲವು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿದೆ. ಎಲ್ಲ ಸಮಸ್ಯೆಗಳನ್ನೂ ತಕ್ಷಣ ಪರಿಹರಿಸುತ್ತೇವೆ ಎಂಬ ಭರವಸೆಯನ್ನು ಈಗಲೇ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಉಪ ಮುಖ್ಯಮಂತ್ರಿ ಆಗಿದ್ದ ವೇಳೆ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಅಭಿವೃದ್ಧಿಗೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಅಡಿಪಾಯ ಹಾಕಿದ್ದಾರೆ ಎಂದು ಕೃಷ್ಣ ಬೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ಟನಲ್ ರಸ್ತೆ, ಎಲಿವೇಟೆಡ್ ಕಾರಿಡಾರ್ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಕಾರ್ಯ ಆರಂಭವಾಗಿದ್ದು, ಕೆಲವು ಯೋಜನೆಗಳನ್ನು ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿಯೇ ಪರಿಣಾಮಕಾರಿಯಾಗಿ ಮುನ್ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ನಗರದ ಕಸ ನಿರ್ವಹಣೆ, ಟ್ರಾಫಿಕ್ ಸಮಸ್ಯೆ ಹಾಗೂ ನಾಗರಿಕರು ಪ್ರತಿನಿತ್ಯ ಎದುರಿಸುವ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

“ಬೆಂಗಳೂರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಎಲ್ಲವನ್ನೂ ಒಂದೇ ದಿನದಲ್ಲಿ ಅಥವಾ ಒಂದೇ ರಾತ್ರಿ ಬದಲಾಯಿಸಲು ಸಾಧ್ಯವಿಲ್ಲ. ನಗರದ ಸಮಗ್ರ ಅಭಿವೃದ್ಧಿಗಾಗಿ ಕೆಲ ಕಠಿಣ ಮತ್ತು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಜನರು ಸಹ ಸರ್ಕಾರದೊಂದಿಗೆ ಕೈಜೋಡಿಸಬೇಕು” ಎಂದು ಕೃಷ್ಣ ಬೈರೇಗೌಡ ಮನವಿ ಮಾಡಿದರು.

ಸುದೀಪ್ ಜೊತೆ ನಿಗೂಢ ಬಾಡಿಗಾರ್ಡ್: ಹೊಸ ಎಂಟ್ರಿಯ ಹಿಂದೆ ಕುತೂಹಲ

ಕನ್ನಡ ಚಿತ್ರರಂಗದ ‘ಕಿಚ್ಚ’ ಸುದೀಪ್ ಅವರ ಸುತ್ತ ಹೊಸ ಬಾಡಿಗಾರ್ಡ್ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ರಾಮ್ ಚರಣ್ ಅವರ ಇತ್ತೀಚಿನ ಪ್ರಚಾರ ಕಾರ್ಯಕ್ರಮದಲ್ಲಿ ಹೊಸ ಬಾಡಿಗಾರ್ಡ್ ಕೆವಿನ್ ಕುಂಟಾ ಗಮನ ಸೆಳೆದಿದ್ದ ಬೆನ್ನಲ್ಲೇ, ಈಗ ಸುದೀಪ್ ಜೊತೆ ಕೂಡ ವಿದೇಶಿ ದೇಹದಾಕಾರದ ಬಾಡಿಗಾರ್ಡ್ ಕಾಣಿಸಿಕೊಂಡಿದ್ದಾರೆ.

ಸುದೀಪ್ ಅವರ ದೀರ್ಘಕಾಲದ ವೈಯಕ್ತಿಕ ಬಾಡಿಗಾರ್ಡ್ ಕಿರಣ್ ಆಗಿದ್ದರೂ, ಇತ್ತೀಚಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೊಸ ವ್ಯಕ್ತಿಯೊಬ್ಬರು ಅವರ ಭದ್ರತಾ ತಂಡದ ಭಾಗವಾಗಿ ಕಾಣಿಸಿಕೊಂಡಿದ್ದಾರೆ. 6.1 ಅಡಿ ಎತ್ತರದ ಸುದೀಪ್ ಅವರಿಗಿಂತಲೂ ಎತ್ತರದ ಈ ವ್ಯಕ್ತಿಯ ಉಪಸ್ಥಿತಿ ಅಭಿಮಾನಿಗಳ ಗಮನ ಸೆಳೆದಿದೆ.

ಇವರು ಹೊಸ ನೇಮಕಾತಿಯೇ ಅಥವಾ ತಾತ್ಕಾಲಿಕ ಭದ್ರತಾ ವ್ಯವಸ್ಥೆಯ ಭಾಗವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕಾರ್ಯಕ್ರಮದ ಸಮಯದಲ್ಲಿ ಸುದೀಪ್ ಕುಟುಂಬವನ್ನು ಸುರಕ್ಷಿತವಾಗಿ ಸಂರಕ್ಷಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಈ ಘಟನೆ ‘ಮ್ಯಾಂಗೋ ಪಚ್ಚ’ ಚಿತ್ರದ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದಿದೆ. ಅಲ್ಲಿ ಸುದೀಪ್ ಕುಟುಂಬ ಸಮೇತ ಆಗಮಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಹೊಸ ಬಾಡಿಗಾರ್ಡ್ ಬಗ್ಗೆ ಚರ್ಚೆ ಹೆಚ್ಚಾಗಿದೆ.

ಈಗಾಗಲೇ ‘ಮಾರ್ಕ್’ ನಂತರ ಯಾವುದೇ ಹೊಸ ಸಿನಿಮಾ ಘೋಷಿಸದ ಸುದೀಪ್, ‘ಬಿಲ್ಲ ರಂಗ ಭಾಷ’ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬಿಗ್ ಬಾಸ್ ಹೊಸ ಸೀಸನ್ ಶೀಘ್ರದಲ್ಲೇ ಆರಂಭವಾಗಲಿದೆ ಎಂಬ ನಿರೀಕ್ಷೆಯೂ ಇದೆ.

ಹೊಸ ಬಾಡಿಗಾರ್ಡ್ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

ಶಿವಕುಮಾರ್ ನೇತೃತ್ವದ ಸಿದ್ದರಾಮಯ್ಯ ಕ್ಯಾಬಿನೆಟ್ ಮೊದಲ ವಿಕೆಟ್ ಪತನ: ವಿಜಯೇಂದ್ರ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಿದ್ದರಾಮಯ್ಯನವರ ಸಚಿವಸಂಪುಟದ ಮೊದಲನೇ ವಿಕೆಟ್ ಇವತ್ತು ಪತನವಾಗಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ರಾಮಲಿಂಗಾರೆಡ್ಡಿಯವರು ಹಿರಿಯರಿದ್ದಾರೆ. ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ; ಕಾಂಗ್ರೆಸ್ಸಿನವರಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ ಎಂಬುದು ವಾಸ್ತವಿಕ ಸತ್ಯ ಎಂದು ನುಡಿದರು. ನಾಡಿನ ರೈತರ ಸಮಸ್ಯೆ ಪರಿಹಾರದ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಿಸಿದರು.

ಹಗ್ಗಜಗ್ಗಾಟದಲ್ಲೇ 3 ವರ್ಷ ಕಳೆದಿದ್ದಾರೆ. ಯಾವುದೇ ಒಬ್ಬ ಸಚಿವರು ನಾಮಕಾವಾಸ್ತೆ ಉಸ್ತುವಾರಿ ಸಚಿವರಾಗಿದ್ದರು. ರಾಜ್ಯದ ಸಚಿವರು ತಮ್ಮ ಜಿಲ್ಲೆಗೆ ಸೀಮಿತವಾಗಿದ್ದರೇ ಹೊರತು ಯಾವುದೇ ಇತರ ಜಿಲ್ಲೆಗೆ ಪ್ರವಾಸ ಮಾಡಿಲ್ಲ.

ಈಗ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇರುವುದು ಕೇವಲ 2 ವರ್ಷ ಮಾತ್ರ. ಈಗ ಮತ್ತೆ ಹಗ್ಗಜಗ್ಗಾಟ, ಯಾವ ಖಾತೆ, ಯಾವ ಜಿಲ್ಲೆ ಉಸ್ತುವಾರಿ ಪಡೆದುಕೊಳ್ಳಬೇಕೆಂಬ ಕಿತ್ತಾಟದಲ್ಲಿ ಇವತ್ತು ರಾಮಲಿಂಗಾರೆಡ್ಡಿಯವರು ರಾಜೀನಾಮೆ ನೀಡಿದ್ದಾರೆ ಎಂದು ನುಡಿದರು.

ರಾಮಲಿಂಗಾರೆಡ್ಡಿ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ʼಗೆ ಮತ್ತೊಂದು ಶಾಕ್: ಖಾತೆ ಬದಲಾವಣೆಗೆ ಕೆ.ಎಚ್. ಮುನಿಯಪ್ಪ ಆಗ್ರಹ

ಬೆಂಗಳೂರು: ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಚರ್ಚೆಯಲ್ಲಿರುವ ನಡುವೆಯೇ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಖಾತೆ ಹಂಚಿಕೆ ವಿಚಾರದಲ್ಲಿ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೊಂದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಸೀನಿಯಾರಿಟಿಗೆ ತಕ್ಕ ಗೌರವ ನೀಡಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದೇ ಪರಿಸ್ಥಿತಿ ಮುಂದುವರಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಗಂಭೀರ ಪರಿಣಾಮ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.

ಕಳೆದ ಮೂರು ವರ್ಷಗಳಿಂದ ಆಹಾರ ಇಲಾಖೆಯನ್ನು ನಿರ್ವಹಿಸುತ್ತಿರುವ ತಮಗೆ ಮತ್ತೆ ಅದೇ ಖಾತೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಮುನಿಯಪ್ಪ, ತಾವು ಎಂಟು ಬಾರಿ ಚುನಾವಣೆಯಲ್ಲಿ ಗೆದ್ದಿರುವ ಹಿರಿಯ ನಾಯಕನಾಗಿದ್ದರೂ ಖಾತೆ ಹಂಚಿಕೆಯಲ್ಲಿ ತಮ್ಮ ಅನುಭವ ಮತ್ತು ಸೀನಿಯಾರಿಟಿಯನ್ನು ಪರಿಗಣಿಸಲಾಗಿಲ್ಲ ಎಂದು ಹೇಳಿದರು.

“ಸಚಿವ ಸಂಪುಟದಲ್ಲಿ ಪ್ರೊಟೊಕಾಲ್ ಮತ್ತು ಅನುಭವದ ಆಧಾರದ ಮೇಲೆ ಖಾತೆಗಳನ್ನು ಹಂಚಿಕೆ ಮಾಡಬೇಕಿತ್ತು. ಸಮಾಜ ಕಲ್ಯಾಣ, ಕೃಷಿ ಅಥವಾ ಜನಸೇವೆಗೆ ನೇರವಾಗಿ ಸಂಬಂಧಿಸಿದ ಪ್ರಮುಖ ಇಲಾಖೆಯನ್ನು ನೀಡುವಂತೆ ನಾನು ಮೊದಲೇ ಮನವಿ ಮಾಡಿದ್ದೆ. ಆದರೆ ಖಾತೆ ಹಂಚಿಕೆಯಲ್ಲಿ ಸಮತೋಲನ ಕಾಯ್ದುಕೊಂಡಿಲ್ಲ” ಎಂದು ಅವರು ಹೇಳಿದರು.

ಪಕ್ಷದ ನಾಯಕತ್ವದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಪಕ್ಷದಲ್ಲಿ ತಾಯಿಯ ಸ್ಥಾನದಲ್ಲಿರುವ ನಾಯಕತ್ವ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಈ ವಿಚಾರವನ್ನು ನಾನು ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದೇನೆ. ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ನನ್ನ ಖಾತೆಯನ್ನು ಬದಲಾಯಿಸುವ ಬಗ್ಗೆ ನಾಯಕತ್ವ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.

ಇದೇ ವೇಳೆ ಸಮಾಜ ಕಲ್ಯಾಣ, ಕೃಷಿ ಅಥವಾ ನೀರಾವರಿ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನೀಡಿದರೆ ಜನಸೇವೆ ಮತ್ತು ರೈತರ ಪರ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

error: Content is protected !!