Home Blog Page 57

ಯುಗಾದಿಯಂದು ಬೇವು-ಬೆಲ್ಲ ಸೇವಿಸುವುದು ಯಾಕೆ? ಇದರ ವಿಶೇಷತೆ ತಿಳಿಯಿರಿ!

0

ಯುಗಾದಿ ಎಂದರೆ ಹೊಸ ವರ್ಷದ ಮೊದಲ ದಿನ. ಈ ದಿನವನ್ನು ಹಿಂದಿನ ವರ್ಷದ ಸಾಧನೆಗಳನ್ನು ಪರಿಶೀಲಿಸಿ, ಹೊಸ ವರ್ಷದಲ್ಲಿ ಯಾವ ಯೋಜನೆಗಳನ್ನು ಅನುಸರಿಸಬೇಕು ಎಂಬುದನ್ನು ನಿರ್ಧರಿಸುವ ದಿನವೆಂದು ಪರಿಗಣಿಸಲಾಗುತ್ತದೆ.

ವೇದಗಳಲ್ಲಿ ವರ್ಷವನ್ನು ರಥಕ್ಕೆ, ಅದರ ಚಕ್ರವನ್ನು ಉತ್ತರಾಯಣ ದಕ್ಷಿಣಾಯಣಗಳಿಗೆ ಹೋಲಿಸಲಾಗುತ್ತದೆ. ಈ ಕಾರಣದಿಂದಲೇ ವರ್ಷವನ್ನು ಯುಗ ಮತ್ತು ಅದರ ಮೊದಲ ದಿನವನ್ನು ಯುಗಾದಿ ಎಂದು ಕರೆಯಲಾಗಿದೆ.

ಹಬ್ಬದ ಪ್ರಮುಖ ಸಂಪ್ರದಾಯ ಬೇವು-ಬೆಲ್ಲ ಸೇವಿಸುವುದು. ಬೇವು- ಕಷ್ಟ, ನೋವು, ಸವಾಲುಗಳ ಸಂಕೇತವಾಗಿದ್ದು, ಬೆಲ್ಲವು ಸಂತೋಷ, ಯಶಸ್ಸು, ಸುಖದ ಸಂಕೇತವಾಗಿದೆ. ಜೀವನದಲ್ಲಿ ಕೇವಲ ಸುಖ ಅಥವಾ ಕಷ್ಟವಷ್ಟೇ ಇಲ್ಲ; ಇದು ಬೇವು-ಬೆಲ್ಲದ ಮಿಶ್ರಣದಂತೆ, ಸುಖ-ದುಃಖ, ಲಾಭ-ನಷ್ಟಗಳನ್ನೂ ಸಮಾನವಾಗಿ ಅನುಭವಿಸುತ್ತೇವೆ. ಈ ಆಚರಣೆ ನಮಗೆ ಜೀವನದಲ್ಲಿ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ತೋರಿಸುತ್ತದೆ.

ಬೇವು-ಬೆಲ್ಲ ಸೇವಿಸುವಾಗ “ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಮ್” ಎಂಬ ಶ್ಲೋಕವನ್ನು ಉಚ್ಚರಿಸುತ್ತಾರೆ. ಇದರ ಅರ್ಥ: ನೂರು ವರ್ಷಗಳ ಆಯುಷ್ಯ, ವಜ್ರದಂತೆ ದೃಢ ದೇಹ, ಸಂಪತ್ತು ಮತ್ತು ಎಲ್ಲ ಅನಿಷ್ಟಗಳ ನಿವಾರಣೆಗಾಗಿ ಈ ಬೇವನ್ನು ಸೇವಿಸುತ್ತೇನೆ. ಆಯುರ್ವೇದ ಪ್ರಕಾರ, ಬೇವಿನ ಎಲೆಗಳು ಅನಿಷ್ಟಗಳನ್ನು ನಾಶಮಾಡುತ್ತವೆ, ದೇಹವನ್ನು ಬಲಿಷ್ಠಗೊಳಿಸುತ್ತವೆ ಮತ್ತು ಆಯುಷ್ಯವನ್ನು ವೃದ್ಧಿಸುತ್ತವೆ.

ಹೀಗಾಗಿ ಯುಗಾದಿ ಹಬ್ಬವು ಹೊಸ ವರ್ಷಕ್ಕೆ ಶುಭಾರಂಭ ಮಾಡುವ ದಿನವಾಗಿದ್ದು, ಜೀವನದ ಸುಖ-ದುಃಖಗಳನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವ ಪಾಠ ನೀಡುತ್ತದೆ.

 

ಗದಗ| ಮಲ್ಲಾಪೂರದಲ್ಲಿ ಭಾರೀ ಆಲಿಕಲ್ಲು ಮಳೆ, ಹಿಮಪಾತದಂತ ದೃಶ್ಯ – ಅಚ್ಚರಿಗೊಂಡ ಗ್ರಾಮಸ್ಥರು!

0

ಗದಗ: ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆ ಆಗಿದ್ದು, ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

ಸರಿಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರವಾಗಿ ಸುರಿದ ಆಲಿಕಲ್ಲು ಮಳೆಯಿಂದ ಗ್ರಾಮದಲ್ಲಿ ಹಿಮಪಾತದಂತೆಯೇ ದೃಶ್ಯ ನಿರ್ಮಾಣವಾಗಿತ್ತು. ರಸ್ತೆಗಳು ಮತ್ತು ಮನೆಗಳ ಮುಂದೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿದ್ದು, ಪರಿಸರ ಸಂಪೂರ್ಣವಾಗಿ ಬಿಳಿಮಯವಾಗಿತ್ತು.

ಈ ಅಪರೂಪದ ದೃಶ್ಯಗಳನ್ನು ಗ್ರಾಮಸ್ಥರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ಗ್ರಾಮಸ್ಥರು ಒಂದೆಡೆ ಸಂತಸಗೊಂಡರೆ, ಮತ್ತೊಂದೆಡೆ ರೈತರು ಅಪಾರ ಪ್ರಮಾಣದ ಮೇವು, ಹೊಟ್ಟು ನೀರುಪಾಲಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ಗದಗದಲ್ಲಿ ಕ್ರೂರ ಕೃತ್ಯ| ಅಣ್ಣನ ಮೋಹಕ್ಕೆ ತಮ್ಮ ಬಲಿ, ಹೆಣ್ಣಿನಾಸೆಗೆ ಒಡಹುಟ್ಟಿದವನನ್ನೇ ಕೊಂದ ಪಾಪಿ ಸಹೋದರ!

0

ಗದಗ:- ಒಂದು ಹುಡುಗಿಗಾಗಿ ಒಡ ಹುಟ್ಟಿದ ತಮ್ಮನನ್ನೆ ಅಣ್ಣನೋರ್ವ ಕೊಲೆಗೈದ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಜರುಗಿದೆ.

ಅಶೋಕ ಕೊಲೆ ಮಾಡಿದ ಪಾಪಿ ಅಣ್ಣ. ಫಕ್ಕೀರಪ್ಪ ಕೊಲೆಗೀಡಾದ ದುರ್ಧೈವಿ. ಎಸ್, ಬೆಳೆದಿದ್ದ ಮಕ್ಕಳಿಗೆ ಪೋಷಕರು ಮದುವೆ ಪ್ಲ್ಯಾನ್ ಮಾಡಿದ್ದರು. ಅದರಂತೆ ಅಣ್ಣ-ತಮ್ಮ ಇಬ್ಬರು ಹುಡುಗಿ ನೋಡಿ ಬಂದಿದ್ದರು. ಆದ್ರೆ ಅಣ್ಣನಿಗೆ ತಮ್ಮ ನೋಡಿದ ಹುಡುಗಿ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಆ ಹುಡುಗಿ ಮದುವೆ ಆಗಲು ತಮ್ಮನೇ ಅಡ್ಡಿ ಎಂದು ತಿಳಿದು, ಪಾಪಿ ಸಹೋದರ ತಮ್ಮನನ್ನೇ ಕೊಲೆಗೈದಿದ್ದಾನೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಯಾರೋ ಕಿಡಿಗೇಡಿಗಳು ನನ್ನ ತಮ್ಮನನ್ನು ಹೊಡೆದು ಸಾಯಿಸಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾನೆ.

ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೋಲೀಸರು ಡಾಗ್ ಸ್ಕ್ವಾಡ್ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ನಾಯಿ ನೇರವಾಗಿ ಅಶೋಕನ ಬಳಿ ಬಂದು ನಿಲ್ಲುತ್ತೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಾಗ ಹುಡುಗಿ ವಿಚಾರವಾಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗದಗ ಎಸ್ಪಿ ರೋಹನ್ ಜಗದೀಶ್ ಹೇಳಿದ್ದೇನು?

ಘಟನೆ ಕುರಿತು ಗದಗ ಎಸ್ಪಿ ರೋಹನ್ ಜಗದೀಶ್ ಮಾತನಾಡಿ, ಮೂಲತಃ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ನಿವಾಸಿಗಳಾದ ಇಬ್ಬರು ಸಹೋದರರು ಕುರಿಗಾಯಿಗಳಾಗಿದ್ದರು‌. ನಿತ್ಯ ಒಂದೊಂದು ಜಮೀನುಗಳಿಗೆ ಹೋಗಿ ಕುರಿಗಳನ್ನು ಮೇಯಿಸಿಕೊಂಡು ಹೋಗ್ತಾಯಿದ್ರು. ಹೀಗಾಗಿ ಮಕ್ಕಳ‌ ಮದುವೆ ಮಾಡಲು ಪೋಷಕರು ಪ್ಲಾನ್ ಮಾಡಿದ್ರು.

ಆದ್ರೆ ಒಂದು ಹುಡುಗಿ ವಿಚಾರವಾಗಿ ಇಬ್ಬರು ಗಲಾಟೆ ಮಾಡಿಕೊಂಡಿದ್ದು, ಸಾವಿನಲ್ಲಿ ಅಂತ್ಯವಾಗಿದೆ. ಪೊಲೀಸರು ಘಟನೆ ಸಂಬಂಧ ತನಿಖೆ ಚುರುಕುಗೊಳಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹೃದಯದಿಂದ ಚರ್ಮದವರೆಗೆ…ದಾಳಿಂಬೆ ತಿನ್ನುವುದರಿಂದ ಸಿಗುವ ಅದ್ಭುತ ಆರೋಗ್ಯ ಲಾಭಗಳು!

0

ದಾಳಿಂಬೆ ಹಣ್ಣು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಹಣ್ಣಾಗಿದೆ. ಸಣ್ಣ ಕೆಂಪು ಕಣಗಳಂತೆ ಕಾಣುವ ಬೀಜಗಳನ್ನು ಹೊಂದಿರುವ ಈ ಹಣ್ಣು ಪೋಷಕಾಂಶಗಳ ಭಂಡಾರವೆಂದೇ ಹೇಳಬಹುದು.

ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ನಾರಿನಾಂಶ, ಸಿ ಮತ್ತು ಕೆ ಜೀವಸತ್ವಗಳು, ಪೊಟ್ಯಾಸಿಯಂ ಸೇರಿದಂತೆ ಹಲವು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿವೆ. ಪ್ರತಿದಿನ ದಾಳಿಂಬೆ ಸೇವನೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯೂ ಉತ್ತಮವಾಗಿರುತ್ತದೆ.

ದಾಳಿಂಬೆ ಸೇವನೆಯಿಂದ ರಕ್ತಹೀನತೆ ನಿವಾರಣೆಯಾಗುತ್ತದೆ. ಇದರಲ್ಲಿ ಇರುವ ಕಬ್ಬಿಣಾಂಶ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ದೇಹದಲ್ಲಿ ರಕ್ತದ ಪ್ರಮಾಣವನ್ನು ಸುಧಾರಿಸುತ್ತದೆ. ಜೊತೆಗೆ ಮುಖದ ನೈಸರ್ಗಿಕ ಕಾಂತಿಯೂ ಹೆಚ್ಚುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತವೆ ಹಾಗೂ ಸಂಧಿವಾತದಂತಹ ಸಮಸ್ಯೆಗಳಿಂದ ಪರಿಹಾರ ನೀಡುತ್ತವೆ.

ಹೃದಯ ಆರೋಗ್ಯಕ್ಕೂ ದಾಳಿಂಬೆ ಬಹಳ ಉಪಯುಕ್ತವಾಗಿದೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು, ರಕ್ತನಾಳಗಳನ್ನು ಆರೋಗ್ಯಕರವಾಗಿಡಲು ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಹೃದಯಾಘಾತದ ಅಪಾಯವನ್ನೂ ಕಡಿಮೆ ಮಾಡುತ್ತದೆ. ದಾಳಿಂಬೆ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಶೀತ, ಕೆಮ್ಮು, ನೆಗಡಿ ಮುಂತಾದ ಸಾಮಾನ್ಯ ಸೋಂಕುಗಳನ್ನು ತಡೆಯಲು ನೆರವಾಗುತ್ತದೆ.

ಇದಲ್ಲದೆ ದಾಳಿಂಬೆ ಜೀರ್ಣಕ್ರಿಯೆಯನ್ನು ಸುಧಾರಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೆದುಳಿನ ಆರೋಗ್ಯಕ್ಕೂ ಇದು ಸಹಕಾರಿ ಆಗಿದ್ದು, ಸ್ಮರಣಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡಿ ಕಾಂತಿ ಹೆಚ್ಚಿಸುವುದಲ್ಲದೆ ವಯಸ್ಸಾಗುವ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ದಾಳಿಂಬೆ ಮಧುಮೇಹ ಇರುವವರಿಗೆ ಉಪಯುಕ್ತವಾಗಿದೆ. ಜೊತೆಗೆ ತ್ವರಿತ ಶಕ್ತಿಯನ್ನು ಒದಗಿಸುವ ಗುಣ ಹೊಂದಿರುವುದರಿಂದ ದಿನನಿತ್ಯದ ಆಹಾರದಲ್ಲಿ ಇದನ್ನು ಸೇರಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಗದಗದಲ್ಲಿ ವರುಣನ ಅಬ್ಬರ, ರೋಣದಲ್ಲಿ ಆಲಿಕಲ್ಲು ಮಳೆ: ಸಿಡಿಲು ಬಡಿದು ರೈತ ಸಾವು – ಹೊಟ್ಟು, ಮೇವು ನೀರು ಪಾಲು!

0

ಗದಗ: ಜಿಲ್ಲೆಯ ಹಲವೆಡೆ ಇಂದು ಸಂಜೆ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ರೋಣ ತಾಲೂಕಿನ ವಿವಿಧ ಭಾಗಗಳಲ್ಲಿ ಆಲಿಕಲ್ಲು ಮಳೆಯೂ ಸುರಿದಿದೆ.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯು ಬೇಸಿಗೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪು ನೀಡಿದರೂ, ರೈತರಿಗೆ ಸಂಕಷ್ಟ ತಂದೊಡ್ಡಿದೆ.

ರೋಣ ಪಟ್ಟಣ ಸೇರಿದಂತೆ ಕುರಹಟ್ಟಿ, ಜಕ್ಕಲಿ, ಮಲ್ಲಾಪೂರ, ಸೂಡಿ, ಅಬ್ಬಿಗೇರಿ ಗ್ರಾಮಗಳಲ್ಲಿ ಮಳೆ ಜೋರಾಗಿ ಸುರಿದಿದೆ. ಸಂಜೆ ಸುಮಾರು 4 ಗಂಟೆ ವೇಳೆಗೆ ಗಾಳಿ, ಮಿಂಚು, ಗುಡುಗು-ಸಿಡಿಲಿನೊಂದಿಗೆ ವರುಣ ಆರ್ಭಟ ಮೆರೆದಿದ್ದು, ಪರಿಣಾಮ ಎರಡು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು.

ಭಾರೀ ಮಳೆಯಿಂದ ಚರಂಡಿ ನೀರು ರಸ್ತೆಗೆ ಹರಿದುಬಂದ ಪರಿಣಾಮ ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. ಇನ್ನು ಅಕಾಲಿಕ ಮಳೆಯಿಂದ ಜಾನುವಾರುಗಳಿಗೆ ಸಂಗ್ರಹಿಸಿದ್ದ ಹೊಟ್ಟು ಮೇವು ನೀರು ಪಾಲಾಗಿದ್ದು, ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಮಳೆ ಅವಾಂತರ: ಸಿಡಿಲು ಬಡಿದು ರೈತ ಸಾವು!

ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಇಂದು ಸುರಿದ ಧಾರಾಕಾರ ಮಳೆಗೆ ಸಿಡಿಲು ಬಡಿದು ರೈತನೋರ್ವ ಸಾವನ್ನಪ್ಪಿದ್ದಾನೆ.

ನಿಂಗಪ್ಪ ರಾಮಪ್ಪ ಅಮಾತಿ (58) ಮೃತ ರೈತ. ಇಂದು ಸಾಯಂಕಾಲ ಸರಿಸುಮಾರು 5.30ರ ಸುಮಾರಿಗೆ ಹೊಲದಿಂದ ಬರುವಾಗ ಬೆನ್ನಿ ಹಳ್ಳದ ಹತ್ತಿರ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ರೈತನ ಸಾವಿನಿಂದಾಗಿ ಕುಟುಂಬ ಕಂಗಾಲಾಗಿದ್ದು, ಘಟನೆ ಸಂಬಂಧ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗದಲ್ಲಿ ಸೈಬರ್ ವಂಚನೆ ಜಾಲ ಬಯಲು: 5 ಆರೋಪಿಗಳು ಅರೆಸ್ಟ್ – 11 ಮೊಬೈಲ್, ಬ್ಯಾಂಕ್ ದಾಖಲೆಗಳು ಸೀಜ್!

0

ಗದಗ: ಗದಗ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಭಾರೀ ಸೈಬರ್ ವಂಚನೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ 5 ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 11 ಮೊಬೈಲ್ ಫೋನ್‌ಗಳು, ಬ್ಯಾಂಕ್ ಪಾಸ್ಬುಕ್‌ಗಳು, ಎಟಿಎಂ ಕಾರ್ಡ್‌ಗಳು, ಸಿಮ್ ಕಾರ್ಡ್‌ಗಳು ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮಾಹಿತಿಯ ಕಿಟ್‌ಗಳನ್ನು ಜಪ್ತಿ ಮಾಡಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ದಾಸರಹಳ್ಳಿ ತಾಂಡಾದ ಆರೋಪಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಸ್ಕಾಲರ್‌ಶಿಪ್ ಹಾಗೂ ಇತರೆ ಆಮಿಷಗಳನ್ನು ನೀಡಿ ನಂಬಿಕೆ ಗಳಿಸುತ್ತಿದ್ದರು. ಬಳಿಕ ಅವರ ಹೆಸರಿನಲ್ಲಿ ಗದಗ ನಗರದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಖಾತೆಗಳನ್ನು ತೆರೆಯಿಸಿ, ಪಾಸ್ಬುಕ್, ಎಟಿಎಂ ಕಾರ್ಡ್ ಮತ್ತು ಇತರೆ ಮಾಹಿತಿಗಳನ್ನು ಪಡೆದು ಸೈಬರ್ ವಂಚನೆಗೆ ಬಳಸುತ್ತಿದ್ದರು.

ಮಾರ್ಚ್ 11, 2026ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಮಾಹಿತಿ ಆಧಾರದಲ್ಲಿ ಗೋವಾಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಜಾರ್ಖಂಡ್ ಹಾಗೂ ಛತ್ತೀಸ್‌ಗಢ ಮೂಲದವರೂ ಸೇರಿದ್ದು, ಗೋವದಲ್ಲಿ ನೆಲೆಸಿ ವಂಚನೆ ಜಾಲ ವಿಸ್ತರಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.

ಆರೋಪಿತರಿಂದ 8 ಬ್ಯಾಂಕ್ ಖಾತೆಗಳ ಕಿಟ್‌ಗಳು ಹಾಗೂ ಹಾವೇರಿ, ಗದಗ ಜಿಲ್ಲೆಯ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಮೂವರು ಪ್ರಮುಖ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಈ ಪ್ರಕರಣ ರಾಜ್ಯ ಮಟ್ಟದ ದೊಡ್ಡ ಸೈಬರ್ ವಂಚನೆ ಜಾಲವಾಗಿರುವ ಸಾಧ್ಯತೆ ಇದ್ದು, ಸಾರ್ವಜನಿಕರು ಇಂತಹ ಆಮಿಷಗಳಿಗೆ ಒಳಗಾಗದಂತೆ ಎಚ್ಚರಿಕೆಯಿಂದಿರಬೇಕೆಂದು ಎಸ್ಪಿ ರೋಹನ್ ಜಗದೀಶ್ ಮನವಿ ಮಾಡಿದ್ದಾರೆ.

ತಾಯಿ ಬಗ್ಗೆ ನಿಂದನೆ: ಸ್ನೇಹಿತನನ್ನೇ ಸುತ್ತಿಗೆಯಿಂದ ಹೊಡೆದು ಹತ್ಯೆ!

0

ಬೆಂಗಳೂರು: ನಗರದ ಅತ್ತಿಮರ ಗೊರವಿನಗೆರೆಯಲ್ಲಿ ಸುತ್ತಿಗೆಯಿಂದ ಹೊಡೆದು ಸ್ನೇಹಿತನನ್ನೇ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ.

ಕುನಾಲ್ ಕುಮಾರ್ (22) ಕೊಲೆಯಾದ ಯುವಕ. ಮೊಹಮ್ಮದ್ ನಸ್ರುಲ್ಲಾ(24) ಕೊಲೆ ಮಾಡಿದ ಸ್ನೇಹಿತ. ಘಟನೆಗೆ ಸಂಬಂಧಿಸಿದಂತೆ ಆವಲಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ,  ಮೊಹಮ್ಮದ್ ನಸ್ರುಲ್ಲಾ, ಕುನಾಲ್ ಕುಮಾರ್​​ ಒಂದೇ ಕೊಠಡಿಯಲ್ಲಿ ವಾಸವಾಗಿದ್ದು, ಶೀತಕರಣ ಯಂತ್ರ ಸೇವಾ ಕೆಲಸ ಮಾಡುತ್ತಿದ್ದರು. ಈ ವೇಳೆ ನಸ್ರುಲ್ಲಾ ತಾಯಿಯ ಬಗ್ಗೆ ಕುನಾಲ್ ಅವಾಚ್ಯ ಪದ ಬಳಸಿ ನಿಂದಿಸಿದ್ದಾನೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ನಸ್ರುಲ್ಲಾ, ಕುನಾಲ್ ಕುಮಾರ್ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಘಟನೆ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮಗುವಿನ ವಯಸ್ಸಿಗೆ ಮಿತಿ ಇಲ್ಲ: ದತ್ತು ತಾಯಿಗೆ 12 ವಾರ ರಜೆ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

0

ನವದೆಹಲಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ದತ್ತು ಪಡೆದ ತಾಯಂದಿರಿಗೆ ಹೆರಿಗೆ ರಜೆ ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದೆ.

ಇನ್ನು ಮುಂದೆ 3 ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಗುವನ್ನು ದತ್ತು ತೆಗೆದುಕೊಂಡರೂ ಸಹ, ತಾಯಿಗೆ ಪೂರ್ಣ ಹೆರಿಗೆ ರಜೆ ಸಿಗಲಿದೆ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಪಾರ್ದಿವಾಲಾ ಮತ್ತು ಮಹಾದೇವನ್ ಅವರ ಪೀಠ, ದತ್ತು ಪಡೆದ ಮಗು ಸಹ ತಾಯಿ ಹೆತ್ತ ಮಗುವಿನಂತೆಯೇ ಎಂದು ಹೇಳಿ, ಇದನ್ನು ಮಾನವ ಹಕ್ಕಿನ ಭಾಗವೆಂದು ಅಭಿಪ್ರಾಯಪಟ್ಟಿದೆ. ಮಗುವಿನ ವಯಸ್ಸನ್ನು ಲೆಕ್ಕಿಸದೆ, ದತ್ತು ಪಡೆದ ದಿನಾಂಕದಿಂದ 12 ವಾರಗಳ ಹೆರಿಗೆ ರಜೆಗೆ ಎಲ್ಲಾ ದತ್ತು ತಾಯಂದಿರು ಅರ್ಹರಾಗಿರಬೇಕು ಎಂದು ಸ್ಪಷ್ಟಪಡಿಸಿದೆ.

ಹಿಂದಿನ ನಿಯಮ ಪ್ರಕಾರ, 3 ತಿಂಗಳೊಳಗಿನ ಮಗುವನ್ನು ದತ್ತು ತೆಗೆದುಕೊಂಡ ತಾಯಂದಿರಿಗೆ ಮಾತ್ರ ಹೆರಿಗೆ ರಜೆ ಸಿಗುತ್ತಿತ್ತು. ಈ ಮಿತಿಯನ್ನು ಅಸಂವಿಧಾನಿಕವೆಂದು ಘೋಷಿಸಿರುವ ಸುಪ್ರೀಂ ಕೋರ್ಟ್, ಯಾವುದೇ ವಯಸ್ಸಿನ ಮಗುವನ್ನು ದತ್ತು ಪಡೆದ ತಾಯಿಗೆ ರಜೆ ನಿರಾಕರಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.

ಮಗು ಮತ್ತು ತಾಯಿ ನಡುವೆ ಬಾಂಧವ್ಯ ಬೆಳೆಸಲು, ಆರೈಕೆ ಹಾಗೂ ಹೊಂದಾಣಿಕೆಗೆ ಸಮಯ ಅಗತ್ಯವಿದೆ ಎಂಬುದನ್ನು ಕೋರ್ಟ್ ಒತ್ತಿಹೇಳಿದೆ.

ಇದೇ ವೇಳೆ, ಪಿತೃತ್ವ ರಜೆ ಕುರಿತ ನಿರ್ಧಾರವನ್ನು ಸಂಬಂಧಿಸಿದ ಸರ್ಕಾರಗಳ ಮೇಲೆಯೇ ಬಿಟ್ಟಿದ್ದು, ಈ ಬಗ್ಗೆ ಅಗತ್ಯ ನಿಯಮಗಳನ್ನು ಸರ್ಕಾರವೇ ರೂಪಿಸಬೇಕು ಎಂದು ಕೋರ್ಟ್ ತಿಳಿಸಿದೆ.

 

ತಂದೆಯ ಕಾರಣಕ್ಕೆ ಸಚಿವ ಸ್ಥಾನ: ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ವಾಗ್ದಾಳಿ!

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಇನ್ನೂ ಅನುಭವಹೀನರಾಗಿದ್ದು, ತಂದೆಯ ಪ್ರಭಾವದಿಂದಲೇ ಸಚಿವರಾಗಿದ್ದಾರೆ ಎಂದು ಟೀಕಿಸಿದರು. ಆರ್‌ಎಸ್‌ಎಸ್ ನಿಷೇಧ ಕುರಿತು ಅವರು ನೀಡಿರುವ ಹೇಳಿಕೆಗಳನ್ನು ಕೂಡ ಪ್ರಶ್ನಿಸಿದರು.

ರಾಜ್ಯ ಸರ್ಕಾರ ಹಿಂದುಳಿದವರು ಮತ್ತು ದಲಿತರ ಸಮಸ್ಯೆಗಳ ಕಡೆ ಗಮನ ಹರಿಸದೆ, ಒಂದೇ ಸಮುದಾಯಕ್ಕೆ ಆದ್ಯತೆ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಬಾಗಲಕೋಟೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ನಡೆದ ಕಲ್ಲು ತೂರಾಟ ಘಟನೆಗಳನ್ನು ಉಲ್ಲೇಖಿಸಿದ ಅವರು, ಸರ್ಕಾರದ ನೀತಿಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಹೇಳಿದರು.

ಇದೇ ವೇಳೆ, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಹಜ್ ಭವನ ಘೋಷಣೆ ಸೇರಿದಂತೆ ಸರ್ಕಾರದ ಕೆಲವು ನಿರ್ಧಾರಗಳನ್ನೂ ಟೀಕಿಸಿದರು. ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿಯಲ್ಲಿ ದೇಶ ಒಂದಾಗಿ ನಿಲ್ಲಬೇಕು. ಆದರೆ ಕಾಂಗ್ರೆಸ್ ಆರೋಪ ರಾಜಕಾರಣ ಮಾಡುತ್ತಿದೆ ಎಂದು ಈಶ್ವರಪ್ಪ ಹೇಳಿದರು.

ವಕ್ಫ್ ಆಸ್ತಿ ವಿಚಾರದಲ್ಲಿಯೂ ಅನಿಯಮಗಳ ಬಗ್ಗೆ ಆರೋಪಗಳು ಕೇಳಿಬಂದಿರುವುದನ್ನು ಉಲ್ಲೇಖಿಸಿದ ಅವರು, ಈ ಕುರಿತು ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ಹೇಳಿದರು.

ರಾಯಚೂರು ಜಿಲ್ಲೆಯಲ್ಲಿ ಹೊಸ ಕೆ.ಎಸ್.ಆರ್.ಪಿ ಪಡೆ ಸ್ಥಾಪನೆ ಬಗ್ಗೆ ಪರಿಶೀಲನೆ: ಸಚಿವ ಡಾ: ಜಿ.ಪರಮೇಶ್ವರ್

ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಹೊಸದಾಗಿ ಕೆ.ಎಸ್.ಆರ್.ಪಿ ಪಡೆಯನ್ನು ಸ್ಥಾಪಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಅಗತ್ಯತೆ ಆಧಾರದ ಮೇಲೆ ರಾಯಚೂರು ಜಿಲ್ಲೆಯಲ್ಲಿ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ: ಜಿ.ಪರಮೇಶ್ವರ್ ಅವರು ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದ ವೇಳೆ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ್ ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆ.ಎಸ್.ಆರ್.ಪಿ ಪಡೆ ಅಗತ್ಯವಿದ್ದು, 175 ಎಕರೆ ಜಾಗವನ್ನು ಹಾಗೂ ಕೆ.ಕೆ.ಆರ್.ಡಿ.ಬಿ ಯ ಅನುದಾನವನ್ನು ಸಹ ನೀಡಲಾಗುವುದು ಎಂದು ತಿಳಿಸಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಶಾಸಕರು ಗೃಹ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.

ಈ ಸಂಬಂಧ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸದನದಲ್ಲಿ ಕೋರಿದರು. ಈ ಸಮಯದಲ್ಲಿ ಉತ್ತರಿಸಿದ ಸಚಿವರು, ರಾಯಚೂರು ಭಾಗದ 30 ಶಾಸಕರು ಸಹಿ ಮಾಡಿ ರಾಯಚೂರು ಭಾಗಕ್ಕೆ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸುವಂತೆ ಮನವಿ ಸಲ್ಲಿಸಿರುತ್ತಾರೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 12 ಕೆ.ಎಸ್.ಆರ್.ಪಿ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಎಂದು ತಿಳಿಸಿದರು.

ರಾಯಚೂರು ಭಾಗದಲ್ಲಿ ವಿಶ್ವಪ್ರಸಿದ್ದ ಧಾರ್ಮಿಕ ಕ್ಷೇತ್ರಗಳು, ಅಣೆಕಟ್ಟುಗಳು, ಗಡಿಭಾಗಗಳು ಇರುವುದರಿಂದ ಈ ಕುರಿತು ಪರಿಶೀಲಿಸಿ, ಶಾಸಕರುಗಳ ಮನವಿಯನ್ನಾಧರಿಸಿ ಆರ್ಥಿಕ ಇಲಾಖೆಗೆ ಈಗಾಗಲೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಗತ್ಯತೆ ಅನುಸಾರ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕೆ.ಎಸ್.ಆರ್.ಪಿ ಪಡೆ ಸ್ಥಾಪನೆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಗೃಹಸಚಿವರು ತಿಳಿಸಿದರು.

error: Content is protected !!