Home Blog Page 61

ಬೆಂಡೆಕಾಯಿ ಜೊತೆ ಈ ಪದಾರ್ಥಗಳು ಹಾನಿಕರ ಎನ್ನುವುದು ಎಷ್ಟು ನಿಜ?

0

ಬೆಂಡೆಕಾಯಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ತರಕಾರಿ ಎಂಬುದು ಎಲ್ಲರಿಗೂ ತಿಳಿದ ವಿಚಾರ.

ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಉತ್ಕರ್ಷಣ ನಿರೋಧಕಾಂಶಗಳನ್ನು ಹೊಂದಿರುವ ಬೆಂಡೆಕಾಯಿ ಜೀರ್ಣಕ್ರಿಯೆ ಸುಧಾರಿಸುವುದಲ್ಲದೆ ದೇಹಕ್ಕೆ ಹಲವಾರು ರೀತಿಯಲ್ಲಿ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಇತ್ತೀಚೆಗೆ ಬೆಂಡೆಕಾಯಿಯನ್ನು ಆಲೂಗಡ್ಡೆ, ಬದನೆಕಾಯಿ, ಮೂಲಂಗಿ, ಹಾಗಲಕಾಯಿ, ಹಾಲು, ಮೊಸರು, ಚಹಾ ಹಾಗೂ ಕೆಂಪು ಮಾಂಸದ ಜೊತೆ ಸೇವಿಸಬಾರದು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಗಮನಿಸಿದರೆ, ಬೆಂಡೆಕಾಯಿಯನ್ನು ಮೇಲ್ಕಂಡ ತರಕಾರಿಗಳು ಅಥವಾ ಆಹಾರಗಳ ಜೊತೆ ಸೇವಿಸಿದರೆ ಎಲ್ಲರಿಗೂ ಕಡ್ಡಾಯವಾಗಿ ಆರೋಗ್ಯ ಹಾನಿ ಉಂಟಾಗುತ್ತದೆ ಎಂಬುದಕ್ಕೆ ಸ್ಪಷ್ಟವಾದ ವೈದ್ಯಕೀಯ ಸಾಕ್ಷ್ಯ ದೊರಕಿರುವುದಿಲ್ಲ. ಕೆಲವು ಮಂದಿಗೆ ವೈಯಕ್ತಿಕವಾಗಿ ಅಜೀರ್ಣ, ಗ್ಯಾಸ್, ಅಲರ್ಜಿ ಅಥವಾ ಆಹಾರ ಅಸಹನೆ ಇದ್ದಲ್ಲಿ ಕೆಲವು ಆಹಾರ ಸಂಯೋಜನೆಗಳಿಂದ ತೊಂದರೆ ಕಾಣಿಸಿಕೊಳ್ಳಬಹುದು. ಆದರೆ ಅದನ್ನೇ ಎಲ್ಲರಿಗೂ ಅನ್ವಯಿಸುವ ನಿಯಮ ಎಂದು ಹೇಳುವುದು ಸರಿಯಲ್ಲ ಎಂದು ತಜ್ಞರು ಸೂಚಿಸುತ್ತಾರೆ.

ವಿಶೇಷವಾಗಿ ಆಲೂಗಡ್ಡೆ ಮತ್ತು ಬೆಂಡೆಕಾಯಿ ಸೇರಿ ತಿಂದರೆ ರಕ್ತದಲ್ಲಿನ ಸಕ್ಕರೆಯ ಅಸಮತೋಲನ ಅಥವಾ ಬೊಜ್ಜು ಬರುತ್ತದೆ ಎನ್ನುವುದು ನಿಖರವಾದ ಮಾಹಿತಿ ಅಲ್ಲ. ಒಟ್ಟಾರೆ ಊಟದ ಪ್ರಮಾಣ, ಎಣ್ಣೆಯ ಬಳಕೆ, ಅಡುಗೆ ವಿಧಾನ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಯೇ ಇಲ್ಲಿ ಪ್ರಮುಖವಾಗುತ್ತದೆ. ಅದೇ ರೀತಿ ಬದನೆಕಾಯಿ, ಮೂಲಂಗಿ ಅಥವಾ ಹಾಗಲಕಾಯಿ ಜೊತೆ ಬೆಂಡೆಕಾಯಿ ತಿಂದರೆ ಚರ್ಮದ ಅಲರ್ಜಿ, ಆಮ್ಲೀಯತೆ ಅಥವಾ ಜೀರ್ಣ ಸಮಸ್ಯೆ ಉಂಟಾಗುತ್ತದೆ ಎಂಬ ಮಾತಿಗೂ ಸಮರ್ಪಕ ವೈದ್ಯಕೀಯ ದೃಢೀಕರಣ ಇಲ್ಲ.

ಆದ್ದರಿಂದ ಬೆಂಡೆಕಾಯಿ ಜೊತೆ ಯಾವ ಆಹಾರವನ್ನು ಸೇವಿಸಬಾರದು ಎಂಬುದಕ್ಕಿಂತ, ನಿಮ್ಮ ದೇಹದ ಸ್ವಭಾವಕ್ಕೆ ಯಾವುದು ಹೊಂದುವುದಿಲ್ಲ ಎಂಬುದನ್ನು ಗಮನಿಸುವುದು ಹೆಚ್ಚು ಮುಖ್ಯ. ಈಗಾಗಲೇ ಅಲರ್ಜಿ, ಅಜೀರ್ಣ ಅಥವಾ ಮಧುಮೇಹದಂತಹ ಸಮಸ್ಯೆ ಇರುವವರು ವೈದ್ಯರು ಅಥವಾ ಆಹಾರ ತಜ್ಞರ ಸಲಹೆ ಪಡೆದು ಆಹಾರ ಕ್ರಮ ಅನುಸರಿಸುವುದು ಉತ್ತಮ. ಒಟ್ಟಿನಲ್ಲಿ, ಬೆಂಡೆಕಾಯಿ ಜೊತೆ ಕೆಲವು ಆಹಾರಗಳನ್ನು ಸೇವಿಸಿದರೆ ಅಪಾಯ ಅನಿವಾರ್ಯ ಎಂಬ ಸುದ್ದಿ ಹೆಚ್ಚು ಅತಿರಂಜಿತವಾಗಿದ್ದು, ವೈಯಕ್ತಿಕ ಆರೋಗ್ಯ ಸ್ಥಿತಿಯೇ ಇಲ್ಲಿ ನಿರ್ಧಾರಕ ಅಂಶವಾಗಿರುತ್ತದೆ.

ಗ್ಯಾರಂಟಿಗಳಿಂದ ಮಹಿಳೆಯರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯ ಗೆಲುವಿನಲ್ಲಿ ಕಾಂಗ್ರೆಸ್ ಮಹಿಳಾ ಸದಸ್ಯರ ಪಾತ್ರ ಮಹತ್ವವಾದುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದರು. ಅವರು ಇಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕಾರಿ ಸಭೆ ಮತ್ತು ತರಬೇತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

2013 ರಿಂದ 2018 ಮತ್ತು 2023ರಿಂದ ಕಾಂಗ್ರೆಸ್ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದೆ. ಪ್ರಮುಖ ಗ್ಯಾರಂಟಿಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆಯಿಂದ ಇದುವರೆಗೆ ಮಹಿಳೆಯರು 700 ಕೋಟಿ ಪ್ರಯಾಣಗಳನ್ನು ಕೈಗೊಂಡಿದ್ದಾರೆ. ಮಹಿಳಾ ಕೇಂದ್ರಿತ ಯೋಜನೆಗಳಿಂದ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗಿದೆ.

ಸರ್ಕಾರದ ಗ್ಯಾರಂಟಿಗಳಿಂದ ಮಹಿಳೆಯರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 1.26 ಕೋಟಿ ಮಹಿಳೆಯರಿಗೆ ಮಾಸಿಕ 2000 ರೂಗಳನ್ನು ನೀಡಲಾಗುತ್ತಿದ್ದು, ಇದರಿಂದ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿ ಸುಧಾರಿಸಿದೆ. ಆರ್ಥಿಕ ಸ್ವಾತಂತ್ರ್ಯದಿಂದ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿ ಲಿಂಗತಾರತಮ್ಯ ಮತ್ತು ಅಸಮಾನತೆ ನಿವಾರಣೆಯಾಗದೇ ಸ್ವಾತಂತ್ರ್ಯ ಸಾರ್ಥಕತೆ ಹೊಂದುತ್ತದೆ ಎಂದರು.

ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ

ಮಹಿಳೆಯರಲ್ಲಿ ನಾಯಕತ್ವದ ಗುಣ ಬಹಳ ಪ್ರಮುಖವಾಗಿದೆ. ಎಲ್ಲರಿಗೂ ಸಮಾನ ಅವಕಾಶ ದೊರೆತರೆ ಸಮಾನತೆಯನ್ನು ಸಾಧಿಸುವುದು ಸುಲಭವಾಗಿದೆ. ಕರ್ನಾಟಕ ಪ್ರದೇಸ ಮಹಿಳಾ ಕಾಂಗ್ರೆಸ್ ನಲ್ಲಿ 1 ಲಕ್ಷಕ್ಕೂ ಹೆಚ್ಚು ಮಹಿಳಾ ಸದಸ್ಯರು ಇದ್ದು, ಭವಿಷ್ಯದಲ್ಲಿ ಈ ಸಂಖ್ಯೆ 2 ಲಕ್ಷಗಳಿಗೆ ವೃದ್ಧಿಸಬೇಕು. ಉಪಚುನಾವಣೆ ಸಮೀಸುತ್ತಿರುವುದರಿಂದ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹಿಳಾ ಸದಸ್ಯರ ಪಾತ್ರ ಮಹತ್ವದ್ದಾಗಿದೆ.

ಬಾಗಲಕೋಟೆ ಹಾಗೂ ದಾವಣಗೆರೆ ಉಪಚುನಾವಣೆಯಲ್ಲಿ ಮಹಿಳಾ ಸದಸ್ಯರ ಎರಡು ತಂಡಗಳನ್ನು ರಚಿಸಿ , ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸೂಚಿಸಿದರು. ಕಳೆದ ಬಾರಿ ಚೆನ್ನಪಟ್ಟಣ, ಶಿಗ್ಗಾಂವ , ಸಂಡೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತ್ತು. ಈ ಬಾರಿಯೂ ಎರಡೂ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕಿದ್ದು , ಇದಕ್ಕಾಗಿ ಅಗತ್ಯ ಸಿದ್ದತೆಗಳನ್ನು ಕಾಂಗ್ರೆಸ್ ಪಕ್ಷ ಮಾಡಿಕೊಂಡಿದೆ ಎಂದರು.

ಸಂಸತ್ ಕಲಾಪಕ್ಕೆ ಕಾಂಗ್ರೆಸ್ ಸೇರಿ ಪ್ರತಿಪಕ್ಷ ಸದಸ್ಯರ ಅಡ್ಡಿ: ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡ

0

ನವದೆಹಲಿ: ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳಿಂದ, ಅದರಲ್ಲಿಯೂ ಕಾಂಗ್ರೆಸ್ ಸದಸ್ಯರಿಂದ ಕಲಾಪಕ್ಕೆ ತೀವ್ರ ಅಡ್ಡಿ ಉಂಟಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೆಗೌಡರು; ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ವಿರೋಧ ಪಕ್ಷಗಳು ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಸದಸ್ಯರು ತೋರಿಸುತ್ತಿರುವ ಅತಿರೇಕದ ವರ್ತನೆ, ಅಶಿಸ್ತಿನ ನಡವಳಿಕೆ ಬಗ್ಗೆ ಮಾಜಿ ಪ್ರಧಾನಿಗಳು ತೀವ್ರ ಆತಂಕ, ಕಳವಳ ವ್ಯಕ್ತಪಡಿಸಿದ್ದಾರೆ.

ಬಜೆಟ್ ಅಧಿವೇಶನದ ವೇಳೆ ಪ್ರತಿಪಕ್ಷಗಳ ಸದಸ್ಯರು ನಿರಂತರವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದು, ಅದರಲ್ಲಿಯೂ ಕಾಂಗ್ರೆಸ್ ಸಂಸದರು ಸಂಸತ್ತಿನ ಒಳಗೆ ಹಾಗೂ ಸಂಸತ್ತಿನ ಆವರಣದಲ್ಲಿ ಘೋಷಣೆ ಕೂಗುವುದು, ಫಲಕ ಪ್ರದರ್ಶನ ಮಾಡುವುದು,

ನಿರ್ದಿಷ್ಟವಾಗಿ ಹೆಸರು ಕೂಗುವುದು, ಧರಣಿ ಮತ್ತು ಕಲಾಪ ಸ್ಥಗಿತ ಆಗುವಂತೆ ಮಾಡುವುದು ಮಾಡುತ್ತಿದ್ದಾರೆ. ಇದು ಸಂಸತ್ತಿನ ಘನತೆಯನ್ನು ಕುಗ್ಗಿಸುತ್ತಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಮಾಜಿ ಪ್ರಧಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನನ್ನ ರಾಜಕೀಯ ಜೀವನದ 90ರಷ್ಟು ಕಾಲವನ್ನು ಪ್ರತಿಪಕ್ಷದಲ್ಲಿಯೇ ಕಳೆದಿದ್ದೇನೆ:

ತಮ್ಮ 65 ವರ್ಷಗಳ ಸುದೀರ್ಘ ಸಾರ್ವಜನಿಕ ಜೀವನವನ್ನು ಪತ್ರದಲ್ಲಿ ಉಲ್ಲೇಖಿಸಿರುವ ಮಾಜಿ ಪ್ರಧಾನಿಗಳು; ನನ್ನ ರಾಜಕೀಯ ಜೀವನದ ತೊಂಬತ್ತರಷ್ಟು ದೀರ್ಘಾವಧಿಯ ಕಾಲವನ್ನು ಪ್ರತಿಪಕ್ಷದಲ್ಲಿಯೇ ಕಳೆದಿದ್ದೇನೆ. ನೀವು ಕೂಡ ಹೆಚ್ಚು ಕಾಲ ವಿರೋಧ ಪಕ್ಷದಲ್ಲಿಯೇ ಇದ್ದೀರಿ. ಪ್ರತಿಪಕ್ಷದ ಹೊಣೆಗಾರಿಕೆ ಹಾಗೂ ಜವಾಬ್ದಾರಿಗಳ ಬಗ್ಗೆ ತಮಗೆ ಅರಿವಿದೆ.

ವಿರೋಧ ಪಕ್ಷಗಳು ತಮ್ಮ ವಿರೋಧವನ್ನು ತೋರಿಸಬಹುದು, ಆದರೆ ಅದು ನಿಯಮಗಳು, ಸಂಪ್ರದಾಯಗಳು ಮತ್ತು ಘನತೆಗೆ ಧಕ್ಕೆ ತರುವಂತಿರಬಾರದು. ಆದರೆ, ಪ್ರಸಕ್ತ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರ ವರ್ತನೆ ನನಗೆ ಬಹಳ ನೋವುಂಟು ಮಾಡಿದೆ. ಪ್ರತಿಪಕ್ಷದಲ್ಲಿ ಇದ್ದರೂ ಸಂಸತ್ತಿನ ಘನತೆ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ಶ್ರಮಿಸಿದ್ದೇನೆ ಎಂದು ಮಾಜಿ ಪ್ರಧಾನಿಗಳು ಪತ್ರದ ಮೂಲಕ ಬೇಸರ ಹೇಳಿದ್ದಾರೆ.

ಪ್ರತಿಪಕ್ಷ ಸದಸ್ಯರು, ಅದರಲ್ಲಿಯೂ ತಮ್ಮ ಪಕ್ಷದ ಸದಸ್ಯರು ತಮ್ಮ ವರ್ತನೆಯನ್ನು ಸರಿಪಡಿಸಿಕೊಂಡು ಸಂಸದೀಯ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯುತ್ತಾರೆ ಎಂದು ನಿರೀಕ್ಷಿಸಿದ್ದೇ. ಅದು ಆಗಲಿಲ್ಲ. ನಿಮ್ಮ ಸದಸ್ಯರು ಸಂಸತ್ತಿನ ಆವರಣದಲ್ಲಿ ಮತ್ತು ಸಂಸತ್ತಿನ ಒಳಗೆ ಪ್ರಚೋದನಾತ್ಮಕ ರೀತಿಯಲ್ಲಿ ವರ್ತಿಸಿ, ಸಂಸತ್ತಿನ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಹೀಗಾಗಿ ತಮಗೆ ಪತ್ರ ಬರೆಯುವ ಸನ್ನಿವೇಶ ಸೃಷ್ಟಿಯಾಯಿತು ಎಂದು ಮಾಜಿ ಪ್ರಧಾನಿಗಳು ತಿಳಿಸಿದ್ದಾರೆ.

ಭಾರತೀಯ ಸಂಸದೀಯ ಪ್ರಜಾಪ್ರಭುತ್ವದ ಪರಂಪರೆಯ ಬಗ್ಗೆ ಪತ್ರದಲ್ಲಿ ದೇವೇಗೌಡರು ಒತ್ತಿ ಹೇಳಿದ್ದು; ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ.ಆರ್. ಅಂಬೇಡ್ಕರ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಮುಂತಾದವರು ಹಾಕಿಕೊಟ್ಟ ಬುನಾದಿ ಹಾಗೂ ಅವರ ಮಾರ್ಗದರ್ಶನದ ಮೇಲೆ ಪರಂಪರೆಯೂ ನಿರ್ಮಿತವಾಗಿದೆ. ನನ್ನ ಸುಂದೀರ್ಘ ಸಂಸದೀಯ ಅನುಭವದಲ್ಲಿ ಇತ್ತೀಚೆಗೆ ಕಂಡಂತಹ ಅವ್ಯವಸ್ಥೆ ಮತ್ತು ಅಡಚಣೆಯನ್ನು ನಾನು ಎಂದಿಗೂ ನೋಡಿಲ್ಲ.

ನನ್ನ ಇಡೀ ರಾಜಕೀಯ ಜೀವನದಲ್ಲಿ ಸಂಸತ್ತಿನ ಪ್ರಚೋದನ್ಮಕವಾಗಿ ವರ್ತಿಸುವುದು, ಪ್ರತಿಭಟಿಸುವುದು, ಸದನದ ಬಾವಿಗೆ ಇಳಿದು ಕೂಗುವುದನ್ನು ಮಾಡಿಲ್ಲ. ಉತ್ತಮ ಸಂಸದೀಯ ಸಂಸ್ಕೃತಿಯನ್ನು ನಮ್ಮ ಪ್ರಜಾಪ್ರಭುತ್ವದ ಹಿರಿಯರು ನಮಗೆ ಕಲಿಸಿದ್ದಾರೆ ಎಂದು ದೇವೇಗೌಡರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ವಿರೋಧ ಪಕ್ಷದ ನಾಯಕನ ಕರ್ತವ್ಯ ಸುಲಭವಲ್ಲ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅವರ ಎದುರು ಬೆಟ್ಟದಷ್ಟು ಸವಾಲುಗಳು ಇರುತ್ತವೆ. ಜನರ ಸಂಕಷ್ಟಗಳ ಬಗ್ಗೆ ಕಾಲ ಕಾಲಕ್ಕೆ ಸರಕಾರದ ಗಮನಕ್ಕೆ ತರಬೇಕಾಗುತ್ತದೆ.

ಹಾಗಿದ್ದರೂ ಪ್ರತಿಭಟನೆ ಮಾಡುವ ಸಂದರ್ಭ ಬಂದರೆ ಅದಕ್ಕೆ ತನ್ನದೇ ಆದ ರೀತಿನೀತಿ ಇರುತ್ತದೆ. ಅಂತಹ ಸಂದರ್ಭದಲ್ಲಿ ಪೀಠಕ್ಕೆ ಅಗೌರವ ತೋರುವ, ಅಪಚಾರ ಎಸಗುವ ಕೆಲಸ ಆಗಬಾರದು. ಸಂಸದೀಯ ನಿಯಮ, ಕಟ್ಟುಪಾಡುಗಳನ್ನು ಮೀರದೆ ಕಾರ್ಯ ನಿರ್ವಹಣೆ ಮಾಡುವುದರಲ್ಲಿ ವಿರೋಧ ಪಕ್ಷ ನಾಯಕನ ಯಶಸ್ಸು ಅಡಗಿದೆ ಎಂದು ನಾನು ನಂಬಿದ್ದೇನೆ.

ನಾವು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನಾವು ಸಂಸತ್ತಿನ ನಿಯಮಗಳು ಮತ್ತು ಸ್ಥಾಪಿತ ಕಾರ್ಯ ವಿಧಾನಗಳಿಗೆ ಬದ್ಧರಾಗಿರುತ್ತೇವೆ ಎಂದು ಹೇಳುತ್ತೇವೆ. ಅದಕ್ಕೆ ಎಲ್ಲರೂ ಬದ್ಧರಾಗಿ ವರ್ತಿಸಬೇಕು ಎಂದು ನಾನು ನಿಮ್ಮ ಗಮನಕ್ಕೆ ತರಲಿಸುತ್ತೇನೆ ಎಂದು ದೇವೇಗೌಡರು ಸೋನಿಯಾ ಗಾಂಧಿ ಅವರಿಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂಸತ್ತಿನ ಮೆಟ್ಟಿಲುಗಳ ಮೇಲೆ ಚಹಾ ಸೇವನೆ ಮಾಡುವುದು ಸರಿಯಾದ ನಡವಳಿಕೆ ಅಲ್ಲ. ಈ ಹಿಂದೆ ವಿರೋಧ ಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಗೌರವಿಸಿ, ಸಂಯಮದಿಂದ ವರ್ತಿಸಿದ್ದವು. ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ, ಬಿಸ್ಕತ್ತು, ಪಕೋಡಾ ತಿನ್ನುವುದು ಅತಿರೇಖದ ಕ್ರಮಗಳು. ಇವು ಅನುಚಿತ ಎಂದು ಗೌಡರು ಟೀಕಿಸಿದ್ದಾರೆ.

ನಾನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸರ್ಕಾರವನ್ನು ಮುನ್ನೆಡೆಸಿದ್ದೇನೆ. ಆ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸಂಸದೀಯ ಸದಾಚಾರ ಹಾಗೂ ಮೌಲ್ಯಗಳನ್ನು ಮೀರಿ ನಡೆದಿಲ್ಲ. ಅಂದಿನ ಸದಸ್ಯರು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ಸಂಯಮದಿಂದ ಕಾರ್ಯನಿರ್ವಹಿಸಿದ್ದಾರೆ.

ಅವರು ಪ್ರತಿಭಟಿಸಿದಾಗಲೂ ಅವರು ಎಂದೂ ಸಂಸತ್ತಿನ ಪ್ರವೇಶ ದ್ವಾರವನ್ನು ನಿರ್ಬಂಧಿಸಲಿಲ್ಲ. ಇವತ್ತು ಅದಕ್ಕೆ ವಿರುದ್ಧವಾದ ಸನ್ನಿವೇಶ ಸೃಷ್ಟಿಯಾಗಿದೆ. ಇದು ಸಂಸದೀಯ ಹೆಗ್ಗಳಿಕೆಗೆ ಅಪಾರ ಹಾನಿ ಉಂಟು ಮಾಡುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ನನ್ನ ಕಾಳಜಿ ಮತ್ತು ನನ್ನ ಉದ್ದೇಶವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ ಎಂದು ನನಗೆ ನಂಬಿಕೆಯಿದೆ. ನಾನು ಯಾರನ್ನೂ ಲಘುವಾಗಿ ನೋಡುವ ಅಥವಾ ಯಾರ ಉತ್ಸಾಹವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿಲ್ಲ. ಆದರೆ, ವಿರೋಧ ಪಕ್ಷದ ಹಿರಿಯ ಸ್ಥಾನದಲ್ಲಿರುವ ನೀವು, ನಿಮ್ಮ ರಾಜಕೀಯ ಅನುಭವ ಮತ್ತು ಪ್ರಬುದ್ಧತೆಯನ್ನು ಬಳಸಿಕೊಂಡು ನಿಮ್ಮ ಪಕ್ಷದ ನಾಯಕರು ಮತ್ತು ಇತರರೊಂದಿಗೆ ಮಾತನಾಡಿ ಸರಿಪಡಿಸಬೇಕು ಒತ್ತಾಯಿಸುತ್ತೇನೆ ಎಂದು ದೇವೇಗೌಡರು ಸೋನಿಯಾ ಗಾಂಧಿ ಅವರನ್ನು ಆಗ್ರಹಿಸಿದ್ದಾರೆ.

ಪ್ರತಿಭಟನೆಯನ್ನು ನಾನು ವಿರೋಧಿಸುವುದಿಲ್ಲ. ವಿರೋಧ ಪಕ್ಷವು ಎಷ್ಟು ಬೇಕಾದರೂ ಪ್ರತಿಭಟಿಸಬಹುದು. ಆದರೆ ಆ ಪ್ರತಿಭಟನೆಯು 75 ವರ್ಷಗಳ ವೈಭವಯುತ ವರ್ಷಗಳಲ್ಲಿ ನಾವು ಒಟ್ಟಾಗಿ ನಿರ್ಮಿಸಿಕೊಂಡಿದ್ದನ್ನು ಕೆಡವುವ ರೀತಿಯಲ್ಲಿ ಇರಬಾರದು ಎಂದು ಮಾಜಿ ಪ್ರಧಾನಿಗಳು ಪ್ರತಿಪಾದಿಸಿದ್ದಾರೆ.

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಉಚಿತ ಬಸ್ ಪ್ರಯಾಣ ಸೌಲಭ್ಯ ಘೋಷಿಸಿದೆ. ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಹಾಲ್‌ ಟಿಕೆಟ್‌ ತೋರಿಸಿ ನಿವಾಸದಿಂದ ಪರೀಕ್ಷಾ ಕೇಂದ್ರದವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಸಂಸ್ಥೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರ್ಚ್‌ 18ರಿಂದ ಏಪ್ರಿಲ್‌ 2ರವರೆಗೆ 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣಿಸುವಾಗ ಕಂಡೆಕ್ಟರ್‌ಗೆ ಹಾಲ್‌ ಟಿಕೆಟ್‌ ತೋರಿಸಿದರೆ ಮಾತ್ರ ಉಚಿತ ಪ್ರಯಾಣ ಸೌಲಭ್ಯ ಲಭ್ಯವಾಗಲಿದೆ ಎಂದು ಸೂಚಿಸಲಾಗಿದೆ.

ಇನ್ನೊಂದೆಡೆ, ಪರೀಕ್ಷೆಗಳನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಿದ್ದಾರೆ.

ಪರೀಕ್ಷಾ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಜೆರಾಕ್ಸ್, ಸೈಬರ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ದೋಷರಹಿತವಾಗಿ ನಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್: ರಾಯಚೂರಿನ ರೈಸ್ ಮಿಲ್ ಉದ್ಯಮಕ್ಕೆ ₹200 ಕೋಟಿ ಹೊಡೆತ!

ರಾಯಚೂರು: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ರಾಯಚೂರಿನ ರೈಸ್ ಮಿಲ್ ಉದ್ಯಮ ಗಂಭೀರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ರಫ್ತು ವ್ಯವಹಾರ ಸ್ಥಗಿತಗೊಂಡಿರುವುದರಿಂದ ಅಕ್ಕಿ ಉತ್ಪಾದನೆ ಶೇ.50ರಷ್ಟು ಕಡಿಮೆಯಾಗಿದ್ದು, ಪ್ರತಿ ತಿಂಗಳು ನಡೆಯುತ್ತಿದ್ದ ಸುಮಾರು 200 ಕೋಟಿ ರೂಪಾಯಿ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ರಾಯಚೂರು ನಗರದಲ್ಲೇ ಸುಮಾರು 95 ರೈಸ್ ಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಂದ ಅರಬ್ ರಾಷ್ಟ್ರಗಳು, ಆಫ್ರಿಕಾ ದೇಶಗಳು, ಬಾಂಗ್ಲಾದೇಶ, ದುಬೈ ಮತ್ತು ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೆ ಅಕ್ಕಿ ರಫ್ತು ಮಾಡಲಾಗುತ್ತಿತ್ತು. ಆದರೆ ಯುದ್ಧ ಪರಿಸ್ಥಿತಿಯಿಂದ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಸೋನಾಮಸೂರಿ, ಬಾಸುಮತಿ ಹಾಗೂ ಆರ್‌ಎನ್‌ಆರ್‌ ಸೇರಿದಂತೆ ವಿವಿಧ ತಳಿಗಳ ಅಕ್ಕಿ ಗೋದಾಮುಗಳಲ್ಲಿ ದಾಸ್ತಾನು ಆಗಿ ಉಳಿದಿದೆ. ಇದರಿಂದಾಗಿ ಭತ್ತದ ಸಂಸ್ಕರಣೆ ಕೂಡ ಶೇ.50ರಷ್ಟು ಮಾತ್ರ ನಡೆಯುತ್ತಿದ್ದು, ದೇಶೀಯ ಮಾರುಕಟ್ಟೆಗೆ ಮಾತ್ರ ಅಕ್ಕಿ ಪೂರೈಕೆ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಪ್ರತಿ ತಿಂಗಳು ರಾಯಚೂರಿನಿಂದ 15 ರೈಲು ರೇಕ್ಗಳಲ್ಲಿ ಸುಮಾರು 37,500 ಟನ್ ಅಕ್ಕಿ ರಫ್ತು ಆಗುತ್ತಿತ್ತು. ಆದರೆ ಯುದ್ಧ ಆರಂಭವಾದ ನಂತರ ಒಂದೇ ಒಂದು ರೇಕ್ಗೂ ಅಕ್ಕಿ ಸಾಗಾಟವಾಗಿಲ್ಲ ಎಂದು ರೈಸ್ ಮಿಲ್ ಮಾಲೀಕರು ಹೇಳಿದ್ದಾರೆ.

ಈ ಪರಿಸ್ಥಿತಿ ಮುಂದುವರಿದರೆ ಭತ್ತ ಖರೀದಿ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇದ್ದು, ರೈತರಿಗೂ ಸಂಕಷ್ಟ ಎದುರಾಗುವ ಆತಂಕ ವ್ಯಕ್ತವಾಗಿದೆ.

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ಮನೆ ಬಾಗಿಲಿಗೆ ಬರುತ್ತದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ಮನೆ ಬಾಗಿಲಿಗೆ ಬರಲಿದೆ. ಇದಕ್ಕೆ ನಾನೇ ಉತ್ತಮ ಉದಾಹರಣೆ, ಮಹಿಳೆಯರು ಗುರಿ ಇಟ್ಟುಕೊಂಡು ರಾಜಕಾರಣಕ್ಕೆ ಬರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ ನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಸಬಲೀಕರಣ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ನಡೆಯುತ್ತಿರುವ ಮಹಿಳಾ ಸಬಲೀಕರಣ ಕಾರ್ಯಗಾರದಲ್ಲಿ ಮಾತನಾಡಿದ ಸಚಿವರು, ಬೂತ್‌ಮಟ್ಟದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಬಿಜೆಪಿಯಲ್ಲಿ ಆರ್.ಎಸ್.ಎಸ್ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದೆ, ಅದೇ ರೀತಿ ಮಹಿಳಾ ಕಾಂಗ್ರೆಸ್ ಘಟಕ ಕೂಡ ಪಕ್ಷದಲ್ಲಿ ಕೆಲಸ ಮಾಡುತ್ತಿದೆ. ಉತ್ತಮ ಕೆಲಸ ಮಾಡಿದರೆ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಮುಂಬರುವ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಎಲ್ಲಾ ವರ್ಗದವರನ್ನು ಗುರುತಿಸಿ ಟಿಕೆಟ್ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಸಂಘಟನೆಯಲ್ಲಿ ಒತ್ತು ನೀಡುವವರನ್ನು, ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ದರಾಗಿರುವವರನ್ನು ಗುರುತಿಸಬೇಕು. ನಿಮ್ಮ ಅಕ್ಕಪಕ್ಕದ ಮನೆಯವರ ಮನಸ್ಸನ್ನು ಗೆದ್ದು, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಮಾಡಬೇಕು. ನಿಸ್ವಾರ್ಥದಿಂದ ಪಕ್ಷದಲ್ಲಿ ಕೆಲಸ ಮಾಡಬೇಕು ಎಂದರು.

ಈ ವೇಳೆ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌, ರಾಷ್ಟ್ರೀಯ ‌ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಕಾ ಲಾಂಬಾ, ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ, ಮಹಿಳಾ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ಸೋಫಿಯಾ ಜುಬೇರಾ, ಪ್ರಧಾನ ಕಾರ್ಯದರ್ಶಿ ಸೆವಾ ಸೆಲ್ವಾನ್, ಶಾಸಕರಾದ ಮಂಥರ್ ಗೌಡ, ನಯನ ಮೋಟಮ್ಮ, ಮಾಜಿ ಸಚಿವರಾದ ರಾಣಿ ಸತೀಶ್ ‌ಸೇರಿದಂತೆ ಮಹಿಳಾ ಕಾಂಗ್ರೆಸ್ ವಿಭಾಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೈಸ್ ರಸ್ತೆಯಲ್ಲಿ ದಿನಕ್ಕೆ 10 ಕೋಟಿ ಟೋಲ್ ಸಂಗ್ರಹ: ಸೌಕರ್ಯ ಇಲ್ಲ: ಶಾಸಕ ಸೋಮಶೇಖರ್ ಆಕ್ರೋಶ

ಬೆಂಗಳೂರು: ನೈಸ್ ರಸ್ತೆಯ ನಿರ್ವಹಣೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಬಜೆಟ್ ಅಧಿವೇಶನದಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಹೊಸೂರು ರಸ್ತೆಯಿಂದ ಮಾಗಡಿ ರಸ್ತೆಯವರೆಗೆ ಇರುವ ನೈಸ್ ರಸ್ತೆಯನ್ನು ಸರ್ಕಾರ ತಕ್ಷಣ ವಶಕ್ಕೆ ಪಡೆಯಬೇಕು ಎಂದು ಸದನದಲ್ಲಿ ಆಗ್ರಹಿಸಿದರು.

ಈ ಹಿಂದೆ ಇದೇ ವಿಷಯವನ್ನು ಪ್ರಸ್ತಾಪಿಸಿದಾಗ ತನಿಖೆಗೆ ಆದೇಶ ನೀಡಲಾಗಿದ್ದರೂ, ನೈಸ್ ರಸ್ತೆಯ ಸೇತುವೆಗಳ ದುಸ್ಥಿತಿಗೆ ಸಂಬಂಧಿಸಿ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 30 ರಿಂದ 35 ವರ್ಷಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಭೂಮಿ ನೀಡಿದ ಭೂಮಾಲೀಕರಿಗೆ ಇನ್ನೂ ಪರಿಹಾರವಾಗಿ ನಿವೇಶನಗಳನ್ನು ನೀಡಿಲ್ಲ. ನೈಸ್ ಕಂಪನಿಯ ನಿರ್ವಹಣೆ ಹಾಗೂ ವರ್ತನೆ ಸರಿಯಿಲ್ಲ ಎಂಬುದನ್ನು ಗಮನಕ್ಕೆ ತರಲು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು.

ನೈಸ್ ರಸ್ತೆಯಲ್ಲಿ ಪ್ರತಿದಿನ ಸುಮಾರು 10 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗುತ್ತಿದೆ. ಇಷ್ಟು ಆದಾಯವಿದ್ದರೂ ರಸ್ತೆ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ವಿಶೇಷವಾಗಿ 25 ರಿಂದ 30 ವರ್ಷಗಳ ಹಿಂದೆ ನಿರ್ಮಿಸಲಾದ ಕೆಲವು ಸೇತುವೆಗಳು ದುಸ್ಥಿತಿಯಲ್ಲಿ ಇದ್ದು, ಸ್ಕೂಟರ್ ಸಂಚಾರಕ್ಕೂ ಯೋಗ್ಯವಾಗಿಲ್ಲ ಎಂದು ಆರೋಪಿಸಿದರು.

ದಲಿತ ಸಂಘಟನೆಗಳು, ಹಿಂದೂ-ಇಸ್ಲಾಂ ಸಮುದಾಯದವರು ಮುಷ್ತಾಕ್ʼರಿಗೆ ಛೀಮಾರಿ ಹಾಕಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಶ್ರೀಮತಿ ಬಾನು ಮುಷ್ತಾಕ್ ಅವರ ವಿರುದ್ಧ ಸರಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಇಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಶ್ರೀಮತಿ ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಫೋಟೊಗೆ ಪುಷ್ಪಾರ್ಚನೆ ಮಾಡಿದ್ದನ್ನು ನಾನು ಖಂಡತುಂಡವಾಗಿ ಖಂಡಿಸುತ್ತೇನೆ ಎಂದರು. ಸರಕಾರ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನನ್ನ ಪ್ರಕಾರ ಬಾನು ಮುಷ್ತಾಕ್ ಅವರು ಅಲ್ಲಾಹರನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರಿಗೂ ಅಪಮಾನ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.

ಬಾನು ಮುಷ್ತಾಕ್ ಅವರು ಯಾರು ಅಂಬೇಡ್ಕರ್ ಅವರನ್ನು ದೇವರೆಂದು ನಂಬಿದ್ದಾರೋ ಅವರಿಗೆ ಅಪಮಾನ ಮಾಡಿದ್ದಾರೆ. ಹಿಂದೂಗಳಿಗೆ ಮತ್ತು ಮುಸಲ್ಮಾನರಿಗೆ ಅಪಮಾನ ಮಾಡಿದ ಅವರ ದುರಹಂಕಾರಕ್ಕೆ ನನ್ನ ಧಿಕ್ಕಾರವಿದೆ ಎಂದು ತಿಳಿಸಿದರು. ನಾವು ಅವರನ್ನು ದಸರಾ ಉದ್ಘಾಟನೆಗೆ ಕರೆದಾಗ ಹಲವರು ವಿರೋಧ ಮಾಡಿದ್ದರು. ಅವರು ಕನ್ನಡದ ವಿರೋಧಿ ಎಂದು ವಿರೋಧಿಸಿದ್ದರು. ಅಂಥ ಸಮಯದಲ್ಲಿ ರಾಜ್ಯದಲ್ಲಿರುವ ಅನೇಕ ದಲಿತ ಸಂಘಟನೆಗಳು, ದಲಿತ ಹೋರಾಟಗಾರರು ಅವರಿಗೆ ಸಹಕಾರಕ್ಕೆ ನಿಂತಿದ್ದರು. ಈಗ ಆ ದಲಿತ ಸಂಘಟನೆಗಳ ಮುಖಂಡರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇವರೆಂದು ನಂಬಿರುವ ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಈ ರೀತಿ ಅಪಮಾನ ಮಾಡಿದ್ದರಿಂದ ಇನ್ನು ಮುಂದೆ ಇಡೀ ರಾಜ್ಯದಲ್ಲಿ ದಲಿತ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು, ಬಾನು ಮುಷ್ತಾಕ್ ಅವರಿಗೆ ಅವರ ಮನೆದೇವರಿಂದಲೇ ಅವರ ಪೂಜೆ ಮಾಡಬೇಕು; ಅವರಿಗೆ ಚಪ್ಪಲಿಯಿಂದಲೇ ಪೂಜೆ ಮಾಡಬೇಕು. ಅದವರ ಮನೆದೇವರಾದ ಕಾರಣ ಅದನ್ನು ಅವರು ವಿರೋಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಅವರು ಎಲ್ಲಿಗೇ ಬಂದರೂ ದಲಿತ ಸಂಘಟನೆಗಳು, ಹಿಂದೂಗಳು, ಇಸ್ಲಾಂ ಸಮುದಾಯದವರು ಅವರಿಗೆ ಛೀಮಾರಿ ಹಾಕಬೇಕು ಎಂದು ವಿನಂತಿಸಿದರು.

ಇಸ್ಲಾಮಿನ ಅಥವಾ ಮುಸಲ್ಮಾನರ ದೇವರು ಅಲ್ಲಾಹ ಎಂಬುದು ಈ ಪ್ರಪಂಚಕ್ಕೆ ಗೊತ್ತಿರುವ ವಿಚಾರ. ಆ ಕಾರಣಕ್ಕೆ ಇಸ್ಲಾಂ ಬಂಧುಗಳು ಅಲ್ಲಾಹನನ್ನು ಪ್ರಾರ್ಥಿಸುವವರು, ಅದಕ್ಕೆ ನಾವು ಕೂಡ ಅದನ್ನು ಗೌರವಿಸುತ್ತೇವೆ ಎಂದು ತಿಳಿಸಿದರು. ಆದರೆ, ಬಾನು ಮುಷ್ತಾಕ್ ಅವರು ಚಪ್ಪಲಿ ನನ್ನ ಮನೆದೇವರು; ಆದ್ದರಿಂದ ನಾನು ಚಪ್ಪಲಿ ಧರಿಸಿಯೇ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ಮಾಡಿದ್ದೇನೆ ಎಂದು ಹೇಳಿ ಅವರ ನಡೆಯನ್ನು ಮತ್ತೊಮ್ಮೆ ಉದ್ಧಟತನದಿಂದ ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ಅವರು ಕ್ಷಮೆಗೆ ಅರ್ಹರಲ್ಲ ಎಂದರು.

ಚಪ್ಪಲಿ ಹೊಲಿಯುವವರು ಮುಸಲ್ಮಾನ ಸಮುದಾಯದವರಲ್ಲ; ಅದು ಪರಿಶಿಷ್ಟ ಜಾತಿಯವರು ಹೊಲಿಯುವುದು; ನಮ್ಮ ಸಮುದಾಯ ಚಪ್ಪಲಿ ಹೊಲಿಯುತ್ತದೆ. ಆದರೆ, ನೀವು ಆ ಜಾತಿಗೆ ಸೇರಿದವರೇ? ಎಂದು ಕೇಳಿದರು.

ಒಂದು ಸಮಯ ನೀವು ಇವತ್ತು ಅಲ್ಲಾಹರನ್ನು ಅವರು ದೇವರು ಎಂದು ಪೂಜಿಸುವವರಿಗೆ ನಮ್ಮ ಮನೆದೇವರು ಚಪ್ಪಲಿ ಎಂದ ಮೇಲೆ ನೀವು ಯಾರನ್ನು ಯಾರಿಗೆ ಹೋಲಿಸಿದ್ದೀರಿ? ಎಂದು ಪ್ರಶ್ನಿಸಿದರು. ಒಂದು ವೇಳೆ ಹಾಗೇನಾದರೂ ಇದ್ದರೆ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಧರಿಸಿದ ಚಪ್ಪಲಿ ಅಥವಾ ಶೂ ನಿಮ್ಮ ಮನೆದೇವರಾಗಿರಬಹುದೇ ಬಾನು ಮುಷ್ತಾಕ್ ಅವರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಕೇಂದ್ರದ ಸುತ್ತೋಲೆಯಿಂದ ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜುಗಳು ಮುಚ್ಚುವ ಆತಂಕ: ಸಚಿವ ಶರಣಪ್ರಕಾಶ್ ಪಾಟೀಲ್

ಬೆಂಗಳೂರು: ರಾಷ್ಟ್ರೀಯ ಅಲೈಡ್ ಹಾಗೂ ಹೆಲ್ತ್ ಕೇರ್ ಪ್ರೊಫೆಶನ್ಸ್ ಆಯೋಗ (ಎನ್‌ಸಿಎಹೆಚ್‌ಪಿ) ಹೊರಡಿಸಿರುವ ಹೊಸ ಸುತ್ತೋಲೆಯಿಂದ ರಾಜ್ಯದಲ್ಲಿ ಪ್ಯಾರಾ ಮೆಡಿಕಲ್ ಕಾಲೇಜುಗಳು ಮುಚ್ಚುವ ಆತಂಕ ಎದುರಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್‌ನ ಶೂನ್ಯ ವೇಳೆಯಲ್ಲಿ ಸದಸ್ಯ ಐವನ್ ಡಿಸೋಜಾ ಈ ವಿಷಯ ಪ್ರಸ್ತಾಪಿಸಿದರು. ಪ್ಯಾರಾ ಮೆಡಿಕಲ್ ಕೋರ್ಸ್ ಸೇರಲು ಬಯಸುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದುವರೆಗೆ ಎಸ್‌ಎಸ್‌ಎಲ್‌ಸಿ ನಂತರ ವೈದ್ಯಕೀಯ ಕ್ಷೇತ್ರದ ತರಬೇತಿ ಪಡೆಯಲು ಅವಕಾಶವಿತ್ತು.

ಆದರೆ ಇನ್ನುಮುಂದೆ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದವರಿಗೆ ಮಾತ್ರ ಪ್ರವೇಶ ನೀಡುವಂತೆ ನಿಯಮ ರೂಪಿಸಿರುವುದು ಹೊಸ ಶೈಕ್ಷಣಿಕ ಸಮಸ್ಯೆಗೆ ಕಾರಣವಾಗಲಿದೆ ಎಂದು ಅವರು ಹೇಳಿದರು.

ಎನ್‌ಸಿಎಹೆಚ್‌ಪಿ ಆಯೋಗವು ಜನವರಿ 2ರಂದು ಯುಜಿಸಿಗೆ ಪತ್ರ ಬರೆದು, ದೇಶಾದ್ಯಂತ ಪ್ಯಾರಾ ಮೆಡಿಕಲ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ ಎಂದು ತಿಳಿಸಿದೆ. ಈ ನಿಯಮವನ್ನು 2026-27ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ತರಲು ಸೂಚಿಸಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ 32 ಸರ್ಕಾರಿ ಹಾಗೂ 608 ಖಾಸಗಿ ಸೇರಿ ಒಟ್ಟು 640 ಪ್ಯಾರಾ ಮೆಡಿಕಲ್ ಶಿಕ್ಷಣ ಸಂಸ್ಥೆಗಳಿವೆ. ಹೊಸ ನಿಯಮ ಜಾರಿಯಾದರೆ 450 ರಿಂದ 500 ಕಾಲೇಜುಗಳಿಗೆ ಅರ್ಹ ಅಭ್ಯರ್ಥಿಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಐವನ್ ಡಿಸೋಜಾ ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಶರಣ್ ಪ್ರಕಾಶ್ ಪಾಟೀಲ್, ಎನ್‌ಸಿಎಹೆಚ್‌ಪಿ ಸುತ್ತೋಲೆಯಿಂದ ರಾಜ್ಯದ ಪ್ಯಾರಾ ಮೆಡಿಕಲ್ ಕಾಲೇಜುಗಳಿಗೆ ಸಮಸ್ಯೆ ಉಂಟಾಗುವ ಭೀತಿ ಇದೆ ಎಂದು ಹೇಳಿದರು. ಈಗಾಗಲೇ ಈ ನಿಯಮದ ಬಗ್ಗೆ ಆಯೋಗದ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಲಾಗಿದೆ. ನಿಯಮದಲ್ಲಿ ಸರಳೀಕರಣ ಮಾಡುವ ಕುರಿತು ಸಭೆ ಕರೆದು ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಹೋಟೆಲ್ ಉದ್ಯಮಕ್ಕೆ ಮತ್ತೊಂದು ಶಾಕ್: ಸದ್ಯಕ್ಕೆ ಹೋಟೆಲ್ʼಗಳಿಗೆ ಗ್ಯಾಸ್ ಪೂರೈಕೆ ಇಲ್ಲ – ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮದಿಂದ ತತ್ತರಿಸಿರುವ ಹೋಟೆಲ್ ಉದ್ಯಮಕ್ಕೆ ಕರ್ನಾಟಕ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಸದ್ಯಕ್ಕೆ ಹೋಟೆಲ್‌ಗಳಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ತೈಲ ಪೂರೈಕೆ ಕಂಪನಿಗಳೊಂದಿಗೆ ಇಂದು ನಡೆದ ಮಹತ್ವದ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಎರಡನೇ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಬರೆಯುತ್ತಿದ್ದಾರೆ ಎಂದು ಹೇಳಿದರು. ಪರಿಸ್ಥಿತಿ ಗಂಭೀರವಾಗಿದ್ದು, ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಸೆಕ್ರೆಟರಿ, ಕಮಿಷನರ್ ಹಾಗೂ ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಸುಮಾರು ಒಂದು ಗಂಟೆ ಕಾಲ ಸಭೆ ನಡೆಯಿತು. ಗ್ರಾಹಕರು ಅನಾವಶ್ಯಕ ಆತಂಕಕ್ಕೆ ಒಳಗಾಗಬಾರದು. ಗ್ಯಾಸ್ ಡಬಲ್ ಬುಕ್ಕಿಂಗ್ ಮಾಡಬೇಡಿ ಹಾಗೂ ಮಿತವಾಗಿ ಬಳಕೆ ಮಾಡುವಂತೆ ಸಚಿವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಹಡಗುಗಳ ಸಂಚಾರ ಈಗಾಗಲೇ ಆರಂಭವಾಗಿದ್ದು, ಅಗತ್ಯ ಸೇವಾ ವಲಯಗಳಿಗೆ ಗ್ಯಾಸ್ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್ ಹಾಗೂ ರೈಲ್ವೆ ಕ್ಯಾಂಟೀನ್‌ಗಳಿಗೆ ಶೇ.100ರಷ್ಟು ಸಿಲಿಂಡರ್ ಪೂರೈಕೆ ಮಾಡಲು ಒಪ್ಪಿಗೆ ನೀಡಲಾಗಿದೆ.

ಪ್ರತಿದಿನ ಸುಮಾರು 6,500 ಸಿಲಿಂಡರ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇದರಲ್ಲಿ 4,200 ಸಿಲಿಂಡರ್‌ಗಳನ್ನು ಅಗತ್ಯ ಸೇವಾ ವಲಯಕ್ಕೆ ಪೂರೈಕೆ ಮಾಡಲು ನಿರ್ಧರಿಸಲಾಗಿದೆ. ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಇಂದಿರಾ ಕ್ಯಾಂಟೀನ್‌ಗಳಿಗೆ ಸುಮಾರು 4,200 + 1,200 ಸಿಲಿಂಡರ್‌ಗಳನ್ನು ನೀಡಲಾಗುತ್ತದೆ.

ಜೊತೆಗೆ ಅಗತ್ಯ ಸೇವಾ ವಲಯಕ್ಕೆ 5,200 ಸಿಲಿಂಡರ್ ಹಾಗೂ ಆಟೋಗಳಿಗೆ 2,250 ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಆದರೆ ಸದ್ಯಕ್ಕೆ ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆ ಇರುವುದಿಲ್ಲ. ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ಎಲೆಕ್ಟ್ರಿಕ್ ಸ್ಟವ್ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಮಾಡಿದ್ದಾರೆ.

error: Content is protected !!