ನವದೆಹಲಿ: ಬೇಸಿಗೆ ಪ್ರವಾಸಕ್ಕೆಂದು ಕಣಿವೆ ರಾಜ್ಯ ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಮಂಗಳವಾರ ಭೀಕರ ನರಮೇಧ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್ ಹಲ್ಲುಗಾವಲು ಪ್ರದೇಶದಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಐವರು ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಜನರು ಸಾವನ್ನಪ್ಪಿದ್ದಾರೆ.
ಇನ್ನೂ ದಾಳಿ ನಡೆಸಿದ ಐವರ ಪೈಕಿ ಓರ್ವ ಉಗ್ರನ ಫೋಟೋ ಹೊರಬಂದಿದೆ. ಪ್ರವಾಸಿಗರೊಬ್ಬರು AK 47 ಗನ್ ಹಿಡಿದ ಉಗ್ರನ ಫೋಟೋವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದು, ಸದ್ಯ ಬೆಳಕಿಗೆ ಬಂದಿದೆ. ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ನಡೆದ ದಾಳಿಯಲ್ಲಿ 26 ಪ್ರವಾಸಿಗರು ಮೃತರಾಗಿದ್ದಾರೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸ್ಥಳೀಯ ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ದಾಳಿಕೋರರನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಮುಂದಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಜಮ್ಮು ಕಾಶ್ಮೀರದಲ್ಲಿರುವ ಪ್ರವಾಸಿಗರ ಸ್ಥಳಾಂತರಕ್ಕೆ ಹೆಚ್ಚುವರಿ ವಿಮಾನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.