ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದರು. ಈ ದುರಂತದಿಂದ ಮಿನಿ ಸ್ವಿಝರ್‌ಲ್ಯಾಂಡ್‌ನಲ್ಲಿ ರಕ್ತಗಳೇ ಚೆಲ್ಲಿಹೋಗಿತ್ತು. ಈ ಪರಿಣಾಮ ಕರ್ನಾಟಕದ ಇಬ್ಬರು ಸೇರಿ 26 ಮಂದಿ ಜೀವವನ್ನ ಕಳೆದುಕೊಂಡಿದ್ದಾರೆ. ಇದೀಗ ಉಗ್ರರ ಈ ಕೃತ್ಯಕ್ಕೆ ಭಾರತ ಯಾವ ರೀತಿ ಪ್ರತೀಕಾರ ತೀರಿಸಿಕೊಳ್ಳುತ್ತೆ ಎಂದು ಇಡೀ ದೇಶವೇ ಕಾದು ಕುಳಿತಿತ್ತು.
ಇದೀಗ ಭಾರತವು ಪಾಕಿಸ್ತಾನ ಸರ್ಕಾರದ ಅಧಿಕೃತ ಎಕ್ಸ್ ಖಾತೆಗೆ ಪ್ರವೇಶವನ್ನು ನಿರ್ಬಂಧಿಸಿದೆ. ಇದರಿಂದ ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆಯ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಭಾರತವು ಪಾಕಿಸ್ತಾನದೊಂದಿಗಿನ ತನ್ನ ಸಂಬಂಧವನ್ನು ತೀವ್ರವಾಗಿ ಕಡಿಮೆ ಮಾಡಿದೆ. ಉಭಯ ದೇಶಗಳ ರಾಯಭಾರಿ ಕಚೇರಿಗಳಲ್ಲಿನ ಸಿಬ್ಬಂದಿ ಸಂಖ್ಯೆಯನ್ನು ತಗ್ಗಿಸಿದೆ. ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ರಕ್ಷಣಾ ಸಲಹೆಗಾರರನ್ನು ಹೊರಹಾಕಿದೆ. ಭಾರತವು ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗುತ್ತಿದ್ದ SAARC ವೀಸಾ ವಿನಾಯಿತಿ ಯೋಜನೆಯನ್ನು ಕೂಡ ರದ್ದು ಮಾಡಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಅಟ್ಟಾರಿ ಚೆಕ್ ಪೋಸ್ಟ್‌ನ್ನು ಭಾರತ ಸರ್ಕಾರ ಮುಚ್ಚಿದೆ. ಅದೇ ರೀತಿ 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸಹ ರದ್ದುಗೊಳಿಸಿದೆ. ಇದೀಗ ಭಾರತದಲ್ಲಿ ಪಾಕಸ್ತಾನ ಸರ್ಕಾರದ ಅಧಿಕೃತ ಎಕ್ಸ್ ಅಕೌಂಟ್ ಮೇಲೂ ನಿಷೇಧ ಹೇರಲಾಗಿದೆ.