ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಮಕ್ಕಳಲ್ಲಿ ಹುದುಗಿರುವ ಸೃಜನಶೀಲ ಕಲೆಯನ್ನು ಅಭಿವ್ಯಕ್ತಿಗೊಳಿಸಲು ಚಿತ್ರಕಲಾ ಸ್ಪರ್ಧೆ ಸಹಕಾರಿಯಾಗಲಿದೆ ಎಂದು ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ ಅಭಿಪ್ರಾಯಪಟ್ಟರು.
ಇಲ್ಲಿಯ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ, ಲಕ್ಕುಂಡಿ ಕಲಾತ್ಮಕ ಕಲಾವಿದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಸಂಘಟಿಸಲು ಗ್ರಾ.ಪಂ ವತಿಯಿಂದ ಸಹಾಯ-ಸಹಕಾರ ನೀಡಲಾಗುವುದು. ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಆರ್ಥಿಕ ನೆರವು ನೀಡುವ ಭರವಸೆ ನೀಡಿದ ಅವರು, ಸ್ಪರ್ಧಾ ವಿಜೇತರಿಗೆ ಸಂವಿಧಾನ ಓದು ಪುಸ್ತಕಗಳನ್ನು ನೀಡಿದರು.
ಸಾಹಿತಿ ನೀಲಕಂಠ ಮುಕ್ಕಣ್ಣವರ ಮಾತನಾಡಿ, ಚಿತ್ರಕಲೆ ದೇಶದ ಗಡಿಗಳನ್ನು ಮೀರಿ ವಿಶ್ವವ್ಯಾಪಿಯಾಗಿ ಅರ್ಥವಾಗುವ ಜಾಗತಿಕ ಭಾಷೆಯಾಗಿದೆ. ಶಬ್ದ ಮತ್ತು ಅಕ್ಷರಗಳನ್ನು ಮೀರಿದ ಧ್ವನಿ ಚಿತ್ರಕಲೆಯಾಗಿದೆ. ರವಿವರ್ಮ, ಪಿಕಾಸೋ ಮುಂತಾದ ಚಿತ್ರಕಲಾವಿದರು ತಮ್ಮ ಚಿತ್ರಕಲೆಯ ಮೂಲಕ ಅದನ್ನು ಅನ್ನ ಸಂಪಾದನೆಯ ಮಾರ್ಗವಾಗಿ ಬೆಳೆಸಿದ್ದಾರೆ. ಚಿತ್ರಕಲೆಯು ಲಕ್ಷಾಂತರ ಕಲಾವಿದರಿಗೆ ಬದುಕಿನ ಸ್ಫೂರ್ತಿಯಾಗಿದೆ ಎಂದರು.
ಸಾಹಿತಿ ಎಂ.ಎಸ್. ಪೂಜಾರ, ಲಕ್ಕುಂಡಿಯ ಶಿಲ್ಪಕಲೆ ಮತ್ತು ಚಿತ್ರಕಲೆಯ ಕುರಿತು ತಮ್ಮದೇ ಆದ ಧಾಟಿಯಲ್ಲಿ ಆಶುಕವಿತೆಯ ಚುಟುಕುಗಳನ್ನು ಹೇಳಿ ಮಕ್ಕಳನ್ನು ರಂಜಿಸಿದರು. ಪ್ರಧಾನ ಗುರುಮಾತೆ ಆರ್.ಬಿ. ಬರದ್ವಾಡ ಅಧ್ಯಕ್ಷತೆ ವಹಿಸಿದ್ದರು. ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿಂಗಪ್ಪ ಗಡಗಿ, ಗ್ರಾ.ಪಂ ಸದಸ್ಯರಾದ ರಜಿಯಾಬೇಗಂ ತಹಸೀಲ್ದಾರ, ಅಮೀನಬೇಗಂ ಹುಬ್ಬಳ್ಳಿ, ಕಳಕೇಶ, ಎನ್.ಕೆ. ಅಂಬಕ್ಕಿ, ಅಪ್ಪಣ್ಣ ಬಡಿಗೇರ, ನಾಗರಾಜ ಕಲಬಂಡಿ, ಷಣ್ಮುಖಪ್ಪ ಮದ್ನೂರ, ಕನಕಾ ಗಡಗಿ, ರಮೇಶ ಹಾದಿಮನಿ, ವೆಂಕಟೇಶ ನಾಗನೂರ, ಮುತ್ತುರಾಜ ಗಡ್ಡಿ, ನಾಗಲಿಂಗಪ್ಪ ಬಡಿಗೇರ, ಎಂ.ಆರ್. ಪಾಟೀಲ, ಸಿದ್ದು ಬಣವಿ, ಚಂದ್ರಹಾಸ ಕಟ್ಟಿಗ್ಗಾರ, ಮಂಜುನಾಥ ಹುಣಸಿಮರದ, ಅಶೋಕ ಗದಗಿನ, ಶ್ರೀಕಾಂತ ದೇಸಾಯಿ, ಚಂದ್ರು ಲಕ್ಕನಗೌಡ್ರ, ಮಹೇಶ ಸಂದಿಗೌಡ್ರ, ಎಂ.ಕೆ. ತಲಾಲಚೂರ ಹಾಜರಿದ್ದರು.
ಬಿ.ಎಲ್. ಚವ್ಹಾಣ, ಪಿ.ಬಿ. ಬಂಡಿ, ಎಸ್.ವಿ. ಗುಂಜಳ, ಬಸವರಾಜ ನೆಲಜೇರಿ, ನಂದಾ ಪತ್ತಾರ, ಸುಮಲತಾ ಕವಲೂರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು. ಚಿತ್ರಕಲಾ ಶಿಕ್ಷಕ ಆರ್.ಎಸ್. ಆಲೂರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಗರ್ಜಪ್ಪನವರ, ರಫಿಯಾ ದಂಡಿನ ಕಾರ್ಯಕ್ರಮ ನಿರೂಪಿಸಿದರು. ಶರಣಪ್ಪ ಗರ್ಜಪ್ಪನವರ ವಂದಿಸಿದರು.
ಪ್ರಾಚಾರ್ಯ ಬಿ.ಎಲ್. ಚವ್ಹಾಣ ಮಾತನಾಡಿ, ಚಿತ್ರಕಲಾ ಸ್ಪರ್ಧೆಯ ಮೂಲಕ ನೂರಾರು ವಿದ್ಯಾರ್ಥಿಗಳನ್ನು ಕಲಾಸಕ್ತರನ್ನಾಗಿ ಮಾಡಿರುವ ಈ ಕಾರ್ಯಕ್ರಮ ಬಹಳ ಸೂಕ್ತವಾಗಿದೆ. ಇಂಥದೊAದು ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಸಂಘಟಿಕರು ಒಳ್ಳೆಯ ಕಾರ್ಯ ಮಾಡಿದ್ದಾರೆಂದು ಶ್ಲಾಘಿಸಿದರು.