2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಇಂದು (ಭಾನುವಾರ) ನಡೆದಿದ್ದು, ಬದ್ದ ಎದುರಾಳಿ ಪಾಕ್ ತಂಡವನ್ನು ಟೀಮ್ ಇಂಡಿಯಾ ಹೀನಾಯವಾಗಿ ಸೋಲಿಸಿದೆ.
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಬ್ಬರದ ಪ್ರದರ್ಶನವನ್ನು ಮುಂದುವರೆಸಿದ್ದು, ಚಾಂಪಿಯನ್ಸ್ ಟ್ರೋಫಿಯ “ಎ” ಗುಂಪಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರು ವಿಕೆಟ್ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಲೀಗ್ ಹಂತದಲ್ಲಿ ಎರಡನೇ ಜಯ ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 49.4 ಓವರ್ಗಳಲ್ಲಿ 241 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 42.3 ಓವರ್ಗಳಲ್ಲಿ 4 ವಿಕೆಟ್ಗೆ 244 ರನ್ ಸೇರಿಸಿ ಭರ್ಜರಿ ಜಯ ಸಾಧಿಸಿತು.
ಕಳೆದ ಕೆಲವು ತಿಂಗಳಿನಿಂದ ಲಯಕ್ಕಾಗಿ ಪರದಾಟ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಬಿಗ್ ಮ್ಯಾಚ್ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಬಿಗ್ ಮ್ಯಾಚ್ ಪ್ಲೇಯರ್ ಎಂಬುದನ್ನು ವಿರಾಟ್ ಕೊಹ್ಲಿ ಮತ್ತೊಮ್ಮೆ ಸಾಬೀತು ಪಡಿಸಿದರು. ಇವರು ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ ಪಾಕ್ ವಿರುದ್ಧ ವಿರಾಟ್ ತಮ್ಮ ನೈಜ್ಯ ಆಟವನ್ನು ಆಡಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂದ್ಯದಲ್ಲಿ ಐದನೇ ಓವರ್ನಲ್ಲಿ ಬ್ಯಾಟ್ ಮಾಡಲು ಬಂದ ವಿರಾಟ್ ಪಾಸಿಟಿವ್ ಇಂಟೇಂಟ್ನಿಂದ ಅಂಗಳಕ್ಕೆ ಇಳಿದು, ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ವಿರಾಟ್ 111 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ಅಜೇಯ 100 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು.