ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ್ ತಂಡವನ್ನು ಭಾರತ ಬಗ್ಗು ಬಡಿದಿದೆ. ಇತ್ತ ಭಾರತದ ವಿರುದ್ಧದ ಸೋಲಿನೊಂದಿಗೆ ಪಾಕಿಸ್ತಾನ್ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ್ ತಂಡದ ಮಾಜಿ ಆಟಗಾರ ವಾಸಿಂ ಅಕ್ರಮ್ ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ಪಾಕಿಸ್ತಾನ್ ಆಟಗಾರರು ಬಾಳೆಹಣ್ಣು ತಿಂದಿದ್ದರು. ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆಯ ಪಾನೀಯ ವಿರಾಮದ ವೇಳೆ ಪಾಕ್ ಆಟಗಾರರಿಗೆ ದೊಡ್ಡ ತಟ್ಟೆಯಲ್ಲಿ ಬಾಳೆಹಣ್ಣುಗಳು ಮೈದಾನಕ್ಕೆ ಬಂದಿದ್ದವು.
ಹೀಗೆ ಪಂದ್ಯದ ನಡುವೆ ಬಾಳೆಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡ ಆಟಗಾರರ ನಡೆಯನ್ನು ವಿಮರ್ಶಿಸಿದ ವಾಸಿಂ ಅಕ್ರಮ್, ಮಂಗಗಳು ಕೂಡ ಇಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವುದಿಲ್ಲ. ನಮ್ಮ ಆಟಗಾರರು ಮೊದಲ ಪಾನೀಯ ಬ್ರೇಕ್ ಹಾಗೂ ಎರಡನೇ ಪಾನೀಯ ಬ್ರೇಕ್ ವೇಳೆ ಅಷ್ಟೊಂದು ಬಾಳೆ ಹಣ್ಣುಗಳನ್ನು ತಿಂದಿದ್ದಾರೆ.
ನಮ್ಮ ಕಾಲದಲ್ಲಿ ಪಾಕಿಸ್ತಾನ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಆಟಗಾರರು ಇಷ್ಟೊಂದು ಬಾಳೆಹಣ್ಣು ತಿನ್ನುವುದನ್ನು ನೋಡಿದ್ದರೆ, ಅಲ್ಲಿಯೇ ಅವನಿಗೆ ಪಾಠ ಕಲಿಸುತ್ತಿದ್ದರು ಎಂದು ಅಕ್ರಮ್ ಇದೇ ವೇಳೆ ಹೇಳಿದರು.
ಅಲ್ಲದೆ ಪಂದ್ಯ ನಡೆಯುವಾಗ ಆಟಗಾರರು ಇಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವ ಅವಶ್ಯಕತೆಯಿತ್ತಾ? ಎರಡು ಪಾನೀಯ ವಿರಾಮದ ವೇಳೆಯೂ ಪಾಕ್ ಆಟಗಾರರು ಕೋತಿಗಳಂತೆ ಬಾಳೆಹಣ್ಣು ತಿನ್ನುವತ್ತ ಗಮನಹರಿಸಿದ್ದರು ಎಂದು ವಾಸಿಂ ಅಕ್ರಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.