ಇಸ್ಲಾಮಾಬಾದ್ :- ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ’ ಕಾರ್ಯಚರಣೆಗೆ ಪಾಕಿಸ್ತಾನ್ ಅಕ್ಷರಶಃ ನಲುಗಿ ಹೋಗಿದೆ. ಹೀಗಾಗಿ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಅವರು ಶಾಂತಿ ಮಾತುಕತೆಗೆ ಭಾರತಕ್ಕೆ ಆಹ್ವಾನಿಸಿದ್ದಾರೆ.
ಭಾರತದೊಂದಿಗಿನ ಮಿಲಿಟರಿ ಮುಖಾಮುಖಿಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು ಮತ್ತು ಸೈನಿಕರೊಂದಿಗೆ ಸಂವಾದ ನಡೆಸಲು ಗುರುವಾರ ಪಂಜಾಬ್ ಪ್ರಾಂತ್ಯದ ಕಮ್ರಾ ವಾಯುನೆಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶೆಹಬಾಜ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಶಾಂತಿಗಾಗಿ ನಾವು ಭಾರತದೊಂದಿಗೆ ಮಾತುಕತೆಗೆ ಸಿದ್ಧರಿದ್ದೇವೆ. ಶಾಂತಿಗಾಗಿ ಷರತ್ತುಗಳು ಕಾಶ್ಮೀರ ಸಮಸ್ಯೆಯನ್ನೂ ಒಳಗೊಂಡಿವೆ ಎಂದು ಶೆಹಬಾಜ್ ತಿಳಿಸಿದ್ದಾರೆ.
ಇನ್ನೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದಾಗಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡರು. ಇದಕ್ಕೆ ಪ್ರತೀಕಾರವಾಗಿ ಉಗ್ರರ ವಿರುದ್ಧ ಭಾರತ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ.