ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಜನರು ಮೃತರಾಗಿದ್ದಾರೆ. ಉಗ್ರರ ಈ ದಾಳಿಯನ್ನು ಹಲವು ದೇಶಗಳು ಖಂಡಿಸಿದ್ದು ಘಟನೆಯಲ್ಲಿ ಕರ್ನಾಟಕದ ಮೂವರು ಮೃತಪಟ್ಟಿದ್ದಾರೆ. ಘಟನೆಯನ್ನು ಹಲವು ಸೆಲೆಬ್ರಿಟಿಗಳು ಖಂಡಿಸಿದ್ದು ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳ ಸೆಲೆಬ್ರಿಟಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯನ್ನು ಪಾಕಿಸ್ತಾನದ ನಟಿ ಮಹಿರಾ ಖಾನ್ ಖಂಡಿಸಿದ್ದಾರೆ. ಆದರೆ ಕೆಲವೇ ಗಂಟೆಗಳಲ್ಲಿ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ನಟಿ ಡಿಲೀಟ್ ಮಾಡಿದ್ದಾರೆ.
ಪಾಕಿಸ್ತಾನದ ನಟಿ ಮಹಿರಾ ಖಾನ್ ಭಾರತೀಯ ಚಿತ್ರರಂಗದ ಜೊತೆ ನಂಟು ಹೊಂದಿದ್ದಾರೆ. ಬಾಲಿವುಡ್ನಲ್ಲಿ ಕೆಲವು ಸಿನಿಮಾಗಳಲ್ಲಿ ಮಹಿರಾ ಖಾನ್ ನಟಿಸಿದ್ದಾರೆ. ಶಾರುಖ್ ಖಾನ್ ನಟನೆಯ ‘ರಯೀಸ್’ ಸಿನಿಮಾಗೆ ಮಹಿರಾ ಖಾನ್ ಅವರು ನಾಯಕಿ ಆಗಿದ್ದರು. ಈಗ ಅವರು ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿರುವ ಬಗ್ಗೆ ಚರ್ಚೆ ಆಗುತ್ತಿದೆ.
‘ಪ್ರಪಂಚದ ಯಾವುದೇ ಭಾಗದಲ್ಲಿ, ಯಾವುದೇ ರೀತಿಯಲ್ಲಿ ಹಿಂಸಾಚಾರ ನಡೆಸುವುದು ಹೇಡಿತನ. ಪಹಲ್ಗಾಮ್ನಲ್ಲಿ ಉಗ್ರರ ದಾಳಿಯಿಂದ ತೊಂದರೆಗೆ ಒಳಗಾದ ಎಲ್ಲರಿಗೂ ನನ್ನ ಸಂತಾಪಗಳು’ ಎಂದು ಮಹಿರಾ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದರು. ಆದರೆ ಬಳಿಕ ಅವರು ಅದನ್ನು ಡಿಲೀಟ್ ಮಾಡಿದ್ದಾರೆ.
ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಮತ್ತೋರ್ವ ಪಾಕ್ ನಟ ಫವಾದ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ಪಹಲ್ಗಾಮ್ನಲ್ಲಿ ನಡೆದ ಹೀನ ದಾಳಿಯ ಬಗ್ಗೆ ತಿಳಿದು ನೋವಾಯಿತು. ಭಯಾನಕ ಘಟನೆಯ ಸಂತ್ರಸ್ತರಾದ ಎಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ. ಅವರ ಕುಟುಂಬಗಳಿಗೆ ಈ ಕಷ್ಟದ ಸಂದರ್ಭದಲ್ಲಿ ನೋವು ಸಹಿಸುವ ಶಕ್ತಿ ಬರಲಿ’ ಎಂದು ಫಹಾದ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.